ನಾಗರ ಪಂಚಮಿ ವ್ರತ
ಈ ವ್ರತವನ್ನು ಶ್ರಾವಣ ಶುಕ್ಲ ಪಂಚಮಿ ದಿನ ಪ್ರತಿ ವರ್ಷವೂ ಭಕ್ತರು ಆಚರಿಸುತ್ತಾರೆ. ಉಳಿದ ಎಲ್ಲಾ ವ್ರತಗಳಿಗಿಂತಲೂ ಕಟ್ಟುನಿಟ್ಟಾಗಿ ಇದನ್ನು ಅನುಷ್ಠಾನಮಾಡುವರು. ಅಣ್ಣ, ತಮ್ಮ, ಅಕ್ಕ, ತಂಗಿಯಂದಿರುಗಳುಳ್ಲವರು ಈ ದಿನ ಒಟ್ಟುಗೂಡಿ ನಾಗದೇವತೆಯನ್ನು ಪೂಜಿಸಿ 'ತನಿ'ಎರೆದು ತಾವೂ ಎರೆಸಿಕೊಳ್ಳುವ ಪದ್ಧತಿಯಿದೆ.
ವ್ರತಚೂಡಾಮಣಿಯಲ್ಲಿರುವಂತೆ ಹೇಮಾದ್ರಿ - ಎಂಬ ಗ್ರಂಥದ ಪ್ರಭಾಸಖಂಡದಲ್ಲಿರುವ ಭಾಗವೇ ಈ ವ್ರತಕ್ಕೆ ಮೂಲಪ್ರಮಾಣವು. ಅದರಲ್ಲಿ ಶ್ರಾವಣ ಶುಕ್ಲ ಪಂಚಮಿಯ ಷಷ್ಠೀಯುಕ್ತವಾಗಿದ್ದ ದಿನ ನಾಗಪೂಜೆಯನ್ನು ಮಾಡಬೇಕೆಂದೂ ನಾಗಗಳಲ್ಲದ ಸರ್ಪಗಳ ಪೂಜೆಗೆ ಚತುರ್ಥೀ ತಿಥಿಯು ಶ್ರೇಷ್ಠವೆಂದೂ ಹೇಳಿದೆ. ಸಾಮಾನ್ಯವಾಗಿ ಹೆಡೆಯುಳ್ಳ ಹಾವುಗಳನ್ನು ನಾಗಗಳೆಂದೂ ಉಳಿದ ಜಾತಿಯ ಹಾವುಗಳನ್ನು ಸರ್ಪಗಳೆಂದೂ ಕರೆಯುತ್ತಾರೆ. ಹೀಗೆ ನಾಗಪೂಜೆಯನ್ನು ಮಾಡುವವನು ಚತುರ್ಥೀ ದಿನ ಬೆಳಗ್ಗೆ ನಿರಾಹಾರನಾಗಿದ್ದು ರಾತ್ರೆ ಭೋಜನಮಾಡಿ ಪಂಚಮಿ ದಿನ ನಾಗಪೂಜೆಯನ್ನು ಮಾಡಬೇಕು. ಐದು ಹೆಡೆಗಳುಳ್ಳ ಐದು ಹಾವುಗಳನ್ನು ಪೂಜಿಸಬೇಕು. ಇವುಗಳನ್ನು ಬೆಳ್ಳಿಯಿಂದ ಅಥವಾ ಮರದಿಂದ ಮಾಡಿ ಬಿಳಿಯ ಬಣ್ಣವನ್ನು ಹಾಕಿ ಸಿದ್ಧಗೊಳಿಸಿದ ಅಥವಾ ಮಣ್ಣಿನಿಂದ ಮಾಡಿದ ಬಿಂಬಗಳಲ್ಲಿ ಅಥವಾ ರಂಗೋಲಿಯಲ್ಲಿ ಚಿತ್ರವನ್ನು ಬರೆದು ಅರ್ಚಿಸಬೇಕು. ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ - ಮುಂತಾದ ಸುಪ್ರಸಿದ್ಧ ನಾಗಗಳನ್ನು ಈ ಪೂಜೆಯಲ್ಲಿ ಆಹ್ವಾನಿಸಬೇಕು. ಅರಿಸಿನ, ಕುಂಕುಮ, ಕರವೀರ ಪಂಚಕಾದಿ ಪುಷ್ಪಗಳಿಂದ ಅರ್ಚಿಸಬೇಕು. ಧೂಪದೀಪನೈವೇದ್ಯತಾಂಬೂಲನೀರಾಜನಾದಿಗಳನ್ನು ಎಲ್ಲಾ ವ್ರತಗಳಂತೆಯೇ ಸಮರ್ಪಿಸಬೇಕು. 'ಪೂಜಯೇದ್ ವಿಧಿವದ್ ವೀರಲಾಜಯಃ ಪಂಚಾಮೃತೈಃ ಸಹ' ಎಂಬ ವಾಕ್ಯದಂತೆ ಪಂಚಾಮೃತ, ಲಾಜ(ಅರಳು)ಗಳಿಂದಲೂ ಪೂಜಿಸಬೇಕೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ. ಅನಂತರ ತುಪ್ಪ, ಪಾಯಸ, ವೋದಕ - ಮುಂತಾಗಿ ದೇವರಿಗೆ ನೈವೇದ್ಯಮಾಡಿದ ಪದಾರ್ಥಗಳಿಂದ ಬಂಧು ಬಳಗಕ್ಕೆ ಭೋಜನವನ್ನು ಮಾಡಿಸಬೇಕು, ನಾಗದೇವತೆಗಳಿಗೆ ಇಷ್ಟವೆಮದು ನಾವು ಭಾವಿಸುವ ಸಾತ್ವ್ತಿಕಪದಾರ್ಥಗಳನ್ನೆಲ್ಲ ನೈವೇದ್ಯಮಾಡ ಬಹುದು. ವ್ರತದ ಕೊನೆಯಲ್ಲಿ ಪಾರಣೆ(ಊಟ)ಯನ್ನು ಮಾಡಬೇಕು.
ತನಿ ಎರೆಯುವ ವಿಚಾರ. ಆಡುಭಾಷೆಯಲ್ಲಿ 'ಥನಿ' ಎಂದೂ ಬಳಸುತ್ತಾರೆ. ಇದಕ್ಕೆ ವ್ರತದಲ್ಲಿ ಯಾವ ಶ್ಲೋಕವನ್ನೂ ಕೊಟ್ಟಿಲ್ಲ. ಆದ್ದರಿಂದ ಈ ಶಬ್ದವನ್ನು ನಾವು 'ಸ್ತನೀ' ಎಂದು ಸಂಸ್ಕೃತಕ್ಕೆ ಪರಿವರ್ತಿಸಿಕೊಳ್ಳತ್ತೇವೆ. ಸ್ತನದಿಂದ ಉತ್ಪನ್ನವಾದ ದ್ರವ್ಯವನ್ನೇ ಸ್ತನಿ ಎನ್ನುವದಾದರೆ 'ಹಸುವಿನ ಹಾಲು' ಎಂದು ಅರ್ಥ ಮಾಡಬಹುದು. ಅದಕ್ಕೆ ಅನುಗುಣವಾಗಿ ವ್ರತವಿವರಣೆಯಲ್ಲಿ 'ಮಂಚಾಮೃತೈಃ' ಎಂಬ ಶಬ್ದವೂ ಇದೆ. ಇದನ್ನೇ ಹಿರಿಯರು ತನಿ ಎರೆಯುವದು - ಎಂದು ಕರೆದಿರಬೇಕು. ನಾಗದೇವತೆಯ ಪೂಜೆಯು ಭ್ರಾತೃಪ್ರೇಮವನ್ನು ಸೋದರನ ಶ್ರೇಯಸ್ಸನ್ನೂ ಉಂಟುಮಾಡುವದೆಂದು ನಂಬಿಕೆಯಿದೆ. ಮಕ್ಕಳಿಲ್ಲದವರಿಗೆ ಮಕ್ಕಳಾಗುವದೂ ಆ ದೇವತೆಯ ಪ್ರಸಾದದಿಂದಲೇ ಎಂದು ಕೆಲವು ಶಾಸ್ತ್ರವಾಕ್ಯಗಳು ಸಿಗುತ್ತವೆ. ಆದ್ದರಿಂದ ಮೊದಲು ನಾಗದೇವತೆಗೆ ಬೆನ್ನಿಗೆ ಹಾಲನ್ನು ಚಿಮುಕಿಸಿ ಲಾಜ(ಅರಳು)ವನ್ನು ಅರ್ಪಿಸುವುದು, ಅನಂತರ ಆ ದೇವತೆಯ ಪ್ರಸಾದವಾಗಿ ಸೋದರರುಗಳು, ಸೋದರಿಯರು ಒಬ್ಬರಿಗೊಬ್ಬರು ಬೆನ್ನಿಗೆ ಹಾಲು ಚಿಮುಕಿಸಿಕೊಳ್ಳುವದು ರೂಢಿಗೆ ಬಂದಿರ ಬೇಕು. ಇದನ್ನೇ 'ಥನಿ ಎರೆಯುವದು' ಎಂದು ಕರೆಯುತ್ತಾರೆ ಎಂದು ನಾನು ಭಾವಿಸುತ್ತೇನೆ.
ಈಗ ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದಲೂ ನಾಗದೇವತಾಪೂಜೆ, ನಾಗರ ಪ್ರತಿಷ್ಠೆ ಮುಂತಾದವುಗಳ ವಿಷಯಕ್ಕೆ ನೋಡೋಣ. ಜಾತಕಾದಿಗಳಲ್ಲಿ ನಂಬಿಕೆಯುಳ್ಳವರು ಮಕ್ಕಳಾಗದಿದ್ದಾಗ ಅಥವಾ ಹುಟ್ಟಿದ ಮಕ್ಕಳು ಮೃತರಾದಾಗ ಅಥವಾ ಗಂಡುಮಕ್ಕಳಾಗದೇ ಇದ್ದಾಗ ಈ ನಾಗವ್ರತ ಪ್ರತಿಷ್ಠಾದಿಗಳನ್ನು ನೆರೆವೇರಿಸುವದು ಈಗಲೂ ನಮ್ಮ ದೇಶದಲ್ಲಿ ಆಚರಣೆಯಲ್ಲಿದೆ. ಎಲ್ಲಾ ಶಿಷ್ಟಾಚಾರಗಳಿಗೂ ಆಧಾರವಿದ್ದೇ ಇರುವದು. ಏಕೆಂದರೆ ಕರ್ಮಕಾಂಡಪ್ರವರ್ತಕರೂ ಜ್ಯೊತಿಷ್ಯಾದಿಶಾಸ್ತ್ರ ಪ್ರವರ್ತಕರೂ ಋಷಿಗಳೇ ಆದ್ದರಿಂದ ಇವುಗಳಿಗೆ ಮೂಲವಿದ್ದೇ ಇರುವದು. ಆದರೆ ಕರ್ಮಫಲವು 'ಭವ್ಯ' (ಮುಂದೆ ಆಗತಕ್ಕದ್ದು)ವಾದ್ದರಿಂದ ಮಾಡುವ ಕಾಲಕ್ಕೆ ಶ್ರದ್ಧಾಭಕ್ತಿಗಳೇ ಬಂಡವಾಳವಾಗಿರಬೇಕುಉ. ಹೀಗೆ ನಂಬುವವರ ದೃಷ್ಟಿಯಿಂದ ಸ್ತ್ರೀಪುರುಷರ ಜಾತಕಗಳನ್ನು ಪರಿಶೀಲಿಸುವ ಪರಿಣತರು ಪುತ್ರಾದಿಫಲಪ್ರಾಪ್ತಿಗೆ ಅಡ್ಡಿಯಾಗಿರುವ ದೋಷಗಳಲ್ಲಿ ನಾಗದೇವತೆಗಳಿಗೆ ಆಗಿರಬಹುದಾದ ಅಪಚಾರವೂ ಸೇರಿದೆಯೆಂದು ಭಾವಿಸುತ್ತಾರೆ. ದೇವತಾಪಚಾರವೇ ಪಾಪವೆನಿಸುವದು ಅದಕ್ಕೆ ಪರಿಹಾರವೆಂದರೆ ಆಯಾ ದೇವತೆಯನ್ನು ಕುರಿತ ವ್ರತಾನುಷ್ಠಾನಗಳು ಆದ್ದರಿಂದ ನಾಗಪಂಚಮಿವ್ರತದಂತೆಯೇ ನಾಗಪ್ರತಿಷ್ಠಾದಿಗಳೂ ನಾಗದೇವತೆಯ ಸಾನ್ನಿಧ್ಯವುಳ್ಳ ತೀರ್ಥಕ್ಷೇತ್ರಗಳ ಸೇವೆಯೂ ಆಚರಣೆಯಲ್ಲಿವೆ. ದೇವತಾಭಾವನೆಯನ್ನು ನಾವು ತಂದುಕೊಳ್ಳುವಾಗ ವ್ಯಾವಹಾರಿಕ ಭೌತಿಕ ದೃಷ್ಟಿಯನ್ನು ಇಲ್ಲಿ ಹಾವುಗಳ ವಿಷಯಕ್ಕೆ ಬೆರೆಯಿಸಿಕೊಳ್ಳಬಾರದು.
ಇನ್ನು ಪೌರಾಣಿಕದೃಷ್ಟಿಯಿಂದ ವಿಚಾರಮಾಡಿದರೆ ನಾಗನೆಂಬ ಅನಂತನು ಭಗವಾನ್ ಮಹಾವಿಷ್ಣುವಿನ ಹಾಸಿಗೆಯಾಗಿದ್ದಾನೆ. ಪರಮೇಶ್ವರನ ಆಭರಣಗಳಾಗಿದ್ದಾನೆ. ಭೂದೇವಿಯನ್ನು ಹೊತ್ತಿರುವ ಆಧಾರಶಕ್ತಿಯಾಗಿದ್ದಾನೆ. ಯೋಗಿಗಳ ಮೂಲಾಧಾರಚಕ್ರನಿವಾಸಿಯಾಗಿದ್ದಾನೆ. ಸಮುದ್ರಮಂಥನಕಾಲದಲದಲಿ ಮಂದರವನ್ನೆಳೆಯುವ ಹಗ್ಗವಾಗಿದ್ದಾನೆ ಇತ್ಯಾದಿ. ಸೃಷ್ಟಿಯಲ್ಲಿ ಕಶ್ಯಪಬ್ರಹ್ಮರ ಪತ್ನಿಯಾದ ಕದ್ರೂದೇವಿಯ ಮಕ್ಕಳೇ ನಾಗಗಳೆಂದು ಕಥೆಯಿದೆ. ನಾಗಗಳು ದೇವತೆಗಳಾಗಲು ಸಾಕಷ್ಟು ತಪಸ್ಸುಮಾಡಿಯೇ ಇದ್ದಾರೆ. ವಿಶೇಷವಾಗಿ ನಾಗರಾಜನಾದ ಅನಂತನು ಭಗವತ್ಸೇವೆಗೇ ನಿಯುಕ್ತನಾಗಿರುವದು ಅವನ ತಪೋಬಲ, ಮಹಿಮೆಗಳನ್ನೇ ಎತ್ತಿ ಹೇಳುತ್ತದೆ. "ಅನಂತಶ್ಚಾಸ್ಮಿ ನಾಗಾನಾಂ" ಎಂದು ಭಗವಂತನು ಅನಂತನನ್ನು ತನ್ನ ವಿಭೂತಿಯೆಂದೇ ತಿಳಿಸಿತ್ತಾನೆ. ಆದ್ದರಿಂದ ನಾಗದೇವತಾ ಪೂಜೆಯು ಶ್ರೇಷ್ಠವಾದುದೆಂದೇ ಗೊತ್ತಾಗುತ್ತದೆ.
ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದರಂತೂ 'ಅನಂತ'ನೆಂಬ ಹೆಸರು ಪರಮಾತ್ಮನದೇ ಆಗಿದೆ. ಬಲವೀರ್ಯ ಪರಾಕ್ರಮಗಳಲ್ಲಿ ಅನಂತನಾದ ಭಗವಂತನು ತಾನೇ ಆದಿಶೇಷನಾಗಿ ಭೂಮಿಯನ್ನು ಧರಿಸಿರುತ್ತಾನೆಂದು ತಿಳಿಯಬೇಕು. ನಾಗಗಳಿಗೆ ಕೋಪವು ಹೆಚ್ಚು. ಅವುಗಳನ್ನು ಮಂತ್ರಶಕ್ತಿಯಿಂದ ಅಸ್ತ್ರಗಳಾಗಿ ಮಾಡಿಕೊಂಡು ಶತ್ರುಸಂಹಾರಕ್ಕಾಗಿ ಉಪಯೋಗಿಸುತ್ತಿದ್ದರೆಂಬ ವಿವರಗಳು ರಾಮಾಯಣ, ಮಹಾಭಾರತಗಳಲ್ಲಿವೆ. ಇದರಿಂದ ತಿಳಿಯುವದೇನೆಂದರೆ ವ್ಯವಹಾರದಲ್ಲಿ ಕೋಪವೂ ಕೆಲವುಸಲ ಅವಶ್ಯವಾಗುತ್ತದೆ. ಆದರೆ ಭಗವಂತನು ತನ್ನ ಕೋಪವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡಿರುವ 'ಜಿತಮನ್ಯು'ವಾದ್ದರಿಮದ ಅವನ ಕೋಪವೂ ನಾಗರೂಪದಿಂದ ಪೂಜಾರ್ಹವಾಯಿತು, ಹಾಗೆಯೇ ಅವನ ಅಸ್ತ್ರಗಳಾಗಿ ಬಳಸಲ್ಪಡುವ ನಾಗಗಳು ಭಗವಂತನ ಆಯುಧಗಳೆಂಬ ರೀತಿಯಿಂದಲೂ ಪೂಜಾಯೋಗ್ಯವಾಗಿದೆ. ಹೀಗೆ ನಾವು ನಾಗಗಳ ಮಹಿಮೆಯನ್ನು ಅರ್ಥಮಾಡಿಕೊಂಡಂತೆಲ್ಲ ವಿಧವಿಧವಾದ ನಾಗ ದೇವತೆಗಳ ಪೂಜೆ-ಉಪಾಸನೆಗಳನ್ನು ಅಳವಡಿಸಿಕೊಳ್ಳಬಹುದು. ಈ ಅಭಿಪ್ರಾಯದಲ್ಲಿ ನಾಗ ಪಂಚಮಿವ್ರತವೂ ಅನ್ವರ್ಥವಾಗಿದೆ.
ವೇದಗಳಲ್ಲಿಯೂ ನಾಗದೇವತೆಗಳನ್ನು ಕುರಿತ ಸ್ತೋತ್ರಗಳ ರೂಪವಾದ ಸೂಕ್ತಗಳೂ ಮಂತ್ರಗಳೂ ಇವೆ. ಆದ್ದರಿಂದ ನಾಗಪೂಜೆಯು ವೈದಿಕವೆಂದೂ ತಿಳಿಯಬಹುದಾಗಿದೆ. ನಮ್ಮ ಪೂರ್ವಿಕರು ಈ ಅಭಿಪ್ರಾಯಗಳನ್ನೆಲ್ಲ ಬಲ್ಲವರಾಗಿದ್ದುದರಿಂದಲೇ ಹಬ್ಬಗಳ ರೂಪದಲ್ಲಿ ದೇವತಾರಾಧನೆಗಳನ್ನು ಆಚರಣೆಗೆ ತಂದಿರುತ್ತಾರೆ. ನಾವು ಇವುಗಳನ್ನು ಶ್ರದ್ಧೆಯಿಂದ ವಿಚಾರಮಾಡಿ ಅನುಷ್ಠಾನಮಾಡಬೇಕು. ಎಲ್ಲಾ ಹಬ್ಬಗಳ ಅಚರಣೆಯೂ ಆಧ್ಯಾತ್ಮಿಕ ಹಿನ್ನೆಲೆಯಿಂದ ಅನುಷ್ಠಿಸಲ್ಪಟ್ಟರೆ ಪ್ರತ್ಯೇಕವಾಗಿ ಅಧ್ಯಾತ್ಮಸಾಧನೆಗಳನ್ನು ಮಾಡಬೇಕಾಗಿಯೇ ಇಲ್ಲ. ಸಾತ್ತ್ವಿಕ ರಾಜಸ ತಾಮಸಗುಣಗಳಿಂದ ಕಂಡುಬರುವ ನಾಮರೂಪಗಳೆಲ್ಲವೂ ಮೂಲತಃ ನಿರ್ಗುಣಬ್ರಹ್ಮದ ತೋರಿಕೆಯೇ ಎಂಬ ಅರಿವುಂಟಾಗಿ ಜ್ಞಾನಪ್ರಾಪ್ತಿಗೆ ಸಹಾಯವಾಗುವದು.
Comments
Post a Comment