ಅಜಾತಿವಾದ

    ವೇದಾಂತಸಂಪ್ರದಾಯದಲ್ಲಿ ಶ್ರೀ ಗೌಡಪಾದರಿಗೆ ಬಹಳ ಉನ್ನತವಾದ ಸ್ಥಾನವಿದೆ. ಈ ಮಹನೀಯರು ರಚಿಸಿರುವ ಮಾಂಡೂಕ್ಯೋಪನಿಷತ್ತಿನ ವ್ಯಾಖ್ಯಾನ ರೂಪವಾದ ಕಾರಿಕೆಗಳು ವೇದಾಂತಸಿದ್ದಾಂತಪ್ರಪಂಚದಲ್ಲಿ ಚಿಂತಾಮಣಿರತ್ನದಂತೆ ಮುಮುಕ್ಷುಗಳಿಗೆ ಅಪೂರ್ವಲಾಭವಾಗಿವೆ. ಶ್ರೀಗೌಡಪಾದರವರ ವೇದಾಂತ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ 'ಅಜಾತಿವಾದ' ಎಂಬ ಒಂದೇ ಮಾತಿನಲ್ಲಿ ಅಡಕಮಾಡಿಬಿಡಬಹುದು. ಆದ್ದರಿಂದ ಅಜಾತಿವಾದವೆಂದರೇನು?
   
ನ ಕಶ್ಚಿಜ್ಜಾಯೆತೇ ಜೀವಃ ಸಂಭವೋsಸ್ಯ ನ ವಿದ್ಯತೇ |
ಏತತ್ತದುತ್ತಮಂ ಸತ್ಯಂ ಯತ್ರ ಕಿಂಚಿನ್ನ ಜಾಯತೇ ||
       
    'ಯಾವನೊಬ್ಬ ಜೀವನೂ ಹುಟ್ಟಿರುವದಿಲ್ಲ. ಇವನಿಗೆ ಹುಟ್ಟೆಂಬುದೇ ಇಲ್ಲ. ಹೀಗೆ ಹುಟ್ಟು ಎಂಬುದು ಇಲ್ಲವೇ ಇಲ್ಲ; ಏನೊಂದೂ ಹುಟ್ಟಿರುವದಿಲ್ಲ - ಎಂಬಿದೇ ಪರಮಾರ್ಥವಾದ ಉತ್ತಮಸತ್ಯವು' ಎಂಬಿದು ಮೇಲಿನ ಕಾರಿಕೆ ಅಕ್ಷರಾರ್ಥವು.
   
    ಹೀಗೆ ಹುಟ್ಟು - ಎಂಬಿದನ್ನೇ ಹುಟ್ಟಡಗಿಸಿರುವ ಸತ್ಯದ ತಿರುಳೇನು? ಎಂಬಿದು ವಿಚಾರಣೀಯವಾಗಿದೆ. ಏಕೆಂದರೆ ವ್ಯವಹಾರದೃಷ್ಟಿಯಲ್ಲಿ ಇದು ತೀರ ವಿರುದ್ಧವಾಗಿ ಕಂಡುಬರುತ್ತದೆ. ಲೌಕಿಕರು, ಅಜ್ಞಾನಿಗಳು - ಹಾಗಿರಲಿ; ವಿವೇಕಿಗಳೂ ವಿದ್ಯಾವಂತರೂ ಪ್ರಾಜ್ಞರೂ ಸಹ ಜಗತ್ತು ಹುಟ್ಟಿದೆ - ಎಂದೇ ತಿಳಿದಿದ್ದಾರೆ. ವೇದಾಂತಿಗಳನ್ನು ಬಿಟ್ಟರೆ ಉಳಿದ ದರ್ಶನಕಾರರುಗಳು ಸಹ ಪ್ರಪಂಚದ ಸೃಷ್ಟಿಯನ್ನು ಒಪ್ಪಿರುತ್ತಾರೆ. ಅವೈದಿಕಮತಗಳವರು ಕೂಡ ದೇವರು ಪ್ರಪಂಚವನ್ನು ಸೃಷ್ಟಿಸಿದನು - ಎಂದು ಹೇಳುತ್ತಾರೆ. ಹೀಗಿರುವಲ್ಲಿ ಏನೂ ಹುಟ್ಟಿಲ್ಲ-ಎಂಬಿದನ್ನು ಒಪ್ಪುವದು ಹೇಗೆ? ಎನಿಸುತ್ತತೆ, ಆದರೆ ಗೌಡಪಾದರು ಹೇಳುವದೇನೆಂದರೆ: 'ಲೋಕದಲ್ಲಿ ಹುಟ್ಟಿಧೆ-ಎಂಬ ವ್ಯವಹಾರವಿರುವದು ನಿಜ; ಅದನ್ನೆನೂ ನಾವು ಅಲ್ಲಗಳೆದಿಲ್ಲ, ಆದರೆ ಪ್ರರಮಾರ್ಥವಾಗಿ ಕಂಡುಕೊಂಡಲ್ಲಿ ಏನು ಹುಟ್ಟಿಲ್ಲವೆಂದೇ ನಿರ್ಣಯವಾಗುತ್ತದೆ' ಎಂದಿರುತ್ತಾರೆ. ಇದಕ್ಕೆ ಅವರು ಕೊಡುವ ಕೆಲವು ಯುಕ್ತಿಗಳನ್ನು ಈಗ ನೋಡೋಣ.

    1. ವಾದಿಗಳು - ಎಂದರೆ ಸಾಂಖ್ಯಾದಿದರ್ಶನಕಾರರುಗಳು ಹುಟ್ಟಿನ ವಿಷಯಕ್ಕೆ ಪರಸ್ಪರವಿರುದ್ಧಾಭಿಪ್ರಾಯವುಳ್ಳವರಾಗಿರುತ್ತಾರೆ. ಹೇಗೆಂದರೆ; ಸಾಂಖ್ಯರು ಸತ್ಕಾರ್ಯವಾದಿಗಳು - ಎಂದರೆ ಇದ್ದದ್ದು ಹುಟ್ಟುತ್ತದೆಯೇ ಹೊರತು ಇಲ್ಲದ್ದು ಹುಟ್ಟುವದಿಲ್ಲ- ಎನ್ನುತ್ತಾರೆ. ಎಳ್ಳಿನಿಂದ ಎಣ್ಣೆ ಹುಟ್ಟುತ್ತದೆ ಎಂಬಲ್ಲಿ ಎಳ್ಳಿನಲ್ಲಿ ಎಣ್ಣೆಯು ಅಡಗಿರಬೇಕಷ್ಟೆ! ಇಲ್ಲವಾದರೆ ಎಣ್ಣೆಯನ್ನು ತೆಗೆಯಲು ಎಳ್ಳನ್ನೇ ಏಕೆ ತೆಗೆದುಕೊಳ್ಳಬೇಕು? ಇಲ್ಲದ್ದು ಹುಟ್ಟುವದಾದರೆ ಮರಳಿನಿಂದಲೂ ಎಣ್ಣೆಯನ್ನು ತೆಗೆಯಬಹುದಲ್ಲ! ಎನ್ನುತ್ತಾರೆ. ಆದ್ದರಿಂದ ಇವರ ಅಭಿಪ್ರಾಯದಂತೆ 'ಇಲ್ಲದ್ದು ಹುಟ್ಟುವದಿಲ್ಲ' ಎಂದಾಗುತ್ತದೆ.
   
    2. ಈ ಸತ್ಕಾರ್ಯವಾದವನ್ನು ವಿರೋಧಿಸಿ ವೈಶೇಷಿಕರು ಹೇಳುತ್ತಾರೇನೆಂದರೆ ಕಾರ್ಯವು ಹೊಸದಾಗಿಯೇ ಉಂಟಾಗುತ್ತದೆ ಅಥವಾ ಹುಟ್ಟುತ್ತದೆ. ಅದು ಮೊದಲು ಅಸತ್ತಾಗಿತ್ತು ಎಂದರೆ ಇರಲಿಲ್ಲ ಉದಾಹರಣೆಗೆ ಮಡಿಕೆಯು ಮೊದಲು ಇರಲಿಲ್ಲ ಕುಂಬಾರನು ಮಣ್ಣು ತೆಗೆದುಕೊಂಡು ಮಾಡಿದ್ದರಿಂದ ಹೊರ ಬಂದಿತು. ಮಣ್ಣಿನ ರೂಪದಲ್ಲಿದ್ದಾಗ ಅದನ್ನು ಯಾರೂ ಮಡಕೆ ಎನ್ನಲಿಲ್ಲ ಅದು ನೀರು ತರುವದಕ್ಕೆ ಬರುತ್ತಲೂ ಇರಲಿಲ್ಲ ಹೊಸದಾಗಿ ಮಡಕೆಯಾಗಿ ಹುಟ್ಟಿದಮೇಲೆಯೇ ಮಡಕೆ ಎನಿಸಿ ವ್ಯವಹಾರಯೋಗ್ಯವಾಯಿತು. ಹೀಗೆ ಕಾರ್ಯವು ಮೊದಲು ಇಲ್ಲವಾಗಿದ್ದು ಅನಂತರ ಇದೆ ಎನಿಸುತ್ತದೆ. ಆದ್ದರಿಂದ ಇಲ್ಲದ್ದು ಹುಟ್ಟುತ್ತದೆಯೇ ಹೊರತು ಇದ್ದದ್ದೇ ಹುಟ್ಟುತ್ತದೆ ಎಂದರೆ ಅರ್ಥವೇ ಇಲ್ಲ ಇದು ವೈಶೇಷಿಕರ ವಾದ.
    ಈಗ ಗೌಡಪಾದರ ಸಿದ್ಧಾಂತವೇನೆಂದರೆ: ಈ ಸಾಂಖ್ಯವೈಶೇಷಿಕರಿಬ್ಬರೂ ಸೇರಿ ಅಜಾತಿವಾದವನ್ನೇ ಸ್ಥಾಪಿಸಿದಂತಾಯಿತಲ್ಲವೇ? ಲೋಕದಲ್ಲಿ ಯಾವ ವಸ್ತುವನ್ನೇ ಆದರೂ ಇದೆ ಅಥವಾ ಇಲ್ಲ ಎಂಬ ಎರಡು ವಿಧದಲ್ಲಿ ವ್ಯವಹರಸುವೆವು ಸಾಂಖ್ಯರ ಪ್ರಕಾರ ಇಲ್ಲದ್ದು ಹುಟ್ಟುವದಿಲ್ಲ, ವೈಶೇಷಿಕರ ಪ್ರಕಾರ ಇದ್ದದ್ದು ಹುಟ್ಟುವದಿಲ್ಲ. ಈ ಎರಡನ್ನೂ ಕೂಡಿಸಿದರೆ ಇದ್ದದ್ದೂ ಹುಟ್ಟುವದಿಲ್ಲ, ಇಲ್ಲದ್ದೂ ಹುಟ್ಟುವದಿಲ್ಲ ಒಟ್ಟಿನಲ್ಲಿ ಏನೂ ಹುಟ್ಟುವದಿಲ್ಲ-ಎಂಬಿದೇ ಕಡೆಯ ತೀರ್ಮಾನವಾಗುತ್ತದೆ ಎಂದು ತಿಳಿಸುತ್ತಾರೆ ಇದೇ ಅಜಾತಿವಾದವು.
    ಶ್ರೀ ಗೌಡಪಾದರು ಅಜಾತಿವಾದಕ್ಕೆ ಹೇಳುವ ಮತ್ತೊಂದು ಉಪಪತ್ತಿಯು ಹೀಗಿದೆ : ಶ್ರುತಿಗಳಲ್ಲಿಯೇ ಬ್ರಹ್ಮದಿಂದ ಜಗತ್ತು ಹುಟ್ಟಿತು-ಎಂದಿದೆಯಲ್ಲ? ನೀವು ಶ್ರುತಿಯನ್ನು ಒಪ್ಪುವವರೇತಾನೆ? ಎಂದರೆ ನಿಜ. ಅನೇಕಕಡೆಗಳಲ್ಲಿ ಶ್ರುತಿಯು ಬ್ರಹ್ಮದಿಂದ ಜಗತ್ತು ಉಂಟಾಗಿದೆ-ಎಂದು ಹೇಳಿರುವದು ಸರಿ. ಆದರೆ 'ಹುಟ್ಟಿದೆ' ಎಂದು ಮಾತ್ರ ಹೇಳಿದೆಯೇ ಹೊರತು 'ನಿಜವಾಗಿ ಹುಟ್ಟಿದೆ' ಎಂದೇನೂ ಅವಧಾರಣೆಮಾಡಿ ಹೇಳಿರುವದಿಲ್ಲ. ಆದ್ದರಿಂದ ಲೋಕದೃಷ್ಟಿಯಿಂದ ಹುಟ್ಟಿದೆ-ಎಂದಿಟ್ಟುಕೊಂಡಲ್ಲಿ ಶ್ರುತಿಗಳಲ್ಲಿ ಹೇಳಿರುವ ಸೃಷ್ಟಿಯು ಬ್ರಹ್ಮವನ್ನು ತಿಳಿಯುವದಕ್ಕೆ ಉಪಾಯ ಮಾತ್ರವೆಂದಾಗುತ್ತದೆ. ಆಗಲೂ ಅಜಾತಿವಾದವೇ ಸಿದ್ಧವಾಗುತ್ತದೆ. ಇನ್ನು 'ಜಾತಿ' ಎಂದರೆ ಹುಟ್ಟು ಎಂಬರ್ಥವನ್ನೇ ತೆಗೆದುಕೊಳ್ಳಬೇಕು. ಜಾತಿ-ಮತ ಎಂಬ ಈಗಿನ ವ್ಯವಹಾರದ ಅರ್ಥವು ಇಲ್ಲಿ ಹೊಂದುವದಿಲ್ಲ. ಹೀಗೆ ಶ್ರೀಗೌಡಪಾದರು ಅಜಾತಿಯವಾದವನ್ನು ಪ್ರತಿಪಾದಿಸಿರುವದನ್ನು ಮುಮುಕ್ಷುಗಳು ಅನುಸಂಧಾನ ಮಾಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ