ಶಿವ ಶಕ್ತಿ ಮಹಿಮೆ

    ಶ್ರೀ ಶಂಕರರ ಸ್ತೋತ್ರ ಕಾವ್ಯಗಳಲ್ಲಿ ಶಿವಶಕ್ತಿಗಳ ಮಹಿಮೆಗೆ ವಿಶೇಷ ಪ್ರಾಶಸ್ತ್ಯವಿರುವುದನ್ನು ಕಾಣಬಹುದು. ಮುಖ್ಯವಾಗಿ ಅವರು ರಚಿಸಿದ 'ಶಿವಾನಂದಲಹರೀ', 'ಸೌಂದರ್ಯಲಹರೀ' ಈ ಎರಡೂ ಬೃಹತ್ ಸ್ತೋತ್ರಗಳು ಶಿವ ಶಕ್ತಿಗಳನ್ನು ಕುರಿತದ್ದಾಗಿವೆ. ಶಿವಾನಂದಲಹರಿಯಲ್ಲಿ ಶಿವಪಾರಮ್ಯ ವರ್ಣಿತವಾಗಿದ್ದರೆ, ಸೌಂದರ್ಯಲಹರಿಯಲ್ಲಿ ಶಕ್ತಿ ಪಾರಮ್ಯವನ್ನು ಕಾಣಬಹುದು.
    ಸೌಂದರ್ಯಲಹರಿಯ ಮೊದಲ 41 ಶ್ಲೋಕಗಳಲ್ಲಿ ಕಾವ್ಯರಸದೊಂದಿಗೆ ತಂತ್ರಶಾಸ್ತ್ರದ ಪ್ರಮೇಯಗಳೂ ವರ್ಣಿತವಾಗಿವೆ. 42 ರಿಂದ 100 ಶ್ಲೋಕಗಳವರೆಗೆ ಶ್ರೀದೇವಿಯ ಅಂಗೋಪಾಂಗ ಸೌಷ್ಠವವು ಮುಡಿಯಿಂದ ಅಡಿಯವರೆಗೆ ವರ್ಣಿತವಾಗಿದೆ. ಪ್ರತಿ ಶ್ಲೋಕದಲ್ಲೂ ಮಂತ್ರ ಶಾಸ್ತ್ರದ ರಹಸ್ಯವು ಅಡಕವಾಗಿದ್ದು ವಿಶೇಷವಾಗಿ ಶ್ರೀಚಕ್ರ ವರ್ಣನೆ ಶ್ರೀ ವಿದ್ಯಾರಹಸ್ಯಗಳು ಕಾವ್ಯಬಂಧದಲ್ಲಿ ಸುಂದರವಾಗಿ ಮೂಡಿ ಬಂದಿದೆ.
"ಶಿವಃ ಶಕ್ತ್ಯಾಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ
ನಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ |
ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿ ರಪಿ
ಪ್ರಣಂತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ||" (ಸೌಂದರ್ಯ ಲಹರಿ-1)
ಅಂದರೆ 'ಶಿವನು ಶಕ್ತಿಯಿಂದೊಡಗೂಡಿದ್ದರೆ ಮಾತ್ರ ವಿಶ್ವವನ್ನು ಸೃಷ್ಟಿಸಬಲ್ಲ ಶಕ್ತಿ ಸಹಿತನಾಗಿರದಿದ್ದರೆ ಆಕಾಶದಂತೆ ನಿರಾಕಾರನಾದ ಅವನಿಗೆ ಅಲ್ಲಾಡುವುದೂ ಸಾಧ್ಯವಿಲ್ಲ ತ್ರಿಮೂರ್ತಿಗಳಿಂದಲೂ ಇಂದ್ರಾದಿ ದೇವತೆಗಳಿಂದಲೂ ಆರಾಧಿಸಲ್ಪಡುವ ತಾಯಿಯನ್ನು ಸೇವೆಗೈಯ್ಯುವುದಕ್ಕೂ ಸ್ತುತಿಸುವುದಕ್ಕೂ, ಜನ್ಮ ಜನ್ಮಾಂತರಗಳ ಪುಣ್ಯ ಬೇಕು." "ಭಜಂತಿ ತ್ವಾಂ ಧನ್ಯಾ : ಕತಿಚನ ಚಿದಾನಂದ ಲಹರೀಂ" (ಸೌಂದರ್ಯ ಲಹರಿ-8) ಚಿದಾನಂದ ಪ್ರವಾಹರೂಪಳಾದ ದೇವಿಯನ್ನು ಧ್ಯಾನಿಸುವವರೇ ಧನ್ಯರು.

    ಆಚಾರ್ಯರ ಕಾಲದಲ್ಲಿ ಶಾಕ್ತ ಸಂಪ್ರದಾಯವು ಪ್ರಚಲಿತವಾದದ್ದು ಮಾತ್ರವಲ್ಲದೆ, ವಾಮಾಚಾರದ ಅಧೋಮಾರ್ಗದ ಕಡೆ ಹೊರಳಿತ್ತು ಆಚಾರ್ಯರು ತಮ್ಮ ವಿಶಿಷ್ಠ ಪ್ರಭಾವದಿಂದ ಈ ಶಾಕ್ತ ಸಂಪ್ರದಾಯವನ್ನು ಪರಿಶುದ್ಧ ಸಮಯಾಚಾರದತ್ತ ತಿರುಗಿಸಿ ಲೋಕೋಪಕಾರ ಮಾಡಿದ್ದಾರೆ. ಸೌಂದರ್ಯಲಹರಿ ಅವರ ಈ ಉಜ್ವಲ ಸಾಧನೆಯ ಕಾವ್ಯ ಪ್ರತಿಮೆಯಾಗಿದೆ.

    ಇಲ್ಲಿಯ "ಕ್ವಣತ್ ಕಾಂಚೀಧಾಮಾ" ಎಂಬ 7ನೆಯ ಪದ್ಯದಲ್ಲಿ ದೇವಿಯ ಸಕಾರ ಮೂರ್ತಿಯ ವರ್ಣನೆ ಅತ್ಯಂತ ಹೃದಯಂಗಮವಾಗಿ ಮೂಡಿ ಬಂದಿದೆ. "ವಹಂತೀ ಸಿಂಧೂರಂ" ಎಂಬ 44ನೆಯ ಪದ್ಯದಲ್ಲಿ ಉತ್ಪ್ರೇಕ್ಷಾ ರೂಪಕಗಳ ಅಂಗಾಂಗಿಭಾವ ಸಂಕರಾಲಂಕಾರ ಸುಂದರವಾಗಿ ಮೂಡಿಬಂದಿದ್ದು ಗಮನಾರ್ಹ. ಅದರಂತೆ "ಅರಾರೈ : ಸ್ವಾಭಾವ್ಯಾತ್...." ಎಂಬ 45ನೆಯ ಪದ್ಯದಲ್ಲಿ ಉಪಮಾ ರೂಪಕಾದಿ ಅಲಂಕಾರವಿನ್ಯಾಸ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    ಭಂಗಿಭಣಿತಿ ವೈಚಿತ್ಯ್ರದಿಂದ ಸೂಚ್ಯವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ಅದ್ವೈತ ತತ್ವವನ್ನು ಕ್ರಾಂತದರ್ಶಿಗಳು ಹೇಗೆ ಭೋಧಿಸಬಲ್ಲರು ಎಂಬುದಕ್ಕೆ ಶಂಕರರ ಈ ಪದ್ಯ ಸಾಕ್ಷಿ.
"ಪ್ರದೀಪಜ್ವಾಲಾಬಿರ್ದಿವಸಕರನೀರಾಜನವಿಧಿಃ
ಸುಧಾಸೂತೇಶ್ವಂದ್ರೋಪಲಜಲಲವೈರರ್ಘ್ಯರಚನಾ |
ಸ್ವಕೀಯೈರಂಭೋಭಿಃ ಸಲಿಲನಿಧಿಸಾಹಿತ್ಯಕರಣಂ
ತ್ವದೀಯಾಭಿರ್ವಾಗ್ಭಿಸ್ತವ ಜನನಿ ವಾಚಾಂ ಸ್ತುತಿರಿಯಮ್" (ಸೌಂದರ್ಯ ಲಹರಿ-100)
ಅಂದರೆ, "ಹೇ ಜಗಜ್ಜನನೀ; ಪ್ರಕಾಶಮಯನಾದ ಸೂರ್ಯನಿಗೆ ಅವನದೇ ಆದ ದ್ವಿಪಜ್ವಾಲೆಗಳಿಂದ ಆರತಿ ಮಾಡುವಂತೆ ಅಮೃತವನ್ನು ಸುರಿಸುವ ಚಂದ್ರನಿಗೆ ಅವನದೇ ಆದ ಚಂದ್ರಕಾಂತ ಶಿಲೆಯಿಂದ ಜಿನುಗಿದ ನೀರಿನಿಂದ ಅರ್ಘ್ಯ ನೀಡುವಂತೆ ಸಮುದ್ರಕ್ಕೆ ಅದರದೇ ಆದ ಜಲದಿಂದ ತರ್ಪಣಗೈಯುವಂತೆ ನಿನ್ನದೇ ಆದ ಶಬ್ದಾಥ್ಗಳಿಂದ ನಿನ್ನನ್ನು ಸ್ತೋತ್ರ ಮಾಡುತ್ತಿದ್ದೇನೆ.
    ಇಲ್ಲಿ 'ಅದ್ವಿತೀಯ ಬ್ರಹ್ಮವಸ್ತುವಿಗಿಂತ ಭಿನ್ನವಾದ ಮತ್ತೊಂದು ಇಲ್ಲ' ಎಂಬ ಅದ್ವೈತ ತತ್ವಪ್ರತಿಪಾದನೆಯನ್ನು ಕಡುಬಿನಲ್ಲಿ ಹೊರಣದಂತೆ ಹುದುಗಿಸಿರುವುದನ್ನು ಕಾಣಬಹುದು ಅಲ್ಲದೆ, ಪರಿಶುದ್ಧ ಭಕ್ತನಿಗೆ ಅತ್ಯಂತ ಸಹಜವಾದ ಸಂಪೂರ್ಣ ಶರಣಾಗತಿಯನ್ನು ಇಲ್ಲಿ ಕಾಣಬಹುದು ಎಂದರೆ ಏಕಕಲದಲ್ಲಿ ಆಚಾರ್ಯರು ಶ್ರೇಷ್ಠ ಜ್ಞಾನಿಗಳೂ ಭಕ್ತರೂ ಆಗಿದ್ದರು ಪ್ರಾಯಶಃ ಗೀತಾಚಾರ್ಯನು 'ಜ್ಞಾನೀತು ಆತ್ಮೈವ ಮೇ ಮತಂ' ಎಂದದ್ದು ಇಂಥವರನ್ನು ಕುರಿತೇ ಇರಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ