ಸೆರಗಿನಲ್ಲಿ ಗಂಟುಹಾಕಿ

    ಒಮ್ಮೆ ಸಾತ್ಯಕಿ, ಅರ್ಜುನ, ಕೃಷ್ಣ ಈ ಮೂವರೂ ಸೇರಿ ಒಂದು ಕಾಡಿನಲ್ಲಿ ಸಂಚರಿಸುತ್ತಿರುವಲ್ಲಿ ದಾರಿ ತಪ್ಪಿದರೂ. ಕಗ್ಗತ್ತಲೆಯಲ್ಲಿ ತಂಗುವದಕ್ಕೆ ಮತ್ತೆಯಾವ ಸ್ಥಲವೂ ಸಿಕ್ಕದೆ ಒಮದು ಮರದ ಮೇಲೆಯೇ ಮಲಗಿರಬೇಕಾಯಿತು. ಹಿಂಸ್ರಮೃಗಗಳ ಭೀತಿಯಿರುವದೆಂಬ ಕಾರಣದಿಂದ ತಮ್ಮೊಳಗೆ ಇಬ್ಬರು ನಿದ್ರಿಸುತ್ತಿರುವಲ್ಲಿ ಮೂರನೆಯವನೊಬ್ಬನು ಎಚ್ಚರವಾಗಿರಬೇಕೆಂದು ಏರ್ಪಡಿಸಿಕೊಂಡರು.
    ಸಾತ್ಯಕಿಉ ಮೊದಲನೆಯ ಕಾವಲುಗಾರನಾದನು. ಅವನು ತನ್ನ ಸರದಿಯು ಮುಗಿದಕೂಡಲೆ ಅರ್ಜುನನ್ನು ದಡಕ್ಕನೆ ಎಬ್ಬಿಸಿದನು "ಯಾವದಾದರೂ ಪ್ರಾಣಿಯು ಬಂದಿತ್ತೇನು?" ಎಂದು ಅರ್ಜುನನು ಕೇಳಿದ್ದಕ್ಕೆ ಸಾತ್ಯಕಿಯು ಪಿಸುಮಾತಿನಲ್ಲಿ "ದೆವ್ವ ದೆವ್ವ! " ಎಂದನು. ಅರ್ಜುನನು " ಛೇ! ಹುಚ್ಚ, ಎಂಥ ಮಾತಿದು!" ಎನ್ನಲು, "ಹಾಸ್ಯದ ಮಾತಲ್ಲವಯ್ಯ, ನಾನು ಎಷ್ಟೇ ಪ್ರಯತ್ನಮಾಡಿದರೂ ಅದನ್ನು ಓಡಿಸುವದಾಗಲಿಲ್ಲ. ಹೇಗಾದರೂ ಆಗಲಿ, ಈಗ ನೀನೇ ನೋಡುವೆಯಲ್ಲ!" ಎಂದು ಸಾತ್ಯಕಿಯು ಮಲಗಿಕೊಂಡುಬಿಟ್ಟನು.
    ಅರ್ಜುನನು ಧನುರ್ಧಾರಿಯಾಗಿ ಕಾವಲಿಗೆ ನಿಂತನು. ಸ್ವಲ್ಪ ಹೊತ್ತಿನಲ್ಲಿಯೇ ಒಂದು ಭಯಂಕರವಾದ ಕುಳ್ಳ ಆಕೃತಿಯು ಕಾಣಿಸಿಕೊಂಡಿತು, ಅರ್ಜುನನನ್ನು ಕೆಳಗೆ ಇಳಿಯುವಂತೆ ಸನ್ನೆಮಾಡಿತು. "ಎಲಾ, ಯಾರೋ ನೀನು? ಏನಾಗಬೇಕು ನಿನಗೆ ?" ಎಂದು ಅರ್ಜುನನು ಗರ್ಜಿಸಿದನು. "ನಾನು ಈ ಮರದಲ್ಲಿರುವ ದೆವ್ವವು, ಇಲ್ಲಿ ನೀವಿರಬಾರದು. ಕೂಡಲೆ ಹೊರಡಿರಿ, ಇಲ್ಲದಿದ್ದರೆ ಕೆಳಕ್ಕಿಳಿದು ನನ್ನೊಡನೆ ಕುಸ್ತಿ ಮಾಡು!" ಎಂಬ ಉತ್ತರವು ಬಂದಿತು. ಅರ್ಜುನನು ಒಂದು ಗುದ್ದು ಹಾಕಿ ಆ ದೆವ್ವವನ್ನು ಕೆಳಕ್ಕೆ ಕೆಡಹಿದನು. ಇನ್ನೇನು, ಅದು ಸತ್ತೇ ಇರಬೇಕು - ಎಂದುಕೊಳ್ಳುವಷ್ಟರೊಳಗೆ ಅದು ಮತ್ತೆ ಅರ್ಜುನನ ಬಳಿಗೆ ಬಂದು, "ಬಾ ಕುಸ್ತಿಗೆ" ಎಂದು ಕೂಗಿತು. ಅರ್ಜುನನು ಮತ್ತೆ ಕೆಳಕ್ಕಿಳಿದನು. ಇಬ್ಬರೂ ಕೈಗೆ ಕೈ, ಭುಜಕ್ಕೆ ಭುಜ - ಕೊಟ್ಟು ಕುಸ್ತಿಯಾಡಿದರು. ಅರ್ಜುನನು ಅದನ್ನು ನೆಲದ ಮೇಲಕ್ಕೆ ಉರುಳಿಸಿದ ಪ್ರತಿಯೊಂದು ಸಲವೂ ಅದು ಇನ್ನಷ್ಟು ದೊಡ್ಡದಾಗಿ ಬೆಳೆಯುತ್ತಾ ಕುಸ್ತಿಗೆ ಸವಾಲುಹಾಕುತ್ತಾ ಬಂತು. ಕೊನೆಗೆ ಆ ಮರಕ್ಕಿಂತಲೂ ಎತ್ತರವಾಗಿ ಬೆಳೆದು, "ಬಾರೋ, ಕುಸ್ತಿಗೆ! ಇಲ್ಲದಿದ್ದರೆ ನಾನು ನಿನ್ನ ಬಿಲ್ಲು ಬಾಣ - ಎಲ್ಲವನ್ನೂ ನುಂಗಿಬಿಡುತ್ತೇನೆ ನೋಡು!" ಎಂದು ಹೆದರಿಸಿತು. ಇಷ್ಟರಲ್ಲಿ ಅರ್ಜುನನ ಸರದಿಯು ಮುಗಿಯಿತು. ಅವನು ಸರಸರನೆ ಮರವನ್ನೇರಿ ಕೃಷ್ಣನನ್ನು ಎಬ್ಬಿಸಿದನು. ರಾತ್ರೆ ತನಗೂ ದೆವ್ವಕ್ಕೂ ಆದ ಹೋರಾಟದ ಸುದ್ದಿಯ ಸೊಲ್ಲನ್ನೂ ಎತ್ತಲಿಲ್ಲ, ಅವನು!
    ಈಗ ಕೃಷ್ಣನ ಸರದಿ ಬಂದಿತು. ಅರ್ಜುನ, ಸಾತ್ಯಕಿ - ಇಬ್ಬರು ಗಾಢನಿದ್ರೆಯಲ್ಲಿ ಮುಳಿಗಿಬಿಟ್ಟರು.
    ಅರುಣೋದಯವಾಯಿತು, ಕೃಷ್ಣನು ಅವರಿಬ್ಬರನ್ನೂ ಎಬ್ಬಿಸಿದನು. ಅವರು ಮುಖ ಬಿಳಿಚಿಕೊಂಡು, "ಕೃಷ್ಣ, ರಾತ್ರೆ ನಿನಗೇನೂ ತೊಂದರೆಯಾಗಲಿಲ್ಲವಷ್ಟೆ ?" ಎಂದರು. ಕೃಷ್ಣನು "ನನಗೇನೋ ರಾತ್ರೆಯೆಲ್ಲಾ ಸುಖವಾಗಿ ಕಳೆಯಿತು, ನಿಮಗೇನಾದರೂ ಅಡಚಣೆಯಾಗಿತ್ತೇನು ?" ಎನ್ನಲು, ಅವರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡುತ್ತಾ "ಇಲ್ಲ, ಅಂಥದ್ದೇನು ಇಲ್ಲ " ಎಂದರು. ಆದರೆ ಗುಟ್ಟು ರಟ್ಟಾಗಲೇಬೇಕಷ್ಟೆ ? ಅರ್ಜುನನು ಸ್ವಲ್ಪ ಹೊತ್ತಾಗುವದರೊಳಗೇ ರಾತ್ರೆ ತಾನು ಕಂಡ ದೃಶ್ಯವನ್ನೆಲ್ಲ ವರ್ಣಿಸಿ," "ಅದನ್ನು ನೀನೇನಾದರೂ ಕಂಡೆಯೇನು ?" ಎಂದನು.
    ಆಗ ಕೃಷ್ಣನು "ನೀವು ಕಂಡ ದೆವ್ವವು ಯಾವದೋ ನಾನು ಕಾಣೆ, ಆದರೆ ಒಂದು ಕುಳ್ಳಾಗಿದ್ದ ಆಕೃತಿಯೇನೋ ನನ್ನ ಹತ್ತಿರಕ್ಕೆ ಬಂದದ್ದು ನಿಜ " ಎಂದನು. "ಅದು ನಿನ್ನನ್ನು ಕುಸ್ತಿಗೆ ಕರೆಯಿತೆ ?" ಎಂಬ ಪ್ರಶ್ನೆಗೆ ಕೃಷ್ಣನಿಂತೆಂದನು, "ಕರೆಯಿತು, ನಾನು ನಕ್ಕು ಸುಮ್ಮನಾಗಿಬಿಟ್ಟೆನು, ಏಕೆಂದರೆ ನನಗೆ ಅದರ ಮರ್ಮವು ಮೊದಲೇ ಗೊತ್ತಿತ್ತು. ನಾನು ಔದಾಸೀನ್ಯದಿಂದಿದ್ದದ್ದನ್ನು ಕಂಡು ಅದು ನಾನು ಮಾಡಿದ ಉಪೇಕ್ಷೆಯನ್ನು ಸಹಿಸಲಾರದೆ, ಬಯ್ಯುತ್ತಾ ಕೂಗುತ್ತಾ ನನ್ನ ಮುಖಭಂಗಮಾಡಲು ಪ್ರಯತ್ನಿಸಿತು, ಆದರೆ ಬರುಬರುತ್ತಾ ಅದು ಹೆಚ್ಚು ಹೆಚ್ಚು ಮಂಕಾಯಿತು, ಕೆಲವು ನಿಮಿಷಗಳೊಳಗಾಗಿ ಹೆಬ್ಬೆರಳು ಗಾತ್ತದಷ್ಟಾಯಿತು. ಆಗ ನಾನು ಅದನ್ನು ತೆಗೆದುಕೊಂಡು ಸೆರಗಿನಲ್ಲಿ ಗಂಟುಹಾಕಿ ಇಟ್ಟೆನು "
    ಕೃಷ್ಣನು ಹಾಸ್ಯಮಾಡುತ್ತಾನೆಂದು ಅರ್ಜುನನಿಗೆ ತೋರಿತು. ಮುಗುಳು ನಗೆಯಿಂದ ತನ್ನ ಕಡೆಗೆ ನೋಡುತ್ತಿರುವ ಅರ್ಜುನನಿಗೆ ತನ್ನ ಮಾತಿನ ನಿಜವನ್ನು ತೋರಿಸುವದಕ್ಕಾಗಿ ಕೃಷ್ಣನು ಸೆರಗಿನ ಗಂಟನ್ನು ಬಿಚ್ಚಿ ತೋರಿಸಿದನು. ಅರ್ಜುನ, ಸಾತ್ಯಕಿ - ಇಬ್ಬರಿಗೂ ಅದರ ಗುರುತು ಸಿಕ್ಕಿತು. ಕೃಷ್ಣನು "ಇದೇ ಹಿಂಸೆ ಎಂಬುದು. ಇದು ವೀರಾಧಿವೀರರನ್ನೂ ಕುಸ್ತಿಗೆ ಕರೆಯುತ್ತಿರುತ್ತದೆ. ಅದನ್ನು ಎಷ್ಟು ಎದುರಿಸಿದರೆ ಅಷ್ಟು ಬಲವಾಗುತ್ತದೆ. ಹಿಂಸೆಯಿಂದಲೇ ಅಲ್ಲವೆ, ಹಿಂಸೆ ಬೆಳೆಯುವದು? ಅದನ್ನು ಸೋಲಿಸುವದಕ್ಕೆ ಅಹಿಂಸೆಯೊಂದೇ ಉಪಾಯ" ಎಂದನಂತೆ........

ಇಂದಿನ ಪ್ರಗತಿಪರರು, ಬುದ್ಧಿಜೀವಿಗಳನ್ನು ಸೆರಗಿನಲ್ಲಿ ಕಟ್ಟಿಡಿ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ