ಬ್ರಹ್ಮಾಂಡವೇ ಜೇನುಹಟ್ಟಿಯಂತೆ

    ಬೃಹದಾರಣ್ಯಕೋಪನಿಷತ್ತಿನಲ್ಲಿ ಮಧುವಿದ್ಯೆಯೆಂಬ ಒಂದು ಭಾಗವಿದೆ. ಇದು ಎರಡನೆಯ ಅಧ್ಯಾಯದ ಒಂದನೆಯ ಉಪವಿಭಾಗದಲ್ಲಿದೆ. ಆತ್ಮನಿಂದಲೇ ಈ ಜಗತ್ತೆಲ್ಲವೂ ಹುಟ್ಟಿದ್ದು, ಆತ್ಮನನ್ನೇ ಆಶ್ರಯಿಸಿಕೊಂಡು ಬದುಕಿದ್ದು ಕಡೆಗೆ ಆತ್ಮನಲ್ಲೇ ಲಯವಾಗುವದು- ಎಂಬಿದು ವೇದಾಂತಸಿದ್ಧಾಂತವು. ಹೀಗೆ ಆತ್ಮನೊಬ್ಬನೇ ಎಲ್ಲಕ್ಕೂ ಮೂಲಕಾರಣನೆಂಬುದನ್ನು ಗೊತ್ತುಪಡಿಸುವದಕ್ಕಾಗಿ ಮಧುವಿದ್ಯೆಯನ್ನು ಪ್ರಸ್ತಾಪಮಾಡಲಾಗಿದೆ. ಮಧು-ಎಂದರೆ ಜೇನು ಎಂದರ್ಥ. ಜೇನಿನಂತೆ ರುಚಿಕರವಾದ ಆತ್ಮವಿದ್ಯೆಯು ಮಧುವಿದ್ಯೆಯೆನಿಸಿಕೊಂಡಿರುವದು ಸೂಕ್ತವೇ ಆಗಿದೆ. ಜೇನು ಸಿದ್ಧವಾಗಬೇಕಾದರೆ ಜೇನುಹುಳುಗಳೆಲ್ಲವೂ ದುಡಿಯಬೇಕು. ಅವು ಪರಸ್ಪರವಾಗಿ ಹೊಂದಿಕೊಂಡು ಕೆಲಸಮಾಡುತ್ತಾ ಬೇರೆಬೇರೆಯ ಕಾಡುಗಳನ್ನು ತಿರುಗಿ ಬೇರೆಬೇರೆಯ ಗಿಡಮರಗಳ ಹೂಗಳಿಂದ ಬೇರೆಬೇರೆಯ ರುಚಿಯ ರಸಗಳನಸನು ಸಂಗ್ರಹಿಸಿ ತಂದು ಒಂದೇ ಗೂಡಿನಲ್ಲಿ ಕೂಡಿಸಿಟ್ಟಾಗ ಜೇನಾಗುವದು, ಹಾಗೆಯೇ ಈ ಪ್ರಪಂಚವೂ ಒಂದು ಜೇನುಗೂಡಾಗಿದೆ. ಇಲ್ಲಿ ನಾನಾವಿಧವಾದ ಜೀವರುಗಳಿದ್ದಾರೆ. ಇವರೆಲ್ಲರೂ ಜೇನುಹುಳುಗಳ ಸ್ಥಾನದಲ್ಲಿರುತ್ತಾರೆ. ಇವರ ಕರ್ಮಗಳು ಪರಸ್ಪರ ಹೊಂದಿಕೊಂಡು ಒಬ್ಬರಿಗೊಬ್ಬರಿಗೆ ಉಪಕಾರಕವಾಗುವಂತಿದ್ದರೆ ಮಾತ್ರವೇ ಈ ಪ್ರಪಂಚದಲ್ಲಿ ಸುಖವೆಂಬ ಜೇನನ್ನು ಎಲ್ಲರೂ ಸವಿಯಬಹುದಾಗಿದೆ. ಹೀಗೆ ಒಬ್ಬರನ್ನೊಬ್ಬರಿಗೆ ಕೂಡಿಸಿ ಅವರವರ ಕೆಲಸಗಳು ಹೊಂದಿಕೊಳ್ಳುವಂತೆ ಮಾಡಲು ಎಲ್ಲವನ್ನೂ ಉಂಟುಮಾಡಿರುವ ವಸ್ತುವು ಯಾವದೆಂಬುದರ ತಿಳಿವಳಿಕೆಯು ಬೇಕು. ಈ ತಿಳಿವಳಿಕೆಯೇ ಆಧ್ಯಾತ್ಮವಿದ್ಯೆಯು.
    ಮಾನವನು ಒಂಟಿಯಾಗಿ ಜೀವಿಸಲಾರನು ಮತ್ತು ಯಾವ ಮಹತ್ಕಾರ್ಯವನ್ನೂ ಸಾಧಿಸಲಾರನು ಆದರೆ ಅವನು ಸ್ವಾರ್ಥಪರನಾದಂತೆಲ್ಲ ಪಾರತಂತ್ರ್ಯವನ್ನೂ ಕಷ್ಟವನ್ನೂ ಹೊಂದುವನು ದುಃಖವೇ ಅವನ ಜೀವನವಾಗಿಬಿಡುವದು ಹೀಗಾಗಲು ಕಾರಣವೇನೆಂದರೆ ತನ್ನ ಸುತ್ತಮುತ್ತಲಿನ ಜಗತ್ತಿನೊಡನೆ ಸಹಕರಿಸದೆ ಇರುವದೇ ಆಗಿದೆ ಇದಕ್ಕೂ ಮೂಲಕಾರಣವೆಂದರೆ ತಾನೇ ಬೇರೆ, ಜಗತ್ತೇ ಬೇರೆ ಎಂಬ ತಪ್ಪುತಿಳಿವಳಿಕೆ. ಈ ಭೇದಜ್ಞಾನವು ಅವನಿಗೆ ತನಗಿಂತ ಬೇರೆಯಾಗಿ ಕಾಣುವದನ್ನೆಲ್ಲ ಆನಾತ್ಮವಾಗಿ ತಿಳಿಸುವದರಿಂದ ಅವನು ಆತ್ಮನನ್ನು ಎಲ್ಲೂ ಕಾಣದವನಾಗಿ ವಿನಾಶವನ್ನು ಹೊಂದುತ್ತಿರುವನು ಆದರೆ ಅವನ ಈ ತಿಳಿವಳಿಕೆ ಸರಿಯೆ? ಎಂದು ವಿಚಾರಮಾಡಿದರೆ ಸರಿಯಲ್ಲವೆಂದೇ ಕಂಡುಬರುತ್ತದೆ. ಏಕೆಂದರೆ ಜಗತ್ತೆಲ್ಲವೂ ತನಗಾಗಿಯೇ (ಆತ್ಮನಿಗಾಗಿಯೇ) ಇದ್ದುಕೊಂಡಿದೆ ಎಂಬುದನ್ನು ಅವನು ಮರೆತಿರುತ್ತಾನೆ. ಯಾವಾಗ ಅವನಿಗೆ "ತನಗಾಗಿ ಎಲ್ಲವೂ ಇದೆ; ಎಲ್ಲವೂ ಎಂಬುದು ತಾನೇ" - ಎಂಬ ತಿಳಿವಳಿಕೆಯುಂಟಾಗುತ್ತದೋ ಆಗ ಅವನು ಜೇನು ಹುಳುವಿನಂತೆ ಸ್ವಾರ್ಥತ್ಯಾಗವನ್ನು ಮಾಡಿ ದುಡಿಯುವವನಾಗುವನು ಮುಂದೆ ಮಧುವು ಅವನದಾಗುವದು.
    ಹೀಗೆ ಜಗತ್ತನ್ನೆಲ್ಲ ಒಂದುಗೂಡಿಸುವ ತತ್ತ್ವವು ಯಾವದೆಂಬುದನ್ನೇ ಮಧು ವಿದ್ಯೆಯಲ್ಲಿ ವಿಚಾರಮಾಡಲಾಗಿದೆ. ಅಷ್ಟೇ ಅಲ್ಲ; ಜಗತ್ತಿನಲ್ಲಿರುವ ಯಾವ ವಸ್ತುವೂ ಅದಕ್ಕಿಂತ ಹೊರತಾಗಿರುವದಿಲ್ಲ ಎಂಬಿದನ್ನೂ ತಿಳಿಸಿದೆ ಆದರೂ ಒಮ್ಮೆಗೇ ಈ ತತ್ತ್ವದ ಅರಿವು ಮಾನವನಿಗೆ ಉಂಟಾಗಲಾರದು. ಅದಕ್ಕಾಗಿ ಅವನು ಬ್ರಹ್ಮಾಂಡದಲ್ಲಿರುವ ಪ್ರತಿಯೊಂದು ವಸ್ತುವನ್ನೂ ಕುರಿತು 'ಅದು ಯಾವದು? ಹೇಗೆ ಬಂದಿದೆ? ಏತಕ್ಕಾಗಿ ಬಂದಿದೆ? ಅದರ ತಿರುಳೇನು? ಅದು ತಾನೊಂದೇ ಇರಬಲ್ಲದೆ?' ಎಂಬೀ ವಿಚಾರಗಳನ್ನು ಗಮನಿಸಬೇಕು. ಎಲ್ಲವನ್ನೂ ಹೀಗೆ ವಿಚಾರಮಾಡುವದು ಅಸಾಧ್ಯವೆಂದು ಕಂಡಾಗ ಉದಾಹರಣಾರ್ಥವಾಗಿ ಕೆಲವನ್ನಾದರೂ ವಿಚಾರಮಾಡಬಹುದು. ಬ್ರಹ್ಮಾಂಡವು ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ಎಂದು ವಿಂಗಡವಾಗಿರುವದರಿಂದ ಒಂದೊಂದು ವಿಭಾಗದಲ್ಲಿಯೂ ಒಂದೊಂದು ವಸ್ತುವನ್ನು ವಿಚಾರಮಾಡಿದರೂ ಸಾಕು, ಉದಾಹರಣೆಗೆ ಆಧಿಭೌತಿಕ ವಿಭಾಗದಲ್ಲಿ ಪೃಥಿವಿಯನ್ನು ವಿಚಾರಕ್ಕೆ ತೆಗೆದುಕೊಳ್ಳಬಹುದು ಏಕೆಂದರೆ ಇದು ಎಲ್ಲಾ ಪ್ರಾಣಿಗಳಿಗೂ ಆಶ್ರಯವಾಗಿರುತ್ತದೆ ಇದು ಎಲ್ಲಾ ಪ್ರಾಣಿಗಳಿಗೂ 'ಮಧು'ವೆಂದು ಉಪನಿಷತ್ತಿನಲ್ಲಿ ಕರೆದಿದೆ ಹಾಗೆಯೇ ಎಲ್ಲಾ ಪ್ರಾಣಿಗಳಿಗೂ 'ಮಧು'ವೆಂದು ಉಪನಿಷತ್ತಿನಲ್ಲಿ ಕರೆದಿದೆ, ಹಾಗೆಯೇ ಎಲ್ಲಾ ಪ್ರಾಣಿಗಳೂ ಇದಕ್ಕೆ ಮಧುವಾಗಿರುತ್ತವೆ. ಇದರ ಅಭಿಪ್ರಾಯವೇನೆಂದರೆ: ಭೂಮಿಯಿಂದ ಎಲ್ಲಾ ಪ್ರಾಣಿಗಳಿಗೂ ಉಪಕಾರವುಂಟು ಭೂಮಿಯ ಮೇಲೆಯೇ ಎಲ್ಲರೂ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಾರೆ. ಪೈರುಗಳನ್ನು ಬೆಳೆದುಕೊಳ್ಳುತ್ತಾರೆ. ಖನಿಜಗಳು, ಎಣ್ಣೆ ಮುಂತಾದವುಗಳನ್ನು ಭೂಮಿಯನ್ನಗೆದು ತೆಗೆದುಕೊಳ್ಳುತ್ತಾರೆ. ಹೆಚ್ಚೇಕೆ? ಜನರ ಜೀವನವೆಲ್ಲವೂ ಭೂಮಿಯ ಮೇಲೆಯೇ ಸಾಗುತ್ತದೆ. ಇದರಂತೆಯೇ ಜನರಿಂದಲೂ ಭೂಮಿಗೆ ಉಪಕಾರವುಂಟು. ಜನಶೂನ್ಯವಾಗಿದ್ದರೆ ಪೃಥಿವಿಗೆ ಗೌರವವೇನಿದ್ದೀತು? ಪೃಥಿವಿಯು ಅಂಗಾರಕ, ಚಂದ್ರಾದಿಗಳಂತೆ ಪ್ರಾಣಿಶೂನ್ಯವಾಗಿದ್ದರೆ ಯಾರುತಾನೆ ಬಯಸುತ್ತಿದ್ದರು? ಇನ್ನು ಜನರಿಂದಲೂ ಪ್ರಾಣಿಗಳಿಂದಲೂ ಸಸ್ಯಗಳಿಂದಲೂ ಕೂಡಿರುವ ಭೂಮಿಯ ಎಷ್ಟು ಚೆನ್ನಾಗಿ ಶೋಭಿಸುತ್ತಾಳೆಂಬುದನ್ನು ಹೇಳಬೇಕಾಗಿಯೇ ಇಲ್ಲ ಹೀಗೆಯೇ ಚಿಂತಿಸಿದಂತೆಲ್ಲ ಪೃಥಿವಿಗೂ ಪೃಥಿವೀನಿವಾಸಿಗಳಿಗೂ ಪರಸ್ಪರವಾಗಿ ಉಪಕಾರ್ಯೋಪಕಾರಕಭಾವರೂಪವಾದ ಸಂಬಂಧವಿದೆ. ಪೃಥಿವಿಯನ್ನೂ ನಿವಾಸಿಗಳನ್ನೂ ಹೀಗೆ ಕೂಡಿಸಿಟ್ಟಿರುವ ತತ್ತ್ವವೇ ಬ್ರಹ್ಮವು. ಮುಖ್ಯಾರ್ಥದಲ್ಲಿ ಅದೇ ಮಧುವು. ಆ ಮಧುವಿನಿಂದ ಇವೆಲ್ಲವೂ ಮಧುಯುಕ್ತವಾಗಿವೆ. ಇದೇ ರೀತಿಯಾಗಿ ಆಧಿಧೈವಿಕಪ್ರಪಂಚದಲ್ಲಿಯೂ ಆದಿತ್ಯನನ್ನು ಮಧುವೆನ್ನಬಹುದು ಅದಿತ್ಯನೂ ಸಹ ಪ್ರಾಣಿಗಳಿಗೆಲ್ಲ ಉಪಕಾರಕನಾಗಿದ್ದು ದೇವಮನುಷ್ಯಾದಿಸೃಷ್ಟಿಗೋಚರವಾದ ಭೂತಗಳಿಂದ ತಾನೂ ಉಪಕಾರವನ್ನು ಹೊಂದುತ್ತಿದಾನೆ ಈ ರೀತಿಯಾಗಿ ಬ್ರಹ್ಮಾಂಡವೇ ಅನ್ಯೋನ್ಯವಾಗಿ ಉಪಕಾರ್ಯೋಪಕಾರಕಭಾವದಿಂದ ಹೆಣೆದುಕೊಂಡು ಜೇನುಹಟ್ಟಿಯಂತೆ ಮಧುವಿಶಿಷ್ಟವಾಗಿದೆ. ಇಲ್ಲಿ ಮಧುಪಾನಮಾಡುವವನೇ ಜಾಣನು ಎನ್ನಬಹುದು.
    ಆದರೆ ಜಗತ್ತು ಹೀಗೆಯೇ ಇರಬೇಕು; ಅದರಲ್ಲಿನ ಪಂಚಭೂತಗಳೂ ಇಂಥಿಂಥ ಗುಣಗಳುಳ್ಳದ್ದಾಗಿರಬೇಕು. ಬೆಂಕಿಯು ಮೇಲಕ್ಕೇ ಉರಿಯಬೇಕು, ನೀರು ಕೆಳಕ್ಕೇ ಹರಿಯಬೇಕು, ಭೂಮಿಯು ಬಿತ್ತಿದ ಬೆಳೆಯನ್ನು ವೃದ್ಧಿಗೊಳಿಸಲೇಬೇಕು; ಈ ಎಲ್ಲಾ ಭೂತಗಳೂ ಕಾಲಕಾಲಕ್ಕೆ ಪರಿಣಾಮವಾಗುತ್ತಿರಲೇಬೇಕು ಎಂಬುದಕ್ಕೇನು ಆಧಾರ? ಎಂದು ವಿಚಾರಮಾಡಿದರೆ ಈವರೆಗಿನ ಸೃಷ್ಟ್ಯಾದಿಜಗದ್ವ್ಯಾಪಾರಗಳಲ್ಲಿ ಸಿಲುಕಿದ್ದ ಪ್ರಾಣಿಗಳ ಹಿಂದಿನ ಕರ್ಮವೇ ಎಂದು ವ್ಯಾವಹಾರಿಕ ದೃಷ್ಟಿಯಿಂದ ಹೇಳಬಹುದಾಗಿದೆ. ಈಗಲೂ ಈ ಬ್ರಹ್ಮಾಂಡದಲ್ಲಿ ವಾಯ್ವಾದಿದೇವತೆಗಳಿಂದಾರಂಭಿಸಿ ಗಿಡಮರಗಳವರೆಗಿನ ಎಲ್ಲಾ ಸಮಷ್ಟಿವ್ಯಷ್ಟಿಜೀವರೂ ಕರ್ಮನಿರತರಾಗಿಯೇ ಇರುವರು. ಇವರುಗಳು ಹಿಂದೆಯೂ ಹೀಗೆಯೇ ಕರ್ಮನಿಷ್ಠರೇ ಆಗಿದ್ದರೆಂದು ಊಹಿಸಬಹುದು. ಕಲ್ಫಾಂತರಗಳಲ್ಲಿಯೂ ಹೀಗೆ ಪ್ರಾಣಿಗಳು ಮಾಡಿದ್ದ ಅದೃಷ್ಟರೂಪವಾದ ಕರ್ಮವೇ ಈಗಿನ ಸೃಷ್ಟಿಯಾಗಿ ಪರಿಣಾಮವನ್ನು ಹೊಂದಿರುತ್ತದೆ. ಇದರಿಂದ ತಿಳಿದುಬರುವದೇನೆಂದರೆ; ಪ್ರಾಣಿಗಳ ಶುಭಕರ್ಮಬೀಜವು ಶುಭ ಪ್ರಪಂಚದ ಮೂಲವಾಗಿದೆ. ಹಾಗೆಯೇ ಶುಭಪರಿಣಾಮವನ್ನು ಉಂಟುಮಾಡುತ್ತದೆ ಆದ್ದರಿಂದ ತನ್ನ ಹಾಗೂ ಪರರ ಹಿತದೃಷ್ಟಿಯಿಂದ ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಯೂ ಶುಭಕರ್ಮವನ್ನೇ ಮಾಡಬೇಕೆಂದಾಯಿತು; ನಿಜ ಆದರೆ 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯನೊಬ್ಬನನ್ನು ಬಿಟ್ಟರೆ ಉಳಿದವೆಲ್ಲ ಭೋಗಶರೀರಗಳು ಕರ್ತೃಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದು ಕರ್ಮವನ್ನು ಮಾಡಬಲ್ಲವನೆಂದರೆ ಮಾನವನೊಬ್ಬನೇ ಸರಿ. ಹೀಗಿರುವದರಿಂದ ಅವನಿಗಾಗಿಯೇ ಶಾಸ್ತ್ರಗಳು ಕರ್ತವ್ಯಾ ಕರ್ತವ್ಯಗಳನ್ನು ಕುರಿತು ಉಪದೇಶಿಸುತ್ತವೆ. ಕರ್ತವ್ಯವೇ ಧರ್ಮವೆನಿಸುವದು. ಅಕರ್ತವ್ಯವೇ ಅಧರ್ಮವೆನಿಸುವದು ಧರ್ಮವು ತಾನು ಕರ್ತೃವನ್ನು ಆಶ್ರಯಿಸಿದೆ. ಕರ್ತೃವೂ ಧರ್ಮವನ್ನಾಶ್ರಯಿಸಿರುವದರಿಂದ ಧರ್ಮವು ತಾನು ಕರ್ತೃವನ್ನು ಆಶ್ರಯಿಸಿದೆ ಕರ್ತೃವು ಧರ್ಮವನ್ನಾಶ್ರಯಿಸಿರುವದರಿಂದ ಇವರಿಬ್ಬರೂ ಉಪಕಾರ್ಯೋಪಕಾರಕಭಾವಸಂಬಂಧದಿಂದ ಕೂಡಿಕೊಂಡು ಪರಸ್ಪರ 'ಮಧು'ಗಳಾಗಿದ್ದಾರೆ.
    ಈ ಮಧುವಿದ್ಯೆಯನ್ನು ಮರೆಯದಿರೋಣ: ಮಧುವಿಜ್ಞಾನವು ನಾವು ಆಚರಿಸುವ ಧರ್ಮವನ್ನವಲಂಬಿಸಿರುತ್ತದೆ. ಈ ಧರ್ಮವು ಎಲ್ಲಾ ಮಾನವರಿಗೂ ಸರಿಸಮಾನವಾದುದು, ಯಾರೊಬ್ಬರೂ ಧರ್ಮಕ್ಕೆ ವಿರುದ್ಧವಾಗಿ ನಡೆಯಬಾರದು, ಹಾಗೆ ಮಾಡಿದರೆ ಜೇನುಹಟ್ಟಿಯಂತಿರುವ ಈ ಪ್ರಪಂಚವನ್ನೇ ಹಾಳುಮಾಡಿದಂತಾಗುವದು ಧರ್ಮದ್ರೋಹಿಗಳನ್ನು 'ಅಸುರ'ರೆಂದು ಗೀತೆಯಲ್ಲಿ ಕರೆದಿದೆ. ಭಾರತೀಯರಾದ ನಾವು ಅಸುರರಾಗುವದು ಬೇಡ. ಧರ್ಮಮಧುವನ್ನು ಉತ್ಪತ್ತಿ ಮಾಡುವ ಮಧುಕರ್ತೃಗಳಾಗಿ ಬಾಳುತ್ತಾ 'ಮಧು ವಾತಾ ಋತಾಯತೇ...' ಎಂಬ ಮಂತ್ರದಲ್ಲಿ ಕೊಂಡಾಡಿರುವಂತೆ ದೇವಮಧುಗಳಾಗಿ ಬಾಳಲು ಪ್ರಯತ್ನಿಸೋಣ.
 

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ