ಕಣ್ಣೀರಿನ ಅಳತೆಯಿಂದ ದುಃಖದ ಪ್ರಮಾಣ ಅಳೆಯಲು ಸಾಧ್ಯವೇ?
ಭೌತಿಕವಿಜ್ಞಾನದ ಪ್ರಯೋಜನಗಳನ್ನು ಪ್ರತ್ಯಕ್ಷವಾಗಿ ಪಡೆದುಕೊಂಡು ನವನಾಗರಿಕತೆಯ ಹೆಸರಿನಲ್ಲಿ ದೇಹಾತ್ಮಬುದ್ಧಿಯನ್ನೇ ದೃಢಪಡಿಸಿಕೊಂಡು ಇಂದ್ರಿಯಲೋಲುಪರಾಗಿ ಬಾಳುತ್ತಿರುವ ಈಗಿನ ಜನರಿಗೆ ವೇದಾಂತವೆಂದರೆ ಒಂದು ಬಗೆಯ ಔದಾಸೀನ್ಯವುಂಟಾಗುವದರಲ್ಲಿ ಆಶ್ಚರ್ಯವೇನಿಲ್ಲ, ಆದರೆ ಭೋಗಾಸಕ್ತಿ, ಪ್ರಾಪಂಚಿಕಸುಖಗಳಲ್ಲಿ ಭಾರತೀಯರನ್ನು ಹಿಂದಕ್ಕೆ ಹಾಕಿ ಉತ್ತುಂಗಶಿಖರವನ್ನೇರಿರುವ ಪಾಶ್ಚಾತ್ತ್ಯರೂ ಇತ್ತೀಚಿಗೆ ಅದೇಕೋ, ವೇದಾಂತದಕಡೆಗೆ ತಿರುಗುತ್ತಿರುವದನ್ನು ನೋಡಿದರೆ ವಿಚಾರವಂತರಾದವರಿಗೆ ಭೌತಿಕವಿಜ್ಞಾನದಲ್ಲಿ ಏನೋ ಕೊರತೆಯಿರಬೇಕು; ಅದರಿಂದ ಸಿಗಲಾರದ ಸುಖವು ವೇದಾಂತದಿಂದ ದೊರಕಬಹುದು - ಎಂದು ಅನಿಸಿರಬೇಕು. ಈ ಸಂದರ್ಭದಲ್ಲಿ ಭೌತಿಕವಿಜ್ಞಾನದ ಪರಿಮಿತಿಯನ್ನೂ ಅದರ ಶೋಧಗಳ ಪರಿಣಾಮವನ್ನೂ ಕುರಿತು ವಿಚಾರಮಾಡುವದು ವೇದಾಂತದಕಡೆಗೆ ಅಭಿರುಚಿಯನ್ನು ಹೆಚ್ಚಿಸಲು ಸಹಾಯಕವಾಗಿರುತ್ತದೆ ಎಂದು ಭಾವಿಸಬಹುದು. ಮೇಲುನೋಟಕ್ಕೆ ಭೌತಿಕವಿಜ್ಞಾನವು ಮಾನವನಿಗೆ ಬಹಳ ಉಪಕಾರಿಯಾಗಿರುವದರಲ್ಲಿ ಸಂಶಯವಿಲ್ಲ. ಈ ವಿಜ್ಞಾನದ ಬಲದಿಂದ ಮಾನವನು ತನ್ನ ಆಹಾರ, ವಿಹಾರ, ವಿಚಾರ, ಸಮಾಜ, ಆರೋಗ್ಯ, ವಿದ್ಯಾಭ್ಯಾಸ, ಆರ್ಥಿಕ, ರಾಜಕೀಯವೇ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿಯನ್ನು ಸಾಧಿಸಿದ್ದಾನೆ ಮತ್ತು ಈ ವಿಜ್ಞಾನವು ಬರಿಯ ಆಕಾಶಪುರಾಣದಂತಲ್ಲ ಇದು ತನ್ನ ಶೋಧಗಳ ಫಲವನ್ನು ಮಾನವನ ಜೀವಿತಕಾಲದಲ್ಲಿಯೇ ಒದಗಿಸಿಕೊಟ್ಟಿದೆ. ಇಷ್ಟೇ ಅ...