ರುದ್ರಭಾಷ್ಯಪ್ರಕಾಶ - 8ನೇ ಅನುವಾಕ (ಸಂಪೂರ್ಣ)

ರುದ್ರಾಧ್ಯಾಯದ ಎಂಟನೆಯ ಅನುವಾಕವನ್ನು ಈಗ ವಿಚಾರಮಾಡ ಬೇಕಾಗಿದೆ. ಹಿಂದಿನ ಅನುವಾಕದಲ್ಲಿ ಸರ್ವಾತ್ಮಕನೂ ಸರ್ವಾಂತರ್ಯಾಮಿಯೂ ಆದ ಭಗವಂತನನ್ನು ಸ್ತುತಿಸಲಾಯಿತು. ಈಗ ಎಲ್ಲಾ ಲೋಕದ ಜನರಿಂದಲೂ ಉಪಾಸ್ಯನಾದವನೂ ಸಂಸಾರಬಂಧವನ್ನು ಕಳೆಯುವ ಬ್ರಹ್ಮವಿದ್ಯೆಯನ್ನು ಕೊಡುವವನೂ ಆದ ಭಗವಂತನನ್ನು ಸ್ತುತಿಸಲಾಗುವದು.

    ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ ||

'ಸೋಮನಿಗೂ ರುದ್ರನಿಗೂ ತಾಮ್ರನಿಗೂ ಅರುಣನಿಗೂ ನಮಸ್ಕಾರ!'
    ಇಲ್ಲಿ ರುದ್ರನಾದ ಸೋಮನಿಗೆ ನಮಸ್ಕಾರ - ಎಂದು ಅನ್ವಯಮಾಡಿ ಕೊಳ್ಳಬೇಕು. ರುದ್ರನೆಂದರೆ ಸಂಸಾರದುಃಖ(ರೋದನ)ವನ್ನು ಹೋಗಲಾಡಿಸುವವನು ಎಂದಭಿಪ್ರಾಯ. ಭಗವಂತನನ್ನು ಅರಿತುಕೊಳ್ಳದೆ ದುಃಖವನ್ನು ದಾಟುವದು ಸಾಧ್ಯವೇ ಇಲ್ಲ ಆದರೆ ಆ ದೇವನನ್ನು ಅರಿತುಕೊಳ್ಳುವದಾದರೂ ಹೇಗೆ? ಎಂದರೆ ಉಮೆಯ ಕೃಪೆಯಿಂದ - ಎಂದಭಿಪ್ರಾಯ. ಉಮೆಯನ್ನು ನಿತ್ಯವೂ ಹೊಂದಿರುವವನೇ - ಉಮಾಸಹಿತನಾದವನೇ - ಸೋಮನು. ಉಮಾ- ಎಂಬುದು ಓಮ್ ಎಂಬ ಪ್ರಣವಮಂತ್ರದ ಭಾಗವು. ಅ-ಉ-ಮ ಸೇರಿ ಓಂ ಆಗಿರುವದು. ಅದರಲ್ಲಿ ಉಮಾ ಎಂಬಿದೇ ದೇವಿಯ ತತ್ತ್ವವು ಆದ್ದರಿಂದಲೇ ದೇವಿಯನ್ನು "ಓಂಕಾರರೂಪಿಣೀ" ಎಂದು ಕರೆಯುತ್ತಾರೆ. ಈ ದೇವಿಯೇ ಬ್ರಹ್ಮವಿದ್ಯೋಪದೇಶಕಳು. ಈಕೆಯ ಪ್ರಸಾದದಿಂದಲೇ ಸೋಮನಾದ ಪರಮೇಶ್ವರನ ಜ್ಞಾನವು ನಮಗೆ ಪ್ರಾಪ್ತವಾಗುವದು ಅಂತೂ ಬ್ರಹ್ಮವಿದ್ಯಾರೂಪಿಣಿಯಾದ ಉಮಾದೇವೀಸಹಿತನಾದ ಸೋಮನಿಗೆ ನಮಸ್ಕಾರ ಎಂಬಿದು ಮಂತ್ರಾರ್ಥವು.

    ಉಮಾದೇವಿಯು ಬ್ರಹ್ಮವಿದ್ಯಾಪ್ರದಾಯಿನಿಯು ಎಂಬ ಬಗ್ಗೆ ಉಪನಿಷತ್ತುಗಳಲ್ಲಿ ವಿವರಣೆಯಿದೆ. ಶ್ವೇತಾಶ್ವತರೋಪನಿಷತ್ತಿನಲ್ಲಿ ಪ್ರಾರಂಭದಲ್ಲಿ ಋಷಿಗಳೆಲ್ಲರೂ ಒಟ್ಟಾಗಿ ಸೇರಿ ಜಗತ್ಕಾರಣವು ಯಾವದು? ಬ್ರಹ್ಮವು ಯಾವದು? ನಾವು ಎಲ್ಲಿಂದ ಹುಟ್ಟಿದೆವು? ಎಂದು ವಿಚಾರಮಾಡಿದರು. ಕೊನೆಗೆ ಅವರು ಧ್ಯಾನಯೋಗನಿಷ್ಠರಾದ ಕಾಲಕ್ಕೆ ಆ ಬ್ರಹ್ಮದ ಶಕ್ತಿಯನ್ನು ಕಂಡರು. ಆಕೆಯೇ ಉಮೆಯ ಅವಳು ತತ್ತ್ವವನ್ನು ತಿಳಿಸಿದಳು ಎಂದು ಉಪಖ್ಯಾನವಿದೆ. ಕೇನೋಪನಿಷತ್ತಿನಲ್ಲಿಯೂ ದೇವೇಂದ್ರನು ಯಕ್ಷನು ಯಾರೆಂದು ವಿಚಾರಿಸಹೊರಟಾಗ ಯಕ್ಷನು ಅಂತರ್ಧಾನನಾಗಲಾಗಿ ನಾಚಿಕೆಯಿಂದ ತಲೆತಗ್ಗಿಸಿ ನಿಂತನು ಆಗ ಆಕಾಶದಲ್ಲಿ ಹೈಮವತಿಯಾದ ಉಮೆಯು ತೋರಿಕೊಂಡು ಇಂದ್ರನ ಸಂಶಯವನ್ನು ಪರಿಹರಿಸಿ ಬ್ರಹ್ಮದ ತತ್ತ್ವವನ್ನು ತಿಳಿಸಿಕೊಟ್ಟಳು ಎಂದಿದೆ. ಶೈವಪುರಾಣಗಳಲ್ಲಿಯೂ ಈ ವಿಚಾರದ ಕಥೆಗಳಿವೆ. ಆದ್ದರಿಂದ ಬ್ರಹ್ಮವಿದ್ಯಾರೂಪಿಣಿಯಾದ ಉಮೆಯು ಸರ್ವಜ್ಞನಾದ ಈಶ್ವರನೊಡನೆ ಯಾವಾಗಲೂ ಇದ್ದುಕೊಂಡಿರುವಳು. ಉಮಾಸಹಿತನಾದ ಪರಮೇಶ್ವರನೇ ಧ್ಯೇಯನು; ಅವನನ್ನೇ ಕಂಡುಕೊಳ್ಳುವ ಯೋಗಿಯು ಮೋಕ್ಷವನ್ನು ಪಡೆಯುವನು - ಎಂದಭಿಪ್ರಾಯ.

    ಸೋಮನೆಂಬ ದೇವನು ಕೇವಲ ಮೋಕ್ಷಪ್ರದನಷ್ಟೇ ಅಲ್ಲ ಸರ್ವಜ್ಞನೂ ಸರ್ವೇಶ್ವರನೂ ಸರ್ವಜಗತ್ಕಾರಣನೂ ಆಗಿದ್ದಾನೆ. ವಿವಿಧ ಚರಾಚರಜೀವರುಗಳಿಂದ ತುಂಬಿ ತುಳುಕಾಡುತ್ತಿರುವ ಅನೇಕ ಕರ್ತೃಭೋಕ್ತೃಗಳಿಂದ ಕೂಡಿರುವ ಮತ್ತು ಇಂಥ ದೇಶದಲ್ಲಿ ಇಂಥ ಕಾಲದಲ್ಲಿ ಮಾಡಿದ ಇಂಥ ಕರ್ಮಕ್ಕೆ ಇಂಥ ಫಲವೆಂಬ ನಿಯಮಬದ್ಧವಾಗಿರುವ, ಹಾಗೂ ಮನಸ್ಸಿನಿಂದ ಕೂಡ ಎಂಥ ಜಾಣಾನಾದವನೂ ಚಿಂತಿಸುವದಕ್ಕೂ ಆಗದಂಥ ರಚನಾಕೌಶಲ್ಯಗಳಿಂದ ಕೂಡಿದ ಈ ಪ್ರಪಂಚವೆಲ್ಲವೂ ಆ ಪರಾಶಕ್ತಿಯ ವಿಲಾಸವೇ ಆಕೆಯೇ ಇದಕ್ಕೆಲ್ಲ ಮೂಲವು ಅಂಥ ಪರಾಶಕ್ತಿಯನ್ನು ತನ್ನ ಶರೀರಾರ್ಧವಾಗಿ ಹೊಂದಿರುವ ಸೋಮನು ಎಂಥವನಿರಬೇಕು? ಎಂಬುದನ್ನೀಗ ಊಹಿಸಬಹುದಾಗಿದೆ. ಹೀಗೆ ಆಕೆಯ ಬಲವಿಲದಲದೆ ಪರಮೇಶ್ವರನು ಏನೂ ಮಾಡಲಾರನು. ಆದರೂ ಆ ಶಕ್ತಿಯು ಪರಮೇಶ್ವರನ ಅಧೀನವೇ ಆಗಿರುವದು ಶಕ್ತಿ, ಶಕ್ತಿಮಾನ್ ಎಂಬ ಭೇದವೂ ಇಲ್ಲಿ ಇರುವದಿಲ್ಲ ಬೆಂಕೆಯ ಬಿಸಿ ಎಂದಂತೆ ಶಿವಶಿವೆಯರು ಒಂದೇ ತತ್ತವವಾಗಿರುತ್ತಾರೆ. ವ್ಯವಹಾರದೃಷ್ಟಿಯಿಂದ ಶಿವನ ಶಕ್ತಿ ಎಂದು ವಿಂಗಡಿಸಿ ಕರೆಯಲಾಗಿದೆ. ಏಕೆಂದರೆ ಕಾರಣಶಕ್ತಿರೂಪಳಾದ ಆಕೆಯು ಇಲ್ಲದಾಗ ಜಗತ್ತೆಂಬ ಕಾರ್ಯವೂ ಇರಲಾರದು. ಇದನ್ನೇ ಸೌಂದರ್ಯ ಲಹರೀ ಎಂಬ ಸ್ತೋತ್ರದಲ್ಲಿ "ಶಕ್ತಿಯ ಬಲವಿಲ್ಲದೆ ಇದ್ದರೆ ಆತನು ಅಲುಗಾಡಲು ಕೂಡ ಸಮರ್ಥನಾಗಲಾರನು" ಎಂದು ತಿಳಿಸಿದೆ ಇದು ನಿಜವೇ ಪರಮಾರ್ಥಸ್ವರೂಪನಾದ ಶಿವನಿಗೆ ಚಲನವಿಲ್ಲ. ಅವನು ಅಚಲನು, ಸ್ಥಾಣುವು, ಧ್ರುವನು ಅವನಲ್ಲಿ ವಿಕಾರವನ್ನು ಕಾಣಬೇಕಾದರೆ ಶಕ್ತಿಯನ್ನು ಆತನಿಗಿಂತ ಬೇರೆಯಾಗಿ ಕಲ್ಪಿಸಬೇಕು ಎಂದರ್ಥ ಹೀಗೆ ಉಮಾಸಹಿತನಾಗಿ ಸಕಲಜಗತ್ತನ್ನೂ ಉಂಟುಮಾಡಿ ಕಾಪಾಡುತ್ತಿರುವ ಸೋಮನೊಬ್ಬನೇ ಮಹಾದೇವನಾಗಿರುತ್ತಾನೆ ಅಂಬಿಕಾಪತಿ, ಉಮಾಪತಿ - ಎಂದು ತೈತ್ತಿರೀಯೋಪನಿತ್ತಿನಲ್ಲಿ ಎರಡು ಬಾರಿ ಸ್ತುತಿಸಿರುವದು ಆದಾರಾತಿಶಯವನ್ನು ತೋರಿಸುತ್ತದೆ. ಉಮಾಮಹೇಶ್ವರ ಎಂಬ ಹೆಸರು ಸೋಮನಿಗೆ ಇದೆ. ಇಲ್ಲಿಯೂ ಉಮೆಗೆ ಪ್ರಾಥಮ್ಯವಿದೆ. ಉಮಾಶಂಕರ, ಗೌರೀಶಂಕರ - ಮುಂತಾದ ಹೆಸರುಗಳಂತೂ ಸುಪ್ರಸಿದ್ಧವಾದವುಗಳು ಆದ್ದರಿಂದ ಸೃಷ್ಟಿಕಾಲದಲ್ಲಿ ಗೌರಿಗೇ ಪ್ರಾಥಮ್ಯವು ಮೋಕ್ಷಕ್ಕೂ ಗೌರಿಯೇ ದ್ವಾರಳು ಇದೇ ಸೋಮತತ್ತ್ವ ಎಂದು ತಿಳಿಯಬೇಕು.

    ಈಗ ತಾಮ್ರ-ಅರುಣ ಎಂಬ ನಾಮಗಳನ್ನು ವಿಚಾರಮಾಡೋಣ ಆಯಾಸವಿಲ್ಲದೆ ಪ್ರತ್ಯಕ್ಷನಾಗಿ ಎಲ್ಲರಿಗೂ ಕಂಡುಬರುತ್ತಿರುವ ಆದಿತ್ಯರೂಪಯಾದ ರುದ್ರನನ್ನು ಇಲ್ಲಿ ತಾಮ್ರನೆಂದೂ ಅರುಣನೆಂದೂ ಹೆಸರಿಸಲಾಗಿದೆ. ಹುಟ್ಟುವ ಕಾಲದಲ್ಲಿ ಬಹಳವಾದ ಕೆಂಪುಬಣ್ಣವುಳ್ಳವನು ತಾಮ್ರನು ಅನಂತರ ಹೊತ್ತು ಏರಿದಂತೆಲ್ಲ ಕೆಂಪು ಕಡಿಮೆಯಾಗುತ್ತಾ ಸ್ವಲ್ಪವೇ ಕೆಂಪುಳ್ಳವನಾಗುವ ಸೂರ್ಯನೇ ಅರುಣನು ಅನಂತರ ನೆತ್ತಿಗೇರಿರುವಾಗ ಬಭ್ರುವರ್ಣನು ಇರಲಿ ಹೀಗೆ ಅಷ್ಟಮೂರ್ತಿಯಾಗಿರುವ ಭಗವಂತನ ಒಂದು ವಿಭೂತಿಯಾಗಿರುವ ಸೂರ್ಯನೆಂಬ ಮೂರ್ತಿವಿಶೇಷವನ್ನು ಇಲ್ಲಿ ಸ್ತುತಿಸಲಾಗಿದೆ. ಲೋಕದಲ್ಲಿ ಉಪಾಸಕರು ಆಯಾ ದೇವತೆಯನ್ನು ಬಹಳವಾದ ಪ್ರಯತ್ನವಿಶೇಷಗಳಿಂದ ಧ್ಯಾನಿಸಿ ಒಲಿಸಿಕೊಂಡು ಅನಂತರ ದರ್ಶನವನ್ನು ಪಡೆಯುತ್ತಾರೆ. ಸೂರ್ಯನಾದರೋ ತಾನಾಗಿಯೇ ಎಲ್ಲಾ ಪ್ರಾಣಿಗಳಿಗೂ ಪ್ರತಿದಿನವೂ ಪ್ರಾತಃಕಾಲದಲ್ಲಿ ತನ್ನ ದರ್ಶನವನ್ನು ಬಿಟ್ಟಿಯಾಗಿ ಕೊಡುತ್ತಾನೆ. ಇದಕ್ಕಾಗಿ ನಾವೇನೋ ತಪಸ್ಸುಮಾಡಿರುವದಿಲ್ಲ ದನಕಾಯುವವರಿಂದ ಹಿಡಿದು ರಾಷ್ಟ್ರಾಧ್ಯಕ್ಷರವರೆಗೂ ಎಲ್ಲರೂ ಸೂರ್ಯನನ್ನು ಬಲ್ಲರು ಹೀಗೆ ಹೊರತೋರಿಕೊಳ್ಳುವ ಸೂರ್ಯನನ್ನು ನಮಗೆ ಇದಿರಾಗಿ ಮಾಡಿಕೊಳ್ಳಲು ಸಹ ಏನೂ ಕಷ್ಟವಿಲ್ಲ ಏಕೆಂದರೆ ಪೂರ್ವಕ್ಕೆ ತಿರುಗಿರುವ ಪ್ರತಿಯೊಬ್ಬನಿಗೂ ಅವನು ತಾನೇ ಇದಿರಾಗಿರುತ್ತಾನೆ. "ಸೂರ್ಯನು ನಮ್ಮ ಮನೆಯ ಬಾಗಿಲಿಗೆ ಇದಿರಾಗಿ ಹುಟ್ಟಿದ್ದಾನೆ. ನನಗೆ ಎದುರಿಗೇ ಕಂಡುಬರುತ್ತಾನೆ" ಎಂದು ಪ್ರತಿಯೊಬ್ಬನೂ ಹೇಳಿಕೊಳ್ಳಬಹುದು.

    ಹೀಗೆ ತಾನಾಗಿಯೇ ಎದುರಿಗೆ ತೋರಿಕೊಂಡು ವರವನ್ನು ಕೊಡಲು ಸಿದ್ದನಾಗಿರುವ ಸೂರ್ಯನಿಗೆ ನಾವು ಮಾಡಬೆಕಾದದ್ದಾದರೂ ಏನು? ಇವನು ಪರಮೇಶ್ವರನೇ ಎಂದು ಭಾವಿಸಿದರೆ ಸಾಕು. ವೇದವು "ಉದಯಿಸುತ್ತಿರುವ ಹಾಗೂ ಅಸ್ತಮಾನನಾಗುತ್ತಿರುವ ಸೂರ್ಯನನ್ನು ಧ್ಯಾನಮಾಡುವ ಪಂಡಿತನು ಎಲ್ಲಾ ಶ್ರೇಯಃಪರಂಪರೆಗಳನ್ನೂ ಪಡೆದುಕೊಳ್ಳುವನು" ಎಂದು ತಿಳಿಸುತ್ತಿದೆ.
ಆದ್ದರಿಂದ ಸಕಲಪುರುಷಾರ್ಥಪ್ರದನಾದ ಪರಮೇಶ್ವರನು ಆಯಾಸವಿಲ್ಲದೆ ಎಲ್ಲರಿಗೂ ಉಪಾಸ್ಯನಾಗಿರುತ್ತಾನೆ - ಎಂದಾಯಿತು. ತಾಮ್ರವರ್ಣನಾದ ಬೆಳಗಿನ ಸೂರ್ಯನ ಉಪಾಸನೆಯು ಕೆಲವರಿಗೆ ದಕ್ಕದೆ ಇರಬಹುದು ಏಕೆಂದರೆ ಎಷ್ಟೋ ಜನರು ಸೂರ್ಯೋದಯವಾದರೂ ಸೋಮಾರಿತನದಿಂದ ಹಾಸಿಗೆಯಿಂದ ಎದ್ದೇ ಇರುವದಿಲ್ಲ ಅಂಥವರಿಗೂ ಅನುಕೂಲವಾಗಲೆಂದು ಅರುಣವರ್ಣನಾಗಿ ತೋರುವ ಕಾಲಕ್ಕಾದರೂ ಧ್ಯಾನಮಾಡಬಹುದೆಂತ ತಿಳಿಸುವದಕ್ಕಾಗಿ "ಅರುಣಾಯ ಚ" ಎಂದು ತಿಳಿಸಲಾಗಿದೆ. ಕೊನೆಗೆ ಅದು ಸಾಧ್ಯವಾಗದೇ ಇದ್ದರೆ ಬಭ್ರುವರ್ಣನಾದ ಸೂರ್ಯನನ್ನಾದರೂ ಉಪಾಸನೆ ಮಾಡಬೇಕು ಎಂದು ಹಿಂದೆ ತಿಳಿಸಲಾಗಿದೆ ಭಗವಂತನ ದಯೆಗೆ ಕೊನಡಯುಂಟೆ? ಇಂಥ ಕರುಣಾಸಾಗರನಾದ ದೇವನು ಶಿವನಲ್ಲದೆ ಮತ್ತಾವನಾದಾನು?
   
        ನಮಃ ಶಂಗಾಯ ಚ ಪಶುಪತಯೇ ಚ
     ರುದ್ರಾಧ್ಯಾಯದ ಎಂಟನೆಯ ಅನುವಾಕದ ಮಂತ್ರಭಾಗದ ವಿಚಾರವನ್ನು ಆರಂಭಿಸಿ ನಾಲ್ಕು ನಾಮಗಳ ವಿವರವನ್ನು ಈಗಾಗಲೇ ತಿಳಿಸಲಾಗಿದೆ. ಮುಂದಿನ ಮಂತ್ರಭಾಗದ ವಿವರವನ್ನು ತಿಳಿಯೋಣ :
    ನಮಃ ಶಂಗಾಯ ಚ ಪಶುಪತಯೇ ಚ ನಮ ಉಗ್ರಾಯ ಚ ಭೀಮಾಯ ಚ ನಮೋ ಅಗ್ರೇವಧಾಯ ಚ ದೂರೇವಧಾಯ ಚ ನಮೋ ಹಂತ್ರೇ ಚ ಹನೀಯಸೇ ಚ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ||

    'ಶಂಗನಿಗೂ ಪಶುಪತಿಗೂ ನಮಸ್ಕಾರವು. ಉಗ್ರನಿಗೂ ಭೀಮನಿಗೂ ಅಗ್ರೇವಧನಿಗೂ ದೂರೇವಧನಿಗೂ ಹಂತೃವಿಗೂ ಹನೀಯಸನಿಗೂ ಹರಿಕೇಶಗಳಾದ ವೃಕ್ಷಗಳಿಗೂ ನಮಸ್ಕಾರವು'

    ಶಂಗನೆಂದರೆ ಸುಖಕ್ಕೆ ನಮ್ಮನ್ನು ಒಯ್ಯುವವನು ಎಂದರ್ಥ ಸುಖವು ಪರಮೇಶ್ವರನ ಅಧೀನವಾಗಿರುವದರಿಂದ ಆತನೇ ಎಲ್ಲರಿಗೂ ಅದನ್ನು ಕೊಡಬೇಕಾಗಿರುತ್ತದೆ. ಇದಕ್ಕೆ ಕಾರಣವೇನೆಂದರೆ : ಆತನೇ ಪಶುಪತಿಯೂ ಆಗಿದ್ದಾನೆ ಪಶಗಳಾಗಿರುವ ಜೀವರುಗಳನ್ನು ಕಾಪಾಡುವವನು ಅವನೇ ಆದ್ದರಿಂದ ಪಾಲಕನ ವಶದಲ್ಲಿಯೇ ಪಾಲನೀಯರಾದವರ ಸುಖಗಳು ಇರುವವು ಹೇಗೆ ಲೋಕದಲ್ಲಿ ಮಕ್ಕಳ ಸುಖ, ರಕ್ಷಣೆ, ಪಾಲನೆಗಳು ತಂದೆತಾಯಿಗಳ ಅಧೀನವೇ ಆಗಿರುವವೋ ಹಾಗೆಯೇ ಎಲ್ಲಾ ಪ್ರಾಣಿಗಳ ತಂದೆಯೂ ತಾಯಿಯೂ ಆದ ಪರಮೇಶ್ವರನ ಅಧೀನದಲ್ಲೇ ನಾವೆಲ್ಲ ಇದ್ದುಕೊಂಡಿರುವೆವು ಹೀಗೆ ಭಗವಂತನು ಶಂಗನೂ ಪಶುಪತಿಯೂ ಆಗಿರುವನು.
   
    ಉಗ್ರನೆಂಬುದೂ ಪರಮೇಶ್ವರನ ಹೆಸರೇ ಆಗಿದೆ. ಇಲ್ಲಿ ಉಗ್ರ ಎಂದರೆ ಶ್ರೇಷ್ಠನೆಂದರ್ಥ ಉತ್-ಗಚ್ಛತೀತ್ಯುಗ್ರಃ ಎಂಬೀ ವ್ಯುತ್ಪತ್ತಿಯಂತೆ ಸರ್ವರಲ್ಲಿ ಶ್ರೇಷ್ಠನೆಂದೂ ಅರ್ಥವಾಗುತ್ತದೆ ಇಂಥ ಸರ್ವಶ್ರೇಷ್ಠತ್ವವು ಆತನು ಭೀಮನಾಗಿರುವದರಿಂದ ಪ್ರಾಪ್ತವಾಗಿದೆ ಭೀಮನೆಂದರೆ ಭಯಂಕರನು ಈತನ ಭಯಕ್ಕೆ ಒಳಪಟ್ಟೇ ವಾಯು ಮುಂತಾದ ದೇವತೆಗಳೆಲ್ಲರೂ ತಮ್ಮತಮ್ಮ ಕರ್ತವ್ಯಗಳಲ್ಲಿ ನಿರತರಾಗಿರುವರು ಮಹಾನುಭಾವರಾದ ಇಂದ್ರಾಗ್ನ್ಯಾದಿಗಳೂ ಕೂಡ ಯಾವನ ಆಳ್ವಿಕೆಗೆ ಒಳಪಟ್ಟು ಕೆಲಸಮಾಡುತ್ತಿರುವರೋ ಅಂಥ ಮಹಾದೇವನು ಸರ್ವಶ್ರೇಷ್ಠನೆಂದು ಹೇಳಬೇಕಾದದ್ದೇ ಇಲ್ಲ.

    ಈಗ ಅಗ್ರೇವಧ-ದೂರೇವಧ ಎಂಬ ನಾಮಗಳನ್ನು ವಿಚಾರ ಮಾಡೋಣ. ಶಿವಭಕ್ತನಾದವನು ಯುದ್ಧದಲ್ಲಿ ತೊಡಗಿರುವಾಗ ಭಕ್ತನ ಮೇಲಿನ ಅಪಾರವಾದ ಕರುಣೆಯಿಂದ ಭಗವಂತನು ತಾನೇ ಮುಂದಾಗಿ ನಿಂತು ಶತ್ರುಸಂಹಾರವನ್ನು ಮಾಡುತ್ತಾನೆ. ಹಾಗೆಯೇ ಯುದ್ಧವು ಆರಂಭವಾಗುವ ಮುಂಚೆಯೂ ತನ್ನ ಭಕ್ತನಿಗೆ ವಿರೋಧಿಯಾದ, ದೂರದಲ್ಲೇ ಇದ್ದುಕೊಂಡಿರುವ ಶತ್ರುವನ್ನು ಕೂಡ ಆತನ ಬಲ, ತೇಜಸ್ಸುಗಳನ್ನು ಅಪಹರಿಸುವದರ ಮೂಲಕ ಶಿವನು ನಾಶಗೊಳಿಸುತ್ತಾನೆ ಆದ್ದರಿಂದ ದೂರೇವಧನು ಅರ್ಜುನನು ಪರಶಿವನ ಭಕ್ತನಾಗಿದ್ದುದರಿಂದ ಆತನು ಶತ್ರುಸಂಹಾರವನ್ನು ಮಾಡುವಾಗಲೆಲ್ಲ ಪರಮೇಶ್ವರನೇ ಮುಂದಾಗಿ ನಿಂತು ಶತ್ರುಗಳನ್ನು ಕೊಲ್ಲುತ್ತಿದ್ದನಂತೆ ಈ ವಿಚಾರವನ್ನು ಮಹಾಭಾರತದಲ್ಲಿ ಅರ್ಜುನನೇ ಹೇಳಿರುತ್ತಾನೆ; ಆತನ ವಾಕ್ಯಗಳು ಹೀಗಿವೆ; "ಯುದ್ಧದಲ್ಲಿ ಬಾಣಗಳ ಸುರಿಮಳೆಯಿಂದ ನಾನು ಶತ್ರುಸ್ಯೆನ್ಯವನ್ನು ಸದೆಬಡಿಯುವವೇಳೆಗೆ ನನ್ನ ಮುಂಭಾಗದಲ್ಲಿ ಒಬ್ಬ ಪುರುಷನನ್ನು ಕಂಡೆನು ಆತನು ಬೆಂಕಿಯಂತೆ ತೇಜೋಮಯನಾಗಿದ್ದನು ಕೈಯಲ್ಲಿ ಶೂಲವನ್ನು ಹಿಡಿದು ಆತನು ಯಾವ ದಿಕ್ಕಿಗೆ ಮುನ್ನುಗ್ಗುತ್ತಿದ್ದನೋ ಆ ದಿಕ್ಕಿನಲ್ಲಿ ನನ್ನ ಶತ್ರುಗಳು ಚದುರಿಹೋಗುತ್ತಿದ್ದರು ಹೀಗೆ ಆತನ ತೇಜಸ್ಸಿನಿಂದ ಸುಡಲ್ಪಟ್ಟವರನ್ನು ನಾನು ಯುದ್ಧದಲ್ಲಿ ಹೊಡೆದು ನಾಶಪಡಿಸುತ್ತಿದ್ದೇನು" ಎಂದಿರುತ್ತಾನೆ. ಈ ಮಾತುಗಳಿಂದ ಸಿದ್ಧವಾಗುವದೇನೆಂದರೆ ಭಗವಂತನೇ ಸಂಹಾರಕನು ಅವನೇ ಮೃತ್ಯುವು ಅವನು ಯಾರನ್ನು ಸಾಯಿಸುತ್ತಾನೋ ಅಂಥವರನ್ನು ಮಾತ್ರವೇ ಅರ್ಜುನನ್ನು ಕೊಲ್ಲುತ್ತಿದ್ದನು ಎಂದಾಯಿತು ಗೀತೆಯಲ್ಲಿಯೂ ಭಗವಂತನು "ಅಯ್ಯ, ಇವರೆಲ್ಲ ಈ ಮುಂಚೆಯೇ ನನ್ನಿಂದ ಕೊಲ್ಲಲ್ಪಟ್ಟಿರುವರು ನೀನು ಸುಮ್ಮನೆ ನೆಪಕ್ಕೆ ಯುದ್ಧಮಾಡು ಕೀರ್ತಿಯನ್ನು ಗಳಿಸಿಕೊ" ಎಂದೇ ತಿಳಿಸಿರುತ್ತಾನೆ ಹೀಗೆ ಅಗ್ರೇವಧನೂ ದೂರೇವಧನೂ ಆಗಿರುವ ಪರಮೇಶ್ವರನಿಗೆ ನಮಸ್ಕಾರವೆಂತ ಇಲ್ಲಿ ತಿಳಿಸಿದೆ.

    ಇನ್ನು ಪರಮೇಶ್ವರನನ್ನು ಅನಾದರಮಾಡುವದು ಹೆಚ್ಚಿನ ಅನರ್ಥಕ್ಕೆ ಕಾರಣವಾಗಿರುತ್ತದೆ ಎಂಬುದನ್ನು ತಿಳಿಸುವದಕ್ಕಾಗಿ ಹಂತ್ರೇ ಹನೀಯಸೇ ಚ ನಮಃ ಎಂದು ಸ್ತುತಿಸಿರುತ್ತದೆ. ಹೇಗೆಂದರೆ "ನಾನೇ ಎಲ್ಲರಿಗಿಂತ ಹೆಚ್ಚಿನವನು; ನನಗಿಂತ ದೊಡ್ಡವರಿಲ್ಲ" ಎಂದು ಯಾರು ಅಹಂಕಾರದಿಂದ ಕೊಬ್ಬಿರುವರೋ ಹಾಗೂ ಪರಮೇಶ್ವರನನ್ನು ಅನಾದರ ಮಾಡುವರೋ ಅಂಥವರನ್ನು ಹಿಂಸೆಮಾಡುತ್ತಾನಾದ್ದರಿಂದ ಹಂತೃ-ಕೊಲ್ಲುವವನು ಎಂದರ್ಥ ಇದಕ್ಕೆ ಉದಾಹರಣೆ ರಾವಣನು ಆತನು ಗರ್ವದಿಂದ ತನ್ನ ಭುಜಬಲಗಳಮೇಲೆ ವಿಶ್ವಾಸವಿಟ್ಟು ಪರಮೇಶ್ವರನ ವಾಸಸ್ಥಾನವಾದ ಕೈಲಾಸವನ್ನು ಎತ್ತಿಬಿಡಲು ತೋಳುಗಳನ್ನು ಚಾಚಿದಾಗ ಭಗವಂತನು ಅವನ ಜಂಭವನ್ನುನಾಶಗೊಳಿಸುವದಕ್ಕಾಗಿ ತನ್ನ ಹೆಬ್ಬೆರಳನ್ನು ಒತ್ತಲಾಗಿ ಆ ಪರ್ವತದ ಕೆಳಗಡೆಗೆ ಅವನ ತೋಳುಗಳು ಸಿಕ್ಕಿಹಾಕಿಕೊಂಡವು ಆಗ ರಾವಣನ ಪಾಡು ಹೇಳತೀರದಾಯಿತು ಬಹಳವಾಗಿ ಪ್ರಯತ್ನಮಾಡಿದರೂ ತೋಳುಗಳನ್ನು ಬಿಡಿಸಿಕೊಳ್ಳಲಾಗದೆ ಕಿರುಚುತ್ತಾ ಶರಣಾಗತನಾದಾಗ ಮಹಾದೇವನು ದಯೆಯಿಂದ ಅವನನ್ನು ಕಾಪಾಡಿದನು ಇದನ್ನು ನೋಡಿದರೆ ಭಗವಂತನು ದುಷ್ಟರನ್ನು ಹೇಗೆ ಹಿಂಸಿಸಿ ದಾರಿಗೆ ತರುತ್ತಾನೆಂಬುದು ವ್ಯಕ್ತವಾಗುವದು ಹಾಗೆಯೇ ದುಷ್ಟರನ್ನು ಕೆಲವು ವೇಳೆ ಬೇರೊಬ್ಬರ ಮೂಲಕ ಕೊಲ್ಲಿಸುವವನೂ ಪರಮೇಶ್ವರನೇ ಆದ್ದರಿಂದ "ಹನೀಯಸನು" ಎಂದೂ ಕರೆದಿದೆ. ಇದಕ್ಕೆ ದಕ್ಷಪ್ರಜಾಪತಿಯೇ ಉದಾಹರಣೆ. ಇವನಾದರೋ ಯಜ್ಞಮಾಡಲಾರಂಭಿಸಿ ಪರಮೇಶ್ವರನ ಮೇಲಿನ ದ್ವೇಷದಿಂದ ಆತನನ್ನು ಆಹ್ವಾನಿಸದೇ ಇದ್ದನು ಅದು ಸತಿದೇವಿಯ ಅಗ್ನಿಪ್ರವೇಶದಲ್ಲಿ ಪರ್ಯವಸಾನವಾಯಿತು ಆಗ ಭಗವಂತನು ಕೋಪದಿಂದ ವೀರಭದ್ರನ ಮೂಲಕ ಯಜ್ಞವನ್ನು ನಾಶಮಾಡಿಸಿದನು ದಕ್ಷನ ತಲೆಯನ್ನೇ ಕತ್ತರಿಸಲಾಯಿತು ಯೂಪಸ್ತಂಭವನ್ನುಕಿತ್ತು ದೇವತೆಗಳನ್ನೆಲ್ಲ ಸದೆ ಬಡಿಯಲಾಯಿತು ಋತ್ವಿಜರಿಗೆಲ್ಲ ಚಾಟಿಯ ಏಟುಗಳು ಬಿದ್ದವು ಭೃಗುವಿನ ಗಡ್ಡವನ್ನು ಕಿತ್ತುಹಾಕಲಾಯಿತು ಪೂಷನ ಹಲ್ಲುಗಳನ್ನು ಮುರಿದದ್ದಾಯಿತು; ಭಗ ಎಂಬುವನ ಕಣ್ಣುಗಳನ್ನೇ ಕೀಳಲಾಯಿತು ಇತ್ಯಾದಿ ಹೀಗೆ ಮಹತ್ತಾದ ಹಿಂಸೆಯು ಪರಮೇಶ್ವರನನ್ನು ತಿರಸ್ಕರಿಸಿದುದರ ಫಲವಾಗಿ ಉಂಟಾಯಿತು. ಆದ್ದರಿಂದ ಎಂದೆಂದಿಗೂ ಭಗವಂತನನ್ನು ಅಪಮಾನಗೊಳಿಸಬಾರದು ಎಂದು ತಿಳಿಸಿರುತ್ತದೆ.

    ಇನ್ನು ಹರಿಕೇಶಗಳಾದ ವೃಕ್ಷಗಳಿಗೆ ನಮಸ್ಕಾರ - ಎಂಬಿದನ್ನು ವಿಚಾರ ಮಾಡೋಣ. ಹಸಿರಾದ ಎಲೆಗಳಿಂದ ಕೂಡಿದ ವೃಕ್ಷಗಳ ರೂಪದಲ್ಲಿರುವವನೂ ಪರಮೇಶ್ವರನೇ ಎಂದರ್ಥ. ಈ ವಿಶೇಷಣವನ್ನು ಈಗಾಗಲೆ ಎರಡನೆಯ ಅನುವಾಕದಲ್ಲಿ ವಿಚಾರಮಾಡಲಾಗಿದೆ. ಆದರೂ ಇಲ್ಲಿ ಮತ್ತೊಮ್ಮೆ ಸ್ತುತಿಸಿರುವದರ ಸ್ವಾರಸ್ಯವೇನೆಂದರೆ: ಯಜ್ಞಯಾಗಾದಿಗಳಿಗೆ ಉಪಯೋಗಿಸುವ ಮುತ್ತುಗ, ಅರಳಿ ಮುಂತಾದ ವೃಕ್ಷಗಳು, ಪೂಜೆಗೆ ವಿನಿಯೋಗಿಸುವ ಬಿಲ್ವಪತ್ರೆ ಇವುಗಳು ಪರಮೇಶ್ವರನ ವಿಭೂತಿರೂಪವಾದವುಗಳು ಎಂಬುದನ್ನು ಸ್ಪಷ್ಟಗೊಳಿಸಿದೆ. ಹಾಗೆಯೇ ಸ್ವರ್ಗಲೋಕದಲ್ಲಿರುವ ಕಲ್ಪವೃಕ್ಷ, ಮಂದಾರ, ಪಾರಿಜಾತಾದಿತರು ವಿಶೇಷಗಳೂ ಪರಮೇಶ್ವರನ ವಿಭೂತಿಗಳೇ ಎಂದು ಚಿಂತಿಸಬೇಕು. ಹರಿಕೇಶ ಎಂದದ್ದರಿಂದ ಮುತ್ತುಗವೇ ಮುಂತಾದವು ಕೇವಲ ಮರವಾಗಿ ಮಾತ್ರ ವಿಭೂತಿಗಳಲ್ಲ, ಎಲೆಗಳ ರೂಪದಿಂದಲೂ ಆತನ ಮಹಿಮೆಗಳೇ ಎಂದು ವಿವರಿಸಿದಂತಾಗಿದೆ. ಹೇಗೆಂದರೆ "ಬ್ರಹ್ಮವೇ ಪರ್ಣವು" ಎಂದು ವೇದದಲ್ಲಿ ತಿಳಿಸಿದೆ. ಮುತ್ತುಗದ ಮಧ್ಯಮಪರ್ಣವನ್ನು ಸ್ರುಕ್, ಸ್ರುವಗಳೆಂಬ ಯಜ್ಞಪಾತ್ರೆಗಳಾಗಿ ಉಪಯೋಗಿಸುತ್ತಾರೆ. ಬಿಲ್ವಪತ್ರೆಯನ್ನು ಸಹಸ್ರನಾಮಾರ್ಚನೆಗಳಿಗೆ ಬಳಸುತ್ತಾರೆ ಬಿಲ್ವಪತ್ರದ ಮೂರು ಎಲೆಗಳು ಸತ್ತ್ವರಜಸ್ತಮೋಗುಣಗಳೆಂಬ ಮೂರು ಗುಣಗಳನ್ನು ಸೂಚಿಸುತ್ತವೆಯಾದ್ದರಿಂದ ಅದನ್ನು ಪರಮೇಶ್ವರನಿಗೆ ಅರ್ಪಿಸುವದು ನಿಸ್ತ್ರೈಗುಣ್ಯವನ್ನು ಪಡೆಯಲು ಒಂದು ಸಾಧನವೆಂದು ಬಲ್ಲವರು ತಿಳಿಸುತ್ತಾರೆ. ಇಷ್ಟೇ ಅಲ್ಲದೆ ಶುಭಕಾರ್ಯಗಳಲ್ಲೆಲ್ಲ ಹಸಿಯ ಮಾವಿನಸೊಪ್ಪು, ಬಾಳೆಯ ಕಂಬಗಳನ್ನು ಕಟ್ಟುತ್ತಾರೆ. ಕುಂಭಗಳನ್ನು ಸ್ಥಾಪಿಸುವಾಗ ಮಾವಿನ ಎಲೆಗಳನ್ನು ಸಿಕ್ಕಿಸುತ್ತಾರೆ. ಇವೆಲ್ಲ ಹರಿಕೇಶನೆಂಬ ಪರಮೇಶ್ವರನ ನೆನಪನ್ನುಂಟುಮಾಡುವ ವಿಭೂತಿಗಳಾಗಿವೆ. ಹೀಗೆ ಸರ್ವವ್ಯಾಪಕನಾದ ಶಿವನ ಮಹಿಮೆಯನ್ನು ಎಷ್ಟು ಕೊಂಡಾಡಿದರೂ ಅಲ್ಪವೇ-ಎನಿಸುತ್ತದೆಯಲ್ಲವೆ? ಇಂಥ ಮಹಾದೇವನ ಉಳಿದ ಮಹಿಮೆಗಳನ್ನು ಮುಂದೆ ವಿಮರ್ಶಿಸೋಣ.

ನಮಃ ಶಿವಾಯ ಚ ಶಿವತರಾಯ ಚ
    ರುದ್ರಾಧ್ಯಾಯದ ಎಂಟನೆಯ ಅನುವಾಕದ ಕಡೆಯ ಭಾಗವನ್ನು ಈಗ ವಿಚಾರಮಾಡೋಣಃ
    ನಮಸ್ತಾರಾಯ ನಮಃ ಶಂಭವೇ ಚ ಮಯೋಭವೇ ಚ ನಮಃ ಶಂಕರಾಯ ಚ ಮಯಸ್ಕರಾಯ ಚ ನಮಃ ಶಿವಾಯ ಚ ಶಿವತರಾಯ ಚ ||

"ತಾರನಿಗೂ ಶಂಭುನಿಗೂ ಮಯೋಭವನಿಗೂ ಶಂಕರನಿಗೂ ಮಯಸ್ಕರನಿಗೂ ಶಿವನಿಗೂ ಶಿವತರನಿಗೂ ನಮಸ್ಕಾರ"
    "ತಾರ"ನೆಂದು ಪರಮೇಶ್ವರನನ್ನು ಕರೆದಿರುವದು ಆತನು ಮೋಕ್ಷಕ್ಕೆ ಕಾರಣನು - ಎಂಬ ಅಭಿಪ್ರಾಯದಿಂದ, ಜ್ಞಾನೋಪದೇಶವನ್ನು ಮಾಡುವವನು ಶಿವನೆಂದು ಪ್ರಸಿದ್ಧಿಯಿದೆ. ಇಂಥ ಶಿವನು ತಾನೇ ಮೋಕ್ಷಸ್ವರೂಪನೂ ಆಗಿರುತ್ತಾನೆ. ಆದ್ದರಿಂದ ಶಿವನಿಗೆ ಪ್ರತೀತವಾಗಿಯೂ ಆಲಂಭನವಾಗಿಯೂ ಇರುವ ಓಂಕಾರವನ್ನು ಇಲ್ಲಿ ಶಿವನೆಂದೇ ಭಾವಿಸಿ 'ತಾರಾಯ" ಎಂದು ಸ್ತುತಿಸಲಾಗಿದೆ. ಪ್ರಣವವನ್ನು ತಾರವೆಂದು ಕರೆಯುವ ರೂಢಿಯಿದೆ. ಪ್ರಣವವೇ ಪರಾಪರಬ್ರಹ್ಮಪ್ರಾಪ್ತಿಗೆ ದ್ವಾರವೆಂದು ಉಪನಿಷತ್ತುಗಳಲ್ಲಿ ಪ್ರತಿಪಾದಿಸಲ್ಪಟ್ಟಿದೆ. ಭಗವಂತನ ಪ್ರವಣಸ್ವರೂಪನು - ಎಂದರೆ ಓಂಕಾರ ಪ್ರತಿಪಾದ್ಯನು ಎಂದೇ ಅರ್ಥ ಉಪನಿಷತ್ತಿನಲ್ಲಿ ಒಂದು ಕಡೆ "ವೇದದ ಆದಿಯಲ್ಲಿಯೂ ಅಂತ್ಯದಲ್ಲಿಯೂ ಯಾವ ಸ್ವರವು (ಓಂಕಾರವು) ಪ್ರತಿಷ್ಠಿತವಾಗಿದೆಯೋ, ಪ್ರಕೃತಿಯಲ್ಲಿ ಒಂದಾಗುವ ಆ ಸ್ವರವನ್ನೂ ಮಿರಿದವನಾವನೋ ಅವನೇ ಮಹೇಶ್ವರನು' ಎಂದು ವರ್ಣಿಸಿರುತ್ತದೆ. ಈ ಮಂತ್ರವನ್ನು ವೈದಿಕರು ಮಂತ್ರಪುಷ್ಪಕಾಲದಲ್ಲಿ ಹೇಳುವ ವಾಡಿಕೆಯಿದೆ ಅಂತೂ ಓಂಕಾರಾಭಿನ್ನನಾದ ಪರಮೇಶ್ವರನು ತಾರನು ಅಂಥವನಿಗೆ ನಮಸ್ಕಾರ ಎಂದಭಿಪ್ರಾಯ.

    ಶಂಭು, ಮಯೋಭು - ಎಂಬ ನಾಮಗಳನ್ನು ಈಗ ವಿಚಾರಿಸೋನ. ಶಂ - ಎಂದರೆ ಐಹಿಕಸುಖ. ಮಯ-ಎಂದರೆ ಪರಲೋಕದ ಸುಖವು. ಈ ಎರಡೂ ಯಾವನಿಂದ ಉಂಟಾಗುವವೋ ಅವನೇ ಶಂಭುವು; ಮಯೋಭುವು-ಎಂದರ್ಥ. ಮನುಷ್ಯನು ಸುಖಕ್ಕಾಗಿಯೇ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾನೆ. ಆದರೆ ಸುಖವನ್ನು ಕೊಡುವ ಹಾಗೂ ಎಲ್ಲಿಂದ ಸುಖವು ಉತ್ಪತ್ತಿಯಾಗುವದೋ ಆ ದೇವನನ್ನು ಮಾತ್ರ ಮರೆತಿರುತ್ತಾನೆ. ಆದ್ದರಿಂದ ಮಾನವನ ಪ್ರಯತ್ನಗಳಿಗೆ ನಿಜವಾದ ಸುಖವು ದೊರೆಯದೆ ಇದೆ. ಇದನ್ನು ತಿಳಿದು ಬಲ್ಲವರು ಸುಖದ ಸಮುದ್ರನೇ ಆದ, ಆನಂದದ ಗವಿಯಾದ ಶಂಭುವನ್ನು ತಮ್ಮ ನಿಜಸುಖಕ್ಕಾಗಿ ಭಜಿಸುವರು. "ಈ ಪರಮಾನಂದರೂಪನಾದ ಶಿವನೆಂಬ ಸುಖಸಮುದ್ರದ ಒಂದೊಂದು ತುಣುಕನ್ನೇ ಆಶ್ರಯಿಸಿಕೊಂಡು ಎಲ್ಲಾ ಪ್ರಾಣಿಗಳೂ ಸುಖದ ಸವಿಯನ್ನು ಕಾಣುತ್ತಿರುವವು" ಎಂದು ಉಪನಿಷತ್ತುಗಳಲ್ಲಿ ವರ್ಣಿಸಿದೆ. ಹೀಗೆ ಐಹಿಕಾಮುಷ್ಮಿಕಸುಖಗಳನ್ನುಂಟುಮಾಡುವ ಆನಂದ ರೂಪನೇ ಶಂಭುವು-ಮಯೋಭುವು ಆಗಿದ್ದಾನೆಂದು ಇಲ್ಲಿಸ್ತುತಿಸಿದೆ.

    ಶಂಕರನೆಂಬ ನಾಮವನ್ನು ಈಗ ವಿಚಾರಮಾಡೋಣ. ಶಂ ಎಂದರೆ ಸುಖವನ್ನು ಕರೋತಿ ಉಂಟುಮಾಡುವವನಾದ್ದರಿಂದ ಶಂಕರನು. ಶಂಭು ಎಂಬ ಹಿಂದಿನ ನಾಮದಿಂದಲೇ ಈ ಅರ್ಥವು ಬರುತ್ತದೆಯಾದರೂ ಇಲ್ಲಿ ಒಂದು ಅರ್ಥವಿಶೇಷದಿಂದ ಶಂಕರನೆಂದಿದ್ದಾರೆ. ಹೇಗೆಂದರೆ: ಶಂಭು ಎಂದು ಕರೆದಾಗ "ಸುಖಕ್ಕೆ ನೇರಾಗಿ ಪರಮೇಶ್ವರನೇ ಕಾರಣನು. ಅವನಿಂದಲೇ ಎಲ್ಲರಿಗೂ ಸುಖವು ದೊರಕುತ್ತದೆ" - ಎಂದು ಹೇಳಲಾಗಿತ್ತು ಇಲ್ಲಿ ಪರಂಪರೆಯಿಂದಲೂ ಆ ಪರಮೇಶ್ವರನೇ ಸುಖಹೇತುವೆಂಬುದನ್ನು ತಿಳಿಸಿದಂತಾಗಿದೆ. ಉದಾಹರಣೆಗೆ : ಲೋಕದಲ್ಲಿ ಒಬ್ಬ ಮನುಷ್ಯನಿಗೆ ಮಕ್ಕಳಿಲ್ಲವೆಂದು ಇಟ್ಟುಕೊಳ್ಳೊಣ. ಆತನಿಗೆ ಮಕ್ಕಳಾಗಬೇಕೆಂಬ ಹಂಬಲಿಕೆಯೇನೋ ಬಹಳ ಇದೆಯೆಂದು ಭಾವಿಸೋಣ. ಆಗ ಅವನು ಗುರುಹಿರಿಯರ ಸೂಚನೆಯಂತೆ ಪರಮೇಶ್ವರನನ್ನು ಪೂಜಿಸುತ್ತಾನೆ. ಅದರ ಫಲವಾಗಿಯೋ ಎಂಬಂತೆ ಒಂದು ಗಂಡುಮಗುವಾಗುತ್ತದೆ - ಎಂದು ಇಟ್ಟುಕೊಳ್ಳೋಣ ಈಗ ಆ ಯಜಮಾನನಿಗೆ ಎಷ್ಟು ಸಂತೋಷವೋ ಹೇಳತೀರದು. "ಪರಮೇಶ್ವರನೇ ತನಗೆ ಮಗನನ್ನು ಕರುಣಿಸಿದ್ದಾನೆ" ಎಂದು ತಿಳಿದು ಪುತ್ರನ ಮುಖವನ್ನು ನೋಡಿ ಮುದ್ದಾಡಿ ಆನಂದಪಡುತ್ತಾನೆ. ಹೀಗೆಯೇ ಆಯಾ ಭಕ್ತರುಗಳು ಬಯಸಿದ ಇಷ್ಟಾರ್ಥಗಳನ್ನು ಪರಮೇಶ್ವರನು ಅನುಗ್ರಹಿಸಿದಾಗ ಭಾವುಕರಾದವರಿಗೆ ಪರಮೇಶ್ವರನ ನಿಜಸ್ವರೂಪವು ಕಾಣದೆ ಹೊದರೂ ಪರಂಪರೆಯಿಂದ ಆಯಾ ಇಷ್ಟವಸ್ತುಗಳ ರೂಪದಲ್ಲಿ ಲಭಿಸಿದಾಗ ಭಗವಂತನನ್ನು ಪಡೆದಷ್ಟೇ ಆನಂದವಾಗುತ್ತದೆಯಲ್ಲವೆ? ಹೀಗೆ ಪರಮೇಶ್ವರನು ಆಯಾ ಜೀವರುಗಳಿಗೆ ಅವರವರು ಬಯಸಿದ ಸುಖಗಳನ್ನು ಕೊಡುವದರ ಮೂಲಕ ಶಂಕರನಾಗಿರುತ್ತಾನೆ - ಎಂದು ತಿಳಿಯಬೇಕು.

    ಮಯಸ್ಕನೆಂಬುದಕ್ಕೆ ಹಿಂದೆ ತಿಳಿಸಿದ ಮಯೋಭು ಎಂಬಿದರ ವಿವರಣೆಯನ್ನೇ ಅನುಸಂಧಾನಮಾಡಿಕೊಳ್ಳಬೇಕು. ಮೋಕ್ಷಸುಖವನ್ನು ಪರಂಪರೆಯಿಂದ ಉಂಟುಮಾಡುವವನು - ಎಂದರ್ಥ. ಮಾನವನಿಗೆ ತಾನು ತಾನೇ ಜ್ಞಾನವನ್ನು ಸಂಪಾದಿಸಿಕೊಳ್ಳುವದು ಸಾಧ್ಯವಿಲ್ಲ. ಏಕೆಂದರೆ ಅಜ್ಞಾನವು ಸಹಜವಾಗಿಯೇ ಇದ್ದುಕೊಂಡುಬಿಟ್ಟಿರುತ್ತದೆ. ಅಜ್ಞಾನವನ್ನು ಕಳೆದುಕೊಂಡ ಮಹನೀಯರು ಈತನಿಗೆ ಉಪದೇಶಮಾಡಿ ಜ್ಞಾನವನ್ನು ತಿಳಿಸಿಕೊಡಬೇಕು. ಇವರೇ ಆಚಾರ್ಯರು ಮತ್ತು ಆಚಾರ್ಯರ ಉಪದೇಶವಾದರೋ ವೇದ ಶಾಸ್ತ್ರನುಗುಣವಾಗಿರುತ್ತದೆ. ಹೀಗೆ ವೇದಗಳ ರೂಪದಿಂದಲೂ ಪರಮೇಶ್ವರನು ತಾನೇ ತೋರಿಕೊಂಡು ಲೋಕಾನುಗ್ರಹಕ್ಕಾಗಿ ಗುರುಮೂರ್ತಿಯಾಗಿ ಎಲ್ಲರಿಗೂ ದರ್ಶನವನ್ನು ಕೊಡುತ್ತಾನೆ. ಈ ಗುರುದೇವನೇ ಮಯಸ್ಕರನು. ಆಚಾರ್ಯನಿಗೂ ಶಿವನಿಗೂ ಭೇದವಿಲ್ಲವೆಂದೇ ತಿಳಿಯಬೇಕು.
    ಈಗ "ನಮಃ ಶಿವಾಯಃ" ಎಂಬಿದರ ಅರ್ಥವನ್ನು ವಿಚಾರ ಮಾಡೋಣ. ಇದು ಪಂಚಾಕ್ಷರೀಮಂತ್ರವೆಂದು ಸುಪ್ರಸಿದ್ಧವಾಗಿರುವದು. ವೇದೋಕ್ತವಾದ ಮಂತ್ರವಿದೆಂದು ತಿಳಿಯಬೇಕು. "ವಶ ಕಾನ್ತೌ" ಎಂಬ ಧಾತುವಿನಿಂದ ಶಿವ ಎಂಬ ರೂಪವಾಗಿದೆ - ಎಂದು ಬಲ್ಲವರು ಹೇಳುತ್ತಾರೆ. ಕಾನ್ತಿ ಎಂದರೆ ಇಚ್ಚೆ. "ಎಲ್ಲಾ ಪ್ರಾಣಿಗಳಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಛೆಯಿಂದ ದೇವನು ಶಿವನೆಂದೇ ಪ್ರಸಿದ್ಧನಾದನು" ಎಂದು ಮಹಾಭಾರತದಲ್ಲಿದೆ. ಇಚ್ಛೆ ಎಂದರೆ ಸಂಕಲ್ಪಮಾತ್ರದಿಂದಲೇ ಸಮಸ್ತಜಗತ್ತನ್ನೂ ಉಂಟುಮಾಡಿ, ಕಾಪಾಡಿ, ಲಯಮಾಡುವಂಥ ಸಾಮರ್ಥ್ಯವಿರುವಿಕೆ. ಈಶ್ವರನ ಇಚ್ಛೆಯಿಲ್ಲದೆ ಏನೊಂದೂ ನಡೆಯಲಾರದು-ಎಂಬ ಅಭಿಪ್ರಾಯವು ಇಲ್ಲಿದೆ. ಇದರಿಂದ ಪರಮೇಶ್ವರನು ಸರ್ವಜ್ಞನೂ ಸರ್ವಶಕ್ತನೂ ಸರ್ವಸ್ವತಂತ್ರನೂ ಸರ್ವೈಶ್ವರ್ಯಸಂಪನ್ನನೂ ಆಗಿರುತ್ತಾನೆಂದು ಸಿದ್ಧವಾಗುತ್ತದೆ. ಶಿವನೆಂಬ ನಾಮಧೇಯವು ಪರಮೇಶ್ವರನಿಗೆ ತುಂಬ ಹೊಂದಾಣಿಕೆಯಾದ ನಾಮವಾಗಿದೆ. ಏಕೆಂದರೆ ಆತನ ಹೆಸರು ಹೇಳಿದಮಾತ್ರದಿಂದಲೇ ಎಲ್ಲವೂ ಶುಭವಾಗುವದು. ಶಿವ, ಮಂಗಳ, ಭದ್ರ, ಕಲ್ಯಾಣ-ಎಂಬಿವು ಪರ್ಯಾಯ ವಾಚಕಗಳು.
    ಪರಮೇಶ್ವರನಿಗೆ ಮತ್ತೊಂದು ಕಾರಣದಿಂದಲೂ ಈ ಹೆಸರು ಬಂದಿದೆ. ಶಿವನೆಂಬವನು ಎಲ್ಲರಿಗೂ ಮಂಗಳಕರನೇ ಆಗಿರಬೇಕಾದದ್ದು ಅವಶ್ಯವಷ್ಟೇ! ಈ ಭಗವಂತನಾದರೋ ದೇವತೆಗಳು, ರಾಕ್ಷಸರು, ಯಕ್ಷರು, ದಾನವರು, ಗಂಧರ್ವರು, ಕಿನ್ನರರು, ಮನುಷ್ಯರು, ನಾಗಗಳು - ಇತ್ಯಾದಿ ಹದಿನಾಲ್ಕು ಲೋಕನಿವಾಸಿಗಳಾದ ಎಲ್ಲ ಜೀವರಿಗೂ ಸಮನಾಗಿರುತ್ತಾನೆ. ಶಿವನನ್ನು ಆರಾಧಿಸದೆ ಇರುವ ಜೀವರುಗಳೇ ಇಲ್ಲ - ಎನ್ನಬಹುದು. ಹೀಗೆ ದೇವತೆಗಳಿಗೂ ದೇವನಾದ ಈ ಮಹಾದೇವನು ಪರಮಮಂಗಳರೂಪನಾಗಿರುತ್ತಾನೆ. ಶೈವಪುರಾಣಗಳಲ್ಲಿ ಎಲ್ಲಾ ಲೋಕನಿವಾಸಿಗಳೂ ತಮ್ಮತಮ್ಮ ಲೋಕಗಳಲ್ಲಿ ಬೇರೆಬೇರೆಯ ನಾಮಧೇಯಗಳಿಂದ ಒಬ್ಬ ಶಿವನನ್ನೇ ಆರಾಧಿಸುತ್ತಾರೆಂದು ವಿಸ್ತಾರವಾಗಿ ವರ್ಣಿಸಿರುತ್ತದೆ ಅವುಗಳ ಮೂಲಕ ಶಿವಮಹಿಮೆಯನ್ನು ನಾವು ಅನುಸಂಧಾನಮಾಡಬೇಕು. ಆಗಮಗಳಲ್ಲಿ ಶಿವಶಬ್ಧವನ್ನು "ಜೀವರತ್ನ"ವೆಂದು ಕರೆಯುವರು ಇಂಥ ಮಂತ್ರಾಧಿದೈವನಾದ ಶಿವನು ಶಿವತರನೂ ಆಗಿರುತ್ತಾನೆ. ಶಿವತರನೆಂದರೆ ಇನ್ನೂ ಹೆಚ್ಚಿನ ಶಿವನು ಎಂದರ್ಥ.
    ಶಿವತಮನೂ ಶಿವನೇ ಒಟ್ಟಿನಲ್ಲಿ ಶಿವನಿಗಿಂತ ಉತ್ಕೃಷ್ಟರಾದವರು ಯಾರು ಇರುವದಿಲ್ಲ ಶಿವನ ಶಕ್ತಿಯನ್ನು ಶಿವೆ ಎನ್ನುತ್ತಾರೆ ಆಕೆಯೂ ಸರ್ವಮಂಗಳೆಯು ಹೀಗೆ ಶಿವಶಿವೆಯರೇ ಇಡಿಯ ಜಗತ್ತನ್ನೆಲ್ಲ ವ್ಯಾಪಿಸಿಕೊಂಡಿರುತ್ತಾರೆ ಪರಮಾರ್ಥದೃಷ್ಟಿಯಿಂದ ನೋಡಿದಾಗ ಈ ತತ್ತ್ವವು ಶಾಂತವು ಶಿವವೂ ಅದ್ವೈತವೂ ಆಗಿರುತ್ತದೆ. ಇಂಥ ಶಿವನ ಮಹಿಮೆಯನ್ನು ಪೂರ್ಣವಾಗಿ ಬಲ್ಲವರಾರು? ಶಿವನು ಸರ್ವರಿಗೂ ಶಿವವನ್ನುಂಟುಮಾಡಲೆಂದು ಪ್ರಾರ್ಥಿಸೋಣ.

ನಮಸ್ತೀರ್ಥ್ಯಾಯ ಚ
    ರುದ್ರಾಧ್ಯಾಯದ ಎಂಟನೆಯ ಅನುವಾಕದ ಕೊನೆಯಭಾಗದ ಮತ್ತೊಂದು ಪ್ರವಿಭಾಗವನ್ನು ಈಗ ವಿಚಾರಮಾಡಬೇಕಾಗಿದೆ :
    ನಮಸ್ತೀರ್ಥ್ಯಾಯ ಚ ಕೂಲ್ಯಾಯ ಚ ನಮಃ ಪಾರ್ಯಾಯ ಚಾವಾರ್ಯಾಯ ಚ ನಮಃ ಪ್ರತರಣಾಯ ಚೋತ್ತರಣಾಯ ಚ ನಮ ಆತಾರ್ಯಾಯ ಚಾಲಾದ್ಯಾಯ ಚ ನಮಃ ಶಷ್ಪ್ಯಾಯ ಚ ಫೇನ್ಯಾಯ ಚ ನಮಸ್ಸಿಕತ್ಯಾಯ ಚ ಪ್ರವಾಹ್ಯಾಯ ಚ ||

    'ತೀರ್ಥ್ಯನಿಗೂ ಕೂಲ್ಯನಿಗೂ ಪಾರ್ಯನಿಗೂ, ಅವಾರ್ಯನಿಗೂ, ಪ್ರತರಣನಿಗೂ ಉತ್ತರಣನಿಗೂ ಆತಾರ್ಯನಿಗೂ ಆಲಾದ್ಯನಿಗೂ ಶಷ್ಪ್ಯನಿಗೂ ಫೇನ್ಯನಿಗೂ ಸಿಕತ್ಯನಿಗೂ ಪ್ರವಾಹ್ಯನಿಗೂ ನಮಸ್ಕಾರವು'

    ಈ ಭಾಗದಲ್ಲಿಯೂ ಭಗವಂತನು ಅಂತರ್ಯಾಮಿರೂಪದಿಂದ ಎಲ್ಲಾ ಸ್ಥಾವರಪ್ರಾಣಿಗಳಲ್ಲಿಯೂ ಅಡಗಿದ್ದಾನೆಂದು ತಿಳಿಸಿ ಆತನಿಗೆ ನಮಸ್ಕಾರವನ್ನು ಸಮರ್ಪಿಸಿದೆ. ಹೇಗೆಂದರೆ : ತೀರ್ಥ್ಯನು ಎಂದರೆ ತೀರ್ಥದಲ್ಲಿರುವವನು ಎಂದರ್ಥ ತೀರ್ಥಗಳಲ್ಲೆಲ್ಲ ಗಂಗೆಯ ಪ್ರಸಿದ್ಧವಾದುದು. ಎಲ್ಲಾ ನೀರುಗಳನ್ನೂ ಗಂಗೋದಕವೆಂದೇ ಗೌರವಕ್ಕಾಗಿ ಕರೆಯುತ್ತಾರೆ. ಸಮಸ್ತವಿಧವಾದ ಪಾಪಗಳ ಪರಿಹಾರಕ್ಕೂ ಗಂಗಾಸ್ನಾನವು ಉಪಾಯವಾಗಿದೆ. ಗಂಗೆಗೆ ಇಂಥ ಪವಿತ್ರತೆಯು ಪರಮೇಶ್ವರನಿಂದಲೇ ಬಂದಿದೆ. ಆತನು ಗಂಗೆಯಂತೆಯೇ ಎಲ್ಲಾ ತೀರ್ಥಗಳಲ್ಲಿಯೂ ತನ್ನ ಮಹಿಮೆಯನ್ನು ಇಟ್ಟಿರುತ್ತಾನೆ. ಆದ್ದರಿಂದಲೇ ತೀರ್ಥ್ಯನು ಎಂದು ಹೊಗಳಿದೆ. ಹಾಗೆಯೇ ನದಿಗಳ ದಂಡೆಯನ್ನು ಕೂಲವೆನ್ನುವರು. ನದಿಗಳ ತೀರಗಳಲ್ಲಿಯೇ ದೇವಾಲಯಗಳು, ತಪೋವನಗಳು, ಕ್ಷೇತ್ರಗಳು ಇದ್ದುಕೊಂಡಿರುವವು. ಅವುಗಳೂ ಭಗವಂತನಿಂದಲೇ ವ್ಯಾಪ್ತವಾಗಿರುವವಾದ್ದರಿಂದ ಕೊಲ್ಯನೆಂದು ಸ್ತುತಿಸಿದೆ. ಪಾರ ಎಂದರೆ ದಡ. ದಡದಲ್ಲಿರುವವನು ಪಾರ್ಯನು. ಆಚೆಯ ದಡದಲ್ಲಿರುವವನೂ ಅವನೇ ಎಂಬರ್ಥದಲ್ಲಿ ಆವಾರ್ಯನು ಎಂದಿದೆ. ನೀರಿನ ಮಧ್ಯೆ ಇರುವಾಗ ನಮಗೆ ಬಹಳ ಹೆದರಿಕೆಯಿರುತ್ತದೆ. ದಡವನ್ನು ಕಂಡರೂ ಸಾಕು, ಧೈರ್ಯವುಂಟಾಗುವದು. ಇನ್ನು ದಡವನ್ನು ಸೇರಿಯೇಬಿಟ್ಟರೆ ಬಹಳ ಆನಂದವಾಗುವದು. ಅದು ಪರಮೇಶ್ವರನ ಕೃಪೆಯಿಂದಲೇ - ಎಂದು ಭಾವಿಸಿದಲ್ಲಿ ಮೇಲಿನ ಸ್ತುತಿಯು ಅರ್ಥವತ್ತಾಗುವದು.
    ಈಗ ಪ್ರತರಣ, ಉತ್ತರಣ - ಎಂಬ ಸ್ತುತಿಗಳನ್ನು ನೋಡೋಣ. ಉತ್ತಮವಾದ ಹಾದಿಯಿಂದ ದಾಟುವದು ಪ್ರತರಣವೆಂದೂ ಅತ್ಯುತ್ತಮವಾದ ಮಾರ್ಗದಿಂದ ದಾಟುವದು ಉತ್ತರಣವೆಂದೂ ಪ್ರಸಿದ್ಧಿಯಿದೆ. ಮಾನವನು ಮೋಕ್ಷವನ್ನು ಪಡೆಯಲು ಮೊದಲು ಪಾಪಗಳನ್ನು ದಾಟಬೇಕಾಗಿದೆ. ಅನಂತರ ಮೋಕ್ಷಸಾಧನವಾದ ಜ್ಞಾನವೆಂಬ ಮಾರ್ಗದಲ್ಲಿ ನಡೆಯಬೇಕಾಗಿದೆ. ಪರಮೇಶ್ವರನ ಸ್ಮರಣ, ಕೀರ್ತನ, ಪೂಜಾದಿಗಳೇ ಪಾಪಪರಿಹಾರಕ್ಕೆ ಮಾರ್ಗಗಳು ಈ ಸಾಧನಗಳ ರೂಪದಿಂದ ಭಗವಂತನು ಪ್ರತರಣನಾಗಿರುವನು ಪಾಪಗಳಿಂದ ನಿರ್ಮುಕ್ತನಾಗಲು ಭಗವದಾರಾಧನೆಗಿಂತ ಮತ್ತೇನು ತಾನೆ ಸಾಧನವಿದ್ದೀತು? ಆದ್ದರಿಂದ ಭಗವಂತನ ಮಹಿಮಾರೂಪವಾದ ಆರಾಧನಾದಿಗಳೇ ಪ್ರತರಣಗಳು ಹಾಗೆಯೇ ಅವಿದ್ಯೆಯನ್ನು ದಾಟಲು ಸಾಧನವಾಗಿರುವ ಜ್ಞಾನವೇ ಉತ್ತರಣವು ಹೀಗೆ ಪರಮೇಶ್ವರನು ಪ್ರತರಣನೂ ಉತ್ತರಣನೂ ಆಗಿದ್ದುಕೊಂಡು ಸಾಧಕರನ್ನು ಅನುಗ್ರಹಿಸುತ್ತಿರುವನು ಎಂದು ಭಾವಆತಾರವೆಂದರೆ ಹಿಂದಿರುಗುವಿಕೆ ಅದರ ರೂಪದಲ್ಲಿರುವವನು ಆತಾರ್ಯನು ಎಂದರ್ಥ. ದೀರ್ಘಪ್ರವಾಸದಿಂದ ಸುಖವಾಗಿ ಹಿಂದಿರುಗಿ ಬಂದಾಗ, ಕಳೆದುಹೋದ ಪದಾರ್ಥವು ಹಿಂದಿರುಗಿ ಕೈಸೇರಿದಾಗ ಇಂಥ ಸಂದರ್ಭಗಳಲ್ಲಿ ಆತಾರ್ಯನೆಂಬ ಭಗವಂತನನ್ನು ನೆನೆಸಿಕೊಳ್ಳಬಹುದು.
    ಆಲಾದ್ಯನೆಂಬ ಸ್ತುತಿಯನ್ನು ಈಗ ವಿಚಾರಮಾಡೋಣ. "ಅಲಂ ಯಥಾ ಭವತಿ ತಥಾ ಕರ್ಮಫಲಮತ್ತಿ ಇತ್ಯಲಾದಃ" - ಎಂಬ ವ್ಯುತ್ಪತ್ತಿಯಂತೆ ತಾನು ಮಾಡಿದ ಕರ್ಮಕ್ಕೆ ಪೂರ್ಣವಾದ ಫಲವನ್ನು ಪಡೆದು ಅನುಭವಿಸುವವನು ಅಲಾದನು ಎಂದರೆ ಜೀವನೆಂದರ್ಥ. ಈ ಜೀವನಿಗೂ ಅಂತರ್ಯಾಮಿಯಾಗಿದ್ದುಕೊಂಡಿರುವವನು - ಆಲಾದ್ಯು. ಜೀವನು ಕರ್ಮವನ್ನು ಮಾಡುವಂತೆಯೂ ಫಲವನ್ನು ಅನುಭವಿಸುವಂತೆಯೂ ಪ್ರೇರಿಸುವವನು ಪರಮೇಶ್ವರನೇ ಆಗಿರುತ್ತಾನೆ ಆದ್ದರಿಂದ ಭಗವಂತನನ್ನು ಆಲಾದ್ಯನು ಎಂದು ಸ್ತುತಿಸಲಾಗಿದೆ. ಶಷ್ಪವೆಂದರೆ ಎಳೆಯದಾದ ಗರಿಕೆಹುಲ್ಲು ಅದರಲ್ಲಿರುವವನು ಶಷ್ಪ್ಯನು ಫೇನವೆಂದರೆ ನೊರೆಯು ಅದರಲ್ಲಿರುವವನು ಫೇನ್ಯನು ಸಿಕತಾ ಎಂದರೆ ಮರಳು ಅದರಲ್ಲಿರುವವನು ಸಿಕತ್ಯನು ಗೌರಿಪೂಜೆಯನ್ನು ಮಾಡುವಾಗ ನದಿಯ ಮರಳನ್ನು ಸಂಗ್ರಹಿಸಿ ಒಂದು ಪಾತ್ರಯಲ್ಲಿಟ್ಟು ಪೂಜಿಸುತ್ತಾರೆ. "ಸಿಕತಾಗೌರಿ"ಯೆಂದೇ ಅದನ್ನು ಕರೆಯುತ್ತಾರೆ. ಇದು ಪರಮೇಶ್ವರನ ಸಾಂನಿಧ್ಯದ ಫಲವು ನೀರಿನ ಹರಿಯುವಿಕೆಯೇ ಪ್ರವಾಹವು ಅದರಲ್ಲಿರುವವನು ಪ್ರವಾಹ್ಯನು ಹೀಗೆ ಪರಮೇಶ್ವರನು ನಾವೆಲ್ಲರೂ ಸುಲಭವಾಗಿ ನೋಡುತ್ತಿರುವ ಪದಾರ್ಥಗಳಲ್ಲೆಲ್ಲ ವ್ಯಾಪಿಯಾಗಿದ್ದುಕೊಂಡಿರುತ್ತಾನೆ - ಎಂದಭಿಪ್ರಾಯ.

Comments

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ