ಲಲಿತಾ ತ್ರಿಶತೀ -20 ಓಂ ಕರ್ಮಫಲಪ್ರದಾಯೈ ನಮಃ
ಕಾಲಾಂತರದಲ್ಲಿ ಉಂಟಾಗುವ ಫಲಗಳಿಂದ ಕೂಡಿದ ಸತ್ಕರ್ಮಗಳ ಫಲವನ್ನು ಅನುಗ್ರಹಿಸುವಳು. ಅದೃಷ್ಟವು ಕರ್ಮಫಲವನ್ನು ಕೊಡುವುದೆಂದು ಕರ್ಮ ಮಿಮಾಂಸಾ ಶಾಸ್ತ್ರಕಾರ್ರ ಸಿದ್ಧಾಂತವು. ಅದು ಸಮಂಜಸವಾಗಲಾರದು. ಅಚೇತನವೂ ಜಡವೂ ಆದ ಅದೃಷ್ಟಕ್ಕೆ ಚೇತನ ಧರ್ಮವಾದ ಕರ್ಮಫಲದಾನ ಶಕ್ತಿಯು ಸಂಭವಿಸುವುದಿಲ್ಲ. ಶಾಸ್ತ್ರ ಪ್ರಮಿತವಾದ ಕರ್ಮಗಳು ಫಲವನ್ನು ಅವಶ್ಯವಾಗಿ ಕೊಡಬೇಕಾದುದರಿಂದ ಕರ್ಮಾಧ್ಯಕ್ಷಳಾದ ಪರದೇವತೆಯನ್ನು ಅಪೇಕ್ಷಿಸುವುದು. ಪರದೇವತೆಯು ಕರ್ಮಫಲವನ್ನು ಕೊಡುವುದೆಂಬುದನ್ನು "ಕರ್ಮಾಧ್ಯಕ್ಷಃ" "ಮಯೈವ ವಿಹಿತಾನ್ ಹಿ ತಾನ್" "ಫಲಮತ ಉಪಪತ್ತೇಃ" ಎಂಬ ಶ್ರುತಿ, ಸ್ಮೃತಿ, ನ್ಯಾಯಗಳು ಸಾರಿ ಹೇಳುವುವು ಆದ್ದರಿಂದ ದೇವಿಯು ಕರ್ಮ ಫಲ ಪ್ರದಾನ ಮಾಡುವವಳು. ಕರ್ಮಣಾಂ ಫಲಂ ಪ್ರದದಾತಿ ಎಂದು ವಿಗ್ರಹವು.
( ಮುಂದುವರೆಯುವುದು...)
Comments
Post a Comment