ಅದ್ವೈತ ಮತ್ತು ದೇವತಾರಾಧನೆ
ಜೀವನದಲ್ಲಿ ಕರ್ಮಮಾರ್ಗ, ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ ಎಂಬ ಮೂರು ವಿಧಾನಗಳು ಲಭ್ಯವಾಗಿದ್ದು ನಮ್ಮ ವೈಯಕ್ತಿಕ ಪ್ರವೃತ್ತಿಗನುಗುಣವಾಗಿ ಒಂದನ್ನು ಆರಿಸಿಕೊಳ್ಳುತ್ತೇವೆ. ಈ ಮೂರು ಮಾರ್ಗಗಳು ನಮ್ಮನ್ನು ಬೆಳೆಸುತ್ತವೆ, ಉಳಿಸುತ್ತವೆ. ಇವುಗಳಲ್ಲಿ ಭಕ್ತಿಮಾರ್ಗಮಾತ್ರವೇ ಶೀಘ್ರಫಲದರ್ಶನ ನೀಡುತ್ತದೆ. ಇದರಲ್ಲಿ ಮತಿಗೆ ವ್ಯಥೆಯಿಲ್ಲ. ಅಂತೆಯೇ ಹೆಚ್ಚು ಜನರನ್ನು ಇದು ಆಕರ್ಷಿಸುತ್ತದೆ. ಅಬಾಲವೃದ್ಧರೂ, ಸ್ತ್ರೀಯರೂ ಈ ಮಾರ್ಗವನ್ನು ಅನುಸರಿಸಬಹುದಾದ್ದರಿಂದ ಇದರ ವ್ಯಾಪ್ತಿಯು ದೊಡ್ಡದು. ಹೀಗಾಗಿ ಆಚಾರ್ಯ ಶಂಕರರು ಸಕಲ ಜನರ ಉದ್ಧಾರಕ್ಕಾಗಿ ಹಲವಾರು ದೇವಸ್ಥಾನಗಳನ್ನು ಸ್ಥಾಪಿಸಿದರು; ಹಲವನ್ನು ಜೀಣೋದ್ಧಾರ ಮಾಡಿಸಿದರು, ಹಲವು ದೇವಾಲಯಗಳಲ್ಲಿನ ಕ್ರೂರಪದ್ಧತಿಗಳನ್ನು ಮಾರ್ಪಡಿಸಿ, ಶುದ್ಧವಾಗಿಸಿದರು. ಇಷ್ಟಲ್ಲದೆ, ಸುಂದರ, ರಸಗರ್ಭಿತ, ಮಂಜುಳ, ಲಯಬದ್ಧ ಗಾನಸುಧೆಗಾಗಿ ಹಲವು ಸ್ತೋತ್ರಗಳನ್ನು ರಚಿಸಿ ಭಗವಂತನ ಪ್ರಾರ್ಥನೆಗೆ ಅನುವು ಮಾಡಿಕೊಟ್ಟಿದ್ದಾರೆ. ಲಹರಿ, ಅಷ್ಟಕ, ಪಂಚಕ, ಪಂಜರಿಕಾ, ಅಪರಾಧ ಕ್ಷಮಾಪಣಾ.... ಹೀಗೆಯೇ ಹಲವಾರು ಶೈಲಿಯ, ಅರ್ಥಗಾಂಭೀರ್ಯದ, ಭಕ್ತಿರಸಪೂರ್ಣವಾದ ಸ್ತವಕುಸುಮಗಳನ್ನು ನೀಡಿ ಉಪಕರಿಸಿದ್ದಾರೆ. ಪ್ರತ್ಯೇಕ ವ್ಯಕ್ತಿಯು ತನ್ನ ಇಷ್ಟದೇವತೆಯನ್ನು ಪ್ರಾರ್ಥಿಸುವುದು ಸೂಕ್ತವಾದರೂ, ಇತರ ದೇವತೆಗಳು ಕಡಿಮೆಯವೆಂದು ಪರಿಗಣಿಸಬಾರದು. ಪರಮತ ಸಹಿಷ್ಣುತೆ ನಮ್...