ಅವಧೂತನ ಅಂಗಿ
ಅಂದು ಮಂಗಳವಾರದ ಮಟ ಮಟ ಮದ್ಯಾಹ್ನ ಅವಧೂತರು ಸ್ನಾನ ಮಾಡಿ, ಅಂಗಿಯನ್ನು ಒಗೆದು ಒಣ ಹಾಕಿ ಮರದ ಕೆಳಗೆ ವಿಶ್ರಮಿಸಿಕೊಳ್ಳುತಿದ್ದರು. ಹಿತವಾದ ತಂಗಾಳಿಗೆ ಮೈಯೊಡ್ಡಿ, ಹಕ್ಕಿಗಳ ದನಿ ಕೇಳುತ್ತಾ ತನ್ನನ್ನೇ ತಾನು ಮರೆತಿದ್ದರು. ಎಲ್ಲಿಂದಲೋ ಬೀಸಿ ಬಂದ ಬಿರುಗಾಳಿ, ಅವಧೂತರ ಅಂಗಿಯನ್ನು ಮುಳ್ಳು ಕಲ್ಲುಗಳ ನಡುವೆ ಒತ್ತೊಯ್ದು ಚಿಂದಿ ಚಿಂದಿ ಮಾಡಿತು. ಇದನ್ನು ಗಮನಿಸಿದ ಅವಧೂತರು ಸಂತಸದಿಂದ ಕುಣಿಯುವುದಕ್ಕೆ ಶುರು ಮಾಡಿದರು. ಅವರ ಪ್ರತಿಕ್ರಿಯೆಯನ್ನು ನೋಡಿದ ದಾರಿಹೋಕರಿಗೆ ಸುಮ್ಮನಿರಲಾಗಲಿಲ್ಲ, ಪ್ರಶ್ನಿಸಿದರು…? “ಸ್ವಾಮಿ, ನಿಮ್ಮ ಅಷ್ಟು ಒಳ್ಳೆಯ ಅಂಗಿ ಚಿಂದಿಯಾದರು, ಸಂತಸದಿಂದ ಕುಣಿಯುತ್ತಿರುವೆಯಲ್ಲ…ಏನಾಗಿದೆ ನಿನಗೆ?” ಅವಧೂತರು ಕುಣಿಯುತ್ತಲೇ ಉತ್ತರಿಸಿದರು... “ಅದೃಷ್ಟಕ್ಕೆ, ನಾನು ಅಂಗಿಯನ್ನು ಬಿಚ್ಚಿಟ್ಟ ಮೇಲೆ ಬಿರುಗಾಳಿ ಒತ್ತೊಯ್ದು ಅದನ್ನು ಚಿಂದಿ ಮಾಡಿತು. ಒಂದು ವೇಳೆ, ನಾನು ಅಂಗಿಯನ್ನು ಧರಿಸಿದ್ದಾಗ ಈ ರೀತಿ ಆಗಿದ್ದರೆ ನನ್ನ ಗತಿ ಏನಾಗುತ್ತಿತ್ತು ಎಂಬುದನ್ನು ನೆನದು, ನಾನು ಚಿಂದಿಯಾಗಲಿಲ್ಲವಲ್ಲ ಎಂಬ ಖುಷಿಯಿಂದ ಕುಣಿಯುತ್ತಿದ್ದೇನೆ.” ಎಂದು ಹೇಳಿ ಕುಣಿತವನ್ನು ಮುಂದುವರೆಸಿದರು. ಈ ಕಥೆ ತುಂಬಾ ಸರಳ…ಆದರೆ ಇದು ನನ್ನನ್ನು ಪದೇ ಪದೇ ಕಾಡುತ್ತದೆ. ಇದು ಕೇವಲ ಕಥೆಯಾಗಿದ್ದರೆ ಓದಿದ ನಂತರ ಮರೆತುಹೋಗುತ್ತಿತ್ತು. ಆದರೆ ಇದು ಹೊಮ್ಮಿಸುವ ಅರ್ಥ ಈ ಜೀವನಕ್ಕೆ ಸಾಕಾಗುವಷ್ಟು ಉತ್ತರಗಳನ್ನು ನಮ್ಮೆಲ್ಲಾ ಪ್ರಶ್ನೆಗಳಿಗೆ ಒದಗ...