ಶನೈಶ್ಚರ
ಶನಿ ಎಂಬುದು ನವಗ್ರಹಗಳಲ್ಲೊಬ್ಬನಾದ ದೇವತೆಯ ಹೆಸರು. ಈಶ್ವರ ಶಬ್ದವನ್ನು ಕೊನೆಯಲ್ಲಿ ಜೋಡಿಸಿದರೆ 'ಶನೀಶ್ವರ' ಎಂಬ ನಾಮವಾಗುವದು. ಗ್ರಹಗಳಲ್ಲಿ ಬಹಳ ವಿಳಂಬ (ಮಂದ)ಗತಿಯಿಂದ ಸಂಚರಿಸುವವನೇ ಶನಿಯು. ಏಕೆಂದರೆ ಆತನ ಸಂಚಾರಪಥವೇ ಬಹಳ ದೊಡ್ಡದು. ಆದ್ದರಿಂದ ಚಂದ್ರನು ಎರಡೂವರೆದಿನಗಳಲ್ಲಿ ಒಂದು ರಾಶಿಯನ್ನು ದಾಟಿದರೆ ಶನಿಯು ಅದನ್ನು ದಾಟಲು ಎರಡೂವರೆವರ್ಷಗಳ ಕಾಲವೇ ಬೇಕಾಗುವದು. ಹೀಗೆ ಗ್ರಹಗಳಲ್ಲಿ ಬಹಳ ಮಂದಗತಿಯವನಾದ ಶನಿಯನ್ನು 'ಮಂದ'ನೆಂಬ ಹೆಸರಿನಿಂದಲೂ ಕರೆಯುತ್ತಾರೆ. ಉಳಿದ ಗ್ರಹಗಳೆಲ್ಲರೂ ಅತಿ ಶೀಘ್ರಗತಿಯಾದ ಚಂದ್ರನಿಗೂ ಅತಿ ಮಂದಗತಿಯಾದ ಶನಿಗೂ ನಡುವಿನ ಕಾಲವ್ಯವಧಾನದಲ್ಲಿ ಒಂದೊಂದು ರಾಶಿಯನ್ನು ದಾಟುತ್ತಾರೆ. ಜ್ಯೋತಿಷ್ಯಸಿದ್ಧಾಂತದಂತೆ ಶನಿಗೆ ವಕ್ರಗತಿಯೂ ಉಂಟು. ಎಂದರೆ ನಕ್ಷತ್ರಗಳ ಪಾದಗಳನ್ನು ದಾಟುವಾಗ ಕೆಲವು ಸಲ ಹಿಂದಕ್ಕೆ ಬರುತ್ತಾನೆ. ಸೂರ್ಯಚಂದ್ರರಿಗೆ ಮಾತ್ರ ವಕ್ರಗತಿಯಿರುವದಿಲ್ಲ, ಆದ್ದರಿಂದಲೇ ಸೋಮವಾರದ ನಂತರ ಮಂಗಳವಾರವೇ ಹೊರತು ಮತ್ತೆ ಭಾನುವಾರವು ಬರುವದಿಲ್ಲ. ಇದು ಹಾಗಿರಲಿ. ಅಂತೂ ಮೆಲ್ಲಗೆ ದಾಟುವ ಶನಿಯನ್ನು ಸಂಸ್ಕೃತ ಭಾಷೆಯಲ್ಲಿ "ಶನೈಃ ಚರತಿ ಇತಿ ಶನೈಶ್ವರಃ" ಎಂಬ ವ್ಯುತ್ಪತ್ತಿಯಂತೆ 'ಶನೈಶ್ಚರ'ನೆಂದೂ ಕರೆಯುತ್ತಾರೆ. ಶನೇಶ್ವರ, ಶನೈಶ್ವರ - ಎಂಬ ಕನ್ನಡ ಪ್ರಯೋಗಗಳು ತಪ್ಪು. ಈ ದೇವತೆಯನ್ನು ಕುರಿತು ಶನಿವಾರದ ದಿನ ಮಾಡುವ ಪೂಜೆಯೇ ಶನೈಶ್ಚರವ್ರತವು. 'ಶನಿ...