Posts

Showing posts with the label ಕವನ

ಶ್ರೀನೃಸಿಂಹಾಯ ಮಂಗಳಂ

"ಯಾದವಗಿರಿ" ಒಡೆಯ; ದೇವ ಯೋಗನೃಸಿಂಹ ನಿನ್ನಡಿಗೆ ತಲೆಬಾಗಿ ವಂದಿಸುವೆನು | ತಪ್ತಗೊಂಡಿಹ ಬದುಕಿಗಮಲ ಸತ್ಯವ ನೀಡು ತವ ಸನ್ನಿಧಿಗೆ ಮುಡಿಯನರ್ಪಿಸುವೆನು || ಭವದ ಬೇನೆಗೆ ಜೀವ ಭಾರವಾಗಿದೆ ತಂದೆ; ಸೈರಿಸುವ ಚೈತನ್ಯ ಉಡುಗುತ್ತಿದೆ | ಕವಿದ ಕತ್ತಲೆಯಲ್ಲಿ ತಡವರಿಸಿ ಸಾಗುತಿಹೆ; ಸೊಡರಬೆಳಕಿನ ಹಾದಿ ಅರಿಯದಾದೆ || 'ನಾನು, ನನ್ನದು' ಎಂಬ ಮೋಹಾಂಧಕಾರದಲಿ ಸಿಲುಕಿರುವ ಈ ಜೀವ ಮತಿ ವಿಹೀನ | ಸ್ವಾರ್ಥ ಬಂಧನದಿಂದ ಬಿಗಿಗೊಂಡ ಈ ಬದುಕು ಸಾಗಿಸಿದೆ ಅನಗಾಲ ಸಂಸಾರಯಾನ || ಆಮೆ ನಡಿಗೆಯ ಬದುಕು ಬೇಡೆನೆಗೆ ನೃಸಿಂಹ ಗರುಡಚೇತನವಿತ್ತು ಕರುಣೆದೋರು | ವರದ ಹಸ್ತವನೆನ್ನ ಮಸ್ತಕದ ಮೇಲಿರಿಸು; ಕರ್ಮ ಬಂಧವ ಕಡಿದು ಬೆಳಕ ತೋರು || ಎಲ್ಲ ಕಿವಿಗೊಡಲಲ್ಲಿ 'ಗೋವಿಂದ, ಗೋವಿಂದ,' ನಿನ್ನನುಪಮದ ನಾಮ ಮನಸಿಗಾನಂದ ಆ ನಾಮಬಲದಿಂದ ಕಳೆಯಲೀ ಭವಬಂಧ ಹೃತ್ಕಮಲ ಪೀಠದಲಿ ನೆಲೆಸಿರಲಿ ಗೋವಿಂದ || ಏನ ನೀಡಲಿ ನಿನಗೆ ಶ್ರೀನೃಸಿಂಹನೆ; ಸಕಲ ಐಸಿರಿ ನಿನ್ನ ಸನ್ನಿಧಿಯೊಳಿರಲು ನೀಡಲೆನಗೇನಿಹುದು ಭಕ್ತಿಯೊಂದನ್ನುಳಿದು ಹರಿದಿರಲಿ ತವಪದಕೆ ಆ ಭಕ್ತಿ ಹೊನಲು || ನಿನ್ನಡಿಗೆ ಸುಮವಾಗಿ ಮುಡಿಪಿರಲಿ ಈ ಜೀವ ಬಾಡದಂದದಿ ನಿತ್ಯ ಸಲಹು ದೇವ | ಬೆಳಗುತಿಹ ಪ್ರಣತಿಯಲಿ ಬಾಳ ಬತ್ತಿಯ ಹೊಸೆದು ಭಕ್ತಿ ತೈಲವನೆರೆಯಲೆನ್ನ ಜೀವ || ಮಂಗಳವು ಶ್ರೀ ಮಂಗಳಾಂಗಗೆ ದೇವ ನೃಸಿಂಹಗೆ, ಮಂಗಳವು ಜಯಮಂಗಳ | ಮಂಗಳವು ಶ್ರೀ ಕ್ಷೇತ್ರ ಯಾದವಗಿರಿವಾಸಿ ಸುಂದರ ಮೂರ್ತಿಗೆ ಮಂಗಳವು ಶುಭ...

ಮನೆಗೆ ಬಾರೋ ವಿಘ್ನರಾಜಾ

ಮನೆಗೆ ಬಾರೋ ವಿಘ್ನರಾಜಾ ಉಮಾಪುತ್ರ ಗಜಮುಖನೇ ವಿಘ್ನಹರನೇ ಏಕವಿಂಶತಿ ಮೋದಕ ಪ್ರೀಯನೇ, ಏಕದಂತನೆ ಮನೆಗೆ ಬಾರೋ ವಿಘ್ನರಾಜಾ...... ಜ್ಞಾನದಾಯಕ ವರ ವಿನಾಯಕನೇ, ಗಣನಾಥನೇ, ಷಡಾನನನ ಗೆಲಿದ ಲಂಬೋದರನೇ, ಶೂರ್ಪಕರ್ಣನೇ, ಮನೆಗೆ ಬಾರೋ ವಿಘ್ನರಾಜಾ..... ನಾಗಭೂಷಣ ಪ್ರಿಯನು ನೀನೇ, ಗಣಾಧ್ಯಕ್ಷನೇ ಭಾದ್ರಪದ ಚೌತಿಲಿ ಪೂಜೆಗೊಂಬನೇ, ವಿಶ್ವಂಭರನೇ, ಮನೆಗೆ ಬಾರೋ ವಿಘ್ನರಾಜಾ.... ದುಷ್ಟರಿಗೆ ವಿಘ್ನಕರ್ತನೇ, ಹೇರಂಬನೇ, ಶಿಷ್ಟರಿಗೆ ವಿಘ್ನಹರ್ತನೇ, ಶಿವಪ್ರಿಯನೇ, ಮನೆಗೆ ಬಾರೋ ವಿಘ್ನರಾಜಾ..... ರಕ್ತಾಂಬರ, ಪಾಶ ಅಂಕುಶಧಾರನೇ, ಅಂಬರಾಧಿಪನೇ, ವ್ಯಾಸರಚಿತ ಭಾರತದ ಬರೆದಿಹನೇ, ಶಂಭುನಂದನನೇ, ಮನೆಗೆ ಬಾರೋ ವಿಘ್ನರಾಜಾ.....

ನರಸಿಂಹ ದೇವಾ...

Image
ಶ್ರೀ ನರಸಿಂಹದೇವ ಶರಣರಕ್ಷಕ ದಾನವಾರಿ ಸುಭಕ್ತಾಧೀನ ಮೂರುತಿಯನೆ ಹರಿ ತನ್ನ ಗುರುವೆಂದು ಸ್ಮರಿಸುತಿರಲು ಬಾಲ ನಿರವಕಾಣದೆ ದುಷ್ಟ ಹಿರಣ್ಯಕಾಸುರನನು ಪರಿಯ ಭಂಜಿಸುತಿರೆ ಮೊರೆದು ಕೋಪದಳೆದ್ದು ತರಳಗೊಲಿದೆ ಬಹು ಕರುಣಾನಿಧಿಯೆ ಛಿಟಿ ಛಿಟಿಲ್ ಭುಗಿ ಭುಗಿಲ್ ಆರ್ಭಟಿಸಿ ಗರ್ಜಿಸಿ ಕಂಭ ಕಿಡಿಯು ಉಗ್ರದಿ ನಿಸ್ಫುಟದಿಯುಬ್ಬಿಸಿದಡೆ ಕಟಿಕಟಿಮಸದಗ್ನಿ ಕಿಟ ಅಗಿವುತ  ನಿಂದ ಕಠಿಣ ಮೂರುತಿಯೇ ಕೊಬ್ಬಿದ ಹಿರಣ್ಯಕನುಬ್ಬಮುರಿವೆನೆಂದು ಹೆಬ್ಬಾಗಿಲೊಳು ಸಂಜೆ ಮಬ್ಬಿಲಿ ದನುಜನ ಗರ್ಭವ ನಖದಿಂದ ಇಬ್ಬಾಗವನ್ನು ಮಾಡಿ ಹಬ್ಬಿದ ಕರುಳನು ಹರುಷದಿ ಧರಿಸಿದೆ ಬೀತನಾಗಿ ತನ್ನ ತಾತನ ತೊಡೆದಾ ಘಾತಕ ಹರಿಯು ಮಾತನು ಮನ್ನಿಸಿ ಅತಿ ಶಾಂತನಾಗಿ ಪ್ರೀತಿಲಿ ಶಿಷ್ಯನ ಸಲಹಿದ ಅನಾಥ ರಕ್ಷಕನೆ ಖಳನ ಮರ್ದಿಸಿ ಬಹು ಇಳೆಯಿಂದ ಅಜನಿಗೆ ಬಲು ಹರುಷನಿತ್ತ ಅಕ್ಕಿಹೆಬ್ಬಾಳು ನೆಲವಾಸ ಲಕ್ಷ್ಮೀನರಸಿಂಹ ದೇವಾ...

ನೃಸಿಂಹ ದೇವ ನಿನ್ನ ಮರೆತಿದ್ದಕ್ಕೆ

Image
ನೃಸಿಂಹ ದೇವ ನಿನ್ನ ಮರೆತಿದ್ದಕ್ಕೆ, ನಾನು ಸರಿಯಾದ ಶಿಕ್ಷೆಗೆ ಗುರಿಯಾದೆ ದೊರೆಯೇ  ||ಪ|| ಕಾಮವೆಂಬ ಮಾಯೆಯು ನನಗೆ, ನಿನ್ನ ಕಾಣುವ ಕಣ್ಣನ್ನು ಕೆಡಿಸಿತು ಪ್ರಭುವೇ | ಮಣ್ಣೆಂಬ ಮಾಯೆಯು ನನಗೆ, ನಿನ್ನ ತಿಳಿಯುವ ತಿಳಿವನ್ನು ಅಳಿಸಿತು ತಂದೇ | ಸಿರಿಯೆಂಬ ಮಾಯೆಯು ನನಗೆ, ನಿನ್ನ ಅರಿಯುವ ಅರಿವಿಗೆ ಉರಿಯಾಯ್ತು ಹರಿಯೇ | ಮೂಜಗದೊಡೆಯ ನೃಸಿಂಹನೇ ನಿನ್ನ ಸರಿಸರಿ ಬೇಡುವೆ ಕಡೆ ಹಾಯಿಸೋ ದೊರೆಯೇ ||

ಕಾವ್ಯಸಾಹಿತ್ಯದಲ್ಲಿ ನಿರ್ವಿಘ್ನಕಾರಕ

Image
      ಇಡೀ ಭರತ ಖಂಡದಲ್ಲಿ ಆಚರಣೆಯಲ್ಲಿಟ್ಟುಕೊಂಡು ಭಕ್ತಿಯಿಂದ ಸೇವಾಕೈಂಕರ್ಯಾದಿಗಳನ್ನು ನಡೆಸಿಕೊಂಡು ಬರುತ್ತಿರುವ ಉತ್ಸವಾದಿಗಳಲ್ಲಿ ಶ್ರೀ ಗಣಪತಿಯ ಮಹೋತ್ಸವವು ಬಹು ಪ್ರಸಿದ್ಧಿಗೆ ಬಂದಿರುವ ವಿಚಾರ ಸಕಲರಿಗೂ ವೇದ್ಯವಾಗಿದೆ. ಈ ಜಗತ್ತಿನ ಯಾವ ಭಾಗದಲ್ಲೇ ಇರಲಿ ಸಕಲ ಭಾರತೀಯರೂ ಕಡ್ಡಾಯವಾಗಿ ಶ್ರೀಗಣಪತಿಯನ್ನು ಪೂಜಿಸುತ್ತಲಿರುತ್ತಾರೆ. ಭರತಖಂಡದ ಆಸ್ತೀಕರನ್ನು ಮುಖ್ಯವಾಗಿ ನಾಲ್ಕು ಗುಂಪನ್ನಾಗಿ ಮಾಡಬಹುದು : 1. ವಿಷ್ಣುವಿನ ಆರಾಧಕರು 2. ಶೈವಾರಾಧಕರು 3. ಶಕ್ತಿ ಆರಾಧಕರು 4. ಶೂನ್ಯೋಪಾಸಕರು ಇವರಲ್ಲಿ ಕೆಲವರು ವೇದಗಳನ್ನು ಒಪ್ಪುವವರು, ಕೆಲವರು ಒಪ್ಪರು. ಕೆಲವು ವೈಷ್ಣವರು ಶೈವಾರಾಧನೆಯನ್ನು ಮಾಡುವುದಿಲ್ಲ ಮತ್ತೆ ಕೆಲವು ಶೈವರು ವಿಷ್ಣುವನ್ನು ಪೂಜಿಸುವುದಿಲ್ಲ ಆದರೆ ಪ್ರತಿ ಒಬ್ಬರೂ ಯಾವ ಮತವನ್ನೇ ಅವಲಂಬಿಸಿರಲಿ ಇಂದಿನ ಕಥಾನಾಯಕನಾದ ನಮ್ಮ ಗಣಪತಿಯನ್ನು ಸ್ವಪ್ರೇರಣೆಯಿಂದ ಆರಾಧಿಸುತ್ತಾರೆ ಅಂದಮೇಲೆ ಈ ಗಣಪತಿಯ ಮಹಿಮೆಯನ್ನು ತಿಳಿಯಬೇಕಾದುದು ಆದ್ಯಕರ್ತವ್ಯವಾಗಿದೆ.     ಹಿಂದೆ ನೈಮಿಶಾರಣ್ಯದಲ್ಲಿ ಮಹರ್ಷಿಗಳು ಮಾಡುತ್ತಿದ್ದ ಸಾತ್ವಿಕ ಕರ್ಮಗಳಿಗೆ ಅಡ್ಡಿಬರಲು, ಸೂತರು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಲ್ಲಿ ಈ ಗಣಪತಿಯನ್ನು ಆರಾಧಿಸಿದರೆ ಎಲ್ಲಾ ಕಾರ್ಯಗಳೂ ಸುಗಮವಾಗುವುದೆಂದರು.     ಉತ್ತಮಕಾರ್ಯಾದಿಗಳಲ್ಲಿ ಸುಜನರಿಗೆ ಅನುಕೂಲನಾಗಿ ದುಷ್ಟರಿಗೆ ವಿಘ್ನಕಾರ...

ಕಲಿಗಾಲ ಕಂಡ್ಯಾ

ಕೃಷ್ಣ ಕೃಷ್ಣಯೆಂದು ಕಾಮಿನಿ ಕರೆಯಲು ಅಕ್ಷಯ ವಸನಾಗಿ ಒದಗಿಯೊ ಅಂದು ||ಪ|| ದುಷ್ಟ ದುಶ್ಯಾಸನರ ಹಿಂಡುಹಿಂಡೇ ಇಂದು ಶಿಷ್ಟ ಮಾನಿನಿಯರ ಮಾನಗಳೆಯುತಿಹುದು ||ಅ.ಪ|| ಕಣ್ಮುಚ್ಚಿ ಬಾಯ್ಬಿಗಿದು ಹಾವಿನ್ಹಾಸಿನಲಿ ತಣ್ಣಗೆ ಕೈಕಟ್ಟಿ ಕುಳಿತಿಹೆಯಲ್ಲೋ ಬಣ್ಣನೆಯ ಮಾತಾಯೋ ಕಾಮಿಕೀಚಕರ ನಿಜ ಬಣ್ಣವನು ಬಯಲು ಮಾಡದೆ ನೀನು ||1|| ಗದ್ದೆ ಬಯಲು ಶಾಲೆ ಕಾಲೇಜುಗಳು ಶುದ್ಧ ಹಸುಮಗುವಿನ ಮೊದಲ ಶಾಲೆ ಹದ್ದುಮೀರಿದೆ ಅಲ್ಲೂ ಕಾಮುಕರ ಕಾಟ ನಿದ್ದೆ ಬಂದಿದೆಯೆ ನಿನಗೆ ಎದ್ದು ಬಾರದಷ್ಟು ||2|| ಬೇಡಿದರೆ ಕಾಡಿದರೆ ಬರುವನಲ್ಲ ನೀನು ನೋಡುತಿರು ಎಬ್ಬಟ್ಟಿ ಎಳೆತರುವೆ ನಾನು ಆಡುವೆಯ ಆಟಗಳ ನರಸಿಂಹಾವತಾರಿ ಮಾಡುವೆನು ತಕ್ಕುದು ಕಲಿಗಾಲ ಕಂಡ್ಯಾ ||3||

'ಓಂ' ಕಾರ ಮಹಿಮೆ

ಓಂ ಕಾರವ ಜಪಿಸೋ ಮನುಜಾ ಓಂಕಾರವ ಜಪಿಸೋ... ||ಪಲ್ಲವಿ|| ಓಂಕಾರವೆಂದರೆ ಶಬ್ದಬ್ರಹ್ಮನು | ಶುದ್ಧಬ್ರಹ್ಮನು ಜ್ಞಾನಸ್ವರೂಪನು ||1|| ಓಂಕಾರ ಮಂತ್ರವೆ ವೇದದ ಸಾರಾ | ಪ್ರಣವಸ್ವರೂಪಾ ಜಗದಾಧಾರಾ ||2|| ಅಮೃತಸ್ವರೂಪನು ಭಲೆ ಓಂಕಾರಾ | ತ್ರಿಗುಣಾತೀತಾ ನಿರ್ವಿಕಾರಾ ||3|| ಚಿತ್ತದಿ ನೆಲೆಗೊಳ್ಳಲು ಓಂಕಾರಾ | ಥಳಥಳಿಸುವದೈ ನಿನ್ನಾ ಕಾರಾ ||4|| ಓಂ ಎಂದೆನ್ನಲು ಮನಸಿಗೆ ಶಾಂತಿ | ಅದು ಕಳೆವುದು ಸಂಸಾರದ ಭ್ರಾಂತಿ ||5|| ಪರಮಪುರುಷನಾತನು ಓಂಕಾರಾ | ಧ್ಯಾನಿಸಿ ಪಡೆಯೋ ಸಾಕ್ಷಾತ್ಕಾರಾ ||6|| ಓಂಕಾರವೆ ನಾನೆಂಬುವ ರೂಪಾ | ಹೃದಯದಿ ರಾಜಿಪ ಸತ್ಯಸ್ವರೂಪಾ ||7|| ಹೃದಯದಿ ಝೇಂಕರಿಸಲು 'ಓಂ' ನಾದ | ದೊರೆವುದು ಆತ್ಮಾನಂದದ ಸ್ವಾದಾ ||8|| ಓಂಕಾರ ಬಿಲ್ಲಿಗೆ ಆತ್ಮವೆ ಬಾಣವು | ಗುರಿಯನು ಸೇರಲು ಬ್ರಹ್ಮಾಕಾರವು ||9|| ನಾರಸಿಂಹ ಮೆಚ್ಚಿದ ಓಂಕಾರವು | ಜೀವನ್ಮುಕ್ತಿಗು ಘನಸಾಧನವು ||10||

ಏಳೇಳು ಆತ್ಮನೇ

ಏಳೇಳು ಆತ್ಮನೇ, ನಿನ್ನ ನಿದ್ರೆಯ ಮುಗಿಸಿ, ಎದ್ದೇಳು ಆತ್ಮನೇ || ನೀ ಸರ್ವಾತೃ, ನೀ ಪರಮಾತ್ಮ, ನೀನೆ ಸರ್ವರ ಅಂತರಾತ್ಮ ನಿನ್ನನು ನೀನೇ ಮರೆತಿಹೆ ಏಕೆ? || ನೀ ಸರ್ವಜ್ಞ, ನೀನೇ ಪೂರ್ಣ, ಎಚ್ಚರಗೊಳ್ಳೊ ನೀನೇ ದೇವ ನಿನ್ನನ್ನು ನೀನೆ ಮರೆತಿಹೆ ಏಕೆ? ನೀನೇ ದೇವ, ನೀ ದೇವನುದೇವ, ನಿನ್ನಯ ಇಂದ್ರಿಯ ನಿನ್ನಯ ದಾಸರು | ಇದ ನೀನೇಕೆ ಮರೆತಿಹೆಯಲ್ಲ? ಇಂದ್ರಿಯಗಳಿಗೆ ಪ್ರಭುವಾಗಿ ಮೆರೆ ಮೂರು ಗುಣಗಳ ಅಧಿಪತಿಯಾಗಿರೆ ನಿನ್ನನ್ನು ನೀನು ಅರಿತುಕೊಂಡರೆ ನೀನೇ ಎಲ್ಲರ ಅಂತರಾತ್ಮನು.

ಆಷಾಡದ ಮುಂಜಾವು..

ಚುಮು ಚುಮು ಬೆಳಕ ಕಿವುಚಿ ಆಷಾಡದ ಕಾಳಿ ಹಿಪ್ಪೆ ಹಿಂಡಿ ರಸ ತೆಗೆದ ಮಸುಕು ಮಸುಕ ಬೇಲಿ ಹರಿದಂತೆ ಕನ್ನೆ ಮುಗ್ದತೆಯ ಆವರಣ ಕುಲುಕಿ ಪಲುಕು ಪಲುಕಾಗರಳುತಿದೆ ಮನದ್ಯುತಿ ಕಲಕಿ || ಸಿಲುಕಿ ಹೋದ ಅರೆ ಮಬ್ಬಲಿ ಕಳುವಾದ ಹೊತ್ತು ಬೆಳಕು ಹರಿವುದೊ ತೊರೆವುದೊ ಯಾರಿಗೆ ಗೊತ್ತು? ಮುಸುಕಲಿ ಕವಿದ ಮೋಡ ಗಿಡ ಮರವೂ ನಿಗೂಢ ಭೂತಾಕಾರದಿ ಹೊತ್ತ ಆಕಾರಗಳೆ ಭೀತಿಯ ಗಾಢ || ಅಲ್ಲೆಲ್ಲೊ ಮಾಮರ ಯಾತನೆ ಇಲ್ಲೆಲ್ಲೊ ಕಲರವ ಗಿಡಗಂಟಿಗಳ ಬೆರೆಸಿ ನಿಸರ್ಗದ ಚಿತ್ತಾರ ನಿರ್ಭಾವ ಹುಡುಕುತಲದರೊಳಗೇನನೊ ನಡೆದಿಹ ಅವನೊಬ್ಬ ಕವಿಯೊ ಜ್ಞಾನಿ ವಿಜ್ಞಾನಿಯೊ ಕೊಲೆಗಡುಕಗು ಹಬ್ಬ || ಸವರಿ ತಂಗಾಳಿ ಚಲನೆ ಮುತ್ತಿಟ್ಟಂತೆ ಪ್ರಿಯ ಲಲನೆ ಕಚಗುಳಿಯಿಟ್ಟಾಡಿಸುತ ಕುರುಳಿಗೆ ಸ್ವೇಚ್ಛಾ ಸಂಚಲನೆ ಸುಯ್ದೆ ದಣಿದು ಬೇಸತ್ತು ಬೆವರಿ ಹನಿ ಪೋಣಿಸಿ ಇಬ್ಬನಿ ಒಡಲ ನೋವೆಲ್ಲ ಧಾರೆ ಹುಲ್ಲುಲ್ಲು ಗರಿಕೆಯಲು ಕಂಬನಿ || ಭೀತಿ ನಿರ್ಭೀತಿ ಭಾವ ಕೊಳಚೆ, ಬೆಳಕಾಯ್ತು ಒಗೆಯಾಚೆ ಅದುರಿಸುವ ಚಳಿಯ ಹೊದ್ದ ಸಖಿಗು ಬಿಡದೆ ಕಂಪಿಸುತೆ ಮೆಲ್ಲಮೆಲ್ಲನೆ ಕಿರಣ ಅರಳರಳಿ, ಮಳ್ಳಿಯ ಮೈಗಾಭರಣ ಸರಿದು ಹತ್ತಿರ ಅಪ್ಪುಗೆ, ಚುಂಬನದೆ ಕದಪಲಿ ತೋರಣ ||

ಮಂಗಳವ ಹಾಡಿರೆ ಶ್ರೀ ಕೇದಾರೇಶಗೆ

#ಶ್ರೀ_ಕೇದಾರೇಶ್ವರ_ವ್ರತ_ಶುಭಾಶಯಗಳು ಮಂಗಳವ ಹಾಡಿರೆ ಶ್ರೀ ಕೇದಾರೇಶಗೆ ಆರತಿಯ ಬೆಳಗಿರೆ  ದೇವಗೆ ।। ಪಾರ್ವತಿಯ ಅರ್ಧ ದೇಹ ಪಡೆದಂತ  ದೇವಗೆ ಪ್ರಥಮಗೈಯೇ  ಸಕಲ ಭಾಗ್ಯ ಕೊಡುವಂತ ಈಶಗೆ । ನಂದಿ - ಸ್ಕಂದ - ಗಣಪರೊಡನೆ  ಕೈಲಾಸದಿ  ಇರುವಗೆ ಕೇದಾರ ಕ್ಷೇತ್ರದಲ್ಲಿ ನೆಲಸಿ ನಿಂತ ಸ್ವಾಮಿಗೆ ।।ಮಂಗಳವ।। ನಂಜನುಂಡು ಲೋಕ ಹಿತವ ಬಯಸಿದಂತ ಹರನಿಗೆ ತಾಪತಣಿಸೆ ಚಂದ್ರನನ್ನು ಉಳಿದಂತ ಶಿವನಿಗೆ । ಭಕ್ತಿಯಿಂದ ಬೇಡೇ  ಒಡನೆ ಓಡಿಬರುವ ಈಶಗೆ ಕರುಣೆಯಿಂದ ಕಾಯುವಂತ ರುದ್ರಾಕ್ಷಿ ಮಾಲೆಗೆ ।।ಮಂಗಳವ।। ವ್ರತವಗೈಯೇ  ಮಾಂಗಲ್ಯದ ಭಾಗ್ಯ ಕೊಡುವ ಸ್ವಾಮಿಗೆ ಭಜಿಸಿ ಬೇಡೇ  ಸಂತಾನವ   ಕೊಡುವ ಅಮಿತಗೆ । ಕರವ ಮುಗಿವೆ ಕಷ್ಟ ಕಳೆದು ಕಾವಂತ ದಿವ್ಯಗೆ ದಕ್ಷ ಯಜ್ಞ ನಾಶಗೈವ ಮಾರ್ತಾಂಡನ ಪಿತನಿಗೆ ।।ಮಂಗಳವ।। ಕೋಟಿ ಕೋಟಿ  ಜೀವಗಳಿಗೆ  ಅನ್ನ  ನೀಡೋ ದಾತಗೆ ಉಪವಾಸದ ವ್ರತವಗೈಯೇ  ಒಲಿದು ಬರುವ  ಈಶಗೆ । "ಓಂ ನಮಃ ಶಿವಾಯ" ಎಂದು ನುಡಿಸೆ ನಲಿವ ಹರನಿಗೆ ಭಕ್ತಿಯಿಂದ ಪೂಜೆ ನೀಡಿ ಮಣಿಯಿರವನ ಕಾಲಿಗೆ ।।ಮಂಗಳವ।। ನಾದಲೋಲ ನಾಟ್ಯರಾಜ" ಓಂ"ಕಾರದ  ರೂಪಗೆ ಲಿಂಗರೂಪ ಧರಿಸಿ ನಿಂತ ದಿವ್ಯರೂಪ ಹರನಿಗೆ । ನಂದಿ  ಅರ್ಧ  ರೂಪದಲ್ಲಿ ಕೇದಾರದಿ ಇರುವಗೆ ಪಾಂಡವರ   ಭಕ್ತಿಗೊಲಿದ ಕೇದಾರದ ಸ್ವಾಮಿಗೆ ।।ಮಂಗಳವ।। "ಓಂ ನಮ...