ಕಣ್ಣೀರಿನ ಅಳತೆಯಿಂದ ದುಃಖದ ಪ್ರಮಾಣ ಅಳೆಯಲು ಸಾಧ್ಯವೇ?



    ಭೌತಿಕವಿಜ್ಞಾನದ ಪ್ರಯೋಜನಗಳನ್ನು ಪ್ರತ್ಯಕ್ಷವಾಗಿ ಪಡೆದುಕೊಂಡು ನವನಾಗರಿಕತೆಯ ಹೆಸರಿನಲ್ಲಿ ದೇಹಾತ್ಮಬುದ್ಧಿಯನ್ನೇ ದೃಢಪಡಿಸಿಕೊಂಡು ಇಂದ್ರಿಯಲೋಲುಪರಾಗಿ ಬಾಳುತ್ತಿರುವ ಈಗಿನ ಜನರಿಗೆ ವೇದಾಂತವೆಂದರೆ ಒಂದು ಬಗೆಯ ಔದಾಸೀನ್ಯವುಂಟಾಗುವದರಲ್ಲಿ ಆಶ್ಚರ್ಯವೇನಿಲ್ಲ, ಆದರೆ ಭೋಗಾಸಕ್ತಿ, ಪ್ರಾಪಂಚಿಕಸುಖಗಳಲ್ಲಿ ಭಾರತೀಯರನ್ನು ಹಿಂದಕ್ಕೆ ಹಾಕಿ ಉತ್ತುಂಗಶಿಖರವನ್ನೇರಿರುವ ಪಾಶ್ಚಾತ್ತ್ಯರೂ ಇತ್ತೀಚಿಗೆ ಅದೇಕೋ, ವೇದಾಂತದಕಡೆಗೆ ತಿರುಗುತ್ತಿರುವದನ್ನು ನೋಡಿದರೆ ವಿಚಾರವಂತರಾದವರಿಗೆ ಭೌತಿಕವಿಜ್ಞಾನದಲ್ಲಿ ಏನೋ ಕೊರತೆಯಿರಬೇಕು; ಅದರಿಂದ ಸಿಗಲಾರದ ಸುಖವು ವೇದಾಂತದಿಂದ ದೊರಕಬಹುದು - ಎಂದು ಅನಿಸಿರಬೇಕು. ಈ ಸಂದರ್ಭದಲ್ಲಿ ಭೌತಿಕವಿಜ್ಞಾನದ ಪರಿಮಿತಿಯನ್ನೂ ಅದರ ಶೋಧಗಳ ಪರಿಣಾಮವನ್ನೂ ಕುರಿತು ವಿಚಾರಮಾಡುವದು ವೇದಾಂತದಕಡೆಗೆ ಅಭಿರುಚಿಯನ್ನು ಹೆಚ್ಚಿಸಲು ಸಹಾಯಕವಾಗಿರುತ್ತದೆ ಎಂದು ಭಾವಿಸಬಹುದು.
    ಮೇಲುನೋಟಕ್ಕೆ ಭೌತಿಕವಿಜ್ಞಾನವು ಮಾನವನಿಗೆ ಬಹಳ ಉಪಕಾರಿಯಾಗಿರುವದರಲ್ಲಿ ಸಂಶಯವಿಲ್ಲ. ಈ ವಿಜ್ಞಾನದ ಬಲದಿಂದ ಮಾನವನು ತನ್ನ ಆಹಾರ, ವಿಹಾರ, ವಿಚಾರ, ಸಮಾಜ, ಆರೋಗ್ಯ, ವಿದ್ಯಾಭ್ಯಾಸ, ಆರ್ಥಿಕ, ರಾಜಕೀಯವೇ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿಯನ್ನು ಸಾಧಿಸಿದ್ದಾನೆ ಮತ್ತು ಈ ವಿಜ್ಞಾನವು ಬರಿಯ ಆಕಾಶಪುರಾಣದಂತಲ್ಲ ಇದು ತನ್ನ ಶೋಧಗಳ ಫಲವನ್ನು ಮಾನವನ ಜೀವಿತಕಾಲದಲ್ಲಿಯೇ ಒದಗಿಸಿಕೊಟ್ಟಿದೆ. ಇಷ್ಟೇ ಅಲ್ಲ ಇದರ ಪ್ರಯೋಜನವು ವೈಯಕ್ತಿಕವಾಗಿರದೆ ಸರ್ವರಿಗೂ ದೊರಕುವಂತೆ ಇದ್ದು ವಿಜ್ಞಾನದ ಶಾಸ್ತ್ರಪರಿಚಯವಿಲ್ಲದವನು ಕೂಡ ಈ ಪ್ರಯೋಜನಗಳಿಂದ ವಂಚಿತನಾಗದಂತೆ ಪರಮೋಪಕಾರಿಯೂ ಮನುಷ್ಯನಿಗೆ ಪ್ರಿಯವೂ ಆಗಿದೆ. ಈ ವಿಜ್ಞಾನದ ಮುನ್ನಡೆಯಲ್ಲಿ ಸಾವಿರಾರು ಜನ ಮೇಧಾವಿಗಳೂ ಕುಶಲರೂ ದುಡಿದು ತಮ್ಮ ಶ್ರಮವನ್ನೂ ತಿಳಿವಳಿಕೆಯನ್ನೂ ಧಾರೆಯೆರೆದಿದ್ದಾರೆ ಇಂಥ 'ವಿಜ್ಞಾನಋಷಿ'ಗಳು ಜನಸಾಮಾನ್ಯರಿಗೆಲ್ಲ ಪೂಜ್ಯರಾಗಿದ್ದಾರೆಂದರೆ ಆಶ್ಚರ್ಯವೇನಿಲ್ಲ. ಈ ವಿಜ್ಞಾನಶೋಧಗಳಿಂದ ಹೊರಬಿದ್ದ ಪದಾರ್ಥಗಳ ಅವಶ್ಯಕತೆಯು ಪ್ರತಿಕ್ಷಣದಲ್ಲಿಯೂ ಮನುಷ್ಯಜೀವನವನ್ನೆಲ್ಲ ಹಾಸುಹೊಕ್ಕಾಗಿ ಹೆಣೆದುಕೊಂಡಿದ್ದು ಇದು ಇಲ್ಲವಾದರೆ ಏನಾದೀತೆಂದು ಊಹಿಸುವದಕ್ಕೂ ಅಸಾಧ್ಯವಾಗಿದೆ. ಆದ್ದರಿಂದಲೇ ಮೇಧಾವಿಗಳೆನಿಸಿ ಗೌರವ ಪಾತ್ರರಾದ ಕೆಲವು ವಿದ್ಯಾವಂತರು ಕೂಡ ಯಾವದೇ ನಂಬಿಕೆಯನ್ನು ವೈಜ್ಞಾನಿಕ ಪರೀಕ್ಷೆಗೊಳಪಡಿಸದೆ ಅಂಗೀಕರಿಸಬಾರದೆಂದು ಹಠಮಾಡುತ್ತಿದಾರೆ. ವಿಜ್ಞಾನ ಶಾಸ್ತ್ರನಿಯಮಗಳಿಗೆ ಹಾಗೂ ಸಂಶೋಧನೆಗೆ ಎಟುಕದ ವಸ್ತುಗಳಾವುವೂ ನಿಜವಲ್ಲ ಎಂದು ತೀರ್ಮಾನಿಸಿದ್ದಾರೆ.
    ವಿಜ್ಞಾನಶಾಸ್ತ್ರವು ಇಷ್ಟಲ್ಲ ಪ್ರಭಾವವುಳ್ಳದ್ದಾದರೂ ಅದರ ಕ್ಷೇತ್ರವು ಮಾತ್ರ ಪರಿಮಿತವಾಗಿದ್ದು ಮಾನವನ ಪೂರ್ಣಜೀವನವನ್ನು ವಿಶ್ಲೇಷಿಸಿ ಜೀವನದ ಪರಮ ಗುರಿಯನ್ನು ಮುಟ್ಟಿಸಲು ಅದಕ್ಕೆ ಸಾಧ್ಯವಾಗಿಲ್ಲ, ಹೇಗೆಂದರೆ: 'ಭೌತಿಕವಿಜ್ಞಾನ' ಎಂದೇ ಕರೆಯಲ್ಪಡುವ ಈ ಶಾಸ್ತ್ರವು ಮಾನವನಿಗೆ ಗೋಚರವಾಗುತ್ತಿರುವ ಭೌತಿಕ ಬಾಹ್ಯವಸ್ತುಗಳ ತತ್ತ್ವವನ್ನು ಶೋಧಿಸಲು ಮಾತ್ರ ಸೀಮಿತವಾಗಿದೆ. ಮನುಷ್ಯನೆಂದರೆ ದೇಹೇಂದ್ರಿಯಾದಿಗಳನ್ನುಪಯೋಗಿಸಿಕೊಂಡು ಬಾಹ್ಯಪ್ರಪಂಚವನ್ನು ಅನುಭವಿಸುವವನು ಮಾತ್ರವೇ ಎಂದಾಗಿದ್ದರೆ ಒಂದು ವೇಳೆ ಭೌತಿಕವಿಜ್ಞಾನವು ಮಾನವನ ಸರ್ವಸ್ವವೂ ಆಗಬಹುದಾಗಿತ್ತು ಆದರೆ ಹಾಗಿಲ್ಲ, ಮಾನವನಲ್ಲಿ "ಆತ್ಮ"ವೆಂಬ ಒಂದು ತತ್ತ್ವವೂ ಅಡಗಿದೆ. ಅದು ಸ್ವತಃಸಿದ್ಧವಾಗಿರುವದರಿಂದ ಯಾವ ಶಾಸ್ತ್ರವೂ ಅದರ ಇರುವಿಕೆಯ ಸಮರ್ಥನೆಗೆ ಬೇಕಾಗಿಲ್ಲ. ಆತ್ಮನಿಲ್ಲವೆನ್ನುವದು ಈವರೆಗೂ ಮನುಷ್ಯನಿಗೆ ಸಾಧ್ಯವಾಗಿಲ್ಲ, ಏಕೆಂದರೆ ಆತ್ಮನೆಂದರೆ ತಾನೇ (Self) ಆಗಿರುತ್ತಾನೆ ತಾನೇ ತನ್ನನ್ನೇ ಇಲ್ಲವೆಂದುಕೊಳ್ಳುವದು ಹಾಸ್ಯಾಸ್ಪದವಾಗುವದು, ಹಾಗೆ ಅಂದುಕೊಂಡರೂ ಅದು ನಿಜವಾಗಲಾರದು. ತಾನಿಲ್ಲವೆಂಬ ಅನುಭವವೇ ಯಾರಿಗೂ ಇರುವದಿಲ್ಲ. ಭೌತಿಕವಿಜ್ಞಾನವು ಈ ತಾನೆಂಬ ಆತ್ಮನ ವಿಶ್ಲೇಷಣೆಗೆ ಕೈ ಹಾಕದೆ ಆ ಆತ್ಮನಿಗೆ ವಿಷಯವಾಗಿ (object) ತೋರುವ ದೃಶ್ಯಗಳ ಹಾಗೂ ವಸ್ತುಗಳ ವಿಶ್ಲೇಷಣಪ್ರಯೋಗಾದಿಗಳಿಗೇ ಸೀಮಿತವಾಗಿದೆ ಆದ್ದರಿಂದ ಭೌತಿಕ ವಿಜ್ಞಾನದಿಂದ ಇನ್ನು ಮುಂದೆಯೂ ಏನೇನುಬೇಕಾದರೂ ಸಾಧ್ಯವಾಗಬಹುದಾದರೂ 'ಆತ್ಮನಿಲ್ಲ'ವೆಂದು ಸಾಧಿಸುವದು ಮಾತ್ರ ಸಾಧ್ಯವಾಗಲಾರದು.
    ಈ ಭೌತಿಕವಿಜ್ಞಾನದ ಮತ್ತೊಂದು ಕೊರತೆಯೇನೆಂದರೆ : ಆತ್ಮನಿಗೆ (ತನಗೆ) ಆಗುವ ವೇದನೆಗಳನ್ನು ವಿಶ್ಲೇಷಿಸಲು ಬಾರೆ ಇರುವದು. ಪ್ರತಿಯೊಬ್ಬ ಮಾನವನಿಗೂ ಅವನವನ ಆತ್ಮಕ್ಕೆ ಭಯ, ಶೋಕ, ದುಃಖ, ಬೇಸರ, ಕಾಮ, ಕ್ರೋಧ, ಅಸೂಯೆ, ಸಮಾಧಾನ, ಶಾಂತಿ, ಸುಖ - ಮುಂತಾದ ವೇದನೆಗಳುಂಟಾಗುತ್ತಿರುವದು ಎಲ್ಲರ ಅನುಭವದಲ್ಲಿಯೂ ಇದೆ. ಮನುಷ್ಯನ ಜೀವನವೆಂದರೆ ಭಯ, ಅಯಾಸ, ಶೋಕ, ಮೋಹ, ಹಸಿವು ಬಾಯರಿಕೆಗಳನ್ನು ಕಳೆದುಕೊಳ್ಳುವದಕ್ಕೂ ಶಾತಿ, ಸುಖ, ತೃಪ್ತಿ, ಪುಷ್ಟಿ ಮುಂತಾದವುಗಳನ್ನು ಪಡೆದುಕೊಳ್ಳುವದಕ್ಕೂ ಹವಣಿಸುತ್ತಿರುವದೇ ಆಗಿದೆ. ಈ ಪ್ರಯತ್ನದಲ್ಲಿ ವಿಜ್ಞಾನವು ಮೌನವಾಗಿದೆ. ಹೇಗೆಂದರೆ; ಒಬ್ಬ ಮನುಷ್ಯನಿಗೆ ತನ್ನ ಅತ್ಯಂತ ಪ್ರಿಯವಾದ ವಸ್ತುವು ಕಳೆದುಹೋದಾಗ ಬಹಳ ದುಃಖವಾಗಿ ಕಣ್ಣೀರುಸುರಿಯಿತೆಂದು ಇಟ್ಟುಕೊಳ್ಳೋಣ, ಆಗ ಅವನಿಗೆ ಆಗಿರುವ ದುಃಖದ ಪ್ರಮಾಣ (ಅಳತೆ)ಯೆಷ್ಟು? ಎಂಬಿದನ್ನು ಅವನ ಕಣ್ಣೀರನ್ನು ಒಂದು ಪ್ರಣಾಳಿಕೆಯಲ್ಲಿ ಹಾಕಿ ವಿಶ್ಲೇಷಿಸುವದರಿಂದ ಖಂಡಿತ ತಿಳಿಯಲಾರದು. ಒಂದು ವೇಳೆ ಕಂಪ್ಯೂಟರ್ ಸಹಾಯದಿಂದಲಾದರೂ ಅವನ ದುಃಖವನ್ನು ಇಷ್ಟು ಎಂದು ಲೆಕ್ಕಾಚಾರಮಾಡಬಹುದೆಂತ ಭಾವಿಸಿದರೂ ಅದು ಆ ಯಂತ್ರ ಹಾಗೂ ಆ ಯಂತ್ರವನ್ನು ಉಪಯೋಗಿಸಿದವನ ಊಹೆಯಾದೀತೇ ಹೊರತು ನೇರವಾಗಿ ಆ ಮನುಷ್ಯನ ಹೃದಯದಲ್ಲಿ ಎಷ್ಟು ದುಃಖವಾಗಿತ್ತು? ಅದು ಮತ್ತೊಬ್ಬನ ದುಃಖಕ್ಕಿಂತ ಹೆಚ್ಚೆ? ಕಡಿಮೆಯೆ? ಎಂಬಿದನ್ನಂತೂ ಅದು ತಿಳಿಸಲಾರದು. ಆ ದುಃಖವು ಅವನ ಆತ್ಮಕ್ಕೆ ಮಾತ್ರ ವೇದ್ಯವಾಗಬಲ್ಲದು, ಇಲ್ಲಿ ವಿಜ್ಞಾನವು ಸೋಲುತ್ತದೆ.
    ಭೌತಿಕವಿಜ್ಞಾನದ ಮತ್ತೊಂದು ಪರಿಮಿತಿಯೇನೆಂದರೆ : ಅದು ಪ್ರಯೋಗ ಶಾಲೆಯಲ್ಲಿ ಸೂಕ್ಷ್ಮದರ್ಶಕಯಂತ್ರಗಳಿಂದ ಸಾಮಾನ್ಯರ ಕಣ್ಣಿಗೆ ಗೋಚರವಾಗದಂಥ ವಸ್ತುವನ್ನು ಕಂಡುಹಿಡಿಯಬಲ್ಲದಾದರೂ ಮಾನವನ ಕಣ್ಣು ಮುಂತಾದ ಬಾಹ್ಯೇಂದ್ರಿಯಗಳ ಮತ್ತು ಮನಸ್ಸೆಂಬ ಅಂತಃಕರಣದ ನೆರವಿಲ್ಲದೆ ಏನನ್ನೂ ತಿಳಿಸಲಾರದು. ಈ ಸಂದರ್ಭದಲ್ಲಿ ಕಣ್ಣಿನಲ್ಲಿಯೇ ದೋಷವಿದ್ದರೆ ಅಥವಾ ಮನುಷ್ಯನು ಅಜ್ಞಾನದಿಂದ ಯಂತ್ರವನ್ನುಪಯೋಗಿಸುವದರಲ್ಲಿಯೇ ತಪ್ಪುಮಾಡಿದರೆ ಅಥವಾ ಪರೀಕ್ಷಕನ ಮನಃಸ್ಥಿತಿಯೇ ಸರಿಯಾಗಿಲ್ಲವಾದರೆ ಬರುವ ತೀರ್ಮಾನವೂ ತಪ್ಪಾಗುತ್ತದೆ. ಹೀಗೆ ವಿಜ್ಞಾನವು ಇಂದ್ರಿಯಮನೋಬುದ್ಧಗಳ ಮೂಲಕ ಕಾಲದೇಶಗಳಲ್ಲಿ ತೋರುವ ವಸ್ತುಗಳ ಮತ್ತು ಕಾರ್ಯಕಾರಣಭಾವಗಳಿಂದ ಕೂಡಿ ಪ್ರಮಾತೃವಿಗೆ ವಿಷಯವಾಗಿರುವಷ್ಟನ್ನು ಮಾತ್ರ ತಿಳಿಸಬಲ್ಲದು, ಆದರೆ ಪ್ರಮಾತೃವಿನ ಸ್ವರೂಪವೇನು? ಗಾಢ ನಿದ್ರೆಯಲ್ಲಿ ಪ್ರಮಾತೃವೂ ಪ್ರಮಾಣಪ್ರಮೇಯಗಳೂ ಏಕೆ ತೋರುವದಿಲ್ಲ? ಆಗ ಅವು ಏನಾಗುತ್ತವೆ? ಎಂಬೀ ವಿಷಯಗಳನ್ನಂತೂ ಭೌತಿಕವಿಜ್ಞಾನಶಾಸ್ತ್ರದಲ್ಲಿ ವಿಚಾರಮಾಡಿಯೇ ಇಲ್ಲ.
    ಈಗ ವೇದಾಂತಜ್ಞಾನದ ಸ್ವರೂಪವೇನೆಂಬುದನ್ನು ವಿಚಾರಿಸೋಣ. ಇದು ಕೂಡ ಭೌತಿಕವಿಜ್ಞಾನದಂತೆಯೇ ಪ್ರಯೋಗಪರೀಕ್ಷಾದಿಗಳಿಂದಲೇ ವಸ್ತುನಿರ್ಣಯವನ್ನು ಮಾಡಿ ಅದರ ಫಲವನ್ನು ಮಾನವನು ಈಗಲೇ ಇಲ್ಲಿಯೇ ಅನುಭವಿಸುವಂತೆ ಕೊಡತಕ್ಕದ್ದಾಗಿರುತ್ತದೆ, ಆದರೆ ಇದರ ಪ್ರಯೋಗಶಾಲೆಯ ಮಾನವನ ಹೊರಗಿಲ್ಲ ಅವನೊಳಗೇ ಇದ್ದುಕೊಂಡಿದೆ, ಆದ್ದರಿಂದ ಈ ಆತ್ಮಶೋಧನೆ ಮಾಡಲಪೇಕ್ಷಿಸುವವನು ತನ್ನೊಳಗೇ ತಾನು ನಿಂತು ವಿಚಾರಮಾಡುವದನ್ನು ಕಲಿಯಬೇಕು. ಇಲ್ಲಿ ಕರಣಗಳ ವ್ಯಾಪಾರದ ಅವಶ್ಯಕತೆಯೇನು ಇಲ್ಲ ಅವುಗಳ ವ್ಯಾಪಾರವನ್ನೆಲ್ಲ ನಿಲ್ಲಿಸಿಬಿಡಬೇಕು ಇದನ್ನು 'ಆಧ್ಯಾತ್ಮಯೋಗ'ವೆಂದು ಕರೆಯುತ್ತಾರೆ ಇಲ್ಲಿ ವಸ್ತುವಿಭಜನೆಯ ಕೆಲಸವೇನಿಲ್ಲ ಅದಕ್ಕೆ ಬದಲಾಗಿ ಭಜನೆ (ಏಕಾಗ್ರತೆಯಿಂದ ಸೇವನೆ)ಯೊಂದೇ ಮಾಡತಕ್ಕದ್ದಾಗಿದೆ. ಹೀಗೆ ಭೌತಿಕವಿಜ್ಞಾನಕ್ಕೂ ವೇದಾಂತ ವಿಜ್ಞಾನಕ್ಕೂ ವಿಚಾರಣೀಯವಿಷಯಗಲೇ ಬೇರೆಬೇರೆಯಾಗಿದ್ದು ವೇದಾಂತದಿಂದ ತಿಳಿಯಬೇಕಾಗಿರುವದನ್ನು ವಿಜ್ಞಾನದಿಂದ ತಿಳಿಯಲಾಗುವದಿಲ್ಲ. ವ್ಯವಹಾರದಲ್ಲಿ ವೇದಾಂತದ ಅವಶ್ಯಕತೆ ಕಂಡುಬರದಿದ್ದರೂ ಆತ್ಮನಿಲ್ಲದೆ ವ್ಯಾವಹಾರಿಕ ಸುಖ ಸಂಪತ್ತುಗಳು ಭೋಗ್ಯವಾಗಲಾರವಾದ್ದರಿಂದ ಭೌತಿಕವಿಜ್ಞಾನದ ಪರಿಮಿತಿಯನ್ನು ತಿಳಿದು ಅದನ್ನು ಆತ್ಮಸುಖಕ್ಕಾಗಿ ಬಳಸಿಕೊಳ್ಳುವ ಜಾಣತನವನ್ನು ವೇದಾಂತದಿಂದ ಕಲಿಯಬೇಕು. ವೇದಾಂತವು ವಿಜ್ಞಾನವು ಕೊಡಲಾರದ ಆತ್ಮಸುಖವನ್ನು ಕೊಡುತ್ತದೆ ಎಂದು ತಿಳಿದಲ್ಲಿ ಜೀವನಕ್ಕೆ ಅದು ಅವಶ್ಯವೆಂದು ಗೊತ್ತಾಗಲಿದೆ.

Deepak H V
Mysuru
9886312013

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ