ನಾಗರಪಂಚಮಿ
ಹಿಂದೂ ಧರ್ಮವು ಸತ್ಯವನ್ನು ಹುಡುಕುವುದರ ಸುತ್ತ ನೆಲೆಗೊಂಡಿರುವ ಒಂದು ನಂಬಿಕೆಯಾಗಿದೆ. ಹಿಂದೂಗಳಿಗೆ ಇದು ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲು ನಡೆದು ಬಂದಿದೆ. ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಪಕ್ಷದಲ್ಲಿ ಬರುವ ಐದನೆ ದಿನ ಅಂದರೆ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಬರುತ್ತದೆ. ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ.
ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣನು ಕಾಳಿಯ ಎಂಬ ಹಾವಿನ ಉಪಟಳದಿಂದ ಜನರನ್ನು ರಕ್ಷಿಸಿದನು. ಆ ಕತೆ ಹೀಗಿದೆ;- ಒಂದು ದಿನ ಬಾಲಕ ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಡುತ್ತಿದ್ದನು. ಆಗ ಅವನು ಆಟವಾಡುತ್ತಿದ್ದ ಚೆಂಡು ನದಿ ದಂಡೆಯಲ್ಲಿದ್ದ ಮರದ ಕಾಂಡದಲ್ಲಿ ಸಿಕ್ಕಿ ಹಾಕಿಕೊಂಡಿತು. ಆ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನು ಜಾರಿ ನದಿಯಲ್ಲಿ ಬಿದ್ದನು. ಆಗ ಕಾಳಿಯ ಎಂಬ ಹಾವು ಅವನ ಮೇಲೆ ಆಕ್ರಮಣ ಮಾಡಿತು. ಆಗ ಕೃಷ್ಣನು ಆ ಹಾವಿನ ವಿರುದ್ಧ ಹೋರಾಟ ಮಾಡಿದನು. ಸ್ವಲ್ಪ ಸಮಯದ ನಂತರ ಆ ಹಾವಿಗೆ ಕೃಷ್ಣನು ಸಾಮಾನ್ಯ ಬಾಲಕನಲ್ಲ ಎಂದು ಅರಿವಾಯಿತು. ಆಗ ಆ ಹಾವು ಕೃಷ್ಣನನ್ನು ತನ್ನನ್ನು ಕೊಲ್ಲಬೇಡವೆಂದು ಅಂಗಲಾಚಿತು. ಈ ಮಾತಿಗೆ ಒಪ್ಪಿದ ಕೃಷ್ಣನು ಜನರಿಗೆ ತೊಂದರೆ ಮಾಡಬೇಡ ಎಂದು ಬುದ್ಧಿವಾದ ಹೇಳಿ ಆ ಹಾವನ್ನು ಬಿಟ್ಟು ಬಿಟ್ಟನು. ಹೀಗೆ ನಾಗರ ಪಂಚಮಿಯನ್ನು ಕೃಷ್ಣನು ಕಾಳಿಯಾ ಎಂಬ ಭಯಾನಕ ಸರ್ಪವನ್ನು ಗೆದ್ದ ಸಂತೋಷವನ್ನು ನೆನಪಿಸಿಕೊಳ್ಳುವ ಸಲುವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ ಅಥವಾ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ.
ಮಣ್ಣನ್ನು ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನು-ಅಣ್ಣಯ್ಯ
ಮಣ್ಣೆ ಲೋಕದಲಿ ಬೆಲೆಯಾದ್ದು
ಎಂಬ ನಾನ್ನುಡಿಯಂತೆ ಮಣ್ಣು ಬದುಕಿನ ಮೂಲವೆಂಬ ಸಂಗತಿಯನ್ನು ಎತ್ತಿ ತೋರಲಾಗಿದೆ. ಮಣ್ಣಿನ ಮಗನೆಂದು ಕರೆಯಿಸಿಕೊಳ್ಳುವ ರೈತನ ದೃಷ್ಟಿಯಲ್ಲಿ ಮಣ್ಣು ಎಂದೂ ಕೀಳಾದ ವಸ್ತುವಲ್ಲ. ಭೂ ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಗೌರವಿಸಿ, ಪೂಜಿಸುವ ರೈತ ಸಮೂಹದ ಪಾಲಿಗೆ ಮಹತ್ವದ ಹಬ್ಬವೆಂದೇ ಕರೆಯಲ್ಪಡುವುದು.
ಮಣ್ಣು ಪೂಜೆಯ ಹೆಸರಿನಲ್ಲಿ ವ್ಯಕ್ತವಾಗುವ ದೇವತೆ ಹುತ್ತಪ್ಪ. ನಮ್ಮಲ್ಲಿ ಪ್ರಾಚೀನ ಕಾಲದಿಂದಲ್ಲೂ ನಾಗಪೂಜೆಗೆ ವಿಶೇಷ ಮಹತ್ವ ಕೊಡುತ್ತ ಬಂದಿದ್ದಾರೆ. ಕಾರಣ ಶ್ರೀ ವಿಷ್ಟು ಶೇಷತಾಯಿ, ಶಿವ ಸರ್ಪ ಭೂಷಣ, ಭೂಮಿಯನ್ನು ನೆತ್ತಿಯ ಮೇಲೆ ಹ್ತೊತವ ಆದಿಶೇಷ. ಗಣಪತಿಯ ಹೊಟ್ಟೆಯ ನಡುಕಟ್ಟು ನಾಗದೇವ.
ನಾಗರ ಪಂಚಮಿ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ. ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಹುತ್ತದ ಮಣ್ಣಿನಿಂದ ಹಾವಿನ ಆಕಾರ ಮಾಡಿಇಟ್ಟುಕೊಳ್ಳಬಹುದು ಅಥವಾ ಬೆಳ್ಳಿ ನಾಗಪ್ಪನ ವಿಗ್ರಹ ಇಟ್ಟುಕೊಳ್ಳಬಹುದು. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ. ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ. ನಾಗಪ್ಪನಿಗೆ ಹಾಲು, ನೀರಿನಿಂದ ತನಿ ಎರೆಯುತ್ತಾರೆ. ಮಂತ್ರಾಕ್ಷತೆ ಉಪಯೋಗಿಸುವುದಿಲ್ಲ . ಅದರ ಬದಲು ಅಕ್ಕಿ ಹಿಟ್ಟು, ಕಡಲೆ ಕಾಳು ಸೇರಿಸಿದ ಮಿಶ್ರಣ ಉಪಯೋಗಿಸುತ್ತಾರೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ. ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.
ತುಳುನಾಡಿನ ನಾಗಾರಾಧನೆ. ತುಳುನಾಡಿನಲ್ಲಿ ನಾಗನಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಇಲ್ಲಿ ತಿಂಗಳಿಗೊಮ್ಮೆ, ಪಂಚಮಿ ದಿವಸದಂದು ತಂಬಿಲ ಸೇವೆ ನಡೆಸುತ್ತಾರೆ. ಅಂತೆಯೇ ವರ್ಷಕ್ಕೊಮ್ಮೆ ನಾಗರಪಂಚಮಿಯ ದಿನದಂದು ಬಹಳ ವಿಜೃಂಬಣೆಯಿಂದ ಆಚರಿಸುವುದು ಇಲ್ಲಿನ ರೂಡಿ. ಅಂತೆಯೇ ಇಲ್ಲಿ ಪ್ರತೀ ಮನೆ/ಕುಟುಂಬಕ್ಕೊಂದು ನಾಗನ ಗುಡಿ (ನಾಗನ ಕಟ್ಟೆ)ಗಳಿರುವುದನ್ನು ಕಾಣಬಹುದು. ಪಂಚಮಿಯ ದಿನದಂದು ಕಟ್ಟೆಯನ್ನು ಶೃಂಗರಿಸಿ ನಾಗನ ಮೂರ್ತಿಯನ್ನು ಶುಚಿಗೊಳಿಸಿ, ಇದಕ್ಕೆ ಹಾಲಾಭಿಷೇಕ, ಸೀಯಾಳಾಭಿಷೇಕ, ಅರಶಿನಾಭಿಷೇಕ, ಕೊನೆಗೆ ಕಳಸಾಭಿಷೇಕ ಮಾಡುತ್ತಾರೆ. ಬಳಿಕ ನಾಗಪ್ರಿಯವಾದ ಹಿಂಗಾರವನ್ನಿಟ್ಟು ಜೊತೆಗೆ ಅರಶಿನದ ಉಂಡೆಯನ್ನು ನಾಗ ಪ್ರತಿಮೆಯ ಹೆಡೆಯ ಮೇಲಿರಿಸಿ ಪೂಜಿಸುವುದು ಇಲ್ಲಿನ ಪ್ರತೀತಿ. ಪೂಜೆಯ ಬಳಿಕ ಮನೆಯಲ್ಲಿ ವಿವಿಧ ಖಾಧ್ಯದೊಂದಿಗೆ, ತುಳುನಾಡ ಮಂಜಲ್ದ ಇರೆತ್ತ ಅಡ್ಯೆ(ಅರಶಿನ ಗಟ್ಟಿ) ತುಂಬಾನೇ ಫೇಮಸ್. ಈ ವೇಳೆ ಜೀವಂತ ನಾಗ ಕಾಣಿಸಿಕೊಡರೆ, ಸಾಕ್ಷಾತ್ ನಾಗ ದೇವರು ಭಕ್ತಿಗೆ ಪ್ರತ್ಯಕ್ಷರಾದರೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ತುಳುನಾಡು ನಾಗಾರಾಧನೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತದೆ. ನಾಗದೋಷಗಳ ನಂಬಿಕೆ ನಾಗ ಸಂತತಿಗಳ ನಾಶ ಮಾಡಿದರೆ, ಅವುಗಳ ಶಾಪದಿಂದ ನಾಶಗೈದ ವ್ಯಕ್ತಿಗೆ ಸಂತಾನ ಪ್ರಾಪ್ತಿಯಾಗದು. ಸಂತಾನ ವೃದ್ಧಿಸಿದರೂ ಅವರು ಸರಿ ಇಲ್ಲದಿರುವರು. ಕೌಟುಂಬಿಕ ಕಲಹದಿಂದ ನೆಮ್ಮದಿ ಶಾಂತಿ ಲಭಿಸದು. ಇದನ್ನು ಕಾಳಸರ್ಪದೋಷವೆನ್ನುತ್ತಾರೆ. ಇದು ನಾಗ ಕುಟುಂಬಕ್ಕೆ ಕೊಟ್ಟ ತೊಂದರೆಯಿಂದ, ನಮ್ಮ ಕುಟುಂಬಕ್ಕೆ ತಗಲುವ ಶಾಪ. ಇನ್ನೂ ಚರ್ಮ ಸಂಬಂಧಿ ಖಾಯಿಲೆಗಳು ಈ ದೋಷದಿಂದ ಬರುವುದು.
ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಗೆ ಹೆಚ್ಚಿನ ಆದ್ಯತೆ ಹಾಗೂ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ೩ - ೫ ದಿನಗಳ ಹಬ್ಬ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಇದೇ ಪದ್ಧತಿ ಬಗ್ಗೆ ಒಂದು ಜನಪ್ರಿಯವಾದ ಭಾವಗೀತೆ ಕೂಡ ಇದೆ. ಕವಿಯಾದ ಬೆಟಗೇರಿ ಕೃಷ್ಣ ಶರ್ಮ (ಆನಂದಕಂದರು) ರಚಿಸಿರುವ "ಪಂಚಮಿ ಹಬ್ಬಕ್ ಉಳಿದಾವು ದಿನ ನಾಕ ಅಣ್ಣ ಬರಲಿಲ್ಲ ಯಾಕೋ ಕರಿಯಾಕ " ಹಾಡನ್ನು ಇಲ್ಲಿ ಕೇಳಬಹುದು. ಹೆಣ್ಣು ಮಕ್ಕಳು ಪಂಚಮಿ ಹಬ್ಬವನ್ನು ತವರು ಮನೆಗೆ ಹೋಗಿ ಆಚರಿಸುತ್ತಾರೆ. ಒಡಹುಟ್ಟಿದವರಿಗೆ ಹಾಲು ಎರೆದು ಉಡುಗೊರೆ ಕೊಡುತ್ತಾರೆ. ಇದಕ್ಕೆ ಉಂಡಿ /ಉಂಡೆ ಹಬ್ಬ ಎಂದೂ ಹೆಸರು. ವಿವಿಧವಾದ ಉಂಡೆಗಳನ್ನು ಮಾಡುತ್ತಾರೆ . ಜೋಕಾಲಿ ಕಟ್ಟಿ ಆಟ ಆಡುತ್ತಾರೆ. ಹೀಗೆ ಸಂಬ್ರಮದಿಂದ ಹಬ್ಬ ಮಾಡುತ್ತಾರೆ. ಇನ್ನು ಹಬ್ಬವೆಂದರೆ ಭಕ್ಷ್ಯ, ಭೋಜನಕ್ಕೇನು ಕಡಿಮೆಯೇ. ರೊಟ್ಟಿಗೆ ಹೆಸರುವಾಸಿಯಾದ ಉತ್ತರ ಕರ್ನಾಟಕದ ಜನ ಹಬ್ಬಕ್ಕೆಂದು ಹಿಂದಿನ ದಿನವೇ ವಿಶೇಷವಾಗಿ ಸಜ್ಜೆ ಹಾಗೂ ಕಡಕ್ ರೊಟ್ಟಿಗಳನ್ನು ಮಾಡುತ್ತಾರೆ (ಹಬ್ಬದ ದಿನ ರೊಟ್ಟಿ ಸುಡುವಂತಿಲ್ಲ). ಜತೆಗೆ ಬದನೆ ಎಣಗಾಯಿ, ಕಾಳು ಪಲ್ಯ, ಉಸುಳಿ, ಪಂಚಮಿ ಉಂಡೆ, ಬಾಣದೊಂದಿಗೆ ವಿವಿಧ ಬಗೆಯ ಚಟ್ಟಿಗಳ ಸಾಲೇ ತಯಾರು. ತಂಬಿಟ್ಟು, ಶೇಂಗಾ, ಎಳ್ಳು, ಪುಠಾಣಿ, ಚುರುಮುರಿ ಉಂಡಿ, ದಾಣಿ, ಗುಳ್ಳಅಡಕಿ, ರವಾ, ಬೇಸನ್, ಲಡಗಿ, ಹೆಸರು, ಅಂಟಿನ, ಖರ್ಜಿಕಾಯಿ, ಶಂಕರಪೊಳೆ, ಬಾದುಷಾ, ಮಾದ್ಲಿ, ಮಂಡಗಿ ಹೀಗೆ ಅನೇಕ ಸಿಹಿ ಇರಲೇಬೇಕು. ಸಿಹಿ ತಿಂದು ಬೇಸರವಾದರೆ ಚಕ್ಕುಲಿ, ಕೋಡುಬಳೆ, ಚೂಡಾ, ಅವಲಕ್ಕಿ, ಬಡಂಗ, ಖಾರದಾಣಿ, ಖಾರದ ಉಸುಳಿ, ಖಾರದ ಎಳ್ಳು, ಅರಳಿಟ್ಟು, ಅರಳಿನ ಜೋಳವು ಸಿದ್ಧವಾಗಿರುತ್ತದೆ.
Comments
Post a Comment