ರಾಮನಾಮ

ಕಲ್ಯಾಣಾನಾಂ ನಿಧಾನಂ ಕಲಿಮಲಮಥನಂ ಪಾವನಂ ಪಾವನಾನಾಂ |
ಪಾಥೇಯಂ ಯನ್ಮುಮುಕ್ಷೋಃ ಸಪದಿ ಪರಪದಪ್ರಾಪ್ತಯೇ ಪ್ರಸ್ಥಿತಸ್ಯ ||
ವಿಶ್ರಾಮಸ್ಥಾನಮೇಕಂ ಕವಿವರವಚಸಾಂ ಜೀವನಂ ಸಜ್ಜನಾನಾಂ |
ಬೀಜಂ ಧರ್ಮದ್ರುಮಸ್ಯ ಪ್ರಭವತು ಭವತಾಂ ಭೂತಯೇ ರಾಮನಾಮ ||

    ಈ ಶ್ಲೋಕದಲ್ಲಿ ರಾಮನಾಮದ ಮಹಿಮೆಯನ್ನು ಕೊಂಡಾಡಿರುತ್ತದೆಯೆಂಬ ಕಾರಣದಿಂದ ಅನೇಕರು ಭಜನೆಯಲ್ಲಿಯೂ ಹರಿಕೀರ್ತನೆಯಲ್ಲಿಯೂ ಇದನ್ನು ಮೊದಲು ಹೇಳುವ ಪದ್ಧತಿಯನ್ನಿಟ್ಟುಕೊಂಡಿದ್ದಾರೆ ಆದ್ದರಿಂದ ಇಲ್ಲಿರುವ ಒಂದೊಂದು ವಿಶೇಷಣದ ಅಭಿಪ್ರಾಯವನ್ನೂ ಮನಸ್ಸಿಗೆ ಹತ್ತಿಸಿಕೊಳ್ಳುವುದು ನಾಮಸ್ಮರಣೆಯ ಅಥವಾ ನಾಮಕೀರ್ತನೆಯ ಕಾಲಕ್ಕೆ ಆನಂದವನ್ನನುಭವಿಸುವದಕ್ಕೆ ಉತ್ತಮ ಸಾಧನವಾಗಿರುವದು.

    ಕಲ್ಯಾಣಾನಾಂ ನಿಧಾನಮ್ : ಶ್ರೀರಾಮನಾಮವು ಕಲ್ಯಾಣಗಳ ನಿಕ್ಷೇಪವು ತನ್ನ ಹಣವು ಸಮಯಕ್ಕೆ ಬರುವದೆಂದು ಹಿಂದಿನ ಕಾಲದಲ್ಲಿ ಅದನ್ನು ನೆಲದಲ್ಲಿ ಹೊಳಿಡುತ್ತಿದ್ದರು; ಈಗಿನ ಕಾಲದಲ್ಲಿ ಇದೇ ಉದ್ದೇಶದಿಂದ ಬ್ಯಾಂಕುಗಳಲ್ಲಿ ಹಣವನ್ನು ನ್ಯಾಸವಾಗಿ (ಡಿಪಾಸಿಟ್) ಇಟ್ಟಿರುತ್ತಾರೆ ಇದಕ್ಕೆ ನಿಕ್ಷೇಪವೆಂದು ಹೆಸರು ಮತ್ತೆ ಕೆಲವರಿಗೆ ತಾವೇನೋ ಹಣವನ್ನು ಕೂಡಿಟ್ಟಿಲ್ಲವಾದರೂ ನಿಧಿಶಾಸ್ತ್ರಜ್ಞನು ಹೇಳಿಕೊಟ್ಟ ಅಂಜನವನ್ನು ಕಣ್ಣಿಗೆ ಹಾಕಿಕೊಂಡು ನೋಡಿದಾಗ ಭೂಮಿಯಲ್ಲಿ ಯಾರೋ ಹಳೆಯಕಾಲದಲ್ಲಿ ಹೂತಿಟ್ಟಿದ್ದ ನಿಕ್ಷೇಪಗಳು ಕಾಣಿಸಿಕೊಳ್ಳುವವೆಂಬ ನಂಬಿಕೆಯಿದೆ. ಈ ಶ್ಲೋಕಭಾಗದಲ್ಲಿರುವ 'ನಿಧಾನ'ವೆಂ ಶಬ್ಧಕ್ಕೆ ಇಷ್ಟು ಅರ್ಥವನ್ನೂ ಇಟ್ಟುಕೊಳ್ಳಬಹುದು. ಸದ್ಗುರುವಾದವನು ಕೊಟ್ಟ ಅಂಜನರೂಪಸದುಪದೇಶಪೂರ್ವಕವಾದ ದೃಷ್ಟಿಯಿಂದ ನೋಡುವಾತನಿಗೆ ಶ್ರೀರಾಮನಾಮವು ಎಲ್ಲಾ ಬಗೆಯ ಕಲ್ಯಾಣಗಳ ನಿಕ್ಷೇಪವೂ ಆಗಿರುತ್ತದೆ. ಏಕೆಂದರೆ ಈ ಲಕದಲ್ಲಿಯೂ ಪರಲೋಕದಲ್ಲಿಯೂ ಆಗಬೇಕಾದ ಏಳಿಗೆಗಳಿಗೂ ಕೊನೆಯಲ್ಲಿ ಪರಮಕಲ್ಯಾಣರೂಪವಾದ ಮೋಕ್ಷಕ್ಕೂ ಇದೇ ಮೂಲವಾಗಿರುತ್ತದೆ.


    ಕಲಿಮಲಮಥನಮ್ : ಕಲಿಯುಗದ ಕಲ್ಮಷವು ಅತ್ಯುಗ್ರವಾಗಿರುತ್ತದೆ. ಈ ಯುಗದಲ್ಲಿ ಎಂಥ ಸತ್ಕ್ಷೇತ್ರದಲ್ಲಿ ವಾಸವಾಗಿದದರೂ ಎಂಥ ಸತ್ಕರ್ಮವನ್ನು ಅನುಷ್ಠಾನಮಾಡುತ್ತಿದ್ದರೂ ಕಾಮ, ಕ್ರೋಧ, ಲೋಭ, ಮೋಹ ಮುಂತಾದ ಕಲ್ಮಷಗಳು ಅಂಟಿಕೊಳ್ಳದೆ ಇರುವದಿಲ್ಲ ಆದರೆ ರಾಮನಾಮದಲ್ಲಿರುವ ಹೆಚ್ಚಿನ ಮಹಿಮೆಯು ಎಂಥದ್ದೆಂದರೆ ಅದು ಪರಿಹಾರಮಾಡಬಲ್ಲಷ್ಟು ಪಾಪವನ್ನು ಮಾಡುವದೇ ಮನುಷ್ಯನಿಂದ ಆಗುವ ಹಾಗಿಲ್ಲ ಸೂರ್ಯೋದಯವಾಗುತ್ತಲೂ ಕತ್ತಲೆಯು ಹೇಗೆ ತೊಲಗುವದೋ ಹಾಗೆ ರಾಮನಾಮದ ಉಚ್ಚಾರಣೆಯಿಂದಲೇ ಅನೇಕ ಪಾಪಗಳು ಲಯವಾಗುವವು. ಇನ್ನು ಅದರ ಸ್ಮರಣೆಯಿಂದ ಹೋಗದೆ ಇರುವ ಪಾಪಗಳು ಎಲ್ಲಿಂದ ಬರಬೇಕು? ನಿಜವಾಗಿಯೂ ಇದೊಂದು ಅಮೂಲ್ಯವಾದ ಸರ್ವಪ್ರಾಯಶ್ಚಿತವಾಗಿರುವದು.

    ಪಾವನಂ ಪಾವನಾನಾಮ್ : ಶ್ರೀರಾಮನಾಮವು ಪಾಪಗಳನ್ನು ತೊಲಗಿಸಿ ಜನರನ್ನು ಅಲ್ಲಿಗೇ ಬಿಡುವದಿಲ್ಲ; ಅದು ಅವರನ್ನು ಪರಿಶುದ್ಧಿಗೊಳಿಸಿಬಿಡುತ್ತದೆ. ವಾಲ್ಮೀಕಿ, ಗುಹ, ಅಹಲ್ಯೆ- ಮುಂತಾದವರು ತಮ್ಮ ಹಿಂದಿನ ಜೀವಿತಭಾಗದಲ್ಲಿ ಅತ್ಯಂತ ಘೋರವಾದ ಪಾಪಗಳನ್ನು ಮಾಡುತ್ತಿದ್ದರಾದರೂ ಶ್ರೀರಾಮನಾಮಸ್ಮರಣೆಯ ಪ್ರಭಾವದಿಂದ ಅವರು ಸಂಪೂರ್ಣವಾಗಿ ನಿಷ್ಟಾಪರಾದದ್ದಲ್ಲದೆ ಜಗತ್ಪೂಜ್ಯವಾದ ಸ್ಥಾನವನ್ನು ಪಡೆದರು. ವಾಲ್ಮೀಕಿಯು ಋಷಿಯಾಗಿ ಬರೆದಿರುವ ರಾಮಾಯಣದ ಪಾರಾಯಣವು ಈಗಲೂ ಜನರಿಗೆ ಇಹಪರಕಲ್ಯಾಣಗಳನ್ನು ಕೊಡುತ್ತಿದೆ; ಗುಹನೂ ಅಹಲ್ಯೆಯೂ ಈಗಲೂ ಜನರ ಪ್ರಾತಃಸ್ಮರಣೆಗೆ ಪಾತ್ರರಾಗಿರುತ್ತಾರೆ. ಇಷ್ಟೇ ಅಲ್ಲ ಯಾರು ತಮ್ಮ ಸಚ್ಚರಿತ್ರೆಯಿಂದ ಪವಿತ್ರರೆನಿಸಿಕೊಂಡಿದ್ದರೋ ಅಂಥ ವಿಶ್ವಾಮಿತ್ರ, ಭಾರದ್ವಾಜ, ಸುತೀಕ್ಷ್ಣ, ಅಗಸ್ತ್ಯ ಮುಂತಾದವರೆಲ್ಲರೂ ಶ್ರೀರಾಮನಾಮಸ್ಮರಣೆಯಿಂದ ಆತನ ದರ್ಶನಲಾಭವನ್ನೂ ಸೇವಾಸೌಭಾಗ್ಯವನ್ನು ಪಡೆದು ಮತ್ತೂ ಪವಿತ್ರತಮರಾಗಿರುತ್ತಾರೆ. ಸ್ನಾನಮಾತ್ರದಿಂ ಜನರ ಪಾಪವನ್ನು ಕಳೆಯುವ ಸಮುದ್ರರಾಜನು ಶ್ರೀರಾಮನಾಮಸ್ಮರಣದಿಂದ ಅಂಜನೇಯನೇ ಮುಂತಾದವರು ಕಟ್ಟಿದ ಸೇತುವಿನಿಂದ ಪರಮಪಾವನನೆನಿಸಿಕೊಂಡನು ಆದ್ದರಿಂದ ಶ್ರೀರಾಮನಾಮವನ್ನು ಭಕ್ತಿಯಿಂದ ಉಚ್ಚರಿಸುವಾತನು ತ್ರಿಸುಪರ್ಣಾದಿಗಳನ್ನು ನಿತ್ಯವೂ ಪಠಿಸುವ ಪಙ್ಕ್ತೆಪಾವನರನ್ನೂ ಪಾವನಗೊಳಿಸುವ ಅದ್ಭುತಮಹಿಮೆಯುಳ್ಳವನಾಗುವನು.

    ಪಾಥೇಯಂ ಯನ್ಮುಮುಕ್ಷೋಃ ಸಪ್ತದಿ ಪರಪದಪ್ರಾಪ್ತಯೇ ಪ್ರಸ್ಥಿತಸ್ಯ : ಶ್ರೀರಾಮನಾಮದ ಮಹಿಮೆಯು ಇಲ್ಲಿಗೆ ಮುಗಿಯುವಂತಿಲ್ಲ ಏಕೆಂದರೆ ಪಾಪವನ್ನು ಕಳೆದು ಪರಿಶುದ್ಧಿಯನ್ನು ಕೊಟ್ಟಮೇಲೂ ಜನರು ಮತ್ತೆ ಹಳೆಯ ಹಾದಿಗೆ ಬಿದ್ದಾರೆಂದು ಅವರನ್ನು ಕಾಪಾಡುವದಕ್ಕೆ ಅದು ಯಾವಾಗಲೂ ಸಿದ್ಧವಾಗಿರುವದು ಯಾರು ಸಂಸಾರಬಂಧದಿಂದ ಬಿಡುಗಡೆಯನ್ನು ಹೊಂದಬೇಕೆಂದು ತವಕಿಸುತ್ತಿರುವರೋ ಅವರಿಗೆ ಶ್ರೀರಾಮನಾಮವು ಅವಶ್ಯವಾಗಿ ಇರಬೇಕು ದೇಹವನ್ನು ಬಿಟ್ಟು ಕಲಾಂತರದಲ್ಲಿ ಮುಕ್ತಿಯನ್ನು ಹೊಂದಬೇಕೆನ್ನುವವನ ಮಾತು ಹಾಗಿರಲಿ ಇಲ್ಲಿಯೇ ಪರಮಪದವಿಯನ್ನು ಹೊಂದಬೇಕೆಂಬ ಉತ್ಕಟೇಚ್ಛೆಯ ಮಾರ್ಗದಲ್ಲಿ ಹೊರಟಿರುವ ಮುಮುಕ್ಷುಗಳಿಗೆ ಇದು ಮಾರ್ಗದಲ್ಲಿ ಆಯಾಸ ಪರಿಹಾರಕ್ಕೆಂದು ಕಟ್ಟಿಟ್ಟುಕೊಂಡ ಬುತ್ತಿಯಂತಿರುವದು ಏಕೆಂದರೆ ಚಿತ್ತಶುದ್ಧಿಪೂರ್ವಕವಾಗಿ ಭಕ್ತಿಯಿಂದ ಕೀರ್ತನಮಾಡಿದ ನಾಮವು ಸಾಧಕನನ್ನು ಕೂಡಲೆ ಪರಮಾಮೃತದ ಮಡುವಿನಲ್ಲಿ ಅದ್ದಿಬಿಡುತ್ತದೆ.

    ವಿಶ್ರಾಮಸ್ಥಾನಮೇಕಂ ಕವಿವರವಚಸಾಮ್ : ಈ ರಾಮನಾಮದ ಮಹಿಮೆಯನ್ನು ನಾವು ಎಷ್ಟೆಂದು ವರ್ಣಿಸುವದಕ್ಕೆ ಆದೀತು? ಭಾಷೆಯಲ್ಲಿರುವ ಉತ್ತಮವಿಶೇಷಣಗಳನ್ನು ನೆನಸಿಕೊಂಡ ಮಾತ್ರದಿಂದ ವಶಪಡಿಸಿಕೊಳ್ಳಬಲ್ಲ ಕವೀಶ್ವರರಿಂದಲೂ ಇದನ್ನು ವರ್ಣಿಸಿ ಮುಗಿಸುವದು ಆಗುವಹಾಗಿಲ್ಲ ಏಕೆಂದರೆ ಶ್ರೀರಾಮಚಂದ್ರನ ಸಗುಣಮೂರ್ತಿಯ ಗುಣಗಣಗಳನ್ನು ವರ್ಣಿಸುವದಕದಕೆಂದು ಶತಕೋಟಿರಾಮಾಯಣವನ್ನು ಬರೆದರೂ ವಾಲ್ಮೀಕಿಯೇ ಮುಂತಾದ ಕವಿಗಳು ತಮ್ಮಿಂದಾಗದೆಂದು ಸುಮ್ಮನಾಗಿರುತ್ತರೆ. ಇನ್ನು ಆ ಪರಮಾತ್ಮನ ನಿರ್ಗುಣಸ್ವರೂಪವಂತೂ ಮನೋವಾಕ್ಕುಗಳಿಗೆ ಅಗೋಚರವಾದದ್ದು ಅಂಥ ಸ್ವರೂಫವೇ ಈ ರಾಮನಾಮಕ್ಕೆ ಲಕ್ಷ್ಯಾರ್ಥವಾಗಿರುತ್ತದೆ ಅದನ್ನು ಯಾವ ಕವಿಯು ತಾನೆ ಹೇಗೆ ವರ್ಣಿಸಿಯಾನು ?

    ಜೀವನಂ ಸಜ್ಜನಾನಾಮ್ : ಹೀಗಿರುವದರಿಂದ ಸತ್ಪುರುಷರು ಈ ರಾಮನಾಮವನ್ನೇ ತಮ್ಮ ಜೀವನವಾಗಿ ಮಾಡಿಕೊಂಡಿರುತ್ತಾರೆ ಮನುಷ್ಯರು ಕುಡಿಯುವ ನೀರಿಲ್ಲದೆ ಕೆಲವು ದಿನಗಳು ಬದುಕಿದ್ದರೂ ಬದುಕಿರಬಹುದು ಯೋಗಿಗಳು ವಾಯ್ವಾಹಾರವಿಲ್ಲದೆ ಕೆಲವು ದಿನಗಳು ಬದುಕಿದ್ದರೂ ಬದುಕಿರಬಹುದು ಆದರೆ ಈ ರಾಮನಾಮವಿಲ್ಲದೆ ಸಜ್ಜನರು ಅರ್ಧಕ್ಣಣವೂ ಜೀವಿಸಲಾರರು. ಪರಮಾರ್ಥ ಸದ್ರೂಪನಾಗಿರುವದೇ ಶ್ರೀರಾಮನ ಸ್ವರೂಪವು; ಅದು ನಮ್ಮೆಲ್ಲರಿಗೂ ಜೀವನದ ಜೀವನವಾಗಿರುತ್ತದೆ ಸಜ್ಜನರೆಂದರೆ ಇಂಥ ಸದ್ರೂಪದಲ್ಲಿಯೇ ತಮ್ಮ ಚಿತ್ತವನ್ನು ಹೊಂದಿಸಿಕೊಂಡು ಜೀವಿಸುವವರು ಶ್ರೀರಾಮನ ಸ್ವರೂಪದಲ್ಲಿರುವ ರಾಮಣ್ಯಕವು ಎಂಥದ್ದೆಂದರೆ ಮಿಕ್ಕದ್ದೆಲ್ಲವನ್ನೂ ತ್ಯಜಿಸಿರುವ ಮಹಾ ಮಹಾಯೋಗಿಗಳು ಕೂಡ ಒಂದು ಸಲ ಇದನ್ನು ಕಂಡಮೇಲೆ ಇದರ ರತಿಯನ್ನು ಬಿಟ್ಟಿರಲಾರರು; ಆದ್ದರಿಂದಲೇ ಆತನಿಗೆ ರಾಮನೆಂಬ ಅನ್ವರ್ಥವಾದ ಹೆಸರಿರುತ್ತದೆ. ಆ ಸ್ರರೂಪಕ್ಕಿಂತ ಬೇರೆಯಾಗಿ ಒಂದು ಹೆಸರಿರುವದೆನ್ನುವದಕ್ಕಿಂತಲೂ ಆ ಸ್ವರೂಪದ ಬಹಿಮೂರ್ತಿಯೇ ರಾಮನಾಮವೆನ್ನುವದು ಸಜ್ಜನರಿಗೆ ಹೆಚ್ಚು ಒಪ್ಪಾಗಿರುತ್ತದೆ. ಇಂಥ ರಾಮನಾಮವನ್ನು ಬಿಡುವದೆಂದರೆ ಸಜ್ಜನರಿಗೆ ತಮ್ಮ ಜೀವನವನ್ನೇ ತೊರೆದಂತೆ ಎನಿಸುತ್ತದೆ.

    ಬೀಜಂ ಧರ್ಮದ್ರುಮಸ್ಯ : ಧರ್ಮವೆಂದರೆ ಮಾಡಬೇಕಾದದ್ದು, ಬಿಡಬೇಕಾದದ್ದು ಎಂಬ ಎರಡು ರೂಪದಲ್ಲಿರುವ ಶಾಸ್ತ್ರೀಯಕ್ರಿಯಾವಿಶೇಷವು ಆದರೆ ಎಲ್ಲರಿಗೂ ಶಾಸ್ತ್ರಾರ್ಥವನ್ನು ತಿಳಿದುಕೊಂಡು ಈ ಪ್ರವೃತ್ತಿನಿವೃತ್ತಿಗಳನ್ನು ಅನುಸರಿಸುವದು ಸಾಧ್ಯವಲ್ಲ ಶ್ರದ್ಧಾಪುರಸ್ಸರವಾಗಿ ಯಾರು ಶ್ರೀರಾಮನಾಮವನ್ನು ಉಚ್ಚರಿಸುವದಕ್ಕೆ ಮೊದಲು ಮಾಡುವರೋ ಅವರು ಉಭಯರೂಪವಾದ ಧರ್ಮವೃಕ್ಷದ ಬೀಜವನ್ನು ಬಿತ್ತಿದಂತಾಗುವದು. ಏಕೆಂದರೆ ಶ್ರೀರಾಮನಾಮವೇ ಅವರನ್ನು ಧರ್ಮಮಾರ್ಗದಲ್ಲಿ ನಡೆಯಿಸಿಕೊಂಡು ತನ್ನ ಫಲವಾದ ಅಭ್ಯುದಯವನ್ನೂ ಮೋಕ್ಷವನ್ನೂ ಕೊಡಿಸಿಬಿಡುತ್ತದೆ!

    ಪ್ರಭವತು ಭವತಾಂ ಭೂತಯೇ ರಾಮನಾಮ ವಾಚಕವೃಂದ ಇಂಥ ರಾಮನಾಮವು ತಮ್ಮಗಳ ಏಳಿಗೆಗೆ ಕಾರಣವಾಗಲಿ, ಇದೇ ಜ್ಞಾನವು, ವ್ರತವು, ಧ್ಯಾನವು, ತ್ಯಾಗವು, ಶಾಂತಿಯು, ಪುಣ್ಯವು, ಗತಿಯು, ಮತಿಯು, ಪ್ರೀತಿಯು, ಸ್ಮೃತಿಯು, ಗುರುವು, ಪ್ರಭುವು ಎಂಬ ಉದಾತ್ತಭಾವನೆಯಿಂದ ಈ ನಾಮವನ್ನೇ ಶರಣುಹೋಗಿರಿ!

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ