ರುದ್ರಭಾಷ್ಯಪ್ರಕಾಶ - 8ನೇ ಅನುವಾಕ (ಸಂಪೂರ್ಣ)
ರುದ್ರಾಧ್ಯಾಯದ ಎಂಟನೆಯ ಅನುವಾಕವನ್ನು ಈಗ ವಿಚಾರಮಾಡ ಬೇಕಾಗಿದೆ. ಹಿಂದಿನ ಅನುವಾಕದಲ್ಲಿ ಸರ್ವಾತ್ಮಕನೂ ಸರ್ವಾಂತರ್ಯಾಮಿಯೂ ಆದ ಭಗವಂತನನ್ನು ಸ್ತುತಿಸಲಾಯಿತು. ಈಗ ಎಲ್ಲಾ ಲೋಕದ ಜನರಿಂದಲೂ ಉಪಾಸ್ಯನಾದವನೂ ಸಂಸಾರಬಂಧವನ್ನು ಕಳೆಯುವ ಬ್ರಹ್ಮವಿದ್ಯೆಯನ್ನು ಕೊಡುವವನೂ ಆದ ಭಗವಂತನನ್ನು ಸ್ತುತಿಸಲಾಗುವದು. ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ || 'ಸೋಮನಿಗೂ ರುದ್ರನಿಗೂ ತಾಮ್ರನಿಗೂ ಅರುಣನಿಗೂ ನಮಸ್ಕಾರ!' ಇಲ್ಲಿ ರುದ್ರನಾದ ಸೋಮನಿಗೆ ನಮಸ್ಕಾರ - ಎಂದು ಅನ್ವಯಮಾಡಿ ಕೊಳ್ಳಬೇಕು. ರುದ್ರನೆಂದರೆ ಸಂಸಾರದುಃಖ(ರೋದನ)ವನ್ನು ಹೋಗಲಾಡಿಸುವವನು ಎಂದಭಿಪ್ರಾಯ. ಭಗವಂತನನ್ನು ಅರಿತುಕೊಳ್ಳದೆ ದುಃಖವನ್ನು ದಾಟುವದು ಸಾಧ್ಯವೇ ಇಲ್ಲ ಆದರೆ ಆ ದೇವನನ್ನು ಅರಿತುಕೊಳ್ಳುವದಾದರೂ ಹೇಗೆ? ಎಂದರೆ ಉಮೆಯ ಕೃಪೆಯಿಂದ - ಎಂದಭಿಪ್ರಾಯ. ಉಮೆಯನ್ನು ನಿತ್ಯವೂ ಹೊಂದಿರುವವನೇ - ಉಮಾಸಹಿತನಾದವನೇ - ಸೋಮನು. ಉಮಾ- ಎಂಬುದು ಓಮ್ ಎಂಬ ಪ್ರಣವಮಂತ್ರದ ಭಾಗವು. ಅ-ಉ-ಮ ಸೇರಿ ಓಂ ಆಗಿರುವದು. ಅದರಲ್ಲಿ ಉಮಾ ಎಂಬಿದೇ ದೇವಿಯ ತತ್ತ್ವವು ಆದ್ದರಿಂದಲೇ ದೇವಿಯನ್ನು "ಓಂಕಾರರೂಪಿಣೀ" ಎಂದು ಕರೆಯುತ್ತಾರೆ. ಈ ದೇವಿಯೇ ಬ್ರಹ್ಮವಿದ್ಯೋಪದೇಶಕಳು. ಈಕೆಯ ಪ್ರಸಾದದಿಂದಲೇ ಸೋಮನಾದ ಪರಮೇಶ್ವರನ ಜ್ಞಾನವು ನಮಗೆ ಪ್ರಾಪ್ತವಾಗುವದು ಅಂತೂ ಬ್ರಹ್ಮವಿದ್ಯಾರೂಪಿಣಿಯಾದ ಉಮಾದೇವೀಸಹಿತನಾದ ಸೋಮನಿಗೆ ನಮಸ್ಕಾರ ಎಂಬಿದು ಮಂತ್ರಾರ್ಥವು. ...