ಸೌಂದರ್ಯಲಹರಿ

ಸೌಂದರ್ಯಲಹರಿ
ಪ್ರಕೃತಿಪುರುಷ, ಶಿವಶಕ್ತಿ - ಇವು ಅಭಿನ್ನ ತತ್ತ್ವಗಳು. ಅರ್ಧನಾರೀಶ್ವರನ ಕಲ್ಪನೆ, ಈ ಸಿದ್ಧಾಂತಕ್ಕೆ ಪುಷ್ಟಿನೀಡುತ್ತದೆ. ಕಾಳಿದಾಸ "ಜಗತಃ ಪಿತರೌ ವನ್ಧೇ"- ಈ ಜಗನ್ಮಾತಾಪಿತರು ಯಾರು? ಶಿವ ಶಕ್ತಿಯರೇ, ಪ್ರಕೃತಿಪುರುಷರೇ? ಬ್ರಹ್ಮ ವಸ್ತುವನ್ನು ಯಾವ ಹೆಸರಿನಲ್ಲಿ ಬೇಕಾದರೂ ಪೂಜಿಸಬಹುದು - ಕರೆಯಬಹುದು. ಸೃಷ್ಟಿಗೆ ಉಪಾದಾನ ಕಾರಣವೂ, ನಿಮಿತ್ತ ಕಾರಣವೂ ಬ್ರಹ್ಮವಸ್ತುವೇ ಆಗಿದೆ - ಎಂಬ ಮಂತ್ರದ್ರಷ್ಟಾರರ ಅಭಿಪ್ರಾಯ ನೋಡಿದಾಗ, ಜಗತ್ತಿಗೆ ತಂದೆಯೂ ತಾಯಿಯೂ ಪರಬ್ರಹ್ಮ ವಸ್ತುವೇ ಆಗಿದೆ; ಉಪಾಧಿ ಶರೀರಗಳ ಭಿನ್ನತೆಯಿಂದಾಗಿ, ಅದು ಸ್ತ್ರೀ ಪುರುಷರೆಂಬ ಹೆಸರು ಪಡೆದಿದೆ - ಎಂಬುದು ಸ್ಪಷ್ಟಪಡುತ್ತದೆ. ನಾಮರೂಪಗಳನ್ನು ಪಡೆದಿರುವ ಬ್ರಹ್ಮವಸ್ತು, ವಸ್ತುತಃ ನಿರ್ಗುಣ, ನಿರಾಕಾರ, ಶುದ್ಧ, ಸತ್ಯ, ಜ್ಞಾನ, ಅನಂತ - ಎಂಬುದು ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ಸತ್ಯ.
ಯಾವುದೇ ಕಾರ್ಯವಾಗಬೇಕಾದರೂ ಶಕ್ತಿ ಅತ್ಯಗತ್ಯ ಎಂಬುದು ವೈಜ್ಞಾನಿಕ ಸತ್ಯ. ಶಕ್ತಿಗೆ ಶಕ್ತಿಯನ್ನು ಯಾರೂ ಕೊಡಬೇಕಾದ್ದಿಲ್ಲ, ಆದ್ದರಿಂದಲೇ ಶಾಕ್ತೇಯ ಪಂಥದಲ್ಲಿ "ಶಕ್ತಿಃ ಸತ್ಯಸ್ವರೂಪಿಣೀ" ಎಂಬ ಮಾತು ಬಳಕೆಯಲ್ಲಿದೆ. ಶಕ್ತಿಗೆ ಅತ್ಯಂತ ಮಹತ್ವವಿರುವುದರಿಂದ, ಅದು ಆರಾಧ್ಯ ವಸ್ತುವಾಯ್ತು, ಭಾರತೀಯ ಪರಂಪರೆಯಲ್ಲಿ ಶಕ್ತಿಪೂಜೆ ಹೊಸದೇನೂ ಅಲ್ಲ. 'ಮಾತಾ ಪೂರ್ವರೂಪಂ ಪಿತಾ ಉತ್ತರ ರೂಪಂ' ಎನ್ನುತ್ತದೆ ತೈತ್ತರೀಯ ಶ್ರುತಿ. ಋಗ್ವೇದದಲ್ಲಿ ಬರುವ - ದೇವೀಸೂಕ್ತ - ಶಕ್ತ್ಯಾರಾಧನೆಯ ಪ್ರಾಚೀನತೆಗೆ ಸಮುಜ್ವಲ ಸಾಕ್ಷಿಯಾಗಿದೆ.
ಸಾಮಾನ್ಯವಾಗಿ ಮಕ್ಕಳಿಗೆ, ತಂದೆಗಿಂತಲೂ ತಾಯಿಯಲ್ಲಿ ಹೆಚ್ಚು ಆತ್ಮೀಯತೆ, ಸಲಿಗೆ ಎಂಬುದು ನಿರ್ವಿವಾದ ಸಂಗತಿ. ಬಹುಶಃ ಈ ಕಾರಣದಿಂದಿಲೇ ಮಾತೃ ಪೂಜಾವಿಧಾನ, ದೇವೀ ಪೂಜಾ ವಿಧಾನ ಬಳಕೆಗೆ ಬಂತೆಂದರೂ ತಪ್ಪಿಲ್ಲ. ತ್ವಮೇವ ಮಾತಾ ಚ ಪಿತಾ ತ್ವಮೇವ ಎಂಬ ಮಾತಿನ ಔಚಿತ್ಯವನ್ನು ಗಮನಿಸಿದಾಗ, ಆರಾಧನೆ ಯಾವುದೇ ರೂಪದಲ್ಲಾದರೂ ಬಾಧಕವಿಲ್ಲವೆಂಬ ಅಂತ ಸ್ಪಷ್ಟವಾಗುತ್ತದೆ. ಪಿತಾಃ ಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ - ಎಂಬ ಗೀತಾವಾಕ್ಯವೂ ಸಹ ಇದನ್ನೇ ಧ್ವನಿಪೂರ್ಣವಾಗಿ ಸಾರುತ್ತದೆ.
ಪರಮ ಪೂಜ್ಯರಾದ ಶಂಕರ ಭಗವತ್ಪಾದರು ಮಾತೃತ್ವಕ್ಕೆ ಮಹತ್ವಕೊಟ್ಟು, ಯಾವ ಚಿನ್ಮಯ ಭಗವತಿಯ ದಿವ್ಯವರ್ಣನೆ ಮಾಡಿದ್ದಾರೋ, ಭವ್ಯವಿವರಣೆ ನೀಡಿದ್ದಾರೋ, ಆಕೆ ಜಗದ್ಧಾತೃ ಶಕ್ತಿ, "ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ, ನಮಸ್ತಸ್ಯೈ ನಮೋ ನಮಃ" ಎಂದು ದುರ್ಗಾಸಪ್ತಶತಿ ಹಾಡಿ ಹೊಗಳಿರುವುದು ಸಹ ಇದೇ ಜಗದ್ಧಾತ್ರಿಯನ್ನು - ಆಕೆಯನ್ನೇ ಪ್ರಧಾನವಾಗೆಣಿಸಿ ಆರಾಧಿಸುವವರು ಶಾಕ್ತೇಯರು. ಲೋಕವೆಲ್ಲ ಈ ಶಾಯಿಯ ಕರುಣೆಯಿಂದಲೇ ಬದುಕಬೇಕು. ಜನ್ಮ ಪಡೆದ ಪ್ರತಿ ಜೀವವೂ ಪ್ರಪ್ರಥಮವಾಗಿ ಉಚ್ಚರಿಸುವುದು - ಅಂಬಾ, ಅಮ್ಮ ಎಂದು ಲಲಿತಾ ಸಹಸ್ರ ನಾಮದಲ್ಲಿ ಮೊದಲನೆ ಮಾತೇ ಶ್ರೀ ಮಾತಾ - ಎಂದಿದೆ.
ಭಗವತ್ಪಾದರು, ನೂರಾರು ದಿವ್ಯ ಕೃತಿಗಳನ್ನು ಜಗತ್ತಿಗೆ ಕೊಟ್ಟು ಹೋಗಿದ್ದಾರೆ. ಅದರಲ್ಲಿ ಒಂದು "ಆನಂದಲಹರಿ", ಇನ್ನೊಂದು "ಸೌಂದರ್ಯಲಹರಿ" ಸೌಂದರ್ಯ ಆನಂದ. ಇವು ಒಂದೇ ನಾಣ್ಯದ ಎರಡು ಮುಖಗಳು, ಒಂದಕ್ಕೊಂದು ಪೂರಕ, ಪ್ರೇರಕ, ಜಗನ್ಮಾತೆ ಶಂಕರಿಯೂ ಹೌದು, ಭಯಂಕರಿಯೂ ಹೌದು, ಆರ್ತಜನ ಅಭಯಂಕರಿಯೂ ಹೌದು, ಶಂಕರರು ಭಗವಂತನನ್ನು ವಿಶ್ವನಾಥ, ವಿಶ್ವಮಾತೆ - ಎರಡೂ ರೂಪದಲ್ಲಿ ಕಂಡಿದ್ದಾರೆ.
"ಸೌಂದರ್ಯಲಹರಿ"- ನೂರು ಶ್ಲೋಕಗಳಲ್ಲಡಕವಾಗಿದೆ. ಇದು ಮಾಲಿಕೆ ರತ್ನ ಮಾಲಿಕೆ; ರಾಗರತ್ನಮಾಲಿಕೆ-ಶತರಾಗರತ್ನ ಮಾಲಿಕೆ. ಈ ಗ್ರಂಥದ ವಿಶ್ಲೇಷಣೆಯನ್ನು ಎರಡು ರೀತಿಯಲ್ಲಿ ಮಾಡಲವಕಾಶವಿದೆ. ಒಂದು ಮಂತ್ರಶಾಸ್ತ್ರ, ತಂತ್ರಶಾಸ್ತ್ರದ ದೃಷ್ಟಿಯಿಂದ; ಇನ್ನೊಂದು ಕಾವ್ಯಮಯ ದೃಷ್ಟಿಯಿಂದ; ಭಕ್ತಿಸೌಂದರ್ಯದ ದೃಷ್ಟಿಯಿಂದ. ಹೆಸರೇ ಸೂಚಿಸುವಂತೆ ಇದು ಅಚಿನ್ತ್ಯ, ಅಪಾರ, ಅಗಮ್ಯ, ದೈವೀ ಸೌಂದರ್ಯದ ಭೂಮಾನುಭವದಿಂದ ಪ್ರೇರಿತವಾಗಿದೆ.
ಸೌಂದರ್ಯಲಹರಿ - ಎಂತಹ ಧ್ವನಿ ಪೂರ್ಣ ಶಬ್ದ ಪ್ರಯೋಗ! ದೈವೀ ಸೌಂದರ್ಯವನ್ನದರ ಸಮಗ್ರ ಸಂಪೂರ್ಣ ರೂಪದಲ್ಲಿ ಕಂಡವರು ಅತಿವಿರಳ.
ತ್ವದೀಯಂ ಸೌಂದರ್ಯಂ ತುಹಿನಗಿರಿ ಕನ್ಯೇ ತುಲಯಿತುಂ
ಕವೀಂದ್ರಾಃ ಕಲ್ಪಂತೇ ಕಥಮಪಿ ವಿರಿಂಚಿ ಪ್ರಭೃತಯಃ ||
ಹೀಮಾದ್ರಿಸುತೇ, ನಿನ್ನ ಸೌಂದರ್ಯವನ್ನು ಬಣ್ಣಿಸಲು ಬ್ರಹ್ಮನೇ ಮೊದಲಾಗಿ ಉಳಿದೆಲ್ಲ ಕವೀಂದ್ರರೂ ಹೇಗೆ ತಾನೆ ಸಮರ್ಥರಾದಾರು- ಎಂದಿರುವ ಭಗತ್ಪಾದರು ಒಂದು ಕಡೆ ಹೇಳುತ್ತಾರೆ.
ತ್ವದನ್ಯಃ ಪಾಣಿಭ್ಯಾಮ ಭಯವರದೋ ದೈವತಗಣಃ
ಶರಣ್ಯೇ ಲೋಕಾನಾಂ ತವ ಹಿ ಚರಣಾವೇವ ನಿಪುಣೌ ||
ನಿನ್ನ ವಿನಃ ಉಳಿದೆಲ್ಲ ದೇವತೆಗಳೂ ಕೈಯಿಂದ ಅಭಯದಾನ ನೀಡುತ್ತಾರೆ. ಆದರೆ ನಿನ್ನ ಪಾದ ಪದ್ಮಗಳೇ ಸಾಕು, ಅಭಯ, ಅನುಗ್ರಹ ನೀಡುವ ಸಾಮರ್ಥ್ಯವನ್ನು ಪಡೆದಿವೆ. ಏಕೆಂದರೆ ನೀನು ಪ್ರಣತ ಜನ ಸೌಭಾಗ್ಯ ಜನನಿ.
ಕೃಪೆಯಾವಾಗಲೂ ಪಾದಗಳ ಮೂಲಕವೇ ಇಳಿದು ಬರುತ್ತದೆ. ಆದ್ದರಿಂದಲೇ ಪಾದಾಭಿವಂದನ ಪದ್ಧತಿ ಜಾರಿಯಲ್ಲಿದೆ, ಪಾದಗಳೂಬೇಡ; ಅದರ ಪಾವನ ಸ್ಪರ್ಶದಿಂದ ಪುನೀತವಾದ ಪಾದುಕೆಗಳೇ ಸಾಕು ಪರಮಾನುಗ್ರಹದಾಯಕವಾಗುತ್ತವೆ ಎಂದು ಭಾವಿಸಿದ ಇಕ್ಷ್ವಾಕುವಂಶಾವತಂಸ ಭರತನನ್ನು ಸ್ಮರಿಸಿಕೊಂಡಾಗ ಪುಲಕಿತನಾಗದಿರುವ ಸಹೃದಯ ವ್ಯಕ್ತಿ ತುಂಬ ದುರ್ಲಭ.
ಭಗವತ್ಪಾದರು ಈ ಗ್ರಂಥದ ಪ್ರಥಮ ಕವಿತೆಯಲ್ಲಿ "ಜಾಯಾಪತಿನ್ಯಾಯ"ದಂತೆ, ಶಿವಶಕ್ತಿಯರ ವಿವರಣೆ ಕೊಡುತ್ತ ಒಂದು ಹಂತದಲ್ಲಿ ಸೃಷ್ಟಿ ಸ್ಥಿತಿಲಯ ಕಾರ್ಯಗಳನ್ನು ನಿರ್ವಹಿಸುವಂತಹ ದೇವತೆಗಳೂ ಸಹ ಶ್ರೀ ಮಾತೆಯ ಅರುಣ ಚರಣರೇಣು ಮಹಿಮೆಯಿಂದಲೇ ತಂತಮ್ಮ ಕರ್ತವ್ಯಗಳನ್ನು ನಡೆಸುವ ಸಾಮರ್ಥ್ಯವನ್ನು ಪಡೆದಿದ್ದಾರೆಂದು ಅಭಿಪ್ರಾಯ ಪಟ್ಟಿದ್ದಾರೆ. ಆಕೆಯ ಶ್ರೀಪಾದರೇಣುವಿಗೆಂತಹ ಶಕ್ತಿ ಇದೆ? ಅದು ಜಡಜೀವಿಗಳಿಗೆ "ಚೈತನ್ಯಸ್ತಬಕ ಮಕರಂದ ಸೃತಿಝರಿ"-ಯಂತೆ; ದರಿದ್ರ ಜೀವಿಗಳಿಗೆ ಸಕಲ ಭಾಗ್ಯದಾಯಕ ಚಿಂತಾಮಣಿಯಂತೆ; ಜನ್ಮ ಜಲಧಿ ನಿಮಗ್ನರಿಗೆ ತಾರಕ ಸಮಗ್ರಿಯಂತೆ; ಅಜ್ಞಾನಿಗಳಿಗೆ ಜ್ಞಾನದಾಯಕ ವಸ್ತುವಂತೆ!
ಸುಂದರ ಸುರಭಿತಸುವಿಕಸಿತ ಪುಷ್ಪಗಳೇ ಬಿಲ್ಲು; ಭ್ರಮರ ಸಮೂಹವೇ ಆ ಬಿಲ್ಲಿನ ಹಗ್ಗ, ಆ ಬಿಲ್ಲಮೇಲೆ ಹೂಡಲು ಐದು ಬಾಣಗಳು- ಈ ವಿಚಿತ್ರ ಧನುರ್ಧಾರಿ ಯಾರು? ಲೋಕ ಮೋಹಕ ಲಾವಣ್ಯ ಮೂರ್ತಿಯಾದ ಮನ್ಮಥ ಈತನಿಗೊಬ್ಬ ಸಚಿವನಂತೆ-ಸಾಮಂತನಂತೆ-ವಸನ್ತ! ಸುಖಸ್ಪರ್ಶನೀಡಿ ಪುಲಕಿತಗೊಳಿಸುವ ದಕ್ಷಿಣಾನಿಲ - ಮಲಯಮಾರುತ, ಇವನೇರುವ ತೇರಂತೆ!! ಸೌಂದರ್ಯವೇ ಸಾಕಾರವಾದ ಮನಮೋಹಕ ವಿಗ್ರಹವಲ್ಲವೇ ಮನ್ಮಥ. ಈತನಿಗೆ ಈ ಲೋಕಮೋಹಕ ಸೌಂದರ್ಯ ಹೇಗೆ ಬಂತು? ಯಾರ ಕೃಪೆಯ ಫಲವದು? ಶ್ರೀಮಾತೆಯ ಕಡೆಗಣ್ಣ ನೋಟದ ಫಲವಂತೆ!! ಜಗನ್ಮಾತೆಯ ಕೃಪಾದೃಷ್ಟಿಗೆ ಪಾತ್ರನಾಗಲು, ಇಕ್ಷುಕೋದಂಡಪಾಣಿ ತುಂಬ ತಪಸ್ಸು ಮಾಡಿರಬೇಕು!! ಮನ್ಮಥನಿಗೆ ಲಾವಣ್ಯ ನೀಡಿದ ಆಕೆಯ ಲಾವಣ್ಯವೆಷ್ಟಿರಬೇಕು!! ಆಕೆಯ ವಾತ್ಸಲ್ಯವೆಷ್ಟಿರಬೇಕು!! ಆಕೆ ಸೌಂದರ್ಯ ಜಲಧಿ; ವಾತ್ಸಲ್ಯ ಶರಧಿ, ಲಾವಣ್ಯ ತೊಯಧಿ-ಬೇಡಿದವರಿಗೆ ಬೇಡಿದ್ದನ್ನನು ಗ್ರಹಿಸುವ ಕೃಪಾವಾರಿಧಿ.
ಶ್ರೀಮಾತೆಯ ನಿವಾಸಸ್ಥಾನವೆಲ್ಲದೆ? ಭಗವತ್ಪಾದರು ಹೇಳುತ್ತಾರೆ -
ಸುಧಾಸಿಂಧೋರ್ಮಧ್ಯೇ
ಸು ವಿಟಪೀವಾಟೀ ಪರಿವೃತೇ |
ಮಣಿದ್ವೀಪೇ ನೀಪೋಪವನವತಿ
ಚಿನ್ತಾಮಣಿಗೃಹೇ ಶಿವಾಕಾರೇ ಮಂಚೇ ||
ಅಮೃತ ಸಮುದ್ರದ ನಡುವೆ, ಕಲ್ಪ ವೃಕ್ಷಗಳಿಂದಾವೃತವಾದ ಮರಕತ ಮಣಿಮಯ ದ್ವೀಪದಲ್ಲಿ; ಮಂಗಳಕರ ಭದ್ರ ಪೀಠಾಸೀನೆಯಾಗಿರುವ ಚಿನ್ಮಯಿಯನ್ನು ಭಜಿಸುವವರು ಧನ್ಯರು.
ತಾಂತ್ರಿಕರು ಈ ಶ್ಲೋಕಕ್ಕೆ ವಿಶೇಷವಾಗಿ ಅರ್ಥಮಾಡಿದ್ದಾರೆ, ಭೈರವಾಮಳ, ರುದ್ರಯಾಮಳ, ವಾಮಕೇಶ್ವರ ಮಹಾತಂತ್ರ ಮುಂತಾದ ತಂತ್ರಶಾಸ್ತ್ರಗಳಲ್ಲಿ, ದೇವ್ಯುಪಾಸನಾ ಪದ್ಧತಿ ಎರಡು ರೀತಿಯಲ್ಲಿದೆ. ಒಂದು ಸಮಯಾಚಾರ, ಇನ್ನೊಂದು ಕುಲಾಚಾರ ಒಂದು ಅಂತರ ಪೂಜಾ ವಿಧಾನ; ಒಂದು ಬಾಹ್ಯಪೂಜಾವಿಧಾನ, ಶ್ರೀಚಕ್ರದ ಸೃಷ್ಟಿಕ್ರಮ ರಚನೆಯಲ್ಲಿ ಸಮಯಾಚಾರ; ಸಂಹಾರಕ್ರಮ ರಚನೆಯಲ್ಲಿ ಕೌಲಾಚಾರ ಕಂಡುಬರುತ್ತದೆ. "ಶ್ರೀ ಸುಂದರೀಸಾಧನ ತತ್ಪರಾಣಾಂ | ಯೋಗಶ್ಚ ಭೋಗಶ್ಚ ಕರಸ್ಥ ಏವ" - ಎಂದು ಚಕ್ರಾರಾಧನೆಯ ಫಲಸ್ತುತಿ, ಏನೇ ಇರಲಿ ಅದು ಕ್ಷುರಸ್ಯಧಾರಾ - ಕತ್ತಿಯ ಅಲಗಿನಂತೆ ದುರ್ಗಮ ಪಥ.
ಸಕಲ ವಿದ್ಯಾಸ್ವರೂಪಿಣಿಯಾದ, ಸಕಲ ಶಾಸ್ತ್ರ ಸಂಸ್ತೂಯಮಾನವಿಭವೆಯಾದ, ವೀಣಾಪುಸ್ತಕ ಧಾರಿಣಿಯಾದ ಶಾರದೆ, ಹಿರಣ್ಯವರ್ಣಾಂ ಹರಿಣೀಮ್ - ಎಂದು ಕೀರ್ತಿತಳಾಗಿರುವ, ಕ್ಷೀರವಾರಿಧಿಸಂಜಾತೆಯಾದ ಕಮಲವಾಸಿನಿ ಲಕ್ಷ್ಮಿ, ಪರ್ವತ ರಾಜನ ಪ್ರೇಮದ ಪುತ್ರಿ ಪಾರ್ವತಿ, ಸಿಂಹವಾಹಿನಿಯಾಗಿ, ಶುಂಭನಿಶುಂಭ ಮಹಿಷಾಸುರಾದಿ ರಾಕ್ಷಸನಾಶಕ ಪ್ರಳಯಂಕರಿ ಶಕ್ತಿಯಾಗಿ ಮೆರೆದ ದುರ್ಗಿ... ಹೀಗೆ ಚಿಚ್ಛಕ್ತಿ ನಾನಾ ನಾಮರೂಪಧಾರಿಣಿಯಾಗಿದ್ಧಾಳೆ. ಏಕಂ ಸತ್ ವಿಪ್ರಾಃ ಬಹುಧಾ ವದನ್ತಿ!!
ನವರಾತ್ರಿಯಲ್ಲಿ ಶಕ್ತಿ ದೇವತಾರಾಧನೆಯನ್ನು ವಿಶೇಷವಾಗಿ ನಡೆಸುವ ಸಂಪ್ರದಾಯ ನಮ್ಮಲ್ಲಿ ಬೆಳೆದು ಬಂದಿದೆ. ನವಾವರಣ ಪೂಜಾಕ್ರಮವೆಂದು ಪ್ರತ್ಯೇಕ ವಿಧಿವಿಧಾನಗಳೇ ರೂಪಿತವಾಗಿವೆ- ಎಂಬುದನ್ನಿಲ್ಲಿ ಸ್ಮರಿಸಬಹುದಾಗಿದೆ.
ಶರಜ್ಜ್ಯೋತ್ಸ್ನ ಶುದ್ಧಾಂ ಶಶಿಯುತ ಜಟಾಜೂಟಮಕುಟಾಂ
ವರತ್ರಾಸತ್ರಾಣ ಸ್ಫಟಿಕ ಘುಟಿಕಾ ಪುಸ್ತಕ ಕರಾಂ
ಸಕೃನ್ನತ್ವಾ ನತ್ವಾ ಕಥಮಿವ ಸತಾಂ ಸಂನಿದಧತೇ
ಮಧು ಕ್ಷೀರ ದ್ರಾಕ್ಷಾ ಮಧುರಿ ಮಧುರೀಣಾಃ ಫಣಿತಯಃ ||
ಈ ಕವಿತೆಯಲ್ಲಿ, ಭಗವತ್ಪಾದರ ಅಭಿಪ್ರಾಯ ಗಾಂಭೀರ್ಯವನ್ನು ಗಮನಿಸಬೇಕು. ವೀಣಾಪುಸ್ತಕ ಪಾಣಿಯಾದ ವಾಣಿಯನ್ನು, ಒಂದುಸಲವಾದರೂ ಶ್ರದ್ಧಾಭಕ್ತಿಯಿಂದ ಸೇವಿಸಿ, ಸ್ಮರಿಸಿ, ನಮಿಸದವರು ಮಾಧುರ್ಯ ರಸಪೂರ್ಣವಾದ ಕವಿತೆಯನ್ನು ಹೇಗೆ ತಾನೆ ಬರೆಯಬಲ್ಲರು? ಜಗನ್ಮಾತೆಯ ಲಾವಣ್ಯಪೂರ್ಣ ಪ್ರೋಜ್ವಲವದನಾರವಿಂದದ ಅರುಣಕಾಂತಿಗೂ ಮಹತ್ವವಿದೆ. ಅದನ್ನು ಧ್ಯಾನಿಸದವರು ವಾಗ್ವೈಖರಿಯನ್ನು ವಾಗ್ವಿಲಾಸ ಪ್ರವೃತ್ತಿಯನ್ನು ಹೇಗೆ ತಾನೆ ಪಡೆಯಲು ಸಾಧ್ಯ?
ಅರುಣಾಖ್ಯಾಂ ಭಗವತೀಮರುಣಾಭಾಂ ವಿಚಿಂತಯೇತ್ - ಎನ್ನುತ್ತದೆ ವಾಮಕೇಶ್ವರ ತಂತ್ರಶಾಸ್ತ್ರ ಆಕೆಯ ಕೃಪಾ ಪೋಷಿತರೇ ಜಗತ್ತಿನ ಕವಿಗಳು ವಿದ್ವಾಂಸರು!!
ಈ ಗ್ರಂಥದಲ್ಲಿ ಶೃಂಗಾರವೂ ಸಹ ದೈವೀಸ್ವರೂಪ ಪಡೆದಿರುವುದರಿಂದ ಗಂಭೀರವಾಗಿದೆ; ರುಚಿರ ಶುಚಿಕರ ಶೃಂಗಾರವೆನಿಸಿಕೊಂಡಿದೆ. ಜಗನ್ಮಾತೆಯನ್ನು ಸ್ತುತಿಸಲು ಸೂಕ್ತವಾದ ಮಾತುಗಳನ್ನು ಹೇಗೆ ಪಡೆಯುವುದು, ಯಾರಿಂದ ಎರವಲು ಪಡೆಯುವುದು? ಆಕಾರಾದಿ ಕ್ಷಕಾರಾಂತ ವೈಖರೀವಾಕ್ ಸ್ವರೂಪಿಣೀ - ಎಂದು ಆಕೆಯನ್ನು ಸ್ತುತಿಸಲಾಗಿದೆ, ಚಿನ್ಮಯಿ ಭಗವತಿಯನ್ನು, ಆಕೆಯೇ ಸೃಷ್ಟಿಸಿದ, ಅನುಗ್ರಹಿಸಿದ, ಪ್ರೇರಿಸಿದ, ಪ್ರಚೋದಿಸಿದ ಮಾತುಗಳಿಂದಲೇ ಸ್ತುತಿಸಿ ಧನ್ಯರಾಗಬೇಕು ಎಲ್ಲ ಸಾಮಗ್ರಿಗಳನ್ನೂ ತಾನೇ ಸೃಷ್ಟಿಸಿ ಸಿದ್ಧ ಮಾಡಿಕೊಟ್ಟು, ಉಪಯೋಗಿಸಿಕೊಳ್ಳುವ ಸಾಧನ ಸಾಮಗ್ರಿಗಳನ್ನೂ ಒದಗಿಸಿ, ಬಳಸಿಕೊಳ್ಳುವ ಬುದ್ಧಿ ಶಕ್ತಿಯನ್ನೂ ಅನುಗ್ರಹಿಸಿ ಈ ಕೆಲಸಮಾಡಿ ಧನ್ಯನಾಗು ಎನ್ನುವ ಆಕೆಯ ಕರುಣೆ, ವಾತ್ಸಲ್ಯ ಜಗಜ್ಜೀವನಕ್ಕೆ ಅತ್ಯಗತ್ಯವಾದ ಅಧಾರಸ್ಥಂಭಗಳು ಆದ್ದರಿಂದಲೇ ಭಗವತ್ಪಾದರು "ತ್ವದೀಯಾಭಿರ್ವಾಗ್ಭಿಸ್ತವ ಜನನಿ ವಾಚಾಂ ಸ್ತುತಿ ರಿಯಂ" - ಎಂದರು, ಆಚಾರ್ಯ ಶಂಕರರ ಈ ಕೃತಿರತ್ನಕ್ಕೆ ಅನ್ವಯವಾಗುವಂತೆ, ಕಾಳಿದಾಸನ ಒಂದುಮಾತು ಇಲ್ಲಿ ಬರೆಯುವುದು ಅಪ್ರಾಸಂಗಿಕವಾಗಲಾರದು.
ಯೇ ತ್ವಾಂ ಅಂಬ ನ ಶಿಲಯಂತಿ ಮನಸಾ
ತೇಷಾಂ ಕವಿತ್ವಂ ಕುತಃ?
ವಾಗ್ರೋಪಿಣಿಯಾದ ಆಕೆಯನ್ನು ಯಾರು ಧ್ಯಾನಿಸುವುದಿಲ್ಲ, ಅವರಿಗೆ ಕಾವ್ಯರಚನಾ ಶಕ್ತಿ ಹೇಗೆ ಬಂದೀತು? ಯಾರು ಆಕೆಯನ್ನು ಶ್ರದ್ಧಾಸಕ್ತಿಯಿಂದ ಉಪಾಸಿಸುತ್ತಾರೆ, ಯಾರು ಆಕೆಯ ಕೃಪಾದೃಷ್ಟಿಗೆ ಪಾತ್ರರಾಗಿದ್ದಾರೆ ಅಂತಹವರ ಕವಿತೆ-ಸುರಸರಿತ್ ಕಲ್ಲೊಲ ಲೋಲೋರ್ಮಿವತ್ ಪ್ರವಹಿಸುತ್ತದೆ - ಎನ್ನುತ್ತಾನೆ ಕಾಳಿದಾಸ.
ಗಗನಂ ಗಗನಾಕಾರಂ ಸಾಗರಸ್ಸಾಗರೋಪಮಃ - ಎಂಬಂತೆ ಸೌಂದರ್ಯಲಹರಿಗೆ ಸೌಂದರ್ಯ ಲಹರಿಯೆ ಸರಿಸಾಟಿ. ಹೋಲಿಕೆ ಹಾಕಲು ಬೇರೊಂದು ಗ್ರಂಥವಿಲ್ಲ ಜಗನ್ಮಾತೆಯನ್ನು ಒಂದು ಕಡೆ ಶಂಕರರು ಹೀಗೆ ಬೇಡಿಕೊಂಡಿದ್ದಾರೆ-
ಶ್ರುತೀನಾಂ ಮೂರ್ಧಾನೋ ದಧತಿ ತವ ಯೌ ಶೇಖರತಯಾ
ಮಮಾಪ್ಯೇತೌಮಾತಃ ಶಿರಸಿ ಮಯಯಾ ದೇಹಿ ಚರಣೌ ||
ಸಮಸ್ತ ಜಗತ್ತು ಆಕೆಯ ಕೃಪಾಭಿಕ್ಷೆಗಾಗಿ ಕೈಯೊಡ್ಡಿ ನಿಂತಿದೆಯಷ್ಟೆ, ನಮ್ಮ ನಾಡಿನ ಎಲ್ಲ ಹಿರಿಯರೂ ಬೇಡಿಕೊಂಡಿರುವುದಿಷ್ಟೇ- "ಮಾತಾ-ತೌ ಚರಣೌ ದಯಯಾ ಕೃಪಯಾ ಮಮ ಶಿರಸಿ ದೇಹಿ"
ಶತ ಶ್ಲೋಕಗಳ ಈ ಕೃತಿಗೆ, ತಂತ್ರ ಶಾಸ್ತ್ರಾನುಸಾರ ವಿವರಣೆ ನೀಡುತ್ತ ಹೋದರೆ, ಅದೇ ಒಂದು ಪ್ರತ್ಯೇಕ ಸುದೀರ್ಘ ಪ್ರಬಂಧವಾದೀತು. ಸೌಂದರ್ಯ ಲಹರಿಗೆ, ಸುಧಾವಿದ್ಯೋತಿನಿ, ಸೌಭಾಗ್ಯವರ್ಧಿನಿ, ಲಕ್ಷ್ಮೀಧರವ್ಯಾಖ್ಯಾ, ಕಾಮದೇವಸೂರೀಯಟೀಕಾ, ಡಿಂಡಿಮವ್ಯಾಖ್ಯಾಸಹಜಾನಂದೀಯವ್ಯಾಖ್ಯಾ.... ಇತ್ಯಾದಿ ವ್ಯಾಖ್ಯಾನ ಗ್ರಂಥಗಳು ಹೇರಳವಾಗಿವೆ. ವ್ಯಾಖ್ಯಾನಕಾರರು ತಂತಮ್ಮ ದೃಷ್ಟಿಕೋನದಿಂದ ಈ ಗ್ರಂಥವನ್ನು ತೊಗಿನೋಡಿದ್ದಾರೆ; ವಿವರಿಸಿ, ವ್ಯಾಕ್ಯಾನಿಸಿ ಕೃತಾರ್ಥರಾಗಿದ್ದಾರೆ, ಆದರೆ ದೈವೀ ಸೌಂದರ್ಯಲಹರಿಯ ಸಮಗ್ರ ಸ್ವರೂಪ ಭಗವತ್ಪಾದರಿಗೆ ಮಾತ್ರ ವೇದ್ಯವಾಗಿತ್ತು; ಏಕೆಂದರೆ ಋಗ್ವೇದದ ದೇವೀಸೂಕ್ತದಲ್ಲಿ ಒಂದು ಮಾತಿದೆ -
"ಯಂ ಕಾಮಯೇ ತಂ ತಮುಗ್ರಂ ಕೃಣೋಮಿ, ತಂ ಬ್ರಹ್ಮಾಣಂ, ತಂ ಋಷಿಂ, ತಂ ಸುಮೇಧಾಮ್ ||"
ಆಕೆಯ ಕೃಪಾಪಾತ್ರರಾಗಿ, ಬ್ರಹ್ಮಾಣಂ, ಋಷಿಂ, ಸುಮೇಧಾಂ ಆಗಿದ್ದವರು ಆಚಾರ್ಯ ಶಂಕರ ಭಗವತ್ಪಾದರು.
ಯಾರ ದಿವ್ಯ ಭವ್ಯ ಸೌಂದರ್ಯಲಹರಿ, ಚೇತೋಹಾರಿಹಾದ ಧಾಟಿಯಲ್ಲಿ, ಸರಿಸಾಟಿ ಇಲ್ಲದ ರೀತಿಯಲ್ಲಿ ಕವಿವಾಣಿಯಾಗಿ ಪ್ರವಹಿಸಿದೆಯೋ, ಆ ಋತಚಿನ್ಮಯಿ ಜಗದ್ಧಾತ್ರಿಯನ್ನು ಬೇಡಿಕೊಳ್ಳುವುದೊಂದೇ ನಮ್ಮ ಕರ್ತವ್ಯ "ಅವತುಮಾಂ, ಅವತು ವಕ್ತಾರಂ"-ಎಂದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ