ಅದ್ವೈತ ಮತ್ತು ದೇವತಾರಾಧನೆ


    ಜೀವನದಲ್ಲಿ ಕರ್ಮಮಾರ್ಗ, ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ ಎಂಬ ಮೂರು ವಿಧಾನಗಳು ಲಭ್ಯವಾಗಿದ್ದು ನಮ್ಮ ವೈಯಕ್ತಿಕ ಪ್ರವೃತ್ತಿಗನುಗುಣವಾಗಿ ಒಂದನ್ನು ಆರಿಸಿಕೊಳ್ಳುತ್ತೇವೆ. ಈ ಮೂರು ಮಾರ್ಗಗಳು ನಮ್ಮನ್ನು ಬೆಳೆಸುತ್ತವೆ, ಉಳಿಸುತ್ತವೆ. ಇವುಗಳಲ್ಲಿ ಭಕ್ತಿಮಾರ್ಗಮಾತ್ರವೇ ಶೀಘ್ರಫಲದರ್ಶನ ನೀಡುತ್ತದೆ. ಇದರಲ್ಲಿ ಮತಿಗೆ ವ್ಯಥೆಯಿಲ್ಲ. ಅಂತೆಯೇ ಹೆಚ್ಚು ಜನರನ್ನು ಇದು ಆಕರ್ಷಿಸುತ್ತದೆ. ಅಬಾಲವೃದ್ಧರೂ, ಸ್ತ್ರೀಯರೂ ಈ ಮಾರ್ಗವನ್ನು ಅನುಸರಿಸಬಹುದಾದ್ದರಿಂದ ಇದರ ವ್ಯಾಪ್ತಿಯು ದೊಡ್ಡದು.
    ಹೀಗಾಗಿ ಆಚಾರ್ಯ ಶಂಕರರು ಸಕಲ ಜನರ ಉದ್ಧಾರಕ್ಕಾಗಿ ಹಲವಾರು ದೇವಸ್ಥಾನಗಳನ್ನು ಸ್ಥಾಪಿಸಿದರು; ಹಲವನ್ನು ಜೀಣೋದ್ಧಾರ ಮಾಡಿಸಿದರು, ಹಲವು ದೇವಾಲಯಗಳಲ್ಲಿನ ಕ್ರೂರಪದ್ಧತಿಗಳನ್ನು ಮಾರ್ಪಡಿಸಿ, ಶುದ್ಧವಾಗಿಸಿದರು. ಇಷ್ಟಲ್ಲದೆ, ಸುಂದರ, ರಸಗರ್ಭಿತ, ಮಂಜುಳ, ಲಯಬದ್ಧ ಗಾನಸುಧೆಗಾಗಿ ಹಲವು ಸ್ತೋತ್ರಗಳನ್ನು ರಚಿಸಿ ಭಗವಂತನ ಪ್ರಾರ್ಥನೆಗೆ ಅನುವು ಮಾಡಿಕೊಟ್ಟಿದ್ದಾರೆ. ಲಹರಿ, ಅಷ್ಟಕ, ಪಂಚಕ, ಪಂಜರಿಕಾ, ಅಪರಾಧ ಕ್ಷಮಾಪಣಾ.... ಹೀಗೆಯೇ ಹಲವಾರು ಶೈಲಿಯ, ಅರ್ಥಗಾಂಭೀರ್ಯದ, ಭಕ್ತಿರಸಪೂರ್ಣವಾದ ಸ್ತವಕುಸುಮಗಳನ್ನು ನೀಡಿ ಉಪಕರಿಸಿದ್ದಾರೆ.
    ಪ್ರತ್ಯೇಕ ವ್ಯಕ್ತಿಯು ತನ್ನ ಇಷ್ಟದೇವತೆಯನ್ನು ಪ್ರಾರ್ಥಿಸುವುದು ಸೂಕ್ತವಾದರೂ, ಇತರ ದೇವತೆಗಳು ಕಡಿಮೆಯವೆಂದು ಪರಿಗಣಿಸಬಾರದು. ಪರಮತ ಸಹಿಷ್ಣುತೆ ನಮ್ಮ ದೇಶದ, ನಮ್ಮ ಧರ್ಮದ ಮತ್ತು ಆಚಾರ್ಯ ಶಂಕರರ ವೈಶಿಷ್ಟ್ಯ. ಅವರು ದೇವರ ಯಾವುದೇ ರೂಪವನ್ನು ಶ್ರೇಷ್ಠವೆಂದೂ, ಸರ್ವೋತ್ತಮವೆಂದೂ ಪರಿಗಣಿಸಲಿಲ್ಲ.
    ವಿಶ್ವವನ್ನು ವೀಕ್ಷಿಸುವುದರಲ್ಲಿ ಭೇದಭಾವನೆ ಹೇಗೆ ಅಸಂಗತವೋ ಮತಗಳ ವೀಕ್ಷಣೆಯಲ್ಲೂ ಒಂದು ಮೇಲಿನದು, ಇನ್ನೊಂದು ಕೆಳಗಿನದು ಎಂಬ ಭೇದಭಾವನೆ ಅಸಂಗತ ಎಂಬುದು ಶಂಕರಾಚಾರ್ಯರು ಸ್ಥಾಪಿಸಿದ(ಸ್ಮಾರ್ತ) ಸಂಪ್ರದಾಯದ ಮೂಲಭೂತ ತತ್ವ. ಎಲ್ಲಿ ಭೇದವನ್ನು ಕಾಣುತ್ತೇವೆಯೋ ಅಲ್ಲಿ ವೈರ, ಅಸೂಯೆ ಹುಟ್ಟುವುದು ಸ್ವಾಭಾವಿಕ, ಆದ್ದರಿಂದ ಸ್ಮಾರ್ತ ಸಂಪ್ರದಾಯದವರು ಶಿವಸರ್ವೋತ್ತಮ, ಹರಿ ಸರ್ವೋತ್ತಮ ಎಂಬ ಭೇದಭಾವನೆಯಿಲ್ಲದೆ, ಎಲ್ಲ ದೇವತೆಗಳನ್ನೂ ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಅವರು ಎಲ್ಲ ದೇವಾಲಯಗಳಿಗೂ ಹೋಗಿ ಏಕೈಕ ಪೂಜ್ಯ ಭಾವನೆಯಿಂದ ಸೇವೆ ಸಲ್ಲಿಸುತ್ತಾರೆ. ಆಚಾರ್ಯರು ಏರ್ಪಡಿಸಿದ ಪಂಚಾಯತನ ಪೂಜಾವಿಧಿಯನ್ನು ಆಚರಿಸುತ್ತಾರೆ. ಸೂರ್ಯ, ಅಂಬಿಕಾ, ಶಿವ, ವಿಷ್ಣು ಮತ್ತು ಗಣಪತಿ - ಈ ಐದೂ ದೇವತೆಗಳನ್ನು ಭೇದವೆಣಿಸದೆ ಸಮಾನ ಪೂಜ್ಯ ಭಾವನೆಯಿಂದ ಆರಾಧಿಸುವುದಕ್ಕೆ ಪಂಚಾಯತನ ಪೂಜೆ ಎಂದು ಹೆಸರು. ಶಿವನು ಮಧ್ಯದಲ್ಲಿದ್ದರ ಶಿವ ಪಂಚಾಯತನ; ವಿಷ್ಣು ಮಧ್ಯವಾದರೆ ವಿಷ್ಣುಪಂಚಾಯತನ.
    ಶಂಕರರು ನಿರ್ಗುಣ ಬ್ರಹ್ಮೋಪಾಸನೆಗೆ ಸಗುಣ ಉಪಾಸನೆ ಅಗತ್ಯವಾದ ಮೆಟ್ಟಿಲು ಎಂದಿದ್ದಾರೆ. ಹಾಗೆಯೇ ಭಕ್ತಿ, ಕರ್ಮಗಳು ಕೂಡ ಜ್ಞಾನಮಾರ್ಗಕ್ಕೆ ಅಗತ್ಯ ಸಾಧನಗಳೆಂದು ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯದಂತೆ "ಪ್ರಥಮಾ ಪ್ರತಿಮಾ ಪೂಜಾ, ಜಪಸ್ತೋತ್ರಾಣಿ ಮಧ್ಯಮಾ | ಉತ್ತಮಾ ಮಾನಸೀ ಪೂಜಾ, ಸೋಹಂ ಪೂಜೋತ್ತಮೋತ್ತಮಾ" || ಅಂದರೆ (1) ಮೂರ್ತಿಪೂಜೆ, (2) ಮಂತ್ರ-ಜಪ, ಸ್ತೋತ್ರಪಾರಾಯಣ, (3)ಧ್ಯಾನ (ಸಗುಣ ಬ್ರಹ್ಮ-ಮಾನಸ ಪೂಜೆ (4)ಸೋಹಂ ಭಾವನೆ - ಇದು ಮೆಟ್ಟಿಲುಗಳ ಸರಪಳಿ.
    ಭಕ್ತಿಗೆ ಶಿಕ್ಷಣ, ಉಪದೇಶ ಅನಗತ್ಯ. "ಯದ್ಯತ್ಕರ್ಮ ಕರೋಮಿ ತತ್ತದ ಖಿಲಂ ಶಂಭೋತವಾರಾಧನಂ" ಎಂಬ ಭಾವನೆಯಿಂದ ಮಾಡುವ ಕರ್ಮವೂ ದೈವಾರಾಧನೆಯೇ. ಯಾವುದು ಸಂಭವಿಸಿದರೂ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದೇ ಭಕ್ತಿ. ಭಕ್ತಿ ಎಂದರೆ ತನಗಿಂತ ದೊಡ್ಡದಾದುದರಲ್ಲಿ ಜೊತೆಗೂಡುವುದು. "ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃಸ್ವಭಾವಾತ್ ಕರೋಮಿ ಯದ್ಯತ್ಸಕಲಂ ಪರಸ್ಮೈನಾರಾಯಣಾಯೇತಿ ಸಮರ್ಪಯಾಮಿ".
    "ಭಗವಂತನಲ್ಲಿ ಇಟ್ಟಿರುವ ಉತ್ಕಟ ಪ್ರೇಮವೇ ಭಕ್ತಿ" ಎನ್ನುತ್ತದೆ ನಾರದ ಭಕ್ತಿಸೂತ್ರ. ಭಕ್ತನಿಗೆ ಯಾವುದೇ ಕೊರತೆ ಇಲ್ಲ; ದುಃಖವಿಲ್ಲ; ದ್ವೇಷವಿಲ್ಲ; ಸಂತೋಷವೂ ಇಲ್ಲ. ಭಗವಂತನಲ್ಲಿ ಪ್ರೇಮ ಎಂಬುದು ಅನಿರ್ವಚನೀಯ. "ಮೂಕನೊಬ್ಬನು ಸೊಗಸಾಗಿ ಉಂಡು, ಅದರ ಬಗ್ಗೆ ಏನೂ ಹೇಳಲಾರದಂತೆ" ಎನ್ನುತ್ತದೆ ನಾರದ ಭಕ್ತಿಸೂತ್ರ. ಈ ಭಾವನೆಗೆ ಭಗವಂತ ತೋರುವ ಪ್ರತಿಕ್ರಿಯೆಯೇ ಪ್ರಸಾದ. ಭಕ್ತಿಯ ಮೊರೆಯ ಹಿಂದೆಯೇ ಭಗತ್ಕೃಪೆ ಬಂದೇ ಬರುತ್ತದೆ. ಗೀತೆಯಲ್ಲಿ ಭಗವಂತನೇ ಸೂಚಿಸಿರುವಂತೆ, "ಯಾವ ಭಕ್ತನು ಯಾವ ದೇವತಾಮೂರ್ತಿಯನ್ನು ಶ್ರದ್ಧೆಯಿಂದ ಪೂಜಿಸುತ್ತಾನೋ ಅವನಿಗೆ ಅದರಲ್ಲಿಯೇ ಶ್ರದ್ಧೆಯನ್ನು ನೀಡುವೆನು" ಎಂಬಂತೆ ಅದ್ವೈತಿಗೆ ಭಗವಂತನನ್ನು ಬೇರೆ ಬೇರೆ ನಾಮಗಳಿಂದ, ರೂಪಗಳಿಂದ ಪೂಜಿಸುವ ವಿಷಯದಲ್ಲಿ, ಪೂಜಿಸುವವರೊಂದಿಗೆ ಮನಸ್ತಾಪವಿಲ್ಲ.

ಸೂತ್ರ ಭಾಷ್ಯದಲ್ಲಿ ಆಚಾರ್ಯರು ಹೇಳುತ್ತಾರೆ.
    ನಿರ್ಗುಣಮಪಿ ಸದ್ಬ್ರಹ್ಮನಾಮರೂಪಗತೈರ್ಗುಣೈಃ
    ಸಗುಣಮುಪಾಸನಾರ್ಥಂ ತತ್ರ ತತ್ರುಪದಿಶ್ಯತೇ |
    ಸರ್ವಗತಸ್ಯಾಪಿ ಬ್ರಹ್ಮಣಃ
    ಉಪಲಭ್ದ್ಯರ್ಥಂ ಸ್ಥಾನವಿಶೇಷೋ ನ ವಿರುದ್ಧ್ಯತೇ
    ಶಾಲಗ್ರಾಮ ಇವ ವಿಷ್ಣೋಃ ||
(ಬ್ರಹ್ಮವು ನಿರ್ಗುಣವಾಗಿದ್ದರೂ, ನಾಮರೂಪ ಸಂಬಂಧಿಗಳಾದ ಗುಣಗಳಿಂದ ಸಹಿತವಾಗಿ ಉಪಾಸನೆಗೋಸ್ಕರ ಅಲ್ಲಲ್ಲಿ ಉಪದಿಷ್ಟವಾಗಿರುತ್ತದೆ. ಬ್ರಹ್ಮವು ಸರ್ವತ್ರ ಇದ್ದರೂ ಉಪಾಸನೆಗೋಸ್ಕರ ವಿಗ್ರಹಾದಿ ಸ್ಥಾನವಿಶೇಷವನ್ನು ಹೇಳಿರುವುದು ವಿರುದ್ಧವಲ್ಲ. ಸಾಲಗ್ರಾಮದಲ್ಲಿ ವಿಷ್ಣುವನ್ನು ಉಪಾಸನೆಮಾಡಿದಂತೆ, ವಿರೋಧವೇನೂ ಇಲ್ಲ)
    ಭಾಗವತದಲ್ಲಿ ಸೂಚಿಸಿರುವ ಭಕ್ತಿಯಾಗಲಿ, ತುಲಸೀದಾಸರ, ರಾಮಕೃಷ್ಣಪರಮಹಂಸರ, ಮಹಾರಾಷ್ಟ್ರದ ಅನೇಕ ಸಂತರ ಭಕ್ತಿಗಳಾಗಲೀ, ಅದ್ವೈತಸಿದ್ಧಾಂತಕ್ಕೆ ವಿರುದ್ಧವಲ್ಲ. ಅದ್ವೈತವು ಸಾಧಾನಾ ಪ್ರವೃತ್ತಿಗಳನ್ನಾಗಲೀ, ಅಂತಸತ್ವವನ್ನಾಗಲೀ ವಿರೋಧಿಸುವುದಿಲ್ಲ. ಬದಲಾಗಿ ಜೀವದ ಮತ್ತು ಬ್ರಹ್ಮದ ಅನನ್ಯತೆಯನ್ನು ಸ್ಥಾಪಿಸುತ್ತದೆ, ಆದರೆ ಈ ಅನನ್ಯತೆಯು ಲಭಿಸಿದ ನಂತರ ಸ್ವಪ್ಣದಲ್ಲಿ ಕಂಡ ಜಗತ್ತು ಹೇಗೆ ಅಳಿಯುತ್ತದೆಯೋ ಹಾಗೆಯೇ ಮಾಯೆಯಿಂದ ಬಿಡುಗಡೆ ಹೊಂದಿದ ಜಗತ್ತು ಬಾಧಿತವಾಗುತ್ತದೆ. ಸರ್ವಜೀವಿಗಳೂ ತಾನೇ ಎಂಬುದನ್ನು ಅರಿಯಬಹುದು ಇಂತಹ ಮೋಕ್ಷವು ಜ್ಞಾನದಿಂದ ಮಾತ್ರ ಸಾಧ್ಯ.
    ಅದ್ವೈತಸಿದ್ಧಾಂತವು ವೈಷ್ಣವ, ಶಾಕ್ತ, ಶೈವ ಮುಂತಾದ ಹಲವು ಹತ್ತುಪಂಥಗಳನ್ನು ಏಕಮೇವಾದ್ವಿತೀಯ ಬ್ರಹ್ಮದ ವಿವಿಧ ರೂಪಗಳೆಂದು ಅಂಗೀಕರಿಸುತ್ತದೆ.

ಅದ್ವೈತ ಮತ್ತು ಕರ್ಮ : ಅದ್ವೈತ ವೇದಾಂತದಲ್ಲಿ ಕರ್ಮಗಳಿಗೂ, ಆಚಾರಗಳಿಗೂ ಸ್ಥಾನವಿರುವುದು ಖಂಡಿತ, ಏಕೆಂದರೆ ಕರ್ಮವೂ ಶ್ರುತಿಪ್ರತಿಪಾದ್ಯವೇ, ಆದರೆ ಕರ್ಮವು ಚಿತ್ತಶುದ್ಧಿಗಾಗಿ ಮಾಡಬೇಕಾದದ್ದೇ ಹೊರತು ಬ್ರಹ್ಮವಸ್ತುಪ್ರಾಪ್ತಿಗಲ್ಲ. ಆಚಾರ್ಯರು ವಿವೇಕ ಚೂಡಾಮಣಿಯಲ್ಲಿ ಇದನ್ನು ಖಚಿತವಾಗಿ ಹೇಳಿದ್ದಾರೆ. "ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ದಯೇ"
    ಅವರೇ ತತ್ವೋಪದೇಶದಲ್ಲಿ "ಭಾವಾದ್ವೈತಂ ಸದಾ ಕುರ್ಯಾತ್, ಕ್ರಿಯಾ ದ್ವೈತಂ ನ ಕರ್ಹಿಬೇತ್" ಎಂದಿದ್ದಾರೆ. (ತತ್ವೋಪದೇಶ-78), (ಯಾವಾಗಲೂ ಅದ್ವೈತದ ಭಾವನೆಯಲ್ಲಿರು, ಕ್ರಿಯೆಯಲ್ಲಿ ಅದ್ವೈತವನ್ನು ಆಚರಿಸಬೇಡ).
    ಅಂದರೆ ಅವಿದ್ಯಾಕ್ಷೇತ್ರದಲ್ಲಿ ಅದ್ವೈತವು ಭೇದವನ್ನೂ, ದ್ವೈತವನ್ನೂ ಒಪ್ಪುತ್ತದೆ, ಆದ್ದರಿಂದ ಅದ್ವೈತವು ಕರ್ಮವನ್ನು ನಿಷೇಧಿಸುವುದಿಲ್ಲ ಅದರಂತೆ ಜೀವನ ದೃಷ್ಟಿ ಎಂದರೆ,
    "ಯೋಗರತೋ ವಾ ಭೋಗರತೋ ವಾ ಸಂಗರತೋ ವಾ ಸಂಗವಿಹೀನಃ ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ"
(ಯೋಗದಲ್ಲಿರಲಿ, ಭೋಗದಲ್ಲಿರಲಿ, ಎಲ್ಲರ ಜೊತೆಯಲ್ಲಿರಲಿ, ಏಕಾಂತದಲ್ಲಿರಲಿ, ಯಾವ ಮನಸ್ಸು ಬ್ರಹ್ಮದಲ್ಲಿ ನೆಲೆಯಾಗಿ ನಿಂತಿರುತ್ತದೆಯೋ ಅವನ ಮನಸ್ಸು ಆನಂದದಲ್ಲಿರುತ್ತದೆ.)
    ನಿತ್ಯ, ನೈಮಿತ್ತಿಕ ಕರ್ಮಗಳೆಲ್ಲಾ ಅವಶ್ಯಕವಾದ ಒಂದು ಅಭ್ಯಾಸ. ಮನುಷ್ಯನ ಪಾಶವೀ ಪ್ರವೃತ್ತಿಗೊಂದು ಕಡಿವಾಣ. ಇದರಿಂದ ಲಭಿಸುವ ಸಂಯಮದಿಂದ ಆತ್ಮಜ್ಞಾನಕ್ಕೆ ಬೇಕಾಗುವ ಯೋಗ್ಯತೆಯನ್ನು ಸಂಪಾದಿಸಿಕೊಳ್ಳಬಹುದು. ಮನುಷ್ಯನಿಗೆ ವಾಸನಾಕ್ಷಯದಿಂದಲೇ ಚಿತ್ತಶುದ್ಧಿಯಾಗಬೇಕು. ಇದಕ್ಕೆ ಕರ್ಮಗಳು ಸಹಾಯಕ. ತನ್ಮೂಲಕ ಇಂದ್ರಿಯನಿಗ್ರಹಕ್ಕೂ ದಾರಿಯಾಗಬೇಕು. ಆಚಾರ್ಯ ಶಂಕರರು ತಮ್ಮ ಗೀತಾಭಾಷ್ಯದಲ್ಲಿ ಹೇಳಿರುವುದು ಉಲ್ಲೇಖನೀಯ.
   
"ಕರ್ಮಯೋಗಶ್ಚ ಈಶ್ವರಾರ್ಪಿತ ಸರ್ವಭಾವೇನ ಈಶ್ವರೇ
 ಬ್ರಹ್ಮಣಿ ಆಧಾಯ ಕ್ರಿಯಾಮಾಣಃ ಸತ್ವಶುದ್ಧಿಜ್ಞಾನ
 ಪ್ರಾಪ್ತಿಸರ್ವಕರ್ಮಸಂನ್ಯಾಸಕ್ರಮೇಣ ಮೋಕ್ಷಾಯ ಇತಿ
 ಭಗವಾನ್ ಪದೇ ಪದೇ ಅಬ್ರವೀತ್ ವಕ್ಷ್ಯತಿ ಇತಿ ಚ " ||
    ಕರ್ಮವು ಮೋಕ್ಷವನ್ನು ನೇರವಾಗಿ ನೀಡದಿದ್ದರೂ ಚಿತ್ತಶುದ್ಧಿಗಾಗಿ ಅತ್ಯಂತ ಅವಶ್ಯಕವೇ. ಕರ್ಮ ಮಾಡದೇ ಇರಲು ಯಾರಿಗೂ ಸಾಧ್ಯವಿಲ್ಲ ಆದ್ದರಿಂದ ಕರ್ಮವನ್ನು ಯೋಗವನ್ನಾಗಿಸಿ ಚಿತ್ತಶುದ್ಧಿ ಪಡೆದು ಜ್ಞಾನ ಸಂಪಾದನೆ ಮಾಡುವುದ ಜಾಣತನ. ಇದನ್ನೇ ಯೋಗಃ ಕರ್ಮಸು ಕೌಶಲಂ ಎನ್ನುವುದು. ಜ್ಞಾನಪ್ರಾಪ್ತಿಯ ನಂತರ ಕರ್ಮದ ಅವಶ್ಯಕತೆಯಿಲ್ಲ.

ಜ್ಞಾನಾಗ್ನಿಃ ಸರ್ವಾ ಕರ್ಮಾಣಿ ಭಸ್ಮಸಾತ್ ಕುರುತೇ ತಥಾ - ಗೀತೆ 4-37
ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುದಾಃ - ಗೀತೆ 4-19
ಇತಿ ತೇ ಜ್ಞಾನಮಾಖ್ಯಾತಂ - ಗೀತೆ18-63
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ - ಗೀತೆ4-38

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ