ಮೋಕ್ಷ

ಸಾಮಾನ್ಯವಾಗಿ ನಮ್ಮಲ್ಲಿ ಮೋಕ್ಷದ ಬಗ್ಗೆ ಎಲ್ಲರಿಗೂ ಒಂದು ಕುತೂಹಲವಿದೆ. ಆದರೆ, ಮೋಕ್ಷವೆಂದರೇನು ಎನ್ನುವುದನ್ನು ನಮ್ಮಲ್ಲಿ ಹೆಚ್ಚಿನವರು ತಿಳಿದು ಕೊಂಡಿಲ್ಲ. ಹನ್ನೆರಡನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಇದ್ದ ಮಹತ್ವದ ಜ್ಞಾನಿಯಾದ ಅಭಿನವಗುಪ್ತ ಒಂದು ಪುಸ್ತಕ ಬರೆದಿದ್ದಾನೆ. ಅದರ ಹೆಸರು 'ತಂತ್ರಾಲೋಕ'. ಅದರಲ್ಲಿ ಅಭಿನವಗುಪ್ತನು ಹೇಳಿರುವ ಪ್ರಕಾರ, ''ಆತ್ಯಂತಿಕ ಸ್ವಾತಂತ್ರ್ಯದ ಮಟ್ಟಕ್ಕೆ ಏರುವುದೇ ನಿಜವಾದ ಮೋಕ್ಷ''. ಒಬ್ಬ ಸಾಧಕನು ಯೋಗಿಯಾಗುವುದೆಂದರೆ ಇದೇ. ಅಂದರೆ, ಆತನಿಗೆ ಒಂದು ವಿಶ್ವಾತ್ಮಕವಾದ ಪ್ರಜ್ಞೆ ಬಂದಿರುತ್ತದೆ. ಅದನ್ನು ಈ ಲೌಕಿಕ ಜಗತ್ತಿನ ಯಾವೊಂದು ವಸ್ತುವೂ ಪ್ರಭಾವಿಸುವುದು ಸಾಧ್ಯವಿಲ್ಲ. ಒಬ್ಬ ಯೋಗಿಯು ಸಂಪೂರ್ಣವಾಗಿ ತನ್ನ ಅಂತರಂಗದಲ್ಲಿ ಆಧ್ಯಾತ್ಮಿಕವಾದ ಜಾಗೃತಿಯನ್ನು ಹೊಂದಿದಾಗ ಮಾತ್ರ ಈ ಪ್ರಕ್ರಿಯೆ ಆರಂಭವಾಗುತ್ತದೆ. ಆಗ ಆತ ತನ್ನ ಒಳಗಿರುವ ದೈವಿಕ ಪ್ರಜ್ಞೆಯಲ್ಲಿ ಆನಂದವನ್ನು ಕಾಣುತ್ತಾನೆ. ಆ ಕ್ಷಣದಲ್ಲಿ ಅವನು ತನ್ನ ಅಂತರಂಗದ ಪ್ರಪಂಚದಿಂದ ಹೊರಬಂದು ಈ ಬಾಹ್ಯ ಲೋಕವನ್ನು ಅನುಭವಿಸುತ್ತಾನೆ.
ಒಬ್ಬ ಯೋಗಿಯ ಕಣ್ಣಿಗೆ ಕೂಡ ನಮ್ಮನಿಮ್ಮಂತೆಯೇ ಒಂದು ಕುರ್ಚಿಯೋ, ಒಂದು ಮರವೋ ಅನುಭವಕ್ಕೆ ಬಂದೀತು. ಆದರೆ, ಆ ಅನುಭವವು ಆತನ ಆಂತರ್ಯದ ದೈವಿಕ ಪ್ರಜ್ಞೆಯಿಂದ ತುಂಬಿರುತ್ತದೆ. ಆತ ಎಲ್ಲೆಲ್ಲಿ ನೋಡಿದರೂ ಇದೇ ಅನುಭವ ಉಂಟಾಗುತ್ತಿರುತ್ತದೆ. ಇದಾದಮೇಲೆ ಆತ ಮತ್ತೆ ತನ್ನ ಕಣ್ಣನ್ನು ಮುಚ್ಚಿ, ಒಳಮುಖವಾಗಿ ಹೋಗುತ್ತಾನೆ. ಕೆಲವು ಕ್ಷಣಗಳ ನಂತರ ಆತ ಮತ್ತೆ ಕಣ್ತೆರೆದು, ಬಾಹ್ಯ ಜಗತ್ತಿಗೆ ಬರುತ್ತಾನೆ. ಇಲ್ಲಿ ಅವನು ಭಗವಂತನ ಅಖಂಡತೆಯನ್ನು ಅನುಭವಿಸುತ್ತಾನೆ. ಆತ ಈ ಪ್ರಕ್ರಿಯೆಯನ್ನು ನಿಲ್ಲಿಸಲಾರ. ಇದನ್ನು 'ಕರ್ಮ ಮುದ್ರಾ' ಎನ್ನುತ್ತಾರೆ. ಯೋಗಿಯು ಇಲ್ಲಿ ತನ್ನ ಅಂತರಂಗ ಮತ್ತು ಬಹಿರಂಗಗಳ ಶಕ್ತಿಯನ್ನು ಅನುಭವಿಸುತ್ತಿರುತ್ತಾನೆ. ಆತನಲ್ಲಿರುವ 'ನಾನು' ಎಂಬ ಪ್ರಜ್ಞೆಯು ಅಂತಿಮವಾಗಿ ಅಂತರಂಗದ ಅಖಂಡತೆಯಲ್ಲಿ 'ಸಮಾಧಿ' ಸ್ಥಿತಿಯನ್ನೂ, ಬಹಿರಂಗದಲ್ಲಿ 'ವ್ಯತ್ಥಾನ' ಎಂಬ ಸ್ಥಿತಿಯನ್ನೂ ಸೃಷ್ಟಿಸುತ್ತದೆ.
ಆತ್ಯಂತಿಕವಾದ ಅಖಂಡತೆಯನ್ನು ತಂದುಕೊಡುವ ಈ ಪ್ರಕ್ರಿಯೆಯು ಆತ್ಯಂತಿಕವಾದ ಸ್ವಾತಂತ್ರ್ಯವೇ ಆಗಿದೆ. ಅಂದರೆ, ಯೋಗಿಯಾದವನಿಗೆ ಒಳಗಿನ ಆಧ್ಯಾತ್ಮಿಕ ಅನುಭೂತಿ ಮತ್ತು ಹೊರಗಿನ ಅನುಭವ ಎರಡೂ ಒಂದೇ ಆಗಿ ಕಾಣುತ್ತವೆ. ಸಾಧಕನು ಈ ಅರಿವಿನ ಮಟ್ಟವನ್ನು ಮುಟ್ಟಿದನೆಂದರೆ, ಮುಂದಕ್ಕೆ ಅವನು 'ಜಗದಾನಂದ'ದ ಮಟ್ಟಕ್ಕೆ ಏರುತ್ತಾನೆ. ಅಭಿನವಗುಪ್ತನು ಇದಕ್ಕೆ ಉದಾಹರಣೆಯಾಗಿ, ತನ್ನ ಗುರುಗಳಾದ ಶಂಭುನಾಥರ ಉದಾಹರಣೆ ಯನ್ನು ಕೊಡುತ್ತಾನೆ. 'ಜಗದಾನಂದ'ದ ಆ ಹಂತದಲ್ಲಿ ಯೋಗದ ಅಂಗಗಳಾದ ಭಾವನಾ, ಧಾರಣಾ, ಧ್ಯಾನ, ಪ್ರತ್ಯಾಹಾರ, ಯೋಗ ಮತ್ತು ಸಮಾಧಿ ಇವ್ಯಾವುವೂ ಬೇಕಾಗುವುದಿಲ್ಲ. ಈ ಸ್ಥಿತಿಯನ್ನು ತಲುಪಿದವರನ್ನೇ 'ಜೀವನ್ಮುಕ್ತ' ಎನ್ನಲಾಗುವುದು. ಅಂದರೆ, ಇನ್ನೂ ಬದುಕಿರುವಾಗಲೇ ಪರಮೋಚ್ಚವಾದ ಸ್ವಾತಂತ್ರ್ಯವನ್ನು ಗಳಿಸುವುದು ಎಂದರ್ಥ.
ಅಭಿನವಗುಪ್ತನ ಪ್ರಕಾರ, ಈ ಇಡೀ ಜಗತ್ತೇ ಶಿವನ ಆಟವಾಗಿದೆ. ಸಾಧನೆಯನ್ನು ಮಾಡುವ ನಿಜವಾದ ಹಂಬಲವಿರುವವರು ಇದನ್ನು ಅರಿತುಕೊಂಡಿರುತ್ತಾರೆ. ಒಬ್ಬ ಶೈವಾನುಯಾಯಿಗೆ ಈ ಇಡೀ ಜಗತ್ತು ಶಿವನ ಸೃಷ್ಟಿಯಂತೆ ಕಾಣುತ್ತದೆ. ಅಂದರೆ, ಈ ಜಗತ್ತು ಕೂಡ ಶಿವನಷ್ಟೆ ಸತ್ಯ. ಆ ಶಿವನ ಸಂಗದಲ್ಲಿ ಬಂಧನ ಮತ್ತು ವಿಮೋಚನೆ ಎರಡೂ ಒಂದೇ. ಹೀಗಾಗಿ ಇಲ್ಲಿ ಅನ್ಯವೆಂಬುದೇನೂ ಇಲ್ಲ. ಹೀಗಾಗಿ ನಾವು ಕೂಡ 'ಶಿವ'ವೇ ಆಗಿದ್ದೇವೆ

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ