ರಾಮರಹಸ್ಯೋಪನಿಷತ್
ಪ್ರತಿವರ್ಷವೂ ಯುಗಾದಿಯಿಂದ ಆರಂಭವಾಗುವ ಚೈತ್ರಮಾಸದಲ್ಲಿ ಶ್ರೀರಾಮ ನವರಾತ್ರಿಯ ಉತ್ಸವವು ದೇಶದಲ್ಲೆಲ್ಲ ನಡೆಯುತ್ತದೆ. ಶ್ರೀರಾಮನವಮಿವರೆಗೆ ಅನುಷ್ಠಾನಮಾಡಿ ಪಟ್ಟಾಭಿಷೇಕವನ್ನು ನೆರವೇರಿಸುವ ಪದ್ಧತಿಯನ್ನು ಗರ್ಭ ನವರಾತ್ರಿಯೆಂದೂ ನವಮಿಯಿಂದಲೇ ಉತ್ಸವಾರಂಭವನ್ನು ಮಾಡಿ ಒಂಭತ್ತು ದಿನಗಳ ಅನಂತರ ಪಟ್ಟಾಭಿಷೇಕವನ್ನು ನೆರವೇರಿಸುವ ಕ್ರಮವನ್ನು ಜನ್ಮನವರಾತ್ರಿಯೆಂದೂ ಕರೆಯುತ್ತಾರೆ. ಈ ಕಾಲದಲ್ಲಿ ಶ್ರೀಮದ್ರಾಮಾಯಣಪಾರಾಯಣ, ಹರಿಕಥೆ, ಸಂಗೀತ, ಭಜನೆ - ಮುಂತಾದ ಕಾರ್ಯಕ್ರಮಗಳು ಸಾಮಾನ್ಯವಾಗಿ ನಡೆಯುತ್ತವೆ. ಈಚೆಗೆ ಟಿ.ವಿ ರಾಮಾಯಣ ಫಿಲಂ ಪ್ರದರ್ಶನವೂ ಜಾರಿಗೆ ಬಂದಿದೆ. ಆದರೆ ವಿಶೇಷವಾಗಿ ರಾಮಮಂತ್ರ ಜಪ, ಪುರಶ್ಚರಣೆ, ರಾಮತತ್ತ್ವ ಕಥಾವ್ಯಾಖ್ಯಾನ, ರಾಮರಹಸ್ಯ, ರಾಮತಾಪಿನ್ಯಾದಿ ಉಪನಿಷತ್ತುಗಳ ಪಾರಾಯಣ - ಮುಂತಾದವು ನೆರವೇರುವದು ಅಪರೂಪವಾಗಿರುತ್ತದೆ. ಆದ್ದರಿಂದ ಈ ಲೇಖನದಲ್ಲಿ ರಾಮರಹಸ್ಯೋಪನಿಷತ್ತಿನ ಬಗ್ಗೆ ಸ್ಥೂಲವಾಗಿ ಪರಿಚಯಮಾಡಿಕೊಡಲು ಪ್ರಯತ್ನಿಸಿದೆ.
ಅಷ್ಟೋತ್ತರಶತೋಪನಿಷತ್ತುಗಳಲ್ಲಿ ಇದು 56ನೆಯದಾಗಿದೆ. ಇದು ಅಥರ್ವ ವೇದಕ್ಕೆ ಸೇರಿದ್ದು. 'ಭದ್ರಂ ಕರ್ಣೇಭಿಃ' ಎಂಬ ಶಾಂತಿಪಾಠವುಳ್ಳದ್ದಾಗಿದೆ. ಇದರಲ್ಲಿ ಒಟ್ಟು ಐದು ಅಧ್ಯಾಯಗಳು 145 ಮಂತ್ರಗಳೂ ಇವೆ. ಎರಡನೆಯ ಅಧ್ಯಾಯವೊಂದರಲ್ಲಿಯೇ 106 ಮಂತ್ರಗಳಿವೆ. ಮೂರನೆಯ ಅಧ್ಯಾಯವೆಲ್ಲ ಒಂದೇ ಮಂತ್ರ ರೂಪವಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಸನಕಾದಿಯೋಗಿಗಳೂ ಪ್ರಹ್ಲಾದಾದಿ ವಿಷ್ಣುಭಕ್ತರೂ ಕೂಡಿ ಆಂಜನೇಯನನ್ನು ಕುರಿತು ವೇದೇತಿಹಾಸಪುರಾಣಗಳಲ್ಲಿಯೂ ದೇವತೆಗಳಲ್ಲಿಯೂ ಅಂತರ್ಗತವಾಗಿರುವ ತತ್ತ್ವವು ಯಾವದೆಂದು ಕೇಳಿದ್ದಾರೆ. ಅದಕ್ಕೆ ಹನುಮಂತನು ಕೊಟ್ಟಿರುವ ಸಂಕ್ಷಿಪ್ತವಾದ ಉತ್ತರವು ಹೀಗಿದೆ :
ರಾಮ ಏವ ಪರಂ ಬ್ರಹ್ಮ ರಾಮ ಏವ ಪರಂ ತಪಃ |
ರಾಮ ಏವ ಪರಂ ತತ್ತ್ವಂ ಶ್ರೀರಾಮೋ ಬ್ರಹ್ಮ ತಾರಕಮ್ ||
ಅನಂತರ ಮತ್ತೆ ಕೆಲವು ಪ್ರಶ್ನೋತ್ತರಗಳೂ ರಾಮವಿಭೀಷಣರ ಸಂವಾದವೂ ಇದ್ದುಕೊಂಡು ಅಧ್ಯಾಯವು ಪೂರೈಸಿದೆ. ಎರಡನೆಯ ಅಧ್ಯಾಯವು ಬಹಳ ರಹಸ್ಯಮಯವಾಗಿದೆ. ಇದರಲ್ಲಿ ಶ್ರೀರಾಮನನ್ನು ಉಪಾಸನೆಮಾಡಲು ತಕ್ಕ ಮಂತ್ರಗಳಿವೆ. ಒಂದಕ್ಷರದ ಮಂತ್ರದಿಂದಾರಂಭಿಸಿ ಮೂವತ್ತೆರಡು ಅಕ್ಷರಗಳವರೆಗಿನ ಮಂತ್ರಗಳನ್ನು ವಿವರಿಸಿಕೊಡಲಾಗಿದೆ. ಇದರಲ್ಲಿ ತ್ರಯೋದಶಾಕ್ಷರಿಯೂ ಸೇರಿದ್ದು ಅದರ ವಿವರವನ್ನು ಹೀಗೆ ಕೊಡಲಾಗಿದೆ.
ಶ್ರೀರಾಮೇತಿ ಪದಂ ಚೋಕ್ತ್ವಾ ಜಯರಾಮ ತತಃ ಪರಮ್ |
ಜಯದ್ವಯಂ ವದೇತ್ ಪ್ರಾಜ್ಞೋ ರಾಮೇತಿ ಮನುರಾಜಕಃ ||
'ಶ್ರೀರಾಮ ಜಯರಾಮ ಜಯಜಯ ರಾಮ' ಎಂಬೀ ಹದಿಮೂರು ಅಕ್ಷರಗಳುಳ್ಳ ರಾಮಮಂತ್ರವು ಈಗ ಸಮರ್ಥರಾಮದಾಸಸಂಪ್ರದಾಯದಲ್ಲಿ ಪ್ರಸಿದ್ಧವಾಗಿದ್ದು ಭಕ್ತರುಗಳಿಂದ ಜಪ, ಪುರಶ್ಚರಣಾದಿಗಳಲ್ಲಿ ಉಪಯೋಗಿಸಲ್ಪಡುತ್ತಿದೆ. ಶ್ರೀ ಗೋಂದಾವಳಿ ಮಹಾರಾಜರು ಈ ಮಂತ್ರವನ್ನು ಹದಿಮೂರು ಕೋಟಿ (ತೇರಾ ಕೋಟಿ) ಜಪಮಾಡಿ ಸಿದ್ಧಿಯನ್ನು ಹೊಂದಿದರು. ಅವರನ್ನು 'ಮಾರುತಿಯ ಅವತಾರ'ವೆಂದೇ ಭಾವಿಸಲಾಗಿತ್ತು. ಈ ಮಂತ್ರವು ಸರ್ಮಕಾಮಫಲಪ್ರದವೆಂದು ಇಲ್ಲಿ ತಿಳಿಸಿದೆ. ಇದೇ ರೀತಿಯಲ್ಲಿ ಮೂವತ್ತೆರಡು ಅಕ್ಷರಗಳ ರಾಮಮಂತ್ರವನ್ನೂ ಇದೇ ಉಪನಿಷತ್ತಿನಲ್ಲಿ ಹೀಗೆ ಕೊಡಲಾಗಿದೆ :
ರಾಮಭದ್ರ ಮಹೇಷ್ವಾಸ ರಘವೀರ ನೃಪೋತ್ತಮ |
ಭೋ ದಶಾಸ್ಯಾಂತಕಾಸ್ಮಾಕಂ ಶ್ರಿಯಂ ದಾಪಯ ದೇಹಿ ಮೇ ||
ಈ ಮಂತ್ರವೂ ಲಕ್ಷ್ಮೀಪ್ರದವೂ ಸಕಲದಾರಿದ್ರ್ಯಭಯಾದಿಪರಿಹಾರಕವೂ ಆಗಿರುತ್ತದೆ. ಇದನ್ನು ಹತ್ತು ಲಕ್ಷ ಜಪಮಾಡಬೇಕೆಂದು ತಿಳಿಸಲಾಗಿದೆ.
ಇದೇ ಅಧ್ಯಾಯದಲ್ಲಿರುವ ರಾಮಗಾಯತ್ರೀ ಮಂತ್ರವು ಹೀಗಿದೆ :
ಓಂ ||
ದಾಶರಥಾಯ ವಿದ್ಮಹೇ ಸೀತಾವಲ್ಲಭಾಯ ಧೀಮಹಿ |
ತನ್ನೋ ರಾಮಃ ಪ್ರಚೋದಯಾತ್ ||
ಈ ಮಂತ್ರವು ಮುಕ್ತಿಯನ್ನೇ ಕೊಡುತ್ತದೆಯೆಂದು ಇಲ್ಲಿ ತಿಳಿಸಿದೆ. ಇನ್ನೊಂದು ಮಂತ್ರವನ್ನು ಉದಾಹರಿಸಿ ಈ ವಿಷಯವನ್ನು ಉಪಸಂಹಾರಮಾಡುವೆನು. ಅದನ್ನು ಅಷ್ಟಾಕ್ಷರಮಂತ್ರವೆಂದು ಕರೆಯಲಾಗಿದೆ. 'ಶ್ರೀರಾಮಃ ಶರಣಂ ಮಮ' ಎಂಬಿದೇ ಈ ಮಂತ್ರವು ಇದು ಎಲ್ಲಾ ಮಂತ್ರಗಳಿಗಿಂತಲೂ ಮಿಗಿಲಾದುದೆಂದು ಸರ್ವ ಮಂತ್ರಗಳ ಫಲವನ್ನೂ ಉಂಟುಮಾಡುವದೆಂದೂ ತಿಳಿಸಿದೆ.
ಇನ್ನು ಈ ಉಪನಿಷತ್ತಿನ ಮೂರನೆಯ ಅಧ್ಯಾಯದಲ್ಲಿ ಹಿಂದೆ ಹೇಳಿದ ಎಲ್ಲಾ ಮಂತ್ರಗಳ ಪೂಜಾಪೀಠವನ್ನು ತಿಳಿಸಿದೆ. ಪೂಜಾಪೀಠವೆಂದರೆ ಯಂತ್ರವೆಂದರ್ಥ. ಈ ಯಂತ್ರಗಳ ರಚನೆಯನ್ನು ಇಲ್ಲಿ ವಿವರಿಸಲಾಗಿದೆ. ನಾಲ್ಕನೆಯ ಅಧ್ಯಾಯದಲ್ಲಿ ರಾಮಮಂತ್ರಾರ್ಥರಹಸ್ಯವನ್ನು ವಿವರಿಸಲಾಗಿದೆ. ತತ್ತ್ವಮಸಿವಾಕ್ಯಕ್ಕೂ ರಾಮನಾಮಕ್ಕೂ ಸಮನ್ವಯಮಾಡಲಾಗಿದೆ. ರಾ-ಎಂಬಿದೇ ತತ್ಪದಾರ್ಥವು ಮ-ಎಂಬಿದು ತ್ವಂಪದಾರ್ಥವು. ಈ ಎರಡಕ್ಷರಗಳ ಸಂಯೋಜನವೇ ಅಸಿಪದಾರ್ಥವು. 'ರಾಮಾಯ ನಮಃ' ಎಂಬಲ್ಲಿ ನಮಃ ಎಂಬಿದು ತ್ವಂ ಪದಾರ್ಥವು. ರಾಮ ಎಂಬಿದು ತತ್ಪದಾರ್ಥವು ಚತುರ್ಥಿವಿಭಕ್ತಿಯು ಅಸಿಪದಾರ್ಥವು. ಹೀಗೂ ವ್ಯಾಖ್ಯಾನ ಮಾಡಲಾಗಿದೆ. ಈ ಮಂತ್ರಗಳ ಜಪದಲ್ಲಿ ಎಲ್ಲಾ ಮಾನವರಿಗೂ ಅಧಿಕಾರವಿದೆ ಎಂದು ತಿಳಿಸಿದೆ. ಇಂಥ ಅಮೂಲ್ಯವಿಚಾರಗಳುಳ್ಳ ರಾಮರಹಸ್ಯೋಪನಿಷತ್ತನ್ನೂ ಅದರಲ್ಲಿರುವ ಮಂತ್ರಗಳ ಜಪ, ಅನುಸಂಧಾನಾದಿಗಳನ್ನೂ ರಾಮೋತ್ಸವಕಾಲಕ್ಕೆ ಭಕ್ತರುಗಳು ಸೇವಿಸಿ ಕೃತಾರ್ಥರಾಗಬಹುದಾಗಿದೆ.
Erudite analysis and lucid interpretation of RAMA the potential one word mantra.
ReplyDeleteKudos to the author.
Erudite analysis and lucid interpretation of RAMA the potential one word mantra.
ReplyDeleteKudos to the author.