ದೇಹವೆಂಬುದೊಂದು ದೇವಾಲಯವು
ಶ್ರೀಶಂಕರಾಚಾರ್ಯರ ಬೋಧನೆಗೆ ಒಳಪಟ್ಟಿರುವವರೆಲ್ಲರೂ ತಮ್ಮ ಮನೆಗಳಲ್ಲಿ ದೇವರ ಪೂಜೆಯನ್ನು ಮಾಡುವಾಗ ಆವಾಹನೆಯ ಕಾಲಕ್ಕೆ ಈ ಶ್ಲೋಕವನ್ನು ತಪ್ಪದೆ ಹೇಳಿಕೊಳ್ಳುವರು -
ದೇಹೋ ದೇವಾಲಯಃ ಪ್ರೋಕ್ತೋಜೀವೋ ದೇವಃ ಸನಾತನಃ |
ತ್ಯಜೇದಜ್ಞಾನನಿರ್ಮಾಲ್ಯಂ ಸೋಹಂಭಾವೇನ ಪೂಜಯೇತ್ ||
ದೇಹವೇ ದೇವಾಲಯವು, ಜೀವನೇ ಸನಾತನನಾದ ದೇವನು, ಅಜ್ಞಾನವೆಂಬ ನಿರ್ಮಾಲ್ಯವನ್ನು ತೆಗೆದುಹಾಕಬೇಕು, ಆತನೇ ನಾನೆಂಬ ಭಾವದಿಂದ ಪೂಜೆಮಾಡಬೇಕು. ಎಂಬುದು ಇದರ ಅಕ್ಷರಾರ್ಥವು. ಈ ಶ್ಲೋಕವು ಯಾವ ಪುರಾಣದಲ್ಲಿದೆಯೋ ತಿಳಿಯದು, ಆದರೆ ಇದರ ವ್ಯಾಪಕತೆಯು ಮಾತ್ರ ದಕ್ಷಿಣದಲ್ಲಿ ಸೇತುವಿನಿಂದ ಹಿಡಿದು ಉತ್ತರದಲ್ಲಿ ಹಿಮಾಚಲದವರೆಗೂ ಇದೆ.
ಮೊಟ್ಟಮೊದಲನೆಯ ಪಾದವು ದೇಹವೇ ದೇವಾಲಯವೆಂದು ಹೇಳುತ್ತದೆ. ಇದರ ಅಭಿಪ್ರಾಯವನ್ನು ಚೆನ್ನಾಗಿ ಮನಸ್ಸಿನಲ್ಲಿ ತಂದುಕೊಂಡವರು ತನ್ನ ಆಚರಣೆಯನ್ನು ಹೇಗೆ ಇಟ್ಟುಕೊಳ್ಳಬೇಕಾಗುವದೆಂಬುದನ್ನು ನೋಡೋಣ. ದೇವಾಲಯಗಳಲ್ಲಿ ಹೀಗೆ ಹೀಗೆ ನಡೆದುಕೊಳ್ಳಬೇಕೆಂಬ ನಿಯಮವಿರುವದು. ಎಲ್ಲಕ್ಕೂ ಮೊದಲಾಗಿ ದೇವಾಲಯವು ಪವಿತ್ರವೆಂಬ ಭಾವನೆ ಬರುವಂತೆ ಅದನ್ನು ಚೊಕ್ಕಟವಾಗಿಟ್ಟುಕೊಳ್ಳಬೇಕು. ಅದರ ಹೊರಗೂ ಒಳಗೂ ದಿನದಿನವೂ ಗುಡಿಸಿ, ಸಾರಿಸಿ, ರಂಗೋಲೆಹಾಕಿಡಬೇಕು, ಅದರ ಒಳಕ್ಕೆ ಧಾರಾಳವಾಗಿ ಗಾಳಿಯೂ ಬೆಳಕೂ ಬರುವಂತೆ ನೋಡಿಕೊಳ್ಳಬೇಕು, ಗೋಡೆಗೆ ಆಗಾಗ ಸುಣ್ಣವನ್ನು ಒಳಿಸಿಸಬೇಕು, ಪರಮೇಶ್ವರನ ದಿವ್ಯಗುಣಕರ್ಮಗಳನ್ನು ನೆನಪಿಗೆ ತರುವ ಸುಂದರವಾದ ಚಿತ್ರಗಳನ್ನು ಅಲ್ಲಲ್ಲಿ ಗೋಡೆಗಳಿಗೆ ತಗಲಿಸಿರಬೇಕು. ಇದರಂತೆಯೇ ದೇಹವನ್ನು ದೇವಾಲಯವೆಂದು ತಿಳಿಯುವಾತನು ಅದು ಒಳಗೂ ಹೊರಗೂ ಪವಿತ್ರವಾಗಿರುವಂತೆ ಅಂತಃಶುದ್ಧಿಬಹಿಃಶುದ್ಧಿಗಳಿಗೆ ಬೇಕಾದ ಸ್ನಾನ, ಜಪ, ತಪ ಮುಂತಾದವುಗಳನ್ನು ತಪ್ಪದೆ ಆಚರಿಸಬೇಕು. ಅದು ಆರೋಗ್ಯವಾಗಿರುವಂತೆಯೂ ಪುಷ್ಟಿಯಿಂದ ಕೂಡಿರುವಂತೆಯೂ ತನ್ನ ಆಹಾರವಿಹಾರಗಳಲ್ಲಿ ಮನಮುಟ್ಟಿ ನೋಡಿಕೊಳ್ಳಬೇಕು, ಶುದ್ಧವಾದ ಗಾಳಿಯೂ ಚೆನ್ನಾಗಿ ಬೆಳಕೂ ಇರುವ ಕಡೆಯಲ್ಲಿ ವಾಸಮಾಡಬೇಕು, ಸಾತ್ತ್ವಿಕವಾದ ಆಹಾರಗಳು, ವಿಚಾರಗಳು ಇವುಗಳಿಂದ ಅದಕ್ಕೆ ಹೊಳಪುಬರುವಂತೆ ನೋಡಿಕೊಳ್ಳಬೇಕು, ತನ್ನನ್ನು ನೋಡಿದವರಿಗೆ ಕೂಡ ಪರಮೇಶ್ವರನ ನೆನಪುಬರುವಂತೆ ಪರಮಾತ್ಮನಿಗೆ ಅರ್ಪಿಸಿ ಪ್ರಸಾದವಾಗಿ ತೆಗೆದದುಕೊಂಡು ಗಂಧಾದಿಗಳಿಂದಲೂ ಭಗವನ್ನಾಮಸ್ಮರಣೆಯಿಂದಲೂ ದಿನದಿನವೂ ಓಗೆದು ಮಡಿಮಾಡಿ ಶುಭ್ರವಾಗಿಟ್ಟುಕೊಂಡಿರುವ ವಸ್ತ್ರಗಳಿಂದಲೂ ತನ್ನ ಹೊರಗನ್ನು ದೇವಮಯವಾಗಿ ಮಾಡಿಟ್ಟುಕೊಳ್ಳಬೇಕು.
ದೇಹವು ದೇವಾಲಯವೆಂಬ ಮಾತಿನಲ್ಲಿ ತನ್ನ ದೇಹವು ಮಾತ್ರ ದೇವಾಲಯವೆಂಬ ಅಭಿಪ್ರಾಯವಿರುವದಿಲ್ಲ. ಮಿಕ್ಕವರ ದೇಹವೂ ದೇವಾಲಯವೇ. ಆದ್ದರಿಂದ ದೇಹವನ್ನು ದೇವಾಲಯದಂತೆ ಭಾವಿಸಬೇಕೆಂಬಾತನು, ತನ್ನ ಮಕ್ಕಳು, ಮರಿಗಳ, ತನ್ನ ಕುಟುಂಬದವರ, ತನ್ನ ನೆರೆಯವರ ಮತ್ತು ತನ್ನ ಊರಿನವರ ಎಲ್ಲರ ದೇಹಗಳನ್ನೂ ದೇವಾಲಯಗಳೆಂದೇ ಭಾವಿಸಬೇಕು. ದೇವಾಲಯವನ್ನು ನೋಡಿದ ಮಾತ್ರದಿಂದ ದೇವರ ನೆನಪು ಬಂದು ಆಸ್ತಿಕನಾದವನು ಕೈಮುಗಿಯುತ್ತಾನೆ, ಅದರ ಸುತ್ತಲೂ ಕಸ ಮುಂತಾದವುಗಳೇನಾದರೂ ಬಿದ್ದಿದ್ದರೆ ತೆಗೆದು ಹಾಕುತ್ತಾನೆ, ಗುಡಿಯು ಹಳೆಯದಾಗಿ ಕೆಲವು ಭಾಗ ಪಾಳಾಗಿದ್ದರೆ ಅದನ್ನು ಜೀರ್ಣೋದ್ಧಾರಮಾಡುವದಕ್ಕೆ ತನ್ನ ಕೈಯಲ್ಲಾದ ಧನಸಹಾಯವನ್ನೋ ಸೇವೆಯ ಸಹಾಯವನ್ನೋ ಮಾಡುತ್ತಾನೆ, ಅದರಲ್ಲಿ ಆಗಾಗ್ಗೆ ಹಣ್ಣುಕಾಯಿಗಳನ್ನರ್ಪಿಸಿ ಮಂಗಳಾರತಿ ಮುಂತಾದವುಗಳನ್ನು ನಡೆಯಿಸುತ್ತಾನೆ. ಕೈಯಲ್ಲಾದರೆ ನಿತ್ಯಪೂಜೆಯನ್ನೂ ಮಾಡುತ್ತಾನೆ. ಇದರಂತೆ ನಮ್ಮ ಸುತ್ತಾಮುತ್ತಲೂ ಕಾಣಬರುವವರ ದೇಹಗಳೆಲ್ಲವೂ ದೇವಾಲಯಗಳೆಂದು ಭಾವಿಸುವದಾದರೆ, ಅವರೆಲ್ಲರನ್ನೂ ನಾವು ಗೌರವಿಸಬೇಕು. ಅವರ ಮನೆಗಳ ಮುಂದೆ ಕಸವನ್ನು ಹಾಕಬಾರದು. ಅವರಿಗೆ ಅನಾರೋಗ್ಯವಾಗಬಹುದಾದ ಅಶುಚಿಕಾರ್ಯಗಳನ್ನು ಮಾಡುವದಕ್ಕೆ ನಮ್ಮ ಮಕ್ಕಳನ್ನು ಬಿಡಬಾರದು, ಅವರೆಲ್ಲರ ಅರೋಗ್ಯದೃಢಕಾಯರಾಗಿ, ನಿರ್ಮಲರಾಗಿ, ಒಬ್ಬೊಬ್ಬರೂ ದೇವರ ಗುಡಿಗಳಾಗಿ ಬಾಳುವದಕ್ಕೆ ತಕ್ಕ ಸಹಾಯವನ್ನು ನಮ್ಮ ಕೈಯಲ್ಲಾದ ಮಟ್ಟಿಗೆ ಮಾಡಬೇಕು. ಬಡವರಿಗೆ ಅನ್ನ ಬಟ್ಟೆಗಳನ್ನು ಕೊಡುವದು, ಧನಸಹಾಯಮಾಡುವದು, ವಿದ್ಯಾದಿಗಳನ್ನು ಹೇಳಿಕೊಡುವದು - ಮುಂತಾದ ರೀತಿಗಳಿಂದ ಮಾಡುವ ಉಪಕಾರವೆಲ್ಲ ಪರಮೇಶ್ವರನ ಗುಡಿಗಳನ್ನು ಜೀರ್ಣೋದ್ಧಾರಮಾಡಿದಂತೆ ಎಂದು ಭಾವಿಸಬೇಕು. ಸರ್ಕಾರಗಳು ಊರವರ ಉಪಯೋಗಕ್ಕೆಂದು ಕೆರೆಕಟ್ಟೆಗಳನ್ನು ತುಂಬಿಸಿ, ತಿಳಿವಳಿಕೆಯ ಪ್ರಸಾರಕ್ಕೆಂದು ವಿದ್ಯಾಶಾಲೆಗಳನ್ನೂ ಪುಸ್ತಕಭಂಡಾರಗಳನ್ನೂ ಏರ್ಪಡಿಸುವದೂ, ಈ ದೃಷ್ಟಿಯಲ್ಲಿ ದೇವರ ಪೂಜೆಯೇ ಆಗಿರುವದು.
ದೇಹವೆಂದರೆ ಬರಿಯ ಮನುಷ್ಯನ ದೇಹವೆಂದು ಕುಗ್ಗಿಸಿ ಅರ್ಥಮಾಡುವದಕ್ಕೇನೂ ಕಾರಣವಿಲ್ಲ. ಪ್ರಾಣಿಗಳಿಗೂ ದೇಹವುಂಟು. ಆ ದೇಹಗಳನ್ನೂ ದೇವಾಲಯವೆಂದು ಭಾವಿಸುವಾತನಿಗೆ ಪ್ರಾಣಿಹಿಂಸೆಮಾಡಬಾರದು ಎಂಬ ನೀತಿವಾಕ್ಯವು ಅನವಶ್ಯವಾಗಿರುವದು. ಪ್ರಾಣಿಗಳಲ್ಲೂ ನಮ್ಮಲ್ಲಿರುವ ಪರಮೇಶ್ವರನೇ ವಾಸವಾಗಿರುವನೆಂದು ದೃಢವಾಗಿ ನಂಬಿರುವದರಿಂದ ಪರಮೇಶ್ವರನ ಪೂಜೆಯೇ ಎಂದು ಅವನು ಎಣಿಸಬೇಕು.
ಹೀಗೆ ದಾನ, ಧರ್ಮ, ಪರೋಪಕಾರ, ಸರ್ವಭೂತಪ್ರೇಮ - ಇಷ್ಟನ್ನೂ 'ದೇಹವೇ ದೇವಾಲಯ'ವೆಂಬ ಶ್ಲೋಕಪಾದವು ಒಳಗೊಂಡಿರುವದು.

Comments
Post a Comment