ದೇಹವೆಂಬುದೊಂದು ದೇವಾಲಯವು

ಶ್ರೀಶಂಕರಾಚಾರ್ಯರ ಬೋಧನೆಗೆ ಒಳಪಟ್ಟಿರುವವರೆಲ್ಲರೂ ತಮ್ಮ ಮನೆಗಳಲ್ಲಿ ದೇವರ ಪೂಜೆಯನ್ನು ಮಾಡುವಾಗ ಆವಾಹನೆಯ ಕಾಲಕ್ಕೆ ಈ ಶ್ಲೋಕವನ್ನು ತಪ್ಪದೆ ಹೇಳಿಕೊಳ್ಳುವರು - ದೇಹೋ ದೇವಾಲಯಃ ಪ್ರೋಕ್ತೋಜೀವೋ ದೇವಃ ಸನಾತನಃ | ತ್ಯಜೇದಜ್ಞಾನನಿರ್ಮಾಲ್ಯಂ ಸೋಹಂಭಾವೇನ ಪೂಜಯೇತ್ || ದೇಹವೇ ದೇವಾಲಯವು, ಜೀವನೇ ಸನಾತನನಾದ ದೇವನು, ಅಜ್ಞಾನವೆಂಬ ನಿರ್ಮಾಲ್ಯವನ್ನು ತೆಗೆದುಹಾಕಬೇಕು, ಆತನೇ ನಾನೆಂಬ ಭಾವದಿಂದ ಪೂಜೆಮಾಡಬೇಕು. ಎಂಬುದು ಇದರ ಅಕ್ಷರಾರ್ಥವು. ಈ ಶ್ಲೋಕವು ಯಾವ ಪುರಾಣದಲ್ಲಿದೆಯೋ ತಿಳಿಯದು, ಆದರೆ ಇದರ ವ್ಯಾಪಕತೆಯು ಮಾತ್ರ ದಕ್ಷಿಣದಲ್ಲಿ ಸೇತುವಿನಿಂದ ಹಿಡಿದು ಉತ್ತರದಲ್ಲಿ ಹಿಮಾಚಲದವರೆಗೂ ಇದೆ. ಮೊಟ್ಟಮೊದಲನೆಯ ಪಾದವು ದೇಹವೇ ದೇವಾಲಯವೆಂದು ಹೇಳುತ್ತದೆ. ಇದರ ಅಭಿಪ್ರಾಯವನ್ನು ಚೆನ್ನಾಗಿ ಮನಸ್ಸಿನಲ್ಲಿ ತಂದುಕೊಂಡವರು ತನ್ನ ಆಚರಣೆಯನ್ನು ಹೇಗೆ ಇಟ್ಟುಕೊಳ್ಳಬೇಕಾಗುವದೆಂಬುದನ್ನು ನೋಡೋಣ. ದೇವಾಲಯಗಳಲ್ಲಿ ಹೀಗೆ ಹೀಗೆ ನಡೆದುಕೊಳ್ಳಬೇಕೆಂಬ ನಿಯಮವಿರುವದು. ಎಲ್ಲಕ್ಕೂ ಮೊದಲಾಗಿ ದೇವಾಲಯವು ಪವಿತ್ರವೆಂಬ ಭಾವನೆ ಬರುವಂತೆ ಅದನ್ನು ಚೊಕ್ಕಟವಾಗಿಟ್ಟುಕೊಳ್ಳಬೇಕು. ಅದರ ಹೊರಗೂ ಒಳಗೂ ದಿನದಿನವೂ ಗುಡಿಸಿ, ಸಾರಿಸಿ, ರಂಗೋಲೆಹಾಕಿಡಬೇಕು, ಅದರ ಒಳಕ್ಕೆ ಧಾರಾಳವಾಗಿ ಗಾಳಿಯೂ ಬೆಳಕೂ ಬರುವಂತೆ ನೋಡಿಕೊಳ್ಳಬೇಕು, ಗೋಡೆಗೆ ಆಗಾಗ ಸುಣ್ಣವನ್ನು ಒಳಿಸಿಸಬೇಕು, ಪರಮೇಶ್ವರನ ದಿವ್ಯಗುಣಕರ್ಮಗಳನ್ನು ನೆನಪಿಗೆ ತರುವ ಸು...