ಶಂಕರ-ರಾಮಾನುಜ-ಮಧ್ವರ ಬೋಧನೆಗಳ ಮಹತ್ವ

ಆಚಾರತ್ರಯರಾದ ಶ್ರೀ ಶಂಕರ ಶ್ರೀ ರಾಮಾನಜರ ಹಾಗೂ ಶ್ರೀ ಮಧ್ವರ ಬೋಧನೆಗಳು ಅತ್ಯಂತ ಪ್ರಸ್ತುತ ಅವರ ಸಂದೇಶದ ಮಹತ್ವವೇನು?
ತನ್ನ ಸುತ್ತಮುತ್ತ ಆವರಿಸಿರುವ ನಿಗೂಢ ವಿಶ್ವವನ್ನು ನೋಡಿ ಮಾನವ ಚಕಿತನಾಗಿದ್ದಾನೆ. ಈ ವಿಶ್ವಕ್ಕೆ ಒಂದು ಮೂಲವಿರಬೇಕು. ಅದು ಯಾವುದು? ಆ ಮೂಲದ ಬಗ್ಗೆ ಅವನಿಗಿರುವ ತಾತ್ವಿಕಜಿಜ್ಞಾಸೆ ಸಹಜವಾದುದು. ವಿಶ್ವದಲ್ಲಿ ಸುಖಭೋಗ-ದುಃಖಾದಿಗಳನ್ನು ಅನುಭವಿಸಿ, ಸಂಸಾರದ ಜಂಜಾಟದಿಂದ ಹೊರಬರಲು ಪ್ರಯತ್ನಿಸುತ್ತಿರುವ ನಾನು ಯಾರು? ನಾನು ಎಲ್ಲಿಂದ ಬಂದೆ ನನ್ನ ಗುರಿ ಯಾವುದು? ಅದರ ಮಾರ್ಗವೇನು? ಮುಂತಾದ ಅಂತರಿಕ ರೂಢಮೂಲ ಸಮಸ್ಯೆ-ಸಂದೇಹಗಳು ಅವನನ್ನು ಕಾಡುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ವೇದಾಂತಗಳು ಹೊರಟಿವೆ. ಅವುಗಳೇ ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ದ್ವೈತಾದ್ವೈತ, ಶುದ್ಧ ಅದ್ವೈತ, ಶಕ್ತಿವಿಶಿಷ್ಟಾದ್ವೈತ ಇತ್ಯಾದಿ.
ಆದಿ ಶಂಕರಾಚಾರ್ಯರು ಅದ್ವೈತವೇದಾಂತದ ಪ್ರಭಾವೀಪೂರ್ಣ ಪ್ರತಿಪಾದಕರು. ಜಗದ್ವಿಖ್ಯಾತ ತಾತ್ವಿಕರು; ಪ್ರಚಂಡ ಪಂಡಿತರು ಹಾಗೂ ಧರ್ಮದೀಪಕರು. ಶ್ರೀ ಗಾಯತ್ರೀ ಮಂತ್ರವಿಹಾರಿಗಳು. ಖಂಡ ತುಂಡವಾಗಿದ್ದ ಭಾರತೀಯ ಸಮಾಜವನ್ನು ಒಗ್ಗೂಡಿಸಿದವರು. ವೇದೋಪನಿಷತ್ತುಗಳ ದಿವ್ಯಬೋಧನೆಗಳನ್ನು ಜನಮನದಲ್ಲಿ ನಾಟಿಸಿದವರು. ಶ್ರೀ ಶಿವಗುರು ಶ್ರೀಮತಿ ಆರ್ಯಾಂಬ ದಂಪತಿಗಳಿಗೆ ಮಗನಾಗಿ ಕೇರಳದ ಕಾಲಟಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು ಅವರ ಕಾಲ ಕ್ರಿ.ಶ ಸುಮಾರು 8ನೇ ಶತಮಾನ.
ಶ್ರೀ ಶಂಕರರು ವಿದ್ವತ್ ಪೂರ್ಣ ಭಾಷ್ಯಗಳನ್ನು, ಉಪನಿಷತ್ ಗೀತೆ ಹಾಗೂ ಬಾದರಾಯಣರ ಬ್ರಹ್ಮಸೂತ್ರಗಳ ಮೇಲೆ ಪ್ರಸನ್ನ ಗಂಭೀರಶೈಲಿಯಲ್ಲಿ ಬರೆದಿರುವುದನ್ನು, ವಾಚಸ್ಪತಿಮಿಶ್ರರು ಕೊಂಡಾಡಿದ್ದಾರೆ. 'ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ' ಮುಂತಾದ ಅತ್ಯಂತ ಸುಂದರವಾದ ದೇವತಾಸ್ತೋತ್ರಕಾವ್ಯಗಳನ್ನು ಅವರು ರಚಿಸಿದರು. ಭಾರತದೆಲ್ಲೆಡೆ ಧರ್ಮಜಾಗೃತಿಯನ್ನು ಉಂಟುಮಾಡಿದರು.
ಶ್ರೀ ಶಂಕರರು ಜನತೆಗೆ ಅದ್ವೈತಮಕರಂದವನ್ನು ಉಣಬಡಿಸಿದ್ದಾರೆ. ಸಚ್ಚಿದಾನಂದ ಸ್ವರೂಪವಾದ ಬ್ರಹ್ಮವೊಂದೇ ಸತ್ಯ, ಅದೇ ಎಲ್ಲದರ ಮೂಲ; ಅಂತಿಮಾರ್ಥದಲ್ಲಿ ಅದು ನಿರ್ಗುಣ, ಜೀವಾತ್ಮನು ಸಾರದಲ್ಲಿ ಬ್ರಹ್ಮವೇ ಆಗಿದ್ದಾನೆ. ಬ್ರಹ್ಮಕ್ಕಿಂತ ಬೇರೆಯಲ್ಲ ಜಗತ್ತು ಮಿಥ್ಯೆ, ಅದು ವ್ಯಾವಹಾರಿಕ ಸತ್ಯ ಮಾತ್ರ, ಪಾರಮಾರ್ಥಿಕ ಸತ್ಯವಲ್ಲ ನಿತ್ಯಾನಿತ್ಯ ವಸ್ತುವಿವೇಕದಿಂದ ನಿಷ್ಕಾಮಕರ್ಮದ ಆಚರಣೆಯಿಂದ ಇಂದ್ರಿಯ ನಿಗ್ರಹದಿಂದ, ಮುಕ್ತಿಯ ಅಪೇಕ್ಷೆಯಿಂದ ಅಂದರೆ ಜ್ಞಾನಮಾರ್ಗದಿಂದ ಜೀವಾತ್ಮ ಮುಕ್ತನಾಗುತ್ತಾನೆ ಬ್ರಹ್ಮದೊಡನೆ ಐಕ್ಯನಾಗುತ್ತಾನೆ ಎಂದು ಶಂಕರರು ಸಾರಿದರು.
ಶ್ರೀರಾಮಾನುಜರು ವೇದಾಂತದ ಮತ್ತೊಂದು ಶಾಖೆಯಾದ ವಿಶಿಷ್ಟಾದ್ವೈತ ದರ್ಶನದ ಮುಖ್ಯ ಆಚಾರ್ಯರು, ತಮಿಳಿನಲ್ಲಿರುವ, ಭಗವದ್ ಭಕ್ತರಾದ ಆಳ್ವಾರರುಗಳ ಉಪದೇಶ ಅಮೃತವನ್ನು ಸಂಸ್ಕೃತಮೂಲವಾದ ಪ್ರಸ್ಥಾನತ್ರಯದೊಂದಿಗೆ ಬೆಸೆದು ಉಭಯವೇದಾಂತಾಚಾರ್ಯರೆಂದು ಪ್ರಸಿದ್ಧಿ ಪಡೆದಿದ್ದಾರೆ. ಶ್ರೀ ಕೇಶವಸೋಮಯಾಜಿ ಹಾಗೂ ಶ್ರೀಮತಿ ಕಾಂತಾಮಣಿ ದಂಪತಿಗಳಿಗೆ ಮಗನಾಗಿ ಕ್ರಿ.ಶ 11ನೇ ಶತಮಾನದಲ್ಲಿ, ತಮಿಳುನಾಡಿನ ಶ್ರೀ ಪರಂಬದೂರು ಎಂಬ ಸ್ಥಳದಲ್ಲಿ ಜನಿಸಿದರು.
ಶ್ರೀ ರಾಮಾನುಜರು ಬಾದರಾಯಣರ ಬ್ರಹ್ಮಸೂತ್ರಗಳನ್ನು ಕುರಿತು ವಿದ್ವತ್ ಪೂರ್ಣವಾದ 'ಶ್ರೀಭಾಷ್ಯ'ವನ್ನು ಬರೆದರು. ಗೀತೆಯನ್ನೂ ವ್ಯಾಖ್ಯಾನಿಸಿದರು. ಅವುಗಳಲ್ಲಿ ವಿಶಿಷ್ಟಾದ್ವೈತ ದರ್ಶನವನ್ನು ಪ್ರತಿಪಾದಿಸಿದರು. ವಿಶ್ವಪ್ರಜ್ಞೆಯ ವಿಕಾಸಕ್ಕೆ ಸಾಂಸ್ಕೃತಿಕ ಅಖಂಡತೆಗೂ ಶ್ರೀರಾಮಾನುಜರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.
ಶ್ರೀ ರಾಮಾನುಜರ ಪ್ರಕಾರ, ಬ್ರಹ್ಮತತ್ವ, ಜೀವಾತ್ಮ ಹಾಗೂ ಜಗತ್ತುಗಳು ಮೂರೂ ಸತ್ಯ, ಆದರೆ ಜೀವಾತ್ಮ ಮತ್ತು ಜಗತ್ತುಗಳು ಮಿತ ಹಾಗೂ ಬ್ರಹ್ಮದ ಅಧೀನ ಅವು ಬ್ರಹ್ಮತತ್ವದ ವಿಶೇಷಣಗಳೂ ಅವು ಬ್ರಹ್ಮದ ಶರೀರ. ನಾರಾಯಣನೇ ಬ್ರಹ್ಮತತ್ವ ಅವನೇ ಅನಂತ ಕಲ್ಯಾಣಗುಣಪರಿಪೂರ್ಣ, ದಯಾಮಯಿ ಹಾಗೂ ತ್ರಿಲೋಕ ಸುಂದರ ಅವನು ಜಗತ್ತಿನ ಉಪಾದಾನ ಹಾಗೂ ನಿಮಿತ್ತ ಕಾರಣನಾಗಿದ್ದಾನೆ ಅವನು ಶೇಷಿ, ಜೀವಾತ್ಮರು ಶೇಷರು, ಜಗತ್ತು ಅವನ ಶೇಷ ಎಲ್ಲವೂ ಬ್ರಹ್ಮತತ್ವದ ಅಧೀನದಲ್ಲಿರುವುದರಿಂದ, ಬ್ರಹ್ಮವೊಂದೇ ನಿಯಂತ್ರವಾದ್ದರಿಂದ ರಾಮಾನುಜರ ದರ್ಶನ 'ವಿಶಿಷ್ಟಾ ಅದ್ವೈತ'ವೆನಿಸುತ್ತದೆ ನಾರಾಯಣನಲ್ಲಿ ಶರಣಾಗತನಾಗಿ, ನಿರಂತರವೂ ನಾರಾಯಣನ ಪ್ರೇಮಮಯ ಕೃಪಾಕಟಾಕ್ಷಕ್ಕೊಳಗಾಗಿ, ಜ್ಞಾನ-ಕರ್ಮ-ಭಕ್ತಿ-ಪ್ರವೃತ್ತಿಗಳಿಂದ ಜೀವಾತ್ಮನು ಮುಕ್ತಿಯನ್ನು ಹೊಂದುತ್ತಾನೆ ಎಂದು ರಾಮಾನುಜರು ಪ್ರತಿಪಾದಿಸುತ್ತಾರೆ.
ಕ್ರಿ.ಶ ಹದಿಮೂರನೇ ಶತಮಾನದಲ್ಲಿದ್ದ ಶ್ರೀ ಮಧ್ವಾಚಾರ್ಯರು ವೇದಾಂತದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರು ಪೂರ್ಣಪ್ರಜ್ಞರೆಂದೂ, ಆನಂದತೀರ್ಥರೆಂದೂ ಪ್ರಸಿದ್ಧರಾಗಿದ್ದಾರೆ ಅವರ ತಂದೆಯವರು ಶ್ರೀ ಮದ್ವಗೇಭಟ್ಟರು; ತಾಯಿ ಶ್ರೀಮತಿ ವೇದವತಿಯವರು ಅವರ ದರ್ಶನವನ್ನು 'ದ್ವೈತವೇದಾಂತ' ಎಂದು ಕರೆಯಲಾಗಿದೆ ದ್ವೈತದರ್ಶನ ಭಾಗವತಧರ್ಮದ ಹೊರಣ ಅದು ಭಕ್ತಿಸುಧಾರಸವನ್ನು ಉಣಬಡಿಸುವ, ಶುದ್ಧಪ್ರೇಮವನ್ನು ಸೂಸುವ ಭಗವಂತನ ಸರ್ವೋತೃಷ್ಟತೆಯನ್ನು ಎತ್ತಿಹಿಡಿಯುವ ವಾಸ್ತವದರ್ಶನವಾಗಿದೆ. ದೈವಪ್ರೀತಿ ಮಾನವಪ್ರೀತಿಯಾಗಿ ರೂಪಗೊಳ್ಳಬೇಕೆಂದೂ, ತನ್ಮೂಲಕ ಮಾನವನ ಉದ್ಧಾರವಾಗಬೇಕೆಂದೂ ಮಧ್ವಾಚಾರ್ಯರು ಸಾರಿದರು. ಭಕ್ತಿ ಮತ್ತು ಪ್ರೀತಿಗಳು ಅವರ ದರ್ಶನದ ಉಸಿರು 'ಅಮಲ ಭಕ್ತಿಯೇ ಮೋಕ್ಷಕ್ಕೆ ಸಾಧನ' ಎಂದು ಅವರು ಸಾರಿದ್ದಾರೆ. ಬಾದರಾಯಣರ 'ಬ್ರಹ್ಮಸೂತ್ರಗಳ' ಮೇಲೆ ದಶೋಪನಿಷತ್ತುಗಳ ಮೇಲೆ ಹಾಗೂ ಭಗವದ್ಗೀತೆಯ ಮೇಲೆ ಅವರು ವಿದ್ವತ್ಪೂರ್ಣ ಭಾಷ್ಯಗಳನ್ನು ಬರೆದಿದ್ದಾರೆ. ವಿಷ್ಣುತತ್ವವಿನಿರ್ಣಯ ಮುಂತಾದ ಪ್ರಕರಣಗ್ರಂಥಗಳನ್ನೂ, ದೇವತಾಸ್ತೋತ್ರಗಳನ್ನು ಬರೆದಿದ್ದಾರೆ.
ವೇದಾಂತದ ಆಚಾರ್ಯತ್ರಯರು ಪ್ರಾತಃಸ್ಮರಣೀಯರು, ಭಾರತೀಯ ಧರ್ಮಸಂಸ್ಕೃತಿಗಳ ರಕ್ಷಣೆಗಾಗಿ, ಸಾಧುಸನ್ಯಾಸಿಗಳನ್ನು ಸಂಘಟಿಸಿ ಎಲ್ಲೆಲ್ಲೂ ಪರಮಾರ್ಥ ತತ್ವದ ಹಿರಿಮೆಯನ್ನು ಸಾರಿ, ರಾಷ್ಟ್ರೀಯ ಭಾವೈಕ್ಯತೆಯ ವೈಜಯಂತಿಯನ್ನು ಅವರು ಹಾರಿಸಿದ್ದಾರೆ ಭಾರತೀಯ ಸಮಾಜಕ್ಕೆ ಅವರ ಕೊಡುಗೆ ಚಿರಸ್ಮರಣೀಯ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ