ಶನೈಶ್ಚರ
ಶನಿ ಎಂಬುದು ನವಗ್ರಹಗಳಲ್ಲೊಬ್ಬನಾದ ದೇವತೆಯ ಹೆಸರು. ಈಶ್ವರ ಶಬ್ದವನ್ನು ಕೊನೆಯಲ್ಲಿ ಜೋಡಿಸಿದರೆ 'ಶನೀಶ್ವರ' ಎಂಬ ನಾಮವಾಗುವದು. ಗ್ರಹಗಳಲ್ಲಿ ಬಹಳ ವಿಳಂಬ (ಮಂದ)ಗತಿಯಿಂದ ಸಂಚರಿಸುವವನೇ ಶನಿಯು. ಏಕೆಂದರೆ ಆತನ ಸಂಚಾರಪಥವೇ ಬಹಳ ದೊಡ್ಡದು. ಆದ್ದರಿಂದ ಚಂದ್ರನು ಎರಡೂವರೆದಿನಗಳಲ್ಲಿ ಒಂದು ರಾಶಿಯನ್ನು ದಾಟಿದರೆ ಶನಿಯು ಅದನ್ನು ದಾಟಲು ಎರಡೂವರೆವರ್ಷಗಳ ಕಾಲವೇ ಬೇಕಾಗುವದು. ಹೀಗೆ ಗ್ರಹಗಳಲ್ಲಿ ಬಹಳ ಮಂದಗತಿಯವನಾದ ಶನಿಯನ್ನು 'ಮಂದ'ನೆಂಬ ಹೆಸರಿನಿಂದಲೂ ಕರೆಯುತ್ತಾರೆ. ಉಳಿದ ಗ್ರಹಗಳೆಲ್ಲರೂ ಅತಿ ಶೀಘ್ರಗತಿಯಾದ ಚಂದ್ರನಿಗೂ ಅತಿ ಮಂದಗತಿಯಾದ ಶನಿಗೂ ನಡುವಿನ ಕಾಲವ್ಯವಧಾನದಲ್ಲಿ ಒಂದೊಂದು ರಾಶಿಯನ್ನು ದಾಟುತ್ತಾರೆ. ಜ್ಯೋತಿಷ್ಯಸಿದ್ಧಾಂತದಂತೆ ಶನಿಗೆ ವಕ್ರಗತಿಯೂ ಉಂಟು. ಎಂದರೆ ನಕ್ಷತ್ರಗಳ ಪಾದಗಳನ್ನು ದಾಟುವಾಗ ಕೆಲವು ಸಲ ಹಿಂದಕ್ಕೆ ಬರುತ್ತಾನೆ. ಸೂರ್ಯಚಂದ್ರರಿಗೆ ಮಾತ್ರ ವಕ್ರಗತಿಯಿರುವದಿಲ್ಲ, ಆದ್ದರಿಂದಲೇ ಸೋಮವಾರದ ನಂತರ ಮಂಗಳವಾರವೇ ಹೊರತು ಮತ್ತೆ ಭಾನುವಾರವು ಬರುವದಿಲ್ಲ. ಇದು ಹಾಗಿರಲಿ. ಅಂತೂ ಮೆಲ್ಲಗೆ ದಾಟುವ ಶನಿಯನ್ನು ಸಂಸ್ಕೃತ ಭಾಷೆಯಲ್ಲಿ "ಶನೈಃ ಚರತಿ ಇತಿ ಶನೈಶ್ವರಃ" ಎಂಬ ವ್ಯುತ್ಪತ್ತಿಯಂತೆ 'ಶನೈಶ್ಚರ'ನೆಂದೂ ಕರೆಯುತ್ತಾರೆ. ಶನೇಶ್ವರ, ಶನೈಶ್ವರ - ಎಂಬ ಕನ್ನಡ ಪ್ರಯೋಗಗಳು ತಪ್ಪು. ಈ ದೇವತೆಯನ್ನು ಕುರಿತು ಶನಿವಾರದ ದಿನ ಮಾಡುವ ಪೂಜೆಯೇ ಶನೈಶ್ಚರವ್ರತವು.
'ಶನಿಮಾಹಾತ್ಮ್ಯ'ವೆಂದು ಈಗ ಪ್ರಸಿದ್ಧವಾಗಿರುವ ವಿಕ್ರಮಾದಿತ್ಯನ ಕಥೆಯು ಈವರೆಗೂ ನನಗೆ ಯಾವ ಪುರಾಣಗ್ರಂಥಗಳಲ್ಲಿಯೂ ದೊರೆತಿಲ್ಲ. ನಿಬಂಧಕಾರರೂ ವಿಕ್ರಮಾದಿತ್ಯನ ಕಥೆಯನ್ನು ಪ್ರಸ್ತಾಪಿಸಿಲ್ಲ. ಆದರೆ ಕನ್ನಡದಲ್ಲಿ ಗದ್ಯ-ಪದ್ಯ-ನಾಟಕಗಳ ಮಾಧ್ಯಮದಿಂದ ಪ್ರಸಿದ್ಧವಾಗಿರುವ ಈ ಕಥೆಗೆ ಮೂಲವೇನೆಂಬುದು ತಿಳಿಯದು. ಸ್ಕಂದಪುರಾಣದಲ್ಲಿ ದಶರಥಮಹಾರಾಜನು ಶನಿಮಹಾತ್ಮನನ್ನು ಆರಾಧನೆಮಾಡಿ ವರವನ್ನು ಪಡೆದುಕೊಂಡ ವಿಚಾರವಾಗಿ ಕಥೆಯಿದೆಯೆಂದು ನಿಬಂಧಕಾರರು ತಿಳಿಸಿದ್ದಾರೆ. ಅದಕ್ಕೆ ಅನುಗುಣವಾಗಿ ಈಗ ಪ್ರಸ್ತಾಪಿಸುವೆನು. ಪೂಜಾವಿಧಾನವನ್ನು ಸಂಕ್ಷೇಪವಾಗಿ ಹೀಗೆ ತಿಳಿಸಿದೆ. ಶ್ರಾವಣ ಮಾಸದ ಶನಿವಾರಗಳಲ್ಲಿ ಅಥವಾ ಜಯಂತಿಯಂದು ಈ ವ್ರತವನ್ನು ಮಾಡಬೇಕು. ಬೆಳಗ್ಗೆ ಸ್ನಾನಮಾಡಿ - ಎಂದರೆ ತೈಲಾಭ್ಯಂಗನವನ್ನು ಮಾಡಿಕೊಂಡು ನಿತ್ಯಕರ್ಮಗಳ ಅನಂತರ, ಬನ್ನಿಮರದ ಬುಡ ಅಥವಾ ಅರಳೀಮರದ ಬುಡದಲ್ಲಿ ಶನಿಯನ್ನು ಪೂಜಿಸಬೇಕು. ಎಳ್ಳಿನ ರಾಶಿಯ ಮೇಲೆ ಬಿಲ್ಲಿನ ಆಕಾರದ ಚಿತ್ರವನ್ನು ಬರೆದು ನೀಲರತ್ನದಿಂದ ಅಲಂಕೃತವಾದ ಚಿನ್ನದ ಶನಿಪ್ರತಿಮೆಯನ್ನು ಸ್ಥಾಪಿಸಿ 'ಶಮಗ್ನಿಃ' ಎಂಬ ಮಂತ್ರದಿಂದಾವಾಹಿಸಿ ಪೂಜಿಸಬೇಕು. ಗಂಧಪುಷ್ಪಧೂಪದೀಪಾದಿ ಉಪಚಾರಗಳ ಅನಂತರ ಎಳ್ಳು, ಉದ್ದಿನ ಅನ್ನ - ಭಕ್ಷ್ಯಗಳನ್ನು ನೈವೇದ್ಯಮಾಡಿ ಪೂಜೆಯನ್ನು ಮುಗಿಸಬೇಕು. ಉದ್ಯಾಪನೆಮಾಡುವಾಗ ಹೋಮವನ್ನೂ ಆಚರಿಸಿ ಕಡೆಯಲ್ಲಿ ಶಮಿವೃಕ್ಷವನ್ನು ಕಬ್ಬಿಣದ ಶನಿದೇವನ ಪ್ರತಿಮೆಯನ್ನು ದಾನಮಾಡಬೇಕು ನಂತರ ದಶರಥನು ಮಾಡಿದ ಶನಿಸ್ತೋತ್ರವನ್ನು ಪಠಿಸಬೇಕು.
ತ್ರೇತಾಯುಗದಲ್ಲಿ ದಶರಥಮಹಾರಾಜನು ರಾಜ್ಯಭಾರಮಾಡುತ್ತಿರುವ ಕಾಲಕ್ಕೆ ಜ್ಯೋತಿಷ್ಯರು ತಿಳಿಸಿದಂತೆ ಶನಿಗ್ರಹವು "ರೋಹಿಣೀಶಕಟಭೇದ"ವೆಂಬ ದುರ್ಯೋಗವನ್ನುಂಟುಮಾಡಲಿರುವದರಿಂದ ಹನ್ನೆರಡುವರ್ಷಕಾಲ ದುರ್ಭಿಕ್ಷವು ಸಂಭವಿಸುತ್ತದೆಯೆಂದು ಗೊತ್ತಾಯಿತು. ಆಗ ರಾಜನು ತನ್ನ ಆತ್ಮಶಕ್ತಿಯಿಂದ ಶನಿಮಂಡಲಕ್ಕೇ ಪ್ರಯಾಣಮಾಡಿ ಆತನ ಸಂಚಾರಪಥಕ್ಕೆ ಅಡ್ಡಲಾಗಿ ನಿಂತು ಸಂಹಾರಾಸ್ತ್ರವನ್ನು ಹಿಡಿದನು. ಶನಿಮಹಾರಾಯನು ಈ ಚಕ್ರವರ್ತಿಯ ಪರಾಕ್ರಮಕ್ಕೆ ಮೆಚ್ಚಿ ತನ್ನ ಸಂಚಾರಪಥವನ್ನು ಬದಲಾಯಿಸುವದಾಗಿ ತಿಳಿಸಿದನು. ಕೂಡಲೆ ರಾಜನು ಧನುರ್ಬಾಣಗಳನ್ನು ಇಳಿಸಿ ಪರಮಭಕ್ತಿಯಿಂದ ಶನಿಯನ್ನು ಸ್ತುತಿಸಿದನು. "ಶನಿ ಮಹಾರಾಜನು ಪರಮ ತಪಸ್ವಿಯು. ಮಹಾಜ್ಞಾನಿಯು ಆದ್ದರಿಂದಲೇ ಬಡಕಲಶರೀರವುಳ್ಳವನು. ಜ್ಞಾನಚಕ್ಷುವುಳ್ಳವನು ಯಾವಾಗಲೂ ಕೆಳಗೆ ನೋಡುವವನು. (ಇದು ರಾಜರುಗಳು, ಮಹಾತಪಸ್ವಿಗಳಾದ ಪೀಠಾಧಿಪತಿಗಳಿಗೂ ಅನ್ವಯಿಸುವದು. ಏಕೆಂದರೆ ಯಾರಮೇಲೂ ಅಂಥವರ ದೃಷ್ಟಿ ಬೀಳಬಾರದು). ಶನಿಯೂ ಅಂಥ ಮಹಾಮಹಿಮನೇ ಆಗಿರುವನು. ಕಶ್ಯಪರ ಮಗನಾದ ಸೂರ್ಯನ ಪುತ್ರನೇ ಈತನು. ಬ್ರಹ್ಮನಿಷ್ಠರಾದ ಪಿಪ್ಪಲಾದಋಷಿಗಳಿಂದ ಸಂಸ್ತುತನಾದವನು" - ಇತ್ಯಾದಿ ರೂಪವಾದ ದಶರಥನ ಸ್ತೋತ್ರವು ಶನಿಮಹಾತ್ಮನನ್ನು ಸಂತೋಷಗೊಳಿಸಿತು. ಆದ್ದರಿಂದ ಶನಿವ್ರತಮಾಡುವವರು ದಶರಥಕೃತ ಶನಿಸ್ತೋತ್ರವನ್ನು ಪಠಿಸಬೇಕು.
This comment has been removed by the author.
ReplyDeleteಗೊತ್ತಿಲ್ಲದಿದ್ದರೆ ಬರೆಯಬೇಡಿ.... ಶನಿಯ ಹೆಸರಿಗೆ ಈಶ್ವರ ಎಂದು ಯಾವ ಆಧಾರದ ಮೇಲೆ ಸೇರಿಸುವಿರಿ? ಅದು ಶನೇಶ್ವರ ಅಲ್ಲ ಶನೈಚ್ಚರ..ಚರ ಎಂದರೆ.. ಮಂದ ಗತಿಯಲ್ಲಿ ಸಾಗುವವನು ಎಂದು ಅರ್ಥ..ಈಶ್ವರ ಎಂಬ ಹೆಸರು ಈಶ್ವರನಿಗೆ ಮಾತ್ರ ಅಂಕಿತ... ಯಾವ ಆಧಾರ ಮೇಲೆ ವಿಕ್ರಮಾದಿತ್ಯನ ಕಥೆ ಯಾವ ಪುರಾಣ ದಲ್ಲೂ ಇಲ್ಲ ಎಂದು ಬರುದಿರಿವಿರಿ?... ಶಿವಪುರಾಣವನ್ನು ಓದಿಲ್ಲವೇ?...
ReplyDelete