ಮಾನವತೆಗೆ ಅದ್ವೈತದ ಕೊಡುಗೆ

    ನಮ್ಮ ಭರತಖಂಡದ ಸಂಸ್ಕೃತಿಯ ಗನಿಗಳಾದ ವೇದ-ಪುರಾಣ ಇತಿಹಾಸಗಳಲ್ಲಿ ಮಾನವನೆಂದರೆ ಯಾರು? ಎಂಬಿದನ್ನು ಚೆನ್ನಾಗಿ ವಿವೇಚಿಸಿ ತಿಳಿಸಿದ್ದಾರೆ. ಪ್ರತ್ಯಕ್ಷಪ್ರಮಾಣದಿಂದ ಕಂಡುಬರುವ, ಮನುಷ್ಯಶರೀರಧಾರಿಯಾದ ವ್ಯಕ್ತಿಯೇ ಮಾನವನು - ಎಂಬಿಷ್ಟನ್ನೇ ಶಾಸ್ತ್ರಗಳು ಒಪ್ಪಿರುವದಿಲ್ಲ. ಶರೀರದ ಜೊತೆಗೆ ಅಂತಃಕರಣವೂ, ಅದಕ್ಕೆ ಹೊಂದಿಕೊಂಡಂತೆ ದೈವೀಗುಣಗಳೂ ಇರುವವನನ್ನೇ ಮಾನವ, ಪುರುಷ - ಎಂದು ಅಲ್ಲಿ ಕರೆದಿರುತ್ತದೆ. ಮಾನವನ ಸೃಷ್ಟಿಯ ವಿಷಯಕ್ಕೆ ಉಪನಿಷತ್ತಿನಲ್ಲಿ ಈ ವರ್ಣನೆಯಿದೆ : "ಆತ್ಮನಿಂದ ಆಕಾಶವು ಹುಟ್ಟಿತು, ಆಕಾಶದಿಂದ ಕ್ರಮವಾಗಿ ವಾಯು, ತೇಜಸ್ಸು, ಜಲ, ಪೃಥ್ವಿಗಳೂ ಅನಂತರ ಪೈರುಗಳೂ ಅನ್ನವೂ ಅನ್ನದಿಂದ ಪುರುಷನೂ ಹುಟ್ಟಿರುತ್ತಾನೆ." ಈ ವಿವರಣೆಯು ತೈತ್ತಿರೀಯೋಪನಿಷತ್ತಿನಲ್ಲಿದೆ. ಅಲ್ಲಿ ಶ್ರೀ ಶಂಕರಾಚಾರ್ಯರು ವ್ಯಾಖ್ಯಾನಮಾಡಿರುವದು ಹೇಗೆಂದರೆ : "ಎಲ್ಲಾ ಚೇತನಾಚೇತನವಸ್ತುಗಳೂ ಬ್ರಹ್ಮದಿಂದಲೇ ಹುಟ್ಟಿ ಬಂದು ಬ್ರಹ್ಮವಂಶಕ್ಕೇ ಸೇರಿದ್ದರೂ ಶ್ರುತಿಯು ಪುರುಷನನ್ನೇ ಏಕೆ ಗ್ರಹಿಸಿದೆ? ಎಂದರೆ ಬ್ರಹ್ಮದ ಆವಿರ್ಭಾವವು ಮನುಷ್ಯನಲ್ಲಿ ಪೂರ್ಣವಾಗಿರುವದರಿಂದ - ಎಂದು ತಿಳಿಯಬೇಕು. ಪುರುಷನು ತಿಳಿವಳಿಕೆಯಿಂದ ಕೂಡಿದವನಾಗಿದ್ದು ಮಾತನಾಡುವದು, ನೋಡುವದು, ಕೇಳುವದು - ಮುಂತಾದ ವ್ಯವಹಾರಗಳ ಜೊತೆಗೆ, ನಾಳೆಗೇನು? ವಯಸ್ಸಾದ ಮೇಲೆ ಹೇಗೆ? ಈ ಶರೀರವನ್ನು ಬಿಟ್ಟ ಅನಂತವೂ ಜನ್ಮಾಂತರಲೋಕಾಂತರಗಳಲ್ಲಿಯೂ ಸುಖವಾಗಿರುವದು ಹೇಗೆ? ಮುಂತಾದ ರೀತಿಯ ಅಲೋಚನೆಯೂ ವಿವೇಕವೂ ಉಳ್ಳವನಾಗಿರುತ್ತಾನೆ. ಉಳಿದ ಪಶುಪಕ್ಷಿಗಳಿಗಾದರೊ, ಹಸಿವು ಬಾಯಾರಿಕೆಗಳ ವಿಷಯಗಳನ್ನು ಬಿಟ್ಟರೆ ವಿವೇಕವಾಗಲಿ, ಜ್ಞಾನವಾಗಲಿ ಇರುವದಿಲ್ಲ; ಆದ್ದರಿಂದಲೇ ಶ್ರುತಿಯು ಅನ್ನದಿಂದ ಪುರುಷನು ಹುಟ್ಟಿದನು - ಎಂದು ಪ್ರಧಾನವಾಗಿ ತಿಳಿಸಿದೆ-" ಎಂದು ಅಭಿಪ್ರಾಯಪಟ್ಟಿರುತ್ತಾರೆ.

    ಮನುಸ್ಮೃತಿ ಮುಂತಾದ ಆಕರಗ್ರಂಥಗಳಲ್ಲಿಯೂ 'ಭೂತಾನಾಂ ಪ್ರಾಣಿನಃ ಶ್ರೇಷ್ಠಾಃ ಪ್ರಾಣಿನಾಂ ಬುದ್ಧಿಜೀವಿನಃ' ಎಂದು ತಿಳಿಸಿ ಮನುಷ್ಯ - ಅವನಲ್ಲಿಯೂ ವಿದ್ಯಾವಂತ - ಅವನಲ್ಲಿಯೂ ಜಾಣ - ಜಾಣನಲ್ಲಿಯೂ ಬ್ರಹ್ಮಜ್ಞಾನಿ ಹೀಗೆ ಉತ್ತರೋತ್ತರವಾಗಿ ಶ್ರೇಷ್ಠರಾರೆಂಬುದನ್ನು ತಿಳಿಸಿದೆ. ವಿಚಾರಮಾಡಿದಂತೆಲ್ಲ ಮಾನವನ ಆಕಾರಕ್ಕಿಂತಲೂ ಅಂತರಂಗದ ಸಂಸ್ಕೃತಿಯೇ ನಿಜವಾದ ಮಾನವತೆಯೆಂದು ಸಿದ್ಧವಾಗುತ್ತದೆ. ಇದನ್ನೇ ನಾಗರಿಕತೆ ಎಂದೂ ಐತಿಹಾಸಿಕರು ಕರೆದಿದ್ದಾರೆ. ಆದ್ದರಿಂದ ಮಾನವನ ಅಪೂರ್ವ ಆಸ್ತಿಯಾದ ಅಂತರಂಗದ ಸಂಸ್ಕೃತಿಯ ನಿಜವಾದ ಗುರಿಯು ಯಾವದೆಂಬುದನ್ನು ಈಗ ವಿಚಾರಮಾಡುಬಹುದಾಗಿದೆ.

    ಅಂತಃಕರಣವೇನೊ, ಮಾನವನಿಗೆ ವಿಶೇಷಕೊಡುಗೆಯಾಗಿ ಪರಬ್ರಹ್ಮದಿಂದ ದೊರಕಿರುವದು ನಿಜವಾದರೂ ಈಗಿನ ಕಾಲಕ್ಕೆ ಅದನ್ನು ಮನುಷ್ಯನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ಹೆಸರು ಅಂತಃಕರಣ ಒಳಗಿನ ಸಾಧನವೆಂದು ಇದ್ದರೂ ಬಹಳಮಟ್ಟಿಗೆ ಅದನ್ನು ಹೊರಗಿನ ಕರಣವಾಗಿಯೇ ಬಳಸಿಕೊಳ್ಳುವದು ಮಾನವನಿಗೆ ಒಗ್ಗಿಹೋಗಿದೆ. ಇದಕ್ಕೆ ಕಾರಣವೇನೆಂದರೆ ಈ ಸೂಕ್ಷ್ಮವಾದ ಇಂದ್ರಿಯವು ಆತ್ಮನಿಗೂ ಚಕ್ಷುರಾದಿಗಳಿಗೂ ನಡುವೆ ಇದ್ದುಕೊಂಡಿದೆ. ಸ್ವಭಾವದಿಂದಲೇ ಇಂದ್ರಿಯಗಳು ಹೊರಮುಖವಾಗಿ ಸೃಷ್ಟಿಸಲ್ಪಟ್ಟಿರುವದರಿಂದ ಅವುಗಳನ್ನು ಹಿಂಬಾಲಿಸಿರುವ ಇದುಕೂಡ ಬಹಿರ್ಮುಖವಾಗಿಯೇ ಪ್ರವರ್ತಿಸುತ್ತಿರುವದು ಸಹಜವಾಗಿದೆ. ಇದರ ಪರಿಣಾಮವಾಗಿಯೇ ಹೊರಗಿನ ಪ್ರಪಂಚದ ಸಂಬಂಧವೇ ಅಂತಃಕರಣಕ್ಕೆ ಹೆಚ್ಚಾಗಿದ್ದು ತನಗೂ ಹಿಂತಡಿಕೆಯಾಗಿರುವ ಆತ್ಮನನ್ನು ಕಂಡುಕೊಳ್ಳುವ ವಿಷಯಕ್ಕೆ ಇದು ಅಸಮರ್ಥವಾಗಿಬಿಟ್ಟಿದೆ. ಒಳಗೆ ನೋಡುವದೆಂಬುದು ಇದಕ್ಕೆ ಮರೆತೇ ಹೋಗಿದೆ. ಇನ್ನು ಇಂದ್ರಿಯಗಳಾದರೊ, ಈ ಅಂತಃಕರಣವನ್ನು ಸೆಳೆದು ಸೆಳೆದು ಬಾಹ್ಯವಾಗಿರುವ ಶಬ್ದಾದಿವಿಷಯಗಳಲ್ಲಿಯೇ ತೊಡಗಿಸಿ ಆ ಮೂಲಕ ಬೇಕು-ಬೇಡಗಳನ್ನು ಕಲಿಯಿಸಿಕೊಟ್ಟು ಇದು ಯಾವಾಗಲೂ ಚಂಚಲವಾಗಿರುವಂತೆ ಮಾಡಿಟ್ಟಿವೆ. ಇಂಥ ವಿಕ್ಷಿಪ್ತ ಅಂತಃಕರಣವುಳ್ಳ ಪುರುಷನು ನಿಜವಾಗಿಯೂ ತನ್ನ ಸ್ವಸ್ವರೂಪದ ಅರಿವನ್ನು ಮನಗಾಣದೆ ಶೋಕಮೋಹಾದಿದ್ವಂದ್ವಗಳಿಗೆ ವಶನಾಗಿ ಸಂಸಾರದಲ್ಲಿಯೇ ಮುಳುಗಿಬಿಟ್ಟಿರುವನು. ಕಾಮಕ್ರೋಧಾದಿರೂಪವಾದ ಅಸುರೀಸಂಪತ್ತು ಬಹಿರ್ಮುಖವಾದ ಅಂತಃಕರಣವನ್ನು ಕಲುಷಿತಗೊಳಿಸಿ ಇವನ ಅವನತಿಗೇ ಕಾರಣವಾಗಿರುವದು. ಹೀಗಿರುವಲ್ಲಿ ಮಾನವತೆಯು ಹೇಗೆ ತಾನೆ ಪುರಷನಲ್ಲಿ ಉಳಿದೀತು? ಮಾನವತೆಯಿಲ್ಲದ ಪುರುಷನ ಬಾಳು ಸುಖಮಯವಾಗಿ ಆಗುವದಾದರೂ ಹೇಗೆ ಮತ್ತು ದೇವರು ಕೊಟ್ಟಿದ್ದ ವಿಶೇಷಸವಲತ್ತಾದ ಅಂತಃಕರಣದ ದುರುಪಯೋಗವೂ ಪರಮಾವಧಿಯ ಮಟ್ಟದಲ್ಲಿ ಆಗಿದ್ದು ಮನುಷ್ಯಕುಲಕ್ಕೇ ಈಗ ವಿಪತ್ತು ಒದಗಿಬಂದಿದೆಯೆಂದರೆ ಅತಿಶಯೋಕ್ತಿಯಾಗಲಾರದು.

    ಈಗ ಬಹಳ ಜಾಗ್ರತೆಯಾಗಿ ಮಾನವನು ಕೈಗೊಳ್ಳಬೇಕಾಗಿರುವ ಮುಖ್ಯ ಕೆಲಸವೆಂದರೆ ತನ್ನ ಅಂತಃಕರಣದ ಉದ್ಧಾರವೇ ಆಗಿದೆ. ಇದು ಎಲ್ಲರ ಉದ್ಧಾರದ ಗುರಿಯನ್ನೂ ಒಳಗೊಂಡೇ ಇರುತ್ತದೆ. ಈಗಿನ ನಮ್ಮ ಜೀವನಕ್ರಮ, ವಿದ್ಯಾಭ್ಯಾಸ, ಆಡಳಿತ - ಮುಂತಾದ ಯಾವದೇ ಕ್ಷೇತ್ರದಲ್ಲಿಯೂ ಅಂತಃಕರಣದ ಉದ್ಧಾರಕ್ಕೆ ಯಾವದೊಂದು ಯೋಜನೆಯೂ ಇಲ್ಲವಾಗಿರುವದು ತೀರ ವಿಷಾದಕರವಾದ ಸಂಗತಿಯಾಗಿದೆ. ಮನುಷ್ಯನ ಶರೀರಪೋಷಣೆ, ಇಂದ್ರಿಯಗಳಿಗೆ ಬೇಕಾದ ಸುಖ - ಇವುಗಳಿಗಾಗಿ ಎಲ್ಲಾ ವಿಧವಾದ ಪ್ರಯತ್ನಗಳೂ ಕಾರ್ಯಸಾಧನೆಯೂ ಈಗ ನಡೆಯುತ್ತಿವೆಯೇ ಹೊರತು ಅಂತಃಕರಣದ ಗತಿಯೇನಾಯಿತೆಂದು ನೊಡುವವರೇ ಇಲ್ಲವಾಗಿದೆ. ಇಂದಿನ ವಿದ್ಯಾಭ್ಯಾಸದ ಯೋಜನೆಯೂ ಸಹ ಹೊಟ್ಟೆಯಪಾಡಿಗೆ ಅನುಕೂಲವಾಗುವಂತೆ ರೂಪಿಸಲ್ಪಟ್ಟು ಇಂಥಿಂಥ ಪಾಸುಮಾಡಿದವರಿಗೆ ಇಂಥಿಂಥ ಉದ್ಯೋಗವೆಂಬ ಪರಿಸ್ಥಿತಿಗೆ ಇಳಿದಿದ್ದು ಮನುಷ್ಯನ ಅಂತಃಕರಣದ ವೇದನೆಗಳ ಸುಧಾರಣೆ, ಅವುಗಳನ್ನು ಹಿಡಿತದಲ್ಲಿಟ್ಟುಕೊಳ್ಳುವದು, ಸ್ವಪರಕಲ್ಯಾಣಕ್ಕೆ ಅವುಗಳನ್ನು ವಿನಿಯೋಗಿಸುವದು ಹೇಗೆ - ಎಂಬ ವಿಷಯಗಳಲ್ಲಿ ಏನೊಂದು ಶಿಕ್ಷಣವೂ ಈಗಿನ ಜನರಿಗೆ ದೊರೆಯುತ್ತಿಲ್ಲ. ಎಲ್ಲರ ಬಾಯಲ್ಲಿಯೂ ಸಮಾಜದ ಅಭಿವೃದ್ಧಿಯ ಮಾತುಗಳುನಲಿದಾಡುತ್ತಿವೆಯಾದರೂ ಆ ಅಭಿವೃದ್ಧಿಯು ಮಾನವನ ಜೀವನದಲ್ಲಿ ಎಲ್ಲಿ, ಹೇಗೆ ಆಗಬೇಕೆಂಬುದನ್ನು ಮಾತ್ರ ಯಾರೂ ಯೋಚಿಸಿರುವದೇ ಇಲ್ಲ. ನಿಜವೇನೆಂದರೆ ಮಾನವನು ತನ್ನ ಅಂತಃಕರಣದಲ್ಲಿ ದೈವೀಸಂಪತ್ತನ್ನು ಅಳವಡಿಸಿಕೊಂಡಲ್ಲದೆ ಕೇವಲ ಭೋಗಪ್ರಧಾನವಾದ ಅಸುರೀಸಂಪತ್ತಿನ ಜೀವನದಿಂದ ಇನ್ನು ಎಷ್ಟೇ ವರ್ಷಗಳನ್ನು ಕಳೆದರೂ ಅಭಿವೃದ್ಧಿಯನ್ನು ಸಾಧಿಸಲಾರನು. ಈಗಾಗಲೇ ಅನೇಕ ಪಾಶ್ಚಾತ್ತ್ಯರಾಷ್ಟ್ರಗಳವರು ಸುಖಶಾಂತಿಗಳಿಗೆಂತ ವಿಜ್ಞಾನದ ಮುನ್ನಡೆಯನ್ನು ಸಾಧಿಸಿಕೊಂಡಮೇಲೂ ಅಂತಃಕರಣದಮಟ್ಟದಲ್ಲಿ ತಕ್ಕ ಪ್ರಗತಿಯನ್ನು ಸಾಧಿಸದೆ ಇದ್ದುದರ ಫಲವಾಗಿ ಜೀವನದಲ್ಲೇ ನಿರಾಶರಾಗಿ ಭಯ - ಭ್ರಾಂತಿಗಳಿಗೆ ತುತ್ತಾಗಿ ಪೇಚಾಡುತ್ತಿರುವರು. ನಮ್ಮ ಭರತಖಂಡದವರೂ ಹೀಗೆಯೇ ಎಡವಿದರೆ ದುರ್ದೈವವೆಂದು ಹೇಳದೆ ವಿಧಿಯಿಲ್ಲ.

    ನಿಜವಾಗಿ ನಮ್ಮ ಸಂಸ್ಕøತಿಯ ಹಿನ್ನೆಲೆಯನ್ನು ಪರಿಶೀಲಿಸಿದರೆ ಪರರಾಷ್ಟ್ರಗಳಂತೆ ನಾವು ಎಂದಿಗೂ ಸುಖಶಾಂತಿಗಳಿಗಾಗಿ ಪೇಚಾಡುವ ಪ್ರಸಂಗವಿರುವದಿಲ್ಲ. ಏಕೆಂದರೆ ನಮ್ಮ ಹಿರಿಯರೂ ಪೂಜ್ಯರೂ ಆದ ಮಹರ್ಷಿಗಳು ತಮ್ಮ ಜೀವನವನ್ನೇ ಒತ್ತೆಯಾಗಿಟ್ಟು ಅಂತಃಕರಣದ ಸಂಸ್ಕøತಿಯನ್ನು ಉನ್ನತಿಗೆ ಏರಿಸಿ ಶಾಂತಿಸುಖಗಳನ್ನು ಪಡೆದುಕೊಳ್ಳುವ ರಾಜಮಾರ್ಗವನ್ನು ನಮಗಾಗಿ ಕಂಡುಹಿಡಿದು ಬೋಧಿಸಿ ತಾವೂ ಅನುಷ್ಠಾನಮಾಡಿ ತೋರಿಸಿರುತ್ತಾರೆ. ಈ ಮಾರ್ಗಕ್ಕೆ ಅಧ್ಯಾತ್ಮಮಾರ್ಗವೆಂದು ಹೆಸರು. ಈ ರಾಜಮಾರ್ಗಕ್ಕೆ ಸೇರಿಕೊಳ್ಳುವಂಥ ಧರ್ಮ, ನೀತಿ, ಸದಾಚಾರಗಳೆಂಬ - ಕೆಲವು ಉಪಮಾರ್ಗಗಳನ್ನೂ ತೋರಿಸಿಕೊಟ್ಟು ಮಾನವಕುಲಕ್ಕೇ ಪರಮೋಪಕಾರವನ್ನು ಮಾಡಿರುತ್ತಾರೆ. ಅವರುಗಳು ಬೋಧಿಸಿರುವ ಅನೇಕ ವಿಷಯಗಳು ಆಯಾ ಕಾಲ, ದೇಶ, ಸಮಾಜಸ್ಥಿತಿಗತಿಗಳು ಹಾಗೂ ಜನರ ಯೋಗ್ಯತೆಗೆ ಅನುಗುಣವಾಗಿರಬೇಕಾದ ಸಂದರ್ಭಗಳಿಂದ ಭಿನ್ನ ಭಿನ್ನವಾದಂತೆ ಕಂಡರೂ ಕಡೆಯಲ್ಲಿ ಬಂದೇ ಗುರಿಯನ್ನು ಮುಟ್ಟುವದರಲ್ಲಿ ಯಶಸ್ವಿಯಾಗಿವೆ. ಹೇಗೆಂದರೆ : ಅಂತಃಕರಣವನ್ನು ಸುಸಂಸ್ಕೃತವಾಗಿ ಮಾಡಬೇಕಾದ ಸಂದರ್ಭದಲ್ಲಿ ಶರೀರವನ್ನೂ ಸೇರಿಸಿಕೊಂಡೇ ವ್ಯವಹರಿಸಬೇಕಾದದ್ದು ಅನಿವಾರ್ಯವಾಯಿತು. ಶರೀರ ಎಂದ ಕೂಡಲೆ ಗಂಡಸು-ಹೆಂಗಸು-ಮುಂತಾದ, ಹಾಗೂ ಮನಸ್ಸು ಎಂದರೆ ಸಾತ್ತ್ವಿಕ-ರಾಜಸ-ತಾಮಸ-ಮುಂತಾದ ಭೇದಗಳೆಲ್ಲವೂ ಒಟ್ಟಿಗೆ ಕಾಣಿಸಿಕೊಂಡದ್ದರಿಂದ ಉಪದೇಶಕರು ಈ ಭೇದಗಳನ್ನೆಲ್ಲ ಲಕ್ಷ್ಯದಲ್ಲಿಟ್ಟು ಕೆಲವು ದೂರದವರೆಗೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಪ್ರಾಥಮಿಕ ಬೋಧೆಗಳನ್ನು ನೀಡಿದರು. ಇವೇ ಕೆಲವು ವೇಳೆ ಮತಧರ್ಮಗಳಾಗಿ ಚಿಗುರಿಕೊಂಡು ದೊಡ್ಡದಾಗಿ ಬೆಳೆದವು. ಆದರೆ ಯಾವ ಮತ ಬೋಧೆಗಳೂ ಅಂತಃಕರಣದ ಸಂಸ್ಕಾರದ ವಿಷಯಕ್ಕೆ ಎಂದಿಗೂ ಭಿನ್ನಾಭಿಪ್ರಾಯಗಳನ್ನು ಹೊಂದಲೇ ಇಲ್ಲ. ಏಕೆಂದರೆ ಶರೀರಕ್ಕಿಂತ ಸೂಕ್ಷ್ಮವಾದ ಅಂತಃಕರಣವೂ ಅದರಲ್ಲಿರುವ ರಾಗಾದಿದೋಷಗಳೂ ಎಲ್ಲರಿಗೂ ಸಮಾನವಾಗಿದ್ದವು. ಆದ್ದರಿಂದ ಮತಧರ್ಮ ಅಥವಾ ಸ್ವಧರ್ಮವೆನಿಸಿದ ಈ ಬೋಧೆಗಳು ಆಯಾ ಮಾನವರನ್ನು ದೇಹಾತ್ಮಬುದ್ಧಿಯಿಂದ ಪಾರುಮಾಡಿ ಅಂತಃಕರಣದ ದೈವೀಗುಣಗಳನ್ನು ಉನ್ನತ ಮಟ್ಟಕ್ಕೆ ಏರಿಸಲು ಸಹಾಯಕವಾದವು. ಹೀಗೆ ಮಾನವ ಮತ್ತು ಅವನ ಮನಸ್ಸು - ಎಂಬಿವೇ ಪ್ರಧಾನವಾಗಿ ಪರಿಗಣಿಸಲ್ಪಟ್ಟಾಗ ಜಗತ್ತಿನ ಮತಧರ್ಮಗಳೆಲ್ಲವೂ ಅವನ ಅಂತಃಕರಣದ ಉನ್ನತಿಗೆ ಸಹಾಯಮಾಡುವದರಲ್ಲಿಯೇ ತಾತ್ಪರ್ಯವುಳ್ಳವಾದವು - ಎಂದರೆ ತಪ್ಪಾಗಲಾರದು. ಆದ್ದರಿಂದ ಒಮ್ಮೆ ಮಾನವನು ಮತಧರ್ಮಗಳ ಸಹಾಯಯದಿಂದ ಸಾತ್ತ್ವಿಕಾಂತಃಕರಣಸಂಪನ್ನನೂ ದೈವೀಗುಣವಿಶಿಷ್ಟನೂ ಆದನೆಂದರೆ ಸಾಕು. ಅವನು ಮುಂದೆ ಮತಧರ್ಮಗಳನ್ನು ಅನುಸರಿಸದೆಹೋದರೂ ಅಪಾಯವಿಲ್ಲ. ಆದರೆ ಅಂತಃಕರಣಕ್ಕೆ ಏನೊಂದೂ ಸಂಸ್ಕಾರವಿಲ್ಲದ ಸ್ವಾಭಾವಿಕ ಸ್ಥಿತಿಯಲ್ಲಿಯೇ ಮಾನವನು ಮತಧರ್ಮಗಳ ವಿಷಯಕ್ಕೆ ಉದಾಸೀನನಾದರೆ ಅಥವಾ ದ್ವೇಷಬುದ್ಧಿಯವನಾದರೆ ಅಂಥವನು ಸಮಾಜಕ್ಕೆ ಶತ್ರುವಾಗಿ ಪರಿಣಮಿಸುವದೇ ನಿಜ. ಈ ಪರಿಸ್ಥಿತಿಯಲ್ಲಿ ಜನರನ್ನು ತಿದ್ದುವ ಸಲುವಾಗಿ ಮುಂದಾಳುಗಳಾಗಿ ಹೊರಟಿರುವ ವಿವೇಕಿಗಳು ಬಹು ಎಚ್ಚರಿಕೆಯಿಂದ ವರ್ತಿಸಿ ಮಾನವನನ್ನು ದೈವೀಸಂಪತ್ತಿನ ಕಡೆಗೇ ತಿರುಗಿಸಬೇಕಾಗಿದೆ. ಹಾಗಾಗದೆ ಹೋದರೆ ಮತಧರ್ಮಗಳೆಂಬ ಶಸ್ತ್ರದಿಂದ ನಮ್ಮ ತಲೆಯನ್ನು ನಾವೇ ಕತ್ತರಿಸಿಕೊಂಡವರಾಗಿಬಿಡುತ್ತೇವೆ. ಮತಧರ್ಮಗಳು ದುರುಪಯೋಗವಾಗದೆ ಇರಬೇಕಾದರೆ ಅವುಗಳ ಗುರಿಯನ್ನು ಅಂತಃಕರಣದ ಪರಿವರ್ತನೆಗೆ ಕೇಂದ್ರೀಕರಿಸುವದೊಂದೇ ಉಪಾಯವಾಗಿದೆ.

    ಈಗ ಮತಧರ್ಮಾನುಷ್ಠಾನಗಳಿಂದ ಸಾತ್ತ್ವಿಕಾಂತಃಕರಣವನ್ನು ಸಂಪಾದಿಸಿಕೊಂಡವನ ಚಿಂತನೆಯನ್ನು ಅನುಸರಿಸೋಣ. ಅಂಥವನಿಗೆ ಕೆಲವು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟಬಹುದಾಗಿದೆ. ಏನೆಂದರೆ ನನ್ನಂತೆಯೇ ಇನ್ನೂ ಅನೇಕಜೀವರುಗಳೂ ಅಚೇತವಸ್ತುಗಳೂ ಈ ಪ್ರಪಂಚದಲ್ಲಿವೆಯಲ್ಲ ಇವುಗಳ ಸೃಷ್ಟಿಕರ್ತನಾರು? ಮೂಲವಾವುದು? ಏತಕ್ಕಾಗಿ ಇವರೆಲ್ಲರೂ ಜೀವಿಸಿರುವರು? ಹೀಗೆಲ್ಲ ಅಲೋಚನೆಗಳು ಬಂದಾಗ ಅಂಥವನಿಗೆ ಮಾರ್ಗದರ್ಶನಮಾಡುತ್ತಾ ಉಪನಿಷತ್ತುಗಳು ತಿಳಿಸುವದೇನೆಂದರೆ: "ಈ ಭೂತಗಳೆಲ್ಲವೂ ಆನಂದದಿಂದ ಹುಟ್ಟಿವೆ, ಆನಂದದಲ್ಲಿಯೇ ಇವೆ; ಕಡೆಗೆ ಆನಂದವನ್ನೇ ಸೇರುತ್ತವೆ" ಎಂಬ ಸಂದೇಶವಾಗಿದೆ. ಈ ಬೋಧೆಯು ನಿಜವಾಗಿಯೂ ತತ್ತ್ವಚಿಂತಕನಿಗೆ ಒಪ್ಪಾಗುತ್ತದೆ ಏಕೆಂದರೆ ಪ್ರತಿಯೊಬ್ಬನೂ ಜೀವನದಲ್ಲಿ ಆನಂದಕ್ಕಾಗಿಯೇ ಪರದಾಡುತ್ತಿರುತ್ತಾನೆ. ಆದರೆ ಅದು ಎಲ್ಲಿದೆ? ಅದನ್ನು ಪಡೆಯುವದು ಹೇಗೆ? ಎಂಬಿದು ಮಾತ್ರ ತಿಳಿದಿರುವದಿಲ್ಲ. ಆದ್ದರಿಂದ ಈ ವಾಣಿಯು ಅವನಂತೆಯೇ ಅಂತಃಕರಣದ ಸಂಸ್ಕಾರವನ್ನು ಹೊಂದಿದವರಿಗೆಲ್ಲ ಇಷ್ಟವಾಗುತ್ತದೆ. ಅನಂತರ ಅವನು ಆ ಅನಂದದ ಅನ್ವೇಷಣೆಗೆ ಮನಸ್ಸುಮಾಡುತ್ತಾನೆ. ಈ ಉಪದೇಶವು ಯಾವ ಮತಧರ್ಮಕ್ಕೂ ವಿರೋಧಿಯಲ್ಲ; ಆದರೆ ಯಾವ ಮತಧರ್ಮಕ್ಕೂ ಸೇರಿದ್ದಲ್ಲ - ಎಂದ ಮೇಲೆ ಆನಂದದ ಅನ್ವೇಷಣೆಗೆ ಎಲ್ಲ ಮತದವರೂ ಸಿದ್ಧರಾದಂತೆಯೇ ಆಯಿತಲ್ಲವೆ? ನಿಜವಾಗಿಯೂ ನೋಡಿದರೆ ಆನಂದಚಿಂತಕರಿಗೆ ಭೇದಭಾವನೆಗಳಿರಲು ಸಾಧ್ಯವೆ? ಹೀಗೆ ಉಪನಿಷತ್ತುಗಳಲ್ಲಿ ಮತಧರ್ಮಗಳನ್ನೂ ಮಿರಿದ ಸಾರ್ವತ್ರಿಕವಾದ ಆಧ್ಯಾತ್ಮಬೋಧೆಗಳನ್ನು ತಿಳಿಸಿಕೊಡಲಾಗಿದೆ. ಯಾವನು ಈ ಉಪದೇಶಗಳನ್ನು ವಿಚಾರಮಾಡುತ್ತಾ ಮೇಲೇರುವನೋ ಅವನಿಗೆ ಎಲ್ಲಾ ದಾರಿಗಳೂ ಒಂದೇ ರಾಜಮಾರ್ಗಕ್ಕೆ ಬಂದು ಸೇರುತ್ತಿರುವದರ ಅರಿವಾಗುವದು. ಇದರಿಂದ ಅವನಿಗೆ ಉತ್ಸಾಹವುಂಟಾಗಿ ಮುಂದೆ ಗೊತ್ತಾದ ಹಾಗೂ ಕವಲಿಲ್ಲದೆ ಆಧ್ಯಾತ್ಮರಾಜಮಾರ್ಗದಲ್ಲಿ ಮೆಲ್ಲಗೆ ನಡೆಯಲಾರಂಭಿಸುವನು. ಇವನೇ ನಿಜವಾದ ಆಧ್ಯಾತ್ಮಸಾಧಕನೆನಿಸುವನು.

    ಈಗ ನಾವೆಲ್ಲರೂ ಬಹಿರಂಗವಾಗಿ ಯಾವದೇ ಭೇದಗಳನ್ನೂ ಹೊಂದಿದ್ದರೂ ಅಂತರಂಗದಲ್ಲಿ ಎಲ್ಲರೂ ಒಟ್ಟಾಗಿ ನಡೆಯಲಾರಂಭಿಸಬಹುದಾಗಿದೆ. ಈಗ ಉಪನಿಷತ್ತು ನಮಗೆ ತಿಳಿಸಿಕೊಡುವ ತತ್ತ್ವವು ಹೀಗಿದೆ :-

ಏಕೋ ವಶೀ ಸರ್ವಭೂತಾಂತರಾತ್ಮಾ
ಏಕಂ ರೂಪಂ ಬಹುಧಾ ಯಃ ಕರೋತಿ |
ತಮಾತ್ಮಸ್ಥಂ ಯೇsನುಪಶ್ಯಂತಿ ಧೀರಾ
ಸ್ತೇಷಾಂ ಶಾಂತಿಃ ಶಾಶ್ವತೀ ನೇತರೇಷಾಮ್ ||

    "ಎಲ್ಲರಿಗೂ ಸರ್ವಸಾಮಾನ್ಯವಾಗಿ ಇರತಕ್ಕ ಆತ್ಮನು ಒಬ್ಬನೇ. ಅವನು ಎಲ್ಲಾ ಪ್ರಾಣಿಗಳ ಹೃದಯದಲ್ಲಿಯೂ ಇರುವನು. ತಾನೊಬ್ಬನೇ ನಾನಾರೂಪಗಳನ್ನು ಮಾಡಿಕೊಂಡು ತೋರಿಕೊಳ್ಳುವನು. ಯಾವ ಧೀರರು ಇಂಥ ಏಕಮೇವಾದ್ವಿತೀಯನಾದ ಆತ್ಮನು ತಮ್ಮೊಳಗೇ ಇರುವನೆಂದು ಶಾಸ್ತ್ರಾಚಾರ್ಯೋಪದೇಶಗಳಿಗೆ ಅನುಸಾರವಾಗಿ ಕಂಡುಕೊಳ್ಳುವರೋ ಅಂಥವರಿಗೇ ಪರಮಶಾಂತಿಯು ದೊರಕಿರುವದು; ಬೇರೆಯವರಿಗಲ್ಲ" ಎಂಬಿದು ಈ ಉಪದೇಶದ ಅಭಿಪ್ರಾಯ. ಇದನ್ನು ನಾವೆಲ್ಲರೂ ಒಂದಲ್ಲ - ಒಂದು ದಿನ ಮನಗಾಣಲಿದ್ದೇವೆ. ಇದನ್ನು ಯಮದೇವನು ನಚಿಕೇತನಿಗೆ ಹೇಳಿರುತ್ತಾನೆ. ಮೃತ್ಯವೆಂದರೆ ಎಂಥವನಿಗೂ ಭಯವುಂಟಾಗುವದು ಸಹಜ. ಆದರೆ ಆತನೇ ಬ್ರಹ್ಮವಿದ್ಯಾಚಾರ್ಯನೂ ಆಗಿರುತ್ತಾನೆ. ಆದ್ದರಿಂದ ಆ ಸದ್ಗುರುವಿನ ಅಭಿಪ್ರಾಯದಂತೆ ಆತ್ಮವಸ್ತುವು ಒಂದೇ. ಅದೇ ಬ್ರಹ್ಮವೆಂದೂ ಕರೆಯಲ್ಪಟ್ಟಿರುವದು. ಆನಂದವೆಂದರೂ ಅದೇ. ಇಂಥ ಅಜಾವ್ಯಯಾದ್ವಿತೀಯವಾದ ವಸ್ತುವು ತಾನೆ - ಎಂಬ ತಿಳಿವಳಿಕೆಯೇ ಬ್ರಹ್ಮವಿದ್ಯೆಯು. ಈ ಉಪದೇಶವು ಸಾತ್ತ್ವಿಕಸಾಧಕನ ಮನಸ್ಸಿಗೆ ಅರಿವಾದಾಗ ನಿಜವಾಗಿಯೂ ಅವನು ಮಾನವತ್ವವನ್ನು ದಾಟಿ ಅಮೃತನಾಗಿಬಿಡುವನು. ಇನ್ನು ಮಾನವತೆಗೆ ಇದಕ್ಕಿಂತ ಹೆಚ್ಚಿನ ಕೊಡುಗೆಯೇನಿದ್ದೀತು?

    ಈ ಮಂತ್ರದಲ್ಲಿರುವ ಕೆಲವು ವಿಷಯಗಳನ್ನು ಈಗ ಇನ್ನೂ ಸ್ವಲ್ಪ ವಿವರವಾಗಿ ತಿಳಿಯೋಣ. ಇಲ್ಲಿ ಆತ್ಮನನ್ನು ವಶೀ ಎಂದು ಹೊಗಳಿದೆ. ಇದಕ್ಕೆ ಎಲ್ಲವನ್ನೂ ತನ್ನ ಸ್ವಾಧೀನದಲ್ಲಿಟ್ಟುಕೊಂಡಿರುವವನು - ಎಂದರ್ಥ. ಎಲ್ಲಾ ಎಂಬ ಪದದಲ್ಲಿ ಅಖಿಲಾಂಡಕೋಟಿಬ್ರಹ್ಮಾಂಡಗಳೂ ಸೇರಿರುತ್ತವೆ. ಆದ್ದರಿಂದ ಆತ್ಮನು ಸರ್ವಶಕ್ತನೆಂದಾಗುತ್ತದೆ. ಸರ್ವಶಕ್ತನಾದ ದೇವನು ಒಬ್ಬನೇ ಎಂಬಿದು ಎಲ್ಲಾ ಮತದವರಿಗೂ ಒಪ್ಪಾಗಿದೆ. ಏಕೆಂದರೆ ಯಾವ ಮತದವರೂ ಇಬ್ಬರು ದೇವರನ್ನು ಅಂಗೀಕರಿಸಿರುವದಿಲ್ಲ. ಇನ್ನು ಈಗ ತಾನೊಬ್ಬನೇ ಎಲ್ಲವೂ ಆಗಿದ್ದಾನೆ - ಎಂದರೆ ಹೇಗೆಂಬುದನ್ನು ವಿಚಾರಮಾಡಬಹುದು. ಸಿಹಿಯೊಂದೇ ಎಲ್ಲಾ ಮಿಠಾಯಿ-ಬಿಸ್ಕತ್ತು ಮುಂತಾದ ತಿನಿಸುಗಳಾಗಿವೆ-ಎಂದರೆ ಹೇಗೋ ಹಾಗೆ ಆತ್ಮನೊಬ್ಬನೇ ಎಲ್ಲಾ ಪ್ರಪಂಚವೂ ಆಗಿರುತ್ತಾನೆ. ಆತ್ಮನು ಯಾರೊಬ್ಬರಿಗೂ ಗೊತ್ತಿಲ್ಲದವನಲ್ಲ. ಏಕೆಂದರೆ ಎಲ್ಲರೂ ತಮ್ಮ ತಮ್ಮನ್ಮ್ನ 'ನಾನು' - ಎಂದೇ ಕರೆದುಕೊಳ್ಳುತ್ತಾರೆ. ಯಾರೊಬ್ಬರಿಗೂ ತಾವು 'ನಾನು' ಹೌದೊ, ಅಲ್ಲವೊ? ಏಕೆಂದರೆ ಇನ್ನೊಬ್ಬನೂ 'ನಾನು' ಎಂದುಕೊಳ್ಳುತ್ತಾನಲ್ಲ ಎಂಬ ಸಂಶಯವೇ ಇರುವದಿಲ್ಲ. ಹೀಗೆ 'ನಾನು' ಎಂದು ಎಲ್ಲರಲ್ಲಿಯೂ ಕಂಡುಬರುತ್ತಿರುವ ಆತ್ಮನು ಒಬ್ಬನೇ ಎಂದೇ ಸಿದ್ಧವಾಗುತ್ತದೆ. ಅವನೇ ಎಲ್ಲಾ ರೂಪಗಳಲ್ಲಿಯೂ ತೋರಿಕೊಂಡಿರುತ್ತಾನೆ. ಹೀಗೆ ವಿಚಾರಮಾಡುವಾಗ ನಾವು ಶಾಸ್ತ್ರ ಹಾಗೂ ಗುರುವಿನ ಉಪದೇಶಗಳನ್ನು ಅನುಸರಿಸಿ ಮಾಡಿದರೆ ತತ್ತ್ವವು ಚೆನ್ನಾಗಿ ತಿಳಿದುಬರುತ್ತದೆ. ಏಕೆಂದರೆ ಶಾಸ್ತ್ರವು ಸಿದ್ಧವಸ್ತುವಾದ ಈ ಆತ್ಮನೇ ಪರಬ್ರಹ್ಮವೆಂದು ಯಾವ ಸಂಶಯಕ್ಕೂ ಅವಕಾಶವಿಲ್ಲದಂತೆ ಜ್ಞಾಪಕಮಾಡಿಕೊಡುತ್ತದೆ ಗುರುಗಳು ಶಾಸ್ತ್ರಕ್ಕೆ ಅನುಸಾರವಾಗಿ ಈ ತತ್ತ್ವವನ್ನು ನಾವು ಹೇಗೆ ತಿಳಿದುಕೊಳ್ಳಬೇಕೋ ಹಾಗೆ ಮಾರ್ಗದರ್ಶನಮಾಡಿಸಿ ಅನುಭವದ ಕಡೆಗೆ ಸೆಳೆಯುತ್ತಾರೆ. ಆಗ ಅಧಿಕಾರಿಯಾದವನಿಗೆ ತನಗೇ ತನ್ನಲ್ಲಿಯೇ ಆತ್ಮದರ್ಶನವಾಗುತ್ತದೆ. ಅನಂತರ ಸರ್ವರಲ್ಲಿಯೂ ಅದೇ ಆತ್ಮನನ್ನೇ ಕಂಡುಕೊಂಡವನಾಗುತ್ತಾನೆ. ಇಂಥ ಸರ್ವಾತ್ಮದರ್ಶನವೇ ಜೀವನ್ಮುಕ್ತಿಯೆನಿಸುವದು. ಜೀವನ್ಮುಕ್ತನು ಯಾವಾಗಲೂ ತಾನು ಆನಂದಸ್ವರೂಪನಾಗಿದ್ದು ಇತರರನ್ನೂ ಆನಂದಕ್ಕೇ ಕರೆದೊಯ್ಯುವವನಾಗಿರುವನು. ಅವನೇ ನಿಜವಾಗಿ ಶಾಂತನು. ಆತ್ಮಸ್ವರೂಪದಲ್ಲಿ ನೆಲೆನಿಲ್ಲುವದರಿಂದ ಲಭಿಸುವ ಪರಮಶಾಂತಿಯು ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳ ಲಾಭದಿಂದ ಕೂಡ ದೊರಕತಕ್ಕದ್ದಾಗಿರುವದಿಲ್ಲ.

    ಇಂಥ ಆತ್ಮವಿದ್ಯೆಯನ್ನು ಉಪನಿಷತ್ತುಗಳಲ್ಲಿ ತಿಳಿಸಿರುವ ರೀತಿಯನ್ನು ಶ್ರೀ ಆದಿಶಂಕರಾಚಾರ್ಯರು ತಾವು ಕಂಡುಕೊಂಡು ಉಳಿದವರಿಗೂ ಬೋಧಿಸಿರುವ ಪ್ರಕಾರವನ್ನು ಅದ್ವೈತಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಇದು ಎಂದಿಗೂ ಒಂದು ಮತಧರ್ಮವಲ್ಲ. ಪೂರ್ವದಿಕ್ಕಿನಲ್ಲಿ ಸೂರ್ಯನು ಹುಟ್ಟುತ್ತಾನೆ - ಎಂದರೆ ಹೇಗೆ ಅದು ಒಂದು ವಸ್ತುಸ್ಥಿತಿಯೋ ಹಾಗೆ ನಮ್ಮೆಲ್ಲರ ಆತ್ಮನೂ ಒಬ್ಬನೇ, ಅವನು ಆನಂದಸ್ವರೂಪನು - ಎಂದು ಹೇಳುವದೂ ವಸ್ತುಸ್ಥಿತಿಯೇ ಆಗಿರುತ್ತದೆ. ಅದ್ವೈತ ತತ್ತ್ವವನ್ನು ಯಾರು ಯಾರು ಮನಗಾಣುವರೋ ಅವರೆಲ್ಲರೂ ಮೋಕ್ಷವನ್ನು ಪಡೆದೇತೀರುವರು. ಬದುಕಿರುವಾಗಲೂ ವ್ಯವಹಾರಸ್ಥಿತಿಯಲ್ಲಿ ಈ ತಿಳಿವಳಿಕೆಯಿಂದ ಲಾಭವುಂಟು. ನಾವೆಲ್ಲರೂ ಜ್ಞಾನದೃಷ್ಟಿಯಿಂದ ಒಂದೇ ಎಂಬ ಭಾವನೆಯು ರಾಗದ್ವೇಷಗಳನ್ನು ಹೋಗಲಾಡಿಸುವದು. ಸಂಕುಚಿತಬುದ್ಧಿಯನ್ನು ಕಳೆದು ಎಲ್ಲರಲ್ಲಿಯೂ ಪ್ರೇಮವನ್ನುಂಟುಮಾಡುವದು. ತಾನೇ ಎಲ್ಲವೂ ಎಂದು ಭಾವಿಸಲ್ಪಟ್ಟಾಗ ಕಾಮಗಳೆಲ್ಲವೂ ನಮಗೆ ದಕ್ಕಿದಂತಾಗಿದ್ದು ಪೂರ್ಣವಾದ ತೃಪ್ತಿಯು ಮೂಡುವದು. ಎಲ್ಲಾ ದಿಕ್ಕುಗಳೂ ಇಂಥ ಜ್ಞಾನಿಗೆ ಸುಖಮಯವೇ ಆಗಿಬಿಡುವದು. ಈ ಎಲ್ಲಾ ಫಲಗಳೂ ನಮ್ಮ ಅಂತಃಕರಣದಲ್ಲಿಯೇ ಮೂಡುವದರಿಂದ ಅದು ವಿಶಾಲವಾಗಿ ಹಿಗ್ಗಿ ತನ್ನತನವನ್ನು ಹೋಗಲಾಡಿಸಿಕೊಂಡು ನದಿಯು ಸಮುದ್ರದಲ್ಲಿ ಒಂದಾದಂತೆ ಬ್ರಹ್ಮನಂದದ ಸಾಗರದಲ್ಲಿ ಲೀನವಾಗಿಬಿಡುವದು. ಆಗ್ಗೆ ಶತ್ರುಗಳಾಗಲೀ ಮಿತ್ರರಾಗಲೀ ಇರುವದಿಲ್ಲ. 'ವಾಸುದೇವನೇ ಎಲ್ಲವೂ' ಎಂಬ ಅನುಭವವು ನಮ್ಮದಾಗಿಬಿಡುವದರಿಂದ ಇದಕ್ಕಿಂತ ಹೆಚ್ಚಿನ ಲಾಭವಾವುದೂ ಇರುವದಿಲ್ಲ. ಎಲ್ಲ ಮತಧರ್ಮಗಳ ಸಾರವೂ ಈ ಅದ್ವೈತಾನಂದಸಾಗರಲ್ಲೇ ಅಡಕವಾಗಿ ಬಿಡುವವು. ಇಂಥ ಆತ್ಮಲಾಭವು ಅದ್ವೈತತತ್ತ್ವದಲ್ಲಿ ನೆಲೆಗೊಳ್ಳುವದರಿಂದೇ ಮಾನವನಿಗೆ ದೊರಕುವದೆಂದು ಬಲ್ಲವರು ಹೇಳುವರು.

    ಅದ್ವೈತಸ್ಥಿತಿಯನ್ನು ಅಂತಃಕರಣದಲ್ಲಿ ಅನುಭವಿಸುತ್ತಾ ಬಹಿಃಕರಣಗಳಿಂದ ಲೌಕಿಕವ್ಯವಹಾರವನ್ನೂ ಸಾಗಿಸುತ್ತಾ ಜನತೆಯನ್ನು ದುಃಖದಿಂದ ಅನಂದದೆಡೆಗೆ ಒಯ್ಯುವ ಜೀವನ್ಮುಕ್ತರು ಈಗ ಪ್ರಪಂಚಕ್ಕೆ ಅಗತ್ಯವಾಗಿರುತ್ತಾರೆ. ಮುಕ್ತರೆಂದರೆ ಜಡರೆಂದೊ, ಏಕಾಂತಜೀವಿಗಳೆಂದೊ, ಲೌಕಿಕದಿಂದ ನಿವೃತ್ತರಾದವರೆಂದೊ ತಿಳಿಯಬಾರದು. ಮತ್ತೇನೆಂದರೆ : ತನ್ನ ಸುತ್ತಲೂ ಹರಡಿರುವ ಪ್ರಪಂಚವನ್ನೆಲ್ಲ ಬ್ರಹ್ಮಮಯವಾಗಿ ಕಾಣುತ್ತಾ ಲೋಕಸಂಗ್ರಹಕ್ಕಾಗಿ ಕರ್ಮಗಳನ್ನು ಮಾಡುತ್ತಾ ಸ್ವಾರ್ಥವಿಲ್ಲದೆ ಬದುಕನ್ನು ಸವೆಯಿಸುವ ಸಾಧು-ಸಂತರೇ ನಿಜವಾದ ಮುಕ್ತರು. ಇಂಥವರ ಒಡನಾಟವು ಕೂಡ ನಮ್ಮ ದುರ್ಗುಣಗಳನ್ನು ಕಳೆದು ಸದ್ಗುಣವಂತರನ್ನಾಗಿ ಮಾಡಬಲ್ಲದು. ಈಗಲೂ ಇಂಥ ಮಹಾತ್ಮರು ಇದ್ದೇ ಇರುತ್ತಾರೆ. ನಾವು ಅಂತರಂಗಶುದ್ಧಿಯಿಂದ ನೋಡಿ ಗುರುತಿಸಿ ಇಂಥವರನ್ನೇ ಸೇವಿಸಿ ಕೃತಾರ್ಥರಾಗಬೇಕು. ಆಗಲೇ ನಾವು ನಿಜವಾದ ಮಾನವರಾಗುವೆವು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ