ಗಾರ್ಧಭೋಪನ್ಯಾಸ

ನಮ್ಮೂರಿನಿಂದ ಕೋಟೆಗೆ ಹೋಗುವಾಗ ಸರಗೂರಿನ ಟೌನ್ ಹಾಲ್ ಮುಂದೆ ಹಾದು ಹೋಗಬೇಕಾಗಿತ್ತು. ಅದರ ಸುತ್ತಲಿನ ಕಾಂಪೌಂಡಿನ ಗೋಡೆ ಅರ್ಧರ್ಧ ಬಿದ್ದು ಹೋಗಿರುವದರಿಂದ ಅದೊಂದು ಹಾಳುಗೋಡೆಯ ಕ್ಷೇತ್ರವೆಂದು ತಿಳಿದೋ ಅಥವಾ ಮತ್ತೆ ಯಾವ ಭಾವನೆಯಿಂದಲೋ, ಮುಂಗಡೆಯ ಚೌಕದಲ್ಲಿ ನಾಲ್ಕೆಂಟು ಕತ್ತೆಗಳು ಬಿದ್ದುಕೊಂಡಿರುವದುಂಟು. ಒಂದೊಂದು ಸಲ ಅವುಗಳ ಇಂಪಿನ ಗಾನವು ಕೇಳಬರುವದೂ ಉಂಟು. ಆ ದಿನ ಎಂದಿಗಿಂತಲೂ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿಯೇ ಆ ಪ್ರಾಣಿಗಳು ಒಟ್ಟುಗೂಡಿದ್ದವು ಆದರೆ ಒಂದು ವಿಶೇಷ ಎಂದಿನಂತೆ ಅವುಗಳೆಲ್ಲ ಬಿಡಿಬೀಸಾಗಿ ಕಾಲುಚಾಚಿಕೊಂಡು ಮಲಗಿರಲಿಲ್ಲ. ಇನ್ನೇನು ಏಳುತ್ತವೆಯೋ ಎಂಬಂತೆ ಕೂತಿದ್ದವು. ಮನುಷ್ಯರು ಕೂತು ಕೊಳ್ಳುವ ಹಾಗಲ್ಲವೆಂದು ಹೇಳಬೇಕಾದದ್ದೇ ಇಲ್ಲ; ಕತ್ತೆಗಳು ಎದ್ದು ಕೂರುವ ಹಾಗೆ ಎಂದು ಮನಸ್ಸಿನಲ್ಲಿಯೇ ಚಿತ್ರಿಸಿಕೊಳ್ಳಿ ಕತ್ತೆ ಚಿತ್ರಗಾರನ ಮಿಂಡನಾದ್ದರಿಂದ ಹೊರಗೆ ಯಾವದಾದರೂ ಚಿತ್ರವನ್ನು ನೋಡಿ ತಿಳಿಯುವದಕ್ಕೆ ಆಗುವದಿಲ್ಲ ಕಣ್ಣಲ್ಲಿಯೇ ಕಾಣಬೇಕು, ಆ ಮೋಚಿನ ಆಸನವನ್ನ !
    ಕತ್ತೆಗಳೆಲ್ಲವೂ ತಮ್ಮ ಲಂಬಕರ್ಣಗಳನ್ನು ನೆಟ್ಟಗೆ ನಿಗುರಿಸಿಕೊಂಡಿದ್ದವು ಅವುಗಳ ಮುಂದೆ ಒಂದು ಮುದಿಕತ್ತೆ ಎದ್ದು ನಿಂತುಕೊಂಡಿತ್ತು. ಅದು ಒಂದು ಸಲ ಗಂಟಲನ್ನು ಸರಿಮಾಡಿಕೊಂಡು - ಕಿರಿಚಿತು ಎನ್ನಲೆ? ಉಹೂ, ಇಲ್ಲ ಮನುಷ್ಯವಾಣಿಯಿಂದ "ಮಹನೀಯರೆ" ಎಂದಿತು !
    ನನಗೆ ದಿಗ್ಭ್ರಮೆಯಾಯಿತು. "ಇದೇನು ಕನಸೊ, ಪಿತ್ಥವಿಕಾರವೊ? ಈಗ ನಾನು ಎಲ್ಲಿದೇನೆ? ಆಗಾಗ್ಗೆ ಉಪನ್ಯಾಸಗಳನ್ನು ಹೇಳುವ ಕೇಳುವ ಚಟವು ಹೆಚ್ಚಾಗಿರುವ ನನಗೆ ಅದೇ ಕನಸೇ ಆಗಿರಬಹುದೆ? ಇಲ್ಲ ನಾನು ಎಂದಿನಂತೆ, ಇಗೊ ನಿಜವಾಗಿಯೇ ಚೀಲವನ್ನು ತೆಗೆದುಕೊಂಡು ಬಂದಿದೇನೆ. ಇದೇ ಟೌನುಹಾಲಿನ ರಸ್ತೆ ಇಗೊ, ಮೋಟುಗೋಡೆಯ ಕಾಂಪೌಂಡು ಎಂದಿನಂತೆ ಕಾಣುತ್ತಿದೆ; ಎಂದಿನಂತೆಯೇ ಈ ಕತ್ತೆಗಳು ಟೌನು ಹಾಲಿನ ಮುಂಗಡೆಯೇ ಇವೆ. ಸರಿ, ಸರಿ! ಟೌನುಹಾಲಿನಲ್ಲಿ ಹಿಂದೆ ಎಷ್ಟೋ ಸಲ ಉಪನ್ಯಾಸಗಳು ಆಗಿರುತ್ತವೆ; ಅವುಗಳಲ್ಲಿ ನಾನೂ ಭಾಗಿಯಾಗಿದ್ದೇನು. ನನಗೆ ಉಪನ್ಯಾಸದ ಹುಚ್ಚಿನಿಂದ ಅದೇ ಕಲ್ಪನೆ ಮನಸ್ಸಿಗೆ ಬಂದಿದೆ. ನನ್ನೆದುರಿಗೆ ನಿಂತಿರುವದು ಮುದಿಕತ್ತೆಯಲ್ಲವೆ? ಇದು ಮಾತಾಡುವದೆಂದರೇನು? ಯಾರೋ ಹತ್ತಿರದ ಮನೆಯಲ್ಲಿ ಮಾತಾಡಿರಬೇಕು. ಅದನ್ನೇ ಹೀಗೆಂದು ನಾನು ಭ್ರಾಂತಿಪಟ್ಟಿರಬೇಕು! ಆದರೆ ಒಂದೇ ಯೋಚನೆ. ಇಲ್ಲಿ ಯಾರೊಬ್ಬರ ಸುಳಿವೂ ಇಲ್ಲ, ನಿಶ್ಯಬ್ದವಾಗಿದೆ. ಅಂಗಡಿ ಮನೆಗಳೆಲ್ಲ ಬಾಗಿಲು ಹಾಕಿವೆ. ಕತ್ತೆಯ ಕಡೆಯಿಂದ ಮನುಷ್ಯರ ಧ್ವನಿ ಬಂದದ್ದು ಹೇಗೆ? ಈಗ ನೋಡಿದರೆ ನಾನು ಎಂದಿಗಿಂತ ಸ್ವಲ್ಪ ಮುಂಚಿತವಾಗಿಯೇ ಬಂದಂತಿದೆಯಲ್ಲ! ನಿದ್ರೆಯ ಮಬ್ಬಿಗೆ ಇಂಥ ಭ್ರಾಂತಿಯು ನನ್ನನ್ನು ಕವಿದುಕೊಂಡಿರಬಹುದೆ?" ಹೀಗೆಲ್ಲ ನನ್ನೊಳಗೇ ಗುಣಿಸಿಕೊಳ್ಳುವಷ್ಟರೊಳಗೆ ಆ ಮುದಿಕತ್ತೆ ಮತ್ತೊಮ್ಮೆ "ಮಹನೀಯರೆ!" ಎಂದಿತು.
    ಈ ಸಲ ಯಾವ ಸಂಶಯವೂ ಇರಲಿಲ್ಲ ಮಾತಾಡಿದ್ದು ಕತ್ತೆಯೇ "ಸರಿ, ಹೇಗಿದ್ದರೂ ಹೊತ್ತಾಗಿಲ್ಲ ನಡೆಯುವದನ್ನೆಲ್ಲ ನೋಡಿಯೇ ಬಿಡೋಣ" ಎಂದು ಮೂಡಗಡೆಯ ಮೋಟುಗೋಡೆಯ ಹತ್ತಿರ ಸ್ವಲ್ಪ ಮರೆಯಾಗಿ ಕೂತು ಕೊಂಡೆನು. ಕತ್ತೆಯು ನಿಜವಾಗಿಯೂ ಉಪನ್ಯಾಸಕ್ಕೇ ಹೊರಟುಬಿಟ್ಟತು. "ಹಾಗಾದರೆ ಮುಂದುಗಡೆ" ಕುಳಿತಿರುವ ಕತ್ತೆಗಳು ಸಭಿಕರೆಂದಾಯಿತು! ಅವು ಈ ಭಾಷಣವನ್ನು ಕೇಳುವಡಕ್ಕೆಂದೇ ಕಿವಿಗಳನ್ನು ನಿಮಿರಿಸಿಕೊಂಡಿವೆಯೆ? ಉಪನ್ಯಾಸಕಾಲದಲ್ಲಿ ಮನುಷ್ಯರಂತೆ ಅವು ಗುಜುಗುಟ್ಟದೆ ಹೀಗೆ ಆಲೈಸುತ್ತಿರುವದೊಂದು ವಿಶೇಷವೇ ಸರಿ ಅದಿರಲಿ ಈ ದಿನ ಈ ಉಪನ್ಯಾಸವನ್ನು ಕೇಳುವದಕ್ಕೆ ಕುಳಿತಿರುವ ನಾನೂ ಈ ಗಾರ್ದಭಸಮಾಜಕ್ಕೆ ಸದಸ್ಯನಾದಂತೆಯೋ ಏನು?" ಎಂದು ಸ್ವಲ್ಪ ನಾಚಿಕೆಯಿಂದ ಅವಿತುಕೊಂಡೇ ಕೇಳುವದಕ್ಕೆ ಸಜ್ಜಾದೆನು.
    "ತಾವುಗಳೆಲ್ಲರೂ ನನ್ನಂತೆಯೇ ಕರ್ದಮಋಷಿಗಳ ಶಾಪದಿಂದ ಈ ಜನ್ಮವನ್ನು ಪಡೆದಿರುತ್ತೀರೆಂಬುದು ನನ್ನ ನಾಲಗೆಯಲ್ಲಿ ಹೊರತೋರಿಕೊಂಡಿರುವ ಮನುಷ್ಯವಾಣಿಯಿಂದಲೇ ನನಗೆ ಮನದಟ್ಟಾಗಿರುತ್ತದೆ. ಈ ದಿವಸ ನಮಗೆಲ್ಲರಿಗೂ ವಿಶಾಪವಾಗಿರುತ್ತದೆ. ಇನ್ನು ನಾವು ಈ ಗಾರ್ದಭಕಾಯವನ್ನು ತ್ಯಜಿಸಿ ಮತ್ತೆ ಮನುಷ್ಯಶರೀರವನ್ನೇ ತೆಗೆದುಕೊಳ್ಳುವೆವು; ಆದರೆ ಆ ಋಷಿಗಳ ಅಪ್ಪಣೆಯಂತೆ ನಾವುಗಳು ಈ ಭೂಮಂಡಲದ ಬೇರೆಬೇರೆಯ ಭಾಗಗಳಲ್ಲಿ ದೇಹಧಾರಿಗಳಾಗಬೇಕಾಗಿವೆ ಇನ್ನು ಮುಂದೆ ನಮ್ಮ ಕುಲ, ವರ್ಣ, ಭಾಷೆ, ವೇಷ, ಆಹಾರ, ವಿದ್ಯಾಭ್ಯಾಸಕ್ರಮ ಮುಂತಾದವುಗಳೆಲ್ಲ ನಾವು ಜನಿಸುವ ಆಯಾ ರಾಷ್ಟಕ್ಕೆ ತಕ್ಕಂತೆ ಇರುವವು ಆದರೇನು? ನಮ್ಮ ಮನಸ್ಸಿನ ವಾಸನೆಯು ಬದಲಾಯಿಸುವಹಾಗಿಲ್ಲ ಅದ್ದರಿಂದ ಆಯಾ ದೇಶದಲ್ಲಿ ನಾವು ಕೈಕೊಳ್ಳಬೇಕಾಗಿರುವ ಕಾರ್ಯಕ್ರಮವು ಯಾವುದೆಂಬುದನ್ನು ಋಷಿವರ್ಯರ ಇಚ್ಛೆಯಂತೆ ತಮಗೆ ಸಂಕ್ಷೇಪವಾಗಿ ತಿಳಿಯಪಡಿಸುವೆನು.
    "ನಾವು ಹಿಂದೆ ಮನುಷ್ಯರಾಗಿದ್ದಾಗ ಒಬ್ಬರನ್ನೊಬ್ಬರು "ಕತ್ತೆ" ಎಂದು ಬಯ್ಯುತ್ತಿದ್ದೆವು. 'ಕತ್ತೆ ಮಗನು', 'ಕತ್ತೆಯ ಹಾಲುಕುಡಿದವನು', 'ಕತ್ತೆಯಂತೆ ತಿಂದು ಕೆಡಿಸಿದ ಹೊರಳಿಯೂ ಕೆಡಿಸಿದ', 'ಕತ್ತೆಯ ಹಾಗೆ ಬಿದ್ದುಕೊಂಡಿದಾನೆ' ಎಂದು ಮುಂತಾಗಿ ಬಯ್ಗುಳಕ್ಕೆ ಕತ್ತೆಯ ಹೆಸರನ್ನು ಆಗಿಂದಾಗ್ಗೆ ತೆಗೆದುಕೊಳ್ಳುತ್ತಿದ್ದೆವು. ದಯಾಳುಗಳಾದ ಕರ್ದಮಋಷಿಗಳು ಮಾನವನಿಗೆ ನಿಜದ ಅರಿವಾಗಲಿ ಎಂದು ನಮ್ಮಗಳಿಗೆ ಶಾಪವನ್ನು ಕೊಟ್ಟರು. 'ನೀವು ಕೆಲವು ಕಾಲ ಕತ್ತೆಗಳಾಗಿ ಹುಟ್ಟಿ ಆ ಪ್ರಾಣಿಗಳ ಜೀವನದ ಸುಖದುಃಖಗಳನ್ನು ಮರ್ಮಗಳನ್ನೂ ನೇರಾಗಿ ಕಂಡುಕೊಂಡು ಮತ್ತೆ ಮನುಷ್ಯಯೋನಿಯಲ್ಲಿ ಜನಿಸಿರಿ!' ಎಂದು ವಿಶಾಪವನ್ನು ಕೊಟ್ಟರು. ಇಷ್ಟು ನಿಮಗೆಲ್ಲ ಈಗಲೂ ನೆನಪಿನಲ್ಲದೆ ಎಂದು ನಂಬುತ್ತೇನೆ. ಏಕೆಂದರೆ ಕತ್ತೆಯ ಜನ್ಮದಲ್ಲಿಯೂ ಪೂರ್ವಜನ್ಮದ ಸ್ಮರಣೆಯಿರುವಂತೆ ಆ ಋಷಿವರ್ಯರು ನಮಗೆ ಅನುಗ್ರಹಿಸಿದ್ದರು. ನನಗಂತೂ ಆ ಮಹತ್ಮರು ಆಡಿದ ನುಡಿಗಳು ಈಗ ಇಲ್ಲಿಯೇ ಆಡಿದಂತೆ ಕಾಣಿಸುತ್ತವೆ. ಅವರು ವಿಶೇಷವಾಗಿ ನನಗೆ ಇತ್ತಿದ್ದ ಅಣತಿಯನ್ನು ಇಂದು ನಾನು ನಡೆಯಿಸ ಬೇಕಾಗಿದೆ 'ನಿಮಗೆ ವಿಶಾಪವಾಗುವ ದಿನ ನೀವೆಲ್ಲರೂ ಒಂದಾನೊಂದು ಕ್ಷೇತ್ರದಲ್ಲಿ ನಿರ್ಮಿತವಾಗುವ ಟವನ್ ಹಾಲಿನ ಮುಂದುಗಡೆ ಸೇರಿರುವಿರಿ. ಆಗ ರಾತ್ರೆ ಸರಿಹೊತ್ತಿನಲ್ಲಿ ನೀನು ಮನುಷ್ಯವಾಣಿಯಿಂದ ನಿನ್ನ ಜೊತೆಯ ಕತ್ತೆಗಳಿಗೆ ತಿಳಿವಳಿಕೆ ಹೇಳುವೆ' ಎಂದು ಆ ಸರ್ವಜ್ಞಕಲ್ಪರು ಹೇಳಿದ್ದರು. ಆ ಭವಿಷ್ಯವು ಈಗ ರೂಪಗೊಂಡಿರುತ್ತದೆ. ನನ್ನ ಮನವಿಯನ್ನು ತಾವೆಲ್ಲರೂ ದಯವಿಟ್ಟು ಲಾಲಿಸಬೇಕು."
    ಪಾಠಕ ಮಹಾಶಯ, ಈ ಮಾತು ಮುಗಿಯುತ್ತಲೂ ಮುದಿಕತ್ತೆ ಸ್ವಲ್ಪ ಹೊತ್ತು ಸುಮ್ಮನಾಯಿತು. ನಾನು "ಎಲೆಲಾ, ಇದೇನು? ಈಗ ಇನ್ನೂ ಹನ್ನೆರಡು ಘಂಟೆಯೇ? ಈಗ ನನಗೆ ಕಾಣಿಸುತ್ತಿರುವದು ಪಿಶಾಚಿಗಳ ಸಭೆ ಯಾಗಿರಲಾರದಷ್ಟೆ?" ಎಂದುಕೊಳ್ಳುತ್ತಾ ನಾನಿದ್ದ ಸ್ಥಳದಿಂದ ಒಂದಿಷ್ಟೂ ಕದಲದೆ ಇದ್ದೆನು ಮೈಯಲ್ಲಿ ಕಟ್ಟು ಬೆವರಿಟ್ಟತು; ಎದೆ ಡವಡವ ಎನ್ನುತ್ತಿತ್ತು.
    ಈಗ ಉಪನ್ಯಾಸವು ಮುಂದುವರಿಯಿತು :
   
    "ನೀವುಗಳು ಇನ್ನು ಮುಂದೆ ಯಾವ ದೇಶದಲ್ಲಿಯೇ ಇರಲಿ, ಜನರು ಮೂಗ ಪ್ರಾಣಿಗಳನ್ನು ಅಸಡ್ಡೆಯಿಂದ ಕಾಣುವದನ್ನು ಸಹಿಸಬೇಡಿರಿ. ಕತ್ತೆ! ನಾಯಿ! ಎಂದು ಜನರು ಬಯ್ಗುಳನ್ನು ಉಪಯೋಗಿಸುವರಲ್ಲವೆ? ಕತ್ತೆಗಳಿಗಿಂತ ತಾವು ಯಾವ ಭಾಗದಲ್ಲಿ ಮೇಲು ಮಟ್ಟದವರೆಂದು ಭಾವಿಸಿರುತ್ತಾರೋ ನಾನರಿಯೆನು. ನಿಮಗೆ ಈಗ ಗಾರ್ದಭವರ್ಗ, ಮಾನವವರ್ಗ ಎರಡರ ಅನುಭವವೂ ಆಗಿರುತ್ತದೆ ನಿಷ್ಪಕ್ಷಪಾತವಾಗಿ ಹೇಳಿರಿ ಶಾರೀರಕದೃಷ್ಟಿಯಿಂದಾಗಲಿ ನೈತಿಕದೃಷ್ಟಿಯಿಂದಾಗಲಿ ಮಾನವನು ಕತ್ತೆಗಿಂತ ಉತ್ತಮನೆಂದು ಹೇಳಬಹುದೆ?
    "ಕತ್ತೆಗಳು ತಿನ್ನುವದು ಏನನ್ನು? ಅವಕ್ಕೆ ಖರ್ಚು ಎಷ್ಟು ತಗಲುತ್ತದೆ? ಒಬ್ಬ ಅಗಸನನ್ನು ಕೇಳಿರಿ. ಅವನು ಕತ್ತೆಯ ಖರ್ಚು, ಎಂದರೇ ನಗುತ್ತಾನೆ. ಕಾಲಿಗೆ ಕಟ್ಟುವ ಹಗ್ಗವನ್ನು ಒಂದು ಬಿಟ್ಟರೆ ಮತ್ತೇತರ ಖರ್ಚು ಅವನಿಗೆ? ಈ ಹಗ್ಗವಾದರೂ ಏತಕ್ಕೆಬೇಕು? ಮನುಷ್ಯರು ಹುಲ್ಲು, ಸೊಪ್ಪು, ಜೊಂಡು - ಇಂಥವುಗಳನ್ನು ಕೊಡ ತಮ್ಮವೆಂದಕೊಂಡು ಅಲ್ಲಿಗೆ ಬರುವ ನಿರಪರಾಧಿಗಳನ್ನು ಹೊಡೆದಟ್ಟಿ ದೊಡ್ಡಿಗೆ ಕೂಡುತ್ತಾರೆ ಅದಕ್ಕಾಗಿ ಕತ್ತೆಗಳ ಕಾಲು ಜೋಡಿಸಿ ಹಗ್ಗ ಕಟ್ಟುವದು!

"ಇನ್ನು ಕತ್ತೆಗಳು ಮಾಡುವ ಕೆಲಸವೇನು? ಬೆಳಗ್ಗಿನಿಂದ ಸಾಯಂಕಾಲದ ವರೆಗೂ ಹೊರೆಗಳನ್ನು ಹೊರುತ್ತಿರುವದು! ಹೀಗೆ ಹೊತ್ತುಹೊತ್ತು ಸಾಕಾಗಿ ಸಾಯಂಕಾಲಕ್ಕೆ ಮನೆಗೆ ಬಂದರೆ ಅವುಗಳಿಗೆ ನಿಲ್ಲುವದಕ್ಕೆ ಸ್ಥಳವೂ ಯಾವುದು? ಅದನ್ನು ನಾನು ಹೇಳಬೇಕಾದದ್ದೇ ಇಲ್ಲ. ಎಲ್ಲಿ ಬಯಲಿದ್ದರೆ ಅಲ್ಲಿ ಎಲ್ಲಿಯಾದರೂ ಒಂದು ಹಾಳುಗೋಡೆಯಿದ್ದರೆ ಅಲ್ಲಿ ಸ್ವಲ್ಪ ನಿಲ್ಲಬಹುದು. ಇನ್ನು ಯಾರೂ ದಡಿತೆಗೆದುಕೊಂಡು ಚಚ್ಚದಿದ್ದರೆ ಮಲಗಲೂ ಬಹುದು! ಚಳಿಯಾಗಲಿ, ಮಳೆಯಾಗಲಿ, ಬಿಸಿಲಾಗಲಿ, ನೆರಳಾಗಲಿ, ಎಲ್ಲಿಯೂ ಒಂದು ಕಡೆ ಕೆಲಸ ವಿಲ್ಲದಿದ್ದಾಗ ಬಿದ್ದುಕೊಂಡಿರುವವು.
    "ಕತ್ತೆಗೆ ಕಾಹಿಲೆ ಬಂತೆಂದಾಗಲಿ, ಅದಕ್ಕೆ ಔಷಧಿಕೊಡಿಸಿದರೆಂದಾಗಲಿ ಮನುಷ್ಯರಲ್ಲಿ ಸುದ್ದಿಯೇ ಇರುವದಿಲ್ಲ. ಒಂದೊಂದು ಸಲ ತಮ್ಮ ಕತ್ತೆ ಎಂದು ತಿಳಿಯುವದಕ್ಕೆ ಅನುಕೂಲವಾಗಿ ಬರೆಹಾಕಿಸುವದೂ ಉಂಟು! 'ಕತ್ತೆ ಬಲ್ಲುದೆ ಹೊತ್ತ ಕತ್ತುರಿಯ ಪರಿಮಳವ' ಎಂದಿದಾನೆ ಒಬ್ಬ ಕವಿಮಹಾನುಭಾವ! ಆದರೆ ಕಸ್ತೂರಿಯ ಪರಿಮಳವನ್ನು ಮೂಸುತ್ತಾ ಕತ್ತೆಗಳೂ ಮನುಷ್ಯರಂತೆಯೇ ಕುಳಿತು ಬಿಟ್ಟಿದ್ದರೆ, ಅವರ ಮೂಟೆಗಳನ್ನು ಯಾರು ಹೊರುತ್ತಿದ್ದರೋ ನಾ ಕಾಣೆ! ಯಾವ ಕಾಹಿಲೆ ಇಲ್ಲದಿದ್ದರೂ ಆಯಸ್ಸು ಮುಗಿದು ಒಂದು ದಿನ ಸಾಯಲೇಬೇಕಷ್ಟೆ, ಆದರೆ ಆಗ ಮನುಷ್ಯನು ತನಗೆ ಅಷ್ಟೊಂದು ಉಪಕಾರವನ್ನುಮಾಡಿದ್ದ ಈ ಪ್ರಾಣಿಗೆ ಮಾಡುವ ಅಂತಿಮಕ್ರಿಯೆ ಯಾವದು? "ಕತ್ತೆಸತ್ತರೆ ಹಾಳುಗೋಡೆ" ಎಂಬ ಒಂದು ಗಾದೆಯನ್ನು ಮಾಡಿಕೊಂಡಿದಾರೆ, ಮನುಷ್ಯರು! ಪಾಪ! ಆ ಶರೀರ ವನ್ನು ಸ್ವಲ್ಪ ದೂರಕ್ಕೆ ಎಸೆದರೆ ಅವರ ಕೈಸವೆಯುವದೋ ಏನೋ? ಸತ್ತ ಕತ್ತೆಯನ್ನು ಹೂತವರಿಲ್ಲ, ಸುಟ್ಟವರಿಲ್ಲ; ಆದರೆ ಕತ್ತೆ ಸತ್ತನಾತ!' ಎಂದು ಮುಗು ಹಿಡಿದುಕೊಂಡು ಮುಸುಡಿತಿರುಹುವವರು ಹಲವರು!
    "ಕತ್ತೆಗಳ ನಡೆನುಡಿಗಳೆಂದರೆ ಮನುಷ್ಯರಿಗೆ ಆಗದು. ಕತ್ತೆಯ ಹಾಗೆ ಕಿರಿಚುತ್ತಾನೆ,' 'ಕತ್ತೆ ಒದ್ದಹಾಗೆ ಒದೆಯುತ್ತಾನೆ,' 'ಕತ್ತೆಯಂತೆ ಹೊರಳಾಡುತ್ತಾನೆ,''ಕತ್ತೆಯಹಾಗೆ ಬಿದ್ದುಕೊಂಡಿದಾನೆ' -ಎಂದು ಒಬ್ಬರನ್ನೊಬ್ಬರು ಗೇಲಿ ಮಾಡುವರು. ಆದರೆ ಸ್ವಲ್ಪ ಒಳಹೊಕ್ಕು ನೋಡಿದರೆ ಗುಟ್ಟು ಹೊರಬಿದ್ದೀತು ಮನುಷ್ಯರಿಗೆ ತಮ್ಮ ತಪ್ಪುಗಳನ್ನು ಮರೆಮಾಚುವದಕ್ಕೆ ಕತ್ತೆಗಳನ್ನು ಹಳಿಯುವದೊಂದೇ ಸುಲಭೋಪಾಯವಾಗಿರುವಂತೆ ಕಾಣುತ್ತದೆ. ಇಲ್ಲದಿದ್ದರೆ, ಅಷ್ಟೊಂದೇಕೆ, ಅವರಿಗೆ ಆ ಬಡಪ್ರಾಣಿಗಳ ಮೇಲೆಯೇ ಕಟಾಕ್ಷ?
    "ಕತ್ತೆಗಳು ಕಿರುಚುತ್ತವೆಯಂತೆ! ಅವುಗಳ ಧ್ವನಿಯು ಸ್ವಲ್ಪ ಎತ್ತರವಾಗಿರುವದು ನಿಜ, ಆದರೆ ಈ ಟವನ್ ಹಾಲಿನನಲ್ಲಿ ಆಗಾಗ್ಗೆ ಆಗಿರುವ ಚರ್ಚೆಗಳಲ್ಲಿ, ಪೇಟೆಗಳಲ್ಲಿಯೂ ಸಂತೆಗಳಲ್ಲಿಯೂ ಆಗುವ ವ್ಯಾಪಾರಗಳಲ್ಲಿ, ಕೋರ್ಟುಕಛೇರಿಗಳಲ್ಲಿ, ಮತ್ತು ಅನ್ನಸಂತರ್ಪಣೆಗಳಲ್ಲಿ, ಮನುಷ್ಯರು ಪಾಪ, ಎಷ್ಟು ಮೆಲ್ಲಗೆ ಮಾತಾಡುತ್ತಾರೆ! ಹಣಕಾಸಿಗಾಗಿ, ಹೊಲಮನೆಗಾಗಿ, ಅಧಿಕಾರಕ್ಕಾಗಿ, ಮಾನ ಮರ್ಯಾದೆಗಾಗಿ ಮನುಷ್ಯನು ಎಲ್ಲೆಲ್ಲಿ, ಎಷ್ಟು ಸಲ ಹೇಗೆ ಹೇಗೆ ಕಿರಿಚುತ್ತಾನೆ, ನೆನಪಿಸಿಕೊಳ್ಳಿರಿ. ಆಗ ಗೊತ್ತಾಗುತ್ತದೆ, ಕಿರಿಚುವವರು ನಿಜವಾಗಿ ಯಾರೆಂಬುದು ಕತ್ತೆಗಳು ಹಾಗೇನಾದರೂ ಕಿರಿಚಿದ್ದುಂಟೇನು?
    "ಇನ್ನು ಕತ್ತೆಗಳ ಒದೆತ. ಮನುಷ್ಯರು ಕಾಲಿನಿಂದ ಒದೆಯುವದು ವಾಡಿಕೆಯಿಲ್ಲ ನಿಜ; ಆದರೆ ಅವರ ಕಾಲು ಕತ್ತೆಗಳ ಕಾಲಿನಷ್ಟು ಗಟ್ಟಿಯಾಗಿಯೂ ಇಲ್ಲ ಕತ್ತೆಗಳು ಯಾವಾಗಲೋ ಒಂದು ಸಲ, ಸಹಿಸಲಾರದಷ್ಟು ಹಿಂಸೆಯಾದಾಗ ಕೋಪವು ಎದ್ದುಕೊಂಡಾಗ, ಹಿಂಗಾಲುಗಳಿಂದ ಒಮ್ಮೆ ಝಾಡಿಸಿ ಮುಂದಕ್ಕೆ ಹೋಗಿಬಿಡುತ್ತವೆ ಆದರೆ ಮನುಷ್ಯರೊ? ಒಬ್ಬರನ್ನೊಬ್ಬರು ಚಿತ್ರಹಿಂಸೆಮಾಡುವರು! ಬಯ್ಯವದು, ಹೊಡೆಯುವದು, ಇರಿಯುವದು ಇಂಥ ನೇರಾದ ಕೃತಿಗಳು ಅವರಲ್ಲಿ ಅಪರೂಪ ಅವರು ತುಂಬ ಹೇಡಿಗಳಾದ್ದರಿಂದ ಮತ್ತೊಬ್ಬರ ವಸ್ತುಗಳನ್ನು ಕಳುವದು, ಅವನ್ನು ತಮ್ಮದೆನ್ನುವದು, ಆಹಾರವಸ್ತುಗಳನ್ನು ತಮಗೆ ಬೇಕಿಲ್ಲದಿದ್ದರೂ ರಾಶಿಹಾಕಿಕೊಂಡು ಮಿಕ್ಕವರನ್ನು ಸಾಯಗೊಳಿಸುವದು, ಬಟ್ಟೆಬರೆಗಳನ್ನು ಪೆಟ್ಟಿಗೆಯಲ್ಲಿಟ್ಟುಕೊಂಡು ಮಿಕ್ಕವರನ್ನು ಚಳಿಯಿಂದ ಗಡಗಡನೆ ನಡುಗುವಂತೆ ಮಾಡುವದು, ದೂರದಿಮದ ಗುಂಡುಹಾರಿಸುವದು, ಬಾಂಬುಗಳನ್ನಿಟ್ಟು ಮನೆಮಾರುಗಳನ್ನು ಉರುಳಿಸುವದು, ಪೈರುಪಚ್ಚೆಗಳನ್ನು ನಾಶಗೊಳಿಸುವದು ಇಂಥ ಕಾರ್ಯಗಳಲ್ಲಿಯೇ ತಮ್ಮ ಕೈಚಳಕವನ್ನು ತೋರಿಸಿಕೊಳ್ಳುವರು! ಕತ್ತೆಗಳು ತಮ್ಮ ಸ್ವಾಭಾವಿಕವಾದ ತಾಳ್ಮೆಯನ್ನು ಬಿಟ್ಟು ಮನೆಗಳಿಗೆ ಮರವು ಮೋಸದಿಂದ ನುಗ್ಗಿ ಸಿಕ್ಕಿದವರನ್ನು ಒದ್ದು ಕೆಡವಿಬಿಡುತ್ತಿದ್ದರೆ, ಆಗ ಗೊತ್ತಾಗುತ್ತಿತ್ತು, ಅಣ್ಣಗಳ ಆಟ! ಆದರೆ ಪಾಪ! ಆ ಸಾತ್ತ್ವಿಕಪ್ರಾಣಿಗಳು ಮನುಷ್ಯರು ತಮ್ಮನ್ನು ಎಷ್ಟು ಗೋಳುಗುಟ್ಟಿಸಿದರೂ ಅವರಿಗೆ ಪ್ರತ್ಯುಪಕಾರವನ್ನೇ ಮಾಡುತ್ತಿರುವವು!
    "ಕತ್ತೆಗಳು ತಮ್ಮ ಮೈಕಡಿತವನ್ನು ತಪ್ಪಿಸಿಕೊಳ್ಳುವದಕ್ಕೆ ಮಣ್ಣಿನ ಮೇಲೋ ಜನರು ಬೀದಿಯಲ್ಲಿ ಚೆಲ್ಲಿರುವ ಬೂದಿಯಮೇಲೋ ಹೊರಳಾಡಿದರೆ ಪಾಪ! ಮನುಷ್ಯರಿಗೆ ಬಹಳ ತೊಂದರೆಯಾಗಿರಬೇಕು! ಆದ್ದರಿಮದಲೇ 'ಕತ್ತೆ ಹೊರಳಾಡಿದಂತೆ" ಎಂದು ಅವರು ಒಬ್ಬರನ್ನೊಬ್ಬರು ಹಂಗಿಸುವರು ತಾವು ಯಾವ ಕಷ್ಟವನ್ನೂ ಮಾಡದೆ ಮೂಗುಪ್ರಾಣಿಗಳಿಂದ ಹಗಲೆಲ್ಲ ದುಡಿಸಿಕೊಂಡು ರಾತ್ರೆ ಚೊಕ್ಕಭೋಜನವನ್ನು ಮಾಡಿ ಮಂಚದಮೇಲೆ ಲೇಪುಹಾಕಿಕೊಂಡು ಮಲಗಿ ನಿದ್ರೆಬಾರದ್ದರಿಂದ ಅತ್ತಿತ್ತ ಹೊರಳಾಡುವ ಮನುಷ್ಯರನ್ನು ಕತ್ತೆಗಳಿಗೆ ಹೋಲಿಸುವದೆ! ದುಡಿದುದುಡಿದು ಆಯಾಸಪರಿಹಾರಕ್ಕಾಗಿ ಎಲ್ಲೆಂದರೆ ಅಲ್ಲಿ ಮಲಗಿ ನಿದ್ರಿಸುವ ಕತ್ತೆಗಳಂತೆ ಬಿದ್ದುಕೊಳ್ಳುವದಕ್ಕೆ ಮನುಷ್ಯನಿಗೆ ಹಣೆಯಲ್ಲಾದರೂ ಬರೆದಿದೆಯೆ?
    "ಮಹನೀಯರೆ, ಇನ್ನು ಸಾಕು. ಇಂದು ನಾವು ಕತ್ತೆಗಳ ಶ್ಲಾಘನೆಗಲ್ಲ, ಇಲ್ಲಿ ಸೇರಿರುವದು ಮಾನವನು ಕತ್ತೆಗಳಂಥ ಮೂಗುಜಂತುಗಳಲ್ಲಿ ತೋರಿಸುತ್ತಿರುವ ದೌರ್ಜನ್ಯವನ್ನು ಖಂಡಿಸುವದಕ್ಕೆ ಇದು ಕಾಲವಲ್ಲ, ಸ್ಥಳವೂ ಅಲ್ಲ ತಾವೆಲ್ಲರೂ ಇಷ್ಟನ್ನು ನೆನಪಿಡಿರಿ ಇನ್ನು ಮುಂದೆ ನೀವು ಬೇರೆಬೇರೆಯ ದೇಶಗಳಲ್ಲಿ ಹುಟ್ಟುವಿರಷ್ಟೆ, ಅಲ್ಲೆಲ್ಲ ಪ್ರಾಣಿಹಿಂಸೆಯನ್ನೂ ಪ್ರಾಣಿಗಳಲ್ಲಿ ಅನಾದರವನ್ನೂ ಸರ್ವಪ್ರಯತ್ನಗಳಿಂದಲೂ ಸಂಪೂರ್ಣವಾಗಿ ನಿಲ್ಲಿಸುವೆವೆಂದು ನನ್ನೆದುರಿಗೆ ಆಣೆಮಾಡಿರಿ, ಮನುಷ್ಯನು ಕೀಳುಪ್ರಾಣಿಗಳೆಂದು ಕರೆಯುತ್ತಿರುವ ಪ್ರಾಣಿಗಳಲ್ಲಿ ಅವನಿಗಿಂತ ಎಷ್ಟೋ ಪಾಲು ಹೆಚ್ಚಿನ ಕಷ್ಟಸಹಿಷ್ಣುತೆಯೂ ತಾಳ್ಮೆಯೂ ಸೈರಣೆಯೂಪರೋಪಕಾರಬುದ್ಧಿಯೂ ಇರುತ್ತವೆಯೆಂದು ಜನರಿಗೆಲ್ಲ ಮನಗಾಣಿಸುವದಕ್ಕೆ ನೀವು ಇನ್ನುಮೇಲಾದರೂ ಮನಃಪೂರ್ವಕವಾಗಿ ಯತ್ನಿಸುವಿರಾ? ದಯವಿಟ್ಟು ಹೇಳಿರಿ!"
    ಇಷ್ಟು ಮಾತುಗಳು ಮುದಿಕತ್ತೆಯ ಬಾಯಿಂದ ಬಂದವೊ ಇಲ್ಲವೊ, ಅಲ್ಲಿದ್ದ ಕತ್ತೆಗಳೆಲ್ಲವೂ ಬೇರೆಬೇರೆಯ ದೇಶದ ಉಡುಪಿನ ಮನುಷ್ಯರ ಆಕಾರವನ್ನು ಧರಿಸಿದವು. ಆ ಮನುಷ್ಯರೆಲ್ಲರೂ ಒಂದೇ ಕಂಠದಿಂದ ಗಟ್ಟಿಯಾಗಿ "ಜಯ ಜಯ ಕರ್ದಮಮಹರ್ಷೇ, ಜಯಜಯ!" ಎಂದು ಮಾಡಿದ ಜಯಘೋಷವು ಗಗನವನ್ನು ಭೇದಿಸಿಕೊಂಡು ಮೇಲಕ್ಕೇರಿತು! ಸ್ವಲ್ಪಹೊತ್ತು ಸುಮ್ಮನಿದ್ದು ಬಳಿಕ ಇಂಪಾದ ಧ್ವನಿಯಿಂದ ಈ ಪದವನ್ನು ಹಾಡಿದರು :
ರಾಮ ರಾಮ ರಾಮ ರಾಮ ರಾಮ ರಾಮ ಎನ್ನಿರಿ |
ಪ್ರೇಮದಿಂದ ಸರುವರನ್ನು ಕಾಂಬೆವೆಲ್ಲ ಬನ್ನಿರಿ ||ಪ||
ಜಾತಿ ವರ್ಣ ಕುಲಗಳೆಂಬ ಹೆಮ್ಮೆಯನ್ನು ದೂಡಿರಿ
ಮಾತು ಬರದ ಜಂತುಗಳನು ಹಿಂಸೆಗೈಯಬೇಡಿರಿ |
ಪ್ರೀತಿಯಿಂದಲಿನ್ನು ಸರುವ ಭೂತಗಳನು ನೋಡಿರಿ
ನೀತಿಯಿದನೆ ನಂಬಿ ಸರ್ವರಾತುಮನೊಡಗೂಡಿರಿ ||1||
ಕತ್ತೆ ನಾಯಿ ಹಂದಿ ಎಮ್ಮೆ ಎತ್ತು ಕೋಣ ಎಂಬಿರಿ
ಎತ್ತ ನೋಡಲತ್ತ ಪುರುಷೋತ್ತಮನೇ ನಂಬಿರಿ |
ನಿತ್ಯವಲ್ಲ ಮನುಜಜನ್ಮ ವ್ಯರ್ಥಗೊಳಿಸಬೇಡಿರಿ
ಸತ್ಯ ಸರ್ವಮೈತ್ರಿಯೊಂದೆ ನಿತ್ಯವಿದರೊಳಾಡಿರಿ ||2||
ಹಿಂಸೆ ಹಗೆಯು ಕವಡು ಮೋಸ ಸಟೆಯು ಸುಳಿಯಗೊಡದಿರಿ
ಮಾಂಸ ಮದ್ಯ ಮತ್ಸ್ಯ ಮಾನಿನಿಯ ಮಾತ ತೊಡೆಯಿರಿ |
ಪಾಂಸುವೆಂದು ಪರರ ಸೊತ್ತ ಪದದಿ ಕೊಡಹಿ ನಡೆಯಿರಿ
ಹಂಸಮಂತ್ರ ಲೋಕಶಂಕರೋಕ್ತಿಯನ್ನೆ ನುಡಿಯಿರಿ ||3||
    ಈ ಉಪಸಂಹಾರದ ಪದವನ್ನು ಹಾಡಿ ಆ ಮಹನೀಯರೆಲ್ಲರೂ ತೇಜಪುಂಜರಾಗಿ ಆಕಾಶಮಾರ್ಗದಲ್ಲಿ ಮೇಲಕ್ಕೆ ಹಾರಿಹೋಗುವದನ್ನು ಕಂಡು ನನಗೆ ಏನೂ ತೋಚದಂತಾಯಿತು. ಬೆರಗಾಗಿ ಕಣ್ಣಿಗೆ ಕಾಣುವಷ್ಟು ದೂರದವರೆಗೆ ಅವರನ್ನೇ ಎವೆಯಿಕ್ಕದೆ ನೋಡುತ್ತಿದ್ದೆನು. ನಾನು ಸುಮ್ಮನೆ ಇರಬೇಕೆಂದೇ ದೃಢ ಸಂಕಲ್ಪವನ್ನು ಮಾಡಿಕೊಂಡಿದ್ದರೂ ನನ್ನ ಬಾಯಿಂದಲೂ "ರಾಮ ರಾಮ ರಾಮ ರಾಮ ರಾಮ ಎನ್ನಿರಿ | ಪ್ರೇಮದಿಂದ ಸರ್ವರನ್ನು ಕಾಂಬೆವೆಲ್ಲ ಬನ್ನಿರಿ" ಎಂಬ ಪಲ್ಲವಿಯು ಮತ್ತೆ ಮತ್ತೆ ಬರುತ್ತಿತ್ತು |
    ಕತ್ತೆಗಳು ಮನುಷ್ಯರ ವೇಷವನ್ನು ತೊಟ್ಟು ರಾಮಸ್ಮರಣೆಯ ಪದವನ್ನು ಹಾಡಿ ಅದೃಶ್ಯರಾದದ್ದಕ್ಕಿಂತಲೂ ಆ ದಿನ ನಾನು ಕೇಳಿದ ಉಪನ್ಯಾಸದ ವಿಷಯವು ನನಗೆ ಅತ್ಯದ್ಭುತವಾದ ದೈವಲೀಲೆಯೆಂದು ಮನಸ್ಸಿಗೆ ತೋರುತ್ತಿತ್ತು. "ಎಲ ಎಲಾ! ಇದೇನು? ನಾವು ನಿಜವಾಗಿಯೂ ಭಗವದ್ಗೀತೆಯ ಅವತರಿಸಿರುವ ಭರತಖಂಡದ ನಿವಾಸಿಗಳಾದ ಮನುಷ್ಯರೆ? ಬ್ರಾಹ್ಮಣನಲ್ಲಿ, ಗೋವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ, ಚಂಡಾಲನಲ್ಲಿ - ಎಲ್ಲರಲ್ಲಿಯೂ ಸಮಬುದ್ಧಿಯಿರಬೇಕೆಂದು ಬೋಧಿಸಿದ ಶ್ರೀಕೃಷ್ಣಭಗವಂತನ ಉಪದೇಶವು ನಮ್ಮ ಪಾಲಿಗೇನಾಯಿತು? ಸರ್ವಭೂತಹಿತರಾಗಿರಬೇಕೆಂಬ ಭಾವನೆಯೆಲ್ಲಿಹೋಯಿತು? ನಾವೇಕೆ ಮೂಗಜಂತುಗಳಲ್ಲಿ ಇಷ್ಟು ನಿರ್ಘೃಣರಾದೆವು?" ಎಂದು ಗಟ್ಟಿಯಾಗಿ ನಾನು ನನಗೇ ಹೇಳಿಕೊಂಡೆನು.
    ಆದರೆ ಇಷ್ಟೆಲ್ಲ ಗದ್ದಲವಾದರೂ ನೆರೆಮನೆಯವರು ಯಾರೊಬ್ಬರೂ ಕದ ತೆರೆಯಲಿಲ್ಲವಲ್ಲ ಇದೇನಿರಬಹುದು? ಎಂದು ನಾನು ಸ್ವಲ್ಪ ಕತ್ತು ತಿರುಗಿಸಿ ಸುತ್ತಲೂ ಇದ್ದ ಮನೆಗಳ ಕಡೆಗೆ ತಿರುಗಿದೆನು. ವಾಚಕರೆ, ಇಷ್ಟರಲ್ಲಿ ಅದು ಮತ್ತೊಂದು ಚಮತ್ಕೃತಿಯನ್ನು ತಮಗೆ ಈಗ ಹೇಳಬೇಕಾಗಿದೆ. ನನಗೆ ಈಗ ನಿಜವಾಗಿ ಎಚ್ಚರವಾಯಿತು. ನೋಡಿದರೆ ನಾನೊಬ್ಬನೇ ನನ್ನ ಕೋಣೆಯಲ್ಲಿ ಮಲಗಿದ್ದೆನು. ಈಗತಾನೆ ಎದ್ದು ಕುಳಿತುಕೊಂಡಿದೇನೆ ಒಂದು ಕಡೆಯಲ್ಲಿ ಸಣ್ಣಗೆ ಬೆಡ್ ಲ್ಯಾಂಪು ಉರಿಯುತ್ತಾ ಇದೆ; ಗಡಿಯಾರದಲ್ಲಿ ಈಗ ತಾನೆ ನಾಲ್ಕು ಘಂಟೆಯಾಗಿದೆ ನಾನು ನಿತ್ಯವೂ ಹೇಳುತ್ತಿದ್ದ "ರಾಮ ರಾಮ ರಾಮ ರಾಮ ರಾಮ ರಾಮ ಎನ್ನಿರಿ| ಕ್ಷೇಮವಿತ್ತು ಪೊರೆವ ರಾಮನಾಮವನ್ನು ಬಿಡದಿರಿ ||ಪ||.... ಎಂಬ ಪದದ ಭಾಗವು ಮೇಲೆಕಂಡ ಪದವಾಗಿ ಪರಿಣಮಿಸಿ ನನ್ನ ಕನಸಿನಲ್ಲಿ ನನ್ನ ಬಾಯಿಂದಲೇ ಬಂದಿರಬೇಕೆಂಬುದು ಈಗ ವ್ಯಕ್ತವಾಯಿತು. ಆದರೆ ಆಗ ಕನಸು ಎಂಬುದು ಒಂದಿಷ್ಟೂ ಮನಸ್ಸಿಗೆ ಹೊಳೆಯಲಿಲ್ಲವಲ್ಲ! ಈಗಲೂ ನನಗೆ ಇದೆಲ್ಲ ನಿಜವಾಗಿಯೇ ನಡೆದಂತೆಯೇ ತೋರುತ್ತದೆಯಲ್ಲ! ಇದಕ್ಕೇನು ಹೇಳುವದು? ಮಾಗಿಯ ಕನಸು ಹೇಗೆಹೇಗೋ ಆಗುವದುಂಟು ಆದರೆ ಇಷ್ಟೊಂದು ವ್ಯವಸ್ಥಿತವಾಗಿ ನನಗೆ ಎಂದಿಗೂ ಕನಸಾಗಿರಲಿಲ್ಲ ಇದೇನು..... ಯಾರು ಬಲ್ಲರು?

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ