ಲಲಿತಾ ತ್ರಿಶತೀ (ಏಕಾರಾದಿನಾಮ) - 4. ಓಂ ಏತತ್ತದಿತ್ಯನಿರ್ದೇಶ್ಯಾಯೈ ನಮಃ
ವರ್ತಮಾನ ಕಾಲದಲ್ಲಿ ಇಯತ್ತೆಯಿಂದ ಪರಿಚ್ಛೆನ್ನ ವಸ್ತುವು ಏತತ್ ಎಂದೂ ಅನಿಶ್ಚಿತವಾದ ಪರೋಕ್ಷ ವಸ್ತುವು ತತ್ ಎಂದೂ ಕರೆಯಲ್ಪಡುವುವು. "ಇತಿ" ಶಬ್ದವು ಈ ರೀತಿಯಾಗಿ ಎಂಬ ಅರ್ಥಕ್ಕೆ ಬೋಧಕವಾಗಿದೆ. ಇಯತ್ತಾ ಪರಿಚ್ಛೇದ ರೂಪದಿಂದಾಗಲಿ ಅನಿಶ್ಚಿತ ಪರೋಕ್ಷರೂಪದಿಂದಾಗಲಿ ದೇವಿಯು ನಿರ್ದೇಶಿಸಲಿ ಅಶಕ್ಯಳಾಗಿರುವಳು. ಲೋಕದಲ್ಲಿ ವಿಶೇಷ ಧರ್ಮಸಹಿತವಾದ ಪದಾರ್ಥವು ಪರೋಕ್ಷ ಅಥವಾ ಪ್ರತ್ಯಕ್ಷ ಎಂಬ ಬಗೆಯಿಂದ ನಿರ್ದೇಶಿಸಲು ಅರ್ಹವಾಗಿದೆ. ಒಂದ ಶಬ್ದವು ಒಂದು ವ್ಯಕ್ತಿಯನ್ನು ಬೋಧಿಸಲು ಪ್ರವರ್ತಿಸಬೇಕಾದರೆ ವ್ಯಕ್ತಿಯಲ್ಲಿ ಜಾತಿ, ಗುಣ, ಕ್ರಿಯಾ ಸಂಬಂಧಗಳ ಪೈಕಿ ಯಾವುದಾದರೊಮದು ಇರುವುದು ಅವಶ್ಯಕವು. ಪರಬ್ರಹ್ಮ ವಸ್ತುವು "ಅಶಬ್ಧಮಸ್ಪರ್ಶಮ್ರೂಪಮವ್ಯಯಂ" ನಿರ್ಗುಣಂ ನಿಷ್ಕಲಂ ಎಂಬ ಶ್ರುತಿಯಿಂದ ಜಾತ್ಯಾದಿ ಧರ್ಮರಹಿತವಾಗಿ ಪ್ರತಿಪಾದಿಸಲ್ಪಟ್ಟಿದೆ. ಅಂತಹ ವಸ್ತುವು ಯಾವ ಸಾಧನದಿಂದ ಯಾವ ವಚನದಿಂದ ನಿರ್ದೇಶಿಸಲು ಅರ್ಹವಾದೀತು? ಶಬ್ದವು ನಿರ್ದೇಶಿಸಲು ಅನರ್ಹವೆಂಬ ಅರ್ಥವನ್ನು "ಯದ್ವಾಚಾನಭ್ಯುದಿತಂ" ಎಂಬ ಶ್ರುತಿಯು ಬೋಧಿಸುತ್ತದೆ. ಆದ್ದರಿಂದ ಏತತ್ ತತ್ ಎಂಬುದಾಗಿ ನಿರ್ದೇಶಿಸಲು ಅನರ್ಹಗಳು ಅಥವಾ ಪ್ರತ್ಯಕ್ಷಾದಿ ಪ್ರಮಾಣಕ್ಕೆ ಗೋಚರವಾಗಿ ಉತ್ತರ ಕಾಲದಲ್ಲಿ ಬರುವ ಕಾರ್ಯವು ಏತತ್ ಎಂದೂ ಪರೋಕ್ಷವಾಗಿ ಪೂರ್ವಕಾಲದಲ್ಲಿರುವ ವ್ಯವಹಿತ ವಸ್ತುವು ತತ್ ಎಂದೂ ಹೇಳಲ್ಪಡುವುದು. ಇತಿ ಶಬ್ದವನ್ನು ಏತತ್ + ತತ್ ಎಂಬ ಎರಡು ಶಬ್ದಗಳ ಜೊತೆಗೆ ಸೇರಿಸಿ ಅರ್ಥಮಾಡಿದರೆ ಶುದ್ಧ ಚೈತನ್ಯ ರೂಪಳಾದ ದೇವಿಯು ಕಾರ್ಯಕಾರಣ ರೂಪಗಳನ್ನು ಕೊಡುವ ಸರ್ವೋಪಾಧಿವರ್ಜಿತಳಾಗಿ ಕಾರ್ಯ ಕಾರಣ ಭಾವದಿಂದ ಮುಕ್ತಳಾಗಿರುವುದರಿಂದ ಕಾರ್ಯಕಾರಣರೂಪಗಳಿಂದ ನಿರ್ದೇಶಾನರ್ಹಳು ಎಂದು ಸ್ಪಷ್ಟವಾಗುವುದು ಅಥವಾ ಅಪರೋಕ್ಷವಾಗಿ ಅಹಂ ಎಂದು ತೋರುತ್ತಲಿರುವ ತ್ವಂಪದದ ನಾಚ್ಯಾರ್ಥವಾದ ಜೀವ ಚೈತನ್ಯವು ಏತತ್ ಶಬ್ದದ ಅರ್ಥವು. ಪರೋಕ್ಷವಾಗಿ ತೋರುವ ತತ್ಪದ ವಾಚ್ಯಾರ್ಥವಾದ ಈಶ್ವರ ಚೈತನ್ಯವು ತತ್ ಶಬ್ದದ ಅರ್ಥವು ಇತಿ ಎಂಬುದು ಅವಧಾರಣಾರ್ಥವನ್ನು ಬೋಧಿಸುತ್ತದೆ. ಈ ವ್ಯಾಖ್ಯಾನದಿಂದ ಅನೇಕವಾದಿಗಳ ಸಿದ್ಧಾಂತವು ಸೂಚಿಸಲ್ಪಡುವುದು. ಸಾಂಖ್ಯಮತದಲ್ಲಿ ಜಗತ್ಕರ್ತೃವಾದ ಪ್ರಕೃತಿ ತತ್ತ್ವ ಭೋಕ್ತೃಸ್ವರೂಪಾನೇಕಚೇತನಾತ್ಮಕ ಜೀವತತ್ತ್ವಗಳೆರಡರಿಂದ ಸಕಲಾರ್ತಗಳು ನಿರ್ವಾಹವಾಗುವುದರಿಂದ ಈಶ್ವರನು ಇಲ್ಲವೆಂದು ಸಿದ್ಧಾಂತವು ಅಂಗೀಕರಿಸಲ್ಪಟ್ಟಿದೆ. "ಗುಣೀ ಸರ್ವವಿತ್" ಎಂಬ ಶ್ರುತ್ಯನುಸಾರವಾಗಿ ನಿತ್ಯಾನೇಕ ಕಲ್ಯಾಣಗುಣ ವಿಶಿಷ್ಟ ವಿಷ್ಣುವಿನಿಂದ ಜೀವಸೃಷ್ಟಿಯನ್ನು ಒಪ್ಪುವ ಭಾಗವತಮತದಲ್ಲಿ ಜೀವರಿಗೆ ಉತ್ಪತ್ತಿನಾಶಗಳಿರುವುದರಿಂದ ಅಶಾಶ್ವತರಾಗಿರುವುದರಿಂದ ವಿಷ್ಣು ಒಬ್ಬನೇ ಪಾರಮಾರ್ಥಿಕ ತತ್ತ್ವವೆಂಬ ಸಿದ್ಧಾಂತವು ಅಂಗೀಕರಿಸಲ್ಪಟ್ಟದೆ. ಔಪನಿಷದ ಮತದಲ್ಲಿ ಆ ಎರಡು ಸಿದ್ಧಾಂತಗಳನ್ನು ಖಂಡಿಸಿರುವುದರಿಂದ ಜೀವವೇ ತತ್ತ್ವ ಅಥವಾ ಈಶ್ವರನೇ ತತ್ತ್ವವೆಂದು ಜೀವೇಶ್ವರ ಮಾತ್ರ ರೂಪದಿಂದ ನಿರ್ದೇಶಿಸಲು ಅನರ್ಹಳು ಛಾಂದೋಗ್ಯೋಪನಿಷತ್ತಿನಲ್ಲಿರುವ ದೇವತೇ ಶಬ್ದವನ್ನು ಸಚ್ಚಿದಾನಂದ ಪರವೆಂದು ಪ್ರತಿಪಾದಿಸಿದೆ ಅಥವಾ ತಟಸ್ಥೇಶ್ವರವಾದಿ ತಾರ್ಕಿಕಾದಿಸಿದ್ಧಾನ್ತದಂತೆ ಭೇದವ್ಯವಸ್ಥೆಯನ್ನು ಸಿದ್ಧಾಂತ ಮಾಡಲು ಅಸಾಧ್ಯವಾದುದರಿಂದ ವ್ಯವಸ್ಥಿತ ಭೇದದಿಂದ ಕೂಡಿದ ಜೀವ ಈಶ್ವರ ತತ್ತ್ವಗಳ ರೂಪದಿಂದ ನಿರ್ದೇಶಿಸಲು ಅನರ್ಹಳು ಏತಚ್ಚ +ತಚ್ಚ = ಏತತ್ತತ್, ಏತತ್ತತ್ + ಇತಿ ಏತತ್ತದಿತಿ, ಏತತ್ತದಿತಿ ನಿರ್ದೇಷ್ಟುಂ ಶಕ್ಯಾನ ಭವತೀತಿ ತಥಾ, ಎಂದು ವಿಗ್ರಹವು.
Comments
Post a Comment