ಶ್ರೀನೃಸಿಂಹಾಯ ಮಂಗಳಂ

"ಯಾದವಗಿರಿ" ಒಡೆಯ; ದೇವ ಯೋಗನೃಸಿಂಹ
ನಿನ್ನಡಿಗೆ ತಲೆಬಾಗಿ ವಂದಿಸುವೆನು |
ತಪ್ತಗೊಂಡಿಹ ಬದುಕಿಗಮಲ ಸತ್ಯವ ನೀಡು
ತವ ಸನ್ನಿಧಿಗೆ ಮುಡಿಯನರ್ಪಿಸುವೆನು ||

ಭವದ ಬೇನೆಗೆ ಜೀವ ಭಾರವಾಗಿದೆ ತಂದೆ;
ಸೈರಿಸುವ ಚೈತನ್ಯ ಉಡುಗುತ್ತಿದೆ |
ಕವಿದ ಕತ್ತಲೆಯಲ್ಲಿ ತಡವರಿಸಿ ಸಾಗುತಿಹೆ;
ಸೊಡರಬೆಳಕಿನ ಹಾದಿ ಅರಿಯದಾದೆ ||

'ನಾನು, ನನ್ನದು' ಎಂಬ ಮೋಹಾಂಧಕಾರದಲಿ
ಸಿಲುಕಿರುವ ಈ ಜೀವ ಮತಿ ವಿಹೀನ |
ಸ್ವಾರ್ಥ ಬಂಧನದಿಂದ ಬಿಗಿಗೊಂಡ ಈ ಬದುಕು
ಸಾಗಿಸಿದೆ ಅನಗಾಲ ಸಂಸಾರಯಾನ ||

ಆಮೆ ನಡಿಗೆಯ ಬದುಕು ಬೇಡೆನೆಗೆ ನೃಸಿಂಹ
ಗರುಡಚೇತನವಿತ್ತು ಕರುಣೆದೋರು |
ವರದ ಹಸ್ತವನೆನ್ನ ಮಸ್ತಕದ ಮೇಲಿರಿಸು;
ಕರ್ಮ ಬಂಧವ ಕಡಿದು ಬೆಳಕ ತೋರು ||

ಎಲ್ಲ ಕಿವಿಗೊಡಲಲ್ಲಿ 'ಗೋವಿಂದ, ಗೋವಿಂದ,'
ನಿನ್ನನುಪಮದ ನಾಮ ಮನಸಿಗಾನಂದ
ಆ ನಾಮಬಲದಿಂದ ಕಳೆಯಲೀ ಭವಬಂಧ
ಹೃತ್ಕಮಲ ಪೀಠದಲಿ ನೆಲೆಸಿರಲಿ ಗೋವಿಂದ ||

ಏನ ನೀಡಲಿ ನಿನಗೆ ಶ್ರೀನೃಸಿಂಹನೆ;
ಸಕಲ ಐಸಿರಿ ನಿನ್ನ ಸನ್ನಿಧಿಯೊಳಿರಲು
ನೀಡಲೆನಗೇನಿಹುದು ಭಕ್ತಿಯೊಂದನ್ನುಳಿದು
ಹರಿದಿರಲಿ ತವಪದಕೆ ಆ ಭಕ್ತಿ ಹೊನಲು ||

ನಿನ್ನಡಿಗೆ ಸುಮವಾಗಿ ಮುಡಿಪಿರಲಿ ಈ ಜೀವ
ಬಾಡದಂದದಿ ನಿತ್ಯ ಸಲಹು ದೇವ |
ಬೆಳಗುತಿಹ ಪ್ರಣತಿಯಲಿ ಬಾಳ ಬತ್ತಿಯ ಹೊಸೆದು
ಭಕ್ತಿ ತೈಲವನೆರೆಯಲೆನ್ನ ಜೀವ ||

ಮಂಗಳವು ಶ್ರೀ ಮಂಗಳಾಂಗಗೆ ದೇವ ನೃಸಿಂಹಗೆ,
ಮಂಗಳವು ಜಯಮಂಗಳ |
ಮಂಗಳವು ಶ್ರೀ ಕ್ಷೇತ್ರ ಯಾದವಗಿರಿವಾಸಿ ಸುಂದರ ಮೂರ್ತಿಗೆ
ಮಂಗಳವು ಶುಭ ಮಂಗಳ ||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ