ಸಂತ ಶ್ರೀ ಕನಕದಾಸರ ಬಂಡೆ

ಮಂಡ್ಯ ಜಿಲ್ಲೆ, ಶ್ರೀ ರಂಗಪಟ್ಟಣ ತಾಲೂಕಿನ, ಮಹಾದೇವಪುರ ಪುರಾತನ ಹಳ್ಳಿ. ಅಲ್ಲಿ ಕಾವೇರಿ ನದಿ ಹರಿದಿದೆ. ಕನಕದಾಸರು ತಿರುಪತಿಯ ಯಾತ್ರೆಗೆ ಹೊರಟಾಗಲೆ, ಅಲ್ಲಿ ನದಿದಾಟುವ ಅವಶ್ಯಕತೆ ಇತ್ತು. ಅಲ್ಲಿಯೇ ಇದ್ದ ದೋಣಿಯಲ್ಲಿ ಕುಳಿತರು. ಅವರ ಮೈಯೆಲ್ಲಾ ಕಜ್ಜಿ(ಗಾಯ)ಗಳಾಗಿದ್ದರಿಂದ ದೋಣಿಯಿಂದ ಹೀಯಾಳಿಸಿ ಅಂಬಿಗರು ಇಳಿಸಿದರು. ನೊಂದ ಕನಕದಾಸರು ‘ಸಾವಿರ ಗಳಿಸಿದರೂ ಸಂಜೆಗೆ ಲಯವಾಗಲಿ ನಳ್ಳಿ ಗುಳ್ಳಿಯಂತೆ ಮಕ್ಕಳಾಗಲಿ’ ಎಂದು ಶಾಪವಿತ್ತರು. ಪಕ್ಕದ ತೋಟದಲ್ಲಿ ಒಂದು ಬಾಳೆಎಲೆಯನ್ನು ಕೇಳಿದರು. ಆ ತೋಟದ ಒಡೆಯ ಅವರನ್ನು ಬೈದು ಹೊರದೂಡಿದ. ಇಲ್ಲಿ ಬಾಳೆ ಬೆಳೆದರು ಫಲಕೊಡದೇ ಇರಲೆಂದು ಶಾಪವಿತ್ತರು. ಈಗಲೂ ಬಾಳೆ ಅಲ್ಲಿ ಫಲ ಕೊಡುವುದಿಲ್ಲ ಎಂಬುದು ಜನರ ನಂಬಿಕೆ. ಈಗ ಅದು ಪಾಳು ಬಿದ್ದಿದೆ.
ಪಕ್ಕದ ತೋಟದಲ್ಲಿ ಬಾಳೆ ಎಲೆ ಪಡೆದು, ಅದರ ಮೇಲೆ ಕುಳಿತು ನದಿ ದಾಟಿದರು. ಇದನ್ನು ನೋಡಿದ ಅಲ್ಲಿಯ ಅಂಬಿಗರು ನೀವು ಸಾಮಾನ್ಯರಲ್ಲ, ಮಹಾಪುರುಷರು ನಮ್ಮ ದೋಣಿಗೆ ಶಾಪ ಕೊಡದಿರಿ ಎಂದು ಮೊರೆ ಹೋದರು. ನನ್ನ ಹೆಸರಿನಿಂದ ವರ್ಷದಲ್ಲಿ ನಾಲ್ಕು ಜನರಿಗಾದರೂ ಊಟ ಹಾಕಿರಿ, ಇಲ್ಲಿ ಯಾವುದೇ ರೀತಿ ದೋಣಿ ಅಪಘಾತ ಸಂಭವಿಸುವುದಿಲ್ಲವೆಂದು ಶುಭಹಾರೈಸಿ ಪ್ರಯಾಣ ಬೆಳೆಸಿದರು. ಅಲ್ಲಿ ಇಂದಿಗೂ ಯಾವುದೇ ತೆರನಾಗಿ ದೋಣಿ ಅಪಘಾತವಾಗಿಲ್ಲ. ನದಿಯ ಮಧ್ಯದಲ್ಲಿ ಒಂದು ಬಂಡೆ ಇದೆ. ಮಂಡಿಯೂರಿ ಕುಳಿತ ಕಾಲಿನ ಹಾಗೂ ಕೈ ಗುರುತು ಮೂಡಿವೆ. ಅವೇ ಸಂತ ಶ್ರೀ ಕನಕದಾಸರ ಗುರುತು. ಅದರ ಮೇಲೆ ಯಾರೂ ಹತ್ತುವುದಿಲ್ಲ. ಒಂದು ವೇಳೆ ಹತ್ತಿದರೆ ಬದುಕುವುದಿಲ್ಲ. ಹೀಗೆ ವಿಶಿಷ್ಟ ಹಿನ್ನೆಲೆ ಇಂದಿಗೂ ಅಲ್ಲಿದೆ. ಸಂತ ಶ್ರೀ ಕನಕದಾಸರ ಹಬ್ಬವೆಂದು ಅಲ್ಲಿಯ ಅಂಬಿಗ ಜನಾಂಗದವರು ಮಾಡುತ್ತಾರೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ