ಮುದುಕಿಯ ಸೂಜಿ
ಒಬ್ಬ ಮುದುಕಿಯು ಒಂದು ದಿನ ಸಂಜೆಯಲ್ಲಿ ತನ್ನದೊಂದು ಚಿಕ್ಕ ಸೂಜಿಯನ್ನು ಮನೆಯಲ್ಲಿ ಎಲ್ಲಿಯೋ ಕೆಡವಿಕೊಂಡಳು. ಆಕೆಯು ಅದನ್ನು ಹುಡುಕುವದಕ್ಕೆ ಮೊದಲುಮಾಡಿ ಹೊರಕ್ಕೆ ಬಂದು ರಾತ್ರಿಯಾಗುತ್ತಲೂ ಬೀದಿಯಲ್ಲೆಲ್ಲ ಹುಡುಕುವದಕ್ಕೆ ಹೋದಳು. ಆಗ ದಾರಿಹೋಕನೊಬ್ಬನು "ಏನು ಕಳೆದುಕೊಂಡಿದ್ದೀಯಮ್ಮ?" ಎಂದು ಕೇಳಿದನು. ಆಕೆಯು 'ಅಯ್ಯ, ಒಂದು ಸಣ್ಣ ಸೂಜಿ ಕಳೆದು ಹೋಗಿದೆ; ಎಷ್ಟೋ ಹೊತ್ತಿನಿಂದ ಹುಡುಕಿತ್ತಿದ್ದೇನೆ, ಸಿಕ್ಕಿಲ್ಲ. ನೀನಾದರೂ ಹುಡುಕಿ ಕೊಡಪ್ಪ' ಎಂದಳು. ಆತನು ತುಂಬ ಕನಿಕರದಿಂದ 'ಅಮ್ಮ, ಇದು ರಾತ್ರಿಯ ವೇಳೆ, ಕಳೆದುಕೊಂಡಿರುವದು ಸೂಜಿ. ಹೀಗಿರುವದರಿಂದ ಅದನ್ನು ಎಲ್ಲೆಂದು ಹುಡುಕುವದು? ಇದಿರಲಿ, ನಿನ್ನ ಸೂಜಿಯನ್ನು ಯಾವಾಗ, ಎಲ್ಲಿ ಕೆಡವಿಕೊಂಡೆ? ಹೇಳು' ಎಂದು ಕೇಳಿದನು. ಮುದುಕಿಯು 'ಸ್ವಲ್ಪ ಹೊತ್ತಿನ ಹಿಂದೆ ಚಿಕ್ಕಮನೆಯಲ್ಲಿ ಕೆಡವಿಕೊಂಡೆ' ಎಂದು ಹೇಳಿದಳೂ. ಆಗ ದಾರಿಹೊಕನು ಫಕಾರನೆ ನಕ್ಕು 'ಸರಿ ಯಾಯಿತು, ಒಳಗೆ ಕಳೆದುಕೊಂಡು ಹೊರಗೆ ಹುಡುಕುವದೆ? ಮನೆಯಲ್ಲಿಯೇ ಏತಕ್ಕೆ ಹುಡುಕಲಿಲ್ಲ ?" ಎಂದು ಕೇಳಲು, ಆ ಬೆಪ್ಪಳು "ಅಯ್ಯ, ಮನೆಯಲ್ಲಿ ದೀಪವಿಲ್ಲ. ಇಲ್ಲಿ ಊರ ದೀಪವಿದೆ. ಬೆಳಕಿದ್ದ ಕಡೆ ಹುಡುಕದೆ ಕತ್ತಲೆಯಲ್ಲಿ ಹುಡುಕಿ ಫಲವೇನು?" ಎಂದು ಉತ್ತರ ಕೊಟ್ಟಳಂತೆ ! ನಿಜವಾಗಿ ಜನರು ಪ್ರಪಂಚದ ತತ್ತ್ವವನ್ನು ಹುಡುಕುವದಕ್ಕೆ ಮುದುಕಿಯ ಹಾದಿಯನ್ನೇ ಹಿಡಿಯುತ್ತಿರುವರು. ಏ...