ಪಗಡೆಯಾಟ (ಮಗುವಿನ ಗೆಲುವು ತಾಯಿಗೆ ಸಂತೋಷ)
ಆಟ ಪ್ರಾರಂಭವಾಯಿತು. ದೇವಸ್ಥಾನದ ಅರಿಸಿನ, ಕುಂಕುಮ, ಗಂಧದ ಪುಡಿಗಳನ್ನು ಉಪಯೋಗಿಸಿ ಪಗಡೆ ಆಟದ ನಕ್ಷೆಯನ್ನು ಶ್ರೀಗಳವರು ಬರೆದರು. ದೇವಿ ತನ್ನ ಶಕ್ತಿಯಿಂದ ದಿವ್ಯ ದಾಳಿಗಳನ್ನು ಸೃಷ್ಟಿಸಿದಳು! ಶಂಕರರು ಪೂಜೆಗಾಗಿ ದೇವಿಗೆ ಬಳಸಿದ್ದ ಹೂವುಗಳನ್ನು ಆಟದಲ್ಲಿ ತಮ್ಮ ನಡಿಗೆಯ ಕಾಯಿಗಳನ್ನಾಗಿಯೂ, ಅವಳ ಆಭರಣದ ಮುತ್ತು ರತ್ನಗಳನ್ನು ಬಳಸಿ ಅವಳ ನಡಿಗೆಯ ಕಾಯಿಗಳನ್ನಾಗಿಯೂ ಸಿದ್ಧಪಡಿಸಿದರು. ದೇವಿ ಆಟವಾಡಲೆಂದು ಗರ್ಭಗುಡಿಯ ಪೀಠದ ಮೇಲೆ ಕುಳಿತಳು. ಶ್ರೀಗಳವರು ಅವಳೆದುರು ಪದ್ಮಾಸನ ಹಾಕಿ ಗರ್ಭಗುಡಿಯ ಹೊಸ್ತಿಲ ಹೊರಗೆ ಕುಳಿತು ಆಟ ಪ್ರಾರಂಭಿಸಿದರು. ಹಾಗೆಯೇ ಪ್ರಶಸ್ತವಾದ ಆ ಕಾಲ ವ್ಯರ್ಥವಾಗದಂತೆ ಲಲಿತಾ ಸಹಸ್ರನಾಮದ ಬೇರೆ ಬೇರೆ ನಾಮಗಳನ್ನು ಜಪಿಸುತ್ತಾ ಆಟ ಮುಂದುವರೆಸಲು ದೇವಿಯ ಅಪ್ಪಣೆ ಬೇಡಿದರು. ಅಷ್ಟೇ ಅಲ್ಲ ದೇವಿ ತನಗೆ ಬೇಕಾದ ಗರ ಬೀಳುವಂತೆ ಹೊಂದಿದ್ದ ಶಕ್ತಿಯನ್ನು ತಮಗೂ ಅನುಗ್ರಹಿಸಿ ತಮಗೆ ಬೇಕಾದ ಗರ ಬೀಳಿಸಿಕೊಳ್ಳಲು ಸಹಾಯ ಮಾಡಬೇಕೆಂದು ಕೇಳಿಕೊಂಡರು. ದೇವಿ ಉದಾರತೆಯಿಂದ ಅನುಗ್ರಹಿಸಿದಳು. ಆಟ ಪ್ರಾರಂಭವಾಯಿತು.
ಮೊದಲು ದಾಳಿ ಉರುಳಿಸಿದವರು ಶ್ರೀಗಳೇ, ಬಿದ್ದ ಗರ ಒಂಬತ್ತು! ಅವರು 'ಶ್ರೀ ಚಕ್ರರಾಜ ನಿಲಯಾ' ಎಂದು ದೇವಿಯ ನಾಮ ಹೇಳಿ, ತಮ್ಮ ಕಾಯಿ ನಡೆಸುವ ಮುನ್ನ ಶ್ರೀಚಕ್ರ ನಿಲಯಳಾಗಿರುವ ದೇವಿಯ ಶ್ರೀಚಕ್ರಕ್ಕೆ ಒಂಬತ್ತು ಆವರಣಗಳಿರುವುದರನ್ನು ಹೇಳಿ ಅದರ ಸಂಕೇತವಾಗಿ ಒಂಬತ್ತು ಅವರಣಗಳ ಗೆರೆಗಳನ್ನು ಪಕ್ಕದಲ್ಲಿ ಬರೆದರು. ಆಟ ಮುಂದೆ ಸಾಗಿತು, ಹೀಗೆ ಒಂದೊಂದು ಗರ ಬಿದ್ದಾಗಲೂ ಅದಕ್ಕೆ ಸರಿಹೊಂದುವ ಅಕ್ಷರ ಸಂಖ್ಯೆಗಳಿದ್ದ ದೇವಿಯ ನಾಮಗಳನ್ನು ಹೇಳಿ ಆ ಸಂಖ್ಯೆಗೆ ಅನುಸಾರವಾಗಿ ಬೀಜಾಕ್ಷರಗಳನ್ನು ಬಳಸಿ ಗೆರೆಗಳಿಂದ ನಿರ್ಮಿತವಾದ ರೇಖಾಕೃತಿಗಳನ್ನು ರಚಿಸತೊಡಗಿದರು. ಹಾಗೆ ರಚಿಸಿದ ಶ್ರೀಚಕ್ರದ ರೇಖಾಕೃತಿಯಲ್ಲಿ ಹಿಂದಿನ ಶ್ರೀಚಕ್ರದಲ್ಲಿದ್ದ ಉಗ್ರ ಬೀಜಾಕ್ಷರಗಳನ್ನು ತೆಗೆದುಹಾಕಿ ಅವುಗಳ ಸ್ಥಾನದಲ್ಲಿ ಅದೇ ಸಂಖ್ಯೆಗೆ ಅನುಗುಣವಾಗಿ ಹೊಂದಿಕೊಳ್ಳಬಹುದಾದ ಸಾತ್ವಿಕ ಬೀಜಾಕ್ಷರಗಳನ್ನು ತುಂಬಿ ಸಮೀಕರಣ ಸರಿಹೊಂದಿಸಿದರು. ಅಕ್ಷರಗಳು ಬದಲಾದುದರಿಂದ ಮಂತ್ರವೇ ತಿರುವು ಮುರುವು ಆಗುವಂತೆ ಮಾಡಿ ತಾವು ಹೊಸದಾಗಿ ರಚಿಸಿದ ರೇಖಾ ವಿನ್ಯಾಸದಲ್ಲಿ ಬಿಂದು, ತ್ರಿಕೋಣ, ವಸುಕೋಣ ದಶಾರ ಯುಗ್ಮ ಮನ್ವಸ್ತ್ರ ನಾಗದಳ ಷೋಡಶಾ ಪತ್ರ ವೃತ್ತ ತ್ರಯ ಹಾಗೂ ಭೂಪುರಗಳನ್ನೊಳಗೊಂಡ ಮಂಗಳದಾಯಕ ಶ್ರೀಚಕ್ರವನ್ನು ಪ್ರತಿಷ್ಟಿಸಿದರು. ಈ ವೇಳೆಗೆ ಮೂರು ಯಾಮಗಳು ಕಳೆದುವೆಂದು (ಸೂಚಿಸುವ) ತಿಳಿಸುವ ನಗರದ ಬೆಳಗಿನ ಝಾವದ ಕಹಳೆ ಶಬ್ದವಾಯಿತು. ದೇವಿ ಥಟ್ಟನೆ ಎಚ್ಚೆತ್ತಳು. ಆಟದಲ್ಲಿ ತಾನು ಮಗ್ನಳಾಗಿ ತನ್ನ ನಿತ್ಯ ಅಭ್ಯಾಸವನ್ನು ಮರೆತು ಅಂದು ಸಂಹಾರ ಕ್ರಿಯೆ ನಡೆಸಲಿಲ್ಲವೆಂದು ಅವಳಿಗೆ ಖೇದವಾಯಿತು! ಈ ವೇಳೆಗಾಗಲೇ ಆಟವು ಅಂತ್ಯದ ಘಟ್ಟಕ್ಕೆ ತಲುಪಿತು. ಶಂಕರರು ಹಣ್ಣಿಗೆ ಬರುವ ದ್ವಾರದ ಬಳಿಯಲ್ಲಿ ತಮ್ಮ ಕೊನೆಯ ಕಾಯಿಗಳನ್ನು ತಂದು ನಿಲ್ಲಿಸಿದ್ದರು ಆದರೆ ದೇವಿ ತನ್ನ ಕಾಯಿಯನ್ನು ಹಣ್ಣಿನ ಮನೆಯ ಒಳಗೆ ತಂದಿದ್ದಳು. ಅಷ್ಟೇ ಅಲ್ಲ ಆಟದ ಕೊನೆ ಗರ ಹಾಕುವ ಸರದಿಯೂ ಅವಳದಾಗಿತ್ತು ಎರಡು ಸಂಖ್ಯೆಯ ಗರ ಹಕಿ 'ದುಗ' ಎಂದು ಹೇಳುತ್ತಾ ಕಾಯಿಯನ್ನು ಹಣ್ಣು ಮಾಡಿಯೇ ಬಿಟ್ಟಳು.
ಶ್ರೀಗಳವರು ಆಟದಲ್ಲಿ ಸೋತಿದ್ದರು! ಆದರೆ ಅವರು ತಮ್ಮ ಉದ್ದೇಶದಲ್ಲಿ ಗೆದ್ದಿದ್ದರು. ಪಂದ್ಯದ ನಿಯಮದಂತೆ ದೇವಿ ಅವರನ್ನು ಕಬಳಿಸಿ ಮರುದಿನದಿಂದ ತನ್ನ ಸಂಹಾರ ಕ್ರಿಯೆ ಮುಂದುವರೆಸಬಹುದಾಗಿತ್ತು! ಆದರೆ ಶಂಕರರ ಬುದ್ಧಿವಂತಿಕೆಯಿಂದ ಅವಳ ಆವಾಸಸ್ಥಾನವಾದ ಶ್ರೀಚಕ್ರದ ಬೀಜ ಮಂತ್ರಗಳೆಲ್ಲ ತಿರುವು ಮುರುವಾಗಿ, ಕ್ಷುದ್ರ ಸಿದ್ಧಿಗಾಗಿ ನೀಚ ಜನರು ಅವಳನ್ನು ಆಹ್ವಾನಿಸಿದರೆ, ಶ್ರೀಚಕ್ರ ಬಿಟ್ಟು ಹೋಗದಂತೆ ನಿಯೋಜಿಸಿದ ಶ್ರೀಚಕ್ರದ ಬಿಂದು ಸ್ಥಾನದಲ್ಲಿ ಅಕ್ಷರ ಸಂಖ್ಯಾಶಾಸ್ತ್ರದ ಮೇರೆಗೆ ಅವಳು ಬಂಧಿತಳಾಗಿದ್ದಳು!
ದೇವಿ ಪಂದ್ಯದ ನಿಯಮವನ್ನು ಶಂಕರರಿಗೆ ಜ್ಞಾಪಿಸಿ ತನ್ನ ಸಂಹಾರ ಕಾರ್ಯ ಮುಂದುವರೆಸುವೆನೆಂದಾಗ ಶಂಕರರು ತುಂಟು ನಗೆ ಬೀರಿರಬೇಕು! ಶ್ರೀಚಕ್ರದ ಬಿಂದು ಸ್ಥಾನದಲ್ಲಿ ಶಂಕರರಿಂದ ಬಂಧಿತಳಾಗಿದ್ದ ದೇವಿ ಮತ್ತೆ ಎಂದೂ ಉಗ್ರ ಬೀಜಾಕ್ಷರಗಳ ಮಂತ್ರಕ್ಕೆ ಮಣಿದು ಉಗ್ರರೂಪ ತಾಳಿ ಪೀಠ ಬಿಡುವಂತಿರಲಿಲ್ಲ ಮಗುವಿನ ಗೆಲುವು ತಾಯಿಗೆ ಸಂತೋಷ ತರುವಂತೆ ದೇವಿ ಶಂಕರರ ಮೇಲೆ ಪ್ರಸನ್ನಳಾಗಿ ತನ್ನ ಬಂಧನವನ್ನು ಸಂತೋಷದಿಂದ ಒಪ್ಪಿದಳು.
ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಹಾಗೂ ಅಕ್ಷರಗಳಿಗೆ ವಿಶಿಷ್ಟ ಮಾನ್ಯತೆಯ ಸ್ಥಾನಗಳಿವೆ. ಒಂದರಿಂದ ಒಂಬತ್ತರವರೆಗಿನ ಸಂಖ್ಯೆಗಳನ್ನು ಶೂನ್ಯದೊಡನೆ ಸೇರಿಸಿ ಅಸಂಖ್ಯ ಸಂಖ್ಯೆಗಳನ್ನು ಪಡೆಯಬಹುದು. ಹಾಗೆಯೇ ವರ್ಣಮಾಲೆಯ 'ಆ' ನಿಂದ 'ಹ' ವರೆಗಿನ ಅಕ್ಷರಗಳನ್ನು ಬೇರೆ ಬೇರೆ ವಿಧದಲ್ಲಿ ಸ್ವರಗಳೊಡನೆ ಜೋಡಿಸುವುದರಿಂದ ಅಸಂಖ್ಯ ಮಂತ್ರ ಬೀಜಾಕ್ಷರಗಳ ನಿರ್ಮಾಣವಾಗುತ್ತವೆ. ಹೀಗೆ ನಿರ್ಮಾಣವಾಗುವ ಮಂತ್ರ ಸ್ತೋತ್ರ, ನಾಮಗಳ ಸಂಖ್ಯೆಯೂ ಬಹಳವಾಗಿದ್ದು ಅಕ್ಷರ ಮಾಲೆಯ ವರ್ಣ ಹಾಗೂ ಸಂಖ್ಯಾಶಾಸ್ತ್ರದ ಸಂಖ್ಯೆಗಳು ಒಂದಕ್ಕೊಂದು ಪೂರಕವಾಗಿರುತ್ತವೆ. ಒಂದ ಅಕ್ಷರ ಹೆಚ್ಚಾದರೂ, ಒಂದು ಅಕ್ಷರ ಲುಪ್ತವಾದರೂ ಕೊನೆಗೆ ಅಕ್ಷರದ ಅಲ್ಪಪ್ರಾಣ, ಮಹಾಪ್ರಾಣ ಅಥವಾ ಒತ್ತುಗಳಲ್ಲಿ ವ್ಯತ್ಯಾಸವಾದರೂ ಅರ್ಥ ಬದಲಾಯಿಸಿ ಮಂತ್ರಗಳ ಉದ್ದೇಶವೇ ಬದಲಾಗಿಬಿಡುತ್ತವೆ. ಕೆಲವೊಮ್ಮೆ ಅನರ್ಥವೂ ಆಗಿಬಿಡುತ್ತದೆ. ಶ್ರೀಚಕ್ರದಲ್ಲಿ ಅಲ್ಲಿಯವರೆಗೆ ಉಗ್ರ ಬೀಜಾಕ್ಷರಗಳ ಸ್ಥಾಪನೆಯಿಂದ ಇಂತಹುದೇ ಅನರ್ಥವಾಗಿತ್ತು. ಒಂದು ಅಕ್ಷರಕ್ಕೆ ಅಥವಾ ಕೆಲವು ಅಕ್ಷರಗಳಿಗೆ ಒಂದು ಸಂಖ್ಯೆಯೊಡನೆ ತಾದಾತ್ಮ್ಯಗೊಳಿಸಿದಾಗ, ಒಂದು ಸಂಖ್ಯೆ, ಒಂದು ಅಕ್ಷರಕ್ಕೆ ಇಲ್ಲವೇ ಅನೇಕ ಅಕ್ಷರಗಳ ಸಂಕೇತವಾಗುತ್ತದೆ. ಹೀಗೆ ವರ್ಣಮಾಲೆಯ 'ಅ' ನಿಂದ 'ಅಂ' ವರೆಗೆ 'ಕ' ನಿಂದ 'ಕ್ಷ' ವರೆಗೆ ಕೆಲವು ಸಂಖ್ಯೆಗಳನ್ನು ಸಂಕೇತ ಮಾಡಿ ನೆನಪಿನಲ್ಲಿಟ್ಟುಕೊಂಡರೆ ಮಂತ್ರಕ್ಕೂ ಸಂಖ್ಯೆಗೂ ಅದ್ಭುತ ಹೊಂದಾಣಿಕೆಯಾಗುತ್ತದೆ. ಅದರ ಪರಿಣಾಮವಾಗಿ ಸಂಕಲ್ಪ ಉದ್ದೇಶಗಳೂ ಬದಲಾಗುತ್ತದೆ.
ಆಟದ ನಡುವೆ ಸ್ತೋತ್ರ ಮಂತ್ರವನ್ನು ಬಾಯಿಯಲ್ಲಿ ಹೇಳುತ್ತಿದ್ದ ಶಂಕರರು ತಮಗೆ ಬಿದ್ದ ಗರಗಳ ಸಂಖ್ಯೆಗೆ ಹೊಂದಿಸಿ ಶ್ರೀಚಕ್ರದ ಬಿಂದು ತ್ರಿಕೋಣ, ಅಷ್ಟಕೋಣ, ಅಂತರ್ದಶಾರ, ಬಹಿರ್ದಶಾರ, ಚತುರಸ್ತರ, ಇತ್ಯಾದಿ ರೇಖಾಕೃತಿಗಳನ್ನು ನಿರ್ಮಿಸಿ ಅದರಲ್ಲಿ ತಮ್ಮ ಉದ್ದೇಶಪೂರಕವಾದ ಮಂತ್ರಾಕ್ಷರಗಳನ್ನು ತುಂಬಿದ್ದರು!
ಸಂಖ್ಯಾಶಾಸ್ತ್ರದ ಸಂಕೇತ ನಿಯಮವನ್ನು ಅನುಸರಿಸಿ ಅಲ್ಲಿಯವರೆಗೆ ಕ್ಷುದ್ರ ಸಾಧಕರು ತಮ್ಮ ಸ್ವಾರ್ಥ ಸಿದ್ಧಿಗಾಗಿ ಶ್ರೀಚಕ್ರದಲ್ಲಿ ಉಗ್ರ ಬೀಜಾಕ್ಷರಗಳನ್ನು ತುಂಬಿ ದೇವಿಯ ಶಕ್ತಿಯನ್ನು ದುರುಪಯೋಗಪಡಿಸಿಕೊಂಡು ತಾಮಸೀ ಗುಣವಾಗಿ ಪರಿವರ್ತಿಸಿ ಅವಳು ಉಗ್ರರೂಪ ತಾಳಿ ಬಲಿ ತೆಗೆದುಕೊಳ್ಳುವಂತೆ ಅವಳನ್ನು ಅಗ್ರಹಿಸುತ್ತಿದ್ದರು. ಅಂತಹ ನೀಚರು ಶ್ರೀಚಕ್ರದಲ್ಲಿ ಅಳವಡಿಸಿದ್ದ ಉಗ್ರ ಬೀಜಾಕ್ಷರಗಳನ್ನು ಒಂದೊಂದಾಗಿ ಅಳಿಸಿಹಾಕುತ್ತಾ ಅವುಗಳ ಸ್ಥಳದಲ್ಲಿ ತಮಗೆ ಬಿದ್ದ ಗರದ ಸಂಖ್ಯೆಯನ್ನು ತಾವು ಬಾಯಿಯಲ್ಲಿ ನುಡಿಯುತ್ತಲೇ, ಮಂತ್ರಾಕ್ಷರಗಳ ಸಂಖ್ಯೆಗೆ ಅದನ್ನು ಹೊಂದಿಸಿ ಅವುಗಳನ್ನು ಸಾತ್ವಿಕ ಬೀಜಾಕ್ಷರಗಳನ್ನಾಗಿ ಪರಿವರ್ತಿಸಿ ಹಿಂದಿನ ಉಗ್ರ ಬೀಜಾಕ್ಷರಗಳ ಸಂಖ್ಯೆಗೆ ಬದಲಾಗಿ ತಾವು ಸೇರಿಸುವ ಸಾತ್ವಿಕ ಬೀಜಾಕ್ಷರಗಳ ಸಂಖ್ಯೆ ಸರಿಹೊಂದುವಂತೆ ಸಮೀಕರಣ ಮಾಡಿ, ಹೊಸ ಬೀಜಾಕ್ಷರಗಳನ್ನು ಶ್ರೀಚಕ್ರದಲ್ಲಿ ಅಳವಡಿಸಿಬಿಟ್ಟಿದ್ದರು! ಆಟದಲ್ಲಿ ಮಗ್ನಳಾಗಿದ್ದ ದೇವಿ ಇದನ್ನು ಗಮನಿಸಿರಲಿಲ್ಲ ಈಗ ಅವಳಿಗೆ ತಾಮಸೀ ಬೀಜಾಕ್ಷರಗಳ ಪ್ರಭಾವದಿಂದ ಉಗ್ರರೂಪ ತಾಳುವುದು ಸಾಧ್ಯವೇ ಇರಲಿಲ್ಲ! ಏಕೆಂದರೆ ಹಾಗಾಗದಂತೆ ಶ್ರೀ ಶಂಕರರು ಸಾತ್ವಿಕ ಬೀಜಾಕ್ಷರಗಳಿಂದ ಕೂಡಿ ಹೊಸದಾಗಿ ತಾವು ನಿರ್ಮಿಸಿದ್ದ ಶ್ರೀಚಕ್ರದ ಬಿಂದು ಸ್ಥಾನದಲ್ಲಿ ಅವಳನ್ನು ಸ್ತಿರವಾಗಿ ನಿಲ್ಲಿಸಿಬಿಟ್ಟಿದ್ದರು. (ತಾಮಸೀ ಆಹಾರಕ್ಕೆ ಒಗ್ಗಿದ ಮನುಷ್ಯನ ಪ್ರವೃತ್ತಿ ತಾಮಸಿಕವಾಗಿರುವಾಗ ಅವನಿಗೆ ಸಾತ್ವಿಕ ಆಹಾರವಿತ್ತು ಪರಿವರ್ತಿಸುವಂತೆ ಶ್ರೀ ಶಂಕರರು ದೇವಿಯ ತಾಮಸಿಕ ಉಗ್ರರೂಪವನ್ನು ನಿಗ್ರಹಗೊಳಿಸಿದ್ದರು. ಹೊಸದಾಗಿ ಅವರಿಂದ ಪರಿಷ್ಕರಿಸಲ್ಪಟ್ಟ ಶ್ರೀಚಕ್ರ ಈಗ ಎಲ್ಲ ಸಾಮಾನ್ಯ ಜನರಿಗೆ, ಸಾತ್ವಿಕರಿಗೆ, ಗೃಹಸ್ಥರಿಗೆ ಎಲ್ಲರಿಗೂ ಶುಭವನ್ನು ತರುವ ಮಂಗಳ ಯಂತ್ರವಾಗಿ ಹೋಗಿತ್ತು! ಹೀಗೆ ಸರ್ವ ಮಂಗಳೆಯಾದ ದೇವಿ ಆಟದ ನಿಯಮವನ್ನು ಪಾಲಿಸಿ ಶಂಕರರನ್ನು ಬಲಿ ತೆಗೆದುಕೊಳ್ಳುವುದು ಸಾಧ್ಯವೇ ಇರಲಿಲ್ಲ! ಅವಳು ಬಾಲಕ ಶಂಕರರ ತೀಕ್ಷ್ಣ ಬುದ್ದಿಗೆ ಹಾಗೂ ಅವರ ಸದುದ್ದೇಶಕ್ಕೆ ಮಣಿದಳು. ಅವರಿಬ್ಬರೂ ಸೇರಿಯೇ ಸುಂದರೇಶನನ್ನು ಪ್ರಾರ್ಥಿಸಿದರು. ಆಗ ಸುಂದರೇಶನು ಅಂದರೆ ಶಿವನು ಪ್ರತ್ಯಕ್ಷನಾಗಿ ಆದಿಶಂಕರರು ತನ್ನ ಅಂಶದಿಂದ ಜನಿಸಿದವರೆಂದು ಹೇಳಿ ಅವನನ್ನು ಹರಸಿ, ದೇವಿಗೆ ಆ ಬಾಲಕನಿಂದ ಮಾನವ ಕುಲಕ್ಕೆ ಆದ ಉಪಕಾರವನ್ನು ವಿವರಿಸಿದ.
ಇದೆಲ್ಲಾ ನಡೆಯುತ್ತಿದ್ದಂತೆಯೇ ಅರಮನೆಯಲ್ಲಿ ಇಡೀ ರಾತ್ರಿ ನಿದ್ರೆಯಿಲ್ಲದೆ ಬಾಲ ಸನ್ಯಾಸಿ ಎಲ್ಲ ದೇವಿಯ ಉಗ್ರರೂಪಕ್ಕೆ ಬಲಿಯಾಗಿ ಆತನ ಹತ್ಯೆಯ ಪಾಪ ತನಗೆ ಸುತ್ತಿಕೊಳ್ಳುವುದೋ ಎಂದು ತಳಮಳಕ್ಕೊಳಗಾಗಿದ್ದ ಪಾಂಡ್ಯರಾಜ ಬೆಳಗಾಗುವ ವೇಳೆಗೆ ಒಂದು ನಿರ್ಧಾರಕ್ಕೆ ಬಂದಿದ್ದ. ತನ್ನ ವಂಶದ ಪೂರ್ವಜರ ಗರ್ಭದಲ್ಲಿ ಜನಿಸಿ ಪಾಂಡ್ಯರಾಜತನಯೆ ಎಂದು ಪ್ರಖ್ಯಾತಳಾಗಿದ್ದು ಈಗ ತನಗೆ ಕುಲದೇವತೆಯಾಗಿದ್ದ ಮೀನಕ್ಷಿಗೆ ಬಾಲ ಸನ್ಯಾಸಿಯ ಸಾವಿಗೆ ಕಾರಣನಾದ ತನ್ನನ್ನೇ ತಾನು ಬಲಿಯಾಗಿ ಅರ್ಪಿಸಿಕೊಂಡು ಇನ್ನು ಮುಂದಾದರೂ ದೇವಿ ತನ್ನ ಕ್ರೂರ ಬೇಟಿಯನ್ನು ನಿಲ್ಲಿಸಬೇಕೆಂದು ಅವಳಲ್ಲಿ ಪ್ರಾರ್ಥಿಸಿಕೊಳ್ಳುವುದು!!
ಅಂತೆಯೇ ಅವನು ಉದಯವಾಯಿತೆಂದು ಸೂಚಿಸುವ ಮಂಗಳ ವಾದ್ಯಗಳು ಭೂಪಾಲ ರಾಗದಲ್ಲಿ ಮೊಳಗತೊಡಗಿದೊಡನೆಯೇ ಕೈಯ್ಯಲ್ಲಿ ಕತ್ತಿ ಹಿಡಿದು ತನ್ನ ಭೂಪಾಲ ರಾಗದಲ್ಲಿ ಮೊಳಗತೊಡಗಿದೊಡನೆಯೇ ಕೈಯ್ಯಲ್ಲಿ ಕತ್ತಿ ಹಿಡಿದು ತನ್ನ ಪರಿವಾರದೊಡನೆ ಮೀನಾಕ್ಷಿ ದೇವಾಲಯಕ್ಕೆ ಬಂದ ಅಲ್ಲಿ ಅವನು ಕಂಡದ್ದೇನು?
ಕಣ್ಣು ಮುಚ್ಚಿ ತನ್ಮಯರಾಗಿ ಭಕ್ತಿಯಿಂದ ಸ್ತೋತ್ರಗೈಯ್ಯತ್ತಿದ್ದ ಶಂಕರ ಹಾಗೂ ಅವನ ಎದುರಿಗೆ ಹಸನ್ಮುಖರಾಗಿ ಅವನನ್ನು ಹರಸುತ್ತಾ ನಿಂತಿದದ ಶಿವ ಶಿವೆಯರು ಜೊತೆಗೆ ಅವರಿಗೆ ಸ್ವಲ್ಪ ದೂರದಲ್ಲಿ ಹಿಂದಿನ ರಾತ್ರಿಯ ಮೂರು ಯಾಮಗಳಲ್ಲಿ ಶ್ರೀ ಶಂಕರರಿಂದ ರಚಿತವಾಗಿದ್ದು ಬಾಲ ಸೂರ್ಯನಂತೆ ಪ್ರಕಾಶಿಸುತ್ತಿದ್ದ ಶ್ರೀಚಕ್ರ ರೇಖಾಕೃತಿ!
ನಡೆದ ವಿಷಯವೆಲ್ಲಾ ತಿಳಿದಾಗ ಪಾಂಡ್ಯರಾಜನು ಸಂತೋಷ, ಉದ್ವೇಗ, ಶ್ರದ್ಧೆ ಭಕ್ತಿಗಳ ಮಿಶ್ರಭಾವದಿಂದ ಸಂದರೇಶ, ಮೀನಾಕ್ಷಿ ಹಾಗೂ ಸನ್ಯಾಸಿ ಶಂಕರರಿಗೆ ದೀರ್ಘದಂಡ ಪ್ರಣಾಮ ಮಾಡಿದ!
ಕೊನೆಗೆ ಆದದ್ದೆಲ್ಲಾ ಒಳಿತಕ್ಕೆ ಎನ್ನುವಂತೆ ಎಲ್ಲರ ಮನಸ್ಸಿಗೂ ನೆಮ್ಮದಿ ಶಾಂತಿ ದೊರೆತುದಲ್ಲದೆ ಎಲ್ಲ ಆಸ್ತಿಕ ವರ್ಗಕ್ಕೆ ತ್ರಿಕಾಲದಲ್ಲೂ ಶಂಕರರು ದೇವಿಯ ಕೃಪೆಗೆ ಪಾತ್ರರಾಗುವ ಶ್ರೀಚಕ್ರದಂತಹ ಅದ್ಭುತ ಯಂತ್ರ ಸಾಧನವನ್ನು ಕೊಡುಗೆಯಾಗಿ ನೀಡಿದ್ದರು!
ಈ ಕತೆಯಲ್ಲಿ ಉತ್ಪ್ರೇಕ್ಷೆಗಳು ಇರಬಹುದಾದರೂ ಪ್ರಸ್ತುತದಲ್ಲಿ ಪ್ರಚಲಿತವಿರುವ ಶ್ರೀಚಕ್ರ ಶ್ರೀ ಶಂಕರಾಚಾರ್ಯರಿಂದ ಪರಿಷ್ಕರಿಸಲ್ಪಟ್ಟುದೆಂದು ಹೇಳಲಾಗುತ್ತದೆ. ಇದರಲ್ಲಿ ಬಿಂದು, ತ್ರಿಕೋಣ, ಅಷ್ಟಕೋಣ, ದಶಾರ ಯುಗ್ಮ, ಚತುರ್ದಶಾರ, ನಾಗದಳ, ಷೋಡಶದಳ, ವೃತ್ತ ತ್ರಯವೂ ಭೂಪುರಗಳಿಂದ ಕೂಡಿದ ನವಾವರಣದ ಶ್ರೀ ಚಕ್ರವು ಇಹ ಪರಗಳಿಗೆ ಸಾಧನವೆನ್ನಿಸಿ ಇದೀಗ ಗೃಹಸ್ಥರಿಗೆ ಮತ್ತು ಸಾಧಕರಿಗೆ ಅತ್ಯಂತ ಆಪ್ಯಾಯಮಾನವಾದ ಉಪಾಸನಾ ಸಾಧನವಾಗಿದೆ!
ಹೀಗೆ ಶ್ರೀ ಶಂಕರಾಚಾರ್ಯರಿಂದ ಪರಿಷ್ಕರಿಸಲ್ಪಟ್ಟ ಶ್ರೀಚಕ್ರವು ಇತರ ಎಲ್ಲಾ ದೇವಿ ದೇವತಾ ಶಕ್ತಿಗಳ ಚಕ್ರಗಳಿಗೂ ಮಾತೃ ಬೇರಿನಂತಿದೆ. ಹಾಗಾಗಿ ಯಾವುದೇ ದೇವತೆಯ ಉಪಾಸನೆಯನ್ನು ಶ್ರೀಚಕ್ರದ ಮೂಲಕವೇ ಮಾಡಬಹುದಾಗಿದೆ.
ಶ್ರೀ ಶಂಕರಾಚಾರ್ಯರು ಇತರ ದೇವೀ ಕ್ಷೇತ್ರದ ಶಕ್ತಿ ಪೀಠಗಳನ್ನು ಸಂದರ್ಶಿಸಿ ಅಲ್ಲಿಯೂ ಆಯಾ ದೇವತಾ ಚಕ್ರದಲ್ಲಿದದ ಉಗ್ರ ಬೀಜಾಕ್ಷರಗಳನ್ನು ತೆಗೆದುಹಾಕಿ ಸತ್ವಪ್ರಧಾನವಾದ ಬೀಜಾಕ್ಷರಗಳನ್ನು ಅದರಲ್ಲಿ ಶಾಸ್ತ್ರಬದ್ದವಾಗಿ ಅಳವಡಿಸಿ ದೇವಿ ಚಕ್ರವನ್ನು ಎಲ್ಲ ವರ್ಗದ ಜನರಿಗೂ ಲಭಿಸುವಂತೆ ಉಪಾಸನಾ ಸಾಧನವಾಗಿ ಮಾಡಿದ್ದಾರೆ.
ಧುಮ್ಮಿಕ್ಕಿ ಭೋರ್ಗರೆದು ತನ್ನ ವೇಗ ಶಕ್ತಿಗೆ ಅಡ್ಡವಾಗಿ ತನ್ನೆದುರಿಗೆ ಬಂದ ಯಾವ ಜೀವಿಯನ್ನೂ ಬಿಡದೆ ಉಗ್ರವಾಗಿ ಆಪೋಶನ ತೆಗೆದುಕೊಳ್ಳುವ ಪ್ರವಾಹಕ್ಕೆ ಕಟ್ಟೆ ಹಾಕಿ ಅದರ ಪ್ರವಾಹದ ದಿಕ್ಕನ್ನು ಬದಲಿಸಿ ಒಳ್ಳೆಯ ಕಾರ್ಯಕ್ಕೆ ಅದು ಸಹಕಾರಿಯಾಗುವಂತೆ ಮಾಡಬಹುದು ತಾನೇ ಶ್ರೀ ಶಂಕರಾಚಾರ್ಯರು ಮಾಡಿದುದೂ ಅದನ್ನೇ! ಕ್ಷುದ್ರ ಸಾಧಕರಿಂದ ಅದುವರೆವಿಗೂ ಸ್ಥಾಪಿತವಾಗಿದ್ದ ಉಗ್ರ ಬೀಜಗಳಿಂದ ಆವಾಹಿತಳಾದ ದೇವಿ ಉಗ್ರ ಸ್ವರೂಪ ತಾಳಿ ಮದಘೂರ್ಣಿತ ರಕ್ಷಾಕ್ಷಿಯಾಗಿ ಪಾಂಡ್ಯರಾಜನ ಪ್ರಜೆಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದಳು. ಆದರೆ ಶ್ರೀ ಶಂಕರಾಚಾರ್ಯರು ಯುಕ್ತಿಯಿಂದ ಆ ಉಗ್ರ ಬೀಜಾಕ್ಷರಗಳನ್ನು ಬದಲಿಸಿ ಅವುಗಳ ಸ್ಥಾನದಲ್ಲಿ ಸಾತ್ವಿಕ ಬೀಜಾಕ್ಷರಗಳನ್ನು ಜೋಡಿಸಿ ದೇವಿಯನ್ನು ಬಿಂದು ಸ್ಥಾನದಲ್ಲಿ ನಿಲ್ಲಿಸಿ ಅವಳು ಉಗ್ರಶಕ್ತಿಗಳಿಗೆ ಮಣಿಯುವ ಬದಲಾಗಿ ಬಿಂದು ತರ್ಪಣ ಸಂತುಷ್ಟಳಾಗಿ, ಶ್ರದ್ಧೆಗಳಿಂದ ಆರಾಧಿಸುವವರ ಮನೋಕಾಮನೆಗಳನ್ನು ಕರುಣಿಸುವ ಕಾಮಧೇನು, ಕಲ್ಪವೃಕ್ಷವಾಗಿ ತನ್ನ ಮಂದಹಾಸದಿಮದ ಪತಿಯನ್ನು ಮುದಗೊಳಿಸುವ 'ಮಂದಸ್ಮಿತ ಪ್ರಭಾಪೂರ'ದಿಂದ ಕೂಡಿ ಶ್ರೀಚಕ್ರದಲ್ಲಿ ನೆಲೆಯಾಗುವಂತೆ ಮಾಡಿದ್ದರು.
Comments
Post a Comment