'ಓಂ ಗಂ ಗಣಪತಯೇ ನಮಃ'

ಓಂ|| ಗಣಾದಿಂ ಪೂರ್ವಮುಚ್ಚಾರ್ಯ ವರ್ಣಾದಿಂ ತದನಂತರಮ್ |
    ಅನುಸ್ವಾರಃ ಪರತರಃ | ಅರ್ಧೇಂದುಲಸಿತಮ್ | ತಾರೇಣ
    ರುದ್ಧಮ್ | ಏತತ್ತವ ಮನುಸ್ವರೂಪಮ್ | ಗಕಾರಃ ಪೂರ್ವ
    ರೂಪಮ್ | ಅಕಾರೋ ಮಧ್ಯಮರೂಪಮ್ | ಅನುಸ್ವಾರಶ್ಚಾಂತ್ಯ
    ರೂಪಮ್ | ಬಿಂದುರುತ್ತರರೂಪಮ್ | ನಾದಃ ಸಂಧಾನಮ್ |
    ಸಂಹಿತಾ ಸಂಧಿಃ | ಸೈಷಾ ಗಣೇಶವಿದ್ಯಾ | ಗಣಕಋಷಿಃ |
    ನಿಚೃದ್ ಗಾಯತ್ರೀ ಛಂದಃ | ಶ್ರೀ ಮಹಾಗಣಪತಿರ್ದೇವತಾ |
    ಓಂ ಗಂ ಗಣಪತಯೇ ನಮಃ ||
                    - ಗಣಪತ್ಯುಪನಿತ್ತು-7

    ಭಾವಾರ್ಥ : ಗ್ ಎಂಬ ಅಕ್ಷರವನ್ನು ಮೊದಲು, ಅನಂತರ ಆಕಾರ, ಆಮೇಲೆ ಅಧೇಂದುಲಸಿತವಾದ ಅನುಸ್ವಾರ- ಹೀಗೆ ಧ್ವನಿಯಿಂದ ನೆಲೆಗೊಂಡ 'ಗಂ' ಎಂಬುದು ನಿನ್ನ ಸ್ವರೂಪವು, ಇದರಲ್ಲಿ ಗ್ ಎಂಬಿದು ಪೂರ್ವರೂಪವು. ಅ ಎಂಬಿದು ಮಧ್ಯಮರೂಪವು. ಮ್ ಎಂಬೀ ಅನುಸ್ವಾರವು ಕೊನೆಯದು. ಬಿಂದುವು ಉತ್ತರರೂಪವು. ನಾದವೇ ಸಂಧಾನವು. ಗಕಾರಾದಿಗಳ ಕೊಡುವಿಕೆಯೇ ಸಂಧಿ. ಇದೇ ಗಣೇಶವಿದ್ಯೆಯು. ಗಣಕನೆಂಬವನೇ ಇದರ ಋಇಯು. ಛಂದಸ್ಸು ನಿಚೃದ್ಗಾಯತ್ರೀ- ಎಂಬಿದು. ಮಹಾಗಣಪತಿಯೇ ದೇವತೆಯು. 'ಓಂ ಗಂ ಗಣಪತಯೇ ನಮಃ' ಎಂಬಿದು ಮೂಲಮಂತ್ರವು.

    'ಓಂ ಗಂ ಗಣಪತಯೇ ನಮಃ' ಎಂಬಿದು ಮೂಲಮಂತ್ರವು. ಪ್ರತಿಯೊಂದು ದೇವತೆಗೂ ಒಂದು ಮೂಲಮಂತ್ರವಿರುತ್ತದೆ. 'ಮಂತ್ರಾಧೀನಂ ತು ದೈವತಮ್' (ದೇವತೆಯು ಮಂತ್ರಕ್ಕೆ ಅಧೀನವಾಗಿರುತ್ತದೆ) ಎಂದಂತೆ ಆಯಾ ಮಂತ್ರಗಳ ಪುರಶ್ಚರಣೆಯಿಂದ ದೇವತೆಯನ್ನು ಸಾಕ್ಷಾತ್ಕರಿಸಿಕೊಳ್ಳಬಹುದು. ಮಹಾ ಭಾರತದಲ್ಲಿರುವ ಕಥೆಯಂತೆ ಕುಂತಿಯು ಇನ್ನೂ ಕುಮಾರಿಯಾಗಿದ್ದಾಗಲೇ ದೂರ್ವಾಸರು ಉಪದೇಶಿಸಿದ್ದ ಸೂರ್ಯಮಂತ್ರವನ್ನು ಕುತೂಹಲಕ್ಕಾಗಿ ಜಪಸಿದಾಗ ಸೂರ್ಯನೇ ಒಂದು ವರವನ್ನು ಕೊಟ್ಟನಂತೆ. ಹೀಗೆ ಮಂತ್ರಪ್ರಭಾವವು ಅಸಾಧಾರಣವಾಗಿರುತ್ತದೆ ಆದ್ದರಿಂದ ಅದನ್ನು ಅನರ್ಹರಾದವರು ಜಪಿಸಬಾರದು. ಕೇಲವುವೇಳೆ ದುಷ್ಟರು ಮಂತ್ರಸಿದ್ಧಿಯನ್ನು ಹೊಂದಿ ಲೋಕಕ್ಕೆ ಕೇಡನ್ನು ಉಂಟು ಮಾಡುವ ಸಂಭವವೂ ಇರುತ್ತದೆ. ಅದಕ್ಕಾಗಿ ಋಷಿಗಳು ಕೆಲವು ಮಂತ್ರಗಳಿಗೆ 'ಶಾಪ' ಹಾಕಿರುತ್ತಾರೆ ಇದಕ್ಕೆ ಕಾರಣ-ದುಷ್ಟರಿಗೆ ಮಂತ್ರಸಿದ್ಧಿಯಾಗದೆ ಇರಲಿ ಎಂಬಿದೇ ಆಗಿದೆ. ಉಳಿದವರು ಮಂತ್ರಸಿದ್ಧಿಮಾಡಿಕೊಳ್ಳಬೇಕಾದರೆ ಮೊದಲು ಶಾಪವಿಮೋಚನೆಮಾಡಿಕೊಂಡು ಅನಂತರ ಮಂತ್ರವನ್ನು ಜಪಿಸಬೇಕು. ಇದನ್ನೆಲ್ಲ ಬಲ್ಲವರಿಂದಲೇ ತಿಳಿದುಕೊಳ್ಳಬೇಕು. ಪ್ರಕೃತ-ಮಹಾಗಣಪತಿ ಮಂತ್ರಕ್ಕೆ ಬೀಜಾಕ್ಷರವು 'ಗಂ' ಎಂಬಿದಾಗಿದೆ. ಸಾಮಾನ್ಯವಾಗಿ ಪ್ರತಿಯೊಂದು ಮಂತ್ರದ ಮೊದಲನೆಯ ಅಕ್ಷರವನ್ನು 'ಬೀಜಾಕ್ಷರ'ವೆನ್ನುವರು. ಈ ಗಂ ಎಂಬಿದರ ಹುಟ್ಟನ್ನು ಇಲ್ಲಿ ಹೀಗೆ ವಿವರಿಸಲಾಗಿದೆ. ಗಣಪತಿಯ ಹೆಸರಿನ ಗಣ - ಎಂಬ ಪದದ ಅದ್ಯಕ್ಷರವನ್ನು ಮೊದಲು ಉಚ್ಚರಿಸತಕ್ಕದ್ದು ಅದೇ 'ಗ್' ಎಂಬಿದು. ಅನಂತರ ವರ್ಣ ಮಾಲೆಯ ಅದ್ಯಕ್ಷರವನ್ನು ಎಂದರೆ 'ಅ'ಕಾರವನ್ನು ಉಚ್ಚರಿಸಬೇಕು. ಆಗ 'ಗ' ಎಂದಾಗುತ್ತದೆ. ಅನಂತರ 'ಅಂ' ಎಂಬ ಅನುಸ್ವಾರವನ್ನು ಸೇರಿಸಬೇಕು. ಆಗ 'ಗಂ' ಎಂದಾಗುವದು. ಇದನ್ನೇ ಉಪನಿಷತ್ತಿನಲ್ಲಿ ವಿವರಿಸುತ್ತಾ 'ಗಕಾರಃ' ಪೂರ್ವ ರೂಪಮ್ | ಅಕಾರೋ ಮಧ್ಯಮರೂಪಮ್ | ಅನುಸ್ವಾರಶ್ಚಾಂತ್ಯರೂಪಮ್ | ಎಂದು ತಿಳಿಸಿರುತ್ತದೆ.

    ಶ್ರೀ ಮಹಾಗಣಪತಿ ಮೂಲಮಂತ್ರದ ಬೀಜಾಕ್ಷರವಾದ 'ಗಂ' ಎಂಬಿದನ್ನು ವಿವರಿಸಿದ್ದಾಯಿತು. ಕಡೆಯಲ್ಲಿ ಉಚ್ಚರಿಸುವ ಅನುಸ್ವಾರವು ಈ ಬೀಜಾಕ್ಷರದ ತಿರುಳು (ಪರತರ) ಎಂದು ಮತ್ತೆ ಹೇಳಿದೆ. ಅನುಸ್ವಾರವನ್ನು ಅರ್ಧಚಂದ್ರಾಕಾರವಾದ ಗುರುತಿನ ಮೇಲಿರುವ ಬಿಂದುವಿನಿಂದ ನಿರ್ದೇಶಿಸುತ್ತಾರೆ. ಉಚ್ಚರಿಸುವಾಗ ತಾರ(ಎತ್ತರವಾದ) ಧ್ವನಿಯಿಂದ ಹೇಳಲಾಗುತ್ತದೆ. ಇಲ್ಲಿಗೆ ಶ್ರೀ ಮಹಾಗಣಪತಿಯ ಸ್ವರೂಪವನ್ನೇ ನಿರ್ದೇಶಿಸಿದಂತೆ ಆಗುತ್ತದೆ. ಮುಂದಿನ 'ಗಣಪತಯೇ ನಮಃ' ಎಂಬಿದು 'ಗಂ' ಎಂಬಿದರ ವಿವರಣೆಯೇ ಆಗಿದೆ. ಹೀಗೆ ಸಿದ್ಧವಾದ ಮಂತ್ರವನ್ನು 'ಗಣೇಶವಿದ್ಯೆ' ಎಂದು ಹೆಸರಿಸಲಾಗಿದೆ. ಈ ಮಂತ್ರಕ್ಕೆ 'ಗಣಕ' ಎಂಬುವನು ಋಷಿಯು. ಋಷಿಯೆಂದರೆ ಮಂತ್ರವನ್ನು ಮೊಟ್ಟಮೊದಲಬಾರಿಗೆ ಕಂಡುಕೊಂಡವನು ಪ್ರತಿಯೊಂದು ಮಂತ್ರವನ್ನು ಜಪಮಾಡುವಾಗಲೂ ಆಯಾ ಮಂತ್ರದ್ರಷ್ಟನಾದ ಋಷಿ ಆಯಾ ಮಂತ್ರಾಭಿಮಾನಿದೇವತೆ, ಅನಂತರ ಛಂದಸ್ಸು ಇವುಗಳನ್ನು ಉಚ್ಚರಿಸಿಯೇ ಮಂತ್ರಜಪವನ್ನು ಮಾಡಬೇಕು. ಈವರೆಗೆ ಈ ಮಂತ್ರಕ್ಕೆ ಋಷಿ ಹಾಗೂ ದೇವತೆಯನ್ನು ಹೇಳಿದ್ದಾಯಿತು. ಇನ್ನು ಛಂದಸ್ಸನ್ನು ಹೇಳಲಾಗುತ್ತದೆ. 'ನಿಚೃದ್ ಗಾಯತ್ರೀ' ಎಂಬಿದೇ ಛಂದಸ್ಸು. ಗಾಯತ್ರೀಛಂದಸ್ಸಿನ ಮಂತ್ರಗಳಲ್ಲಿ ಒಟ್ಟು ನಾಲ್ಕು ಪಾದಗಳಿಂದ 24 ಅಕ್ಷರಗಳಿರುವವು ಆರು ಅಕ್ಷರಗಳಿಗೆ ಒಂದು ಪಾದವೆಂತ ಹೆಸರು. ಪಾಠಮಾಡುವಾಗ ಎಂಟಕ್ಷರಗಳ ಮೂರು ಪಾದಗಳಾಗಿಯೂ ಉಚ್ಚರಿಸಬಹುದು. ಆಗಲೂ ಒಟ್ಟು 24 ಅಕ್ಷರಗಳೇ ಆಗುತ್ತವೆ. ಗಾಯತ್ರೀ ಛಂದಸ್ಸನ್ನು ತ್ರಿಪದಾ ಎಂದೂ ವೇದದಲ್ಲಿ ಕರೆಯುತ್ತಾರೆ. ಇಲ್ಲಿ 'ಗಂ' ಎಂಬ ಬೀಜಾಕ್ಷರದ ಅನಂತರ ಉಚ್ಚರಿಸುವ 'ಏಕದಂತಾಯ' ಎಂಬ ಮಂತ್ರವೇ ಗಣೇಶ ಗಾಯತ್ರೀ ಎನಿಸಿಕೊಂಡಿದೆ. ಇದರ ಅರ್ಥವನ್ನು ಮುಂದೆ ತಿಳಿಸಲಾಗುವದು.

    ಈಗ 'ನಿಚೃದ್ಗಾಯತ್ರೀ ಛಂದಃ' ಎಂಬಿದರ ಅರ್ಥವನ್ನು ತಿಳಿಯೋಣ ಗಾಯತ್ರೀಛಂದಸ್ಸು ಎಂದರೆ 24 ಅಕ್ಷರಗಳುಳ್ಳದ್ದು ಎಂಬಿದು ಲೋಕವೇದ ಪ್ರಸಿದ್ಧವು ಆದರೆ ಕಡೆಯಲ್ಲಿ ಬರುವ 'ಪ್ರಚೋದಯಾತ್' ಎಂಬ ಪದದಲ್ಲಿ ಕಡೆಯ ಅಕ್ಷರವಾದ 'ತ್' ಎಂಬಿದು 25ನೆಯದಾಗುವದು. ಎಲ್ಲಾ ದೇವತಾ ಗಾಯತ್ರೀಮಂತ್ರಗಳಲ್ಲಿಯೂ 'ಪ್ರಚೋದಯಾತ್' ಎಂಬಿದು ಕಡೆಯ ಪದವಾಗಿ ಬಂದೇಬರುತ್ತದೆ. ಆದ್ದರಿಂದ ಇಂಥ ಮಂತ್ರಗಳನ್ನು ಮಾತ್ರ ವಿಶೇಷವಾಗಿ ನಿಚೃದ್ ಗಾಯತ್ರೀಛಂದಸ್ಸು ಎಂದು ಹೇಳುತ್ತಾರೆ- ಎಂಬುದಾಗಿ ಹಿರಿಯರು ಹೇಳಿದ್ದನ್ನು ಕೇಳಿರುತ್ತೇನೆ. ಹೀಗೆ 'ಗಂ' ಎಂಬಿದರ ವಿವರಣೆಯೇ ಮುಂದಿನ ಗಾಯತ್ರೀ ಮಂತ್ರದಲ್ಲಿದೆಯಾಗಿ ಇದು ಬೀಜಾಕ್ಷರವೆಂದು ಹೇಳಲ್ಪಟ್ಟಿದೆ.

    'ಗ' ಎಂಬ ಬೀಜಾಕ್ಷರದ ಮಹಿಮೆಯನ್ನು ಸಂಗೀತಶಾಸ್ತ್ರದವರೂ ಕಂಡುಕೊಂಡಿದ್ದಾರೆ. ಈಗ ಸಾಮಾನ್ಯವಾಗಿ ಸಂಗೀತಕಚೇರಿಗಳನ್ನು ನಡೆಯಿಸುವ ವಿದ್ವಾಂಸರು ಪ್ರಾರಂಭಕ್ಕೆ ಶ್ರೀಮುತ್ತುಸ್ವಾಮಿದೀಕ್ಷಿತರ 'ವಾತಾಪಿಗಣಪತಿಂ ಭಜೇ'
ಎಂಬ ಕೀರ್ತನೆಯನ್ನು ಹಾಡುತ್ತಾರೆ. ಇದು 'ಹಂಸಧ್ವನಿ'ರಾಗದಲ್ಲಿದೆ. ಆ ರಾಗದ ಜೀವಸ್ವರವು 'ಗ' ಎಂಬ ಗಾಂಧಾರವು. ಈ ಗಾಂಧಾರವನ್ನು ಒತ್ತಿ ಹಾಡಿದಂತೆಲ್ಲ ಕೀರ್ತನೆಯು ರುಚಿಕರವಾಗಲಿದೆ. ಆದ್ದರಿಂದ ಮಂತ್ರಶಾಸ್ತ್ರಜ್ಞರಾದ ಕೀರ್ತನ ಕರ್ತೃಗಳು ವೇದೋಕ್ತವಾದ ಗಣಪತಿಗಾಯತ್ರೀಮಂತ್ರ ಬೀಜಾಕ್ಷರವನ್ನೇ ರಾಗದಲ್ಲಿ ಅಳವಡಿಸಿರುವದು ವೇದ ಹಾಗೂ ಸಂಗೀತವಿದ್ಯೆಗಳಿಗೆ ಏಕವಾಕ್ಯತೆಯನ್ನು ತಿಳಿಸಿಕೊಡುತ್ತದೆ. ಹೀಗೆ ಇನ್ನೂ ಕೆಲವು ಮೂಲಗಳಿಂದ ವಿಚಾರಮಾಡಿ ಬೀಜಾಕ್ಷರ ಮಹತ್ತ್ವವನ್ನು ತಿಳಿಯಬಹುದು. ಗಣಪತಿಯ ಅರ್ಚನೆಯ ಕಾಲಕ್ಕೆ ಉಪಯೋಗಿಸುವ 'ಗಕಾರ ಗಣಪತಿಸಹಸ್ರನಾಮಾವಳಿಯನ್ನೂ ಇಲ್ಲಿ ಅನುಸಂಧಾನ ಮಾಡಬಹುದು. ಆ ಸಹಸ್ರನಾಮದಲ್ಲಿ ಅಡಕವಾಗಿರುವ ಒಂದು ಸಾವಿರ ನಾಮಗಳೂ ಗಕಾರದಿಂದಲೇ ಆರಂಭವಾಗಿವೆ. ಅವುಗಳ ಅರ್ಥಾನುಸಂಧಾನಮಾಡಿದಲ್ಲಿ ಗಕಾರದ ಮಹಿಮೆಯು ಮನದಟ್ಟಾಗುವದು.

    ಈಗ ಗಣೇಶಗಾಯತ್ರೀಮಂತ್ರವನ್ನು ವಿಚಾರಮಾಡೋಣ. ಇದು ಮಹಾ ನಾರಾಯಣೋಪನಿಷತ್ತಿನಲ್ಲಿಯೂ ಇದೆ.
ಓಂ || ಏಕದಂತಾಯ ವಿದ್ಮಹೇ ವಕ್ರತಂಡಾಯ ಧೀಮಹಿ |
          ತನ್ನೋ ದಂತೀ ಪ್ರಚೋದಯಾತ್ ||

    ಗಾಯತ್ರೀಛಂದಸ್ಸಿನ ಈ ಬಗೆಯ ಮಂತ್ರಗಳಲ್ಲಿ 'ವಿದ್ಮಹೇ', 'ಧೀಮಹಿ', 'ಪ್ರಚೋದಯಾತ್' ಈ ಶಬ್ದಗಳು ನಿಯತವಾಗಿರುವವು. ವಿದ್ಮಹೇ ಎಂದರೆ ನಾವು ಬಲ್ಲೆವು ಎಂದರ್ಥ. ಹಾಗೆಯೇ ಧೀಮಹಿ ಎಂದರೆ ಧ್ಯಾನಿಸುವೆವು ಎಂದೂ ಪ್ರಚೋದಯಾತ್ ಎಂದರೆ ಪ್ರೇರಿಸಲಿ ಎಂದೂ ಅಭಿಪ್ರಾಯ. ಮಹಾಗಣಪತಿಯೆನಿಸಿದ ಭಗವಂತನು ಏಕದಂತನೆಂದೂ ವಕ್ರತುಂಡನೆಂದೂ ದಂತಿಯೆಂದೂ ನಾವು ಬಲ್ಲೆವು ಎಂದು ಋಷಿಯು ತಿಳಿಸುತ್ತಾನೆ. ಪೌರಾಣಿಕಕಥೆಯಂತೆ ಒಮ್ಮೆ ಗಣಪತಿಯು ಚಂದ್ರನು ಹಾಸ್ಯಮಾಡಿದ್ದರಿಂದ ಕುಪತನಾಗಿ ತನ್ನ ಒಂದು ಹಲ್ಲನ್ನೇ ಮುರಿದು ಚಂದ್ರನಮೇಲೆ ಎಸೆದನಂತೆ ಅಂದಿನಿಂದ ಅವನಿಗೆ ಏಕದಂತ, ಭಿನ್ನ ದಂತ ಎಂದು ಹೆಸರಾಯಿತು. ಹಾಗೆಯೇ ವಕ್ರತುಂಡ, ದಂತಿ ಎಂಬ ಹೆಸರುಗಳೂ ಹಲ್ಲುಗಳನ್ನೇ ಕುರಿತದ್ದಾಗಿವೆ. ಆನೆಯ ದಂತಗಳಲ್ಲಿ ಎರಡು ಹೊರಕ್ಕೆ ಚಾಚಿ ಕೊಂಡಿದ್ದು ಸೊಟ್ಟವಾಗಿರುತ್ತವೆ. ಗಣಪತಿಗೆ ಆನೆಯ ಮುಖವಿದ್ದು ಹೊರಗಿನ ಹಲ್ಲುಗಳು ವಕ್ರವಾಗಿರುವದರಿಂದ ವಕ್ರತುಂಡನೆನ್ನುವರು. ಹಾಗೆಯೇ ದಂತೀ ಎಂಬಿದು ದಂತದ ಹೆಚ್ಚುಗಾರಿಕೆಯಿಂದ ಬಂದ ಹೆಸರಾಗಿದೆ. ಆನೆಯ ದಂತಗಳಿಗೆ ಬಹಳ ಬೆಲೆಯುಂಟೆಂಬುದು ಪ್ರಸಿದ್ಧವಾಗಿದೆ ಹೀಗೆ ಗಣಗತಿಯು ಏಕದಂತನೂ ವಕ್ರತುಂಡನೂ ದಂತಿಯೂ ಆಗಿದ್ದು ಉಪಾಸಕರಿಗೆ ಧ್ಯೇಯನಾಗಿರುತ್ತಾನೆ. ಭಕ್ತರ ಕಷ್ಟಗಳೆಂಬ ಬೆಟ್ಟಗಳನ್ನು ಆಗಿದ್ದು ಉಪಾಸಕರಿಗೆ ಧ್ಯೇಯನಾಗಿರುತ್ತಾನೆ. ಭಕ್ತರ ಕಷ್ಟಗಳೆಂಬ ಬೆಟ್ಟಗಳನ್ನು ತನ್ನ ದಂತದಿಂದ ಭೇದಿಸಿ ಕಾರ್ಯಸಿದ್ಧಿಯನ್ನುಂಟು ಮಾಡುತ್ತಾನೆ ಇಂಥ ಗಣಪತಿಯು ನಮ್ಮ ಬುದ್ಧಿಯನ್ನು ಪ್ರೇರಿಸಲಿ ಎಂದು ಅಭಿಪ್ರಾಯ.

    ಈಗ ಗಣಪತಿಯನ್ನು ಧ್ಯಾನಿಸುವದಕ್ಕಾಗಿ ಅವನ ಆಕಾರ-ರೂಫ ಗುಣ ವಿಶೇಷಗಳನ್ನು ಹೀಗೆ ವರ್ಣಿಸಲಾಗುವದು :

ಏಕದಂತಂ ಚತುರ್ಹಸ್ತಂ ಪಾಶಮಂಕುಶಧಾರಿಣಮ್ |
ಅಭಯಂ ವರದಂ ಹಸ್ತೈರ್ಬಿಭ್ರಾಣಂ ಮೂಷಕಧ್ವಜಮ್ ||
ರಕ್ತಂ ಲಂಬೋದರಂ ಶೂರ್ಪಕರ್ಣಕಂ ರಕ್ತವಾಸಸಮ್ |
ರಕ್ತಗಂಧಾನುಲಿಪ್ತಾಂಗಂ ರಕ್ತಪುಷ್ಟೈಃ ಸುಪೂಜಿತಮ್ ||
ಭಕ್ತಾನುಕಂಪಿನಂ ದೇವಂ ಜಗತ್ಕಾರಣಮಚ್ಯುತಮ್ |
ಅವಿರ್ಭೂತಂ ಚ ಸೃಷ್ಟ್ಯಾದೌ ಪ್ರಕೃತೇಃ ಪುರುಷಾತ್ ಪರಮ್ |
ಏವಂ ಧ್ಯಾಯತಿ ಯೋ ನಿತ್ಯಂ ಸ ಯೋಗೀ ಯೋಗಿನಾಂ ವರಃ |

    ಈ ಧ್ಯಾನಶ್ಲೋಕಗಳು ಗಣಪತಿಯ ಸಗುಣಸಾಕಾರರೂಪವನ್ನು ಭಕ್ತರಿಗೆ ಹೃದಯಂಗಮವಾಗುವ ರೀತಿಯಲ್ಲಿ ತಿಳಿಸುತ್ತವೆ. ಶ್ರೀ ಗಣಪತಿಯ ನಾಲ್ಕುಕೈಗಳುಳ್ಳವನಾಗಿದ್ದಾನೆ. ಇದು ಅವನೊಬ್ಬನೇ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಕೊಡಬಲ್ಲವನಾಗಿದ್ದಾನೆಂಬುದನ್ನು ತಿಳಿಸುತ್ತದೆ. ಇನ್ನು ಈತನು ಕೈಗಳಲ್ಲಿ ಧರಿಸಿರುವ ಪಾಶ, ಅಂಕುಶಗಳೆಂಬ ಆಯುಧಗಳು ಮನಸ್ಸೆಂಬ ಮದ್ದಾನೆಯನ್ನು ತನ್ನ ವಶದಲ್ಲಿಟ್ಟುಕೊಂಡಿರುವವನೆಂಬುದನ್ನು ತಿಳಿಸುತ್ತದೆ. ಉಳಿದೆರಡು ಕೈಗಳು ಭಕ್ತರಿಗೆ ಅಭಯವನ್ನೂ ವರಗಳನ್ನೂ ದಯಪಾಲಿಸುತ್ತಿವೆ. ಮೂಷಿಕನೆಂಬ ರಾಕ್ಷಸನನ್ನು ಸಂಹರಿಸಿ ಅವನನ್ನೇ ತನ್ನ ಧ್ವಜವಾಗಿ ಮಾಡಿಕೊಂಡಿದ್ದಾನೆ. ಶರೀರದಿಂದ ಕೆಂಪುಬಣ್ಣದವನಾಗಿದ್ದು ದೊಡ್ಡಹೊಟ್ಟೆ ಅಗಲವಾದ ಕಿವಿಗಳುಳ್ಳವನಾಗಿದ್ದಾನೆ. ಬ್ರಹ್ಮಾಂಡವನ್ನೆಲ್ಲ ಹೊಟ್ಟಯಲ್ಲಡಗಿಸಿಕೊಂಡವನಾಗಿ ಕಿವಿಗಳಿಂದ ಕೇಳುವಾಗ ಸಾರಾಸಾರವಿಪೇಚನೆಮಾಡಿ ನಿಸ್ಸಾರವಾದವುಗಳನ್ನು ಕೇರಿ ಬಿಸುಡುತ್ತಾನೆ. ಕೆಂಪಾದ ವಸ್ತ್ರಗಳನ್ನು ಉಟ್ಟುತೊಟ್ಟಿದ್ದಾನೆ. ಕೆಂಪು (ಚಂದನ) ಗಂಧವನ್ನು ಧರಿಸಿದ್ದಾನೆ. ಕೆಂಪುಹೂಗಳಿಂದ ಅಲಂಕೃತನಾಗಿದ್ದಾನೆ. ಭಕ್ತರ ವಿಷಯದಲ್ಲಿ ಬಹಳ ಕರುಣೆಯುಳ್ಳವನಾಗಿರುತ್ತಾನೆ. ಜಗತ್ತಿಗೆಲ್ಲ ಕಾರಣನಾಗಿದ್ದು ತಾನು ಮಾತ್ರ ಜಗತ್ತು ಕಣ್ಮರೆಯಾದರೂ ನಿತ್ಯವಾಗಿ ಚ್ಯುತಿಯಿಲ್ಲದೆ ಎಂದೆಂದೂ ಇದ್ದುಕೊಂಡಿರುತ್ತಾನೆ. ಆದರೆ ಸೃಷ್ಟಿಯ ಪ್ರಾರಂಭದಲ್ಲಿ ಎಲ್ಲರಿಗಿಂತ ಮೊಟ್ಟ ಮೊದಲು ತಾನೇ ತೋರಿಕೊಳ್ಳುತ್ತಾನೆ. ಆದ್ದರಿಂದಲೇ ಮೊಟ್ಟಮೊದಲಿಗೇ ಪೂಜ್ಯನಾಗಿದ್ದಾನೆ. ಯಾವ ದೇವತಾಕಾರ್ಯವನ್ನು ಮಾಡಬೇಕಾದರೂ ಮೊದಲು ಗಣಪತಿಯನ್ನು ಪೂಜಿಸಲೇಬೇಕು. ಹೀಗೆ ಪ್ರಕೃತಿ-ಪುರುಷತತ್ತ್ವಗಳಾಗಿ ಸ್ಥಿತಿ ಕಾಲಕ್ಕೆ ಕಂಡರೂ ತಾನೂ ಅವೆರಡಕ್ಕಿಂತ ವಿಲಕ್ಷಣನೂ ಆಗಿದ್ದಾನೆ ಇದು ಗಣಪತಿಯ ಧ್ಯೇಯವಾದ ಸ್ವರೂಪವು.

Comments

Popular posts from this blog

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ