ರಥಸಪ್ತಮಿ
ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ಪ್ರತಿವರ್ಷವೂ ಚಾಂದ್ರಮಾನರೀತಿಯಾಗಿ ಮಾಘಶುಕ್ಲ ಸಪ್ತಮಿ ದಿನ ಆಚರಿಸುವ 'ರಥಸಪ್ತಮಿ' ಹಬ್ಬವು ಒಂದಾಗಿರುವರು. ಆ ದಿನ ನದಿಯಲ್ಲಿ ಸ್ನಾನಮಾಡುವಾಗ ಏಳು ಎಕ್ಕದ ಎಲೆಗಳನ್ನು ಮೈಮೇಲೆ ಧಿರಿಸಿ ನೀರಿನಲ್ಲಿ ಮುಳುಗಿ ಏಳುತ್ತಾರೆ. ಅನಂತರ ತುಳಸೀಕಟ್ಟೆಯ ಮುಂದೆ ರಂಗವಲ್ಲಿಯಿಂದ 'ರಥ'ವನ್ನು ಬರೆದು ಸೂರ್ಯನನ್ನು ಪೂಜಿಸುತ್ತಾರೆ. ದೇವಾಲಯಗಳಲ್ಲಿ ದೇವರಿಗೆ 'ಸೂರ್ಯಮಂಡಲೋತ್ಸವ'ವನ್ನು ನಡೆಯಿಸುತ್ತಾರೆ. ರಥಸಪ್ತಮಿ ದಿನ ನಡೆಯಬೇಕಾದ ವ್ರತವಿಧಾನವೂ ಕಥೆಯೂ ಪುರಾಣಗಳಲ್ಲಿವೆ. ಪದ್ಮಕಯೋಗವೆನಿಸಿದ ಈ ದಿನವು ಸಾವಿರಸೂರ್ಯಗ್ರಹಣಗಳಿಗೆ ಸಮವಾದ ಪುಣ್ಯ ಕಾಲವೆಂದೂ ವಿಶೇಷವಾಗಿ ಸೂರ್ಯನನ್ನು ಪೂಜಿಸಬೇಕೆಂದೂ ದೀಪಗಳನ್ನು ಬೆಳಗಿ ನದಿಯಲ್ಲಿ ಬಿಡಬೇಕೆಂದೂ ಮಕರಶುಕ್ಲಸಪ್ತಮಿಯೆನಿಸಿದ ಈ ದಿನವು ಸಕಲಪಾಪಗಳನ್ನೂ ಕಳೆಯುವ ಶಕ್ತಿಯುಳ್ಳದ್ದೆಂದೂ ಧರ್ಮಶಾಸ್ತ್ರಗಳಲ್ಲಿ ವಿವರಿಸಿದೆ. ಆದ್ದರಿಂದ ಈ ಹಬ್ಬದ ವಿಚಾರವಾಗಿ ಸ್ವಲ್ಪ ತಿಳಿಯೋಣ.
ವೇದೇತಿಹಾಸಪುರಾಣಗಳಲ್ಲಿ ಸೂರ್ಯನನ್ನು ಸ್ತುತಿಸುವ ಮಂತ್ರಗಳೂ, ಸೂಕ್ತಗಳೂ, ಸ್ತೋತ್ರಪಾಠಗಳೂ ವಿಪುಲವಾಗಿವೆ. ಮಾನವನಿಗೆ ಆರೋಗ್ಯವನ್ನು ಕೊಡುವವನೇ ಸೂರ್ಯನು. ಸೂರ್ಯನು ಎಲ್ಲಾ ಪ್ರಾಣಿವರ್ಗ, ಸಸ್ಯವರ್ಗ, ಮನುಷ್ಯ್ರು, ದೇವತೆಗಳಿಗೂ 'ಮಿತ್ರ'ನೆನಿಸಿದ್ದಾನೆ. ಆತನ ಬೆಳಕು, ಶಾಖಗಳಿಲ್ಲೆ ಜೀವನವೇ ಇಲ್ಲ. ಅವನೇ 'ಅನ್ನದಾತ'ನೆಂದೂ ಶಾಸ್ತ್ರಗಳಲ್ಲಿ ಸ್ತುತಿಸಿದೆ. ಮಹಾಭಾರತದಲ್ಲಿನ ಕಥೆಯಂತೆ ಧರ್ಮರಾಜನಿಗೆ ಅವನ ವನವಾಸಕಾಲ ಪೂರ ಹತ್ತು ಸಹಸ್ರ ಪರಿವಾರಕ್ಕೆ ಪ್ರತಿದಿನವೂ ಚೊಕ್ಕಭೋಜನವನ್ನು ನೀಡುವ 'ಅಕ್ಷಯಪಾತ್ರೆ'ಯನ್ನು ದಯಪಾಲಿಸಿದವನೇ ಸೂರ್ಯನು. ಇನ್ನು ಅನೇಕ ರೋಗಿಗಳು ಸೂರ್ಯನ ಪ್ರಸಾದದಿಂದ ರೋಗ ಪರಿಹಾರಮಾಡಿಕೊಂಡದ್ದು, ಕಣ್ಣುಗಳನ್ನು ಪಡೆದದ್ದು, ಸಂತಾನಪ್ರಾಪ್ತಿಯನ್ನು ಹೊಂದಿದ್ದು - ಹೀಗೆ ಹತ್ತಾರು ಉಪಾಖ್ಯಾನಗಳು ಪುರಾಣಗಳಲ್ಲಿ ಸಿಗುತ್ತವೆ. ವೈಜ್ಞಾನಿಕವಾಗಿಯೂ ಸೂರ್ಯನ ಉಪಯೋಗ, ಪ್ರಯೋಜನಗಳು ಈಗ ಜನರಿಗೆ ಮನದಟ್ಟಾಗಿದ್ದು ಸೌರಶಕ್ತಿಯನ್ನೇ ನಮ್ಮ ಎಲ್ಲಾ ವ್ಯವಹಾರಕ್ಕೂ ಇನ್ನು ಮುಂದೆ ಅವಲಂಬಿಸಬೇಕಾಗುವದೆಂಬುದು ಎಲ್ಲರಿಗೂ ತಿಳಿದೇ ಇದೆ. ಹೀಗಿರುವಲ್ಲಿ ಸೂರ್ಯನನ್ನು ಆರಾಧಿಸಬೇಕಾಗಿರುವ ಮಹತ್ತ್ವದ ದಿನವೇ ರಥಸಪ್ತಮಿಯೆನಿಸಿದ್ದು ಇದ್ರ ವೈಶಿಷ್ಟ್ಯವನ್ನು ಹೇಳಿ ಪೂರೈಸಲಾದೀತೆ?
ಈಗ ಪುರಾಣಪ್ರಸಿದ್ಧವಾದ ಒಂದು ಶ್ಲೋಕವನ್ನು ಮನನಮಾಡೋಣ -
ಸಪ್ತ ಸಪ್ತ ಮಹಾಸಪ್ತ ಸಪ್ತದ್ವೀಪಾ ವಸುಂಧರಾ |
ಸಪ್ತಾರ್ಕಪರ್ಣಾನ್ಯಾದಾಯ ಸಪ್ತಮ್ಯಾಂ ಸ್ನಾನಮಾಚರೇತ್ ||
ಇದರಲ್ಲಿ ಭೂಮಿಯು ಸಪ್ತದ್ವೀಪಗಳಿಂದ ಕೂಡಿದೆ - ಎಂಬ ವಿವರವಿದೆ. ಇದು ಏಳು ಎಂಬ ಸಂಖ್ಯೆಯ ವೈಶಿಷ್ಟ್ಯವನ್ನು ತಿಳಿಸುತ್ತದೆ. ಸೂರ್ಯನ ಕಿರಣಗಳಲ್ಲಿ ಏಳು ಬಣ್ಣಗಳಿರುವದು (VIBGYOR) ಪ್ರಸಿದ್ಧವೇ ಆಗಿದೆ. ಹಾಗೆಯೇ ಸಪ್ತ ಸಮುದ್ರಗಳು, ಸಪ್ತರ್ಷಿಗಳು, ಭೂರಾದಿಸಪ್ತಲೋಕಗಳು, ಅಗ್ನಿಯ ಸಪ್ತನಾಲಿಗೆಗಳು ಇತ್ಯಾದಿಗಳಿಂದ ಸಪ್ತ - ಎಂಬ ಸಂಖ್ಯೆಯು ಪರಮಪೂಜ್ಯವಾಗಿದೆ. ಸಪ್ತಾಹ ಕಾರ್ಯಕ್ರಮಗಳಂತೂ ಈಗ ಎಲ್ಲಾ ಕ್ಷೇತ್ರಗಳನ್ನೂ ಪ್ರವೇಶಿಸಿರುತ್ತವೆ. ವೈದಿಕ ಸಾಹಿತ್ಯದಲ್ಲಿ ಸೂರ್ಯನ ರಥವು ಏಳು ಕುದುರೆಗಳಿಂದ ಕೂಡಿರುವದಾಗಿ ತಿಳಿಸಿದೆ. ಸಪ್ತಮಿತಿಥಿಯೂ ಏಳನೆಯ ದಿನವಾಗಿದೆ. ಇನ್ನು ಅರ್ಕ ಎಂದರೆ ಎಕ್ಕದಗಿಡದ ಎಲೆಗಳನ್ನು ಸೂರ್ಯನ ಪೂಜೆಗೆ ಬಳಸುತ್ತಾರೆ ಮತ್ತು ಎಕ್ಕದಕಡ್ಡಿಗಳನ್ನೇ ಸಮಿತ್ತುಗಳಾಗಿ ಬಳಸಿ ಸೂರ್ಯನ ಪ್ರೀತಿಗಾಗಿ ಹೋಮಮಾಡುತ್ತಾರೆ ಆದ್ದರಿಂದ ರಥಸಪ್ತಮಿಪ್ರಯುಕ್ತ ಪಾಪಪರಿಹಾರಕ್ಕಾಗಿ ಸ್ನಾನಮಾಡುವಾಗ ದೇಹದಮೇಲೆ ಏಳು ಎಕ್ಕದ ಎಲೆಗಳನ್ನು ಇರಿಸಿಕೊಂಡು ಮುಳುಗಿದ್ರೆ ಮಾನವನ ಸಮಸ್ತ ಪಾಪಗಳೂ ತೇಲಿ ಹೋಗುವವೆಂಬ ಭಾವನೆಯಿಂದ ಈ ಸಪ್ತಪರ್ಣಸ್ನಾನವನ್ನು ಏರ್ಪಡಿಸಿದ್ದಾರೆ.
ಈಗ ರಥಪೂಜೆಯ ಹೆಚ್ಚುಗಾರಿಕೆಯೇನೆಂಬುದನ್ನು ಚಿಂತಿಸೋಣ. ಆಧ್ಯಾತ್ಮಿಕವಾಗಿ ನೋಡಿದ್ರೆ ನಮ್ಮ ದೇಹವೇ ಒಂದು ರಥವು. ಇದರಲ್ಲಿರುವ ಆತ್ಮನೇ ರಥಿಕನು ಎಂದರೆ ರಥದ ಒಡೆಯನು ಜೀವನವೇ ಪ್ರಯಾಣವು ಬುದ್ಧಿ ಎಂಬ ಸಾರಥಿ, ಇಂದ್ರಿಯಗಳೆಂಬ ಕುದುರೆಗಳು, ವಿಷಯಗಳೆಂಬ ರಸ್ತೆಗಳು ಹೀಗೆ ರಥ ರೂಪಕವನ್ನು ಉಪನಿಷತ್ತಿನಲ್ಲಿ ಕೊಟ್ಟಿದೆ. ಸೂರ್ಯನನ್ನು ಪೂಜಿಸುವ ಮೂಲಕ ನಮ್ಮ ಜೀವನರಥದ ಪ್ರಯಾಣವು ಸುಗಮವಾಗುವಂತೆ ಕೇಳಿಕೊಳ್ಳಬೇಕು. ಸೂರ್ಯನ ಸಂಚಾರದಿಂದಾಗುವ ಹಗಲುರಾತ್ರಿಗಳು, ಪಕ್ಷ, ಮಾಸ, ಸಂವತ್ಸ್ರಗಳೇ ನಮ್ಮ ಆಯುಷ್ಯವು ಆದ್ದರಿಂದ ಆಯುಷ್ಯವು ಸಾರ್ಥಕವಾಗಬೇಕಾದ್ರೆ ಸೂರ್ಯನನ್ನು ನೆನೆಯಲೇಬೇಕು. ಸೂರ್ಯಮಂಡಲಾಂತರ್ಗತದೇವರೂ ನಮ್ಮಲ್ಲಿ ಹೃದಯದಲ್ಲಿರುವ ದೇವರೂ ಒಬ್ಬನೇ ಆಗಿದ್ದಾನೆ. ಹೀಗೆ ನಮ್ಮ ಜೀವನವು ಸೂರ್ಯನೊಡನೆ ಹಾಸುಕೊಕ್ಕಾಗಿದೆ. ಆದ್ದರಿಂದ ವರ್ಷಕ್ಕೊಮ್ಮೆಯಾದರೂ ಸೂರ್ಯನನ್ನು ಆರಾಧಿಸಿ ಆತನ ಅನುಗ್ರಹದಿಂದ ಜೀವನಯಾತ್ರೆಯು ಸುಗಮವಾಗಿ ಸಾಗುವಂತೆ ಮಾಡಿಕೊಳ್ಳುವದೇ ರಥಸಪ್ತಮಿ ಹಬ್ಬದ ಸಂಕೇತವಾಗಿರುತ್ತದೆ.
Comments
Post a Comment