Kathopanishad Chapter-02 Canto-03 Shloka-01

ಅಧ್ಯಾಯ-೨
ವಲ್ಲೀ-೩
ಊರ್ಧ್ವಮೂಲೋಽವಾಕ್ಶಾಖ ಏಷೋಽಶ್ವತ್ಥಃ ಸನಾತನಃ ।
ತದೇವ ಶುಕ್ರಂ ತದ್ಬ್ರಹ್ಮ ತದೇವಾಮೃತಮುಚ್ಯತೇ ।
ತಸ್ಮಿಂಲ್ಲೋಕಾಃ ಶ್ರಿತಾಃ ಸರ್ವೇ ತದು ನಾತ್ಯೇತಿ ಕಶ್ಚನ । ಏತದ್ವೈ ತತ್ ॥೧॥
ನಾವು ಭಗವಂತನನ್ನು ತಿಳಿದುಕೊಳ್ಳಬೇಕಾದರೆ ಮೊದಲು ಅವನು ಸೃಷ್ಟಿ ಮಾಡಿದ ಈ ವಿಶ್ವವನ್ನು ತಿಳಿದುಕೊಳ್ಳಬೇಕು. ಒಮ್ಮೆ ಈ ಸೃಷ್ಟಿ ತಿಳಿದರೆ ಆ ಸೃಷ್ಟಿಯ ಹಿಂದಿರುವ ಸೃಷ್ಟಿಕರ್ತ ತನ್ನಿಂದ ತಾನೇ ತಿಳಿಯುತ್ತಾನೆ. ಇಲ್ಲಿ ಯಮ ಭಗವಂತ ನಿರ್ಮಿಸಿದ ಈ ಸೃಷ್ಟಿಯನ್ನು ಒಂದು ಮರದ ರೂಪದಲ್ಲಿ ವಿವರಿಸಿದ್ದಾನೆ. ಇಲ್ಲಿ ಬಂದಿರುವ ವಿವರಣೆಯನ್ನೇ ಕೃಷ್ಣ ಗೀತೆಯ ಹದಿನೈದನೇ ಅಧ್ಯಾಯದಲ್ಲಿ ವಿವರಿಸಿ ಹೇಳಿರುವುದನ್ನು ಕಾಣುತ್ತೇವೆ. ಇಲ್ಲಿ ಯಮ ಹೇಳುತ್ತಾನೆ: ಈ ಪ್ರಪಂಚ ಒಂದು ಅಶ್ವತ್ಥ ವೃಕ್ಷದಂತೆ ಎಂದು. ‘ಅಶ್ವತ್ಥ’ ಎನ್ನುವ ಪದ ಈ ಪ್ರಪಂಚದ ವಿಶಿಷ್ಠವಾದ ಸ್ವಭಾವವನ್ನು ಅನೇಕ ರೀತಿಯಲ್ಲಿ ಎತ್ತಿ ಹೇಳುತ್ತದೆ.
(೧) ‘ಅಶ್ವತ್ಥ’ ಎನ್ನುವುದರ ಸ್ಥೂಲ ಅರ್ಥ ಅರಳಿ ಮರ. ಇದನ್ನು ಪಿಪ್ಪಲ ಎಂದೂ ಕರೆಯುತ್ತಾರೆ. ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದೆ ಎಲ್ಲಾ ಮರಗಳೂ ಸ್ಥಬ್ಧವಾಗಿರುವಾಗ, ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. ಆದರೆ ಅಶ್ವತ್ಥಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ‘ಚಲದಲಃ’ ಎಂದೂ ಕರೆಯುತ್ತಾರೆ. ಅಂದರೆ ಯಾವಾಗಲೂ ಚಲನಶೀಲವಾದ ಎಲೆಗಳುಳ್ಳ ಮರ ಎಂದರ್ಥ. ಇದೇ ಪ್ರಪಂಚಕ್ಕೂ ಮತ್ತು ಅಶ್ವತ್ಥಮರಕ್ಕೂ ಇರುವ ಸಾಮ್ಯ. ಪ್ರಪಂಚ ಕೂಡಾ ಯಾವಾಗಲೂ ಚಲನಶೀಲ. ಅದು ಸದಾ ಚಲಿಸುತ್ತಾ ಬದಲಾಗುತ್ತಾ ಇರುತ್ತದೆ.
(೨) ಅಶ್ವ+ತ್ಥ: ಇಲ್ಲಿ ಅಶ್ವ ಎಂದರೆ ಕುದುರೆ. ಪ್ರಪಂಚ ಅಶ್ವದ ಹಾಗೆ ಇರುವಂತಹದ್ದು. ಕುದುರೆಯನ್ನು ಗಮನಿಸಿದರೆ ನಮಗೆ ಈ ಅರ್ಥ ತಿಳಿಯುತ್ತದೆ. ಇತರ ಪ್ರಾಣಿಗಳಿಗೂ ಕುದುರೆಗೂ ಒಂದು ವ್ಯತ್ಯಾಸವಿದೆ. ಎಲ್ಲಾ ಪ್ರಾಣಿಗಳೂ ವಿಶ್ರಾಮದ ಕಾಲದಲ್ಲಿ ನಿಶ್ಚಲವಾಗಿ ನಿಲ್ಲಬಲ್ಲವು. ಆದರೆ ಕುದುರೆ ಒಂದು ಕ್ಷಣವೂ ನಿಶ್ಚಲವಾಗಿ ನಿಲ್ಲದು. ಈ ಜಗತ್ತೂ ಕೂಡಾ ಅಶ್ವದಂತೆ. ಇದು ಎಂದೂ ಸ್ಥಿರವಾಗಿ ನಿಲ್ಲುವುದಿಲ್ಲ.
(೩) ಅ+ಶ್ವಃ+ತ್ಥ –ಇಲ್ಲಿ ‘ಶ್ವಃ’ ಅಂದರೆ ನಾಳೆ, ‘ತ್ಥ’ ಅಂದರೆ ಇರುವಂಥದ್ದು. ಅಶ್ವತ್ಥ ಅಂದರೆ “ನ ಶ್ವಃ ತಿಷ್ಠತಿ”. ಇಂದು ಇದೆ ಆದರೆ ನಾಳೆ ಇರುತ್ತದೆ ಎನ್ನುವ ಖಾತರಿ ಇಲ್ಲ. ಅಂದರೆ ಈ ಪ್ರಪಂಚ ಕ್ಷಣಿಕ. ಬದಲಾವಣೆಯೇ ಜಗದ ನಿಯಮ. ಸೃಷ್ಟಿಯಾದ ಈ ಪ್ರಪಂಚ ಒಂದು ದಿನ ನಾಶವಾಗುತ್ತದೆ.
(೪) ಅಶ್ವತ್ಥದ ಶಾಸ್ತ್ರೀಯ ನಿರ್ವಚನ ಅರ್ಥವನ್ನು ನೋಡಿದರೆ(etymologicaly)- ಅಶು+ವಾ+ತ+ಥ. ಇಲ್ಲಿ ಅಶು+ವಾ ಎಂದರೆ ಎಲ್ಲಕ್ಕಿಂತ ವೇಗವಾಗಿ ಹೋಗುವಂತಹದ್ದು-ಅದು ಭಗವಂತ. ಅದಕ್ಕಾಗಿ ಭಗವಂತನನ್ನು ‘ಅಶ್ವ’ ಎಂದೂ ಕರೆಯುತ್ತಾರೆ. ಕುದುರೆ ಮುಖದ ಹಯಗ್ರೀವ ರೂಪದಲ್ಲಿ ಭಗವಂತ ಸಮಸ್ತ ವೇದ ವಿದ್ಯೆಯನ್ನು ಪ್ರಪಂಚಕ್ಕೆ ಕೊಟ್ಟ. ಎಲ್ಲವನ್ನೂ ಎಲ್ಲಕ್ಕಿಂತ ಮೊದಲು ತಿಳಿದ ಭಗವಂತ ಈ ಜಗತ್ತಿನಲ್ಲಿ, ಇದರ ಒಳಗೂ ಹೊರಗೂ ನಿಯಮನ ಮಾಡುವುದಕ್ಕೋಸ್ಕರ ‘ಅಶ್ವ’ ನಾಮಕನಾಗಿ ಕೂತಿದ್ದಾನೆ(ತ್ಥ). ಈತ ಇಡೀ ಪ್ರಪಂಚದಲ್ಲಿ ‘ತತ’(ತುಂಬಿದ್ದಾನೆ) ಮತ್ತು ಕೊನೆಗೆ ಇಡೀ ಜಗತ್ತು ಆತನಿಗೆ ಥಂ.(ಥಂ =ಆಹಾರ -ಇಡೀ ಜಗತ್ತನ್ನು ಕಬಳಿಸುವ ಶಕ್ತಿ, ಇದು ಪ್ರಳಯದ ವಿವರಣೆ).
ಇಂತಹ ಈ ಪ್ರಪಂಚ ಸನಾತನವಾದುದು ಎನ್ನುತ್ತಾನೆ ಯಮ. ಏಕೆಂದರೆ ಭಗವಂತನ ಸೃಷ್ಟಿ ಮತ್ತು ಸಂಹಾರ ಕ್ರಿಯೆ ನಿರಂತರ. ಈ ರೀತಿ ಭಗವಂತನಿಂದ ಸೃಷ್ಟಿಯಾಗುವ ಈ ಪ್ರಪಂಚ ಅಶ್ವತ್ಥ ಮರದಂತಿದೆ. ಹೇಗೆ ಬೀಜ, ಅದರೊಳಗಿನ ಚೈತನ್ಯ, ಭೂಮಿ, ಬೇರುಗಳು ಮರಕ್ಕೆ ಮೂಲವೋ ಹಾಗೇ ಈ ಪ್ರಪಂಚವೆಂಬ ಮರದ ಮೂಲ ಅದರ ಟೊಂಗೆ-ಟಿಸಿಲುಗಳ್ಯಾವುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಇಲ್ಲಿ “ಈ ಮರದ ಮೂಲ ಮೇಲಿದೆ(ಊರ್ಧ್ವಮೂಲ)” ಎಂದಿದ್ದಾರೆ. ಮೇಲೆ ಅಂದರೆ ಎಲ್ಲಕ್ಕಿಂತ ಹಿರಿದಾದ ಭಗವಂತ. ಈ ಪ್ರಪಂಚ ಎನ್ನುವ ಮರಕ್ಕೆ ಮೂಲ ಆ ಭಗವಂತ. ಪ್ರಪಂಚದ ಮೂಲದಲ್ಲಿ ಎಲ್ಲಕ್ಕಿಂತ ಎತ್ತರದಲ್ಲಿ ತಂದೆ-ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಜಡಪ್ರಕೃತಿಯಿಂದ ಈ ಮರ ವಿಕಸನವಾಗುತ್ತದೆ. ಭಗವಂತನ ನಂತರ ಚತುರ್ಮುಖ ಬ್ರಹ್ಮ ಪ್ರಾಣದೇವರು. ಇವರೇ ಈ ಮರದ ಪ್ರದಾನ ಕಾಂಡ. ನಂತರ ಗರುಡ-ಶೇಷ-ರುದ್ರರು, ಇಂದ್ರಾದಿ ದೇವತೆಗಳು ಈ ಮರದ ಟೊಂಗೆಗಳು. ಆನಂತರ ಅವಾಂತರ ದೇವತೆಗಳು, ಗಂಧರ್ವರು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಹೀಗೆ ಒಂದರ ನಂತರ ಒಂದು ಶಾಖೆಗಳು. ಇವೆಲ್ಲವೂ ಸೇರಿ ಒಂದು ಮರವಾಯಿತು. ಇಲ್ಲಿ ‘ಅವಾಕ್ಶಾಖ’ ಅಂದರೆ ಮೇಲಿನಿಂದ ಕೆಳಕ್ಕೆ ಬೆಳೆಯುವುದು. ಇದು ದೇವತಾ ತಾರತಮ್ಯವನ್ನು ಸೂಚಿಸುತ್ತದೆ. ಆದ್ದರಿಂದ ಭಗವಂತನನ್ನು ಉಪಾಸನೆ ಮಾಡುವಾಗ ಆತ ಈ ಇಡೀ ವಿಶ್ವಕ್ಕೆ ಆಧಾರಸ್ತಂಭ ಎನ್ನುವ ಸತ್ಯವನ್ನು ತಿಳಿದು ಉಪಾಸನೆ ಮಾಡಬೇಕು.
ಎಲ್ಲರಿಗೂ ಅಧಾರನಾಗಿರುವ ಭಗವಂತ ಶೋಕರಹಿತ. ಆತ ನಿರ್ಮಲ ಮತ್ತು ನಿಷ್ಕಳಂಕ. ಎಲ್ಲಕ್ಕಿಂತ ದೊಡ್ಡದಾಗಿರುವ ಮತ್ತು ತನ್ನನ್ನು ಆಶ್ರಯಿಸಿದವರನ್ನು ಎತ್ತರಕ್ಕೆ ಕೊಂಡೊಯ್ಯುವ ಭಗವಂತನನ್ನು ಬ್ರಹ್ಮಃ ಎಂದೂ ಕರೆಯುತ್ತಾರೆ. ಇಂತಹ ಭಗವಂತನನ್ನು ಯಾರೂ ತಿರಸ್ಕರಿಸಿ ಬದುಕಲು ಸಾಧ್ಯವಿಲ್ಲ. ಯಾರು ಈ ಸಂಸಾರ ವೃಕ್ಷದಲ್ಲಿದ್ದು ನಮ್ಮನ್ನು ಕಾಪಾಡುತ್ತಾನೋ ಅವನೇ ಸಂಸಾರದಿಂದ ಪಾರಾಗಿ ಮೋಕ್ಷಕ್ಕೆ ಹೋದಾಗಲೂ ನಮ್ಮನ್ನು ರಕ್ಷಣೆ ಮಾಡುವ ಸ್ವಾಮಿ. "ನೀನು ತಿಳಿಯಬಯಸಿದ ಭಗವದ್ ತತ್ವ ಇದೇ" ಎನ್ನುತ್ತಾನೆ ಯಮ.
ಈ ಶ್ಲೋಕದಲ್ಲಿ ನಾವು ಗಮನಿಸಬೇಕಾದ ಒಂದು ಅಂಶವೆಂದರೆ ಇಲ್ಲಿ ಮರದ ಎಲೆಗಳನ್ನು ವಿವರಿಸಿಲ್ಲ. ಆದರೆ ಈ ವಿವರಣೆಯನ್ನು ಕೃಷ್ಣ ಗೀತೆಯಲ್ಲಿ ಬಿಡಿಸಿತ್ತಿದ್ದಾನೆ. ಅಲ್ಲಿ ವಿವರಿಸಿರುವಂತೆ ವೇದಗಳೇ ಮರದ ಎಲೆಗಳು. ಪ್ರಳಯ ಕಾಲದಲ್ಲಿ ಭಗವಂತ ಈ ವೇದವೆಂಬ ಎಲೆಯ ಮೇಲೆ ಮಲಗಿರುತ್ತಾನೆ. ಆ ಕಾಲದಲ್ಲಿ ಸಂಪೂರ್ಣ ಪ್ರಪಂಚ ಸೂಕ್ಷರೂಪದ ಪ್ರಳಯ ಜಲ ರೂಪದಲ್ಲಿರುತ್ತದೆ. ಸೃಷ್ಟಿಯಾದ ಪ್ರಪಂಚ ಪ್ರಳಯ ಕಾಲದಲ್ಲಿ ಪ್ರಳಯ ಜಲವಾಗಿ ರೂಪಾಂತರ ಹೊಂದುತ್ತದೆ. ಆದರೆ ವೇದಗಳು ಮಾತ್ರ ಎಂದೂ ನಾಶವಾಗುವುದಿಲ್ಲ. ಹಾಗಾಗಿ ಪ್ರಳಯ ಜಲದಲ್ಲಿ ಎಲೆಯ ಮೇಲೆ ಮಲಗಿರುವ ಭಗವಂತನ ಕಲ್ಪನೆಯನ್ನು ಶಾಸ್ತ್ರ ಚಿತ್ರಿಸುತ್ತದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ