ಗುಂಪು - ಮೂಲೆಗುಂಪು


    ಈಗ್ಗೆ ಗುಂಪುಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಒಂದೊಂದು ಗುಂಪೂ ಮತ್ತೆ ಮತ್ತೆ ಕಾರಣಾಂತರಗಳಿಂದ ಒಡೆದುಕೊಂಡು ಮತ್ತಷ್ಟು ಸಂಖ್ಯೆಯನ್ನು ಬೆಳೆಸುತ್ತಿವೆ. ಕೆಲವಂತೂ ಭೀಮನಿಂದ ಸೀಳಲ್ಪಟ್ಟ ಜರಾಸಂಧನಂತೆ ಒಡೆದುಕೊಂಡು ಆತ್ಮನಾಶವನ್ನೇ ತಂದುಕೊಳ್ಳುತ್ತಿವೆ. ಗುಂಪು ಒಡೆದಾಗಲೆಲ್ಲ ಅದರಲ್ಲಿರುವ ಜನರಿಗೆ ಗಾಬರಿಯಾಗಿದ್ದು ಯಾವ ಕಡೆಗೆ ಸೇರಬೇಕೆಂಬುದು ತಿಳಿಯದೆ ಅಲೆದಾಡಿ ಕೊನೆಗೆ ಯಾವದೋ ಗುಂಪಿಗೆ ಸೇರಿ ಅಲ್ಲಿಂದಲೂ ಪಕ್ಷಾಂತರಮಾಡಿ ಕೊನೆಗೆ ಮೂಲೆಗುಂಪಾಗುತ್ತಿದಾರೆ. ಈ ನಾಟಕವನ್ನು ನೋಡುವವರಿಗೆ ತಮಾಷೆಯಾಗಿ ಕಾಣುತ್ತಿದೆ, ನಗುವು ಬರುತ್ತಿದೆ. ವ್ಯಂಗಚಿತ್ರಕಾರ್ರ ಲೇಖನಿಗೂ ತುತ್ತಾಗುತ್ತಿದೆ. ಆದರೆ ಆಯಾ ಗುಂಪಿಗೇ ಸೇರಿರುವವರಿಗೆ ಉಂಟಾಗಿರುವ ನಷ್ಟವು ಮನೋವ್ಯಥೆಯೂ ಅಷ್ಟಿಷ್ಟಲ್ಲ. ಆದರೂ ಗುಂಪು ಹೀಗೆ ಒಡೆಯುವದಕ್ಕೂ ತಾನು ಪ್ರದಾಡುವದಕ್ಕೂ ಕಾರಣವೇನು? ಇದರಲ್ಲಿ ತನ್ನ ಪಾತ್ರವೇನು? ಎಂದು ಆತ್ಮಶೋಧನೆಮಾಡಿಕೊಳ್ಳುವವರು ಮಾತ್ರ ತುಂಬಾ ವಿರಳ.
    'ಸಂಘೇ ಶಕ್ತಿಃ ಕಲೌ ಯುಗೇ' ಎಂಬ ನಾಣ್ನುಡಿಯೊಂದುಂಟು. ಕಲಿಯುಗದಲ್ಲಿ ಗುಂಪಿನಲ್ಲಿಯೇ ಶಕ್ತಿಯಿರುವದು - ಎಂಬುದು ನಿಜವಾದರೂ 'ಸಂಘ'ವೆಂದರೇನು? ಅದರ ಉದ್ದೇಶವೇನು? ಎಂಬಿದರ ಮೇಲೆ ಮೇಲಿನ ನಾಣ್ನುಡಿಯನ್ನು ಅನ್ವಯಿಸಿಕೊಳ್ಳಬೇಕು. ಒಬ್ಬೊಬ್ಬನೇ ಮಾಡಲಾಗದ ಕೆಲಸವನ್ನು ಹತ್ತಾರು ಜನರು ಸೇರಿ ಮಾಡಬಹುದು - ಎಂಬುದು ಸಾಮಾನ್ಯವಾದ ಅಭಿಪ್ರಾಯ. ಉದಾಹರಣೆಗೆ ಒಂದು ದೊಡ್ಡ ರಥವನ್ನು ಒಬ್ಬನೇ ಎಳೆಯಲಾಗುವದಿಲ್ಲ. ಆದ್ದರಿಂದ ನೂರಾರು ಜನರು ಸೇರಬೇಕು. ಇದನ್ನೇ ಜಾತ್ರೆಯೆನ್ನುವರು. ಎಲ್ಲರೂ ಕೈಕೊಟ್ಟು ಎಳೆದರೆ ರಥವು ಚಲಿಸುವದು ನಿಜ. ಆದರೆ ಯಾರೋ ಕೆಲವರು ಮಾತ್ರ ಎಳೆಯುತ್ತಾ ಉಳಿದವರು ನೋಡುತ್ತಾ ನಿಂತಿದ್ದರೆ ಅಥವಾ ಬಾಯಲ್ಲಿ 'ಗೋವಿಂದ' ಎಂದು ಕೇವಲ ಘೋಷಣೆಮಾಡುತ್ತಿದ್ದರೆ ರಥವು ಮುಂದುವರಿಯಲು ಸಾಧ್ಯವೆ? ಇದನ್ನೇ 'ಗುಂಪಿನಲ್ಲಿ ಗೋವಿಂದ' ಎಂದು ಜನರು ಹಾಸ್ಯವಾಗಿ ಉಪಯೋಗಿಸುತ್ತಾರೆ. ಹೀಗೆ ಕೆಲಸಮಾಡದೆ ಗುಂಪುಕಟ್ಟಿಕೊಂಡಲ್ಲಿ ಅಥವಾ ಗುಂಪಿನ ಕೆಲಸಕ್ಕೆ ಪ್ರತಿಕೂಲವಾಗಿ ವರ್ತಿಸಿದಲ್ಲಿ ಯಾವ ಗುಂಪೂ ಉಳಿಯಲಾರದು. ಆದರಿಂದ ಯಾರಿಗೂ ಏನೂ ಉಪಯೋಗವೂ ಆಗಲಾರದು. ಈಗ್ಗೆ ಬಹಳ ಗುಂಪುಗಳು ಇಂಥ ಪರಿಸ್ಥಿತಿಯಲ್ಲಿ ಸಿಲುಕಿವೆ. ಆದ್ದರಿಂದ ಏನೂ ಪ್ರಯೋಜನವಿಲ್ಲದ ಹಾಗೂ ಧ್ಯೇಯೋದ್ದೇಶಗಳಾಗಲಿ, ರಚನಾತ್ಮಕವಾದ ಕ್ರಿಯೆಯಾಗಲಿ ಇಲ್ಲದ ಗುಂಪುಗಳನ್ನು ವಿಸರ್ಜಿಸಿ ಬಿಡುವದೇ ಮೇಲು. ಅಂಥ ಸಂದರ್ಭದಲ್ಲಿ ತಾನು ಮೂಲೆಗುಂಪಾದರೂ ಚಿಂತೆಯಿಲ್ಲ, ತಾನೊಬ್ಬನೇ ತನ್ನ ಕೈಲಾದಷ್ಟು ಪ್ರಯತ್ನವನ್ನೇ ಭಗವದರ್ಪಣಬುದ್ಧಿಯಿಂದ ಮಾಡಿದರೂ ಸಾಕಾಗಿರುತ್ತದೆ.
    ಈಗ ಆಧ್ಯಾತ್ಮದೃಷ್ಟಿಯಿಂದ ಗುಂಪಿನ ಮಹತ್ತ್ವವನ್ನು ನೋಡೋಣ. ಆಧ್ಯಾತ್ಮಸಾಧಕನು ಸಾಮಾನ್ಯವಾಗಿ ಏಕಾಕಿಯಾಗಿಯೇ ಇರಬೇಕಾಗುವದು. ಏಕೆಂದ್ರೆ ಮೋಕ್ಷಫಲವು ತ್ಯಾಗದಿಂದ ದೊರಕತಕ್ಕದ್ದಾಗಿದೆ. ಆದರೂ ಇಲ್ಲಿಯೂ ಗುಂಪುಗೂಡುವದು ಅವಶ್ಯವಿದೆ. ಅದು ಯಾವದೆಂದರೆ ಸಾಧಕನ ಶರೀರೇಂದ್ರಿಯ ಮನೋಬುದ್ಧಿಗಳು ಇವುಗಳು ಒಂದಾಗದೆ, ಅನ್ಯೋನ್ಯವಾಗಿ ಸಹಕರಿಸದೆ ಇದ್ದಲ್ಲಿ ಸಾಧಕನು ಎಂದಿಗೂ ಸಿದ್ಧಿಯನ್ನು ಪಡೆಯಲಾಗುವದಿಲ್ಲ ಆದ್ದರಿಂದ ಸಾಧಕನು ತನ್ನ ಕಾರ್ಯಕರಣಸಂಘಾತವನ್ನು ಗುಂಪಾಗಿ ಹೊಮದಿಕೊಂಡು ಕೆಲಸ ಮಾಡುವಂತೆ ಏರ್ಪಡಿಸಿಕೊಳ್ಳಲೇಬೇಕು. ಆಗ್ಗೆ ಅವನ ದೃಷ್ಟಿಯು ತನ್ನ ಹಾಗೂ ಎಲ್ಲರ ಆತ್ಮನಾದ ಬ್ರಹ್ಮದಕಡೆಗೇ ಇರಬೇಕಾದದ್ದು ಅತ್ಯವಶ್ಯ ಮತ್ತು ಗುಂಪಿನಲ್ಲಿರುವ ಎಲ್ಲಾ ಕರಣಗಳೂ ಒಂದೇಕಡೆಗೆ ತಮ್ಮ ಪ್ರಯತ್ನವನ್ನು ಮುಂದುವರಿಸಬೇಕು. ಇಲ್ಲದಿದ್ದರೆ ಒಂದೊಂದು ಒಂದೊಂದು ಕಡೆಗೆ ಎಳೆದರೆ 'ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು' - ಎಂಬ ಗಾದೆಯಂತಾದೀತು. ಒಂದು ನೊಗಕ್ಕೆ ಜಾತಿಯ ಪ್ರಾಣಿಗಳನ್ನೇ ಕಟ್ಟುವದು ಸೂಕ್ತ. ಹಾಗೆಯೇ ಒಂದು ಗುಂಪಿಗೆ ಒಂದೇ ರೀತಿಯಾದ ಗುರಿಯೂ ಸಾಧನಮಾರ್ಗವೂ ಇರಬೇಕು ಇಲ್ಲಿ ಸಾಧಕನು ತನ್ನ ಹತೋಟಿಯಲ್ಲಿಲ್ಲದ ಇಂದ್ರಿಯಾದಿಗಳನ್ನೂ ಮನಸ್ಸನ್ನೂ ಅಭ್ಯಾಸದಿಂದಲಾದರೂ ಪಳಗಿಸಿ ವಶಪಡಿಸಿಕೊಂಡು ಎಲ್ಲವೂ ಒಂದೇ ಕ್ರಮದಲ್ಲಿ ಹಾಗೂ ದಾರಿಯಲ್ಲಿ ಸಾಗುವಂತೆ ಪ್ರಯತ್ನಿಸಬೇಕು. ನಡುನಡುವೆ ಒಂದಕ್ಕೊಂದಕ್ಕೆ ವಿರೋಧವು ಬಂದರೂ ಮೂಲಕೇಂದ್ರವಾದ ಆತ್ಮನ ಸೌಖ್ಯವನ್ನೇ ಗುರಿಯಲ್ಲಿಟ್ಟುಕೊಂಡು ವಿರೋಧಗಳನ್ನು ಪರಿಹರಿಸಿ ತಿದ್ದಿಕೊಂಡು ಸಾಗಬೇಕು. ಈ ಅರ್ಥದಲ್ಲಿ ಗುಂಪುಗಾರಿಕೆಯು ತುಂಬಾ ಉಪಯುಕ್ತವೇ ಆಗಿರುತ್ತದೆ.
    ಇದೇ ರೀತಿಯಾಗಿ ವ್ಯವಹಾರದಲ್ಲಿಯೂ ಗುಂಪುಕಟ್ಟುವವರು ಒಂದೇ ಗುರಿಯನ್ನಿಟ್ಟುಕೊಂಡು ಅದಕ್ಕೆ ಅನುಕೂಲರಾದವರನ್ನೂ ಕಾರ್ಯಕರ್ತರನ್ನೂ ಸೇರಿಸಿಕೊಂಡು ಶಿಸ್ತನ್ನು ಪಾಲಿಸುತ್ತಾ ಸ್ವಾರ್ಥತ್ಯಾಗಮಾಡಿ ದುಡಿದರೆ ಯಾವ ಸತ್ಫಲವನ್ನಾದರೂ ಸಾಧಿಸಬಹುದಾಗಿದೆ. ಆದರೆ ಜಗತ್ತಿನಲ್ಲಿ ಹೆಚ್ಚಿನ ಜನರು ಸ್ವಾರ್ಥ ಸಾಧನೆಗಾಗಿಯೇ ಗುಂಪುಕಟ್ಟುವದು ಅಥವಾ ಗುಂಪನ್ನು ಸೇರುವದು - ಹೀಗೆ ಮಾಡುತ್ತಾರೆ. ಇಂಥವರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಗುಂಪಿನಲ್ಲಿ ಜನರ ಸಂಖ್ಯೆ ಪ್ರಧಾನವಲ್ಲ ಅದರ ಶಕ್ತಿಯು ಐಕ್ಯತೆ, ಗುರಿ ಹಾಗೂ ಕ್ರಿಯಾಶೀಲತೆಯಲ್ಲಿರುವದು ಆದ್ದರಿಂದ ನಾವು ಧರ್ಮವೇ ಗುರಿಯಾಗುಳ್ಳ ಗುಂಪಿಗೇ ಸೇರೋಣ ಅಂಥ ಗುಂಪಲ್ಲದಿದ್ದರೆ ಮೂಲೆಗುಂಪಾಗಿಯೇ ಇರೋಣ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ