ಆಪಸ್ತಂಬ ಸ್ಮೃತಿ

    ಆಪಸ್ತಂಭರು ತನ್ನ ಸ್ಮೃತಿಯ ಪ್ರಾರಂಭದಲ್ಲಿ ಸಂಸಾರಿಗಳಿಗೆ ಹಸುಗಳನ್ನು ಸಾಕುವುದು ಉತ್ತಮ ಕಾರ್ಯ ಎಂದು ತಿಳಿಸಿದ್ದಾರೆ. ಗೋಹತ್ಯೆಯು ಮಹಾ ಪಾಪವೆಂದೂ ತಿಳಿಸಿದ್ದಾರೆ. ರೋಗ ಬಂದಾಗ, ಅಂತಹ ಗೋವುಗಳಿಗೆ ಚಿಕಿತ್ಸೆ ಮಾಡುವುದು, ಮಾಡಿಸುವುದು, ತನ್ಮೂಲಕ ಅವುಗಳ ರಕ್ಷಣೆ, ಶುಶ್ರೂಷೆಗಳನ್ನು ಮಾಡುವುದು ಮಹಾನ್ ಪುಣ್ಯಕಾರ್ಯವೆಂದು ತಿಳಿಸಿದ್ದಾರೆ. ಅದು ಗೋವುಗಳ ಬಗೆಗೆ ಉತ್ತಮ ನಿಯತ್ತನ್ನು ತೋರಿಸುವುದು ಇದು ಪುಣ್ಯ ಕಾರ್ಯವೇ ಆಗಿರುತ್ತದೆ ಅನಾರೋಗ್ಯದ ಕಾರಣ ಹಸುವಿಗೆ ಶಸ್ತ್ರಚಿಕಿತ್ಸೆ, ಆಯುಧದ ಪ್ರಯೋಗ ಮಾಡಿದ್ದೇ ಆದರೆ ಅದು ಪಾಪವಾಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ ಹೀಗೆ ಔಷಧೋಪಚಾರಗಳು ಮಾಡುವಾಗ ಗೋವು ಮರಣಿಸಿದಲ್ಲಿ ಅದರ ಪಾಪವು (ಗೋಹತ್ಯಾ ದೋಷವು) ಪ್ರಾಪ್ತವಾಗುತ್ತದೆ ಎಂದು ನಂಬುವವರೂ ಕೆಲವರಿದ್ದಾರೆ. ಆದುದರಿಂದ ಕಾಯಿಲೆ ಬಿದ್ದ ಗೋವುಗಳನ್ನು ಪಶು ವೈದ್ಯ ಶಾಲೆಗೆ ತೋರಿಸುವುದೇ ಇಲ್ಲ.

ಇದು ತಪ್ಪು ಎನ್ನುತ್ತಾರೆ ಆಪಸ್ತಂಭರು.
ಯಂತ್ರೇಣ ಗೋಚಿಕಿತ್ಸಾಥೇ ಮೃತಗರ್ಭ ವಿಮೋಚನ |
ಯತ್ರೇ ಕೃತೆ ವಿಪನ್ನಿಚ್ಚೇತ್ ಪ್ರಾಯಶ್ಚಿತ್ತೇನ ವಿದ್ಯತೆ ||1-3||

    ಗೋ-ಚಿಕಿತ್ಸೆ ಮಾಡುವಾಗ ಅಥವಾ ಅದರ ಗರ್ಭದಿಂದ ಸತ್ತ ಕರುವನ್ನು ಹೊರ ತೆಗೆಯುವಾಗ ಏನಾದರೂ ಅಪಾಯ ಸಂಭವಿಸಿದರೆ, ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾದ ಅವಶ್ಯಕತೆಯಿಲ್ಲ.

    ಇದೇ ರೀತಿಯಲ್ಲಿ ಪ್ರಾಣಿಗಳಿಗೆ ಅವುಗಳಿಗೆ ರಕ್ಷಣೆ ಕೊಡುವ ದೃಷ್ಟಿಯಿಂದ ಔಷಧಿ, ಲವಣ, ಎಣ್ಣೆ ಇತ್ಯಾದಿ ಪದಾರ್ಥಗಳು ಹಾಗೂ ಮತ್ತು ಪುಷ್ಟಿಕಾರಕ ಮೇವು ಇತ್ಯಾದಿಗಳನ್ನು ನೀಡಿದ್ದಾಗ್ಯೂ ಕೂಡ ಆ ಪ್ರಾಣಿಯ ಮೇಲೆ ಏನಾದರೂ ವಿಪತ್ತು ಉಂಟಾದಲ್ಲಿ ಅದರಿಂದ ಯಾವುದೇ ಪಾಪ ಉಂಟಾಗುವುದಿಲ್ಲ -

ಔಷಧಂ ಲವಣಂ ಚೈವ ಸ್ನೇಹಂ ಪುಷ್ಟ್ಯರ್ಥ ಭೋಜನಮ್ |
ಪ್ರಾಣಿನಾಂ ಪ್ರಾಣಾ ವೃತ್ತ್ಯರ್ಥಂ ಪ್ರಾಯಶ್ಚಿತ್ತಂ ವಿದ್ಯತೇ ||1-11||

    ಅತಿಯಾಗಿ ಕೊಡದೆ ಮಿತವಾಗಿ, ಯಥೋಚಿತವಾಗಿ ಮೇವು, ಔಷಧದ ವಸ್ತುಗಳನ್ನು ನೀಡಿದ್ದೇ ಆದರೆ ಪಶು ಸಂಗೋಪನೆ ಉತ್ತಮವಾಗುತ್ತದೆ. ಅಸಮರ್ಪಕವಾಗಿ, ಅತಿಯಾಗಿ ನೀಡಿದರೆ ಪ್ರಾಣಿಗಳಿಗೆ ಮೃತ್ಯು ಸಂಭವಿಸ ಬಹುದು ಆಕಸ್ಮತ್ತಾಗಿ ಹಾಗಾದಾಗ 'ಕೃಛ್ರವ್ರತ'ವನ್ನು ಆಚರಿಸಬೇಕು.

ಅತಿರಿಕ್ತ ವಿಪನ್ನಾನಾಂ ಕೃಛ್ರಮೇವ ವಿಧೀಯತೆ ||
    ಆಪಸ್ತಂಭರು ಕೃಷಿಯ ಬಗ್ಗೆಯೂ ಕೆಲವೊಂದು ನಿಯಮಗಳನ್ನು ತಿಳಿಸಿದ್ದಾರೆ. ಉಳುವ ಸಮಯದಲ್ಲಿ ನೇಗಿಲಿಗೆ ಎಷ್ಟು ಎತ್ತುಗಳನ್ನು ಕಟ್ಟುವುದು ಧರ್ಮ ಸಮ್ಮತವಾದುದು ಎಂಬುದನ್ನು ತಿಳಿಸುತ್ತಾ ಅಧಾರ್ಮಿಕವಾದದ್ದು ಎಷ್ಟು ಎಂಬುದನ್ನು ತಿಳಿಸಿದ್ದಾನೆ. ಎಂಟು ಎತ್ತುಗಳನ್ನು ಕಟ್ಟುವುದು ಅತಿ ಶ್ರೇಷ್ಠ, ಆರು ಎತ್ತುಗಳನ್ನು ಕಟ್ಟುವುದು ಶ್ರೇಷ್ಠವೆಂದೂ, ನಾಲ್ಕು ಎತ್ತುಗಳನ್ನು ನೇಗಿಲಿಗೆ ಕಟ್ಟುವುದು ನಿರ್ದಯಿತ್ವವೆಂದೂ, ಎರಡು ಎತ್ತುಗಳನ್ನು ಕಟ್ಟುವುದು ನಿರ್ದಯತೆಯೆಂದೂ ಆತ ತಿಳಿಸಿದ್ದಾರೆ.

ಹಲಮಷ್ಟಗವಂ ಧರ್ಮ್ಯಂ ಷಡ್ ಗವಂ ಜೀವಿತಾರ್ಥಿನಾಂ |
ಚತುರ್ಗವಂ ನೃಶಂಸಾನಾಂ ದ್ವಿಗವಂ ಹಿ ಜಿಘಾಂಶಿನಾಮ್ ||
                (ಅಪ 1-23)

    ಹಸುಗಳನ್ನು ಕಟ್ಟಿ ಹಾಕಬಾರದು. ಅದು ಅವುಗಳಿಗೆ ಬಂಧನದಂತಾಗುತ್ತದೆ. ತೆಂಗಿನನಾರು, ದಾನ್ಯದ ಹೊಡೆ, ದರ್ಭೆಯ ತರಹದ ಹುಲ್ಲು ಅಥವಾ ಚರ್ಮದ ಹಗ್ಗಗಳಂತ ಕಠೋರವಾದವುಗಳಿಂದ ಕಟ್ಟಲೇಬಾರದು. ಇದರಿಂದ ಅವು ಪರಾಧೀನ ಅಥವಾ ಕಷ್ಟಕರವಾದ ಸನ್ನಿವೇಶವನ್ನು ಅನುಭವಿಸುತ್ತವೆ. ಅಗತ್ಯ ಕಂಡುಬಂದಲ್ಲಿ ಕುಶ (ಹುಲ್ಲು)ಯ ನುಣುಪಾದ ಮೃದುವಾದ ಹಗ್ಗಗಳಿಂದ ಅವನ್ನು ಬಂಧಿಸಬಹುದು -

ನ ನಾರಿಕೇಲ ಬಾಲಾಭ್ಯಾಂ ನ ಮುಂಜೇನ ನ ಚರ್ಮಣ |
ಏಭಿರ್ಗಾಸ್ತು ನ ಬದ್ನೀಯಾತ್ ಬದ್ಧವಾ ಪರವಶಾ ಭವೇತ್ ||25||
ಕುಶೈಃ ಕಾಶೈಶ್ಚ ಬುಧ್ನೀಯಾದ್ ||1-26||

    ಈ ರೀತಿಯಲ್ಲಿ ಮೊದಲ ಅಧ್ಯಾಯದಲ್ಲಿ ಗೋಸೇವೆ, ಗೋಚಿಕಿತ್ಸೆ, ಗೋವಧದ ಪ್ರಾಯಶ್ಚಿತ್ತ ಇತ್ಯಾದಿ ವಿಷಯಗಳನ್ನು ಸಂಕ್ಷೇಪವಾಗಿ ನಿರೂಪಿಸಲಾಗಿದೆ. 



Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ