ಹರಿದಾಸರು ಕಂಡ ರಾಘವೇಂದ್ರರು

    ರಾಘವೇಂದ್ರತೀರ್ಥರ ಜೀವನ ಹಾಗೂ ಅವರ ಹಿಂದಿನ ಅವತಾರಗಳು ಹರಿದಾಸರ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿ ಸೇರಿವೆ ಗುರುಸಾರ್ವಭೌಮರ ಜೀವನ ಪ್ರಕೃತ ಸಮಾಜಕ್ಕೆ ಯಾವ ವಿಧದಲ್ಲಿ ಆದರ್ಶಪ್ರಾಯವಾಗಿದೆ, ಅವರಲ್ಲಿ ಮಾನವನ ಬೇಡಿಕೆ ಯಾವುದಾಗಿರಬೇಕು, ಈ ಎಲ್ಲವನ್ನೂ ಹರಿದಾಸರು ತಮ್ಮ ಕೃತಿಗಳಲ್ಲಿ ಸ್ಪಷ್ಟಪಡಿಸಿರುವರು.
    ಕೃತಯುಗದಲ್ಲಿ ಭಾಗವತ ಧರ್ಮವನ್ನು ಬಿತ್ತರಿಸಿದ ಪ್ರಹ್ಲಾದರೇ ಪುನಃ ಶ್ರೀಹರಿಯು ಆದೇಶದಂತೆ ಲೋಕದ ಉದ್ದಾರಕ್ಕಾಗಿ, ಧರ್ಮದ ಪುನಃ ಪ್ರತಿಷ್ಠಾಪನೆಗಾಗಿ ಕಲಿಯುಗದಲ್ಲಿ ವ್ಯಾಸ ತೀರ್ಥರಾಗಿಯೂ ನಂತರ ರಾಘವೇಂದ್ರತೀರ್ಥರಾಗಿಯೂ ಅವತರಿಸಿದರುವೆಂಬುದು ಹರಿದಾಸರ ಕೃತಿಗಳಿಂದ ಸ್ಪಷ್ಟವಾಗುವುದು.
    ಭಾಗವತದ ಸಪ್ತಮ ಸ್ಕಂಧದ ನಾಯಕ ಪ್ರಹ್ಲಾದ, ಬಾಲ್ಯದಲ್ಲಿಯೇ ದೈತ್ಯಬಾಲಕರನ್ನು ಉದ್ಧರಿಸಿದ ಭಾಗವತೋತ್ತಮನು ಇವನು "ಕಾಮಾರೇ ಆಚರೇತ್ಪಾಜ್ಞಃ ಧರ್ಮಾನ್ ಭಾಗವತಾನಿಹ" ಎಂದು ಲೋಕಕ್ಕೆ ಸಂದೇಶ ನೀಡಿದ ವೈರಾಗ್ಯಮೂರ್ತಿ ಪ್ರಹ್ಲಾದ.
    ಈ ಪ್ರಹ್ಲಾದನ ಎರಡನೇ ಅವತಾರವೆನಿಸಿದ ವ್ಯಾಸತೀರ್ಥರ ಜೀವನವೂ ಸಹ ವೈರಾಗ್ಯಕ್ಕೆ ಕೈಗನ್ನಡಿಯಾಗಿದೆ. ಬಾಲ್ಯದಲ್ಲಿಯೇ ಸನ್ಯಾಸಶ್ರಮದಲ್ಲಿ ಕಾಲಿಟ್ಟವರಿವರು. ಗುರುಗಳಾದ ಶ್ರೀಪಾದರಾಜರ ಆದೇಶದಂತೆ ಹಾಗೂ ಸಾಳುವ ನರಸಿಂಹನ ಪ್ರಾರ್ಥನೆಯಂತೆ 12 ವರ್ಷಗಳ ಕಾಲ ತಿರುಮಲೆಯಲ್ಲಿದ್ದು ಶ್ರೀನಿವಾಸನ ಪೂಜಾದಿಗಳನ್ನು ಮಾಡಿ, ಪುನಃ ಅರ್ಚಕ ಮನೆತನದವರಿಗೆ ಶ್ರೀನಿವಾಸನ ಪೂಜಾಸೌಭಾಗ್ಯವನ್ನು ಬಿಟ್ಟು ಕೊಟ್ಟವರು ಕೃಷ್ಣದೇವರಾಯನ ಕುಹುಯೋಗವನ್ನು ಪರಿಹರಿಸುವುದಕ್ಕಾಗಿ ಸಿಂಹಾಸನವನ್ನೇರಿ, ಪುನಃ ರಾಜ್ಯಭಾರವನ್ನು ರಾಜನಿಗೊಪ್ಪಿಸಿದ ಅನಾಸಕ್ತರು ಇವರು.
    ಈ ವ್ಯಾಸತೀರ್ಥರೇ ಮುಂದೆ ರಾಘವೇಂದ್ರ ತೀರ್ಥರಾಗಿ ಅವತರಿಸಿದರು. ರಾಘವೇಂದ್ರ ತೀರ್ಥರ ಜೀವನದ ಉದ್ದಕ್ಕೂ ಜ್ಞಾನ-ಭಕ್ತಿ-ವೈರಾಗ್ಯಗಳು ಎದ್ದು ತೋರುತ್ತವೆ.
    ರಾಘವೇಂದ್ರತೀರ್ಥರ ಈ ಮೂರು ಅವತಾರಗಳ ಹಿರಿಮೆಯನ್ನು ಹರಿದಾಸರು ಮನಸಾರ ಹಾಡಿ ಹೊಗಳಿದ್ದಾರೆ ವಿಜಯದಾಸರು ತಮ್ಮ ಒಂದು ಕೃತಿಯಲ್ಲಿ;
"ನಮೋ ನಮೋ ಯತಿರಾಜ
ಮಮತೆ ರಚಿತ ಅನುಪಮ ಚರಿತ ಚಾರುಹಾಸನೆನಿಪ ನಿನ್ನ |
ಹೆಮ್ಮೆಯಿಂದಲಿಪ್ಪ ಪರಬೊಮ್ಮ ವಿಜಯವಿಠಲನಾ
ತುಮದೊಳರ್ಚಿಪ ಜ್ಞಾನೋತ್ತಮ ತುಂಗಭದ್ರವಾಸ.
ಎಂದು ಹೇಳಿದರೆ,
ಗೋಪಾಲದಾಸರು :
"ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿರಾಘವೇಂದ್ರ
ಪತಿತರನುದ ರಿಪ ಪಾವನಕಾರಿಯೆ ಕೈಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ನೆನೆಯುತ ವರ
ಮಂತ್ರಾಲಯದೊಳು ಶುಭವೀಯುತ"
ಎಂದು ಹಾಡಿದ್ದಾರೆ. ಗುರುಜಗನ್ನಾಥದಾಸರು ಸಹ;
"ನೋಡಿದೆ ಗುರುರಾಯರನ್ನು ಈ
ರೂಢಿಯೊಳಗೆ ಮೆರೆವೋ ಸಾರ್ವಭೌಮನ್ನ
ದಿನನಾಥ ದೀಪ್ತಿ ಭಾಸಕನ ಭವ
ನನಧಿ ಸಂತರಣ ಸುಪೋತ ಕೋಪಮನ
ಮುನಿಜನ ಕುಲದಿ ಶೋಭಿರನ ಸ್ವೀಯ
ಜನರ ಪಾಲಕ ಮಹರಾಯನೆನಿಪನ"
ಎಂದು ವರ್ಣಿಸಿ ಗುರುರಾಯರ ಅವತಾರಗಳ ಜೀವನದ ನಿಜತತ್ತ್ವನ್ನು ತಿಳಿಯ ಹೇಳಿರುವರು.
    ಇಂತು ಹರಿದಾಸರು ಚಿತ್ರಿಸಿದಂತೆ ಎಲ್ಲ ಅವತಾರಗಳಲ್ಲೂ ಜ್ಞಾನ-ಭಕ್ತಿ-ವೈರಾಗ್ಯ ಭಾಗ್ಯಶಾಲಿಗಳಾದ ಗುರುಸಾರ್ವಭೌಮರು ತಮ್ಮನ್ನೇ ನಂಬಿ ಆರಾಧಿಸುವ ಜನರಿಗೆ ಪರತತ್ತ್ವದ ಗುರಿಯನ್ನೇ ತೋರಿಕೊಡುವರು ರಸಿಕನು ರಾಗವನ್ನೂ ರಾಜನು ಕ್ಷಾತ್ರವನ್ನೂ, ಸನ್ಯಾಸಿಯು ವೈರಾಗ್ಯವನ್ನು ಬೋಧಿಸುವರು; ಇದು ಲೋಕ ಸಹಜ
ಜಗನ್ನಾಥದಾಸಾರ್ಯರು :-
"ಕರುಣೆಗಳೊಳಗೆಣೆಗಾಣಿನೋ ನಿನಗೆ
ಸದ್ಗುರುವರ ರಾಘವೇಂದ್ರ
ರಾಘವೇಂದ್ರ ಗುರು ನೀ ಗತಿ ಎಂದನು-
ರಾಗದಿ ಭಜಿಸುತಿಪ್ಪ
ಭಾಗವತರ ದುರತೌಘಗಳಳಿಸಿ
ಚನ್ನಾಗಿ ಸಂತೈಸುವಿ ನೀ ಸನ್ಮಾನಿ"
ಎಂದು ಹೇಳಿ ಮೇಲ್ಕಂಡ ವಿಷಯವನ್ನೇ ಸ್ಪಷ್ಟ ಪಡಿಸಿರುವರು. ಗುರುರಾಜರು ತಮ್ಮನ್ನಾಶ್ರಯಿಸಿದ ವ್ಯಕ್ತಿಯ ಸಕಲ ದುಃಖಗಳನ್ನು ಪರಿಹರಿಸಿ ಅವನಿಗೆ ಇಹಸುಖವನ್ನು ಕರುಣಿಸುವರು ಆದರೆ ಗುರುರಾಜರು ಕರುಣಿಸಿದ ಇಹದ ಸುಖ ಸಂಸಾರ ಬಂಧಕವಾಗದೆ ತಾರಕವಾಗುವುದು, ಭಗವತ್ಪ್ರಾಪ್ತಿಗೆ ಕೈದೀವಟಿಗೆಯಾಗುವುದು 'ಭಾಗವತರ ದುರಿತೌಘಗಳಳಿಸಿ' ಎಂಬ ದಾಸರ ವಚನ ಬಹ್ವರ್ಥಗರ್ಭಿತವಾದುದು.
    ಭಾಗವತರಿಗೆ ಸಾಂಸಾರಿಕ ದುಃಖಗಳು ದುರಿತಗಳೆನಿಸಲಾರವು ಬಾಗವಂತನಿಂದ ದೂರವಿರುವುದೇ ಅವರಿಗೆ ನಿಜವಾದ ದುರಿತ. ದಾಸರ ಈ ವಾಣಿಗೆ ಪ್ರೇರಕವಾದದ್ದು "ಅಪರೋಕ್ಷೀಕೃತ- ಶ್ರೀಶಃ ಸಮುಪೇಕ್ಷಿತ ಭಾವಜಃ ಅಪೇಕ್ಷಿತ ಪ್ರದಾತಾನ್ಯೋ ರಾಘವೇಂದ್ರಾನ್ನವಿದ್ಯತೇ" ಎಂಬ ಅಪ್ಪಣ್ಣಾಚಾರ್ಯರ ವಚನ. ಇಷ್ಟಾರ್ಥವನ್ನು ಪೂರೈಸುವಲ್ಲಿ ಗುರುರಾಜರು ಸಮರ್ಥರು ಆದರೆ ಗುರುರಾಜರು ಎಂಥಾ ಇಷ್ಟಾರ್ಥಗಳನ್ನು ಕೊಡುತ್ತಾರೆ ಎನ್ನುವುದನ್ನು ತಿಳಿಸುವುದಕ್ಕಾಗಿಯೇ ಅಪ್ಪಣ್ಣಾಚಾರ್ಯರು "ಅಪರೋಕ್ಷೀಕೃತಶ್ರೀಶಃ ಸಮುಪೇಕ್ಷಿತಭಾವಜಃ" ಎಂದು ಹೇಳಿ ಗುರುರಾಜರ ಸ್ವರೂಪದ ಪರಿಚಯವನ್ನು ತಿಳಿಸಿ ಕೊಟ್ಟಿದ್ದಾರೆ ರತ್ನಗಳನ್ನು ಮಾರುವ ಅಂಗಡಿಯಲ್ಲಿ ಅಜಿವಾನವನ್ನು ಬೇಡಿದರೆ ದೊರೆಯಲಾರದು ಗುರುರಾಜರ ನಿಜವಾದ ಸಂಪತ್ತು ಭಗವಂತನ ಹಾಗೂ ಜ್ಞಾನ, ಭಕ್ತಿ, ವೈರಾಗ್ಯಗಳು ಈ ಭಾಗವತ ಸಂಪತ್ತನ್ನು ಅಪೇಕ್ಷಿಸಿ ಬಂದ ಜನರಿಗೆ ಅದನ್ನು ಕರುಣಿಸಿಕೊಡುವ ಕರುಣಾಳುಗಳು ಗುರುಸಾರ್ವಭೌಮರು, ಈ ವಿಷಯವನ್ನೇ ಗುರುಶ್ರೀಶವಿಠಲರು ತಮ್ಮ ಒಂದು ಕೃತಿಯಲ್ಲಿ ಸ್ಪಷ್ಟಪಡಿಸಿರುವರು
ನಿಷ್ಠೆ ಇಂದನುಸರಿಸೆ ಕಷ್ಟಗಳು ದೂರ ಮನೋ
ಭಿಷ್ಟೆಗಳ ಪೂರೈಪರೋ
ಅಷ್ಟ ಸೌಭಾಗ್ಯವನು ಕೊಟ್ಟು ಸುಜನರಿಗೆ ಶ್ರೀ
ವಿಷ್ಣು ದಾಸ್ಯವ ತೋರ್ಪರೋ....
    ಇಂಥಾ ಗುರುಸಾರ್ವಭೌಮರಲ್ಲಿ ಎಲ್ಲ ಹರಿದಾಸರು - "ಸಂಸಾರ ಸಾಗರದಿಂದ ಉದ್ದರಿಸಿ, ಪಾರಮಾರ್ಥಿಕದತ್ತ ಎನ್ನ ಮನ ಸಾಗಿಸು" ಎಂದೇ ಪ್ರಾರ್ಥಿಸಿರುವರು ರಾಘವೇಂದ್ರ ಸ್ತೋತ್ರ ಕರ್ತೃಗಳಾದ ಅಪ್ಪಣ್ಣಾಚಾರ್ಯರು ಗುರುರಾಜರನ್ನು ಪ್ರಾರ್ಥಿಸುತ್ತಾ "ರಾಘವೇಂದ್ರಾ! ಭಯಂಕರವಾದ ಸಂಸಾರಸಾಗರದಿಂದ ನನ್ನನ್ನು ಉದ್ದರಿಸು ಎಂದು ಪ್ರಾರ್ಥಿಸಿರುವರು.
    ಗುರುಜಗನ್ನಾಥದಾಸರು ಸಹ ತಮ್ಮ ಒಂದು ಕೃತಿಯಲ್ಲಿ :-
"ಭಾವದ್ರವ್ಯಕ್ರಯಾದ್ವೈತ ಇದರನು
ಭಾವವ ತಿಳಿಯದೆ ನಿರುತ
ಸೇವಿಪ ಸಂತತ ಈ ವಿಧ ನರರನು
ದೇವರೆಂದನುದಿನ ಭಾವಿಸಿದೆನು ನಾ
ರಾಘವೇಂದ್ರಗುರುರಾಯ ನೀ ವೇಗದಿ
ಪಿಡಿಯೆನ್ನ ಕೈಯ್ಯಾ
ಆಗಮ ಸಂಚಿತ ಭೋಗಗಳುಳ್ಳ ಭವ
ಸಾಗರದೊಳು ಬಿದ್ದ ಬ್ಯಾಗನೆ ನೀ ಬಂದು"
ಎಂದು ಗುರುರಾಜರನ್ನು ಪ್ರಾರ್ಥಿಸಿರುವರು
ಇದೇ ದಾಸರೇ ಮತ್ತೊಂದೆಡೆ
"ಎಷ್ಟುವೇಳಲೆನ್ನ ಕಷ್ಟರಾಶಿಗಳನ್ನು
ಸುಟ್ಟುಬಿಡೋ ಸರ್ವೋತ್ಕೃಷ್ಟ ಮಹಿಮ ಗುರು"
ಎಂದು ಹೇಳಿ ತಮ್ಮ ಕಷ್ಟ ಪರಂಪರೆಗಳನ್ನು ಸುಟ್ಟುಬಿಡುವಂತೆ ಪ್ರಾರ್ಥಿಸಿರುವರು. ಆದರೆ ಇಲ್ಲಿ ತಮಗೆ ಬಂದೊದಗಿದ ಆ ಕಷ್ಟಗಳ ಪಟ್ಟಿಯನ್ನಾಗಲಿ, ಸ್ವರೂಪವನ್ನಾಗಲಿ ವಿವರಿಸಿಲ್ಲ ಮುಂದಿನ ಚರಣದಲ್ಲಿ "ಮೋಕ್ಷದಾಯಕ ಎನ್ನ ಈಕ್ಷಿಸಿ ಮನೋಗತಾಪೇಕ್ಷಾವ ಪೂರೈಸೋ ತ್ರ್ಯಕ್ಷ್ಯಾದಿ ಸುಪ್ರೀತ" ಎಂದು ಹೇಳಿ ತಮ್ಮ ಮನದ ಅಪೇಕ್ಷೆಯನ್ನು ಪೂರೈಸುವಂತೆ ಪ್ರಾರ್ಥಿಸಿರುವರು ಇಲ್ಲಿಯೂ ಸಹ ತಮ್ಮ ಮನೋಭಿಷ್ಟದ ಸ್ವರೂಪವನ್ನು ಸೂಚಿಸದೆ, ಗುರುರಾಜರಿಗೆ ಮಾತ್ರ "ಮೋಕ್ಷದಾಯಕ" ಎಂಬ ವಿಶೇಷವನ್ನು ಹಾಕಿ ಗುರುರಾಜರಿಗೇ ಎಚ್ಚರಿಕೆಯ್ನಿತ್ತಿರುವರು. ಮೋಕ್ಷವೇ ತಮ್ಮ ಮನದಪೇಕ್ಷೆಯಾಗಿಯೂ, ಅದಕ್ಕೆ ವಿಘ್ನಗಳಾಗಿರುವ ವಿಷಯ ಲೋಲುಪತೆ, ಮನೋನಿಗ್ರಹರಾಹಿತ್ಯ, ಅಜ್ಞಾನ, ಅಹಂಕಾರ, ಮಮತೆಗಳೇ ಕಷ್ಟಪರಂಪರೆಗಳನ್ನಾಗಿ ಸೂಚಿಸಿರುವರು.
    ಇಂತು ಎಲ್ಲ ಹರಿದಾಸರು ರಾಘವೇಂದ್ರ ಗುರು ಸಾರ್ವಭೌಮರನ್ನು ಜ್ಞಾನ-ಭಕ್ತಿ-ವೈರಾಗ್ಯ ಮೂರ್ತೀಭವಿಸಿದ ಹರಿಭಕ್ತಾಗ್ರಣಿಗಳನ್ನಾಗಿಯೂ, ಸುಜೀವಿಗಳನ್ನು ಸಂಸಾರ ಬಂಧನದಿಂದ ಉದ್ಧರಿಸಲು ಬದ್ದಕಂಕಣರಾದವರನ್ನಾಗಿಯೂ ಕಂಡು, ಅವರಲ್ಲಿ ಭಗವದ್ಬಕ್ತಿ, ವಿಷಯ ವಿರಕ್ತಿಯನ್ನೇ ಬೇಡಿರುವರು.
    ಜಯತು ಜಯಗುರುರಾಜ ಶುಭತಮ
    ಜಯತು ಕರಿಜನಗೇಯ ಸುಂದರ
    ಜಯತು ನಿಜಜನಜಾಲಪಾಲಕ ಜಯತು ಕರುಣಾಳೋ
    ಜಯತು ಸಜ್ಜನ ವಿಜಯದಾಯಕ
    ಜಯತು ಕುಜನಾರಣ್ಯ ಪಾವಕ
    ಜಯತು ಜಯಜಯ ದ್ವಿಜವರಾರ್ಚಿತಪಾದ ಪಂಕೇಜ
 

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ