ಧಾತ್ರೀಹವನದ ವೈಶಿಷ್ಟ್ಯ



   ಅಭ್ಯುದಯಕ್ಕಾಗಿ ಮಾನವನು ಪ್ರಕೃತಿಮಾತೆಗೆ ಸಲ್ಲಿಸುವ ಧಾತ್ರೀಹವನವು ಕಾರ್ತಿಕಮಾಸದಲ್ಲಿ ಆಚರಿಸಲ್ಪಡುತ್ತದೆ. ಈ ಸಮಯವನ್ನು 'ಕೌಮುದೀ ಮಹೋತ್ಸವ' ಕಾಲವೆಂದೂ ಕರೆಯುತ್ತಾರೆ. ಕು - ಎಂದರೆ ಭೂಮಿ, ಮುದ್ - ಎಂದರೆ ಸಂತೋಷ. ಪೈರು-ಫಸಲುಗಳು ಕೈಗೆ ಬಂದಾಗ ಉತ್ತು ಬಿತ್ತಿದ ರೈತನು ಹಿಗ್ಗಿನ ಬುಗ್ಗೆಯಾಗಿ ಕಾರ್ತಿಕದೀಪವನ್ನು ಬೆಳಗಿ ಹಬ್ಬಗಳನ್ನು ಆಚರಿಸುತ್ತಾನೆ. ದೀಪಾವಳಿ, ಬಲಿಪಾಡ್ಯಮಿ, ತುಳಸೀಹುಣ್ಣಿಮೆ - ಇವೇ ಆ ಹಬ್ಬಗಳು.
    ಪುಣ್ಯತಮವಾದ ಕಾರ್ತಿಕಮಾಸದಲ್ಲಿ ಅಭಕ್ಷ್ಯಭಕ್ಷಣ, ಅಪೇಯಪಾನ ಮುಂತಾದ ದೋಷಗಳ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಮತ್ತು ಭೂಮಿಯನ್ನು ಅಗೆಯುವದು, ಕಡಿಯುವದು, ತುಳಿಯುವದೇ ಮುಂತಾದ ನಿರಂತರವಾದ ಹಿಂಸೆಯನ್ನು ಸಹಿಸಿಕೊಂಡು ನಮಗೆ ಸುಜಲ-ಸುಫಲಗಳನ್ನಿತ್ತು ರಕ್ಷಿಸಿ ಸಸ್ಯ ಶ್ಯಾಮಲೆಯಾಗಿ ಕಂಗೊಳಿಸುವ ಭೂಮಾತೆಯಲ್ಲಿ ಕ್ಷಮಾಯಾಚನೆಗಾಗಿ, ಹಾಗೂ ಕಾರ್ತಿಕದಾಮೋದರನ ಪ್ರೀತಿಗಾಗಿ ಸಮಸ್ತ ಪ್ರಕೃತಿಯ ಸಂಕೇತವಾದ ನೆಲ್ಲಿಯಮರದ ಬುಡದಲ್ಲಿ ಮಾಡುವ ಪೂಜಾ-ಹೋಮಗಳೇ ಧಾತ್ರಿಹವನವೆನಿಸುವದು. ಭೂಮಾತೆದಯಾಪಾಲಿಸಿದ ಪೈರನ್ನು ನಾವು ಉಪಯೋಗಿಸುವ ಮುಂಚೆ "ಕೆರೆಯ ನೀರನ್ನು ಕೆರೆಗೆ ಚೆಲ್ಲಿ" ಎಂಬ ದಾಸವಾಣಿಯಂತೆ ಅಲ್ಪಭಾಗವನ್ನಾದ್ರೂ ಭಗವಂತನಿಗೆ ಅರ್ಪಿಸಿ ಕೃತಾರ್ಥರಾಗುವ ಸಂದರ್ಭವೇ ಈ ಧಾತ್ರಿಯ ಆರಾಧನೆಯಾಗಿದೆ. ಅಲ್ಲದೆ ಪೈರನ್ನು ಕೊಯ್ಯುವ, ಕುಟ್ಟುವ, ಒಕ್ಕಲಿಕ್ಕುವ, ಬೇಯಿಸುವ, ಅರೆಯುವದೇ ಮುಂತಾದ ಕಾರ್ಯಗಳಿಂದ ಅನಿವಾರ್ಯವಾಗಿ ಸಂಭವಿಸುವ ಪಂಚಸೂನಾದಿ ದೋಷಗಳನ್ನು ಪರಿಹರಿಸಿಕೊಳ್ಳಲು ಈ ಧಾತ್ರೀಪೂಜೆಯು ಬಳಕೆಯಲ್ಲಿ ಬಂದಿರಬಹುದೆಂದು ಹೇಳ ಬಹುದಾಗಿದೆ.
    "ಹೋಮೇನ ಸರ್ವಕಾಮಾನಾಂ ಸಮೃದ್ಧಿರುಪಜಾಯತೇ" ಎಂಬಿದು ನಮ್ಮ ಹಿರಿಯರ ನಂಬುಗೆ. ನಾವು ಕಾಣದ ಯಾವದೋ ಒಂದು ಅಗೋಚರಶಕ್ತಿಯ ಮಹಿಮೆಯಿಂದಲೇ ಮಳೆ, ಬೆಳೆ, ಗಾಳಿ, ಬೆಳಕುಗಳು ಬರಲು ಸಾಧ್ಯ. ಇವುಗಳನ್ನು ನೀಡಿದ ಆ ಮಹಾಶಕ್ತಿಗೆ "ನಾವು ಸ್ವಾರ್ಥಿಗಳಲ್ಲ, ನೀನು ಕೊಟ್ಟದ್ದರಲ್ಲಿ ಅತ್ಯಲ್ಪವನ್ನಾದರೂ ನಿನಗೆ ಅರ್ಪಿಸದೆ ನಾವು ತಿನ್ನೆವು" ಎಂಬ ಕೃತಜ್ಞತಾಸೂಚಕವಾಗಿಯೇ ಅಗ್ನಿಯ ಮೂಲಕ ಹವಿಸ್ಸನ್ನು ಅರ್ಪಿಸಿ ಅನಂತ್ರ ನಾವು ವಸ್ತುಗಳನ್ನು ಬಳಸುವ ಔದಾರ್ಯವು ಹಿಂದೂ ಸಂಸ್ಕೃತಿಯಲ್ಲಿ ಬೆಳೆದುಬಂದಿದೆ. ಆಗೋಚರವಾದ ಶಕ್ತಿಯನ್ನು ತೃಪ್ತಿಗೊಳಿಸಲು ಅದಕ್ಕೂ ನಮಗೂ ಅಗ್ನಿಯೇ ಮಾಧ್ಯಮನಾಗಿರುವನು. "ಯಜ್ಞ ದಿಂದ ಪರ್ಜನ್ಯನೂ ಅವನಿಂದ ಅನ್ನವೂ ಉಂಟಾಗುವದು" ಎಂಬ ಗೀತಾವಾಕ್ಯವೂ ಇಲ್ಲಿ ಸ್ಮರಿಸತಕ್ಕದ್ದಾಗಿದೆ.
    ಧಾತ್ರೀ - ಎಂಬ ಪದಕ್ಕೆ ಕೋಶಗಳಲ್ಲಿ ತಾಯಿ, ದಾದಿ, ನೆಲ್ಲಿಮರ, ಭೂಮಿ ಎಂಬರ್ಥಗಳಿವೆ. ನಾವು ಹಗಲೂ ರಾತ್ರಿಯೂ ಅನೇಕ ತಪ್ಪುಗಳನ್ನು ಮಾಡಿದ್ರೂ ಸಹಿಸಿಕೊಂಡು ಮನ್ನಿಸಿ ದಾದಿಯಂತೆ ನಮ್ಮನ್ನು ಪೋಷಿಸಿ ಕಾಪಾಡುವ ಭೂಮಾತೆಯನ್ನು ಪೂಜಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮೃದ್ಧಿಯನ್ನೂ ತುಷ್ಟಿ ಪುಷ್ಟಿಗಳನ್ನೂ ನೀಡಿ ಕಾಪಾಡುವಂತೆ ಈ ಧಾತ್ರೀಹವನಕಾಲಕ್ಕೆ ಪ್ರಾರ್ಥಿಸಲಾಗುತ್ತದೆ. ಈ ಸತ್ಕರ್ಮವನ್ನು ತೋಟ, ಉದ್ಯಾನ, ದೇವಾಲಯ - ಮುಂತಾದ ಪ್ರಶಾಂತವಾದ ನಿಸರ್ಗದ ಮಡಿಲಲ್ಲಿ ಮಾಡುವದು ರೂಢಿಯಾಗಿದೆ. ಈ ಪೂಜೆಯಲ್ಲಿ ಸಹಸ್ರಶೀರ್ಷನೂ ಸಹ ಸ್ರಾಕ್ಷನೂ ಆದ ವಿರಾಟ್ ಪುರುಷನನ್ನು ಪುರುಷಸೂಕ್ತದಿಂದ ಪೂಜಿಸಲಾಗುತ್ತದೆ. ನಮಗೆ ಶತ್ರುಭಯವು ನಿವಾರಣೆಯಾಗಲಿ, ಪ್ರಕೃತಿಮಾತೆಯು ನಮಗೆ ಸಕಲ ಸಂಪತ್ತುಗಳನ್ನು ನೀಡಲಿ, ಭೂತಪ್ರೇತಪಿಶಾಚಾದಿ ಬಾಧೆಗಳು ಪರಿಹಾರವಾಗಲಿ, ಅಪಮೃತ್ಯು ನಿವಾರಣೆಯಾಗಿ ದೀರ್ಘಾಯುಷ್ಯವುಂಟಾಗಲಿ, ನಮ್ಮನ್ನು ಅಗಲಿದ ಬಂಧುಬಾಂಧವರಿಗೆಲ್ಲ ಸದ್ಗತಿಯಾಗಲಿ - ಎಂಬರ್ಥದ ಮಂತ್ರಗಳಿಂದ ಧಾತ್ರೀ, ಪ್ರಕೃತಿ, ಮಹಾಲಕ್ಷ್ಮಿ, ಗಾಯತ್ರಿ, ಮುಂತಾದ 21 ದೇವತೆಗಳಿಗೆ ಪೂಜೆ ಮತ್ತು ಹೋಮಗಳನ್ನು ನಡೆಸಲಾಗುತ್ತದೆ. ಅನಂತರ ಬಲಿಪ್ರದಾನಮಾಡಲಾಗುವದು. ಧಾತ್ರೀ ವೃಕ್ಷಕ್ಕೂ ದೇವರ ಮೂರ್ತಿಗೂ ದಾರದಿಂದ ಮೂರು ಸುತ್ತುಗಳನ್ನು ಹಾಕಿ ಎಂಟೂ ದಿಕ್ಕುಗಳಲ್ಲಿ ದೀಪಗಳನ್ನು ಬೆಳಗಿ ನೆಲ್ಲಿಯ ಮರದ ಬುಡದಲ್ಲಿ ಅರ್ಘ್ಯತರ್ಪಣಾದಿಗಳನ್ನು ಸಲ್ಲಿಸಿ ಈ ರೀತಿ ಪ್ರಾರ್ಥಿಸಲಾಗುತ್ತದೆ :
ಧಾತ್ರೀದೇವಿ ನಮಸ್ತುಭ್ಯಂ ಸರ್ವಪಾಪಕ್ಷಯಂಕರಿ |
ಪುತ್ರಾನ್ ದೇಹಿ ಮಹಾಪ್ರಾಜ್ಞೇ ಯಶೋ ದೇಹಿ ಬಲಂ ಚ ಮೇ ||
ಸಂವತ್ಸರಕೃತಂ ಪಾಪಂ ದೂರೀಕುರು ಮಮಾಕ್ಷಯೇ |
ವನಭೂಷಿತೇ ಸರ್ವಜ್ಞೇ ಪ್ರಸೀದ ಹರಿವಲ್ಲಭೇ ||
ನೀರೋಗಂ ಕುರು ಮಾಂ ನಿತ್ಯಂ ಧನವಂತಂ ತಥಾ ಕುರು ||
    ಇಂಥ ಪ್ರಾರ್ಥನೆಯು ಎಲ್ಲರೂ ಮಾಡತಕ್ಕದ್ದಾಗಿದೆ. ಈ ರೀತಿಯಾದ ವಿಧಿವಿಧಾನಗಳು ಪೂರೈಸಿದ ಬಳಿಕ ಆಪ್ತೇಷ್ಟರೊಂದಿಗೆ ಕೂಡಿ ಭೋಜನಮಾಡಲಾಗುತ್ತದೆ. ಧಾತ್ರಿಗೆ ವಂದನೆಗಳು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ