ಆಷಾಡದ ಮುಂಜಾವು..


ಚುಮು ಚುಮು ಬೆಳಕ ಕಿವುಚಿ ಆಷಾಡದ ಕಾಳಿ
ಹಿಪ್ಪೆ ಹಿಂಡಿ ರಸ ತೆಗೆದ ಮಸುಕು ಮಸುಕ ಬೇಲಿ
ಹರಿದಂತೆ ಕನ್ನೆ ಮುಗ್ದತೆಯ ಆವರಣ ಕುಲುಕಿ
ಪಲುಕು ಪಲುಕಾಗರಳುತಿದೆ ಮನದ್ಯುತಿ ಕಲಕಿ ||
ಸಿಲುಕಿ ಹೋದ ಅರೆ ಮಬ್ಬಲಿ ಕಳುವಾದ ಹೊತ್ತು
ಬೆಳಕು ಹರಿವುದೊ ತೊರೆವುದೊ ಯಾರಿಗೆ ಗೊತ್ತು?
ಮುಸುಕಲಿ ಕವಿದ ಮೋಡ ಗಿಡ ಮರವೂ ನಿಗೂಢ
ಭೂತಾಕಾರದಿ ಹೊತ್ತ ಆಕಾರಗಳೆ ಭೀತಿಯ ಗಾಢ ||
ಅಲ್ಲೆಲ್ಲೊ ಮಾಮರ ಯಾತನೆ ಇಲ್ಲೆಲ್ಲೊ ಕಲರವ
ಗಿಡಗಂಟಿಗಳ ಬೆರೆಸಿ ನಿಸರ್ಗದ ಚಿತ್ತಾರ ನಿರ್ಭಾವ
ಹುಡುಕುತಲದರೊಳಗೇನನೊ ನಡೆದಿಹ ಅವನೊಬ್ಬ
ಕವಿಯೊ ಜ್ಞಾನಿ ವಿಜ್ಞಾನಿಯೊ ಕೊಲೆಗಡುಕಗು ಹಬ್ಬ ||
ಸವರಿ ತಂಗಾಳಿ ಚಲನೆ ಮುತ್ತಿಟ್ಟಂತೆ ಪ್ರಿಯ ಲಲನೆ
ಕಚಗುಳಿಯಿಟ್ಟಾಡಿಸುತ ಕುರುಳಿಗೆ ಸ್ವೇಚ್ಛಾ ಸಂಚಲನೆ
ಸುಯ್ದೆ ದಣಿದು ಬೇಸತ್ತು ಬೆವರಿ ಹನಿ ಪೋಣಿಸಿ ಇಬ್ಬನಿ
ಒಡಲ ನೋವೆಲ್ಲ ಧಾರೆ ಹುಲ್ಲುಲ್ಲು ಗರಿಕೆಯಲು ಕಂಬನಿ ||
ಭೀತಿ ನಿರ್ಭೀತಿ ಭಾವ ಕೊಳಚೆ, ಬೆಳಕಾಯ್ತು ಒಗೆಯಾಚೆ
ಅದುರಿಸುವ ಚಳಿಯ ಹೊದ್ದ ಸಖಿಗು ಬಿಡದೆ ಕಂಪಿಸುತೆ
ಮೆಲ್ಲಮೆಲ್ಲನೆ ಕಿರಣ ಅರಳರಳಿ, ಮಳ್ಳಿಯ ಮೈಗಾಭರಣ
ಸರಿದು ಹತ್ತಿರ ಅಪ್ಪುಗೆ, ಚುಂಬನದೆ ಕದಪಲಿ ತೋರಣ ||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ