ಶಿವಾಪರಾಧ ಕ್ಷಮಾಪಣ ಸ್ತೋತ್ರಮ್

ಆದೌ ಕರ್ಮ ಪ್ರಸಂಗಾತ್ಕಲಯತಿ ಕಲುಷಂ ಮಾತೃಕುಕ್ಷೌ ಸ್ಥಿತಂ ಮಾಂ |
ವಿಣ್ಮೂತ್ರಾಮೇಧ್ಯಮಧ್ಯೇ ಕ್ವಥಯತಿ ನಿತರಾಂ ಜಾಠರೋ ಜಾತವೇದಾಃ  ||
ಯದ್ಯದ್ವೈ ತತ್ರ ದುಃಖಂ ವ್ಯಥಯತಿ ನಿತರಾಂ ಶಕ್ಯತೇ ಕೇನ ವಕ್ತುಂ- |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೧||
ಪೂರ್ವ ಜನ್ಮದಲ್ಲಿ ನಾನು ಮಾಡಿದ್ದ ಪಾಪ ಕರ್ಮಗಳ ಫಲವಾಗಿ  ತಾಯಿಯ ಗರ್ಭದಲ್ಲಿ ಆ ಪಾಪ ಲೇಪಗಳು ನನ್ನನ್ನು ಬಹುವಾಗಿ ಕಾಡಿದವು. ಅಲ್ಲಿನ ಮಲ ಮೂತ್ರಾದಿ ಕಲ್ಮಷಗಳಲ್ಲಿ ನಾನು ಕಲುಷಿತನಾಗಿರಬೇಕಾಯಿತು. ತಾಯಿಯ ಜಠರಾಗ್ನಿಯು ನನ್ನನ್ನು ಬಹುವಾಗಿ ಬೇಯಿಸಿತು. ಅಲ್ಲಿ ನಾನೇನೇನು ಕಷ್ಟ ಕೋಟಲೆಗಳನ್ನು ಅಲ್ಲಿ ಅನುಭವಿಸಬೇಕಾಗಿ ಬಂತು ಎಂಬುದನ್ನು ಯಾರಿಂದ ತಾನೇ ವರ್ಣಿಸಲು ಸಾಧ್ಯ? ಹೇ! ಶಂಕರನೇ, ಹೇ! ಮಹಾದೇವನೇ, ಹೇ! ಶಿವನೇ; ಸ್ವಾಮೀ, ಹೇ! ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಬಾಲ್ಯೇ ದುಃಖಾತಿರೇಕೋ ಮಲಲುಲಿತವಪುಃ ಸ್ತನ್ಯಪಾನೇ ಪಿಪಾಸಾ |
ನೋ ಶಕ್ತಶ್ಚೇಂದ್ರಿಯೇಭ್ಯೋ ಭವಗುಣಜನಿತಾ ಜಂತವೋಮಾಂ ತುದಂತಿ|| ನಾನಾರೋಗಾತಿದುಃಖಾದ್ರುದನಪರವಶಃ ಶಂಕರಂ ನ ಸ್ಮರಾಮಿ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೨||
ಬಾಲ್ಯದಲ್ಲಿ ನನ್ನಲ್ಲಿ ದುಃಖಗಳು ಅತಿಯಾಗಿದ್ದವು. ಮಲ ಮೆತ್ತಿದ ಶರೀರ, ಸದಾ ಸ್ತನ್ಯ ಪಾನದ ಬಲವಾಗಿದ್ದ ಬಯಕೆ, ನನ್ನ ಇಂದ್ರಿಯಗಳನ್ನು ನಾನೇ ನಿಗ್ರಹಿಸಿಕೊಳ್ಳಲಾಗದ ದುರ್ಬಲತೆ, ಅದರೊಂದಿಗೆ ತಾವು ಪೂರ್ವ ಜನ್ಮದಲ್ಲಿ ಮಾಡಿದ್ದ ಪಾಪಶೇಷಗಳ ಫಲದಿಂದ ಜನಿಸಿದ ಸೊಳ್ಳೆ, ನೊಣ, ಮೊದಲಾದ ಜಂತುಗಳು ನನ್ನನ್ನು ಬಹಳವಾಗಿ ಕಾಡಿದವು. ವಿವಿಧ ರೋಗಗಳು ನನ್ನನು ಬಾಧಿಸಿ ಅದರಿಂದಾಗಿ ನಾನು ರೋದಿಸುತ್ತಾ ಕೇವಲ ಸ್ವತಂತ್ರ ರಹಿತನಾಗಿ ಪರರ ವಶವರ್ತಿಯಾಗಿದ್ದೆ. ಇದರಿಂದಾಗಿ ನಾನು ಶಂಕರನನ್ನು ಸ್ಮರಣೆ ಮಾಡಲಿಲ್ಲ. ಹಾಗಾಗಿ ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ;ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಪ್ರೌಢೋsಹಂ ಯೌವನಸ್ತೋ ವಿಷಯವಿಷಧರೈಃ ಪಂಚಭಿರ್ಮರ್ಮಸಂಧೌ |
ದಷ್ಟೋ ನಷ್ಟೋ ವಿವೇಕಃಸುತಧನ ಯುವತಿಸ್ವಾದಸೌಖ್ಯೇ ನಿಷ್ಣ್ಣಾಃ ||
ಶೈವೀಚಿಂತಾವಿಹೀನಂ ಮಮಹೃದಯಮಹೋ ಮಾನಗರ್ವಾಧಿ ರೂಢಂ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೩||
ನಾನು ಬೆಳೆದು ಯುವಕನಾದಾಗ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆನ್ನುವ ಐದು ವಿಷ ಸರ್ಪಗಳು ನನ್ನ ಜೀವಸ್ಥಾನವನ್ನು ಕಚ್ಚಿದವು. ಈ ಕಾರಣದಿಂದಾಗಿ ನನ್ನಲ್ಲಿ ವಿವೇಕವೆಂಬುದು ಶೂನ್ಯವಾಯಿತು. ಕೇವಲ ಪತ್ನಿ ಮಕ್ಕಳು ಸಂಪತ್ತುಗಳ ಸುಖಾನುಭವದಲ್ಲಿಯೇ ಮಗ್ನನಾಗಿ ಕಾಲಕಳೆದೆ. ಈಶ್ವರೀಯ ಶಕ್ತಿಯ ಚಿಂತಾ ವಿಹೀನನಾದ ನನ್ನ ಹೃದಯದ ಪೂರ್ತಿ ಅಯ್ಯೋ! ಸೊಕ್ಕು ದರ್ಪಗಳಿಂದ ತುಂಬಿಕೊಂಡಿತು. ಸ್ವಾಮೀ, ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ; ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ವಾರ್ಧ್ಯಕ್ಯೇಚೇಂದ್ರಿಯಾಣಾಂ ವಿಕತಗತಿಮತಿಶ್ಚಾಧಿದೈವಾದಿ  ತಾಪೈಃ |
ಪ್ರಾಪ್ತೈರೋಗೈರ್ವಿಯೋಗೈರ್ವ್ಯಸನಕೃಶತನೋರ್ಜ್ಞಪ್ತಿಹೀನಂಚ ದೀನಮ್ ||
ಮಿಥ್ಯಾಮೋಹಾಭಿಲಾಷೈರ್ಭ್ರಮತಿ ಮಮ ಮನೋ ಧೂರ್ಜಟೇರ್ಧ್ಯಾನ ಶೂನ್ಯಂ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೪||
ಈ ನನ್ನ ಮುಪ್ಪಿನ ಸಮಯದಲ್ಲಿ ಇಂದ್ರಿಯಗಳ ಚಲನೆ,ಶಕ್ತಿ,ಮತ್ತು ನಿರ್ಣಯಗಳು ಕುಂಠಿತಗೊಂಡಿವೆ. ಇಷ್ಟದೇವತೆಯ ಕೋಪತಾಪಗಳಿಂದ ಪ್ರಾಪ್ತವಾಗಿರುವ ರೋಗ,ವಿಯೋಗಾದಿ ಮನೋವ್ಯಥೆಗಳ ಕಾರಣದಿಂದ ಶರೀರಶಕ್ತಿಯು ಇಳಿಮುಖವಾಗಿ ನನ್ನ ಜ್ಞಾನಶಕ್ತಿಯು ನಾಶವಾಗಿ ದುಃಖವನ್ನು ಅನುಭವಿಸುತ್ತಿದೆ. ಆದರೂ ಈ ನನ್ನ ಮನಸ್ಸು ಧೂರ್ಜಟಿಯನ್ನು ಧ್ಯಾನ ಮಾಡದೆ ವ್ಯರ್ಥವಾದ ಮೋಹಾಭಿಲಾಷೆಗಳ ಬೆನ್ನು ಹತ್ತಿ ತಿರುಗುತ್ತಿದೆ. ಆದ ಕಾರಣ  ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ; ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಸ್ನಾತ್ವಾ ಪ್ರತ್ಯೂಷಕಾಲೇ ಸ್ವಪನವಿಧಿವಿಧೌ ನಾಹೃತಂ ಗಾಂಗತೋಯಂ |
ಪೂಜಾರ್ಥಂ ವಾ ಕದಾಚಿದ್ಬಹುರಗಹನಾತ್ ಅಖಂಡಬಿಲ್ವೀದಲಂವಾ ||
ನಾನೀತಾ ಪದ್ಮಮಾಲಾ ಸರಸಿ ವಿಕಸಿತಾ ಗಂಧಧೂಪೈಸ್ತ್ವದರ್ಥಂ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೫||
ಉಷಃ ಕಾಲದಲ್ಲಿ ನಿತ್ಯನೈಮಿತ್ತಿಕಾದಿಗಳನ್ನು ಮುಗಿಸಿ, ಸ್ನಾನ ಮಾಡಿ ವಿಧಿಯುಕ್ತವಾಗಿ ನಿನ್ನ ಅಭಿಷೇಕಕ್ಕಾಗಿ ಗಂಗಾಜಲವನ್ನು ನಾನೆಂದೂ ತಂದವನಲ್ಲ ಅಥವಾ ದಟ್ಟ ಕಾನನದೊಳಗೆ ಸಾಗಿ ನಿನ್ನ ಆರಾಧನೆಗಾಗಿ ತುಂಡಾಗದ ಬಿಲ್ವದಳನ್ನು ಅಕಸ್ಮಾತ್ತಾಗಿ ಕೂಡಾ ನಾನೆಂದೂ ಕೊಯಿದು ತಂದವನಲ್ಲ. ಸರೋವರದಲ್ಲಿ ಅರಳಿರುವ ಕಮಲ ಪುಷ್ಪಗಳನ್ನು ತಂದು ಗಂಧಾಧೂಪಗಳೊಂದಿಗೆ ನಿನಗರ್ಪಿಸುವ ಕಾರ್ಯವನ್ನು ನಾನೆಂದೂ ಮಾಡಿದವನಲ್ಲ, ಆದ ಕಾರಣ ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ; ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ದುಗ್ಧೈರ್ಮಧ್ಯಾಜ್ಯಯುಕ್ತೈರ್ದಧಿಗುಡಸಹಿತೈಃ ಸ್ನಾಪಿತಂ ನೈವ ಲಿಂಗಂ |
ನೋ ಲಿಪ್ತಂ ಚಂದನಾದ್ಯೈಃ ಕನಕ ವಿರಚಿತೈಃ ಪೂಜಿತಂ ನ ಪ್ರಸೂನೈಃ ||
ಧೂಪೈಃಕರ್ಪೂರದೀಪೈರ್ವಿವಿಧರಸಯುತೈರ್ನೈವ ಭಕ್ಷ್ಯೋಪಹಾರೈಃ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೬||
ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆಗಳಿಂದ ನಾನೆಂದೂ ಶಿವಲಿಂಗಕ್ಕೆ ಪಂಚಾಮೃತಾಭಿಶೇಕವನ್ನು ಮಾಡಿದವನಲ್ಲ. ಶ್ರೀಚಂದನಾದಿ ಪರಿಮಳಭರಿತ ದ್ರವ್ಯಗಳನ್ನು ನಾನೆಂದೂ ಶಿವಲಿಂಗಕ್ಕೆ ಲೇಪಿಸಿದವನಲ್ಲ.ಎಂದೂ ಸುವರ್ಣ ಪುಷ್ಪಗಳಿಂದ ಅರ್ಚಿಸಲಿಲ್ಲ. ಧೂಪದಿಂದಾಗಲೀ ಕರ್ಪೂರ ದೀಪದಿಂದಾಗಲೀ ನಾನೆಂದೂ ಆರತಿಯನ್ನು ಬೆಳಗಿದವನಲ್ಲ. ರಸಭರಿತವಾಗಿರುವ ಭಕ್ಷ್ಯಭೋಜ್ಯಗಳನ್ನು ನಾನೆಂದೂ ನಿವೇದಿಸಿದವನಲ್ಲ. ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ; ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ನೋ ಶಕ್ಯಂ ಸ್ಮಾರ್ತಕರ್ಮ ಪ್ರತಿಪದಗಹನೇ ಪ್ರತ್ಯವಾಯಾಕುಲಾಢ್ಯೇ |
ಶ್ರೌತೇ ವಾರ್ತಾ ಕಥಂ ಮೇ ದ್ವಿಜಕುಲವಿಹಿತೇ ಬ್ರಹ್ಮ ಮಾರ್ಗಾನುಸಾರೇ ||
ತತ್ವೇs ವಿಚಾರೈಃ ಶ್ರವಣಮನಯೊಃ ಕಿಂ ನಿಧಿಧ್ಯಾಸಿತವ್ಯಂ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೭||
ನನ್ನ ಹೆಜ್ಜೆ ಹೆಜ್ಜೆಗೂ ತಪ್ಪು ಹುಡುಕುವಿಕೆಯಿಂದಲೂ, ಅಡ್ಡಿ ಆತಂಕಗಳಿಂದಲೂ ಕೂಡಿದ ಅದ್ವೈತ ಸಂಪ್ರದಾಯಗಳ ಸ್ಮೃತಿಗಳಿಗೆ ಸಂಬಂಧಿಸಿದ ಕರ್ಮಗಳ ಅನುಷ್ಠಾನವೇ ನನ್ನ ಜ್ಞಾನಕ್ಕೆ ಹೊರತಾಗಿರುವಾಗ; ಇನ್ನು ವೇದ ಶಾಸ್ತ್ರಗಳಲ್ಲಿ ಬ್ರಾಹ್ಮಣರಿಗೆ ವಿಧಿಸಲಾಗಿರುವ ಬ್ರಹ್ಮ ಮಾರ್ಗದ ಅನುಷ್ಠಾನ ನನ್ನಿಂದ ಹೇಗೆ ತಾನೇ ಸಾಧ್ಯ? ವಿಮರ್ಶೆಯ ಮೂಲಕ ಕೇಳುವಿಕೆ ಹಾಗೂ ಚಿಂತನೆಗಳ ಸ್ವರೂಪವನ್ನೇ ನಾನಿನ್ನೂ ಅರಿತುಕೊಳ್ಳಲಸಾಧ್ಯವಾಗಿರುವಾಗ ನಿಧಿ ಧ್ಯಾಸನ ನನ್ನಿಂದ ಎಂತು ತಾನೇ ಸಾಧ್ಯ?ಹೀಗಿರುವಾಗ ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ; ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಧ್ಯಾತ್ವಾ ಚಿತ್ತೇ ಶಿವಾಕ್ಯಂ ಪ್ರಚುರತರಧನಂ ನೈವ ದತ್ತಂ ದ್ವಿಜೇಭ್ಯೋ |
ಹವ್ಯಂ ತೇ ಲಕ್ಷ ಸಂಖ್ಯೈರ್ಹುತವಹವದನೇ ನಾರ್ಪಿತಂ ಬೀಜಮಂತ್ರೈಃ||
ನೋ ತಪ್ತಂ ಗಾಂಗತೀರೇ ವ್ರತಜಪನಿಯಮೈ ರುದ್ರಜಾಪ್ಯಂ ನ ಜಪ್ತಂ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೮||
ಶಿವನನ್ನು ಮನದಲ್ಲಿಯೇ ಧ್ಯಾನಿಸುತ್ತಾ ಬ್ರಾಹ್ಮಣರಿಗೆ ನಾನೆಂದೂ ಯಥೇಷ್ಟ ದಾನವನ್ನು ಎಂದೂ ಮಾಡಿದವನಲ್ಲ. ನಿನ್ನ ಬೀಜಮಂತ್ರವನ್ನು ಜಪ ಮಾಡುತ್ತಾ ನಿನ್ನ ಪ್ರೀತಿಗಾಗಿ ಯಜ್ಞಕುಂಡದಲ್ಲಿ ಲಕ್ಷ ಸಂಖ್ಯೆಯಲ್ಲಿ ಹವಿಸ್ಸನ್ನು ನಾನೆಂದೂ ಅರ್ಪಿಸಿದವನಲ್ಲ. ಗಂಗಾ ನದೀ ತಟಾಕದಲ್ಲಿ ಕುಳಿತು ವ್ರತ, ಜಪ, ನಿಯಮಾದಿಗಳ ಮೂಲಕವಾಗಿ ತಪ್ಪಸನ್ನು ಎಂದಿಗೂ ಮಾಡಿದವನಲ್ಲ. ಶ್ರೇಷ್ಠವಾದ ನಿನ್ನ ರುದ್ರ ಮಂತ್ರವನ್ನು ನಾನೆಂದೂ ಜಪಿಸಿದವನಲ್ಲ ಆದರೂ ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ; ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ನಗ್ನೋ ನಿಸ್ಸಂಗಶುದ್ಧ ಸ್ತ್ರಿಗುಣ ವಿರಹಿತೋ ಧ್ವಸ್ತ ಮೋಹಾಂಧಕಾರೋ |
ನಾಸಾಗ್ರೇ ನ್ಯಸ್ತ ದೃಷ್ಟಿರ್ವಿದಿತಭವಗುಣೋ ನೈವ ದೃಷ್ಟಃ ಕದಾಚಿತ್ ||
ಉನ್ಮನ್ಯಾವಸ್ಥಯಾ ತ್ವಾಂ ವಿಗತಕಲಿಮಲಂ ಶಂಕರಂ ನ ಸ್ಮರಾಮಿ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೯||
ದಿಗಂಬರನೂ ಸಂಗರಹಿತನೂ, ಶುದ್ಧನೂ, ತ್ರಿಗುಣ ವಿರಹಿತನೂ, ಆಶಾಪಾಶಗಳಿಂದ ಹೊರತಾದವನೂ, ಮೂಗಿನ ತುದಿಭಾಗಕ್ಕೆ ನೆಟ್ಟ ದೃಷ್ಟಿಯನ್ನು ಹೊಂದಿರುವವನೂ ಆದ ಸಂಸಾರದ ರೂಪದ ಬಗ್ಗೆ ಅರಿವು ಉಳ್ಳವನಾದ ನಿನ್ನನ್ನು ನಾನು ಎಂದೂ ದರ್ಶನ ಮಾಡಿದವನಲ್ಲ. ಏಕೋಧ್ಯಾನದಿಂದ ಮಂಗದಾಯಕನಾಗಿರುವ ಮತ್ತು ದರಿದ್ರ ಲಕ್ಷ್ಮಿಯನ್ನು ದೂರೀಕರಿಸುವ ನಿನ್ನನ್ನು ನಾನೆಂದೂ  ಸ್ಮರಿಸಿದವನಲ್ಲ.ಆದುದರಿಂದ ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ; ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಸ್ಥಿತ್ವಾ ಸ್ಥಾನೇ ಸರೋಜೇ ಪ್ರಣವಮಯಮರುತ್ಕುಂಭಿತೇ ಸೂಕ್ಷ್ಮ ಮಾರ್ಗೇ |
ಶಾಂತೇ ಸ್ವಾಂತೇ ಪ್ರಲೀನೇ ಪ್ರಕಟಿತ ವಿಭವೇ ದಿವ್ಯರೂಪೇ ಶಿವಾಖ್ಯೇ ||
ಲಿಂಗಜ್ಞೇ ಬ್ರಹ್ಮವಾಕ್ಯೇ ಸಕಲತನುಗತಂ ಶಂಕರಂ ನ ಸ್ಮರಾಮಿ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೧೦||
ಪದ್ಮಾಸನದಲ್ಲಿ ಕುಳಿತು ಪ್ರಣವ ಮಂತ್ರವನ್ನು ಉಚ್ಚರಿಸುತ್ತಾ ಪ್ರಾಣ ವಾಯುವನ್ನು ಸುಷುಮ್ನ ಮಾರ್ಗದಲ್ಲಿ ನಿರೋಧಿಸಿ ಮನಸ್ಸನ್ನು ಪ್ರಶಾಂತಗೊಳಿಸಿ ನಿನ್ನ ಮಹಿಮೆಯನ್ನು ತೋರ್ಪಡಿಸುವ ಓಂಕಾರವನ್ನು ಪ್ರಕಾಶಮಯವೂ ಪರಬ್ರಹ್ಮ ಸ್ವರೂಪವೂ ಆದ ಸಾಕ್ಷಿರೂಪದ ಚೈತನ್ಯ ಶಕ್ತಿಯಲ್ಲಿ ಲೀನಗೊಳಿಸಿ ಸಮಸ್ತ ದೇಹಗಳಲ್ಲೂ ಅಂತರ್ಯಾಮಿಯಾಗಿರುವ ಶಂಕರನಾದ ನಿನ್ನನ್ನು ನಾನೆಂದೂ ಸಮಾಧಿ ಸ್ಥಿತಿಯಲ್ಲಿ ಧ್ಯಾನ ಮಾಡಿದ್ದಿಲ್ಲ.ಆದರೂ ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ; ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಹೃದ್ಯಂ ವೇದಾಂತವೇದ್ಯಂ ಹೃದಯ ಸರಸಿಜೇ ದೀಪ್ತ ಮುದ್ಯತ್ಪ್ರಕಾಶಂ |
ಸತ್ಯಂ ಶಾಂತ ಸ್ವರೂಪಂ ಸಕಲಮುನಿಮನಃಪದ್ಮಷಂಡೈಕವೇದ್ಯಮ್ ||
ಜಾಗ್ರತ್ಸ್ವಪ್ನೇ ಸುಷುಪ್ತೌ ತ್ರಿಗುಣ ವಿರಹಿತಂ ಶಂಕರಂ ನ ಸ್ಮರಾಮಿ |
ಕ್ಷಂತವ್ಯೋಮೇsಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||೧೧||
ಮನಮೋಹಕನೂ, ವೇದಾಂತಗಳಿಂದ ತಿಳಿಯಲ್ಪಡುವವನೂ, ಹೃತ್ಕಮಲದಲ್ಲಿ ಬೆಳಗುತ್ತಿರುವನೂ, ಪ್ರಕಾಮಯನೂ, ಸತ್ಯನೂ ಶಾಂತ ಸ್ವರೂಪನೂ, ಮುನಿಗಳ ಹೃತ್ಕಮಲಕ್ಕೆ ಮಾತ್ರಾ ತಿಳಿಯಲ್ಪಡುವವನೂ, ಜಾಗ್ರತ್-ಸ್ವಪ್ನ-ಸುಷುಪ್ತಿಗಳೆನ್ನುವ ಮೂರು ಅವಸ್ತಾತ್ರಯಗಳಲ್ಲಿಯೂ ತ್ರಿಗುಣ ರಹಿತನಾಗಿರುವವನೂ ಆಗಿರುವ ಮಂಗಲಮಯ ಸ್ವರೂಪನಾಗಿರುವ ಶಂಕರನೇ ನಿನ್ನನ್ನು ನಾನೆಂದೂ ಸ್ಮರಿಸಲಿಲ್ಲ ಆದ ಕಾರಣ ಹೇ!ಶಂಕರನೇ, ಹೇ!ಮಹಾದೇವನೇ, ಹೇ!ಶಿವನೇ; ಸ್ವಾಮೀ, ಹೇ!ಶಂಭುವೇ; ನನ್ನ ಸರ್ವಾಪರಾಧಗಳನ್ನು ಕ್ಷಮಿಸು.

ಚಂದ್ರೋದ್ಭಾಸಿತಶೇಖರೇ ಸ್ಮರಹರೇ ಗಂಗಾಧರೇ ಶಂಕರೇ |
ಸರ್ಪೈರ್ಭೂಷಿತಕಂಠಕರ್ಣವಿವರೇ ನೇತ್ರೋತ್ಥ ವೈಶ್ವಾನರೇ  ||
ದಂತಿತ್ವಕ್ಕೃತಸುಂದರಾಂಬರಧರೇ ತ್ರೈಲೋಕ್ಯಸಾರೇ ಹರೇ |
ಮೋಕ್ಷಾರ್ಥಂ ಕುರು ಚಿತ್ತ ವೃತ್ತಿ ಮಚಲಾ ಅನ್ಯೈಸ್ತು ಕಿಂ ಕರ್ಮಭಿಃ ||೧೨||
ಚಂದ್ರನಂತೆ ಉಜ್ವಲವಾಗಿ ಪ್ರಕಾಶಿಸುತ್ತಿರುವ ಹಣೆಯುಳ್ಳವನೂ, ಮನ್ಮಥನ ಸಂಹಾರಿಯೂ, ಗಂಗೆಯನ್ನು ಧರಿಸಿರುವವನೂ, ಸುಖದಾಯಕನೂ, ಕೊರಳು-ಕಿವಿಗಳನ್ನು ನಾಗಗಳಿಂದ ಅಲಂಕರಿಸಿಕೊಂಡವನೂ, ನಯನಗಳಲ್ಲಿ ಅಗ್ನಿಯನ್ನು ಉದ್ಭವಿಸಿಕೊಂಡವನೂ, ಆನೆಯ ಚರ್ಮವನ್ನು ಮನೋಹರವಾಗಿರುವ ವಸ್ತ್ರದಂತೆ ಧರಿಸಿಕೊಂಡವನೂ, ಮೂರು ಲೋಕಗಳ ಸಾರರೂಪನೂ ಆಗಿರುವ ಹರನಲ್ಲಿ ಮನಸ್ಸನ್ನು ರೂಢಿಸಿಕೊಂಡು, ಮೋಕ್ಷ ಸಂಪದವನ್ನು ಪಡೆಯಲೋಸುಗವಾಗಿ ಸ್ಥಿರಗೊಳಿಸುವವನಾಗು ಉಳಿದ ಕಾರ್ಯಗಳಿಂದ ಏನು ಪ್ರಯೋಜನವಿದೆ?

ಕಿಂ ವಾsನೇನ ಧನೇನ ವಾಜಿಕರಿಭಿ: ಪ್ರಾಪ್ತೇನ ರಾಜ್ಯೇನ ಕಿಂ |
ಕಿಂ ವಾ ಪುತ್ರ ಕಲತ್ರ ಮಿತ್ರ ಪಶುಭಿರ್ದೇಹೇನ ಗೇಹೇನ ಕಿಮ್ ||
ಜ್ಞಾತ್ವೈ ತತ್ ಕ್ಷಣಭಂಗುರಂ ಸಪದಿರೇ ತ್ಯಾಜ್ಯಂ ಮನೋ ದೂರತಃ|
ಸ್ವಾತ್ಮಾರ್ಥಂ ಗುರುವಾಕ್ಯತೋ ಭಜ ಭಜ ಶ್ರೀ ಪಾರ್ವತೀ ವಲ್ಲಭಮ್ ||೧೩||
ಸ್ವಾಮಿಯೇ! ಈ ಸಂಪತ್ತಿನಿಂದಾಗಲೀ, ಆನೆ ಕುದುರೆಗಳಿಂದಾಗಲೀ ಅಥವಾ ಭೂಮಿ ಪ್ರಾಪ್ತಿಯಿಂದಾಗಲೀ, ಏನು ಪ್ರಯೋಜನವಿದೆ? ಮಗ, ಮಡದಿ, ಸ್ನೇಹಿತರು, ಬಂಧುಗಳು, ಶರೀರ, ಪಶುಗಳು, ಮನೆ, ಮಠಗಳು ಇತ್ಯಾದಿಗಳಿಂದ ಏನು ಪ್ರಯೋಜನವಿದೆ? ಎಲೈ ಮನವೇ!ಇವೆಲ್ಲವುಗಳು ಕ್ಷಣಿಕವೆಂದು ಅರ್ಥವಿಸಿಕೊಂಡು ಬೇಗನೆ ತ್ಯಜಿಸುವುದು ಬುದ್ಧಿವಂತಿಕೆ. ಬದಲಾಗಿ ಆತ್ಮ ಸಾಕ್ಷಾತ್ಕಾರಕ್ಕಾಗಿ ಗುರು ವಾಕ್ಯವಿದೆಂದು ಸ್ವೀಕರಿಸಿ ಶ್ರೀ ಪಾರ್ವತೀಪತಿಯಾಗಿರುವ ಮಹಾದೇವನನ್ನು ಪುನಃಪುನಃ ಸ್ತುತಿಸುವವನಾಗು.

ಪೌರೋಹಿತ್ಯಂ ರಜನಿ ಚರಿತಂ ಗ್ರಾಮಣಿತ್ವಂ ನಿಯೋಗೋ |
ಮಾಠಾಪತ್ಯಂ ಹ್ಯನೃತವಚನಂ ಸಾಕ್ಷಿವಾದ: ಪರಾನ್ನಮ್ ||
ಬ್ರಹ್ಮದ್ವೇಷಃ ಖಲಜನರತಿಃ ಪ್ರಾಣಿನಾಂ ನಿರ್ದಯತ್ವಂ |
ಮಾ ಭೂದೇವಂ ಮಮ ಪಶುಪತೇ ಜನ್ಮ ಜನ್ಮಾಂತರೇಷು ||೧೪||
ಹೇ ಸ್ವಾಮಿಯೇ! ಪುರೋಹಿತವೃತ್ತಿಯ ನಿಶಾ ಸಂಚಾರ; ಗ್ರಾಮಾಧಿಕಾರಿಯಾಗಿ ಪ್ರತಿನಿಧಿತ್ವದ ಕಾರ್ಯ; ಮಠಾಧಿಪತಿಯ ಕೆಲಸ; ಸುಳ್ಳು ಹೇಳುವ ಕೆಲಸ; ವಿವಾದಗಳಲ್ಲಿ ಸಾಕ್ಷಿ ಹೇಳುವ ಕಾರ್ಯ; ಭಿಕ್ಷಾ ವೃತ್ತಿ; ಬ್ರಾಹ್ಮಣರಲ್ಲಿ ವೈರತ್ವ; ದುರ್ಜನರುಗಳ ಸಂಘ; ಪ್ರಾಣಿಗಳ ಬಗ್ಗೆ ನಿರ್ದಯತ್ವ; ಮತ್ತು ಭೂಮಿಯ ಒಡೆತನ; ಹೇ!ಪಶುಪತಿಯೇ ನನಗೆ ಜನ್ಮ ಜನ್ಮಾಂತರಗಳಲ್ಲಿಯೂ ಪ್ರಾಪ್ತವಾಗದೆ ಇರಲಿ.

ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂಯಾತಿ ಕ್ಷಯಂ ಯೌವನಂ |
ಪ್ರತ್ಯಾಯಾಂತಿ ಗತಾಃ ಪುನರ್ನ ದಿವಸಾಃ ಕಾಲೋ ಜಗದ್ಭಕ್ಷಕಃ  ||
ಲಕ್ಷ್ಮೀಸ್ತೋಯತರಂಗ ಭಂಗ ಚಪಲಾ ವಿದ್ಯುಚ್ಛಲಂ ಜೀವಿತಂ |
ತಸ್ಮಾನ್ಮಾಂ ಶರಣಾಗತಂ ಶರಣದ ತ್ವಂ ರಕ್ಷ ರಕ್ಷಾಧುನಾ ||೧೫||
ಸ್ವಾಮಿಯೇ; ನೋಡು ನೋಡುತ್ತಿರುವ ಹಾಗೆ ದಿನದಿಂದ ದಿನಕ್ಕೆ ನನ್ನ ಆಯುಷ್ಯವು ಸವೆದು ಹೋಗುತ್ತಲಿದೆ. ನನ್ನ ಯೌವನದ ದಿವಸಗಳು ನಶಿಸುತ್ತಿವೆ. ಹೌದು;ಕಳೆದು ಹೋದ ಆ ದಿವಸಗಳು ಮತ್ತೆಂದೂ ತಿರುಗಿ ಬಾರವು. ದೇವನೇ; ವೇಳೆಯು ಜಗತ್ತನ್ನು ಭುಂಜಿಸುತ್ತಲಿದೆ. ಲಕ್ಷ್ಮಿಯಾದರೋ ನೀರಿನ ಅಲೆಗಳಂತೆ ಅಲೆದಾಡುವ ಸ್ವಭಾವದವಳು. ಜೀವನವಿದು ಮಿಂಚಿನಂತೆ ಹೊಯ್ದಾಡುತ್ತಿದ್ದು ಕ್ಷಣಿಕವಾಗಿದೆ. ಆದುದರಿಂದ,ಎಲೈ ಸಂರಕ್ಷಕನೇ! ಮೊರೆಹೊಕ್ಕವನಾದ ನನ್ನನು ಈವಾಗಲೇ ರಕ್ಷಿಸುವವನಾಗು.ತನ್ಮೂಲಕ ನನ್ನನ್ನು ಉದ್ಧರಿಸು ಪ್ರಭುವೇ!

Comments

  1. ಹೌಹಾರಿದನಸ್ಸಿಗೆ ಅದ್ಭುತವಾದ ಅಮೃತವನ್ನು ಕೊಟ್ಡಿದ್ದೀರಿ.ಧನ್ಯೋಸ್ಮಿ.

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ