ಕಪಿಲಾ ನದಿಯ ಪೌರಾಣಿಕ ಹಿನ್ನೆಲೆ ಮತ್ತು ಉಗಮ

    ಕಪಿಲಾ ನದಿಯು ಕೇರಳದ ವೈನಾಡಿನ ಪಶ್ಚಿಮ ಘಟ್ಟಗಳಲ್ಲಿ ಜನ್ಮತಾಳುತ್ತದೆ. ಮಾನಂದವಾಡಿ ಮತ್ತು ಪಾನಮ್ರಪುಳಾ ಎಂಬ ಸ್ಥಳದಲ್ಲಿ ಎರಡು ಭಾಗವಾಗಿದೆ. ನಂತರ ಸಂಗಮವಾಗಿ ಕಾಕನಕೋಟೆಯ ನುಗು ನದಿಯನ್ನು, ನಂಜನಗೂಡಿನ ಬಳಿ(ಹುಲ್ಲಹಳ್ಳಿ) ಗುಂಡ್ಲುಹೊಳೆಯನ್ನು ಸೇರಿಕೊಳ್ಳುತ್ತದೆ. ಪುರಾಣ ಪ್ರಸಿದ್ಧವೂ, ಐತಿಹಾಸಿಕ ಹಿನ್ನೆಲೆಗಳಿಂದ ಕೂಡಿದ ನಂಜನಗೂಡು (ಗರಳಪುರಿ)ನಲ್ಲಿ ನಂಜುಂಡೇಶ್ವರ ಸನಿಹದಲ್ಲಿರುವ ಪರಮ ಪಾವನವಾದ ಮಣಿಕರ್ಣಿಕಾ ಸರೋವರದಿಂದ ಕೂಡಿ, ಮಾತೃವಧೆಯಿಂದ ಖಿನ್ನಗೊಂಡ ಭಾರ್ಗವನನ್ನು ಸಂತೈಸಿ, ಗೌತಮ ಮುನಿಯ ಆಶ್ರಮವನ್ನು ಸಂದರ್ಶಿಸಿ, ಮುಂದೆ ತಿರುಮಕೂಡಲಿನಲ್ಲಿ ಕಾವೇರಿಯಲ್ಲಿ ಸಂಗಮವಾಗುತ್ತದೆ. ಸಂಗಮದ ಪೂರ್ವಕ್ಕೆ ಸುತ್ತೂರು (ಪ್ರದಕ್ಷಿಣಪುರ)ವೆಂಬ ಸುಪ್ರಸಿದ್ಧ ಕ್ಷೇತ್ರವಿದೆ. ಇಲ್ಲಿ ರಾಜೇಂದ್ರ ಚೋಳರಿಂದ ಪ್ರತಿಷ್ಠಾಪಿಸಿಲ್ಪಟ್ಟ ಸೋಮೇಶ್ವರ ದೇವಾಲಯವಿದೆ. ಇಲ್ಲಿ ಮಹಾಮಹಿಮರೂ, ಪರಂಜ್ಯೋತಿಸ್ವರೂಪರೂ ಆದ ಶಿವರಾತ್ರೀಶ್ವರರು ಕಪಿಲಾ ನದಿಯ ಮಧ್ಯಭಾಗದಲ್ಲಿ ಬಂಡೆಯಲ್ಲಿ ಕುಳಿತು ತಪಗೈಯುತ್ತಿದ್ದರು. ಆಕಸ್ಮಿಕ ಪ್ರವಾಹ ಬಂದರೂ ಯತಿಗಳು ತಪೋಮಗ್ನರಾಗಿದ್ದರು. ಇವರ ತಪಸ್ಸಿನ ಪ್ರಭಾವಕ್ಕೆ ಕಪಿಲೆಯೇ ದೂರ ಸರಿದು ತಪಸ್ಸಿಗೆ ಭಂಗ ಬರದಂತೆ ಗಂಭೀರವಾಗಿ ಮುಂದೆ ಸಾಗಿತು. ಮಹಾಮಹಿಮರು ತಪಸ್ಸು ಮಾಡುತ್ತಿದ್ದ ಬಂಡೆ ಇಂದಿಗೂ "ಶಿವರಾತ್ರೀಶ್ವರಬಂಡೆ" ಎಂದೇ ಪ್ರಸಿದ್ಧವಾಗಿದೆ. ಯತಿಶ್ರೇಷ್ಠ್ರ ಗದ್ದಿಗೆಯು ನದಿಯ ಹತ್ತಿರದಲ್ಲೇ ಪ್ರವಿರಾಜಮಾನವಾಗಿದೆ. ಪ್ರತಿ ವರ್ಷವೂ ರಥೋತ್ಸವಾದಿ ಉತ್ಸವಗಳು ನಡೆಯುತ್ತಿವೆ. ಶ್ರೀಮಠಕ್ಕೆ ಮಲೆಮಹಾದೇಶ್ವರರು ಬಂದು ಕೈಂಕರ್ಯ ಸಲ್ಲಿಸಿದ್ದಾರೆ ಎಂಬ ಐತಿಹ್ಯವಿದೆ.
    ಸ್ಕಾಂದಪುರಾಣ ಕಥೆ - ಲೋಕ ಪ್ರಸಿದ್ಧವಾದ ಸಗರ ಚಕ್ರವರ್ತಿಯು ಅಯೋಧ್ಯೆಯಲ್ಲಿ ವೈಭವಯುತವಾಗಿ ರಾಜ್ಯವಾಳುತ್ತಿದ್ದನು. ಭೃಗುಮುನಿಯ ಅನುಗ್ರಹದಿಂದ ಹಿರಿಯ ಮಡದಿ ದೇಶಳಿಗೆ ಅಸಮಂಜಸನೆಂಬ ಮಗನು ಹುಟ್ಟಿದನು. ಕಿರಿಯ ಹೆಂಡತಿಯಾದ ಸುಮತಿಗೆ ಅರವತ್ತು ಸಾವಿರ ಮಂದಿ ಮಕ್ಕಳು ಜನಿಸಿದರು.
    ಸಗರ ಚಕ್ರವರ್ತಿಯು ವಸಿಷ್ಠಾದಿ ಮಹಾಮುನಿಗಳನ್ನು ಮತ್ತು ಮಂತ್ರಿಗಳನ್ನು ಬರಮಾಡಿಕೊಂಡು ಅಶ್ವಮೇಧಯಾಗವನ್ನು ಮಾಡಬೇಕಾದರೆ ಅದನ್ನು ಆಚರಿಸುವ ವಿಧಾನವನ್ನು ವಿವರಿಸಬೇಕೆಂದು ಪ್ರಾರ್ಥಿಸಿದನು. ಮಹಾಮುನಿ ವೃಂದವು ಅಶ್ವಮೇಧಯಾಗ ಮಾಡುವ ಕ್ರಮವನ್ನು ಚಕ್ರವರ್ತಿಗೆ ವಿವರಿಸಿದರು. ನಂತರ ಸಗರನು ಯಜ್ಞಾಶ್ವವನ್ನು ಭೂ ಪ್ರದಕ್ಷಿಣೆಗಾಗಿ ಬಿಟ್ಟು ಅದರ ರಕ್ಷಣೆಗಾಗಿ ತನ್ನ ಮಕ್ಕಳನ್ನು ಕಳುಹಿಸಿದನು. ಈ ವಿಷಯ ತಿಳಿದ ಇಂದ್ರನು ಸಗರನೇನಾದರೂ ಶತಾಶ್ವಮೇಧಿಯಾದ ಪಕ್ಷದಲ್ಲಿ ತನ್ನ ಇಂದ್ರ ಪದವಿಗೆ ಹಾನಿಯಾಗುವುದೆಂದು ತಿಳಿದು ವಿಜಯಯಾತ್ರೆಗಾಗಿ ಬಿಟ್ಟಿದ್ದ ಯಜ್ಞಾಶ್ವವನ್ನು ಕದ್ದು ಪಾತಾಳದಲ್ಲಿ ತಪಗೈಯುತ್ತಿದ್ದ ಕಪಿಲ ಮುನಿಯ ಹಿಂದೆ ಕಟ್ಟಿದನು. ಅಶ್ವ ರಕ್ಷಣೆಗೆ ಹೊರಟಿದ್ದ ಸಗರನ ಮಕ್ಕಳು ಅಶ್ವವನ್ನು ಕಾಣದೆ, ದುಃಖಿಸುತ್ತಾ ಪಾತಾಳಲೋಕದಲ್ಲಿಯಾದರೂ ಪತ್ತೆ ಮಾಡೋಣವೆಂದು ಭಾವಿಸಿ ಪಾತಾಳಲೋಕಕ್ಕೆ ಅಸ್ತ್ರಗಳ ಸಹಾಯದಿಂದು ಹೋದರು. ಅರಣ್ಯದಲ್ಲಿ ತಪಗೈಯುತ್ತಿದ್ದ ಕಪಿಲ ಮಹಾಮುನಿಯನ್ನು ನೊಡಿ, ಅವರ ಬೆನ್ನಹಿಂದೆ ಕಟ್ಟಿದ್ದ ತಮ್ಮ ಯಜ್ಞಾಶ್ವವನ್ನು ಕಂಡು ಈ ಮುನಿಯೇ ತಮ್ಮ ಯಜ್ಞಾಶ್ವವನ್ನು ಕದ್ದು ಇಲ್ಲಿ ತಪಸ್ಸನ್ನು ಆಚರಿಸುತ್ತಿದ್ದಾರೆಂದು ತಿಳಿದು ಆ ಮುನಿಯನ್ನು ಥಳಿಸತೊಡಗಿದರು. ತಪೋಭಗ್ನರಾದ ಕಪಿಲ ಋಷಿಯು ಕೋಪವಿಷ್ಠರಾಗಿ ಸಗರ ಪುತ್ರರನ್ನು ನೋಡಿದರು. ಮುನಿಯ ನೇತ್ರಗಳಿಂದ ಹೊರಟ ಅಗ್ನಿಜ್ಞಾಲೆಯಿಂದ ಅವರೆಲ್ಲರೂ ಕ್ಷಣಾರ್ಧದಲ್ಲಿ ಭಸ್ಮೀಭೂತರಾದರು. ಪಾತಾಳದಲ್ಲಿ ತಪಸ್ಸಿಗೆ ಭಂಗವಾಯಿತಲ್ಲ ಸುಖಾ ಸುಮ್ಮನೆ ನನ್ನಿಂದ ಇವರೆಲ್ಲಾ ಹತರಾದರಲ್ಲಾ ಎಂದು ಚಿಂತಿಸುತ್ತಾ ಭೂಲೋಕಕ್ಕೆ ಬಂದು ಯೋಗ್ಯವಾದ ಸ್ಥಳವನ್ನು ಹುಕುಕಿ ನೀಲಾದ್ರಿ ಸಮೀಪ ತಪಗೈಯುತ್ತಿದ್ದರು. ಇವರ ಕಠಿಣ ತಪಸ್ಸಿಗೆ ಮೆಚ್ಚಿದ ಪರಶಿವನು ತನ್ನ ಪರಿವಾರದೊಡನೆ ಬಂದು ಮುನಿಯನ್ನು ಸಂತೈಸಿದನು. ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ ನಿನಗೆ ಬೇಕಾದ ವರ ಯಾವುದು? ಎಂದು ಕೇಳಿದನು. ಮುನಿಯು ತನ್ನ ಪೂರ್ವ ವೃತ್ತಾಂತವನ್ನು ನಿವೇದಿಸುತ್ತಿರುವಾಗ ಶಿವನು ಮಧ್ಯ ಪ್ರವೇಶಿಸಿ ವಿಷ್ಣುವಾದ ನೀನು ಲಲೋಕಾನುಗ್ರಹಕ್ಕಾಗಿ ಈಗ ಕಪಿಲನಾಗಿರುವೆ. ನಿನ್ನ ವಿಷಯವನ್ನು ತಿಳಿಯದ ಸಗರ ಪುತ್ರರು ನಾಶಹೊಂದಿದರು. ಆ ಪಾಪವು ನಿನಗಲ್ಲ. ನೀನು ಅಂತರ್ಮುಖಿಯಾಗಿ ನಿನ್ನ ಸ್ವರೂಪವನ್ನು ಅನುಸಂಧಾನ ಮಾಡುವುದಾದರೆ  ನಿನ್ನ ಬ್ರಹ್ಮರಂಧ್ರದಲ್ಲಿರುವ ಅಮೃತವು ಹೊರಬರುವುದು ಆ ಅಮೃತ ಸೇಚನದಿಂದ 'ತುಲಸೀ' ನದಿಯು ಉದ್ಭವಿಸಿ 'ಕಪಿಲಾ' ಎಂಬ ನಿನ್ನ ನಾಮದಿಂದೇ ಪ್ರವಹಿಸುತ್ತಾ ಕಾವೇರಿ ನದಿಗೆ, ಬ್ರಹ್ಮ ನಿರ್ಮಿತ ಅಂತರ್ಗತವಾದ ಸ್ಫಟಿಕ ಸರೋವರದ ಸಮೀಪದಲ್ಲಿ ಸಂಗಮವಾಗುವೆ. ಅಲ್ಲಿಯೇ ನಾನು ವಾಸ ಮಾಡುವೆನೆಂದು ಹೇಳಿ ಮಾಯವಾದನು.
    ಶಿವನ ವಾಣಿಯಿಂದ ಸಂತೋಷಗೊಂಡ ಮುನಿಯು ಆತ್ಮಧ್ಯಾನ ನಿರತನಾದನು. ಆಗ ಅವನ ಬ್ರಹ್ಮರಂಧ್ರದಿಂದ ಅಮೃತವು ಉಕ್ಕಿ ಹರಿದು ತುಲಸೀ ಗಿಡವಾಗಿ ಪರಿಣಮಿಸಿತು. ಅದರ ಮೂಲದಲ್ಲಿ ಶಿವನ ಅಣತಿಯಂತೆ ಕಪಿಲಾ ನದಿಯು ಉತ್ಪತ್ತಿಯಾಗಿ ಹರಿಯತೊಡಗಿತು. ಸಕಲರ ಪಾಪಪರಿಹಾರಕವಾಗಿ ಕಾವೇರಿಯೊಡನೆ ಸಂಗಮವಾಗಲು ಆತುರಾತುರದಿಂದ ಹರಿಯತೊಡಗಿತು. ಈ ನದಿಯಲ್ಲಿ ಮಿಂದು ಶ್ರೀಕಂಠನನ್ನು ಸಂದರ್ಶಿಸಿದವರಿಗೆ ಸಕಲ ಪಾಪಗಳು ಪರಿಹಾರವಾಗುವುವು. ಕಪಿಲಾ ಜಲಪಾನದಿಂದ ಅಂತರ್ಯದೋಷ ನಿವಾರಣೆ, ತರ್ಪಣಾದಿಗಳಿಂದ ಪಿತೃವರ್ಗವೂ ಸಂತೋಷ ಹೊಂದಿ ಉತ್ತಮ ಪದವಿ ಲಭ್ಯವಾಗುವುವು.
    ಪೂರ್ವದಲ್ಲಿ ಶ್ರೀರಾಮಚಂದ್ರನು ಸೀತಾ ಲಕ್ಷ್ಮಣರೊಡಗೂಡಿ ವನವಾಸಕ್ಕೆ ತೆರಳಿದನು. ದುಷ್ಟನಾದ ರಾವಣನು ಸೀತಾ ದೇವಿಯನ್ನು ಅಪಹರಿಸಿದನು. ಸೀತಾನ್ವೇಷಣೆಗಾಗಿ ಲಕ್ಷ್ಮಣ ಸಮೇತ ಶ್ರೀರಾಮನು ಲಂಕೆಗೆ ಹೋಗುವ ಮಾರ್ಗಮಧ್ಯದಲ್ಲಿ ರಾವಣನ ವಿಷಯ ತಿಳಿಯಿತು. ಅವನ ಸಂಹಾರಕ್ಕಾಗಿ ಲಂಕೆಗೆ ಹೋಗುವ ಸಮಯದಲ್ಲಿ ಕಪಿಲಾ ನದಿಯಲ್ಲಿ ಸ್ನಾನಮಾಡಿ ಹನುಮಂತ ಮೊದಲಾದ ಕಪಿ ವೀರರೊಡಗೂಡಿ ಸಮುದ್ರಕ್ಕೆ ಸೇತುವೆ ನಿರ್ಮಿಸಿ ರಾವಣನ ಸಂಹಾರಮಾಡಿ, ವಿಭೀಷಣನಿಗೆ ರಾಜ್ಯಾಭಿಷೇಕವಿತ್ತನು. ರಾಮನು ಸಪರಿವಾರನಾಗಿ ಪುಷ್ಪಕವಿಮಾನದಲ್ಲಿ ಹೋಗುತ್ತಿರುವಾಗ ಕಪಿಲಾಶ್ರಮಕ್ಕೆ ಬಂದನು. ಮುನಿಗಳ ಅತಿಥ್ಯ ಸ್ಪೀಕರಿಸಿದನು.
    ಅನತಿ ದೂರದಲ್ಲಿರುವ ಕಪಿಲಾ-ಕಾವೇರಿ ಮತ್ತು ಗುಪ್ತಗಾಮಿನಿಯಾದ ಸ್ಪಟಿಕ ಸರೋವರಗಳ ತ್ರಿವೇಣಿ ಸಂಗಮವನ್ನು ಸ್ಮರಿಸಿದನು. ಪವಿತ್ರ ಸ್ನಾನ ಮಾಡಿದನು. ಅಗಸ್ತ್ಯಾಶ್ರಮಕ್ಕೆ ಸರ್ವರೂ ತೆರಳಿ ಮಹರ್ಷಿಯ ಆಶೀರ್ವಾದ ಪಡೆದರು. ಅಗಸ್ತ್ಯರ ಅಪ್ಪಣೆ ಮೇರೆಗೆ ಈ ಸಂಗಮದಲ್ಲಿ ಅಷ್ಟದಳ ಕೇಂದ್ರ ಬಿಂದುವಾದ ಕರ್ಣಿಕಾರೂಪನಾದ ಶಿವಲಿಂಗವನ್ನು ಸ್ಥಾಪಿಸಲು ಉದ್ಯುಕ್ತರಾದರು, ಪ್ರತಿಷ್ಠೆಗೆ ಬೇಕಾದ ದ್ರವ್ಯಾದಿಗಳನ್ನು ಸಂಗ್ರಹಿಸಲು ಲಕ್ಷ್ಮಣನಿಗೆ ಆಜ್ಞಾಪಿಸಿದನು. ಶಿವಲಿಂಗವನ್ನು ತರಲು ಹನುಮಂತ ಬಾರದಿರುವುದನ್ನು ತಿಳಿದು ಸೈಕತ (ಮರಳು) ಲಿಂಗವನ್ನು ತಾವೇ ಮಾಡಿ ಪ್ರತಿಷ್ಠಾಪಿಸಿಯೇ ಬಿಟ್ಟರು. ಕೂಡಲೇ ಹನುಮಂತನು ವಾಯುವೇಗದಿಂದ ಲಿಂಗಸಮೇತನಾಗಿ ಬಂದನು. ಅಷ್ಟರಲ್ಲಿ ಪ್ರತಿಷ್ಠೆ ಮುಗಿದಿತ್ತು. ವ್ಯಸನಾಕ್ರಾಂತನಾಗಿ ಆ ಶಿವಲಿಂಗವನ್ನು ಮುಷ್ಟಿಯಲ್ಲಿ ಗುದ್ದಿದನು. ಭಿನ್ನವಾಗಲಿಲ್ಲ, ಸ್ವಲ್ಪ ಮುಡಿಯಲ್ಲಿ ಬಿರುಕು ಬಿಟ್ಟಿತು. ಕೂಡಲೇ ಕಾವೇರಿ ಜಲರೂಪದಲ್ಲಿ ಕಾಣಿಸಿಕೊಂಡಳು. ಇಂದಿಗೂ ಸಹ ತೀರ್ಥರೂಪದಲ್ಲಿ ಆ ಜಲವನ್ನು ನೀಡುತ್ತಾರೆ. ಋಷಿ ಮತ್ತು ರಾಮನು ಮಾರುತಿಯನ್ನು ಸಂತೈಸಿ ಅವನು ತಂದಂತಹ ಲಿಂಗವನ್ನು ಅನತಿ ದೂರದಲ್ಲಿ ಸ್ಥಾಪಿಸಿ ಹನುಮಂತೇಶ್ವರ ಎಂದು ಪ್ರಚುರಪಡಿಸಿ ದರ್ಶನ ಪಡೆದವರಿಗೆ ಇಷ್ಟಾರ್ಥ ಸಿದ್ಧಿಯಾಗಲೆಂದು ಹರಸಿದರು.
    ರಾಮನು ಇದೊಂದು ಸುಕ್ಷೇತ್ರವೆಂದ ತಿಳಿದು, ಈ ದಕ್ಷಿಣ ಪ್ರಯಾಗ ಹಾಗೂ ರುದ್ರ ಪುಷ್ಕರಿಣಿ ತೀರ್ಥವಿರುವುದನ್ನು ಗಮನಿಸಿ ಯಾಗಮಾಡಲು ಬ್ರಹ್ಮನನ್ನು ಸ್ಮರಿಸಿದನು. ಅವನು ಅಪೇಕ್ಷೇಯಂತೆ ಕಪಿಲಲ ಮತ್ತು ಅಗಸ್ತ್ಯ ಋಷಿಗಳ ನೇತೃತ್ವದಲ್ಲಿ ಯಜ್ಞ ಮಾಡಿ ಋಷಿಗಳಿಗೆ
ಆರ್ತರಿಗೆ ದಾನಾದಿಗಳನ್ನು ಮಾಡಿ ಬ್ರಹ್ಮ ಮತ್ತು ಋಷಿಗಳ ಅಪ್ಪಣೆ ಪಡೆದು ಅಯೋಧ್ಯಾಭಿಮುಖವಾಗಿ ತೆರಳಿದನು.
    ಕಪಿಲಾ ನದಿಯು ಹರಿಯುವ ಪ್ರದೇಶ ಅನೇಕ ಪೌರಾಣಿಕ ಹಿನ್ನೆಲೆಗಳಿಂದ ಪ್ರಸಿದ್ಧವಾಗಿದೆ. ತನ್ನ ಎಡಬಲಗಳಲ್ಲಿ ಪುಣ್ಯಕ್ಷೇತ್ರಗಳನ್ನು ಹೊಂದಿದೆ. ಸಂತಮದ ನಂತರ ಶೈವ, ವೈಷ್ಣವ ಕ್ಷೇತ್ರಗಳ ಮಹಾಪೂರವೇ ಇದೆ.


81 #ಹಾವೆಂದೀ_FB2019
#ಆತ್ರೇಯಾಗ್ನಿನೇತ್ರಾ

Deepak H V

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ