ಹಿಂದೂ ದೇವಾಲಯಗಳಲ್ಲಿ ಪ್ರಧಾನದ್ವಾರಗಳ ಹಾಗೂ ಗರ್ಭಗೃಹಗಳ ಮೇಲೆ ಗೋಪುರ

ಹಿಂದೂ ದೇವಾಲಯಗಳಲ್ಲಿ ಪ್ರಧಾನದ್ವಾರಗಳ ಹಾಗೂ ಗರ್ಭಗೃಹಗಳ ಮೇಲೆ ಗೋಪುರಗಳಿರುವದನ್ನು ನಾವೆಲ್ಲರೂ ನೋಡಿರುತ್ತೇವೆ. ಗರ್ಭಗೃಹಗಳ ಮೇಲಿರುವ ಪ್ರಾಸಾದಶಿಖರಗಳನ್ನು 'ವಿಮಾನ'ಗಳೆಂದೂ ಆಗಮಶಾಸ್ತ್ರದಲ್ಲಿ ಕರೆದಿದ್ದಾರೆ. ಈ ವಿಮಾನಗಳ ನಿರ್ಮಾಣದ ಅವಶ್ಯಕತೆ ಏನು? ಎಂಬಿದನ್ನು ವಿಚಾರಮಾಡುವದರಿಂದ ಲಾಭವುಂಟು. ಏಕೆಂದರೆ ಇಂಥ ಕಲಿಗಾಲದಲ್ಲಿಯೂ ಈಗಲೂ ಹೊಸ ಹೊಸ ದೇವಾಲಯಗಳೂ ಗೋಪುರಗಳೂ ನಿರ್ಮಾಣವಾಗುತ್ತಿವೆ. ಇವುಗಳ ಪ್ರಯೋಜನವೇನು?
ಸಾಮಾನ್ಯವಾಗಿ ದೇವಾಲಯಗಳಲ್ಲಿ ಮೂಲವಿಗ್ರಹ ಹಾಗೂ ಉತ್ಸವಮೂರ್ತಿಗಳು ಇದ್ದುಕೊಂಡಿರುವವು. ಸರ್ವವ್ಯಾಪಕನಾದ ಭಗವಂತನಿಗೆ ಇಂಥ ಸ್ಥಾನವು ಮಾತ್ರ ಮಿಸಲು ಎಂಬುದೇನೂ ಇರುವದಿಲ್ಲ. ಅವನು ಎಲ್ಲಾ ಕಡೆಯಲ್ಲಿಯೂ ತುಂಬಿಕೊಂಡು ನಮ್ಮೆಲ್ಲರ ಒಳಗೂ ಇದ್ದುಕೊಂಡಿರುವನಾದರೂ ಅಜ್ಞರಿಗೆ ಅವನ ಅರಿವು ಉಂಟಾಗುವದಕ್ಕಾಗಿ ಸ್ಥಾನವಿಶೇಷಗಳ್ಲಲಿ ಅವನನ್ನು ಆವಾಹಿಸಿ ಪೂಜಿಸುವ ಪದ್ಧತಿಯು ಬೆಳೆದುಬಂದಿದೆ. ಗಾಳಿಯ ನಡುವೆಯೇ ನಾವು ಕುಳಿತಿದ್ದರೂ ಸ್ವಲ್ಪ ಸೆಕೆಯಾದಾಗ ಬೀಸಣಿಗೆಯನ್ನು ಬೀಸಿಕೊಂಡು ಗಾಳಿಯನ್ನು ಅನುಭವಿಸುವಂತೆ ದೇವಾಲಯಗಳಲ್ಲಿಯಾದರೂ ನಮಗೆ ದೇವತಾಮೂರ್ತಿಗಳ ಸನ್ನಿಧಿಯಲ್ಲಿ ಭಗವದ್ ಭಾವನೆಯು ಬರಲೆಂದೂ ಆ ದೇವರನ್ನು ಪೂಜಿಸಿ ನಮಸ್ಕರಿಸಿ ನಾವು ಕೃತಾರ್ಥರಾಗಲೆಂದೂ ದಯೆಯಿಂದ ಋಷಿಮುನಿಗಳು ಈ ಉಪಾಯಗಳನ್ನು ಸೂಚಿಸಿದ್ದಾರೆ. ಇದೇ ದೇವಾಲಯಗಳ ಸ್ಥಾಪನೆಯ ಉದ್ದೇಶವು.
ಇನ್ನು ದೇವಾಲಯಗಳಲ್ಲಿ ಉತ್ಸವಮೂರ್ತಿಯನ್ನು ಸ್ಥಾಪಿಸುವದರ ಉದ್ದೇಶವೇನೆಂದು ನೋಡೋಣ. ಒಬ್ಬ ಭಕ್ತನಿಗೆ ದೈಹಿಕಶಕ್ತತೆಯಿಂದ ಅಥವಾ ದೇವಾಲಯವು ದೂರದಲ್ಲಿದ್ದು ಕಾಲವ್ಯವಧಾನವಿಲ್ಲದ್ದರಿಂದ ದೇವಾಲಯಕ್ಕೇ ಬಂದು ದೇವರ ದರ್ಶನ ಮಾಡಲು ಅವಕಾಶಗಳಿರುವದಿಲ್ಲ-ಎಂದಿಟ್ಟುಕೊಳ್ಳೊಣ. ಅಂಥವನಿಗೂ ಹಾಗೂ ದೇವಾಲಯಪ್ರವೇಶಕ್ಕೆ ಕಾರಣಾಂತರಗಳಿಂದ ಸಾಧ್ಯವಾಗದವರಿಗೂ ಭಗವಂತನ ದರ್ಶನಸಾನ್ನಿಧ್ಯಗಳ ಲಾಭವೂ ಆ ಮೂಲಕ ಭಕ್ತಿಶ್ರದ್ಧೆಗಳೂ ಉಂಟಾಗಲೆಂದು ದೇವರನ್ನೇ ಅಲಂಕರಿಸಿ ಕುರಿತ ದಿನಗಳಲ್ಲಿ ಪಟ್ಟಣದ ಎಲ್ಲಾ ಬೀದಿಗಳಲ್ಲಿಯೂ ಉತ್ಸವಮಾಡುವದು ಪದ್ಧತಿಯಾಗಿರುತ್ತದೆ ಇದರಿಂದ ದೇವಾಲಯದ ಪ್ರಯೋಜನವು ವ್ಯಾಪಕವಾಗಿ ಆಗುವದೆಂದೂ ಹೆಚ್ಚು ಜನರಿಗೆ ಭಗವಂತನಕಡೆಗೆ ದೃಷ್ಟಿಯು ಉಂಟಾಗುವದೆಂದೂ ಶಾಸ್ತ್ರಗಳ ಉದ್ದೇಶವಾಗಿದೆ. ಉತ್ಸವವು-ಉತ್ ಎಂದರೆ ಮೇಲಕ್ಕೆ ಸವ-ಯಜ್ಞರೂಪವಾಗಿದ್ದು ಉದ್ಧರಮಾಡುವ ಶ್ರೇಷ್ಠಕೃತಿಯಾಗಿರುವದು. ಅಮರಕೋಶದಂತೆ ಈ ಪದದ ಅರ್ಥವು ನಮ್ಮ ಸಂತೋಷವನ್ನು ಎತ್ತಿ ಹಿಡಿಯುವದು ಎಂದಾಗುತ್ತದೆ. ಸಂತೋಷವೇ ಆನಂದವು. ಆನಂದವರ್ಧನವೇ ಉತ್ಸವವೆನಿಸುವದು. ಪ್ರತಿಯೊಬ್ಬ ಮಾನವನ ಆತ್ಮವೂ ಒಂದೇ ಆಗಿದ್ದು ಆನಂದ ರೂಪವಾಗಿರುವದರಿಂದ ದೇವರ ಉತ್ಸವವನ್ನು ಕಂಡಾಗ ನಮ್ಮಲ್ಲೇ ಅಡಗಿರುವ ಆನಂದವು ಉಕ್ಕಿಬಂದು ಉತ್ಸವವಾಗುತ್ತದೆ. ಹೀಗೆ ಉತ್ಸವಮೂರ್ತಿಯ ರೂಪದಲ್ಲಿರುವ ಭಗವಂತನು ಭಕ್ತ ಆನಂದವನ್ನು ಉಕ್ಕೇರಿಸುವ ಕಾರ್ಯವನ್ನು ಉಂಟು ಮಾಡುತ್ತಾನೆ. ಇದೇ ಉತ್ಸವಮೂರ್ತಿಸ್ಥಾಪನೆಯ ಉದ್ದೇಶವು.
ಈಗ ಗೋಪುರ ನಿರ್ಮಾಣದ ಪ್ರಯೋಜನವನ್ನು ತಿಳಿಯೋಣ ಮನುಷ್ಯನಿಗೆ ಎಷ್ಟೇ ಸೌಕರ್ಯಮಾಡಿಕೊಟ್ಟರೂ ದೇವರನ್ನು ನೆನೆಯುವದಕ್ಕಿಂತ ಮರೆಯುವದೇ ಸ್ವಭವವಾಗಿದೆ. ಆದರೆ ಋಷಿಗಳು ಹೀಗೆ ಮರೆತವನಿಗೆ ಮತ್ತೆ ದೇವರ ನೆನಪು ಬರುವಂತೆ ಮಾಡುವ ಉದ್ದೇಶದಿಂದ ಆಯಾ ಊರಿನಲ್ಲಿ ಅನೇಕ ಮನೆಗಳೂ ಕಟ್ಟಡಗಳೂ ಇದ್ದರೂ ದೇವಾಲಯವೆಂದರೆ ಇಂಥದ್ದೇ- ಎಂದು ಗುರುತಿಸುವ ಸಲುವಗಿ ಆಯಾ ದೇವಾಲಯಗಳ ಮೇಲೆ ಗೋಪುರಗಳನ್ನೂ ಶಿಖರಗಳನ್ನೂ ನಿರ್ಮಿಸಲು ಸೂಚಿಸಿದ್ದಾರೆ. ಗರ್ಭಗೃಹಗಳ ಮೇಲ್ಭಾಗದ ವಿಮಾನಗಳಲ್ಲಿ ವಾಸ್ತವವಾಗಿ ಆಯಾ ಪ್ರಧಾನದೇವತೆಯನ್ನೇ ಮಂತ್ರಗಳಿಂದ ಹಾಗೂ ಯಂತ್ರನ್ಯಾಸಗಳಿಂದ ಸ್ಥಾಪಿಸಿ ಸಕಲರಿಗೂ ವಿಮಾನದರ್ಶನದಿಂದಲೇ ದೇವರ ದರ್ಶನವಗುವಂತೆ ಏರ್ಪಡಿಸಿರುತ್ತಾರೆ. ಅನೇಕವೇಳೆ ನಾವು ದೇವರದರ್ಶನಮಾಡಲು ಬಯಸಿದಾಗ ದೇವಾಲಯವು ಮುಚ್ಚಿರಬಹುದು. ಅಕಾಲವಾಗಿರಬಹುದು ಅಥವಾ ನಮಗೇ ದೇವಾಲಯದೊಳಗೆ ಹೋಗಿಬರುವಷ್ಟು ಪಾವಿತ್ರ್ಯತೆಯೂ ವ್ಯವಧಾನವೂ ಇಲ್ಲದಿರಬಹುದು ಈಗಿನಕಾಲದಲ್ಲಂತೂ ರೈಲು-ಬಸ್ಸುಗಳಲ್ಲಿ ಪ್ರಯಾಣಮಾಡುವಾಗ ದೇವಾಲಯದ ಸಮೀಪದಲ್ಲೇ ಹಾದುಹೋದರೂ ದರ್ಶನಕ್ಕೆ ಅವಕಾಶಗಳಿರುವದಿಲ್ಲ ಏಕೆಂದರೆ ನಮಗಾಗಿ ವಾಹನಗಳು ನಿಲ್ಲುವ ಸಂಭವವಿರುವದಿಲ್ಲ ಇಂಥ ಸಂದರ್ಭಗಳಲ್ಲಿಕೂಡ ದೇವರ ದರ್ಶನವು ದೂರದಿಂದಲೇ ಲಭ್ಯವಾಗಲೆಂದೂ ವರ್ಣಾಶ್ರಮಧರ್ಮಬಾಹಿರರಾದ ಮ್ಲೇಚ್ಛಾದಿಗಳಿಗೂ ಮುಂದೆಯಾದರೂ ವಿಮಾನದರ್ಶನದ ಫಲವಾಗಿ ಸಜ್ಜನ್ಮಗಳೂ ಭಗವತ್ ಪ್ರಾಪ್ತಿಯೂ ಆಗಲೆಂದೂ ದೂರಾಲೋಚನೆಯಿಂದ ವಿಮಾನಗಳನ್ನು ನಿರ್ಮಿಸಿರುತ್ತಾರೆ. ಇಂಥ ಪುಣ್ಯಕಾರ್ಯಗಳನ್ನು ಕೈಗೊಳ್ಳಬೇಕಾದರೆ ಮನುಷ್ಯನಿಗೆ ಸಂಸ್ಕಾರವು ಚೆನ್ನಾಗಿರಬೇಕು ಗುರುಹಿರಿಯರ ಆಶೀರ್ವಾದಗಳು ಭಗವಂತನ ಕೃಪೆಯೂ ಇರಬೇಕು. ಇದು ಎಲ್ಲರಿಗೂ ದೊರಕತಕ್ಕದ್ದಲ್ಲ ನಾವುಗಳು ಹೊಸದಾಗಿ ಗುಡಿಗೋಪುರಗಳನ್ನು ಕಟ್ಟದೆಹೊದರೂ ಇರುವವುಗಳನ್ನಾದರೂ ಚೆನ್ನಾಗಿ ಕಾಪಾಡಿಕೊಂಡು ಅಲ್ಲಿರುವಾಗಲಾದರೂ ದೇವರನ್ನು ಸ್ಮರಿಸುತ್ತಾ ಸಂಸಾರವನ್ನು ದಾಟಲು ಪ್ರಯತ್ನಮಾಡಬೇಕು. ಇದೇ ಗೋಪುರಗಳ ನಿರ್ಮಾಣದ ಉದ್ದೇಶವಾಗಿದೆ ಇದನ್ನು ಅರ್ಥಮಾಡೊಕೊಳ್ಳದ ಸರ್ಕಾರಗಳು ದೇವಾಲಗಳು ಎಂದರೆ ಕೇವಲ ಹಣ ಸಂಗ್ರಹದ ಘಟಕಗಳನ್ನಾಗಿ ಮಾಡಿಕೊಂಡಿರುವುದು ನೋಡಿದರೆ ಬೇಸರವಾಗುತ್ತದೆ.
ಚಾಮುಂಡಿ ಬೆಟ್ಟಕ್ಕೆ ಜನಗಳು ಬರುವುದು ಅದರಿಂದ ಸರ್ಕಾರಕ್ಕೆ ವಾರ್ಷಿಕ ಕೋಟಿ ಕೋಟಿ ಹಣ ಸಿಗುವುದು ಕೇವಲ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಬರುವ ಜನಗಳಿಂದ, ಹಾಗಿದ್ದು ದೇವಾಸ್ಥಾನದ ಗೋಪುರದಲ್ಲಿನ ವಿಗ್ರಹಗಳನ್ನು ಸರಿಮಾಡದೇ ಬೆಟ್ಟವನ್ನು ವಾಣಿಜ್ಯ ಕೇಂದ್ರವಾಗಿ ಮಾಡುತ್ತಿರುವುದು ಮೂರ್ಖತನದ ಪರಮಾವಧಿ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ