ತಮಸೋ ಮಾ ಜ್ಯೋತಿರ್ಗಮಯಃ

ತಮಸೋ ಮಾ ಜ್ಯೋತಿರ್ಗಮಯಃ ಇದು ನಮ್ಮ ವೇದಋಷಿಗಳ ನಿರಂತ ಮೊರೆ. ಕತ್ತಲಿನಿಂದ ಬೆಳಕಿನೆಡೆಗೆ ನಮ್ಮನ್ನು ನಡೆಸು ಎಂದು ಅವರು ವೇದಪುರುಷನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಜೀವನ ಅನುಭವಕ್ಕೆ ಬಂದಂತೆ, ಕತ್ತಲು ಭೀತಿದಾಯಕ, ಕಾಣಬೇಕಾದ ವಸ್ತುಗಳನ್ನೂ ಕಾಣದಂತೆ ಮುಸುಕಿಬಿಡುತ್ತದೆ - ಇದು ಅಜ್ಞಾನ, ಎದುರಿನಲ್ಲಿಯೇ ಇರುವ ಮರವನ್ನು ಯಾವದೋ ಭೂತದಂತೆ ಭ್ರಮಿಸುವಂತೆ ಮಾಡುತ್ತದೆ - ಇದು ಅಧ್ಯಾಸ. ಒಂದನ್ನು ಮತ್ತೊಂದಾಗಿ ತಿಳಿಯುವಂತೆ ಕಣ್ಣುಕಟ್ಟು ಮಾಡುತ್ತದೆ. ನಮ್ಮ ಹೃದಯವಾಸಿಯೇ ಅದು ತೇಜಃಪುಂಜವೇ ಆದ, ಅಷ್ಟೇಕೆ ನಾವೇ ಆದ ಪರಂಜ್ಯೋತಿಯನ್ನು ನಮ್ಮಿಂದ ಮರೆಮಾಡಿಬಿಡುತ್ತದೆ. ಇದು ಸ್ವಸ್ವರೂಪ ವಿಸ್ಮೃತಿ. ಇಂತಹ ತಮಸ್ಸು ಯಾರಿಗೆ ಪ್ರಿಯ? ಯಾರಿಗೆ ಹಿತ? ಪ್ರಾಯಶಃ ಚೋರರು, ಪರರ ವಿತ್ತಾಪಹಾರಿಗಳು, ಅಸಭ್ಯ-ಅಧರ್ಮಕಾಮಿಗಳು ಕತ್ತಲನ್ನು ಬಯಸಬಹುದು - ಕತ್ತಲಿಗಾಗಿ ಹಾರೈಸಬಹುದಷ್ಟೆ, ಬೆಳಕಿಗಾಗಿ ಕಾತರರಾಗಿರುವವರ ಪಾಲಿಗೆ ತಮಸ್ಸು ಎಂಬ ಅಸುರೀಶಕ್ತಿ - ತಮಸ್ಸು ಅಂಧಕಾಸುರ. ನಮ್ಮನ್ನೇ ನಮ್ಮಿಂದ ಮರೆಸುವ ಮಹಾರಕ್ಕಸ-ಸ್ಯಾಟನ್, ಸೈತಾನ, ಅವನ ಬಲೆಗೆ ಬೀಳವದೇ ನರಕ. ಆ ಅಂಧಃತಮದ ಒಡೆಯ ನರಕಾಸುರ ಅವನನ್ನು ಸಂಹರಿಸಿ ಲೋಕವನ್ನು ಸಂರಕ್ಷಿಸಿದ ಮಹಾವಿಷ್ಣು ಕಾರ್ತಿಕ ಬಹುಳ ಚತುರ್ದಶಿಯಂದು ದೀಪಾವಳಿ ಉತ್ಸವದ ಮೊದಲ ಸಂಭ್ರಮ ಅದು ಮರುದಿನವೇ ಮತ್ತೊಮ್ಮೆ ಅಮಾವಾಸ್ಯೆ ಮತ್ತೆ ಕತ್ತಲು! ಇದು ಲೋಕವ್ಯಾಪಾರ.
ನರಕಾಸುರ ಕಣ್ಣಿಗೆ ಕಂಡ ಅಸುರ. ಪ್ರಾಗ್ಜೋತಿಷಪುರದ ಅರಸು. ಪ್ರಜಾಕಂಟಕ. ಅವನ ವಿಲಾಸಪ್ರಮತ್ತತೆ ಭಯಂಕರ, ಇಂದ್ರ ಶ್ವೇತಚ್ಛತ್ರವನ್ನೂ, ಇಂದ್ರನ ತಾಯಿ ಅದಿತಿಯ ಕರ್ಣಕುಂಡಲಗಳನ್ನೂ ಅಪಹರಿಸಿದ ಧೂರ್ತ ಲೋಕರಕ್ಷಣೆಗಾಗಿ ಶ್ರೀಕೃಷ್ಣ ಈ ಅಸುರನನ್ನು ಸಂಹರಿಸಬೇಕಾಯಿತು ಅವನ ಅಂತಃಪುರದಲ್ಲಿ ಸೆರೆಯಾಗಿದ್ದ ಹದಿನಾರುಸಾವಿರ ಸ್ತ್ರೀಯರಿಗೆ ಅಭಯವಿತ್ತು ಅವರ ರಕ್ಷಕನಾಗಿ ಶ್ರೀಕೃಷ್ಣನಿಲ್ಲದೆ ಇದ್ದಿದ್ದರೆ ರಾಕ್ಷಸನ ಅತ್ಯಾಚಾರಕ್ಕೆ ತುತ್ತಾದ ಆ ಅಬಲೆಯರು ಬೀದಿಪಾಲಾಗುತ್ತಿದ್ದರು ಬೇರೊಂದು ಬಗೆಗೆ ಸಾಮಾಜಿಕ ಕ್ರೌರ್ಯ ಶೋಷಣೆಗೆ ಒಳಗಾಗಿ ನರಕವಾಸಿಗಳೇ ಆಗಿಬಿಡುತ್ತಿದ್ದರು ಭಗವಂತನ ಕಾರುಣ್ಯದಿಂದ ಆ ಅಬಲೆಯರ ಬದುಕಿನ ಘೋರಂಧಕಾರದಲ್ಲಿ ಬೆಳಕು ಮೂಡಿತು ಇವೆಲ್ಲವೂ ನೇರವಾಗಿ ನಡೆದ ಯುದ್ಧವ್ಯಾಪಾರ.
ಆದರೆ ಕತ್ತಲೆಯ-ತಮಸ್ಸಿನ-ಸ್ವರೂಪ ಸಾವಿರ. ಅನೇಕ ವೇಳೆ ಅದು ಅತಿಸೂಕ್ಷ್ಮ ಬಲಿಚಕ್ರವರ್ತಿಯ ಕಥೆಯಲ್ಲಿ ಅದರ ಮುಖವಾಡವೇ ಬೇರೆ. ಪ್ರಹ್ಲಾದನ ಮೊಮ್ಮಗ ಬಲಿ ಲೋಕಕಂಟಕನೇನಲ್ಲ ಅವನ ಪ್ರಜಾವಾತ್ಸಲ್ಯವೂ ಅತಿಶಯವೇ ಆದರೆ ತನ್ನ ಪರಿಮತಿಯನ್ನು ಅರಿಯದೆ ಮಹತ್ವಾಕಾಂಕ್ಷೆಯೂ ಸ್ವರ್ಗಲೋಕವನ್ನೂ ಕಬಳಿಸುವ ದಾಹ ಅವನದು ಇದು ವಿವೇಕಕ್ಕೆ ಮುಸುಕಿದ ಆಕ್ರಮಣಶೀಲತೆಯ ತಮಸ್ಸು ಭಗವಂತವಿಷ್ಣುತ್ರಿವಿಕ್ರಮನಾಗಿ ಬೆಳದು ಎರಡು ಹೆಜ್ಜೆಗಳಲ್ಲಿ ಭೂಮ್ಯಂತರಿಕ್ಷಗಳನ್ನು ಅಳೆದಿದ್ದು ಮೂರನೆಯ ಹೆಜ್ಜೆಯನ್ನು ಬಲಿಯ ಪ್ರಾರ್ಥನೆಯಂತೆಯೇ ಅವನ ತಲೆಯ ಮೇಲಿರಿಸಿ ಪಾತಾಳಕ್ಕೆ ಮೆಟ್ಟಿದುದು ಭಾಗವತದಲ್ಲಿ ಪ್ರಸಿದ್ಧವಾದ ಕಥೆ ಬಲಿಚಕ್ರವರ್ತಿಯ ಅಹಂಕಾರದ ಭಂಗವೂ ಆಯಿತು ಅವನ ಸಹಜ ಸತ್ವಗುಣಕ್ಕೆ ಭಗವಂತನ ಅನುಗ್ರಹವೂ ದೊರೆಯಿತು ಅವನು ಸ್ವಧರ್ಮ-ಸ್ವಕ್ಷೇತ್ರದ ಸಾರ್ಥಕ ಬದುಕಿನಲ್ಲಿ ಪಾತಾಳಲೋಕದ ಚಕ್ರವರ್ತಿಯೂ ಆದ ಸಾವರ್ಣಿಕಮನ್ವಂತರದಲ್ಲಿ ಇಂದ್ರಪದವಿಯನ್ನೂ ಗಳಿಸಿದ್ದು ಮಾತ್ರವಲ್ಲ ಸಪ್ತಚಿರಂಜೀವಿಗಳಲ್ಲಿ ಒಬ್ಬನೆನಿಸಿ ಖ್ಯಾತನಾದ ಎಂತಹ ಉಜ್ವಲವಾದ ಬೆಳಕು ಅವನ ಬದುಕಿನಲ್ಲಿ! ಪುರಾಣಕಥೆ ಕಲಿಸುವ ಪಾಠವೆಷ್ಟು ಹೃದಯಂಗಮ! ಬೀಗಿದ ನರಕಾಸುರನಿಗೆ ಆ ಗತಿ! ಬಾಗಿದ ಬಲಿಗೆ ಇಂತಹ ಅನುಗ್ರಹ! ಬೆಳಕಿನ ಸಪ್ತವರ್ಣದ ಶೃಂಗಾರ, ಈ ದೀಪಾವಳಿ.
ಇವೆಲ್ಲವೂ ಕೃತಯುಗದ ಮಾತಾಯಿತು. ಆಗ ವಿಶ್ವವ್ಯವಸ್ಥೆಯಲ್ಲಿ ರಾಕ್ಷಸರ, ದೇವತೆಗಳ, ಮನುಷ್ಯರ ಸ್ಥಾನ-ಮರ್ಯಾದೆಗಳು ನಿರ್ದಿಷ್ಟವಾಗಿದ್ದವು ಅದು ವಿಶ್ವದ ಋತು ಲೋಕವನ್ನು ರಕ್ಷಿಸುವ, ಅನುಗ್ರಹಿಸುವ ಭಗವಂತನ ನಿಯಮ-ಶಾಸನ. ಯಾವದೇ ಅತಿಕ್ರಮಣಕ್ಕೆ ಅಲ್ಲಲ್ಲಿಯೇ ಶಿಕ್ಷೆ-ಅಲ್ಲಲ್ಲಿಯೇ ಭಗವತ್ ಕೃಪೆಯ ಅವತಾರ, ಆದರೆ ಈ ಕಲಿಯುಗದಲ್ಲಿಯೋ ನಮ್ಮ ನಮ್ಮ ಹೃದಯದಲ್ಲಿಯೇ ರಾಕ್ಷಸರು ಮೆರೆಯುತ್ತಿದ್ದಾರೆ ಮನಸ್ಸೇ ಒಂದು ಭಯಂಕರ ಕಾಂತಾರ, ಮದ-ಮತ್ಸರ್ಯ-ಮೋಹಾದಿಕ್ರೂರಮೃಗಗಳ ವಿಜೃಂಗಣೆ ಅದುದರಿಂದ ಪರಮಪೂಜ್ಯ ಶ್ರೀ ಶ್ರೀ ಭಾರತೀರ್ಥಮಹಾಸ್ವಾಮಿಗಳು ಅಪ್ಪಣೆ ಕೊಡಿಸಿದಂತೆ, ಭಗವಂತನ ಅವತಾರ ನಮ್ಮ ನಮ್ಮ ಹೃದಯಗಳಲ್ಲಿಯೇ ಆಗಬೇಕಲ್ಲವೆ? ಶ್ರೀ ಶಂಕರಭಗವತ್ಪಾದರಂತೆ "ಮಾ ಗಚ್ಛ ಇತಸ್ತತಃ ಗಿರಿಶ, ಶಂಭೋ, ಅದಿಕಿರಾತ, ಮಯ್ಯೇವ ವಾಸಂ ಕುರು" ಎಂದು ಆ ದಿವ್ಯಜ್ಯೋತಿಯನ್ನು ಪ್ರಾರ್ಥಿಸುವದೇ ಲೇಸಲ್ಲವೆ?
ಈ ಮೊರೆ ಉತ್ಕಟವಾದರೆ ಅಜ್ಞಾನದ-ಅಂಧಕಾರದ-ತಮಸ್ಸಿನ ಕತ್ತಲ ಪರದೆ ಕಳಚಿ ಬೀಳುತ್ತದೆ. ನಮ್ಮೆಲ್ಲರ ಆತ್ಮಜ್ಯೋತಿಯ ಮಂದಹಾಸದ ಅಂತರ್ವಾಣಿಯ ಮಧುರವಾಣಿ ಝೇಂಕರಿಸುತ್ತದೆ : ಅಯ್ಯೋ, ಆ ಜ್ಞಾನಿಯೆ ನಾನು ಯಾವದೋ ದೂರದ ಲೋಕದಿಂದ ಇಳಿದುಬಂದವನಲ್ಲ- ನಿನ್ನ ಹೃದಯದ ನಿರಂತರ ದೀಪವೇ ನಾನು! ಅಷ್ಟೇಕೆ, ನೀನೇ ನಾನಲ್ಲವೆ? ಶ್ರುತಿಯ ಮಹಾವಾಕ್ಯ ನಿನ್ನ ಸ್ಮರಣೆಗೆ ಬರುತ್ತಿದೆಯಲ್ಲವೆ?
ಎಲ್ಲೋ ಕೇಳಿಯೂ ಕೇಳದಂತಹ ದನಿ ಆ....ಹಂ....ಅಯ್ಯೋ ಉಚ್ಚರಿಸಲೂ ಆಗುತ್ತಿಲ್ಲವಲ್ಲ ಆ-ವೊ  ಆ-ವೊ... ಏನಿದು ಬರಿಯ ತೊದಲು? ಅಂತರ್ವಾಣಿಯ ಅಶ್ರುತಗಾನ ಈಗ ಮತ್ತೆ ಬೆಳಕಿನ ಮಂದಹಾಸವೇ ಆಗಿಬಿಡುತ್ತದೆ. ಅಹಂ ಬ್ರಹ್ಮಾಸ್ಮಿ.... ಎಂದು ಉಚ್ಚರಿಸು ಎಂದವರಾದರೂ ಯಾರು? ಏಕಾದರೂ ಉಚ್ಚರಿಸಬೇಕು? ಯಾವ ಭಾಷೆಯಲ್ಲಿ? ಯಾವ ಶೃತಿಯಲ್ಲಿ? ತಾರದಲ್ಲಿಯೆ ? ಮಧ್ಯಮದಲ್ಲಿಯ ? ಮಂದ್ರದಲ್ಲಿಯೆ ? ಅದೆಲ್ಲ ಅಧ್ಯಾಸದ ಗಣಿತವಯ್ಯಾ! ಅನುಭವಕ್ಕೆ ಭಾಷೆಯೆಲ್ಲಿ? ದನಿಯೆಲ್ಲಿ? ಮೌನವೇ ಅದರ ಮಾತು. ಬೆಳಗುವದು-ಅಪರಿಮಿತವಾಗಿ ಬೆಳಗುವದು ಅದರ ಸ್ವರೂಪ ಅದೊಂದು ಚಿರಂತನ ದೀಫ ಅದನ್ನು ಬೆಳಗುವ ಬೇರೆ ದೀಪವಾದರೂ ಎಲ್ಲಿ? ಆಗಸದ ಸೂರ್ಯಮಂಡಲಮಧ್ಯಸ್ಥ ದೇಹ ದೇಹದ ದಹರಾಕಾಶ ಸ್ಥಿತ, ಶುಭ್ರ, ಶ್ವೇತದೀಪ ಅದು. "ಹೃದಯಕುಹರ ಮಧ್ಯೇ ಕೇವಲಂ ಬ್ರಹ್ಮ ಮಾತ್ರಂ | ಅಹಂ ಅಹಂ ಇತಿ ಸಾಕ್ಷಾತ್ ಆತ್ಮರೂಪೇಣ ಭಾತಿ |"..... ಹೌದು, ದೀಪಂ ಜ್ಯೋತಿಃ, ಪರಂಜ್ಯೋತಿಃ ದೀಪಮೇವ ಜನಾರ್ದನಃ |

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ