ಮಾನವ ಜನಾಂಗದ ಮೊಟ್ಟಮೊದಲ ತಾಯಿ "ಶತರೂಪ"
ಶತರೂಪಾಳು ಮಾನವ ಜನಾಂಗದ ಮೊಟ್ಟಮೊದಲ ತಾಯಿಯಾಗಿ, ಆದಿಮಾತೆಯಾಗಿದ್ದಾಳೆ. ಈಕೆಯು ಸ್ವಯಂಭು ಮನುವಿನ ಪತ್ನಿ. ಮನು ಮತ್ತು ಶತರೂಪಾರವರುಗಳಿಂದಲೆ ಮಾನವ ಸೃಷ್ಟಿಯ ಆರಂಭವಾಯಿತು. 'ತತೋ ಮನುಷ್ಯಾ ಅಜಾಯಂ ತಾಃ' ಎಂದ ಶ್ರುತಿಯು ಹೇಳುತ್ತದೆ.
ಮನು ಮತ್ತು ಶತರೂಪಾ ಇವರಿಬ್ಬರು ಬ್ರಹ್ಮನ ಶರೀರದಿಂದ ಹುಟ್ಟಿದವರು. ಅವನ ಎಡಭಾಗದಿಂದ ಮನು ಮತ್ತು ಬಲ ಭಾಗದಿಂದ ಶತರೂಪಾರವರುಗಳು ಪ್ರಾದುರ್ಭಾವಗೊಂಡರು. ಕೇವಲ ಮಾನವನೇ ಅಲ್ಲ, ನೂರಾರು ಸಾವಿರಾರು ಪ್ರಾಣಿಗಳೂ ಕೂಡ ಇವರಿಬ್ಬರುಗಳ ಸಂತಾನವಾಗಿದೆ - ಎಂದು ಬೃಹದಾರಣ್ಯಕ ಉಪನಿಷತ್ತು ಹೇಳುತ್ತದೆ.
ಶತರೂಪಾಳು ಬಹಳ ಮುಗ್ಧ ಸ್ವಭಾವದ, ಲಜ್ಜೆಯನ್ನು ಹೊಂದಿದ್ದ ಹೆಣ್ಣಾಗಿದ್ದಳು, ಮುಂದೆ ಜಗತ್ತಿನಲ್ಲಿ ಹೆಣ್ಣು ಎಂಬುವಳು ಹೀಗೆಯೇ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಳು.
ಶತರೂಪಾಳು ತನ್ನ ಇಷ್ಟದಂತೆ ಯಾವ ರೂಪವನ್ನು ಬೇಕಾದರೂ ಪಡೆಯುವವಳಾಗಿದ್ದಳು. ಮನುವನ್ನು ಸಂಧಿಸಬೇಕಾದ ಪ್ರಥಮ ಸಮಾಗಮದ ಸಮಯದಲ್ಲಿ ಆಕೆಯು ನೂರಾರು ರೂಪಗಳನ್ನು ಧರಿಸಿದಳು. ಈ ರೀತಿಯಲ್ಲಿ ಆಕೆ ಮನುವಿನ ದೃಷ್ಟಿಯಿಂದ ಬಚ್ಚಿಟ್ಟಕೊಳ್ಳಲು ಪ್ರಯತ್ನಿಸಿದಳು ಆದರೆ ಮನುವು ಅವಳನ್ನು ಎಲ್ಲ ರೂಪಗಳಲ್ಲಿಯೂ ಕಂಡುಹಿಡಿದು, ಅವಳು ಯಾವ ರೂಪವನ್ನು ಪಡೆಯುವಳೋ ಅದೇ ರೂಪವನ್ನು ತಾನೂ ಪಡೆದು ಅವಳನ್ನು ಸಂಧಿಸಿದನು.
ಈ ರೀತಿಯಲ್ಲಿ ನೂರಾರು ರೂಪಗಳನ್ನು ಧರಿಸಿದ ಕಾರಣದಿಂದಲೆ ಈಕೆಯ ಹೆಸರು ಶತರೂಪಾ ಎಂದಾಗಿರಬೇಕು.
ಯಾವ ಯಾವ ಪ್ರಾಣಿಗಳ ರೂಪವನ್ನು ಈಕೆಯು ಧರಿಸಿದಳೊ, ಆ ಎಲ್ಲರೂಪಗಳಲ್ಲಿಯೂ ತನ್ನ ಒಂದೊಂದು ಸಂತಾನವನ್ನು ಬಿಟ್ಟಳು. ತಾನು ನೀಡಿದ ರೂಪಗಳುಳ್ಳ ಪ್ರಾಣಿಗಳ ಮೇಲೆ ದಯೆ, ಅನುಕಂಪ, ಕರುಣೆಗಳನ್ನು ತೋರಿ ಮಾನವ ಸ್ತ್ರೀಯು ಪಶುಗಳನ್ನು ಹೇಗೆ ನೋಡಿಕೊಳ್ಳಬೇಕೆಂಬುದನ್ನು ಸ್ವತಃ ತೋರಿಸಿ ಕೊಟ್ಟಳು. ಇದೇ ಪ್ರಾಣಿ ಸೃಷ್ಟಿಯ ಮೂಲ ಸ್ತೋತ್ರವಾಯಿತು.
ಸ್ವಾಯಂಭುವಮನುವು ಬ್ರಹ್ಮಾವರ್ತದ ರಾಜನಾದನು. ಸಕಲ ಸಂಪನ್ಮೂಲಗಳಿಂದ ಕೂಡಿದ ಬರ್ಹಿಷ್ಮತೀ ನಗರವು ಈತನ ರಾಜಧಾನಿಯಾಗಿದ್ದಿತು. ವರಾಹಸ್ವಾಮಿಯು ಭೂಮಿಯನ್ನು ರಸಾತಲದಿಂದ ಮೇಲೆತ್ತಿ ತಂದ ಮೇಲೆ ಆತನ ಶರೀರದಿಂದ ರೋಮವು ಕಿತ್ತು ಬಂದು ಭೂಮಿಯ ಮೇಲೆ ಬಿದ್ದಿತು. ಇದೇ ಮುಂದೆ ಬೆಳೆದು ಕುಶ ಕಾಶಗಳಾದುವು. ಈ ಕುಶ ಮತ್ತು ಕಾಶಗಳನ್ನೆ ಮುನಿಗಣವು ಯಜ್ಞಗಳು ಅಡ್ಡಿ ಉಂಟುಮಾಡುವ ದೈತ್ಯರನ್ನು ಓಡಿಸಲು, ಯಜ್ಞ ಪುರುಷನನ್ನು ಆರಾಧಿಸಲು ಸಾಧನವನ್ನಾಗಿ ಉಪಯೋಗಿಸುತ್ತಿದ್ದರು. ಇದೇ ಕುಶವನ್ನು 'ಬರ್ಹಿಷ್' ಎಂದು ಕರೆಯುತ್ತಾರೆ. ಇದು ಮೊದಲಿಗೆ ಕಂಡು ಬಂದುದೆ ಅಲ್ಲದೆ ಬಹಳ ಹೆಚ್ಚಾಗಿರುವ ಕಾರಣದಿಂದಲೇ ಸ್ವಾಯಂಭುವಮನುವಿನ ನಗರಕ್ಕೆ 'ಬರ್ಹಿಷ್ಮತೀ' ನಗರ ಎಂಬ ಹೆಸರು ಬಂದಿತು. ಇದೇ ನಗ್ರದಲ್ಲಿಯೆ ಶತರೂಪಾಳು ತನ್ನಪತಿ ಮನವಿನೊಂದಿಗೆ ವಾಸಿಸುತ್ತಿದ್ದಳು.
ಶತರೂಪಾಳು ಪತ್ನೀಧರ್ಮವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುತ್ತಿದ್ದಳು. ಗಂಡನನ್ನು ಪ್ರೇಮಪುರಸ್ಸರವಾಗಿ ನೋಡಿಕೊಳ್ಳುತ್ತಿದ್ದುದೇ ಅಲ್ಲದೆ ತನ್ನ ನಗರ, ತನ್ನ ಪ್ರಜೆಗಳು, ಪಶಸಂಪತ್ತು ವೃಕ್ಷಸಂಪತ್ತನ್ನೂ ಆದರದಿಂದ ನೋಡಿಕೊಳ್ಳವಳು ಅವರುಗಳಿಗೆ ಸ್ವಂತತಾಯಿಯಂತೆಯೇ ಇದ್ದಳು. ಪ್ರತಿದಿನ ಪ್ರೇಮ ಪೂರ್ಣ ಹೃದಯದಿಂದ ಭಗವಂತನ ಪುಣ್ಯ ಕಥೆಗಳನ್ನು ಹೇಳುವುದು, ಅವನ ನಾಮ ಸಂಕೀರ್ತನೆಗಳನ್ನು ಮಾಡುವುದು, ಪೂಜಾ ಪಾಠಗಳನ್ನು ಅನುಸರಿಸುವುದು - ಇತ್ಯಾದಿ ಕಾರ್ಯಗಳನ್ನು ಮಾಡುವಳು. ಹೆಣ್ಣು ದಿನವನ್ನು ಹೇಗೆ ಕಳೆಯಬೇಕು, ಸನ್ಮಾರ್ಗದಲ್ಲಿ ಹೇಗೆ ವರ್ತಿಸಬೇಕೆಂಬುದಕ್ಕೆ ಆದರ್ಶ ಪ್ರಾಯಳಾದಳು. ತನ್ನ ಪತಿಯೊಡಗೂಡಿ ಸದ್ಧರ್ಮ ಪರಿಪಾಲನೆಯನ್ನು ಮಾಡಿದಳು. ಇಂದಿಗೂ ವೇದಗಳು ಈಕೆಯನ್ನು ಗೌರವಿಸುತ್ತಿವೆ.
ಮನು ಮತ್ತು ಶತರೂಪಾರವರಿಗೆ ಇಬ್ಬರು ಪುತ್ರರು ಮತ್ತು ಮೂರು ಜನ ಪುತ್ರಿಯರು ಇದ್ದರು. ಪುತ್ರರ ಹೆಸರು ಉತ್ತಾನಪಾದ ಮತ್ತು ಪ್ರಿಯವ್ರತ ಎಂದಿತ್ತು. ಪುತ್ರಿಯರ ಹೆಸರು ಆರೂತಿ, ಪ್ರಸೂತಿ ಮತ್ತು ದೇವಹೂತಿ ಎಂದಾಗಿತ್ತು.
ಉತ್ತಾನಪಾದನ ಮಗನೇ ಪ್ರಸಿದ್ಧ ಭಕ್ತನಾದ ಧ್ರುವನು. ಮನುವಿನ ಎರಡನೆ ಮಗನಾದ ಪ್ರಿಯವ್ರತನು ಈ ಭೂಮಂಡಲ ವಿಭಜಿಸಿ, ಉತ್ತಮ ರಾಜ್ಯವ್ಯವಸ್ಥೆಯನ್ನು ರೂಪಗೊಳಿಸಿದನು.
ಪುತ್ರಿಯರಲ್ಲಿ ಮೊದಲನೆಯವಳಾದ ಆರೂತಿಯು ರುಚಿ ಪ್ರಜಾಪತಿ ಯನ್ನು ವಿವಾಹವಾದಳು. ಎರಡನೆಯವಳಾದ ಪ್ರಸೂತಿಯು ದಕ್ಷ ಪ್ರಜಾಪತಿಯನ್ನು ಮದುವೆಯಾದಳು. ಸ್ವಾಯಂಭುವ ಮನ್ವಂತರದ ಈ ದಕ್ಷನು ಪ್ರಸೂತಿಯಲ್ಲಿ 24 ಹೆಣ್ಣು ಮಕ್ಕಳನ್ನು ಪಡೆದು ಮುಂದೆ ಋಷಿ ಸಂತಾನಕ್ಕೆ ಕಾರಣನಾದನು. ಅಲ್ಲದೆ ಮೈಥುನ ಧರ್ಮದಿಂದ ಸಂತಾನಾಭಿವೃದ್ಧಿಯಾಗುವಂತೆಯೂ ನಿಯಮಿಸಿದ. ಮೂರನೆಯ ಮಗಳಾದ ದೇವಹೂತಿಯು ಕರ್ದಮ ಮಹರ್ಷಿಯನ್ನು ಮದುವೆಯಾದಳು.
ಈ ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಮನೆಯೆಲ್ಲಿ ಹೇಗೆ ಇರಬೇಕು, ಹೇಗೆ ವರ್ತಿಸಬೇಕು ಎಂಬುದನ್ನು ಶತರೂಪಾಳು ತನ್ನ ಮಕ್ಕಳಿಗೆ ಉಪದೇಶಿದಳು. ಗಂಡನ ಮನೆಯಲ್ಲಿ ಹೆಣ್ಣು ಮಕ್ಕಳು ಮಾಡಬೇಕಾದ ಕರ್ತವ್ಯ ಪಾಲನೆ, ನಿಯಮ ನಿಷ್ಠೆ - ಇತ್ಯಾದಿ ನೀತಿ ಸಂಹಿತೆಯನ್ನು ಈಕೆ ರೂಪಿಸಿದಳು.
ಮನುವು ಬಹಳ ಕಾಲದವರೆಗೆ ರಾಜ್ಯ ಭಾರ ಮಾಡಿದ ಉತ್ತಮರೀತಿಯಲ್ಲಿ ಪ್ರಜಾಪಾಲನೆ ಮಾಡಿದ. ಭಗವಂತನ ನಿಯಮನಗಳಿಗೆ ಅನುಸಾರವಾಗಿ, ಶಾಸ್ತ್ರಾರ್ಥ ರೀತಿಯಲ್ಲಿ ನಡೆದು ಕೊಳ್ಳಲು ಶತರೂಪೆಯು ಸಲಹೆಗಳನ್ನು ನೀಡಿದಳು.
ಎಷ್ಟುವರ್ಷಗಳು ರಾಜ್ಯಭಾರ ಮಾಡಿದರೂ ವೈರಾಗ್ಯವೆಂಬುದು ಉದಯಿಸಲೇ ಇಲ್ಲ ಇದನ್ನು ಗಮನಿಸಿದ ಶತರೂಪಾಳು ತನ್ನ ಗಂಡನಿಗೆ ಇದರ ಬಗ್ಗೆ ಎಚ್ಚರಿಸಿದಳು ತನ್ನ ಗಂಡನಿಗೆ ಇದರ ಬಗ್ಗೆ ಎಚ್ಚರಿಸಿದಳು. ಇದರ ಪರಿಣಾಮವಾಗಿ ಅವನಿತ ತನ್ನ ತಪ್ಪಿನ ಅರಿವಾಯಿತು. 'ದೇವಿ! ನಮ್ಮ ಇದುವರೆವಿಗಿನ ಜೀವನವು ಪರಮಾತ್ಮನ ಪುರ್ಣರೂಪದ ಧ್ಯಾನಮಾಡದೆ ವ್ಯರ್ಥವಾಯಿತಲ್ಲ!' ಎಂದು ಪಶ್ಚಾತ್ತಾಪಗೊಂಡನು.
ಕಡೆಗೆ ತನ್ನ ಮಗ ಉತ್ತಾನಪಾದನನ್ನು ಬಲವಂತವಾಗಿ ಸಿಂಹಾಸನದ ಮೇಲೆ ಕುಡಿಸಿ, ತಾನು ಶತರೂಪಾಳ ಜೊತೆಯಲ್ಲಿ ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಲು ಕಾಡಿಗೆ ತೆರಳಿದನು.
ಈ ದಂಪತಿಗಳು ಸಹಸ್ರಾರು ವರ್ಷಗಳವರೆಗೆ ಕಠಿಣ ತಪಸ್ಸು ಮಾಡಿ ಪರಮಾತ್ಮನನ್ನು ಒಲಿಸಿಕೊಂಡರು. ಆಗ ಭಗವಂತನು ಪ್ರತ್ಯಕ್ಷನಾಗಿ ಅವರಿಗೆ ದರ್ಶನ ನೀಡಿದನು. ಅವನ ಮನೋಹರಸುಂದರೂಪ ಲೀಲಾ ಮೋಹನದೃಷ್ಟಿ, ಮಣಿಮಯ ಅಭೂಷಣ ಆಭರಣಗಳ ಶೋಭೆಯನ್ನು ವೀಕ್ಷಿಸಿ ಪುನೀತರಾವೆಂದುಕೊಂಡರು ಆ ದಂಪತಿಗಳು.
ಪರಮಾತ್ಮನ ಈ ರೂಪ ಮಾಧುರ್ಯದಿಂದ ಆನಂದ ತುಂದಿಲರಾದ ಆ ದಂಪತಿಗಳು ಅವನ ಚರಣಗಳನ್ನು ಸ್ಪಶಿಸಿ ಮೇಲೆದ್ದರು.
ಅವರ ತಪಸ್ಸಿನಿಂದ ಸುಪ್ರೀತನಾದ ಪರಮಾತ್ಮನು ಅವರಿಗೆ ವರವನ್ನು ಕೇಳಿಕೊಳ್ಳುವಂತೆ ಅನುಗ್ರಹಿಸಿದನು ಇದನ್ನು ಆಲಿಸಿದ ಮನುವು ಹೇಳಿದನು.
"ಹೇ ಪ್ರಾಣದಾತನೆ! ನಿನ್ನ ದರ್ಶನ ಮಾತ್ರದಿಂದಲೆ ನಮ್ಮೆಲ್ಲ ಅಭಿಲಾಷೆಗಳೂ ಪೂರ್ಣಗೊಂಡವು. ಆದರೆ ನನ್ನ ಹೃದಯದಲ್ಲಿ ಒಂದೇ ಒಂದು ಆಸೆಯು ಉಳಿದಿದೆ"
"ಏನದು ಹೇಳು?"
"ನಿನ್ನ ಸಮಾನನಾದ ಓರ್ವಪುತ್ರನು ನನ್ನಲ್ಲಿ ಜನಿಸಬೇಕು ಅಷ್ಟೆ ನನಗೆ ಬೇರೇನು ಆಸೆಯಿಲ್ಲ"
"ನಿನ್ನ ಬೇಡಿಕೆ ಈಡೇರುವುದ, ನನ್ನಂತಹ ಮಗನನ್ನು ನಿನಗೆ ಎಲ್ಲಿಂದ ಹುಡುಕಿ ತರುವುದು? ಅದು ಸಾಧ್ಯವಿಲ್ಲದ ಮಾತು. ಅದರಿಂದ ನಾನೆ ನಿನ್ನ ಮಗನಾಗಿ ನಿನ್ನಲ್ಲಿ ಅವತರಿಸುವೆನು.
ನಂತರ ಪರಮಾತ್ಮನು ಶತರೂಪಾಳ ಕಡೆ ತಿರುಗಿ, "ದೇವಿ, ನಿನ್ನ ಇಷ್ಟಕ್ಕೆ ತಕ್ಕಂತಹ ವರಮೊಂದನ್ನು ಕೇಳು" ಎಂದು ಕರುಣಿಸಿದನು.
"ಪ್ರಭೂ! ನನ್ನ ಪತಿದೇವನು ಕೇಳಿರುವ ವರವೇ ನನಗೂ ಪ್ರಿಯವಾದುದು. ಆದರೂ ಈ ಒಂದು ವರವನ್ನು ಕೇಳಲು ಇಚ್ಛಿಸುತ್ತೇನೆ."
"ಕೇಳು"
"ನಾನು ನನ್ನ ಪತಿಯೊಂದಿಗೆ ಸುಖ ಜೀವನ ನಡೆಸಿದಂತೆ ಮುಂದೆ ಭವಿಷ್ಯದಲ್ಲಿ ಪ್ರತಿ ಪತಿವ್ರತೆಯೂ ನನ್ನಂತೆಯೆ ತನ್ನ ಪತಿಯೊಂದಿಗೆ ಸುಖಜೀವನ ನಡೆಸುವಂತೆ ಮಾಡು. ಪತಿಯ ಪಾದಾರವಿಂದಗಳಿಂದ ಅಂತಹವರು ದೂರವಿರದಂತೆ ಮಾಡು ಅವರುಗಳಿಗೆ ಪತಿಯಸುಖ, ಸಂತಾನ ಸೌಭಾಗ್ಯ ಸದಾ ಇರುವಂತೆ ಕರುಣಿಸು ಬುದ್ಧಿವಂತ ಹೆಣ್ಣಿನಲ್ಲಿ ಸದಾಕಾಲದಲ್ಲೂ ಸದಸದ್ವಿವೇಕ ನೆಲೆಸಿರುವಂತೆ ಅನುಗ್ರಹಿಸು ನಿನ್ನ ಮೇಲೆ ಸದಾ ಮನಸ್ಸಿರುವಂತೆ ಕರುಣಿಸು" ಎಂದು ಬೇಡಿ ತಲೆಬಾಗಿಸಳು.
ತನಗಾಗಿಯಲ್ಲದೆ ಬೇರೆಯವರಿಗಾಗಿ ಬೇಡಿದ ಇಂತಹ ಮಾತೆಯ ಬೇಡಿಕೆಯನ್ನು ಪರಮಾತ್ಮನು ತಾನೆ ಹೇಗೆ ಬೇಡವೆಂದಾನು! ಪ್ರತಿಯೊಬ್ಬ ಮಾತೆಯ ಕರ್ತವ್ಯವೂ ಇದರಲ್ಲಿ ಅಡಗಿರುವುದರಿಂದ ಪರಮಾತ್ಮನು ಈ ವರಕ್ಕೆ ತಥಾಸ್ತು ಎಂದು ಅನುಗ್ರಹಿಸಿ, "ನಿನ್ನ ಮನಸ್ಸಿನಲ್ಲಿರುವುದೆಲ್ಲ ಅನುಗ್ರಹಿಸಿದ್ದೇನೆ" ಎಂದು ಹೇಳಿ, ಆಕೆಯನ್ನು ತನ್ನ ತಾಯಿಯನ್ನಾಗಿ ಸ್ವೀಕರಿಸಿದ.
ಈ ರೀತಿಯಲ್ಲಿ ಮಾತೆಯ ವಿಶಾಲ ಹೃದಯ ಪ್ರಸ್ಫುಟಿತವಾಯಿತು. ತಾಯಿಯಾದವಳು ನಿಜ ಅರ್ಥದಲ್ಲಿ ತನಗಾಗಿ ಅಲ್ಲದೆ ಬೇರೆಯವರಿಗಾಗಿ ಹೇಗೆ ಜೀವಿಸಬೇಕು, ತನ್ನ ಜೀವನವನ್ನು ಹೇಗೆ ಸಾರ್ಥಕ ಪಡಿಸಿಕೊಳ್ಳಬೇಕು - ಎಂದು ಶತರೂಪಾಳು ತನ್ನ ಜೀವನವನ್ನೆ ಉದಾಹರಣೆಯನ್ನಾಗಿ ಮಾಡಿ, ತೋರಿಸಿದಳು.
ಭೂಮಂಡಲದ ಮೇಲಿನ ಸ್ತ್ರೀಜನಾಂಗಕ್ಕೆ ಈ ರೀತಿಯಲ್ಲಿ ಶತರೂಪಾಳು ಆದರ್ಶ ಪ್ರಾಯಳಾದಳು. ತನ್ನ ಅಲೌಕಿಕ ಶ್ರದ್ಧಾ ಭಕ್ತಿಗಳು ಹಾಗೂ ತಪಸ್ಸುಗಳಿಂದ ಭಗವಂತನನ್ನು ಮಗನನ್ನಾಗಿ ಪಡೆದಳು.
ಪರಮಾತ್ಮನ ಆಜ್ಞೆಯಂತೆ ಕೆಲವು ಕಾಲದವರಿಗೆ ಈ ದಂಪತಿಗಳು ಇಂದ್ರ ಲೋಕದಲ್ಲಿದ್ದರು. ನಂತರ ಮನುವು ಅಯೋಧ್ಯೆಯ ಚಕ್ರವರ್ತಿ ದಶರಥನಾದನು, ಶತರೂಪಾಳು ಅವನ ಪ್ರಥಮ ಪತ್ನಿ ಕೌಸಲ್ಯೆಯಾಗಿ ಪರಮಾತ್ನನ ಅಂಶವಾದ ಶ್ರೀರಾಮನಿಗೆ ಜನ್ಮ ನೀಡಿದಳು.
ಈ ರೀತಿ ಶತರೂಪಾಳು ಜಗತ್ ಕಲ್ಯಾಣಕ್ಕಾಗಿ ದುಡಿದ ಜಗತ್ತಿನ ಪ್ರಥಮ ಮಹಿಳೆಯಾದಳು. ಮಾತೆಯ ಮಮತೆ, ಪತ್ನಿಯ ಕರ್ತವ್ಯಗಳ ಪ್ರತಿರೂಪವಾದಳು.
Comments
Post a Comment