ವೈಕುಂಠ ಏಕಾದಶಿ: ಏಕಾದಶಿ ಉಪವಾಸ, 'ವೈಕುಂಠ' ಹೆಸರಿನ ತತ್ವದ ಮಹತ್ವ

"ವೈಕುಂಠಏಕಾದಶಿ" ಇದರಲ್ಲಿ ಎರಡು ಪದಗಳು ಸೇರಿಕೊಂಡಿವೆ. ಒಂದು "ವೈಕುಂಠ", ಎರಡನೆಯದು ಏಕಾದಶಿ, ಮೊದಲು ಇವುಗಳ ಸ್ಥೂಲ ಅರ್ಥ ಹೀಗಿದೆ: "ವೈಕುಂಠ" ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರು ಬರಲು ಕಾರಣ ಚಾಕ್ಷುಷ ಮನ್ವಂತರದಲ್ಲಿ ವಿಷ್ಣುವು ವಿಕುಂಠ ಯೆಂಬ "ಸ್ತ್ರೀ"ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತೆಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ.

ವಿಷ್ಣು ಸಹಸ್ರನಾಮದಲ್ಲಿಯೂ ವೈಕುಂಠ ಎಂಬ ಹೆಸರಿನ ಉಲ್ಲೇಖವಿದೆ. ನಮಗೆ ತಿಳಿದಿರುವಂತೆ 'ಕುಂಠ' ಎಂದರೆ ಅಸಾಮರ್ಥ್ಯ, 'ವಿಕುಂಠ' ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು, ಅಂದರೆ ಭಗವಂತನ ಸಾಕ್ಷಾತ್ಕಾರವಾದ ಮುಕ್ತರು ಎಂದರ್ಥ. ಆದ್ದರಿಂದ ಬದುಕಿನ ಅಸಾಮರ್ಥ್ಯಗಳನ್ನು ಹೋಗಲಾಡಿಸುವವನು ಎಂಬುದೂ ಈ ಹೆಸರಿಗೆ ಅರ್ಥವಾಗಿದೆ.

ಇನ್ನು "ಏಕಾದಶಿ" ಎಂದರೆ ಹನ್ನೊಂದನೆಯ ತಿಥಿ. "ಏಕಾದಶಿ" ಒಂದು ವ್ರತ. ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು. ಎಂದರೆ ಶುಚಿರ್ಭೂತನಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.

ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. ಹೀಗೆ ಎಡಬಿಡದೆ ಏಕಾದಶಿವ್ರತ ಮಾಡುವುದರಿಂದ ದೇಹದ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಮಹಾಕವಿ ಕಾಳಿದಾಸ ಹೇಳಿರುವಂತೆ : "ಶರೀರಮಾಧ್ಯಂ ಖಲು ಧರ್ಮಸಾಧನಂ", ಧರ್ಮ ಸಂಪಾದನೆಗೆ, ಸ್ವಸ್ಥ್ಯ ಶರೀರ ಅತ್ಯಗತ್ಯ.

ವೈಕುಂಠ ಏಕಾದಶಿಯ ಬಗ್ಗೆ ಕಥೆಯೊಂದು ಹೀಗಿದೆ: ಭಾಗವತೋತ್ತಮನಾದ ನಂದಗೋಪ ಶ್ರೀಕೃಷ್ಣನ ಸಾನಿಧ್ಯದಲ್ಲಿ, ಏಕಾದಶಿಯ ಉಪವಾಸ ಹಾಗೂ ದ್ವಾದಶಿಯ ಪಾರಣೆಗಳನ್ನು ತಪ್ಪದೆ ಆಚರಿಸುತ್ತಿದ್ದ ಒಮ್ಮೆ ಏಕಾದಶಿವ್ರತ ಆಚರಿಸಿ, ಮರುದಿನ ದ್ವಾದಶಿ ಬಹು ಸ್ವಲ್ಪಕಾಲ ಮಾತ್ರ ಇದ್ದುದ್ದರಿಂದ ಬೆಳಗಿನ ಝಾವಕ್ಕೆ ಮೊದಲು ಯಮುನಾನದಿಯಲ್ಲಿ ಸ್ನಾನಕ್ಕಿಳಿದ. ಅದು ರಾಕ್ಷಸರ ಸಂಚಾರದ ಕಾಲವಾದ್ದರಿಂದ ವರುಣದೇವನ ಸೇವಕನಾದ ರಾಕ್ಷಸ, ನಂದಗೋಪನನ್ನು ವರುಣನ ಬಳಿಗೆ ಎಳೆದೊಯ್ದನು. ಇತ್ತ ನಂದನು ಎಷ್ಟು ಹೊತ್ತಾದರೂ ಸ್ನಾನಕ್ಕೆ ಹೋದವನು ಬಾರದಿರಲು, ಗೋಪಾಲಕುಲದವರೆಲ್ಲಾ ಬಲರಾಮಕೃಷ್ಣರಿಗೆ ಈ ಸುದ್ದಿ ಮುಟ್ಟಿಸಿದರು. ಸರ್ವಜ್ಞನಾದ ಶ್ರೀಕೃಷ್ಣ ಅವರಿಗೆಲ್ಲಾ ಅಭಯವಿತ್ತು ತಂದೆಯವರನ್ನು ಕರೆತರುವುದಾಗಿ ಹೇಳಿ, ವರುಣಲೋಕಕ್ಕೆ ಬಂದನು. ದೇವದೇವನಾದ ಶ್ರೀಕೃಷ್ಣನಿಗೆ ನಮಿಸಿದ ವರುಣ ತನ್ನ ಸೇವಕನಿಂದಾದ ಅಪರಾಧ ಮನ್ನಿಸಬೇಕೆಂದು ಪ್ರಾರ್ಥಿಸಿದ. ಶ್ರೀಕೃಷ್ಣ ವರುಣನನ್ನು ಆಶೀರ್ವದಿಸಿ ತಂದೆಯೊಡನೆ ಗೋಕುಲಕ್ಕೆ ಹಿಂದಿರುಗಿದನು.

ನಂದಗೋಪನಿಗೆ ಪರಮಾನಂದವಾಯಿತು. ವರುಣನ ಲೋಕದ ವೈಭವ ಹಾಗೂ ತನ್ನ ಮಗನಾದ ಶ್ರೀಕೃಷ್ಣನಿಗೆ ಸಿಕ್ಕ ಭವ್ಯಸ್ವಾಗತ ಮುಂತಾದವುಗಳನ್ನು ಎಳೆಎಳೆಯಾಗಿ ಬಣ್ಣಿಸಲಾಗಿ ಗೋಪಾಲರಿಗೆಲ್ಲಾ ಹೆಮ್ಮೆ ಎನಿಸಿತು ಆದರೆ ಶ್ರೀಕೃಷ್ಣ ಸಾಕ್ಷತ್ ಪರಮೇಶ್ವರನೇ ನಿಜ ಆದರೆ ಅವನ ನಿಜರೂಫ ಅರಿಯಲಾರೆವು ಎಂದು ಪರಿತಪಿಸಿದರು. ಇದನ್ನರಿತ ಕೃಷ್ಣ, ಎಲ್ಲರಿಗೂ ಯಮುನಾ ನದಿಯಲ್ಲಿದ್ದ ಬ್ರಹ್ಮಕುಂಡವೆಂಬ ಮಡುವಿನಲ್ಲಿ ಮುಳುಗಿಬರುವಂತೆ ತಿಳಿಸಿದ, ಕೃಷ್ಣ ಹೇಳಿದಂತೆ ಮಾಡಿದ ಅವರಿಗೆ  ವೈಕುಂಠದ ದರ್ಶನವಾಯಿತು. ಅವರ ಮನಸ್ಸು ತೃಪ್ತಿಯನ್ನು ಹೊಂದಿತು, ಶ್ರೀಕೃಷ್ಣನು ಪರದೈವವೆಂಬ ಅವರ ನಂಬಿಕೆ ಸ್ಥಿರವಾಯಿತು ಎಲ್ಲರೂ ಧನ್ಯರಾದರು ಬಹುಶಃ ಈ ಕಾರಣಕ್ಕೆ ಏಕಾದಶಿಯನ್ನು "ವೈಕುಂಠಏಕಾದಶಿ" ಎಂದು ಕರೆದಿರಬಹುದೆಂಬ ನಂಬಿಕೆ ಹಲವರಲ್ಲಿದೆ. ಪುರಾಣಗಳಿಗೆ ಮಹತ್ವವಾದ ಸ್ಥಾನವಿದೆ, ಅವು ಜನಜೀವನಕ್ಕೆ ಹೊಂದಿಕೊಂಡು ಹೋಗುವ ವಿಷಯಗಳನ್ನು ಪ್ರತಿಪಾದಿಸುತ್ತವೆ. ಸಾಮಾನ್ಯಜನರಿಗೆ ಅವುಗಳಿಂದ ಉಪಕಾರವಾಗುತ್ತದೆ. ಲೋಕೋಪಕಾರಕ್ಕಾಗಿ ವ್ಯಾಸರು ಹದಿನೆಂಟು ಪುರಾಣಗಳನ್ನು ರಚಿಸಿದರು. ಇಂತಹ ಪುರಾಣಗಳಲ್ಲಿ ನಾರದೀಯ ಪುರಾಣ ಸಹ ಒಂದು ನಾರದರ ಪ್ರೇರಣೆಯಿಂದ ಅನೇಕ ಪವಿತ್ರ ಗ್ರಂಥಗಳ, ಪೂಜೆ ಪುನಸ್ಕಾರಗಳು, ವ್ರತಕಥೆಗಳೂ, ಈ ಜಗತ್ತಿಗೆ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು, ಇಂತಹ ಪವಿತ್ರ ವ್ರತಗಳಲ್ಲಿ ಅತ್ಯಂತ ಶ್ರೇಷ್ಠವಾದ, ಶ್ರೇಯಸ್ಕರವಾದ, ಸಕಲರೂ ಸುಲಭದಲ್ಲಿ ಆಚರಿಸಲು ಯೋಗ್ಯವಾದ ವ್ರತ ಏಕಾದಶಿ ವ್ರತ. ಕೃಷ್ಣಾಮೃತಮಹಾರ್ಣವದ ಪ್ರಕಾರ, ಸಕಲ ತೀರ್ಥಕ್ಷೇತ್ರಗಳಿಂದ, ಸಕಲ ಪುಣ್ಯಕ್ಷೇತ್ರಗಳಿಂದ ಲಭಿಸಿದ ಪುಣ್ಯ, ಏಕಾದಶಿಗೆ ಸಮನಾಗಲಾರದು. ವಸಿಷ್ಠರ ಪ್ರಕಾರ, ಹನ್ನೊಂದು ಇಂದ್ರಿಯಗಳಿಂದ ಸಂಪಾದಿಸಿದ ಸಕಲಪಾಪಗಳನ್ನು ಹನ್ನೊಂದನೆಯ ತಿಥಿಯಾದ ಏಕಾದಶಿಯು ಪರಿಹರಿಸುತ್ತದೆ, ಆದ್ದರಿಂದ ಏಕಾದಶಿಗೆ ಸಮವಾದ ಪಾವನವಾದದ್ದು ಯಾವುದೂ ಇಲ್ಲ.

ವೈಕುಂಠ ಏಕಾದಶಿಯ ದಿನ ಶ್ರೀಮನ್ನಾರಾಯಣನ ದರ್ಶನ ಮಾಡಿ, ವೈಕುಂಠ ದ್ವಾರದ ಮೂಲಕ ಹೊರ ಬರಬೇಕು. ಹೀಗೆ ಮಾಡಿದ್ರೆ ಸಪ್ತ ಜನ್ಮದಲ್ಲಿ ಮಾಡಿದ ಪಾಪಗಳೂ ನಾಶವಾಗುತ್ತವೆ ಅನ್ನೋದು ನಂಬಿಕೆ. ಅಲ್ಲದೇ ವೈಕುಂಠ ಏಕಾದಶಿಯ ಪವಿತ್ರ ದಿನ ಅಭ್ಯಂಜನ ಮಾಡಿ, ಶ್ರೀನಿವಾಸ ಉತ್ಸವ ಮೂರ್ತಿಯ ಜೋಕಾಲಿಗೆ ತಲೆ ತಾಕಿಸಿ, ವೈಕುಂಠದ್ವಾರದಿಂದ ಹೊರಬಂದರೆ ಮುಕ್ತಿ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆಯೂ ಇದೆ.

ವೈಕುಂಠ ದ್ವಾರದಲ್ಲಿ ತೋರಿ ಹೋಗುವುದೆಂದರೆ ನಾವು ತಲೆ ಬಾಗಿ ಹೋಗಬೇಕು ತಲೆ ಬಾಗುವುದೆಂದರೆ ನಮ್ಮ ಅಹಂಕಾರವನ್ನು ಕಳೆದು ಕೊಂದಂತೆಯೇ  ಅಂದರೆ ಎಲ್ಲಿಯವರೆಗೆ ನಮ್ಮಲ್ಲಿ ಅಹಂಕಾರವಿರುವುದೊ ಅಲ್ಲಿಯವರೆಗೆ ನಮಗೆ ದೇವರ ದರುಶನ ಸಾಧ್ಯವಿಲ್ಲ ಅದನ್ನು ಕಳೆದುಕೊಂಡ ಕೂಡಲೇ ಇರುವುದೆಲ್ಲಾ ದೈವವೇ  ಆಗುವುದೆಲ್ಲಾ ದೈವ ದರುಶನವೇ...ಏಕಾದಶಿ ಅಂದರೆ ಕೂಡಾ ಇದೇ  ಅರ್ಥ ಬರುತ್ತದೆ  ಏಕಾದಶಿ ಅಂದರೆ ಹನ್ನೊಂದು. ಅಂದರೆ ಹತ್ತು ಭಗವಂತನ ಸಮಸ್ತ  ಸೃಷ್ಟಿಯನ್ನು  ಪ್ರತಿನಿಧಿಸುತ್ತದೆ ಆ ಇನೊಂದು ನಮ್ಮ ವೈಯುಕ್ತಿಕತೆಯನ್ನು ಪ್ರತಿನಿಧಿಸುತ್ತದೆ ಅಂದರೆ ನಮ್ಮ ವಯುಕ್ತಿಕತೆ ಅಂದರೆ ಅಹಂಕಾರ ಅಥವಾ ಮನಸ್ಸು ಇವುಗಳನ್ನು ಕರಗಿಸಿ ಅಥವಾ ಇಲ್ಲವಾಗಿಸಿ ಅಥವಾ ಇಡೀ ವಿಶ್ವದೊಂದಿಗೆ ಸಮ್ಮಿಲನಗೊಲಿಸದ ಹೊರತು ನಮಗೆ ಭಗವಂತನನ್ನು ಕಾಣಲು ದರ್ಶಿಸಲು ಸಾಧ್ಯವಿಲ್ಲಾ ಎಂದರ್ಥ. ಏಕಾದಶಿಯ ಬಗ್ಗೆ ಕೇಳಿರದ, ನಮ್ಮ ಪುರಾಣ ಪರಂಪರೆಗಳ ಬಗೆಗೆ ಏನೂ ಗೊತ್ತಿರದ, ಜಗತ್ಪ್ರಸಿದ್ಧ ಶಸ್ತ್ರವೈದ್ಯ ಅಲೆಕ್ಲಿಸ್ ಕಾರೆಲ್ ತನ್ನ ಖ್ಯಾತಕೃತಿ ‘Man the Unknown (ಅವ್ಯಕ್ತ ಮಾನವ)’ದಲ್ಲಿ ಒಂದು ಮಾತು ಹೇಳುತ್ತಾನೆ:  “ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ.  ಹಾಗಾಗಿ 15ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೆಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.  ಉಪವಾಸವೇ ದೊಡ್ಡ ಚಿಕಿತ್ಸೆ ಎನ್ನುತ್ತಾನೆ". ನಮ್ಮ ಪ್ರಾಚೀನ ಭಾರತೀಯರು ಇದೇ ಮಾತನ್ನು ಹೇಳಿದ್ದರು ಅಲೆಕ್ಸಿಸ್ ಕಾರೆಲ್ ಇದನ್ನು ವೈಜ್ಞಾನಿಕವಾಗಿ ಬರೆದರೆ ಪ್ರಾಚೀನರು ಏಕೆ-ಏನು ಅನ್ನೋ ವಿವರ ನೀಡದೆ ವಿಧಿವಾಕ್ಯವಾಗಿ ಬರೆದರು. ಈ ಎಲ್ಲ ದೃಷ್ಟಿಯಿಂದ ಏಕಾದಶಿ ತುಂಬ ಮಹತ್ವದ ದಿನ.  ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ.  ಏಕಾದಶಿಯನ್ನು ‘ಹರಿದಿನ’ ಎಂದೂ ಸಹ ಕರೆಯುತ್ತಾರೆ.  ಅಂದು ವೈಷ್ಣವೀಶಕ್ತಿ ಜಾಗೃತವಾಗಿ ಕೆಲಸ ಮಾಡುತ್ತದೆ ಎನ್ನುವುದು ತಾತ್ಪರ್ಯ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ