"ತಾನು ಮುಡಿದುದನ್ನು ದೇವರಿಗೆ ಅರ್ಪಿಸಿದ ದೇವಿ"

ಪೆರಿ ಆಳ್ವಾರ್ ಎಂಬುವವರೊಬ್ಬರು ಪರಮ ದೈವ ಭಕ್ತರಾಗಿದ್ದರು. ಆಳ್ವಾರ್ ಎಂದರೆ ಭಗವಂತನಲ್ಲಿ ಗಾಢ ಭಕ್ತಿಯುಳ್ಳವರು ಎಂದು ಅರ್ಥ. ರಂಗನಾಥ ಅವರ ಆರಾಧ್ಯ ದೈವ. ಪ್ರತಿ ದಿನವೂ ಹೂ ಮಾಲೆಯನ್ನು ಕಟ್ಟಿ ದೇವರಿಗೆ ಅರ್ಪಿಸುವುದು ಅವರ ದಿನಚರಿಯಾಗಿತ್ತು. ಅದಕ್ಕಾಗಿ ಅವರು ಒಂದು ಹೂ ತೋಟವನ್ನೇ ಬೆಳೆಸಿದ್ದರು. ಒಂದು ದಿನ ಅವರು ತಮ್ಮ ತೋಟದಲ್ಲಿ ಹೂವು ಬಿಡಿಸುತ್ತಿದ್ದಾಗ, ಸೊಂಪಾಗಿ ಬೆಳೆದ ತುಳಸಿ ಗಿಡವೊಂದರ ಕೆಳಗೆ ಮುದ್ದಾದ ಹೆಣ್ಣು ಶಿಶುವೊಂದು ಮಲಗಿದ್ದುದನ್ನು ಕಂಡು ಆಶ್ಚರ್ಯಗೊಂಡರು. ಮಕ್ಕಳಿಲ್ಲದ ಆಳ್ವಾರರು ಪರಮಾನದಿಂದ ಆ ಶಿಶುವನ್ನು ಮನಗೆ ತಂದು, ಪ್ರೀತಿಯಿಂದ ಆಂಡಾಳ್ ಎಂದು ಕರೆದರು. ತುಂಬಾ ಮಮತೆಯಿಂದ ಆಧ್ಯಾತ್ಮಿಕ ವಾತಾವರಣದಲ್ಲಿ ಬೆಳೆಸಿದರು. ಆಂಡಾಳ್ ಸುಂದರಿಯೂ ಕೋಮಲೆಯೂ ಆಗಿ ಬೆಳೆದಳು. ಚಿಕ್ಕಂದಿನಿಂದಲೇ ಅವಳಿಗೆ ಶ್ರೀಕೃಷ್ಣನಲ್ಲಿ ಅಪ್ರತಿಮ ಭಕ್ತಿ, ಪ್ರೇಮಗಳು ಮೂಡಿದವು. ದಿನವೂ ತಂದೆ ತೋಟದಿಂದ ಆರಿಸಿ ತರುವ ಸುಗಂಧ ಪುಷ್ಪಗಳಿಂದ ಸುಂದರವಾಗಿ ಮಾಲೆಯನ್ನು ಕಟ್ಟುತ್ತಿದ್ದಳು. ತನ್ನ ಇಷ್ಟ ದೈವಕ್ಕೆ ಅರ್ಪಿಸುವಷ್ಟು ಸೊಗಸಾಗಿ ಬಂದಿದೆಯೋ ಇಲ್ಲವೋ ಎಂದು ನೋಡಲು ತಾನು ಮೊದಲು ಮುಡಿದು ಕನ್ನಡಿಯಲ್ಲಿ ನೋಡಿಕೊಂಡು ಪರೀಕ್ಷಿಸಿ, ನಂತರ ತಂದೆಯ ಕೈಗೆ ಕೊಡುತ್ತಿದ್ದಳು. ಒಂದು ದಿನ ಆಳ್ವಾರರಿಗೆ ಹೂ ಮಾಲೆಯಲ್ಲಿ ನೀಳವಾದ ಕೂದಲೆಳೆ ಕಂಡು ಬಂದಿತು. ಆ ಮಾಲೆ ಅಶುದ್ಧವೆಂದು ಅಂದು ದೇವರಿಗೆ ಹೂ ಮಾಲೆ ಅರ್ಪಿಸಲೇ ಇಲ್ಲ. ಆಂಡಾಳ್ ಮಾಲೆಯನ್ನು ತಾನು ಮೊದಲು ಮೂಡಿದು ನಂತರ ದೇವರಿಗೆ ಕೊಡುತ್ತಿದ್ದಳು ಎಂದು ಅವರಿಗೆ ಗೊತ್ತಾಗಿ, ಮಗಳ ಮೇಲೆ ಕೋಪ, ಅಸಮಾಧಾನ ಉಂಟಾಯಿತು.
ಆ ರಾತ್ರಿ ದೇವರು ಆಳ್ವಾರರ ಕನಸಿನಲ್ಲಿ ಕಾಣಿಸಿಕೊಂಡು ಆಂಡಾಳ್ ಮುಡಿದು ಕೊಡುವ ಮಾಲೆಯೇ ತನಗೆ ಪ್ರಿಯವೆಂದೂ, ಅದನ್ನೇ ಅರ್ಪಿಸಬೇಕೆಂದೂ ಹೇಳಿದಂತೆ ಆಯಿತಂತೆ. ತಮ್ಮ ಸಾಕು ಮಗಳು ದೇವರ ವಿಶೇಷ ಕೃಪೆಗೆ ಪಾತ್ರಳಾಗಿರುವುದನ್ನು ತಿಳಿದು ಆಳ್ವಾರರಿಗೆ ಅಪಾರ ಸಂತೋಷವಾಯಿತು. ಈ ಘಟನೆಯಿಂದ ಆಂಡಾಳ್ "ಶೂಡಿ ಕುಡುತ್ತ ನಾಚಿಯಾರ್‌" ಎಂದರೆ "ತಾನು ಮುಡಿದುದನ್ನು ದೇವರಿಗೆ ಅರ್ಪಿಸಿದ ದೇವಿ" ಎಂದು ಪ್ರಖ್ಯಾತಳಾದಳು.
ಕೃಷ್ಣ ಭಕ್ತೆ ಮೀರಾಬಾಯಿಯಂತೆ, ನಮ್ಮ ನಾಡಿನ ಶಿವಶರಣೆ ಅಕ್ಕಮಹಾದೇವಿಯಂತೆ ಆಂಡಾಳಲಿಗೂ ದಿನ ಕಳೆದಂತೆ ಭಗವಂತನಿಂದ ಬೇರೆಯಾಗಿರುವುದು ಅಸಾಧ್ಯವಾಯಿತು. ತನ್ನ ಆರಾಧ್ಯ ದೈವವನ್ನು ಸೇರಲು ಬಹಳವಾಗಿ ಹಂಬಲಿಸಿ ಕಡೆಗೆ ಶ್ರೀರಂಗಕ್ಕೆ ಹೋಗಿ, ಅಲ್ಲಿ ಶ್ರೀರಂಗನಾಥ ಸ್ವಾಮಿಯಲ್ಲಿ ಐಕ್ಯಳಾಗಿ ಹೋದಳು. ಲೋಕೋದ್ಧಾರಕ್ಕಾಗಿ ಮಹಾಲಕ್ಷ್ಮಿಯೇ ಆಂಡಾಳ್ ರೂಪದಲ್ಲಿ ಭೂ ಲೋಕದಲ್ಲಿ ಅವತರಿಸಿದ್ದಳು ಎಂದು ಒಂದು ಅಭಿಪ್ರಾಯವಿದೆ. ಆಕೆ ರಚಿಸಿರುವ 'ತಿರುಪ್ಪಾವೈ' ಮತ್ತು 'ನಾಟ್ರಿಯಾರ್ ತಿರುಮಾಳ್‌' ಎಂಬ ಸೊಗಸಾದ ಭಕ್ತಿ ಗೀತೆಗಳು ತಮಿಳಿನ ಧಾರ್ಮಿಕ ಸಾಹಿತ್ಯಕ್ಕೆ ಒಂದು ಅಮೂಲ್ಯ ಕಾಣಿಕೆಯಾಗಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ