ಪಿತೃಪಕ್ಷ


    ಭಾದ್ರಪದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುತ್ತಾರೆ. ಈ ಪಕ್ಷದಲ್ಲಿ ಶ್ರಾದ್ಧವನ್ನು ಮಾಡುವದೂ ಪಿತೃತರ್ಪಣವನ್ನು ಅನುಷ್ಠಿಸುವದೂ ಪಿತೃಗಳಿಗೆ ತೃಪ್ತಿಯನ್ನುಂಟುಮಾಡುತ್ತದೆ ಎಂದು ಹಿಂದುಗಳ ನಂಬಿಕೆ.
    ವೇದಗಳಲ್ಲಿ ದೇವಯಾನ, ಪಿತೃಯಾನ ಎಂಬ ಎರಡು ಕರ್ಮಗತಿಗಳನ್ನು ವರ್ಣಿಸಿರುತ್ತದೆ. ಉಪಾಸಕರಾದವರು ದೇವಲೋಕಗಳಿಗೆ ಹೋಗಿ ಅಲ್ಲಿ ದೇವತೆಗಳ ಸಾಮಿಪ್ಯ, ಸಾಲೋಕ್ಯ, ಸಾಯುಜ್ಯ - ಎಂಬ ಫಲಗಳನ್ನು ಅನುಭವಿಸುತ್ತಾರೆ. ಕರ್ಮಿಗಳಾದವರು ಪಿತೃಲೋಕಕ್ಕೆ ಹೋಗಿ ಅಲ್ಲಿ ತಮ್ಮ ತಮ್ಮ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಅನುಭವಿಸುತ್ತಾರೆ - ಹೀಗೆಂಬುದು ಶಾಸ್ತ್ರಕಾರರ ಹೇಳಿಕೆ.
    ಪಿತೃಗಳಿಗೆ ತೃಪ್ತಿಯಾಗಲೆಂದು ಶ್ರದ್ಧೆಯಿಂದ ಮಾಡುವ ನಿಯತಕಾಲಿಕ ಕರ್ಮವನ್ನು ಶ್ರಾದ್ಧವೆಂದು ಕರೆಯುತ್ತಾರೆ; ಎಳ್ಳುನೀರುಗಳನ್ನು ಪಿತೃತೃಪ್ತ್ಯರ್ಥವಾಗಿ ಬಿಡುವ ಕರ್ಮವನ್ನು ತರ್ಪಣವೆನ್ನುತ್ತಾರೆ. ಶಕ್ತನಾದವನು ಪಿತೃಪಕ್ಷದಲ್ಲಿ ಪ್ರತಿದಿನವೂ ಶ್ರಾದ್ಧವನ್ನು ಮಾಡಿ ತರ್ಪಣವನ್ನು ಕೊಡಬೇಕು; ಅಶಕ್ತರಾದವರು ಗೊತ್ತಾದ ಒಂದು ದಿನವಾದರೂ ಈ ಕರ್ಮವನ್ನು ಮಾಡಬೇಕು. ಈ ಶ್ರಾದ್ಧಕ್ಕೆ ಮಹಾಲಯವೆಂಬ ಹೆಸರು ಬಂದಿರುತ್ತದೆ. ಈ ಪಕ್ಷವನ್ನು ಮಹಾಲಯ ಪಕ್ಷವೆಂದು ಕರೆಯುವ ವಾಡಿಕೆಯೂ ಇದೆ.
    ಪಿತೃಗಳಿಗೆಂದು ಶ್ರಾದ್ಧವನ್ನು ಮಾಡಿದರೆ, ತರ್ಪಣವನ್ನು ಕೊಟ್ಟರೆ ಅವರಿಗೆ ಅದು ತೃಪ್ತಿಯನ್ನು ಹೇಗೆ ಮಾಡುತ್ತದೆ? ಶ್ರಾದ್ಧಕರ್ಮಗಳಲ್ಲಿ ಮಾಡುವ ಹೋಮ, ಬ್ರಾಹ್ಮಣ ಭೋಜನ, ಪಿಂಡಪ್ರದಾನ, ತರ್ಪಣ - ಇವುಗಳು ಈ ಲೋಕದಲ್ಲಿ ಆಗುವದರಿಂದ ಅವುಗಳ ಫಲವು ಪಿತೃಗಳು ಎಲ್ಲಿದ್ದರೂ ಅವರಿಗೆ ಮುಟ್ಟುವದೆಂದು ನಂಬುವದು ಹೇಗೆ? ಆ ಪಿತೃಗಳು ಬೇರೊಂದು ಜನ್ಮವನ್ನು ಪಡೆದಿದ್ದರೆ ಶ್ರಾದ್ಧಕ್ಕೆ ಯಾವ ಪ್ರಯೋಜನವಾಗುವದು? - ಎಂದು ಕೆಲಸವರು ಯುಕ್ತಿಪ್ರಧಾನವಾದ ಪ್ರಶ್ನೆಗಳನ್ನು ಮಾಡುತ್ತಿರುತ್ತಾರೆ. ಈ ಪ್ರಶ್ನೆಗಳಿಗೆ ಪ್ರತ್ಯಕ್ಷಾದಿ ಪ್ರಮಾಣಗಳಿಂದ ಸಮಾಧಾನಕರವಾದ ಉತ್ತರವನ್ನು ಹೇಳುವದು ಕಷ್ಟ ಏಕೆಂದರೆ ಕರ್ಮಗಳಿಗೆ ಇಲ್ಲಿಯೇ ಅನುಭವಾರೂಡವಾದ ಫಲವಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಿರುವದಿಲ್ಲ. ಆದ್ದರಿಂದ ಇಲ್ಲಿ ಪ್ರಶ್ನೆಗಳೇ ಅಸಂಬದ್ಧ ಎಂದು ಹೇಳಬೇಕಾಗುತ್ತದೆ. ಆದರೆ ಕರ್ಮಗಳಿಗೆ ಅದೃಷ್ಟವಾದ ಫಲವೂ ಆಗಬಹುದೆಂಬುದನ್ನು ನಂಬುವದಕ್ಕೆ ತಕ್ಕಷ್ಟು ಕಾರಣವು ಇದ್ದೇ ಇದೆ. ಗಿಡಗಳಿಗೆ ಗೊಬ್ಬರ, ನೀರು - ಮುಂತಾದವನ್ನು ಹಾಕಿದರೆ ಅವುಗಳು ಪುಷ್ಟಿಯಾದ ರುಚಿಯಾದ ಹಣ್ಣುಗಳನ್ನೂ ಸುಗಂಧಯುತವಾದ ಹೂಗಳನ್ನೂ ಬಿಡುವದು ನಮಗೆಲ್ಲ ತಿಳಿದಿದೆ; ಆದರೆ ಗೊಬ್ಬರ ನೀರುಗಳಲ್ಲಿ ಈ ಸುಫಲಗಳನ್ನೂ ಸುಗಂಧವನ್ನೂ ಕೊಡುವ ಶಕ್ತಿ ಹೇಗೆ ಬಂದಿತು? ಎಂಬ ಪ್ರಶ್ನೆಗೆ ಉತ್ತರವನ್ನು ಯಾರು ತಾನೆ ಹೇಳಬಲ್ಲರು? ಮನುಷ್ಯನು ತನಗೆ ಬೇಕಾದ ಆಹಾರವನ್ನು ತಿನ್ನುತ್ತಾನೆ; ಅವನ ಶರೀರವು ರಕ್ತಮಾಂಸಾದಿಗಳಿಂದ ಕೂಡಿಕೊಂಡು ಬುದ್ಧಿಶಕ್ತಿಯ ಬೆಳವಣಿಗೆಗೂ ಆ ಆಹಾರವೂ ಹೇಗೆ ಕಾರಣವಾಗುವದೆಂಬುದನ್ನು ಯಾರು ತಾನೆ ಹೇಳಲಾರರು? ಪರಮೇಶ್ವರನ ಸೃಷ್ಟಿಯಲ್ಲಿ ಅತ್ಯಂತವಿಲಕ್ಷವಾದ ಕಾರಣಗಳಿಂದ ಅತ್ಯಂತ ವಿಲಕ್ಷಣ ಕಾರ್ಯಗಳು ಆಗುತ್ತಿರುವದು ನಮ್ಮೆಲ್ಲರ ಅನುಭವದಲ್ಲಿಯೂ ಇದೆ. ನಾವು ಕೊಟ್ಟ ಪಿಂಡವನ್ನು ಶ್ರಾದ್ಧಾನ್ನವನ್ನೂ ಹೋಮಾದಿಯನ್ನೂ ತರ್ಪಣಗಳನ್ನೂ ನಮ್ಮ ಪೂರ್ವಜರಾದ ಪಿತೃಗಳಿಗೆ ಹೀಗೆಯೇ ಒಂದಾನೊಂದು ಅದೃಷ್ಟಕ್ರಮದಿಂದ ತಲುಪಿಸುವ ಏಪಾಡನ್ನು ಕೆಲವರು ಪಿತೃದೇವತೆಗಳು ಮಾಡುತ್ತಾರೆಂದು ಸ್ಮೃತಿಗಳಲ್ಲಿ ಹೇಳಿರುತ್ತದೆ.
    ಶ್ರಾದ್ಧದಲ್ಲಿ ನಾವು ಮಾಡುವ ಅನ್ನದಾನತಿಲತರ್ಪಣಾದಿಗಳಿಂದ ನಮಗೂ ಫಲವುಂಟು. ತಿಲವು ಭಗವಂತನ ಮನಸ್ಸಿನಿಂದಲೂ ಕುಶವು ಆತನ ಪ್ರಾಣದಿಂದಲೂ ಉಂಟಾಗಿರುವವೆಂದು ಪುರಾಣವಚನವಿದೆ. ಕರ್ಮಗಳಲ್ಲಿ ಅವುಗಳ ಪ್ರಯೋಗದಿಂದ ನಮ್ಮ ಮನಃಪ್ರಾಣಗಳಿಗೆ ಒಂದಾನೊಂದು ಸಂಸ್ಕಾರವಾಗುವದೆಂದು ಇದರಿಂದ ಸೂಚಿತವಾಗುತ್ತದೆ. ಪಿತೃಪಿತಾಮಹಾದಿಗಳಿಗೇ ಅಲ್ಲದೇ "ನಾನು ಕೊಡುವ ತರ್ಪಣದಿಂದ ಜಲಚರ, ಭೂಚರ, ವಾಯುಚರಜಂತುಗಳಿಗೆಲ್ಲ ತೃಪ್ತಿಯಾಗಲಿ"! ಎಂಬ ಭಾವನೆಯಿಂದ ತರ್ಪಣವನ್ನು ಕೊಡುವ ಮನೋಭಾವನೆಯಲ್ಲಿ ಎಂಥ ಸರ್ವಭೂತಪ್ರೇಮವು ಅಡಗಿರುತ್ತದೆ! ಶ್ರಾದ್ಧಾಂತದಲ್ಲಿ ನಾವು ಮಾಡುವ ಪ್ರಾರ್ಥನೆಯನ್ನು ಮನದಂದರೆ ಆಗ ಕರ್ಮಿಗಳ ಮನೋಭಾವವು ಹೇಗಿರುವದೆಂಬುದರ ಅರಿವು ಸ್ವಲ್ಪಮಟ್ಟಿಗೆ ಆಗಬಹುದಾಗಿದೆ; "ಪಿತೃಗಳು ಪ್ರಸನ್ನರಾಗಲಿ! ನಮ್ಮ ಗೋತ್ರವು ಬೆಳೆಯಲಿ! ನಮ್ಮ ದಾತೃಗಳು ಅಭಿವೃದ್ಧಿಯನ್ನೈದಲಿ! ವೇದಗಳೂ ಸಂತತಿಯೂ ಮುನ್ನಡೆಯಲಿ ! ನಮ್ಮ ಶ್ರದ್ಧೆಯು ಎಂದಿಗೂ ಸಡಿಲವಾಗದಿರಲಿ ! ನಮ್ಮಲ್ಲಿ ದಾನದ್ರವ್ಯವು ಹೆಚ್ಚುತ್ತಿರಲಿ ! ನಮ್ಮಲ್ಲಿ ಅನ್ನವು ಹೆಚ್ಚುತ್ತಿರಲಿ ! ಅತಿಥಿಗಳು ನಮಗೆ ದೊರಕುತ್ತಿರಲಿ ! ನಮ್ಮಲ್ಲಿ ಯಾಚನೆಗೆ ಬರುವವರು ಇರಲಿ, ನಾವು ಯಾರಲ್ಲಿಯೂ ಯಾಚನೆಮಾಡದಿರುವಂತಾಗಲಿ !"
    ನಮ್ಮ ಹಿರಿಯರಲ್ಲಿ ಶ್ರದ್ಧಾಭಕ್ತಿಗಳನ್ನೂ ಸಂಸ್ಕೃತಿಯಲ್ಲಿ ಹೆಮ್ಮೆಯನ್ನೂ ಅಭ್ಯುದಯದಲ್ಲಿ ಆಶಾಪ್ರತೀಕ್ಷೆಗಳನ್ನೂ ಹೆಚ್ಚಿಸುವ ಶ್ರಾದ್ಧಕರ್ಮವನ್ನು ನೆನಪಿಗೆ ತರುವ ಪಿತೃಪಕ್ಷಕ್ಕೆ ಜಯಕಾರವಿರಲಿ!

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ