ಶ್ರೀ ಲಲಿತಾ ಸಹಸ್ರನಾಮ ಮಹಿಮೆ

    ಶ್ರೀ ಲಲಿತಾಸಹಸ್ರನಾಮಸ್ತೋತ್ರವು ಬ್ರಹ್ಮಾಂಡಪುರಾಣದ ಉತ್ತರಖಂಡದ ಹಯಗ್ರೀವ-ಅಗಸ್ತ್ಯಸಂವಾದದಲ್ಲಿದೆ. ಇದರಲ್ಲಿ ಪೀಠಿಕೆ, ಸಹಸ್ರನಾಮ ಮತ್ತು ಫಲಶ್ರುತಿ ಎಂಬ ಮೂರು ಭಾಗಗಳಿವೆ. ಆ ಪರಬ್ರಹ್ಮಸ್ವರೂಪಿಣಿಯೇ ಉದ್ಯದ್ಭಾನುವಿಗೆ ಸಮನಾದ ಕಾಂತಿಯಿಂದೊಡಗೂಡಿ, ದಾಳಿಂಬೆ ಬಣ್ಣದ ಸೀರೆಯನ್ನುಟ್ಟು, ಸರ್ವಾಭರಣ ಭೂಷಿತೆಯಾಗಿ, ಪಾಶಾಂಕುಶ-ಇಕ್ಷುಕೋದಂಡಬಾಣಗಳಿಂದೊಡಗೂಡಿ ಆನಂದ ಸಾಗರಳಾದ ಶ್ರೀ ಲಲಿತಾತ್ರಿಪುರಸುಂದರಿಯಾಗಿ ಹದಿನಾರು ವರುಷದ ಯುವತಿಯಾಗಿ ಇಂದ್ರಾದಿದೇವತೆಗಳು ಮಾಡಿದ ಮಹಾಯಜ್ಞದ ಚಿದಗ್ನಿಕುಂಡದಿಂದ ಭಂಡಾಸುರನೆಂಬ ದುಷ್ಟದೈತ್ಯನನ್ನು ಸಂಹರಿಸಲು ಲೋಕಾನುಗ್ರಹಕ್ಕಾಗಿ ದೇವತೆಗಳ ಪ್ರಾರ್ಥನೆಯಂತೆ ಆವಿರ್ಭವಿಸಿದಳು.
    ಬ್ರಹ್ಮಾದಿಗಳ ಇಚ್ಛೆಯಂತೆ ಲಾವಣ್ಯವತಿಯಾದ ದೇವಿಯು ಕಾಮೇಶ್ವರನ ರೂಪದಲ್ಲಿದ್ದು ಶಿವನನ್ನು ವರಿಸಿ ಶಿವಕಾಮೇಶ್ವರಾಂಕಸ್ಥಾಯಿಯಾದಳು. ಬ್ರಹ್ಮನೇ ಮಾತೆಗೆ ಕಾಮಾಕ್ಷಿಯೆಂದೂ, ಕಾಮೇಶ್ವರಿಯೆಂದೂ ಬಿರುದುಗಳನ್ನು ಸಮರ್ಪಿಸಿದನು. ಅನಂತರ ಪರಾಶಕ್ತಿಯಾದ ಶ್ರೀಮಾತೆಯು ಭಂಡಾಸುರನೇ ಆದಿಯಾಗಿ ಸಕಲದೈತ್ಯರನ್ನೂ ಕೊಮದು ಅವನ ರಾಜಧಾನಿಯಾದ ಶ್ರೋಣಿತಪುರವನ್ನು ನಾಶಮಾಡಿದಳು.
    ಅನಂತರ ದೇವಶಿಲ್ಪಿಗಳಾದ ವಿಶ್ವಕರ್ಮ ಮತ್ತು ಮಯರು ಸುಮೇರು ಮಧ್ಯಶೃಂಗದಲ್ಲಿ ಶ್ರೀ ದೇವಿಗಾಗಿ ಶ್ರೀಪುರವೆಂಬ ಪಟ್ಟಣವನ್ನು ನಿರ್ಮಿಸಿ, ಅದರಲ್ಲಿ ಚಿಂತಾಮಣಿ ಎಂಬ ಅರಮನೆಯ ಮಧ್ಯದಲ್ಲಿ ಪಂಚಪ್ರೇತವೆಂಬ ಮಂಚವನ್ನು ನಿರ್ಮಿಸಿದರು. ಬ್ರಹ್ಮ, ವಿಷ್ಣು, ಈಶ್ವರ, ಮಹೇಶ್ವರರೇ ಆ ಮಂಚದ ನಾಲ್ಕು ಕಾಲುಗಳು ಸದಾಶಿವನೇ ಮಂಚದ ಹಲಗೆ ಇದರ ಮೇಲೆ ಪೂರ್ವದಿಙ್ಮುಖವಾಗಿ ಕುಳಿತ ದೇವಿಯು ಪಂಚಪ್ರೇತ ಮಂಚಾಧಿಶಾಯಿನಿಯಾದಳು.
    ಇನ್ನು ಎರಡನೆ ಭಾಗವಾದ ಶ್ರೀ ಲಲಿತಾಸಹಸ್ರನಾಮದಲ್ಲಿ ಶ್ರೀ ಮಾತೆಯ ಸಖಶಿಖಾಂತವಾದ ರೂಪ ಹಾಗೂ ಧರಿಸಿರುವ ವಿವಿಧ ಆಭರಣಗಳ ವರ್ಣನೆ, ಭಂಡಾಸುರ ವಧೆ, ಶ್ರೀ ಲಲಿತಾಪಂಚದಶಾಕ್ಷರೀಮಂತ್ರದ ವಿಚಾರ, ಪ್ರಪಂಚಕ್ಕೂ, ಶ್ರೀದೇವಿಗೂ ಇರುವ ಸಂಬಂಧ, ಸಮಯಾಚಾರ, ಭಕ್ತಿ, ಆತ್ಮವಿದ್ಯೆ, ಮಹಾವಿದ್ಯೆ, ಚಂದ್ರವಿದ್ಯೆ, ಶ್ರೀವಿದ್ಯೆ, ಷೋಡಶಾಕ್ಷರೀವಿದ್ಯೆ, ಮಂತ್ರವಿದ್ಯೆ, ನಂದಿವಿದ್ಯೆ, ಯಂತ್ರವಿದ್ಯೆ, ತಂತ್ರವಿದ್ಯೆ, ಕುಂಡಲಿನೀಯೋಗ ಷಟ್ಟಿಕ್ರಗಳಲ್ಲಿ ಶ್ರೀ ದೇವಿಯ ಆವಾಸ, ನಾದ ಬ್ರಹ್ಮನ ವಿಚಾರ, ನಾಲ್ಕು ವಿಧ ವಾಕ್ಕು, ಅಂತರ್ಯಾಗ, ಮುದ್ರೆಗಳು, ಜೀವನ್ಮುಕ್ತಿ ವಿಚಾರ, ಪ್ರಳಲ, ಶ್ರೀ ಗಾಯಿತ್ರೀ, ಸಂಧ್ಯಾ, ದುರ್ಗಾ, ಲಕ್ಷ್ಮೀ, ಸಾವಿತ್ರೀ, ಸರಸ್ವತೀ, ಭೂದೇವಿ, ದಕ್ಷಿಣಾಮೂರ್ತಿ, ನಟೇಶ್ವರಿ, ಮಹಾಕಾಳಿ ಮತ್ತು ಶ್ರೀ ಬಾಲಾಂಬಿಕೆಯರ ಮಹಿಮೆಗಳು ವರ್ಣಿತವಾಗಿವೆ.
    ಶ್ರೀಮಾತಾ - ಎಂದು ಆರಂಭವಾಗುವ ಶ್ರೀ ಲಲಿತಾಸಹಸ್ರನಾಮವು ಲಲಿತಾಂಬಿಕಾ - ಎಂದು ಮುಕ್ತಾಯವಾಗುತ್ತದೆ. ಎರಡನ್ನೂ ಸೇರಿಸಿದರೆ ಶ್ರೀ ಮಾತಾ ಲಲಿತಾಂಬಿಕಾ ಎಂದಾಗುತ್ತದೆ. ಜಗಜ್ಜನನಿ ಎಂದರೆ ಶ್ರೀ ಲಲಿತಾಮಾತೆಯೇ. ಲಿಲಿತಾ ಎಂಬ ಶಬ್ದಕ್ಕೆ 'ಲೋಕಾನತೀತ್ಯ ಲಲಿತೆ ಲಲಿತಾ' ಅಂದರೆ ಸಕಲಲೋಕಗಳನ್ನೂ ಅತಿಕ್ರಮಿಸಿ ಲೀಲಾಮಾತ್ರಳಾಗಿರುವವಳು ಎಂದು ಪದ್ಮಪುರಾಣದಲ್ಲಿ ಹೇಳಿದೆ. ಅಲ್ಲದೆ ಲಲಿತಾಶಬ್ದಕ್ಕೆ, ಮಧುರ, ಮನೋಹರ, ಸುಂದರ, ಪ್ರಕಾಶ, ಶಾಂತಿ, ಮಂಜುಳ, ಅವತಾರ, ಗಾಂಭೀರ್ಯ, ಆಕರ್ಷಣೆ, ಆಳುವಿಕೆ, ಶಕ್ತಿ, ಶೋಭೆ, ಗೌರವ, ದಯೆ, ಉದಾರತ್ವ, ವಿನೋದವಾದ ಕ್ರೀಡೆ, ಮೃದು ಮತ್ತು ಕೋಮಲ ಇಷ್ಟು ಅರ್ಥಗಳಿವೆ. ಈ ಅರ್ಥಗಳೆಲ್ಲ ಶ್ರೀ ದೇವಿಯ ಕಲ್ಯಾಣಗುಣಗಳನ್ನೇ ಸೂಚಿಸುತ್ತವೆ ಅಲ್ಲದೆ ಶ್ರೀ ದೇವಿಯ ಹಸ್ತದಲ್ಲಿರುವ ಕಬ್ಬಿನ ಜಲ್ಲೆಯೂ, ಪುಷ್ಪಬಾಣವೂ ದೇವಿಯ ಹೆಸರಿನ ಅವತಾರಕ್ಕೆ ಸರಿಯಾದ ತತ್ತ್ವದ ರಮಣಿಯತ್ವವನ್ನು ಕೊಡುತ್ತವೆ.
    ಶ್ರೀ ಲಲಿತಾಸಹಸ್ರನಾಮದ ಶ್ರೇಷ್ಠತೆಯ ಬಗ್ಗೆ ಹಯಗ್ರೀವದೇವರು ಹೀಗೆ ಹೇಳುತ್ತಾರೆ :-
ಪುರಾಣಾಂ ಶ್ರೀಪುರಮಿವ ಶಕ್ತೀನಾಂ ಲಲಿತಾ ಯಥಾ |
ಶ್ರೀವಿದ್ಯೋಪಾಸಕಾನಾಂ ಚ ಯಥಾ ದೇವೋ ವರಃ ಶಿವಃ ||
ತಥಾ ನಾಮಸಹಸ್ರೇಷು ವರಮೇತತ್ ಪ್ರಕೀರ್ತಿತಮ್ ||
    ಪುರಗಳಲ್ಲಿ ಶ್ರೀಪುರವು ಹೇಗೆ ಶ್ರೇಷ್ಠವೋ, ಶಕ್ತಿಗಳಲ್ಲಿ ಶ್ರೀ ಲಲಿತಾಂಬಿಕೆಯು ಹೇಗೋ, ಶ್ರೀವಿದ್ಯೋಪಾಸಕರಲ್ಲಿ ಪರಶಿವನು ಹೇಗೋ, ಹಾಗೆಯೇ ಸಹಸ್ರನಾಮಗಳಲ್ಲಿ ಲಲಿತಾಸಹಸ್ರನಾಮವು ಶ್ರೇಷ್ಠ, ಅಷ್ಟೇ ಅಲ್ಲ ಹರಗ್ರೀವರು ಇನ್ನೂ ಮುಂದುವರೆದು ಹೇಳುತ್ತಾರೆ.
ವಿಷ್ಣುನಾಮಸಹಸ್ರಾಚ್ಛ ಶಿವನಾಮೈಕಮುತ್ತಮಮ್ |
ಶಿವನಾಮಸಹಸ್ರಾಚ್ಚ ದೇವ್ಯಾ ನಾಮೈಕಮುತ್ತಮಮ್ ||
    ವಿಷ್ಣುವಿನ ಸಾವಿರನಾಮಗಳಿಗೆ ಶಿವನ ಒಂದು ನಾಮವು ಸಮ. ಅಂತಹ ಶಿವನ ಸಾವಿರನಾಮಗಳಿಗೆ ಶ್ರೀ ದೇವಿಯ ಒಂದು ನಾಮವು ಸಮ. ಹೀಗಿರುವಾಗ ಶ್ರೀ ಲಲಿತಾಸಹಸ್ರನಾಮದ ಹಿರಿಮೆ ಮತ್ತು ಗರಿಮೆಯ ಬಗ್ಗೆ ಹೇಳುವದೇನಿದೆ? ಅಂತಹ ಮಾತೆಯು 'ಸಮಾನಾಧಿಕ ವರ್ಜಿತ'ಳಾಗಿರವದು ಯುಕ್ತವಾಗಿಯೇ ಇದೆ.
    ಇನ್ನು ಕಡೆಯದಾಗಿ ಫಲಶ್ರುತಿಯ ಕಡೆಗೆ ಸಾಗೋಣ. ಇದು 87 ಶ್ಲೋಕಗಳಿಂದ ಕೂಡಿದ 'ಶ್ರೀ ಲಲಿತಾಸಹಸ್ರನಾಮಫಲನಿರೂಪಣಮ್' ಎಂಬ ಅಧ್ಯಾಯ.
ಅನೇನ ಸದೃಶಂ ಸ್ತೋತ್ರಂ ನ ಭೂತಂ ನ ಭವಿಷ್ಯತಿ |
ಸರ್ವರೋಗ ಪ್ರಶಮನಂ ಸರ್ವಸಂಪತ್ ಪ್ರವರ್ಧನಮ್ ||
    ಈ ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಹಿಂದೆ ಇರಲಿಲ್ಲ. ಇನ್ನು ಮುಂದೆಯೂ ಇರುವದಿಲ್ಲ. ಇದು ಸರ್ವರೋಗಗಳನ್ನೂ ಭವರೋಗವೂ ಸೇರಿದಂತೆ ನಿವಾರಿಸಿ ಸರ್ವಸಂಪತ್ತನ್ನೂ ವರ್ಧಿಸುತ್ತದೆ. ಅಪಮೃತ್ಯು, ಕಾಲಮೃತ್ಯು, ಸರ್ವಜ್ವರಗಳನ್ನು ನಿವಾರಿಸುತ್ತದೆ; ದೀರ್ಘಾಯುಷ್ಯವನ್ನೂ ನೀಡುತ್ತದೆ.
    ಈ ಸಹಸ್ರನಾಮವನ್ನು ನಿತ್ಯವೂ ಪಠಿಸಬೇಕು. ಒಂದು ವೇಳೆ ನಿತ್ಯ ಪಠಿಸಲು ಆಗದಿದ್ದಲ್ಲಿ ಈ ಪುಣ್ಯದಿನಗಳ್ಲಲ್ಲಾದ್ದರೂ ಪಠಿಸಲೇ ಬೇಕು.
ಸಂಕ್ರಾಂತೌ ವಿಷುವೆ ಚೈವ ಸ್ವಜನ್ಮತ್ರಿತಯೇಯನೇ |
ನವಮ್ಯಾಂ ವಾ ಚತುರ್ದಶ್ಯಾಂ ಸಿತಾಯಾಂ ಶುಕ್ರವಾಸರೇ ||
    ವಿಷುವತ್ಸಂಕ್ರಾಂತಿ, ಮೂರು ಜನ್ಮದಿನ (ತನ್ನ, ತನ್ನ ಹೆಂಡತಿ, ತನ್ನ ಮಕ್ಕಳು) ಜನ್ಮ ನಕ್ಷತ್ರಗಳಲ್ಲಿ, ನವಮಿಗಳಲ್ಲಿ, ಶುಕ್ಲಪಕ್ಷದ ಚತುರ್ದಶಿಯಲ್ಲಿ, ಶುಕ್ರವಾರಗಳಲ್ಲಿ ಪೂರ್ಣಿಮೆಗಳಂದು ವಿಶೇಷವಾಗಿ ಪಾರಾಯಣಮಾಡಬೇಕು. ಲಲಿತಾಸಹಸ್ರನಾಮ ಸ್ತೋತ್ರವನ್ನು ಜಲಕುಂಭವನ್ನು ಮುಟ್ಟಿ ಜಪಿಸಿ ಅದರ ನೀರನ್ನು ಬಾಲಗ್ರಹಪೀಡಿತರ ಮೇಲೆ ಪ್ರೋಕ್ಷಿಸಿದರೆ ಪಿಶಾಚಿಗಳು ಬಿಟ್ಟೋಡುತ್ತವೆ. ಸಹಸ್ರನಾಮದಿಂದ ಮಂತ್ರಿತವಾದ ಬೆಣ್ಣೆಯನ್ನು ಬಂಜೆಯು ಭಕ್ಷಿಸಿದರೆ ಪುತ್ರವತಿಯಾಗುವಳು. ಸಹಸ್ರನಾಮ ಪಠಿಸುವವರ ಮೇಲೆ ವಾಮಾಚಾರದ ಆಟ ನಡೆಯುವದಿಲ್ಲ. ಈ ಸಹಸ್ರನಾಮಪಾಠಕನನ್ನು ಯಾರು ಕ್ರೂಟದೃಷ್ಟಿಯಿಂದ ನೋಡುವರೋ, ಅಂಥವರನ್ನು ಮಾರ್ತಾಂಡಭೈರವನು ಕುರುಡರನ್ನಾಗಿ ಮಾಡುತ್ತಾನೆ. ಈ ಸಹಸ್ರನಾಮಜಾಪಕನ ಧನವನ್ನು ಯಾರು ಅಪಹರಿಸುತ್ತಾರೋ ಅಂತಹವರನ್ನು ಕ್ಷೇತ್ರಪಾಲನು ಸಂಹರಿಸುತ್ತಾನೆ. ಈ ನಾಮವನ್ನು ಜಪಿಸುವವನೊಂದಿಗೆ ಯಾರು ವಾದಮಾಡುತ್ತಾರೋ, ಅಂತಹವರನ್ನು ನಕುಲೇಶ್ವರಿಯು ವಾಕ್ ಸ್ತಂಭನ ಮಾಡುತ್ತಾಳೆ. ಯಾರು ಆರು ತಿಂಗಳು ಬಿಡದೆ ಪರಮಭಕ್ತಿಯಿಂದ ಪಠಿಸುತ್ತಾರೋ ಅಂತಹವರ ಮನೆಯಲ್ಲಿ ಲಕ್ಷ್ಮಿಯು ಸ್ಥಿರವಾಗಿರುತ್ತಾಳೆ. ಯಾರು ಪ್ರತಿನಿತ್ಯ ದಿನಕ್ಕೆ ಮೂರು ಬಾರಿಯಂತೆ ಒಂದು ತಿಂಗಳು ಸತತವಾಗಿ ಪಠಿಸುವರೋ ಅಂತಹವರ ನಾಲಗೆಯ ತುದಿಯಲ್ಲಿ ಸರಸ್ವತಿಯು ಯಾವಾಗಲೂ ಕುಣಿಯುತ್ತಿರುತ್ತಾಳೆ. ಯಾರು ಒಂದು ಪಕ್ಷ ಪಠಿಸುವರೋ ಅಂತಹವರ ವೀಕ್ಷಣಮಾತ್ರದಿಂದ ಮೃಗಾಕ್ಷಿಯರು ವಶರಾಗುತ್ತಾರೆ ಅಂದರೆ ದಾಂಪತ್ಯದಲ್ಲಿ ಅನ್ಯೋನ್ಯತೆಯಿರುತ್ತದೆ. ಯಾರು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಪಠಿಸುತ್ತಾರೋ ಅಂತಹವರ ದೃಷ್ಟಿಗೆ ಬೀಳುವವರೆಲ್ಲರೂ ಸರ್ವಪಾಪಗಳಿಂದ ಮುಕ್ತರಾಗುತ್ತಾರೆಂದು ಹೇಳಿದ ಮೇಲೆ ಇನ್ನು ಪಠಿಸುವವರ ಪುಣ್ಯದ ಬಗ್ಗೆ ಹೇಳುವದೇನಿದೆ?
||ಇತಿ ಓಂ ಶ್ರೀ ಲಲಿತಾ ಮಹಾತ್ರಿಪುರಸುಂದರ್ಯೈ ನಮಃ ||

Comments

  1. ವಿವರಣೆ ತುಂಬಾ ಸುಂದರವಾಗಿ ಬಂದಿದೆ. ಓದಿ ಸಂತೋಷವಾಯಿತು. ತಮ್ಮ ಬಗ್ಗೆ ಸ್ವಲ್ಪ ಹೇಳಿದ್ದರೆ ಇನ್ನೂ ಒಳ್ಳೆಯದಾಗುತ್ತಿತ್ತು.

    ReplyDelete
  2. Tumba adbutha vagi vivariaiddira danya vada niv helo reetige Muga kuda japisutane sir thank you

    ReplyDelete
  3. ಅದ್ಭುತವಾದ ವಿವರಣೆ. ಧನ್ಯವಾದಗಳು 🙏🙏🌷🌷

    ReplyDelete
  4. ನಾನು ಸುಮಾರು 10 ವರ್ಷಗಳಿಂದ ಪ್ರತಿ ಮಂಗಳವಾರ ರಾಹುಕಾಲದಲ್ಲಿ ಶ್ರೀ ಲಲಿತಾದೇವಿ ಸಹಸ್ರ ನಾಮ ಪಟಿಸುತ್ತಿದೇನೆ .ಇಲ್ಲಿ ತಾವು ನಿತ್ಯ ಅಥವಾ ಶುಕ್ರವಾರದಂದು ದೇವಿ ಸಹಸ್ರ ನಾಮ ಪಠಿಸಲು ತಿಳಿಸಿದ್ದೀರಿ ಹಾಗಾದರೆ ಮಂಗಳವಾರದಂದು ಮಹತ್ವ ಇಲ್ಲವೇ?ದಯವಿಟ್ಟು ತಿಳಿಸಿ 🙏🌷
    ತಾಯಿ ಸಹಸ್ರ ನಾಮದ ಮಹತ್ವವನ್ನ ಬಹಳ ಸುಂದರವಾಗಿ ವಿವರಿಸಿದ್ದೀರಿ.ವಿಚಾರ ಧಾರೆ ಓದಲು ಬಹಳ ಸಂತೋಷವಾಗುತ್ತದೆ. ತಮಗೆ ಹೃತ್ಪೂರ್ವಕ ಧನ್ಯವಾದಗಳೊಂದಿಗೆ ನಮಸ್ಕಾರಗಳು ಗುರುಗಳೇ 🙏🙏🌷
    ಬಹಳ ಸುಂದರ, ಸುದೀರ್ಘವಾಗಿ

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ