ಭದ್ರವಾಗಿ ಕಟ್ಟಿರಿ ಮೂರು ಪಿಂಡ.

ಶ್ರಾದ್ಧ ಕರ್ಮದ ಉದ್ದೇಶವೇನು? ಮರಣಾನಂತರ ಜೀವಿಗೆ ತನ್ನ ಕರ್ಮಾನುಸಾರ ಸ್ವರ್ಗವೋ, ನರಕವೋ ಪ್ರಾಪ್ತಿ. ಸ್ವರ್ಗವಾದರೆ ಮೋಕ್ಷ, ಅಮರತ್ವ. ಪುನರ್ಜನ್ಮವಿಲ್ಲವೆಂದು ನಂಬಿಕೆ. ಅವರಿಗೆ ಶ್ರಾದ್ಧಕರ್ಮಗಳಲ್ಲಿನ ತರ್ಪಣಗಳು ಏಕೆ ಬೇಕು? ನರಕವಾದರೆ ಪಾಪದ ಫಲ ಅನುಭವಿಸಿದ ನಂತರ ಪುನರ್ಜನ್ಮ. ಯಾವುದೋ ರೂಪದಲ್ಲಿ ಬೇರೆಯಲ್ಲಿಯೋ ಜನ್ಮ ಪಡೆದ ಪಿತೃಗಳಿಗೆ ನಾವು ಪಿಂಡಪ್ರದಾನ ಮಾಡುವುದರ ಅವಶ್ಯಕತೆಯೇನು? ದೇಹತ್ಯಾಗದ ನಂತರ ಆತ್ಮ ಪರಮಾತ್ಮನಲ್ಲಿ ಐಕ್ಯವಾದ ಮೇಲೆ ಜೀವಿಯ ಆತ್ಮಕ್ಕೆ ಪ್ರತ್ಯೇಕ ಅಸ್ತಿತ್ವವೆಲ್ಲಿದೆ? ಹೀಗಾಗಿ ಇಲ್ಲಿಯೂ ಶ್ರಾದ್ಧದ ಪ್ರಮೇಯವೇನು?

ಸಾಮಾನ್ಯವಾಗಿ ವೈದಿಕ ಸಮಾಜದಲ್ಲಿ ಆಸಕ್ತರಿಗೆ ಪಿತೃಶ್ರಾದ್ಧಾದಿ ಕಾರ್ಯ ಒಂದು ಕರ್ತವ್ಯವೆಂತಲೂ, ಅದನ್ನು ಶ್ರದ್ಧೆಯಿಂದ ಮಾಡಬೇಕೆಂತಲೂ ನಂಬಿಕೆಯಿದೆ. ಇದು ಸಾರ್ಥಕ ನಂಬಿಕೆ. ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದಾರೆ ಆಸ್ತಿಕ ಜನರು. ಆದರೆ ಆಚರಣೆಗಳನ್ನು ನೋಡಿ ಹೀಗೆಳೆಯುವ, ನಿಂದೆ ಮಾಡುವ ವರ್ಗವೂ ಇದೆ. ಇದೇಕೆ ಮಾಡಬೇಕು? ಇದರಿಂದೇನು ಉಪಯೋಗ? ಎಂದು ಹಾಸ್ಯ ಮಾಡುವ ಜನರಿಗೂ ಕೊರತೆ ಇಲ್ಲ. ಅವರಿಗೆ ಉತ್ತರಿಸುವ ಉದ್ದೇಶವೂ ನನ್ನದಲ್ಲ. ಆಸ್ತಿಕರಾದ ಜನರಿಗೆ ಅವರ ಪಿತೃಭಕ್ತಿಯ ಜೊತೆಯಲ್ಲಿ ಶ್ರದ್ಧೆ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಶ್ರಾದ್ಧ ಸಾಫಲ್ಯತೆಯ ಕುರಿತು ಈ ಎರಡು ಮಾತನ್ನು ಬರೆಯುತ್ತಿದ್ದೇನೆ. ಇದನ್ನು ಓದಿದ ಪಿತೃಭಕ್ತಿ ಪರಾಯಣರಾದ ಶ್ರದ್ಧಾಳುಗಳು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ತಂದೆತಾಯಿಯರ ಮೃತತಿಥ ಅಥವಾ ಪುಣ್ಯತಿಥಿ ಆಚರಿಸೋಣ.

ಮೊದಲಾಗಿ ಪಿತೃಶ್ರಾದ್ಧದ ಮುಖ್ಯ ಉದ್ದೇಶವೇನು? ಇಲ್ಲಿ ಪಿತೃವೆಂದರೆ ಯಾರು? ಯಾವುದು? ಅದೇಕೆ ಗೌರವಾನ್ವಿತ ಹಾಗೂ ಪೂಜನೀಯವಾಯ್ತು? ಅದು ವ್ಯಕ್ತಿಯೇ? ದೇಹವೇ? ಶಕ್ತಿಯೇ? ತತ್ವವೇ? ಚಿಂತಿಸೋಣ. ಸಾಮಾನ್ಯವಾಗಿ ಸೂತ್ರಕಾರರ ಅಭಿಮತದಂತೆ ಪಿತೃ ಎಂಬುದು ಒಂದು ಸ್ಥಾನ, ಹುದ್ದೆ. ಅದಕ್ಕೆ ಅದರದ್ದೇ ಆದ ಜವಾಬ್ದಾರಿ, ಬದ್ಧತೆ ಇರುತ್ತದೆ. ಅದನ್ನು ಹುಟ್ಟಿದ ಪ್ರತಿಯೊಂದು ಜೀವಿಯೂ ಹೊಂದಲೇ ಬೇಕಾದ ಹುದ್ದೆ. ಅದನ್ನು ಪಡೆಯಲು, ಜವಾಬ್ದಾರಿಯುತವಾಗಿ ನಿರ್ವಹಿಸಲು ಅಸಮಾನ್ಯ ಜ್ಞಾನವು ಬೇಕು. ಆ ಜ್ಞಾನವು ಅನುಭವದಿಂದ ಮಾತ್ರ ಪ್ರಾಪ್ತವಾಗುವಂತಹದ್ದು. ಕಲಿಕೆಯಿಂದ ಬರುವಂತಹದ್ದಲ್ಲ. ಅಂತಹಾ ಹುದ್ದೆಯನ್ನು ಅಲಂಕರಿಸಿದ್ದಾರೆ ನಮ್ಮ ಭೌತಿಕ ವ್ಯಾವಹಾರಿಕ ಪ್ರಪಂಚದ ಪಿತೃಗಳು. ಅಂದರೆ ಭಾವನಾತ್ಮಕ ತಂದೆಯೆಂದು ಅರ್ಥ. ವ್ಯಕ್ತಿಗತವಾಗಿ ಆ ಸ್ಥಾನವನ್ನು ಸಮರ್ಥವಾಗಿ ಅವರು ನಿರ್ವಹಿಸಿದ್ದಾರೆ ಎಂದು ಹೇಳುವ ಅರ್ಹತಾ ಪತ್ರವೇ ನಾವು. ಹಾಗಿದ್ದಾಗ ಅವರ ನಿರ್ವಹಣೆಯಲ್ಲಿ ಅನರ್ಹರು ಎಂದರೆ ನಾವು ಅನರ್ಹರು ಎಂದೇ ಅರ್ಥ.

ಅಂತಹಾ ಪಿತೃಸ್ಥಾನ ಪಟ್ಟವು ಪ್ರತಿಯೊಬ್ಬ ಜೀವಿಯೂ ಬಯಸಿ ಪಡೆಯುವ ಪಟ್ಟ. ಅದರ ಮಹತ್ವವೆಷ್ಟಿರಬಹುದು ಚಿಂತಿಸಿ? ಅದನ್ನು ಪಡೆದು ನಿರ್ವಹಿಸಿ, ಯಶಸ್ವಿಯಾಗಿ ನಮ್ಮನ್ನು ಈ ಲೋಕಕ್ಕೆ, ಸಮಾಜಕ್ಕೆ ಕೊಟ್ಟು ತಾವು ತೇರ್ಗಡೆಯಾಗಿ ವಿರಮಿಸಿದ ತಂದೆತಾಯಿಯ ಸ್ಥಾನ ಪೂಜಾರ್ಹವಲ್ಲವೇ ಚಿಂತಿಸಿ? ಅಂತಹಾ ಸ್ಥಾನವನ್ನು ಗೌರವಿಸುವುದು ಧರ್ಮವಲ್ಲವೇ? ಇದು ಶ್ರಾದ್ಧದ ಹಿನ್ನಲೆಯಲ್ಲಿರುವ ಮಾನವೀಯ ಧರ್ಮ.

ಇನ್ನು ಮೃತಾನಂತರ ಪುನರ್ಜನ್ಮ. ಅವರಿಗೇಕೆ ತರ್ಪಣ? ಪಿಂಡಪ್ರಧಾನ ಎಂಬ ಪ್ರಶ್ನೆಗಳಿವೆ. ಜನರೇ, ಈ ದೃಷ್ಟಿಯಿಂದ ಚಿಂತಿಸಬೇಕು – ತಂದೆಯು ಮೃತನಾಗುವುದಿಲ್ಲ, ದೇಹ ಮಾತ್ರ ನಾಶವಾಗಿದೆ. ತಂದೆಯು ಪುನರ್ಜನ್ಮ ಪಡೆದಿಲ್ಲ, ಆತ್ಮವು ಮಾತ್ರ ಪಡೆದಿದೆ. ತಂದೆಯು ಅಸ್ತಿತ್ವ ಕಳೆದುಕೊಳ್ಳುವುದಿಲ್ಲ, ತಂದೆಯಾಗಿಯೇ ಉಳಿದಿರುತ್ತಾರೆ. ಆತ್ಮವು ಮಾತ್ರ ಪುನರ್ಜನ್ಮ ಪಡೆದು ಹುಟ್ಟಿಬರಬಹುದು. ಆದರೆ ಅದು ಪ್ರಾಣಿಯಾಗಿ ಹುಟ್ಟಿತು ಎಂದು ಯಾರೂ ಪ್ರಸಕ್ತಕಾಲದ ವಿಳಾಸ ಹೇಳುವಾಗ ತನ್ನ ತಂದೆಯು ಪ್ರಾಣಿಯಾಗಿ ಪುನರ್ಜನ್ಮ ಪಡೆದಿದ್ದಾರೆ ಎಂದು ಗೊತ್ತಿದ್ದರೂ ತಾನು ಪ್ರಾಣಿಯ ಮಗನೆಂದು ತನ್ನ ಹೆಸರಿನ ಮುಂದೆ ಸೇರಿಸಿಕೊಳ್ಳುವುದಿಲ್ಲ. ಪುನರ್ಜನ್ಮ ಸಿಕ್ಕಿದೆಯೋ, ಬಿಟ್ಟಿದೆಯೇ ಅದು ಬೇರೆಯ ವಿಚಾರ. ಈ ಶ್ರಾದ್ಧವನ್ನು ಮಾಡಬೇಕಾದ ಮಗನು ಬದುಕಿರುವವರೆಗೆ, ತಂದೆ ಎಂಬ ಭಾವನಾತ್ಮಕ ಅಸ್ತಿತ್ವವು ಪುನರ್ಜನ್ಮ ಪಡೆಯುವುದಿಲ್ಲ. ಆ ಪಟ್ಟ ಈ ಮಗನಿಗೆ ಸಿಗದೇ ಇರಬಹುದು. ಅಲ್ಲಿಂದ ಮುಂದೆ ಹುಟ್ಟಿದ ಆ ಮಗನಿಂದ ಶ್ರಾದ್ಧವಿಲ್ಲ, ಬೇಕಿಲ್ಲ. ಆದರೆ ತಂದೆಯ ಸ್ಥಾನ ನಿರ್ವಹಿಸಿದ ಈ ಬ್ರಹ್ಮಚಾರೀ ಮಗನನ್ನಾದರೂ ಈ ಭೂಮಿಗೆ ಕೊಟ್ಟ ತಂದೆಯು ತನ್ನ ಸ್ಥಾನ ನಿರ್ವಹಣೆ ಮಾಡಿದ್ದಾರೆ. ಅಲ್ಲಿಯವರೆಗೆ ಶ್ರಾದ್ಧ ಸಾಧುವೇ, ಸತ್ಯವೇ, ನ್ಯಾಯವೇ ಆಗಿರುತ್ತದೆ. ಅದು ಈ ಮಗನ ಅಸ್ತಿತ್ವವನ್ನು ಉಳಿಸಿಕೊಡುತ್ತದೆ ನೆನಪಿರಲಿ.

ಇಲ್ಲಿಯವರೆಗೆ ಪಿತೃಸ್ಥಾನ ಮತ್ತು ಮಗನ ಕರ್ತವ್ಯ ನಿರ್ವಹಣೆ. ಪ್ರತೀ ಜೀವಿಯೂ ಒಂದೊ ತಂದೆಯಾಗಿ ಅಥವಾ ತಾಯಿಯಾಗಿ ಸಾಫಲ್ಯತೆ ಕಾಣುವ ನಮ್ಮ ಆಧ್ಯಾತ್ಮಿಕ, ದೈವೀಕ ನೆಲೆಗಟ್ಟಿನ ಸಮಾಜ ಜೀವನದ ಪರಮೋನ್ನತ ಪದವಿ ತಂದೆ-ಯಾ- ತಾಯಿ. ಈ ಪದವಿಗಾಗಿ ಪ್ರತೀಜೀವಿಯೂ ಹಾರೈಸುತ್ತದೆ. ಅಂತಹಾ ಪದವಿ ಆಕಾಂಕ್ಷೆಯಾದ ಪ್ರತೀಜೀವಿಯೂ ಆ ಸ್ಥಾನವನ್ನು ಶ್ರದ್ಧೆಯಿಂದ ಗೌರವಿಸಿದರೆ ನಿಸ್ತಂತುವಾಗಿ ವಂಶ ಬೆಳೆಯುತ್ತದೆ. ಇಲ್ಲವಾದರೆ ಮುಂದೆ ಸಂತಾನ ಲಭ್ಯವಿಲ್ಲದೆ ವಂಶ ನಿಂತು ಹೋಗಬಹುದು. ಆದ್ದರಿಂದ ಶ್ರಾದ್ಧ, ತರ್ಪಣ, ಪ್ರತೀಜೀವಿಯ ಮುಖ್ಯ ಕರ್ತವ್ಯ. ಅದು ಆ ಸ್ಥಾನವನ್ನು ಗೌರವಿಸಿದಂತೆ. ಮತ್ತು ನಿಮ್ಮ ಜೀವನವಿಧಾನಕ್ಕೆ ಕನ್ನಡಿಯಿದ್ದಂತೆ. ಆದ್ದರಿಂದ ಶ್ರಾದ್ಧಪ್ರಕ್ರಿಯೆ ಏನು? ಎನ್ನುವುದನ್ನು ಶ್ರದ್ಧೆಯಿಂದ ಅರ್ಥಮಾಡಿಕೊಳ್ಳಿ.

ಯಾವುದು ಸತತವೂ ಪುನರಾವರ್ತನೆಯಾಗುತ್ತದೋ ಅದನ್ನು ನಮ್ಮಲ್ಲಿ ಚಕ್ರ, ಗೋಳ, ವೃತ್ತ, ಅಂಡ, ಪಿಂಡವೆಂದು ಗುರುತಿಸುತ್ತಾರೆ, ಹೇಳುತ್ತಾರೆ. ಪ್ರತಿಯೊಂದು ಜೀವಿಯೂ ಪುನಃ ಹುಟ್ಟಿ ಬರುತ್ತಲೇ ಇರುತ್ತದೆ. ಈ ಪುನರ್ಜನ್ಮವೆಂಬ ಕಲ್ಪನೆಯಲ್ಲಿ ತಾನು ನಿರ್ವಹಿಸಿದ ಗೋಳದ ಕಲ್ಪನೆ ಈ ಪಿಂಡ. ತನಗೆ ಚಲನಾಧಾತುವಾಗಿ, ಸ್ನೇಹಕವಾಗಿ ಸಹಕರಿಸಿದ್ದು ನೀರು = ತರ್ಪಣ. ಈ ಭೂಮಿಯ ವ್ಯವಹಾರದಲ್ಲಿ ಶಕ್ತಿಪ್ರದವಾಗಿ ಲಭ್ಯವಾಗಿ ಜ್ಞಾನರೂಪದಲ್ಲಿ ಏಳ್ಗೆಗೆ ಸಹಕರಿಸಿದ್ದು ಎಳ್ಳು. ತನ್ನ ರೂಪದಲ್ಲಿ ಸಣ್ಣಕಣವಾದರೂ ಅಗಾಧಶಕ್ತಿಯ ರೂಪದಲ್ಲಿ ತನ್ನಲ್ಲೇ ತೈಲವನ್ನು ತುಂಬಿಸಿಕೊಂಡು ನೀನು ಶ್ರಮ ಪಟ್ಟರೆ ತೈಲ ಪಡೆಯಬಹುದು. ನಿನ್ನ ಬಾಳ ಪಯಣಕ್ಕೆ ದಾರಿ ತೋರುವ ದೀಪವಾಗಬಹುದು ಎಂಬ ಜ್ಞಾನದೀವಿಗೆ ಎಳ್ಳು. ಸೂತ್ರ ಹೇಳುತ್ತದೆ, ಯಾವುದು ತೈಲವನ್ನು ಕೊಡುತ್ತದೊ ಅದು ತಿಲವೆಂದು.

ಶುದ್ಧತೆ, ಮಡಿ ನಿಮ್ಮ ಜೀವನವಿಧಾನದಲ್ಲಿರಲಿ ಎಂದು ಬೋಧಿಸುತ್ತದೆ. ಆಹಾರ ತುಂಬಾ ಸರಳ, ಸಾತ್ವಿಕವಾಗಿರಲಿ ಎನ್ನುತ್ತದೆ. ಪ್ರಪಂಚದ ಸಕಲ ಜೀವಿಗಳನ್ನೂ ನಿನ್ನ ಸಹೋದರರಂತೆ ಭಾವಿಸು ಎನ್ನುತ್ತದೆ. ಗೋಗ್ರಾಸ, ಕಾಕಬಲಿ, ಗಯಾಶ್ರಾದ್ಧವೆಂದು ಪ್ರತೀತಿ ಇದೆ. ಗೋವಿನಿಂದ ಮೊದಲ್ಗೊಂಡು ಎಲ್ಲಾ ಪ್ರಾಣಿ, ಪಕ್ಷಿಗಳಿಗೂ ಸಂತಪ್ತಿಯನ್ನು, ಮಾನವಜೀವಿಯಾಗಿಯೂ ತನ್ನ ಕರ್ಮಬಂಧನದಿಂದ ಯಾಚಕನಾಗಿದ್ದವನಿಗೂ ಅನ್ನವಿಟ್ಟು ಮಾಡುವ ಪಿತೃಶ್ರಾದ್ಧವೇ ಗಯಾಶ್ರಾದ್ಧ. ಗ = ಗೋವು, ಯಾ = ಯಾಚಕ, ಸಂಧಿಯಾದರೆ ಗಯಾ. ಅದನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ ಗಯಾಶ್ರಾದ್ಧ. ಶಕ್ತನಾದವನು ತನ್ನ ಸುತ್ತಿನ ಪರಿಸರ, ಜೀವ ಪ್ರಭೇದಗಳ ರಕ್ಷಣೆಯನ್ನು ಚಿಂತಿಸಿ ಅವುಗಳಿಗೆ ಆಸರೆಯಾಗುವುದೇ ಶ್ರಾದ್ಧದ ಆದರ್ಶ. ಮತ್ತು ತಾನು ತನ್ನ ಜೀವನವಿಧಾನವನ್ನು ಒರೆಗಲ್ಲಿಗೆ ಹಚ್ಚುವ ವಿಧಾನ, ಸರಿಯಿಲ್ಲದಿದ್ದಲ್ಲಿ ತಿದ್ದಿಕೊಳ್ಳುವ ಪರೀಕ್ಷಾವಿಧಾನವೇ ಶ್ರಾದ್ಧ. ನಿಮಗಾಗಿ ನಿಮ್ಮ ಶ್ರೇಯಸ್ಸನ್ನು ಹಾರೈಸಿ ಮಾಡುವ ಶ್ರಾದ್ಧ ಪ್ರಕ್ರಿಯೆಯಲ್ಲಿ ಕಟ್ಟಿದ ಪಿಂಡವನ್ನು ಸೌಚೀಕ ಮಂತ್ರಗಳ ಮೂಲಕ ಕೈಯಲ್ಲಿ ಹಿಡಿದು, ಕೈಯನ್ನು ಮಗುಚಿ ಪಿಂಡವನ್ನು ಇಡುತ್ತೀರ. ಅಂದರೆ ಒಂದು ವರ್ಷದ ನಿಮ್ಮ ಜೀವನದ ಪೂರ್ವಾವಲೋಕನ ಮಾಡಿಕೊಳ್ಳುತ್ತೀರಾ ಎಂದು ಅರ್ಥ.
ಅದಕ್ಕಾಗಿ ನಂಬಿಕೆಯೆನ್ನುವ ಆಧಾರದಲ್ಲಿ ಭದ್ರವಾಗಿ ಕಟ್ಟಿರಿ ಮೂರು ಪಿಂಡ. ಅದು ಹಸಿಯಾಗಿಯೇ ಇರಲಿ. ಒಡೆಯದಂತೆ ಇರಲಿ. ಅದಕ್ಕಾಗಿ ನೀರು = ತರ್ಪಣ ಬಿಡಿರಿ. ಆ ನಂಬಿಕೆಯನ್ನು ಗೌರವಿಸಿ ನಮಸ್ಕರಿಸಿ. ಅದನ್ನು ನೀರಿನಲ್ಲೋ, ಭೂಮಿಯಲ್ಲೋ, ಅಥವಾ ಪ್ರಕೃತಿಯ ಸಕಲ ದೇವತಾರೂಪದ ಗೋವಿನಲ್ಲೋ ಭದ್ರಪಡಿಸಿ. ಆ ನಂಬಿಕೆಯ ಪಿಂಡವನ್ನು ಒಡೆಯದಿರೋಣ, ಒಡೆದೇವೂ ಕೆಟ್ಟೆವು.....

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ