ಮುದುಕಿಯ ಸೂಜಿ

    ಒಬ್ಬ ಮುದುಕಿಯು ಒಂದು ದಿನ ಸಂಜೆಯಲ್ಲಿ ತನ್ನದೊಂದು ಚಿಕ್ಕ ಸೂಜಿಯನ್ನು ಮನೆಯಲ್ಲಿ ಎಲ್ಲಿಯೋ ಕೆಡವಿಕೊಂಡಳು. ಆಕೆಯು ಅದನ್ನು ಹುಡುಕುವದಕ್ಕೆ ಮೊದಲುಮಾಡಿ ಹೊರಕ್ಕೆ ಬಂದು ರಾತ್ರಿಯಾಗುತ್ತಲೂ ಬೀದಿಯಲ್ಲೆಲ್ಲ ಹುಡುಕುವದಕ್ಕೆ ಹೋದಳು.
    ಆಗ ದಾರಿಹೋಕನೊಬ್ಬನು "ಏನು ಕಳೆದುಕೊಂಡಿದ್ದೀಯಮ್ಮ?" ಎಂದು ಕೇಳಿದನು. ಆಕೆಯು 'ಅಯ್ಯ, ಒಂದು ಸಣ್ಣ ಸೂಜಿ ಕಳೆದು ಹೋಗಿದೆ; ಎಷ್ಟೋ ಹೊತ್ತಿನಿಂದ ಹುಡುಕಿತ್ತಿದ್ದೇನೆ, ಸಿಕ್ಕಿಲ್ಲ. ನೀನಾದರೂ ಹುಡುಕಿ ಕೊಡಪ್ಪ' ಎಂದಳು. ಆತನು ತುಂಬ ಕನಿಕರದಿಂದ 'ಅಮ್ಮ, ಇದು ರಾತ್ರಿಯ ವೇಳೆ, ಕಳೆದುಕೊಂಡಿರುವದು ಸೂಜಿ. ಹೀಗಿರುವದರಿಂದ ಅದನ್ನು ಎಲ್ಲೆಂದು ಹುಡುಕುವದು? ಇದಿರಲಿ, ನಿನ್ನ ಸೂಜಿಯನ್ನು ಯಾವಾಗ, ಎಲ್ಲಿ ಕೆಡವಿಕೊಂಡೆ? ಹೇಳು' ಎಂದು ಕೇಳಿದನು. ಮುದುಕಿಯು 'ಸ್ವಲ್ಪ ಹೊತ್ತಿನ ಹಿಂದೆ ಚಿಕ್ಕಮನೆಯಲ್ಲಿ ಕೆಡವಿಕೊಂಡೆ' ಎಂದು ಹೇಳಿದಳೂ. ಆಗ ದಾರಿಹೊಕನು ಫಕಾರನೆ ನಕ್ಕು 'ಸರಿ ಯಾಯಿತು, ಒಳಗೆ ಕಳೆದುಕೊಂಡು ಹೊರಗೆ ಹುಡುಕುವದೆ? ಮನೆಯಲ್ಲಿಯೇ ಏತಕ್ಕೆ ಹುಡುಕಲಿಲ್ಲ ?" ಎಂದು ಕೇಳಲು, ಆ ಬೆಪ್ಪಳು "ಅಯ್ಯ, ಮನೆಯಲ್ಲಿ ದೀಪವಿಲ್ಲ. ಇಲ್ಲಿ ಊರ ದೀಪವಿದೆ. ಬೆಳಕಿದ್ದ ಕಡೆ ಹುಡುಕದೆ ಕತ್ತಲೆಯಲ್ಲಿ ಹುಡುಕಿ ಫಲವೇನು?" ಎಂದು ಉತ್ತರ ಕೊಟ್ಟಳಂತೆ !
    ನಿಜವಾಗಿ ಜನರು ಪ್ರಪಂಚದ ತತ್ತ್ವವನ್ನು ಹುಡುಕುವದಕ್ಕೆ ಮುದುಕಿಯ ಹಾದಿಯನ್ನೇ ಹಿಡಿಯುತ್ತಿರುವರು. ಏಕೆಂದರೆ ಪ್ರಪಂಚದ ತತ್ತ್ವವು ಅವರಲ್ಲಿಯೇ ಇರುವದು; ಆದರೂ ಆ ತಮ್ಮ ಸ್ವರೂಪವನ್ನು ತಿಳಿದುಕೊಳ್ಳಲಾರದೆ ಅಲ್ಲಿ ಅಜ್ಞಾನವೆಂಬ ಕತ್ತಲೆ ಇದೆ ಎಂದು ಹೆದರಿ ಹೊರಗೆ ನೋಡುತ್ತಿರುವರು. ನಮಗೆಲ್ಲರಿಗೂ ಎಚ್ಚರ, ಕನಸು, ಬರಿಯ ನಿದ್ರೆ - ಎಂಬ ಮೂರು ಅವಸ್ಥೆಗಳಿರುವವಷ್ಟೆ. ಇವು ಮೂರನ್ನೂ ವಿಚಾರಿಸಿದರೆ ಪ್ರಪಂಚವನ್ನೇ ವಿಚಾರಿಸಿದಂತೆ; ಹಾಗಿಲ್ಲದೆ ಹೊರಗೆ ತೋರುವ ಪದಾರ್ಥಗಳನ್ನು ಮಟ್ಟಿಗೆ ಸುಮ್ಮನೆ ವಿಚಾರಿಸುತ್ತಿದ್ದರೆ ಎಂದಿಗೂ ತತ್ತ್ವವು ಸಿಕ್ಕುವದಿಲ್ಲ. ಹೀಗೆಂದು ವೇದಾಂತಿಗಳು ಗೊತ್ತುಮಾಡಿರುವರು.
    "ತನ್ನ ವಸ್ತುಗಳನ್ನು ವಿಚಾರಮಾಡಿದಷ್ಟಕ್ಕೇ ಪ್ರಪಂಚದ ತತ್ತ್ವವನ್ನೇ ಅರಿತಂತಾದೀತೆ? ಮಿಕ್ಕವರ ಅನುಭವವನ್ನು ತೆಗೆದುಕೊಳ್ಳದೆಯೇ ಈ ಪ್ರಪಂಚದ ಆದ್ಯಂತತತ್ತ್ವವನ್ನು ಅದರಲ್ಲಿ ಈಗೀಗ ಹುಟ್ಟಿರುವವನೊಬ್ಬನು ನಿರ್ಣಯಿಸುವದೆಂಬುದು ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿದರೆ ಮತ್ತೊಬ್ಬರಿಗೆ ಕಾಣಿಸದೆಂದು ತಿಳಿದಂತಲ್ಲವೆ?" ಎಂದು ಕೆಲವರಿಗೆ ಸಂಶಯವು ಬರಬಹುದು.
    'ಆತ್ಮಾನಾತ್ಮವಿವೇಕವಿಲ್ಲದಿರುವದೇ, ಈ ಸಂಶಯಕ್ಕೆ ಕಾರಣ, 'ಆತ್ಮ'ನೆಂದರೆ ತಾನು; 'ಅನಾತ್ಮ'ವೆಂದರೆ ತಾನಲ್ಲದ್ದು; ಆತ್ಮನಾತ್ಮವಿವೇಕವೆಂದರೆ ತಾನು, ತಾನಲ್ಲದ್ದು - ಇವುಗಳನ್ನು ಬಿಡಿಸಿ ತಿಳಿಯುವದು. ಈ ತಿಳಿವಳಿಕೆಯು ಇದ್ದವರಿಗೆ ಮೇಲಿನ ಸಂಶಯವು ಬರುವದಿಲ್ಲ. ತನಗೆ ತೋರುವದೆಲ್ಲ ಅನಾತ್ಮವೇ, ತಾನಲ್ಲವೇ ಅಲ್ಲ. ಉದಾಹರಣೆಗೆ - ರಾಮನೆಂಬವನಿಗೆ ತತ್ತ್ವವನ್ನು ತಿಳಿದುಕೊಳ್ಳಬೇಕೆಂಬ ಆಸೆಯಿದೆ ಎಂದು ಇಟ್ಟುಕೊಳ್ಳೋಣ. ಇಂಥ ಆಸೆಯುಳ್ಳಾತನಿಗೆ ಜಿಜ್ಞಾಸುವೆಂದು ಹೆಸರು. ಈ ಜಿಜ್ಞಾಸುವಿಗೆ ತೋರುವದೊಂದೂ ರಾಮನ ಸ್ವರೂಪವಲ್ಲ ಆದ್ದರಿಂದ ಅದೆಲ್ಲ ಅನಾತ್ಮವೇ; ಆತ್ಮನಲ್ಲಿ ಅನಾತ್ಮವು ಸೇರುವದಿಲ್ಲ; ಅನಾತ್ಮದಲ್ಲಿ ಆತ್ಮನು ಸೇರುವದಿಲ್ಲ. ಆತ್ಮನಲ್ಲದ್ದೆಲ್ಲ ಅನಾತ್ಮದಲ್ಲಿ ಅಡಕವಾಗಿರಬೇಕು. ಜಿಜ್ಞಾಸುವಾದವನು ನೋಡುವ ಮನುಷ್ಯರು, ಪ್ರಾಣಿಗಳು, ಗಿಡಮರಗಳು, ಕಲ್ಲುಮಣ್ಣು - ಮೊದಲಾದ ವಸ್ತುಗಳು - ಇಷ್ಟೇಕೆ? ಅವನಿಗೆ ತೋರುವ ತನ್ನ ಶರೀರ, ಮನಸ್ಸು - ಮುಂತಾದವುಗಳು ಕೂಡ ಅನಾತ್ಮವೇ. ಹೀಗಿರುವಾಗ ಆತ್ಮ ಮತ್ತು ಅನಾತ್ಮ - ಇವೆರಡನ್ನು ಬಿಟ್ಟರೆ ಮತ್ತೇನು ಉಳಿದೀತು? ಏನು ಇಲ್ಲ. ಆದ್ದರಿಂದ ಇವುಗಳನ್ನು ಕುರುತು ಆಲೋಚಿಸಿದರೆ ಎಲ್ಲವನ್ನೂ ಆಲೋಚಿಸಿದಂತಾಯಿತು. ಈ ಅನಾತ್ಮವೆಂಬುದು ಜಾಗ್ರತ್ತು (ಎಚ್ಚರ), ಸ್ವಪ್ನ(ಕನಸು), ಸುಷುಪ್ತಿ (ಬರಿಯ ನಿದ್ರೆ) - ಈ ಮೂರವಸ್ಥೆಗಳೊಳಗೇ ಸೇರಿರುವದರಿಂದ, ಈ ಮೂರವಸ್ಥೆಗಳನ್ನು ವಿಚಾರಮಾಡಿಬಿಟ್ಟರೆ ಪ್ರಪಂಚವನ್ನೇ ವಿಚಾರಮಾಡಿದಂತಾಯಿತೆಂಬುದು ಸರಿಯೇ ಆಗಿದೆ. ಈ ಮಾರ್ಗವನ್ನೇ ವೇದಾಂತಿಗಳು ಅನುಸರಿಸಿ ತತ್ತ್ವವನ್ನು ಕಂಡುಹಿಡಿದಿರುವರು.

ಆತ್ಮಾನಾತ್ಮೌ ಪದಾರ್ಥೌ ದ್ವೌ ಭೋಕ್ತೃಭೋಗ್ಯತ್ವಲಕ್ಷಣೌ |
ಬ್ರಹ್ಮೈವಾತ್ಮಾ ನ ದೇಹಾದಿರಿತಿ ವೇದಾನ್ತಡಿಣ್ಡಿಮಃ ||

Deepak H V
Mysuru
9886312013

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ